
ಕಿರಣ್ ಗಾಜನೂರು
“ಉತ್ತರ ಪ್ರದೇಶ ಗೆದ್ದರೆ ಭಾರತವನ್ನು ಗೆದ್ದಂತೆ” ಎಂಬ ಮಾತು ಭಾರತೀಯ ರಾಜಕೀಯ ವಲಯದಲ್ಲಿ ಪ್ರಸಿದ್ದಿಯಾಗಿದ್ದ ಕಾಲ ಇತ್ತು. ಆದರೆ ನರೇಂದ್ರ ಮೋದಿ ಗುಜರಾತಿನಲ್ಲಿ ಸತತ ಮೂರು ಭಾರಿ ಬಿ.ಜೆ.ಪಿಯನ್ನು ಅಧಿಕಾರಕ್ಕೆ ತಂದು ದೇಶದ ಪ್ರಧಾನಿಯಾದ ನಂತರ ಭಾರತದ ರಾಜಕಾರಣದಲ್ಲಿ “ಗುಜರಾತ್” ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ.
ಆ ಕಾರಣಕ್ಕೆ 2017 ರ ಗುಜರಾತ್ ವಿಧಾನಸಭಾ ಚುನಾವಣಾ ಕಣ ದೇಶದ ರಾಜಕೀಯ ಪಂಡಿತರ ಗಮನ ಸೆಳೆದಿದೆ. ಹಾಗೆ ನೋಡುವುದಾದರೆ 2017ರ ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಒಟ್ಟು ಭಾರತದ ರಾಜಕೀಯ ವಿಶ್ಲೇಷಣೆಗೆ ಕ್ರಮದ ಕುರಿತು ಪ್ರಮುಖವಾದ ಒಳನೋಟಗಳನ್ನು ದಾಖಲಿಸಿದೆ.
ಅವುಗಳಲ್ಲಿ ಬಹಳ ಮುಖ್ಯವಾದವು. .
ಮೊದಲನೆಯ ಅಂಶ
19-20ನೇ ಶತಮಾನ ಹುಟ್ಟಿದ “ಸಾಮಾಜಿಕ ಅಸ್ಮಿತ” ರಾಜಕಾರಣ ಒಂದು ರಾಜಕೀಯ ನಿರ್ಮಿತಿ ( Political construction) ಎಂಬುದು:
ಹೌದು ಭಾರತದ ರಾಜಕೀಯದಲ್ಲಿ 90ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಜಾತಿ/ಧರ್ಮಗಳ ಅಸ್ಮಿತ ರಾಜಕಾರಣದ ತಾತ್ವಿಕತೆಯ ನಿರೂಪಣೆ ಆ ಕಾಲದ ಚುನಾವಣಾ ರಾಜಕೀಯದ ಅಗತ್ಯತೆಗಳನ್ನು ಪೂರೈಸುವ ಸಂಕುಚಿತ ರಾಜಕೀಯ ನುಡಿಗಟ್ಟಾಗಿತ್ತೇ ಹೊರತು ಆ ತಾತ್ವಿಕತೆ ಸಮಾಜದೊಂದಿಗೆ ಯಾವುದೇ ರೀತಿಯ ಸಾವಯವ ಸಂಬಂಧ ಹೊಂದಿರಲಿಲ್ಲ ಎಂಬ ಬಹುತೇಕ ರಾಜಕೀಯ ವಿಶ್ಲೇಷಕರ ವಾದಕ್ಕೆ ಇಂದು ಪುಷ್ಟಿ ದೊರೆತಿದೆ.
ಸರಳವಾಗಿ ಹೇಳುವುದಾರೆ ಭಾರತದ ರಾಜಕೀಯ ವರ್ಗ ಬಳಸುತ್ತಿದ್ದ ಜಾತಿ ಮತ್ತು ಧರ್ಮಗಳ ಅರ್ಥಕ್ಕೂ ಸಮಾಜದಲ್ಲಿ ವಾಸ್ತವವಾಗಿ ಬದುಕುತ್ತಿರುವ ಜಾತಿ ಮತ್ತು ಧರ್ಮಗಳ ಬದುಕಿನ ಕ್ರಮಕ್ಕೂ ಮೂಲಭೂತವಾದ ವ್ಯತ್ಯಾಸಗಳಿದ್ದವು. ಜಾತಿ/ಧರ್ಮಗಳ ಕುರಿತ ಸಾಮಾಜಿಕ ಮತ್ತು ರಾಜಕೀಯ ಗ್ರಹಿಕೆಗಳು ಒಂದನ್ನೊಂದು ಪ್ರತಿಬಿಂಬಿಸುತ್ತಿರಲಿಲ್ಲ ಎಂಬ ರಾಜಕೀಯ ವಿದ್ವಾಂಸರ ನಿರೂಪಣೆಯನ್ನು ಇಂದಿನ ಗುಜರಾತ್ ಫಲಿತಾಂಶ ಸಾಧಿಸಿ ತೋರಿಸಿದೆ.
ಆ ಕಾರಣಕ್ಕೆ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೋರ್ ಮತ್ತು ಕಾಂಗ್ರೇಸ್ ಒಟ್ಟಾಗಿ ಬಳಸಿದ ಪಟೇಲ್ ಮತ್ತು ಹಿಂದುಳಿದ ವರ್ಗಗಳನ್ನು ಒಳಗೊಂಡ ತಂತ್ರಗಾರಿಕೆ ಚುನಾವಣಾ ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಪ್ರಭಾವವನ್ನು ಬೀರಿಲ್ಲ. ಒಂದು ಅರ್ಥದಲ್ಲಿ ಶೇಕಡಾ ೩೦% ರಷ್ಟು ಪಟೇಲ್ ಮತದಾರರನ್ನು ಗುಜರಾತಿನ ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್ ರೂಪಿಸಿದ ’ಪಟೇಲ್ ಅಸ್ಮಿತ’ ರಾಜಕಾರಣ ಯಾವುದೇ ಪ್ರಬಲ ಪ್ರಭಾವವನ್ನು ದಾಖಲಿಸಿಲ್ಲ. ಅಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲುವನ್ನು ಸಾಧಿಸಿದೆ. ಈ ಎಲ್ಲಾ ಅಂಶಗಳಿಂದ ನಾವು ಭಾರತದಲ್ಲಿನ ಜನರ ಸಾಮಾಜಿಕ ಅಸ್ಮಿತೆಯನ್ನು ಚುನಾವಣಾ ರಾಜಕೀಯ/ರಾಜಕೀಯ ಪಕ್ಷಗಳು ಅರ್ಥಮಾಡಿಕೊಂಡಿರುವ ಕ್ರಮದಲ್ಲಿ ಸಾಕಷ್ಟು ಮಿತಿಗಳು ಇವೆ ಎಂಬುದನ್ನು ಗ್ರಹಿಸಬಹದು.
ಈ ಗ್ರಹಿಕೆ ಮತ್ತು ಫಲಿತಾಂಶದ ಪರಿಣಾಮ ಮುಂದಿನ ದಿನಗಳಲ್ಲಿ ಸಾಮಾಜಿಕ ಅಸ್ಮಿತೆಗಳ ಕುರಿತ ರಾಜಕೀಯ ಚಿಂತನೆ ಮತ್ತು ಪಕ್ಷಗಳ ದೃಷ್ಟಿಕೋನ ಪರ್ಯಾಯವಾದ ನೋಟಕ್ರಮವೊಂದನ್ನು ರೂಪಿಸಿಕೊಳ್ಳುವ ಅವಕಾಶ ಮತ್ತು ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದೆ.
ಎರಡನೆಯ ಮುಖ್ಯವಾದ ಅಂಶ ’ಧರ್ಮದ’ ಕುರಿತು ಬೃಹತ್ ಕಥನಗಳು (ಗ್ರಾಂಡ್ ನೆರೆಟಿವ್) ಭಾರತದ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸಲಾರವು ಎಂಬುದನ್ನು ಈ ಚುನಾವಣಾ ಫಲಿತಾಂಶ ಸಾಭೀತು ಮಾಡಿದೆ.
ಏಕೆಂದರೆ ಈ ಚುನಾವಣೆಯಲ್ಲಿ ಬಿಜೆಪಿ ’ಹಿಂದೂ ಧಾರ್ಮಿಕತೆಯ” ಕುರಿತು ಈ ಸಮಾಜದ ಸಹಜ ಬದುಕಿನೊಂದಿಗೆ ಯಾವ ಅರ್ಥದಲ್ಲಿಯೂ ಹೊಂದಿಕೆಯಾಗದ ಧರ್ಮದ ಕುರಿತ ’ಹಿಂದೂತ್ವವಾದಿಗಳು’ ಮುಂದಿಡುವ ಬೃಹತ್ ಕಥನಗಳನ್ನು ವ್ಯಾಪಕವಾಗಿ ಬಳಸಿತ್ತು.
ಆದರೆ ನೈಸರ್ಗಿಕವಾಗಿ ಸಾಮರಸ್ಯವನ್ನು ಬದುಕಾಗಿಸಿಕೊಂಡಿರುವ ಭಾರತದ ಸಾಮಾಜಿಕ ಸಂಧರ್ಭ ಧರ್ಮದ ಕುರಿತ ಹಿಂದುತ್ವದ ಬೃಹತ್ ಕಥನಗಳನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದೆ. ಅದರ ನೇರ ಪರಿಣಾಮ ಭಾರತದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ತನ್ನ ಮೂಲ ನೆಲ ಗುಜರಾತ್ ಚುನಾವಣೆಯಲ್ಲಿ ಕೆಳೆದ ಬಾರಿಗಿಂತ ಈ ಬಾರಿಯ ಗೆದ್ದ ಕ್ಷೇತ್ರಗಳ ಸಂಖ್ಯೆ ಕುಸಿದಿದೆ ಎಂಬ ಸಂಗತಿಯನ್ನು ನಾವು ಗುರುತಿಸಬಹುದಾಗಿದೆ.
ಗುಜರಾತ್ ಫಲಿತಾಂಶದಿಂದ ಕಲಿಯಬೇಕಾದ ಮೂರನೆಯ ಮುಖ್ಯ ಅಂಶ 2014ರ ಲೋಕಸಭಾ ಚುನಾವಣೆಯಿಂದ ಬಿಜೆಪಿ ಪಾಳಯದಲ್ಲಿ ಪ್ರವರ್ಧಮಾನಕ್ಕೆ ಬಂದ ’ಮೋದಿ’ ಎಂಬ ವ್ಯಕ್ತಿ ಕೇಂದ್ರಿತ ಚುನಾವಣಾ ತಂತ್ರಗಾರಿಕೆ ಜನರ ಮತದಾನದ ವರ್ತನೆಯ ಮೇಲೆ ನಿರಂತರವಾಗಿ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣಾ ಫಲಿತಾಂಶ ಸಾಭೀತುಮಾಡಿದೆ.
ಈ ಬಾರಿ ಗುಜರಾತಿನಲ್ಲಿ ಬಿಜೆಪಿಯ ಒಟ್ಟು ಚುನಾವಣಾ ಪ್ರಚಾರ ಅಲ್ಲಿನ ಸ್ಥಳೀಯ ನಾಯಕತ್ವವನ್ನಾಗಲಿ, ಸ್ಥಳೀಯ ಸಮಸ್ಯೆಗಳನ್ನಾಗಲಿ ಯಾವ ಅರ್ಥದಲ್ಲಿಯೂ ಆಶ್ರಯಿಸದೆ ’ಮೋದಿ’ ಬ್ರಾಂಡ್ ಮೇಲೆ ಅವಲಂಭಿತವಾಗಿತ್ತು. ಅದಕ್ಕೆ ಪೂಕರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಗುಜರಾತಿನಲ್ಲಿ ಬೃಹತ್ ಪ್ರಮಾಣದ ರ‍್ಯಾಲಿಗಳನ್ನು ಉದ್ಧೇಶಿಸಿ ಮಾತನಾಡಿದ್ದರು. ಮುಖ್ಯವಾಗಿ ನಾನು ”ಗುಜರಾತಿನ ಮಗ’ ಎಂಬ ಉಪಮೇಯನ್ನು ಬಳಸಿ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಗುಜರಾತ್ ಚುನಾವಣಾ ಫಲಿತಾಂಶ ಮತ್ತು ಮತದಾನದ ಅಂಕಿ-ಅಂಶಗಳು ಈ ವ್ಯಕ್ತಿ ಕೇಂದ್ರಿತ ರಾಜಕೀಯ ತಂತ್ರಗಾರಿಕೆಯನ್ನು ಒಪ್ಪಿಲ್ಲ ಎಂಬುದನ್ನು ಧೃಢಪಡಿಸುತ್ತಿವೆ.
ಸ್ಥಳೀಯ ನಾಯಕತ್ವ ಮತ್ತು ಸ್ಥಳೀಯ ಸಮಸ್ಯೆಗಳನ್ನು ಚುನಾವಣಾ ವಿಷಯವಾಗಿಸದ ಬಿಜೆಪಿಯ ಕ್ರಮವೂ ಗುಜರಾತ್ ಬಿಜೆಪಿ ಹೊಂದಿದ್ದ ವಿಷನ್ 150 ಸೋಲಿಗೆ ಕಾರಣ ಆಗಿರಬಹುದು ಒಂದು ಕಾಲದಲ್ಲಿ ಉತ್ತುಂಗದ ಶಿಖರಕ್ಕೇರಿದ್ದ ಇಂದಿರಾ ಕಾಂಗ್ರೆಸ್ ಮಾದರಿ ನಂತರದ ದಿನಗಳಲ್ಲಿ ಎದುರಿಸಿದ ಸವಾಲುಗಳನ್ನೆ ಇಂದು ಮೋದಿ ಬಿಜೆಪಿ ಎದುರಿಸಬೇಕಾದ ಸಮಯ ಹತ್ತಿರವಾಗುತ್ತಿದೆ ಎಂಬ ಸ್ಪಷ್ಟ ಸೂಚನೆಯನ್ನು ಈ ಫಲಿತಾಂಶ ನೀಡುತ್ತಿದೆ.
ಗುಜರಾತ್ ಫಲಿತಾಂಶದಲ್ಲಿ ವ್ಯಕ್ತವಾದ ಮತ್ತೊಂದು ಮಹತ್ವದ ಅಂಶ “ಭಾರತದ ದಲಿತ ಚಳುವಳಿ ತನ್ನ ಹೋರಾಟವನ್ನು ರೂಪಿಸಿಕೊಂಡಿರುವ ಸೈದ್ಧಾಂತಿಕ ಗ್ರಹಿಕೆಯನ್ನು ಮರು ಪರಿಶೀಲಿಸಿಕೊಳ್ಳುವ ಮರುಚಿಂತನೆಯ ನೋಟಕ್ರಮವೊಂದನ್ನು ಗುಜರಾತ್ ಫಲಿತಾಂಶ ಸೃಷ್ಟಿಸಿದೆ”
ಸತ್ತ ದನದ ಚರ್ಮ ಸುಲಿಯುತ್ತಿದ್ದ ಗುಜರಾತ್ ದಲಿತರ ಮೇಲೆ ಉನಾದಲ್ಲಿ ನಡೆದ ಮಾರಣಾಂತಿಕ ಸಾರ್ವಜನಿಕ ಹಲ್ಲೆಯಿಂದ ಬೆಳೆದ ಉನಾ ಚಳುವಳಿ ಮತ್ತು ಅದರ ರೂವಾರಿ ಜೀಗ್ನೇಶ್ ಮೇವಾನಿ ಗುಜರಾತಿನ ವಡಗಾವ್ ಕ್ಷೇತ್ರದಿಂದ ಯಾವುದೇ ಪಕ್ಷದಿಂದ ಸ್ಪರ್ಧಿಸದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೇಸ್ ಜೀಗ್ನೇಶ್ ಬೆಂಬಲಿಸಿದ್ದರೆ ದಲಿತ ಅಸ್ಮಿತೆಯನ್ನು ಪ್ರಮುಖವಾಗಿ ಆಧರಿಸಿರುವ ಮಾಯಾವತಿಯ ಬಿಎಸ್ಪಿ ಜೀಗ್ನೆಶ್ ವಿರುದ್ಧ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಈ ಒಟ್ಟು ಬೆಳವಣಿಗೆ ಭಾರತದಲ್ಲಿನ ದಲಿತ ರಾಜಕೀಯದ ಕುರಿತು ಹಲವಾರು ಒಳನೋಟಗಳನ್ನು ನೀಡುತ್ತಿದೆ.

ಜೀಗ್ನೇಶ್ ಯಾವುದೇ ಪಕ್ಷ ಸೇರದೆ ಎಲ್ಲರ ಬೆಂಬಲ ಕೋರಿ ಸ್ವತಂತ್ರ‍್ಯ ಸ್ಪರ್ಧೆಗಾಗಿ ಆರಿಸಿಕೊಂಡ ಮಾದರಿ ಭಾರತದ ತಳವರ್ಗಗಳ ಚಳುವಳಿಗಳ ಪಾಲಿಗೆ ಹೊಸ ಭರವಸೆಯಾಗಿ ಕಾಣುತ್ತಿದೆ.
ವರ್ಗ ಮತ್ತು ಊಳಿಗಮಾನ್ಯ ಮೌಲ್ಯಗಳಿಂದ ಪ್ರಬಲವಾಗಿರುವ ಬಹುತೇಕ ರಾಷ್ಟ್ರೀಯ ಪಕ್ಷಗಳಿಗೆ “ದಲಿತ ಅಸ್ಮಿತೆಯ” ಪ್ರತ್ಯೇಕ ಗುರುತಿಸುವಿಕೆಯನ್ನು ಮತ್ತು ಶಕ್ತಿಯನ್ನು ಅವರುಗಳ ಹೊರಗಿದ್ದು ತೋರಿಸಬಹದು ಎಂಬ ’ಭಿನ್ನವಿದ್ದು ಬೆರೆಯಬಹುದಾದ” ಹೊಸ ಲೋಕದೃಷ್ಟಿಯನ್ನು ಜೀಗ್ನೇಶ್ ಮೇವಾನಿ ಎಂಬ ಯುವ ನಾಯಕ ತೋರಿಸಿಕೊಟ್ಟಿದ್ದಾನೆ.
ಆದರೆ ವ್ಯಕ್ತಿಗತ ವಿಜಯದ ಆಚೆಗೆ ಸಮುದಾಯಗಳ ಸಂಘಟನೆಯ ದೃಷ್ಟಿಯಿಂದ ಈ ತಂತ್ರ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಬಹು ನಿರೀಕ್ಷಿತ ಗುಜರಾತ್ ವಿಧಾನಸಭಾ ಫಲಿತಾಂಶ ಭವಿಷ್ಯದ ಭಾರತದ ರಾಜಕೀಯದ ದೃಷ್ಟಿಯಿಂದ ಹಲವಾರು ಮಹತ್ವದ ಅಂಶಗಳನ್ನು ಚರ್ಚೆಯ ಮುನ್ನಲೆಗೆ ತಂದಿದೆ.
ಮುಖ್ಯವಾಗಿ ಸಾಮಾಜಿಕ ಅಸ್ಮಿತೆಗಳ ಕುರಿತ ರಾಜಕೀಯ ದೃಷ್ಟಿಕೋನ ಬದಲಾಗಬೇಕಾದ ಅಗತ್ಯತೆಯನ್ನು ಈ ಫಲಿತಾಂಶ ಒತ್ತಿ ಹೇಳುತ್ತಿದೆ. ಈ ಹಿನ್ನಲೆಯಲ್ಲಿ ಗುಜರಾತ್ ಚುನಾವಣಾ ಫಲಿತಾಂಶವನ್ನು ಆಧರಿಸಿ ಭಾರತೀಯ ಸಮಾಜ ಮತ್ತು ರಾಜಕೀಯದ ಸಂಬಂಧಗಳ ಕುರಿತ ತಥಾಗತಿತ ಗ್ರಹಿಕೆಗಳ ಆಚೆಗೆ ಮರು-ಓದಿನ ಪರ್ಯಾಯ ಕ್ರಮವೊಂದನ್ನು ರಾಜಕೀಯ ಪಂಡಿತರು ರೂಪಿಸಿಕೊಡಬೇಕಿದೆ. . .
ಇದೆಲ್ಲದರ ಆಚೆಗೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷವಾಗಿ ರಚನಾತ್ಮಕವಾಗಿ ಆಡಳಿತ ಪಕ್ಷವಾದ ಕಾಂಗ್ರೆಸ್ ಎದುರಿಸುವಲ್ಲಿ ಸದನದ ಒಳಗೆ ಮತ್ತು ಹೊರಗೆ ಸೊರಗಿದಂತಿದ್ದ ಕರ್ನಾಟಕ ಬಿಜೆಪಿಗೆ ಗುಜರಾತ್ ಫಲಿತಾಂಶ ದೊಡ್ಡ ಮಟ್ಟದ ಚೈತನ್ಯ ತರುವ ಅವಕಾಶವನ್ನು ಸೃಷ್ಟಿಸಿದೆ ಎಂಬ ಅಂಶವನ್ನು ನಾವು ಗಮನಿಸಬೇಕಿದೆ ಆ ಅರ್ಥದಲ್ಲಿಯೂ ಈ ಫಲಿತಾಂಶಕ್ಕೆ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದೆ. . .






0 Comments