ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ

ಡಾ. ಲಕ್ಷ್ಮಣ ವಿ ಎ

**

ಗುಜರಿ ಅಂಗಡಿಯ ಧೂಳು ಮೆತ್ತಿದ 

ಕನ್ನಡಿಯ ಮೈಯಂತೆ 

ಮುಪ್ಪಾನ ಮುದುಕನ ಹಳೆಯ ಕನ್ನಡಕದೊಳಗಿನ ಕಣ್ಣುಗಳು‌;

ಗೊಂದಲ ಶುರುವಾಗಿದೆ  ನನಗೀಗ

ಎಲ್ಲಿ ಮೂಡಿಸಬೇಕು ಈ ಕವಿತೆಯ  

ಸಾಲುಗಳ; ಈ ಕನ್ನಡಿಯ ಮೇಲೋ  ಯಾ 

ಮುದುಕನ ಕಣ್ಣುಗಳ ಮೇಲೋ  ? 

ಹಿಂದೊಮ್ಮೆ ಕವಳೆ ಹಣ್ಣಿನಂತಹ 

ಫಳ್ ಫಳಾರ್ ಮಿಂಚು ಹೊಳೆದ ಕಣ್ಣು ಕನ್ನಡಿಯೊಳಗೀಗ  

ಅಳಕುತ್ತಲೆ ಮುಂದಡಿಯಿಡುವ 

ಹರಕು ಮುರುಕು ಮಂಜು ಮುದಿ ಬೆಳಕು.

ಏಸೊಂದು ಗುಟ್ಟುಗಳಿವೆ! ಪುಟ್ಟ ಕನ್ನಡಿಯ 

ಹೊಟ್ಟೆಯಲಿ 

ಈಗಲಾದರೂ ಕೂಗಿ  ಹೇಳಬೇಕು ಜೋರಾಗಿ  ಮುದಿ ಗೆಳೆಯರಿಗೆ 

ಎಲ್ಲಿ ಹಾಳಾಗಿ ಹೋದರೋ ಎಲ್ಲಾ! 

ಊರು ಬಿಟ್ಟವರೊಬ್ಬರೂ ವಾಪಸು ಬರಲೇ  ಇಲ್ಲ.

ಹೊಸ ಕನ್ನಡಿಯೆದಿರು ಆಗೊಮ್ಮೆ ; ಕಪ್ಪುಕೇಶದೊಳಗಿಣುಕುವ ಬೆಳ್ಳಿ ಕೂದಲ 

ಬಾಚಿ ವಯಸು ಮರೆ ಮಾಚುವಂತೆ 

ಒಪ್ಪು ಓರಣ ಗೊಳಿಸಿಕೊಂಡವರು 

ಕುಡಿ ಮೀಸೆ ತಿರು ತಿರುವಿ ತಿದ್ದಿ ತೀಡಿ  ಕಣ್ಣ ಕತ್ತಿ 

ಝಳಪಿಸಿದವರು 

ತಮ್ಮ ಚಿಗುರು ಮೊಲೆ  ಬುಗುರಿ ಕಟಿಯ 

ಮೇಲೆ ತಾವೆ ಮೋಹಗೊಂಡು ಮತ್ತೆಲ್ಲೋ  ಪರವಶರಾದವರು ಸೊಟ್ಟ ಮೂಗಿಗೆ ಸಿಟ್ಟಾದವರು 

ನಟ್ಟ ನಡು ಹಗಲಿನಲೆ ಬೆತ್ತಲಾದವರು 

ಏಸೊಂದು  ಬಿಂಬ ಹಾದು ಹೋದವು 

ಏನು ಕತೆ ! 

ಒಳ  ಹೊಕ್ಕವರೊಬ್ಬರೂ ಒಳಗುಳಿಯುಲಿಲ್ಲ  ಒಡಲುಗೊಂಡವರೂ ಒಳಗುಳಿಸಿಕೊಳಲಿಲ್ಲ ;

ಇಳಿಗಾಲದಲ್ಲಿ 

ಯಾರಾದರೂ ಮಾತಿಗೆ  ಬೇಕು ಮುದುಕನಿಗೆ 

ಎಷ್ಟೊಂದು ಕಥೆಗಳಿವೆ ಈ ಹಳೆಯ 

ಕನ್ನಡಿಯೊಳಗೆ!

ತನ್ನೆದಿರು ಕುಳಿತವರ ಕಣ್ಣಿಗೆ ಕಣ್ಣು ಕಿಡಿ ತಾಗಿ ದರೆ ಸಾಕು ಸುಡುವ ಗಂಧದ ಕೊರಡಿನ ಹಾಗೆ ನೆನಪು ಪರಿಮಳ.

ಗುಜರಿ ಅಂಗಡಿಯಲಿ 

ಹಳೆಯ ಕಬ್ಬಿಣ ರಾಡು  ತಗಡು ಡಬ್ಬಿ 

ದೊಪ್ಪ ದೊಪ್ಪನೆ ಅಕ್ಕ ಪಕ್ಕದಲ್ಲೇ

ಲೋಡು ಬಂದು ಬೀಳುವಾಗ ಸಣ್ಣಗೆ ಅದರುತ್ತದೆ  ಪುಟ್ಟ  ಕನ್ನಡಿಯ ಆತ್ಮ‌ 

ಇಳಿ ಬೆಳಗಿನಲ್ಲಿ  ಭೀ ಭತ್ಸ ಸ್ವಪ್ನ ಗಳು

ಈ ಮುದುಕನ  ಕಂಗೆಡಿಸುವ ಹಾಗೆ :

ಇರುವ ಮೂರು ಮುಕ್ಕಾಲು  ಫೂಟಿನ 

ಪುಟ್ಟ ಗುಜರಿ ಅಂಗಡಿಯ ನಾಜೂಕು ಗಾಜಿನ ಕನ್ನಡಿಯನು  ಪೋರನೊಬ್ಬ ಅತ್ತಿಂದಿತ್ತ ಎತ್ತಿ ಇಡುವ ಅಪವೇಳೆಯಲಿ ಮಾತ್ರ ;

ಈ ಹುಡುಗ 

ಕನ್ನಡಿಯ ಕನಸಿನಲಿ ನಡೆದಂತೆ 

ಮೂಡಿ ಮರೆಯಾಗುತ್ತಾನೆ ಆಗಾಗ.

‍ಲೇಖಕರು Admin MM

28 February, 2024

2 Comments

  1. ವಾಸುದೇವ ಶರ್ಮಾ

    ಹಳತು ಹೊಸತನ್ನು ಸಂಧಿಸುವ ಕ್ಷಣ

  2. Kotresh Arsikere

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading