ಗುಂಡುರಾವ್ ದೇಸಾಯಿ ಹೊಸ ಕಥೆ- ಎಗ್ ರೈಸ್ ಮಂತ್ರಿ

ಗುಂಡುರಾವ್ ದೇಸಾಯಿ

ಶಾಲೆಯಲ್ಲಿ ಚುನಾವಣಾ ಮುಗಿದ ನಂತರ ಒಂದು ನಮೂನಿ ವಾತಾವರಣ ಉಂಟಾಗಿತ್ತು.. ಮಕ್ಕಳೆಲ್ಲ ಕೂಡಿ ಅಲ್ಲಲ್ಲಿ ಗುಸುಗುಸು ಟುಸುಟುಸು ಮಾತಾಡವು.. ‘ಏನ್ರೋ ಅದು?’ ಅಂತ ಕೇಳಿದ್ರ ‘ಏನಿಲ್ಲ ಸಾರ್?’ ಅಂತ ಓಡಿ ಹೋಗೊವು. ಪ್ರತಿ ವರ್ಷನೂ ಶಾಲೆಯಲ್ಲಿ ಸಾಮನ್ಯ ಚುನಾವಣೆ ಮಾದರಿಯಲ್ಲಿ ಚುನಾವಣೆ ನಡೆಸಿ ಮಂತ್ರಿಮಂಡಲ ರಚಿಸೋದು… ಮಕ್ಕಳಿಗೆ ಪ್ರಜಾಪ್ರಭುತ್ವ ಮಾದರಿಯ ತಿಳುವಳಿಕೆ ಬರಲಿ ಎನ್ನೋ ಕಾರಣಕ್ಕೆ. ಎಲೆಕ್ಷನ್ ನಿಲ್ಲುವುದಕ್ಕಾಗಿ ನಾಮಿನೇಷನ್ ತೊಗೊಳೊದು. ಅದಕ್ಕಾಗಿ ಚುನಾವಣಾಧಿಕಾರಿಗಳನ್ನ ನೇಮಿಸೋದು. ನಾಮಪತ್ರ ಸಲ್ಲಿಕೆ, ವಾಪಸ್ಸು ಪಡಿಯುವಿಕೆ, ಚಿಹ್ನೆಗಳ ಹಂಚುವಿಕೆ, ಮತಪತ್ರಗಳ ತಯ್ಯಾರಿ… ನಿಜವಾದ ಎಲೆಕ್ಷನ್ ಮಾದರಿಯಲ್ಲಿ ಓಟ ಹಾಕಲು ಕೌಂಟರ್ ನಿರ್ಮಾಣ… ಹೀಗೆ ವ್ಯವಸ್ಥಿತವಾದ ಕ್ರಿಯೆಯನ್ನು ಮಾಡಿ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು.

ಈ ವರ್ಷವೂ ಚುನಾವಣಾ ಕಾರ್ಯವನ್ನು ನಡೆಸಲಾಗಿತ್ತು. ಚುನಾವಣಾ ಕಾರ್ಯ ನಡೆಯುವಾಗ ಇಂತವರೆ ಗೆಲ್ಲಬಹುದೆಂಬ ಲೆಕ್ಕಾಚಾರ ಇರುತ್ತಲ್ಲ. ಜಾಣ ಹಾಗೂ ಎಲ್ಲರಿಗೂ ಬೇಕಾದ ವಿದ್ಯಾರ್ಥಿ ಮಲ್ಲೇಶ ಗೆಲ್ಲುವೆನೆಂದು ಭಾವಿಸಿದ್ದೆವು. ಎಲ್ಲ ಮಕ್ಕಳು ಈ ಬಾರಿ ಎರಡು ದಿನ ಅದ್ಭುತ ಪ್ರಚಾರ ಮಾಡಿದ್ದರು. ಆದರೆ ಎಲ್ಲಾ ಎಲೆಕ್ಷನ್ ಮುಗಿದು ಕೌಂಟ್ ಮಾಡಿ ಅಭ್ಯರ್ಥಿಗಳನ್ನು ಘೋಷಿಸುವಾಗ ಅಚ್ಚರಿ ಕಾದಿತ್ತು. ಕಿಲಾಡಿ ಇದ್ದ ನಾಗ ಈ ಸಾರಿ ಅತಿ ಹೆಚ್ಚು ಮತ ಪಡೆದು ಆಯ್ಕೆ ಆಗಿದ್ದ ಅಲ್ಲದೆ, ಮುಖ್ಯಮಂತ್ರಿಯಾಗಿಯೂ ಆಯ್ಕೆಯಾದ. ಪ್ರಜಾಪ್ರಭುತ್ವ ಮಾದರಿ ಅಂದ ಮೇಲೆ ನಾವು ಬದಲಾಯಿಸದೆ ಅವನನ್ನೆ ಮುಖ್ಯಮಂತ್ರಿ ಎಂದು ಘೋಷಿಸಿದ್ವಿ.

ಆಮೇಲೆ ಸುರುವಾಗಿದ್ದು ಗುಸುಗುಸು… ಆ ಅಸ್ಪಷ್ಟತೆ ನಮ್ಮ ಶಾಲೆಯವರಿಗೆ ಯಾರಿಗೂ ಗೊತ್ತಾಗಲಿಲ್ಲ. ಆದರೆ ‘ಮಕ್ಕಳು ಮಕ್ಕಳಲ್ಲಿ ಏನೊ ನಡಿತಿದೆ’ ಎಂದು ಗೊತ್ತಾಗುತ್ತಿತ್ತು. ಒಂದು ತಿಂಗಳಾಗಿರಬಹುದು. ತರಗತಿಯಲ್ಲಿ ವಾಗ್ವಾದವೊಂದು ನಡೆದಿತ್ತು. ಹೋಗಿ ನೋಡಿದೆ. ಎಲ್ಲರೂ ಸೈಲೆಂಟ್. ‘ತಿಂಗಳಿನಿಂದ ಏನೇನೊ ನಡಿತಿದೆ. ಗಮನಸ್ತಾ ಇದ್ದೀನಿ.. ನೀವಾಗಿ ಹೇಳತಿರೊ ನಾನೆ ಬಾಯಿ ಬಿಡಿಸಲೊ’ ಎಂದು ಗದರಿದೆ. ಒಂದೆ ಆವಾಜಿಗೆ ‘ಸರ್…..’ ಅಂತ ಒಬ್ಬಾವ ನಿಂತು ‘ಎಲ್ಲಾ ಆ ನಾಗ್ಯಾನಿಂದ ಆಗಿದ್ದುರಿ’.

ನನಗೆ ಅಚ್ಚರಿ.. ‘ಅಲ್ರೋ ನೀವಾ ಅವನನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಮಾಡಿರಿ…..’ ‘ಹೌದು ಸಾರ್.. ಆದರೆ…’ ಅಂತ ಏನೊ ಹೇಳಬೇಕೆನ್ನುವಷ್ಟರಲ್ಲಿ ಪಕ್ಕದಲ್ಲಿದ್ದವ ‘ಸುಮ್ಕಿರೊ…?’ ಎಂದು ಚಿವುಟಿದ. ‘ಹೊ..ತಾವು ಏನೊ ಚಿವುಟಿದ್ರಿ.. ಸಾಹೇಬರೆ ಎದ್ದೇಳಿ?’ ಎಂದು ಚಿವುಟಿದ ಮಲ್ಲಯ್ಯನನ್ನು ನಿಲ್ಲಿಸಿದೆ..

‘ಸರ್ ನಾನು ಚಿವಟಿಲ್ಲರಿ ಸೀಸಕಡ್ಡಿ ಚುಚ್ಚಿತುರಿ… ನಾನು ಹಿಡಕೊಂಡಿದ್ದೆ ಅಷ್ಟೆ’ ಎಂದು ಸಬೂಬೂ ಹೇಳಿದೆ. ‘ಸುಳ್ಳು ಹೇಳಿದ್ರ ನಾನು ಚುಚ್ಚಬೇಕಾಗುತ್ತೆ…. ಅವನು ಹೇಳುತ್ತಿರುವ ಮಾತನ್ನು ಮುಂದುವರೆಸು..’ ‘ಸರ್ ನನಗೇನು ಗೊತ್ತಿಲ್ಲರಿ ಸರ್?’ ‘ಪೋಲೀಸ್ ಸ್ಟೇಶನ್ ಗ ಹೀಂಗ ತಪ್ಪು ಮಾಡಿದವರೆಲ್ಲ ಹೇಳೊ ಮಾತು..ಹೇಳ್ತಿಯೊ ಇಲ್ಲ’ ಎಂದು ಗದರಿದೆ. ‘ಅಯ್ಯೊ…..ಯಾಕರ ಅವನನ್ನು ತಿವಿದೆ’ ಎಂದು ಶಪಿಸಿಕೊಳ್ಳುತ್ತಾ ‘ಅದೂ…. ಅದೂ….. ಅದೂ….’ ಎನ್ನುತ್ತಾ ‘ಸರ್… ನಾಗ ನನ್ನ ದುರುಗುಟ್ಟಿ ನೋಡತಾನ” ಎಂದ. ‘ಯಾಕೋ ನಾಗ?’ ಎಂದು ಅವನತ್ತ ತಿರುಗಿದೆ…

‘ಸಾರ್ ….ನನ್ನಾಣೆಗು ನಾನು ನೋಡಿಲ್ಲಾ ಸರ್… ಹಾಂಗಿದ್ರ ನನ್ನನ್ನು ಇವರೆಲ್ಲ ಆರಸ್ತಿದ್ರಾ?’ ಎಂದು ಅಮಾಯಕನಂತೆ ನಾಟಕ ಮಾಡಿದ
‘ನನಗ ಕೋಪ ನೆತ್ತಿಗೇರಿತ್ತು…ಸರಿಯಾಗಿ ಹೇಳುತೀರೊ ಇಲ್ಲೋ ಇಡಿ ಕ್ಲಾಸಿಗೆ ಬೆತ್ತದೆ ಏಟು ಬೀಳತಾವೆ..’ ಎಂದು ಬಡಿಗೆ ತೆಗೆದುಕೊಂಡೆ..
‘ಸರ್ ನೀವು ನೀವು ನಮ್ಮನ್ನ ಕಾಪಾಡತಿರಿ ಅನ್ನೊ ಧೈರ್ಯದ ಮೇಲೆ ಹೇಳಿಬಿಡತೀನಿ ಸಾರ್. ಬಡಿಬೇಡಿ ಸಾರ್’ ಎಂದು ಎದ್ದು ನಿಂತ ಪರಶುರಾಮ.

‘ಗುಡ್ ….. ಹೇಳು’ ಎಂದೆ. ‘ಇಲ್ಲಾ ಸಾರ್.. ಎಲೆಕ್ಷನ್ ಇತ್ತಲ್ಲ ಸಾರ್… ಎಲ್ಲರೂ ನಮ್ಮ ಶಾಲೆಗಿನ ಮಲ್ಲೇಶ ಓಟು ಹಾಕಬೇಕು ಅಂತ ಮಾಡಿದ್ರು… ಆದರ ಆ ಮಲ್ಲೇಶ ಇಲ್ಲದಾಗ ಈ ಸಾರಿ ಎಲೆಕ್ಷನಾಗ ನನಗ ಓಟು ಹಾಕಿದ್ರ ನಿಮಗೆಲ್ಲ ಎಗ್ ರೈಸ್ ಕೊಡಸ್ತೀನಿ ಅಂತ ಹೇಳಿದ್ದನರಿ…. ಇದೆ ಆಸಿನೂ ಗೆದ್ದೋರಿಗೆಲ್ಲ ತೋರಿಸಿ ಮುಖ್ಯಮಂತ್ರಿನೂ ಆದ…’ ಎಂದು ಹೇಳುತ್ತಿರುವಾಗಲೆ ಕಿಡಕಿಯಿಂದ ನೋಡುತ್ತಿದ್ದ ಆಯ್ಕೆಯಾದ ಉಳಿದ ಮಂತ್ರಿಗಳು ‘ಹೌದು ಸಾರ್….’ ಎಂದು ಕೂಗಿದ್ರು… ‘ಯಾರಲೆ….?’ ಅನ್ನುವಷ್ಟರಲ್ಲಿ ಓಡಿ ಹೋಗಿದ್ರು. ‘ಹೋ ಹೋ ಹಕಿಕತ್ತು ಹೀಗದನೊ?’ ಎಂದು ನಾಗನತ್ತ ತಿರುಗಿದೆ.

‘ಹೌದು ಸಾರ್… ನಾನು ಗೆಲ್ಲಬೇಕು ಎನ್ನುವ ಆಸೆಯಲ್ಲಿ ಏನೋ ಸುಳ್ಳು ಹೇಳಿದೆ. ಸಾರ್ ಇವರಿಗೆಲ್ಲ ತಿನ್ನಿಸಬೇಕಾದ್ರೆ ಸಾವಿರು ರೂಪಾಯಿಯಾದ್ರೂ ಬೇಕು. ನಾನೆಲ್ಲಿ ತರಬೇಕು ಹೇಳಿ.. ಚಾಕುಲೇಟು ಪೇಪರ‍್ಮಿಂಟು ಕೊಡಬಹುದಪ ಅಷ್ಟ’. ‘ಇಲ್ಲಾ ಸಾರ್, ಇವ ಹೇಳ್ಯಾನ್ರಿ ಹೇಳ್ಯಾನ್ರಿ’ ಅಂತ ಕೂಗಾಕತಿದ್ರು… ಅವನಿಂದ ಎಗ್ ರೈಸ್ ಕೊಡಿಸಬೇಕು ಎನ್ನುವ ಮಾತಲ್ಲಿ.

‘ಸರ್… ಅವರು ನನ್ನ ಮೇಲಿನ ಪ್ರೀತಿಗೆ ಓಟು ಹಾಕಿದ್ರ ವಾರಕ್ಕೊಮ್ಮೆ ಬಸ್ ಸ್ಟ್ಯಾಂಡಿನ್ಯಾಗ ಹೇಗಾದ್ರೂ ನಾನು ಮಜ್ಜಿಗೆ ಹಣ್ಣು ಮಾರಕ ಹೋಗತೀನಿ ಅದರಗ ದುಡಿದದ್ದಾದ್ರೂ ತಿನ್ನಸಿತಿದ್ದೆ. ಆದರ ಅವರು ನನ್ನ ನೋಡಿಲ್ರಿ ನಾನು ಕೊಡಸ್ತೀನಿ ಅನ್ನೊ ಎಗ್ ರೈಸ್ ನೋಡ್ಯಾರ..ನೀವ ಪಾಠ ಹೇಳುವಾಗ ಹೇಳತಿದ್ದಿರಲ್ರಿ.. ಆಸೆಗೆ ಬಿದ್ದು ಯರ‍್ಯಾರಿಗೋ ಓಟು ಹಾಕಬಾರದು ಅಂತ…..’ ‘ಸರ್ ಕೊಡಸು ಅಂತ ಹೇಳ್ರಿ ಸರ್ ಅಂತ’ ಎಲ್ಲರೂ ಕೂಗಿದ್ರೂ… ಪರಶುರಾಮನೂ ‘ಹೌದು ಸರ್ ಕೊಡಸ್ರಿ ಅಂತ ಹೇಳ್ರಿ ನಾನು ವ್ಯವಸ್ಥ ಮಾಡ್ತನಿ’ ಅಂದ. ‘ನೀನು ಹ್ಯಾಂಗೋ ವ್ಯವಸ್ಥ ಮಾಡ್ತಿ’ ಅಂದೆ.

ನಾಗ ‘ಸರ್ ನಾನು ಹೇಳಿದ್ದು ಸ್ವಲ್ಪ, ಇವ ಪ್ರಚಾರ ಮಾಡಿದ್ದು ಜಾಸ್ತಿ. ಯಾಕಂದ್ರ ಇವರದು ಎಗ್ ರೈಸ್ ಅಂಗಡಿ ಅದ. ಮಾಡೋದು ಗೊತ್ತದ ರೊಕ್ಕ ಬರುತ್ತ ಅಂತ ಆಲೋಚನೆ ಮಾಡಿ ಎಲ್ಲರನೂ ನನ್ನ ಕಡೆ ಟರ್ನ ಮಾಡ್ಯಾನ್ರಿ’ ಅಂದ ‘ಅಬ್ಬಬ್ಬಾ! ನೀವುಮುಗ್ಧರು ಏನು ಗೊತ್ತಿಲ್ಲ? ಅಂತ ಅನಕೊಂಡಿದ್ದೆ..ಹೌದು! ಹೆಣ್ಣಮಕ್ಕಳು ನೀವು ಇವರ ಕಡೆನಾ?’ಎಂದೆ. ‘ಹೌದು ಸರ್….ಪರಶುರಾಮ ನಿಮಗ ಹೊರಗೆಲ್ಲ ಬರೋಕೆ ಆಗಲ್ಲಲ್ಲ..ಅದಕೆ ಸಪರೇಟ್ ಪಾರ್ಸಲ್ ತಂದುಕೊಡತೀನಿ ಅಂದದಕ ನಾವು ಹಾಕಿದಿವಿ ಸರ್’ ಎಂದ್ಲು ರೇಷ್ಮಾ ವೈಯಾರದಿಂದ. ‘ಅಮ್ಮ!…ಏನ್ರೆ ಇದು…ನೀವು ಓಟು ಮಾರಕೊಂಡ್ರಾ….? ಆಯ್ತು ಹಾಗೆಲ್ಲ ಇನ್ನೊಮ್ಮೆ ಕನಸಲ್ಲೂ ಯೋಚನೆ ಮಾಡಬೇಡಿ… ಆದಿದ್ದೆಲ್ಲ ಆಗಿಹೋಗಿದೆ ಇಲ್ಲಿಗೆ ಮುಗಿಸಿಬಿಡಿ’ ಎಂದೆ. ‘ಸರ್ ನಮಗೆ ಬೇಕು ಬೇಕು…ಎಗ್ ರೈಸ್ ಬೇಕು’ ಎಂದು ಕೂಗು ಹಾಕಿದರು.

‘ಸಾರ್ ನಾನು ಹೇಗಾದ್ರೂ ಗೆದ್ದಿನಿ ನೀವು ಘೋಷಣೆ ಮಾಡಿರಿ. ಶಾಲೆಯಲ್ಲಿ ಬೇಕಾದ್ರ ಒಳ್ಳೆ ಕೆಲಸ ಮಾಡ್ತೀನಿ ಸಾರ್… ಓದಿ ಶಾಲಿಗೆ ಫಸ್ಟ್ ಬರತೀನಿ ಆದರೆ ಇವರಿಗೆ ಮಾತ್ರ ಎಗ್ ರೈಸ್ ಕೊಡಸಲ್ಲ ಸರ್’ ಎಂದು ನುಡಿದ. ‘ನಾವು ನಿನ್ನ ಮುಂದಿನ ಸಲ ಗೆಲ್ಲಸಲ್ಲ ಎಂದ್ರು’ ಎಲ್ಲರೂ ಹಿಡಿಶಾಪ ಹಾಕತಾ ನಾಗ ನಗುತ್ತಾ ‘ಆಯ್ತು ಗೆಲ್ಲಸಬ್ಯಾಡಿ ನಾನು ಈ ಶಾಲೆಗ ಇರಲ್ಲ. ಯಾಕಂದ್ರ ನನ್ನದು ಏಳನೆ ತರಗತಿ ಮಗುದಿರುತ್ತ!’ ಎಂದಾಗ ಎಲ್ಲರೂ ಕೈ ಕೈ ಹಿಚುಗೊಂಡ್ರು.

‍ಲೇಖಕರು Admin

October 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: