ಆ ದೋಣಿ ಯಾಕೋ ಓಲಾಡುತ್ತಿದೆ..

ಆಹಾ ಓಖಿ

ಶ್ರೀದೇವಿ ಕೆರೆಮನೆ

ಅದೋ ಅಲ್ಲಿ ನೋಡಿ
ಆ ದೋಣಿ ಯಾಕೋ ಓಲಾಡುತ್ತಿದೆ..
ಯಾರೋ ಕೈ ಮೇಲೆತ್ತಿ
ಸಹಾಯಕ್ಕೆ ಕರೆಯುತ್ತಿದ್ದಾರೆ
ಅರರೆ.. ಅದು ಅಲ್ತಾಫನಲ್ಲವೇ?
ನಡೆ ನಡೆ ಈಗಷ್ಟೇ ಲಂಗರು ಹಾಕಿದ
ಆ ದೊಡ್ಡ ಬೋಟನ್ನು ಮತ್ತೆ
ಚಾಲೂ ಮಾಡಲು ಹೇಳು
ಯಾಕೆ ಹಿಂಜರಿಕೆ?
ಬೋಟಿನ ಕಿಶೋರ ಮೊನ್ನೆಯಷ್ಟೇ
ಅಲ್ತಾಫನೊಡನೆ ಜಗಳ ಕಾದಿದ್ದನೆಂದೆ?
ಈ ಸಾಬರನ್ನೆಲ್ಲ ದೇಶ ಬಿಟ್ಟು ಓಡಿಸಿಬೇಕೆಂದು
ಕಣ್ಣು ಕೆಂಪಾಗಿಸಿ ಕೂಗಾಡಿದ್ದನೆಂದೇ?
ಅಲ್ತಾಫನೂ ‘ಸುವ್ವರ್ ಕೆ ಬಚ್ಚೆ’ ಎಂದಿದ್ದ
ಆದರೀಗ ಕಿಶೋರ ಬೋಟು ತಂದು
ರಕ್ಷಿಸಲು ಒಪ್ಪುತ್ತಾನೆಯೇ ಎಂಬುದೇ
ನಿನ್ನ ಪ್ರಶ್ನೆಯಾದರೆ
ಅಲ್ಲಿ ನೋಡು ಕಿಶೋರ
ಮುಳುಗುತ್ತಿದ್ದ ಅಲ್ತಾಫನನ್ನು ಕರೆತರುತ್ತಿದ್ದಾನೆ
ನಾವೇ ಏನೇನೋ ಯೋಚಿಸಿ ತಲೆಕೆಡಿಸಿಕೊಂಡಿದ್ದು

ಅದೇಕೆ ಕೇಳುತ್ತಿ
ಇತ್ತ ನೋಡು ಒಮ್ಮೆಯಾದರೂ
ಈ ಕುಟ್ಟಿಗಳೆಲ್ಲ ಬಂದು
ನಮ್ಮ ವ್ಯವಹಾರವನ್ನೆಲ್ಲ ಹಾಳುಗೆಡವಿದರೆಂದು
ಸೈಕಲ್ ಮೇಲೆ ಮೀನು ಮಾರುವ ರಾಜನ್ ಗೆ
ವಾರದ ಹಿಂದೆ ತಗಾದೆ ತೆಗೆದಿದ್ದ ಜೋಸೆಫ್
ನಿನ್ನೆಯಿಂದ ಆತ ಕಾಣುತ್ತಿಲ್ಲವೆಂದು
ದಂಡೆಯಲ್ಲಿ ಹುಚ್ಚನಂತೆ ಹುಡುಕುತ್ತಿದ್ದಾನೆ

ಮೀನು ಕೊಯ್ಯುವ ಅಮಿನಾಭಿ
ಹರಿಕಂತ್ರ ಮಾದೇವಿಯೊಡನೆ
ಮುಖ ಮುಸುಡು ನೋಡದೇ ಗುದ್ದಾಡಿದ್ದು
ಹದಿನೈದು ದಿನಗಳ ಹಿಂದಾದರೂ
ಇಂದೋ ನಿನ್ನೆಯೋ ಎಂಬಂತಿದೆ
ಈಗ ಇಬ್ಬರ ಮನೆಗೂ ತೆರೆ ನುಗ್ಗಿ
ಬಳಚಿಕೊಂಡು ಹೋದ ಪಾತ್ರೆ ಪಗಡೆಗಳನ್ನು
ಒಟ್ಟಾಗಿ ಹಿಡಿದು ತಂದು ಹಂಚಿಕೊಳ್ಳುತ್ತಿದ್ದಾರೆ
ಉಳುಚಿ ಬಿದ್ದ ಮನೆಯ ನಡುವಿನ
ಇಕ್ಕಟ್ಟು ಜಾಗದಲ್ಲೇ ಬೇಲಿ ಕಿತ್ತೆಸೆದು
ಒಲೆ ಹೂಡಿ ಗಂಜಿ ಬೇಯಿಸಲಿಟ್ಟಿದ್ದಾರೆ.
ಈಗ ಆ ಜಾಗ ಯಾರದ್ದೆಂಬ
ತಕರಾರು, ಮಾತು, ಸೊಲ್ಲಿನ ಕಥೆ ಬಿಡಿ
ಸುಳಿಯುತ್ತಿಲ್ಲ ಇಬ್ಬರ ತಲೆಯೊಳಗೂ ಆ ಯೋಚನೆ

ಕಡಲ ಅಲೆಗಳ ಮೇಲಾಡುವ
ಪಿರಿ ಕಿರಿಯ ದೋಣಿಗಳನ್ನೆಲ್ಲ
ಜಾತಿ ಮತ ಮರೆಸಿ
ಜಿಲ್ಲೆ ರಾಜ್ಯಗಳ ಗಡಿರೇಖೆಯ ಒರೆಸಿ
ದಂಡೆಯ ಮೇಲಿನ ಕಿತ್ತಾಟವನ್ನೆಲ್ಲ ಮರೆಸಿ
ಪ್ರೀತಿಯ ಭಾವವನ್ನು ಉಸುಕಿನಲಿ ಬೆಳೆಸಿ
ಎಲ್ಲರನು ಒಂದಾಗಿಸಿದ ಅದಮ್ಯ ಚೇತನವೇ
ನೀನೇಕೆ ಮತ್ತೆ ಮತ್ತೆ ಬರುವುದಿಲ್ಲ?

‍ಲೇಖಕರು avadhi

December 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Lalitha siddabasavayya

    ಶ್ರೀ , ಬಹಳ ಚೆನ್ನಾಗಿದೆ ಕವನ. ಓಖಿಯಾದರೂ ಪದೇ ಪದೇ ಬರಲಿ ಅನ್ನಿಸುತ್ತದೆ , ನಿಜ. ಆದರೆ ಓಖಿ ಬಂದಾಗಲೂ ಕಷ್ಟ ಪಡುವವರು ಅದೇ ಜನ. ಎತ್ತಿಕಟ್ಟುವ ಎಡಬಲದವರು ಸದಾ ಆರಾಮು , ಭದ್ರವಾದ ಮನೆಗಳೊಳಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: