ಗುಂಡುರಾವ್ ದೇಸಾಯಿ ಹೊಸ ಮಕ್ಕಳ ಕಥೆ- ದೆವ್ವ ಬಂತು ದೆವ್ವ…

ಗುಂಡುರಾವ್ ದೇಸಾಯಿ

ದೆವ್ವದ ಕಥೆ ಕೇಳಿದಕೂಡಲೆ ಆ ದಿನ ಏನೋ ಒಂದು ತರಹ ಮನಸ್ಸು ಆತಂಕದಲ್ಲಿ ಇರುತ್ತಲ್ಲ.. ರಾಮುಗೂ ಹಾಗೆ ಆಯಿತು, ಅಜ್ಜಿ ಹೇಳಿದ ದೆವ್ವದ ಕಥೆ ಕೇಳಿ. ಆ ಭಯ ಎರಡು ದಿನ ಕಳೆದರೂ ಹೋಗಲಿಲ್ಲ. ಒಳಗ ಹೊರಗ ಹೋಗಿ ಬರಬೇಕಾದಾಗಲೂ ಯಾವ್ಯಾವೊ ಮಂತ್ರ ಹೇಳಿ ಸಮಾಧಾನ ಮಾಡಿಕೊಳ್ಳವ. ಆದರೂ ಭಯವೆ ಅವನಿಗೆ ದೆವ್ವವಾಗಿ ಕಾಡಕತ್ತಿತು. ಎಂತೆಂತಹ ‘ಹಾರರ್ ಸಿನೆಮಾ ಧಾರವಾಹಿ’ ನೋಡಿ ಅರಗಿಸಿಕೊಂಡಿದ್ದ ರಾಮುವಿನ ಧೈರ್ಯವೆಲ್ಲ ಉಡುಗಿ ಹೋಗಿತ್ತು…

ಒಮ್ಮೆ ರಾಮು ಗೆಳೆಯರ ಮನೆಯಿಂದ ಓದು ಮುಗಿಸಿಕೊಂಡ ಹೊತ್ತಾಗಿ ಬರುತ್ತಿರಬೇಕಾದರೆ ದಾರಿಯಲ್ಲಿ ಬೇವಿನ ಮರವನ್ನು ನೋಡುವುದಕ್ಕೂ, ದೆವ್ವದ ಕಥೆ ನೆನಪಾಗುವುದಕ್ಕೂ ಸರಿ ಹೋಯ್ತು…ರವಿಚಂದ್ರನ್ ಅವರ ಶ್ರೀರಾಮಚಂದ್ರ ಫಿಲ್ಮನ ‘ದೆವ್ವವಿಲ್ಲ ಪಿಶಾಚಿ ಇಲ್ಲ..ಇದ್ದರೂ ಇಲ್ಲಿಲ್ಲ…..” ಎಂದು ಗುನುಗುತ್ತಾ ಹೋಗತಿರಬೇಕಾದರೆ ಅವನ ಧ್ವನಿಯ ಹಿಂದೆಯೆ ‘ದೆವ್ವವುಂಟು ಪಿಶಾಚಿಯುಂಟು… ಎಲ್ಲವೂ ಇಲ್ಲಿಂಟೂ….ಅಣ್ಣಾ…’ ಅಂತಾ ಸೌಂಡ್ ಬಂತು… ಹಿಂತಿರುಗಿ ನೋಡಿದ. ಕಾಕತಾಳಿಯ ಎಂಬಂತೆ ದೆವ್ವ ಪ್ರತ್ಯಕ್ಷವಾಗಬೇಕೆ?

“ಅಯ್ಯಾ! ಅಮ್ಮಾ” ಎಂದು ಓಡ ತೊಡಗಿದ…
“ನಿಲ್ಲೋ ತಮ್ಮಾ ?” ಅಂತ ದೆವ್ವ ಮುಂದ ಮುಂದ ಬರಹತ್ತಿತು
“ಯಾರು ನೀನು?”
“ನೀನೆ ತಾನೆ ಸ್ಮರಿಸಿಕೊಂಡೆಯಲ್ಲ …ನಾನು ದೆವ್ವ…ದೆವ್ವ… ದೆವ್ವ…..ಹಿ..ಹೀ…ಹೀ…” ಹಲ್ಲು ಗಿರಿಯಿತು
ದೆವ್ವ ಅಂದ ಕೂಡಲೆ ಕೈಕಾಲು ಆಡದಾಯಿತು. ಆದರೂ ಗುರುಗಳು ಎಂತಹ ಸಂದರ್ಭದಲ್ಲೂ ಧೈರ್ಯ ಬಿಡಬಾರದೆಂಬ ಮಾತು ನೆನಪಿಗೆ ಬಂದು ಪಾರಗುವ ದಿಸೆಯಲ್ಲಿ ಧೈರ್ಯತೆಗೆದುಕೊಂಡು “ಹೌದು ಯಾಕ ಬಂದಿ ನನ್ನ ಹತ್ರ?” ಎಂದು ಕೇಳಿದ
“ನಿನ್ನ ತಿನ್ನಾಕ…” ಎಂದು ಬಾಯಿ ಚಪ್ಪರಿಸಿತು
ತುಸು ಅಂಜಿಕೆ ಬಂದರೂ ಗಟ್ಟಿ ಮನಸ್ಸು ಮಾಡಿಕೊಂಡು “ಹೊ…ಹೊ…. ನೀನು ನಾನ್ ವೆಜಾ…? ಹೌದು ದೆವ್ವಕ್ಕೂ ತಿನ್ನೊಕೆ ಬರುತ್ತದಾ?”
“ಎಲ್ಲವೂ ಬರುತ್ತೆ”
“ತಿನ್ನೊ ಹಾಗೆ ಇದ್ರ ನಿನಗ ಒಂದು ಪರ್ಮೆನೆಂಟ ಕೆಲಸ ಕೊಡಸ್ತಿನಿ, ಯಾಕ ಅಮಾಯಕರ ತಿಂತಿಯಾ…ಸಿಗಲಿಕ್ರ ಯಾಕ ಉಪವಾಸ ಬೀಳ್ತಿಯಾ?”
“ಹೌದಾ….. ಎಲ್ಲಿ?”

“ಹೆದ್ದಾರಿಯಲ್ಲಿ ಹೋಗು ಪ್ರತಿನಿತ್ಯ ಅಪಘಾತದಲ್ಲಿ ಜನ ಸಾಯತಾ ಇರತಾರೆ..ಬೇಕಾದಷ್ಟು ಆಹಾರ ಸಿಗುತ್ತದೆ…ಅದಲ್ಲದೆ ರೈಲ್ವೇ ಟ್ರ್ಯಾಕು, ಕೆರೆ, ಭಾವಿ, ನದಿ, ಕೆನಾಲುಗಳಲ್ಲೂ ಸಿಗತಾವ.. ಫಾರ್ ಎ ಚೇಂಜ್ ಬೇಕೆನಿಸಿದರೆ ಅದೆ ಗಡಿಯಲ್ಲಿ ಹೋಗು.. ಆಗಾಗ ನಮ್ಮ ಸೈನಿಕರಿಂದ ಸಾಯುವ ವೈರಿಗಳು, ಭಯೋತ್ಪಾದಕರು ಸಿಗತಾರ. ನಿಮಗೆ ಒಂದೆ ಊಟ ತಿಂದು ಬೇಜಾರಾಗಿರಬೇಕಲ್ಲ…ಅಲ್ಲಿ ವೆರೈಟಿ ಸಿಗುತದ, ಒಣ ಅಂಜುಸೋದು…ಪರಿತಪಿಸೋದು ಬೇಕಾಗಿಯೆ ಇಲ್ಲ..”
“…………”ಮೌನವಾಯಿತು
“ಯಾಕ ನಿನಗ ಬ್ಯಾಡಲ್ಲ.. ಬರಿ ಬಡವರ, ಮುಗ್ಧರ, ಅಂಜುವ ಜನರ ರಕ್ತ ಬೇಕಲ್ಲ…!
“…………” ಮತ್ತೆ ಮೌನವಾಗಿತ್ತು
“ಹೌದು….? ದೆವ್ವ ಆದದ್ದಾದರೂ ಹ್ಯಾಂಗ ನೀವು”
“ಆಸೆ ಇಟ್ಟುಗೊಂಡು ಸತ್ತದಕ!” ಎಂದು ಮೌನ ಮುರಿಯಿತು.

“ಆಸೆ ಇಟ್ಟುಗೊಂಡು ಅತೃಪ್ತಿಯಿಂದ ಸೈನಿಕರು ಸಾಯಿತಿದ್ದಾರೆ, ಅವರು ದೆವ್ವ ಆಗಿದ್ರ ಗಡಿ ಕಾಯೋ ಸಮಸ್ಯೆ ಇರತಿರಲಿಲ್ಲ… ಅತೃಪ್ತಿಯಿಂದ ನಿಷ್ಠಾವಂತ ಹೋರಾಟಗಾರರು ಸತ್ತಿದ್ದಾರೆ, ಹಾಗಾಗಿದ್ರ ಕೆಟ್ಟ ರಾಜಕಾರಣಿಗಳು, ಅಧಿಕಾರಿಗಳು ಇರಬಾರದಾಗಿತ್ತು… ಅತೃಪ್ತಿಯಿಂದ ಅನೇಕ ಬಡವರು ಶೋಷಿತರು ಹೆಣ್ಮಕ್ಕಳು ಸತ್ತಿದ್ದಾರೆ ಹಾಗ ನೋಡಿದರ ಅವರೆಲ್ಲ ದೆವ್ವವಾಗಿ ಕೆಟ್ಟವರನ್ನು ಇಲ್ಲವಾಗಿಸಿ ರಾಮರಾಜ್ಯ ಆಗಿಸಬೇಕಿತ್ತು…! ಆಗುತ್ತಿಲ್ಲವಲ್ಲ..?”
“ನನಗ ಬುದ್ಧಿ ಹೇಳಾಕ ಬರತಿ ಏನು? ನಿನ್ನ ಮಾತು ಕೇಳಾಕ ಬಂದಿಲ್ಲ ತಿನ್ನಾಕ ಬಂದಿನಿ..”
“ಕೇಳಿಸಿಕೊಳ್ಳಲಾರದ್ದು ಒಂದು ಜನ್ಮನಾ? ಥೂ……” ಎಂದ
“ನಿನಗ ಬುದ್ಧಿ ಕಲಿಸ್ತಿನಿ ತಡಿ” ಎಂದು ತನ್ನ ವಿಕಾರ ರೂಪ ತೋರಸ್ತು
ರಾಮು ಧೈರ್ಯಗೆಡದೆ… “ಇದೆಲ್ಲ ಹಳೆಯ ಸ್ಟೈಲು… ನೋಡಿ ನೋಡಿ ಸಾಕಾಗಿದೆ..ಫಿಲ್ಮನಾಗೂ ಇದೆ ತರಹ” ಎಂದ
“ಹ್ಞಾ….!ಉಢಾಫೆ ಮಾಡ್ತೀಯಾ…?”
“ಮತ್ತಿನ್ನೇನೂ? ಕಾಲ ಬದಲಾದ್ರೂ ನಿಮ್ಮ ಕಾಸ್ಟೂಮ್ ಚೇಂಜ್ ಆಗವಲ್ತು. ಟೈಮು ನೂ?
“ಅಂದ್ರ….?”
“ಒಂದೆ ಡ್ರೆಸ್ಸು…ಒಂದೆ ಸ್ಟೈಲು….ಬರಿ ನೈಟ್ ಅಷ್ಟ ಕಾಣೊದು. ಹಗಲಲ್ಲಿ ಬರಬೇಕಿಲ್ಲ..ದೊಡ್ಡದಾಗಿ ಫೋಜ ಕೊಡತಿರಿ ಹಗಲು ಬಂದು ತೋರಸಬೇಕಪ..ನಿಮ್ಮ ತಾಕತ್ತು,,,”
“ಈಟ್ಸ ಟೂ ಮಚ್…”
“ಹೋ..ನಿನಗ ಇಂಗ್ಲೀಷ್ ಬರುತ್ತದ….ಗುಡ್ ಗುಡ್”
“ಅತಿಯಾಯ್ತೊ ನಿಂದು…. ನಿನ್ನ ಕೊಂದು ಬೀಡ್ತನಿ”
“ಕೊಂದ್ರ…! ನಾನು ದೆವ್ವ ಆಗಿ ನಿನ್ನ ಉಳಸ್ತಿನಾ…? ನಾನು ಯೂನಿಯನ್ ಮಾಡಿಕೊಂತೀನಿ ನಿಮ್ಮಂತಹವರಿಂದ ಅನ್ಯಾಯವಾಗಿ ಸತ್ತವರ ದೆವ್ವಗಳದು…!”
“ಲೇ……ನಿನ್ನಾ…ಹಿಂಡಿ ಹಿಪ್ಪಿ ಮಾಡ್ತೀನಿ…”
“ಕೂಲ್ ಡೌನ್..ಕೂಲ್…ಡೌನ್…”ಎಂದು ತಕ್ಷಣ ಮೊಬೈಲ್ ಬ್ಯಾಟರಿ ಆನ್ ಮಾಡಿ ಕಣ್ಣಿಗೆ ಹಾಕಿದ…
“ಏನು ಮಾಡ್ತಿದ್ದೀಯೋ..!”
“ನಿನ್ನ ಸೆರೆ ಹಿಡಿಯೋಕೆ….”
“ಸಾಧ್ಯನ ಇಲ!್ಲ”
“ನೋಡ್ತಿಯಾ..?” ಬೇಕಂತಲೆ “ಆಂ..ಬೂಮ್…ಅಬರಕ ಡಬರಾ ಗಿಲಿಗಿಲಿ ಒದ್ದಾಡು ವಿಲಿವಿಲಿ” ಎಂದೋಡನೆ
ದೆವ್ವ ಭಯಂಕರವಾಗಿ ಒದರತೊಡಗಿತು.

ಅದೆ ಸಮಯಕ್ಕೆ ದೆವ್ವದ ವಿಡಿಯೋವನ್ನು ಆನ್ ಮಾಡಿ ಹೈ ರೆಸ್ಯೂಲಶನ್, ಹೈವಾಲ್ಯೂಮ್ ಹರಿಬಿಟ್ಟ….ವಿಡಿಯೊದಲ್ಲಿಯ ದೆವ್ವದ ಮುಂದೆ ಈ ದೆವ್ವದ ಆಟ ಸಪ್ಪೆ ಅನಿಸ್ತು… “ನೀನು ಯಾರೊ ಅ ಪುಟ್ಟ ಪೆಟ್ಟಿಗೆಯಲ್ಲಿ ಏನಿದೆ…ಮಂತ್ರದ ಗಾಜಿನ ಪೆಟ್ಟಿಗೆನಾ ಹಿಂದೆಲ್ಲ ಹಿಡಿತಿದ್ರಲ್ಲ”
“ಹಾಗೆ ಅನ್ನಕೊ…?”

“ಸುಳ್ಳು ಸುಳ್ಳು ಅದೆಲ್ಲ ನಡೆಯಲ್ಲ ನನ್ನ ಮುಂದೆ” ಅಂದ ಕೂಡಲೆ ಫಾರೆನ್ ಹಾರರ್ ಮೂವಿ ಆನ್ ಮಾಡಿದ….ವಿಚಿತ್ರ ಮುಖಚರ್ಯ ಇರುವ ಆ ಆಕೃತಿಗಳನ್ನು ಕಂಡ ದೆವ್ವ ಸುಸ್ತು ಹೊಡಿತು..ಅದು ಮುಂದ ಬಂದಂಗೆಲ್ಲ ಇವ ಅದರ ಮುಂದ ಹಿಡಿಯಾವ…ಮೊಬೈಲ್ಗಳ ಒಳಗಿನ ದೆವ್ವಗಳ ಒದರಾಟ ಕಿರುಚಾಟದ ಮುಂದೆ……ಈ ದೆವ್ವ ಅದುರಿತು… ಅಲ್ಲಿವರೆಗೆ ಹೆದರಿಸುತ್ತಿದ್ದ ಅದು ಹೆದರಲಾರಂಬಿಸಿತು.. ‘ನೋಡಕ ಸಣ್ಣವನಿದ್ದಾನಷ್ಟ..ಇವ ಸಾಮಾನ್ಯನಲ್ಲ.. ಎಲ್ಲಿ ನನ್ನನ್ನೂ ಆ ಪುಟ್ಟ ಡಬ್ಬಿಯೊಳಗ ಬಂಧಸ್ತಾನೊ?’ ಎಂದು ಭಯಗೊಂಡು ಏನೊ ಹೇಳಲು ಪ್ರಯತ್ನಿಸಿದರೂ..ಅದಕ್ಕೆ ಮಾತನಾಡಲು ಅವಕಾಶ ನೀಡದೆ ರಾಮು ಹಲವಾರು ವಿಡಿಯೋ ಡೌನ್‌ಲೋಡ್ ಮಾಡಿ ತೋರಿಸುವುದನ್ನೆ ಮುಂದುವರೆಸಿ…. “ಇವೆಲ್ಲವನ್ನು ಹೊರಗೆ ಬಿಟ್ರೆ ನೀನು ಉಳಿತಿಯಾ…?” ಎಂದು ಭಂಡ ಧೈರ್ಯದಿಂದ ನುಡಿದು ದೆವ್ವದ ಕಡೆ ನೋಡಿದ…

“ಬೇಡ ಬೇಡ ದಮ್ಮಯ್ಯ ಬಿಟ್ಟುಬಿಡು…ಇನ್ನೊಮ್ಮೆ ಬರೊಲ್ಲ” ಎಂದು ಓಡಲಾರಂಭಿಸಿತು
‘ಅಂಜೋರನ್ನ ಕಂಡ್ರೆ ಅಂಜಿಸೋರು ಬಹಳ’ ಎನ್ನುವ ಹಾಗೆ ಇವನಿಗೂ ಅದನ್ನು ಬೆನ್ನಟ್ಟುವ ಹುಮ್ಮಸ್ಸು ಬಂದಿತು

“ಏ ದೆವ್ವ ನಿಲ್ಲು…ಇವತ್ತು ಒಂದು ತೀರ್ಮಾನ ಆಗಬೇಕು…ನೀನರ ಇರಬೇಕು ನಾನಾರ ಇರಬೇಕು..ಬಾ..ಇಲ್ಲಿ ಬಾ ಅಂತ ಈ ಯಂತ್ರದಲ್ಲಿ ಬಂಧಸ್ತೀನಿ” ಎಂದು ಫೋನನ್ನು ದೆವ್ವದ ಕಡೆಗೆ ಎಸೆದ ಕೆನ್ನೆಯ ಮೇಲೆ ಚಟಾರನೆ ಏಟು ಬಿತ್ತು.. “ನನ್ನ ಫೋನು ಹಾಳು ಮಾಡ್ತಿದ್ದಿಯಲ್ಲೊ….ನಾನು ಸರಿಯಾದ ಸಮಯಕ್ಕೆ ಬಂದೆ, ಹಿಡಿದೆ…ಲೇ ಭಂಡಾ ರಾತ್ರಿಯಲ್ಲ ಸುಡುಗಾಡು ದೆವ್ವದ ಫಿಲ್ಮ ನೋಡೋದು.. ಹಾರರ್ ಗೇಮ್ಸ್ ಆಡೋದು….ಕನಸಿನ್ಯಾಗ ಏನೆಲ್ಲ ಒದರಾಡೋದು…ಏಳ್ತಿಯೊ? ಇನ್ನೆರಡು ಏಟು ಹಾಕಲೋ?” ಅಂದಾಗ ರಾಮು ಕಣ್ತೆರದು ನೋಡಿದ…..ಮೂಲಿ ಮೂಲಿಗೆ ಹಾಸಿಗೆ ದಿಂಬು ಬಿದ್ದಿದ್ದವು…ಕಂಡಿದ್ದು ಕನಸು ಎಂದು ತಿಳಿದು ಹೆಚ್ಚು ಮಾತಾಡಿದರೆ ‘ಅಪ್ಪನೆ ದೆವ್ವ ಆಗ್ತಾನೆ’ ಎಂದು ಭಯದಿಂದ ಮೆಲ್ಲಗೆ ಬಾತ್ ರೂಮನೊಳಕ್ಕೆ ನುಗ್ಗಿದ.

‍ಲೇಖಕರು Admin

March 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಈಗಿನ ಕಾಲದ ದೆವ್ವದ ಕತೆ. ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: