ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಹಾಳಾದ್ದು ಸೊಳ್ಳೆ…ಎಲ್ಲಾ ನಿಮ್ಮಿಂದಲೇ..?’

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

6

“ಸರಿಪಾ ನಿನ್ನಿಷ್ಟ…ಏನೋ ಹೆಲ್ಪು ಮಾಡಬೇಕೆನಿಸಿತು”
“ಏನು ಸಮು ಯಾರೊಂದಿಗೆ ಮಾತಾಡತಾ ಇದ್ದಿಯಾ? ಅವಾಗಿನಿಂದ ನೋಡುತಾ ಇದ್ದೀನಿ”
“ಸರ್… ಅವನು ಡೀಪ್ ಆಗಿ, ಏನೊ ಮಾತಾಡತಾ ಬರಿತಾ ಇರೋದನ್ನು ನೋಡಿದ್ರೆ, ಬ್ಲೂಟ್ಯೂಥ್ ಡಿವೈಸ್ ಏನೊ
ತಂದಿರಬೇಕು…ಯಾರೊಂದಿಗೆ ಕಾಲ್ ಮಾಡಿ ಉತ್ತರ ಕೇಳಿ ಬರಿತೀರಬೇಕು ಸರ್. ಚೆಕ್ ಮಾಡಿ. ನಮಗೆಷ್ಟು ಟೈಟ್ ಮಾಡತಿರಿ ಅವನಿಗೆ ಬಿಡಬ್ಯಾಡ್ರಿ” ಎಂದ ಸತೀಷ.. “ಹೌದು ಸರ್ ಚೆಕ್ ಮಾಡಿ ಚೆಕ್ ಮಾಡಿ” ಎಂದು ಉಳಿದವರು ಧ್ವನಿಗೂಡಿಸಿದರು.
“ಮುಠ್ಠಾಳರಾ… ಇದೇನು ನೀಟ್, ಐ.ಎ.ಎಸ್. ಕೆ.ಎ.ಎಸ್, ಪಿಎಸ್‌ಐ ಪರೀಕ್ಷೆನಾ?”
“ಆದ್ರೂ ಚೆಕ್ ಮಾಡ್ರಿ ಸರ್..ಹೇಳೊಕಾಗಲ್ಲ” ಎಂದ ಅನಂತು.
ಗುರುಗಳು ಬಂದು ನನ್ನ ಚೆಕ್ ಮಾಡಿ ನೋಡಿದ್ರು. ಏನೂ ಸಿಗಲಿಲ್ಲ, ನಾನು ನಕ್ಕೆ
“ಸ್ವಾರಿ ಸಮು…ನೀನು ಬರಿಪ. ನಿನ್ನ ಕಂಡ್ರೆ ಇವರಿಗೆಲ್ಲ ಹೊಟ್ಟೆ ಉರಿ. ಹಾಗಾಗಿ ಇಲ್ಲಸಲ್ಲದ್ದನ್ನು ಸೃಷ್ಟಿಸಿಕೊಂಡು ಹೇಳತಾರ” ಎಂದು ಬೈದು ಅವರು ಬರೆದದ್ದು ಚೆಕ್ ಮಾಡಿ “ಏನು ಬರಿಯದೆ ಕಿಸಿತಿರಿ” ಎಂದು ಬೈದು ನಡೆದರು
‘ಅಮ್ಮ…ಅಪ್ಪಾ….’ ಎಂದು ಎಲ್ಲರೂ ಕೂಗಾಡ ತೊಡಗಿದರು
“ಬರಿ ಬೈದಿನಿ … ಬಡಿದ ಹಾಗೆ ಮಾಡತಿದ್ದೀರಿ ಸ್ಟುಪಿಡ್ ಫೆಲೊ”
“ಇಲ್ಲಾ ಸರ್ ಸೊಳ್ಳೆ ಕಚ್ಚತಾ ಇವೆ”
“ಹೀಗೆ ಮತ್ತೆ, ಸುಳ್ಳು ಸುಳ್ಳು ಅಪಾದನೆ ಕೊಟ್ಟರೆ ಹಾಗೆ ಆಗೋದು, ಸುಮ್ಮನೆ ತೆಪ್ಪಗ ಕುಳಿತುಕೊಂಡು ಬರಿತಿರೋ ಪೇಪರ ಕಸಿದುಕೊಂಡು ಕಳಸಲೋ” ಎಂದು ಆವಾಜ್ ಹಾಕಿದರು. ನನಗೆ ಬರದೆ ಇದ್ದ ಆ ಪ್ರಶ್ನೆಗಳಿಗೆ ಕೊನೆಗೆ ಹದಿನೈದು ನಿಮಿಷ ಇದ್ದಾಗ ತಟ್ಟನೆ ಉತ್ತರ ಹೊಳೆದವು. ಗಂಟಿ ಹೊಡಿಲಿಕ್ಕೆ ಪೇಪರ ಮುಗಿಲಿಕ್ಕೆ ಸರಿ ಹೋಯ್ತು “ಅಬ್ಬಾ ಭಯಗೊಂಡಿದ್ದೆ ಈ ಸಾರಿ ‘ಔಟ್ ಆಫ್ ಔಟ್ ಗ್ಯಾರಂಟಿ’ ಅನಕೊಂಡೆ”
ರೂಲ್ ನಂಬರ್ ಆನಸರ್ ಪೇಪರ್ ಪ್ರಕಾರ ಪಡೆಯುತ್ತಾ ಬಂದರು..
“ಸರ್…..ಇನ್ನೂ ಒಂದ ಪ್ರಶ್ನೆ ಅದ ಸರ್..ಪ್ಲೀಜ್”
“ಸರ್…..ಸರ್…. ಇನ್ನು ಸ್ವಲ್ಪ ಇದೆ ಸರ್”
“ಸರ್, ಹೆಸರು ಹಾಕಿಲ್ಲ”

“ಸರ್ …ಸರ್….. ಪ್ಲೀಜ ಇನ್ನೊಂದು ಹತ್ತು ನಿಮಿಷ ಟೈಮು ಕೊಡಿ”
“ಸರ್ ಪೇಪರ ಬಹಳ ಟಫ್ ಕೊಟ್ಟು ಬಿಟ್ಟಾರ ನೀವೆಷ್ಟು ಈಜಿ ಕೊಟ್ಟಿದ್ರಿ” ಉಳಿದವರು ಏನೇನೊ ಹೇಳುತ್ತಿದ್ದರೂ ಕೇಳದೆ “ನಿಮ್ಮ ಇಂಗ್ಲೀಷ್ ಮೇಷ್ಟ್ರು ಉರಿತಿದ್ರು, ಯಾರಿಗೂ ಬಿಡದೆ ಕ್ಲಾಸು
ತೊಗೋತಿದ್ರು ಅವರಿಗೂ ಬುದ್ಧಿ ಭೇಟಿ ಆಗಲಿ ನಿಮ್ಮ ಪೇಪರ್ ನೋಡಿ”

“ಸರ್ ಎಲ್ಲರೂ ನಮ್ಮನ್ನ ಏನು ಅಂದುಕೊಂಡಿದ್ದೀರಿ. ನಾವೇನೂ ಎಲ್ಲ ಗುರುಗಳ ಶಿಕ್ಷೆಗೆ ಬಲಿಪಶುಗಳಾ…? ಹೆಡ್ ಮೇಷ್ಟ್ರು ನೀವೆಲ್ಲ ಪ್ರೆಯರ್‌ಗೆ ಲೇಟಾಗಿ ಬಂದ್ರೆ ಇಲ್ಲ ನಿಮ್ಮ ಕೂಡಾ ಜಗಳಾಡಿದ್ರೆ ಸಿಟ್ಟು ಮಾಡಿಕೊಂಡು ನಮ್ಮ ಮೇಲೆ ಹೊಡಿತಾರೆ. ಒಬ್ಬೊಬ್ಬ ಸಬ್ಜಕ್ಟ್ ಟೀರ‍್ಸು ನಿಮ್ಮ ನಿಮ್ಮ ಮೇಲಿನ ಸಿಟ್ಟನ್ನ ನಮ್ಮ ಮೇಲೆ ಹಾಕತೀರಿ. ನಾವು ಮನುಷ್ಯರು ಸರ್ “ ಎಂದ ರಮೇಶ.

“ ಸರ್..ಒಬ್ಬೊಬ್ಬರು ಒಂದು ವಿಷಯ ಹೇಳ್ತಿರಿ. ಆರು ವಿಷಯನೂ ಓದಿ ಬರೆಯೋದು ಅಂದ್ರ ಕಷ್ಟ ಅಲ್ಲವೇ ಸರ್?” ಎಂದ ಅನಂತ.
“ಹೋ… ಹೋ…. ಸಾಹೇಬ್ರು ವೇದಾಂತ ಹೇಳಾಕ ಬಂದ್ರು….ವ್ಯಾಟ್ಸಪ್‌ನಾಗ ಫೇಸ್‌ಬುಕ್‌ನ್ಯಾಗ ಏನೇನೋ
ಬರಿದಿರತಾರ…ಅದನ್ನು ನೋಡಿ…ದೊಡ್ಡ ದೊಡ್ಡ ಮಾತಾಡತಿರೊ? ನಾವು ಓದಿ ಬರದಿಲ್ಲೇನು?”ಎಂದ್ರು ಮೇಷ್ಟ್ರು
“ಸರ್….ನೀವು ಓದುವಾಗನೂ ಹಿಂಗ ಇತ್ತಾ ಸರ್”ಎಂದಾಗ ಮೇಷ್ಟು ಮೌನವಾದ್ರು..
“ಏನ್ರೋ ನನಗ ಬುದ್ಧಿ ಹೇಳುವಷ್ಟು ದೊಡ್ಡವರಾದ್ರ? ಈ ಸಾರಿ ನಿಮ್ಮ ಸೈನ್ಸ್ನಲಿ ಫೇಲ್ ಮಾಡಿಬಿಡ್ತಿನಿ” ಎಂದು ಗದರಿದ್ರು.
“ಶಾಲಿಗೆ ಬರಲಾರದವರನ್ನ ಪಾಸ ಮಾಡ್ತೀರಿ..ನಮ್ಮನ್ನ ಫೇಲ್ ಮಾಡ್ತೀರಾ?” ಎಂದ ಭೀಮ
“ಲೇ ಡುಮ್ಮು..ಎದೆ ಸೀಳಿದ್ರ ನಾಲ್ಕಕ್ಷರ ಇಲ್ಲ..ಪ್ರಶ್ನೆ ಮಾಡ್ತೀಯಾ?” ಅಂತ ಭೀಮಗ ಎರಡು ಏಟು ಹಾಕಿ ಎಲ್ಲರಿಗೂ ಆಲ್ ಯು ಆರ್ ಸ್ಟುಪಿಡ್ಸ್ ನೋಡೊಕೊತಿನಿ, ಹೆಡ್ ಮಾಸ್ಟರ್ ಗೆ ಕಂಫ್ಲೆಂಟ್ ಮಾಡ್ತೀನಿ” ಎಂದು ನಡೆದರು.

ಎಲ್ಲ ಉತ್ತರ ಪತ್ರಿಕೆ ಹೊತ್ತು ನಡೆಯುವಾಗ “ಅಮ್ಮಾ, ಎಂದು ಕಪಾಳಕ್ಕೆ ಹೊಡೆದು ಕೊಂಡರು “ಏನಾಯ್ತು ಸರ್?” ಎಂದ್ರು ಎಲ್ಲಾ ಮಕ್ಕಳು.
“ಹಾಳಾದ್ದು ಸೊಳ್ಳೆ…ಎಲ್ಲಾ ನಿಮ್ಮಿಂದಲೇ..? ಎಂದು ಬೈಯುತ್ತಾ ನಡೆದರು.
ಸ್ವಲ್ಪ ಸಮಯದ ನಂತರ ಸೊಳ್ಳೆ ಬಂದು “ಸ್ವಾರಿ ಸಮು ತಡಕೊಳ್ಳಲಿಕ್ಕೆ ಆಗಲಿಲ್ಲ” ಎಂದಿತು.
“ನೀನಾ ಕಚ್ಚಿದ್ದು!”
“ಇಲ್ಲ ನನ್ನ ವೈಫ್‌ಗೆ ಸಿಗ್ನಲ್ ಕೊಟ್ಟಿದ್ದೆ, ಬಂದ್ರು ಕಿಸ್ ಕೊಟ್ಟು ಹೋದ್ರು. ಡೆಲಿವರಿ ಟೈಮು ಬೇರೆ. ಫಿಮೇಲ್ ಸೊಳ್ಳೆಗಳಿಗೆ ಡೆಲವರಿ ಟೈಮಿನಲ್ಲಿ ಪ್ರೋಟಿನ್ ಬೇಕು..ಅದು ನಿಮ್ಮ ರಕ್ತದಿಂದ ಸಿಗುತ್ತದೆ.” ಎಂದಾಗ ನನಗೆ ಆಶ್ರ‍್ಯ ಆಯಿತು.
“ಅಲ್ಲಪ….ಸರ್ ಗೆ ಏನಾದ್ರು ಆದರೆ..?”
“ಆಗಲಿ ಬಿಡಿ…ಈ ಸೈನ್ಸ ಮಂದಿನ ಕಾಡನ್ನ ನಾಶ ಮಾಡಿ ನಮ್ಮನ್ನ ನಾಡಿಗೆ ಬರೊ ಹಾಂಗ ಮಾಡಿದ್ದಾರೆ”
“ಏನೇನೊ ಒಗಟು ಒಗಟಾಗಿ ಮಾತಾಡಿತಿಪಾ ನೀನು..? ಇರಲಿ, ಮೇಷ್ಟ್ರುಗೆ ಏನೂ ಆಗಲ್ಲಲ”
“ನೀನು ಹುಂ.. ಅಂದ್ರ ಒಂದು ತಿಂಗಳ ಮನೆಯಲ್ಲಿ ಇರೊಹಾಂಗ ಮಾಡತೀನಿ, ಇಲ್ಲ ಆನಿಕಾಲು ಬರೊ ಹಾಗೆ ಮಾಡ್ತೀನಿ, ಇಲ್ಲ
ಕೈಕಾಲು ಹಿಡುಕೊಳ್ಳೊ ಹಾಗೆ ಮಾಡ್ತೀನಿ”
“ಹೇ…ಬೇಡ ಫ್ರೆಂಡು ಹಾಗೆಲ್ಲ ಮಾಡಿಟ್ಟೀಯಾ..?”
ನಗುತ್ತಾ “ನಮಗೂ ಮನಸ್ಸಿದೆ ನಿಮ್ಮಷ್ಟು ಕಟುಕರಲ್ಲ ಸೊಳ್ಳೆ ಕಡಿದ್ರೆ ಸಾಯೊ ಹಾಗಿದ್ದಿದ್ರೆ ಇಷ್ಟೊತ್ತಿಗೆ ಭೂಮಿ ಮೇಲೆ ಯಾರು ಇರತಿರಲಿಲ್ಲ”
“ಅಂದ್ರೆ…” ಎಂದು ಕೇಳುವಷ್ಟರಲ್ಲಿ ಗಂಟೆ ಹೊಡಿತು. ಹಾಳಾದದ್ದು ನೀನು ಸಿಕ್ಕಾಗಿನಿಂದ ಟೈಮು ಹೇಗೆ ಓಡುತಿದೆ ನೋಡು ಎಂದು ಹೇಳುವಾಗಲೆ “ನಿಮ್ಮಪ್ಪ ಬಂದಾನ ಕರಿತಿದ್ದಾರ ಬೇಗ ಹೋಗೊ” ಎಂದು ಗೆಳೆಯನೊಬ್ಬ ಬಂದು ಹೇಳಿದ. “ಮನೆಗೆ ಹೋಗಿ ಮಾತಾಡೋಣ, ನಡಿ ನನ್ನ ಬ್ಯಾಗು ಏರು” ಎಂದು ಹೇಳಿ, ಅದು ಒಳಹೊಕ್ಕ ಮೇಲೆ ನಿಧಾನವಾಗಿ ಬ್ಯಾಗು ಹಾಕಿಕೊಂಡು ನಡೆದೆ. ನಿತ್ಯವೂ ಓಡೋಡಿ ಬಂದು ಬೈಕಿನ ಮೇಲೆ ಜಂಪ್ ಮಾಡಿ ಕೂಡುತ್ತಿದ್ದ ನಾನು ನಿಧಾನವಾಗಿ ಬರೋದನ್ನ ನೋಡಿ “ಯಾಕೊ ಬೆಳಿಗ್ಗೆಯಿಂದ ನೋಡ್ತಾ ಇದ್ದೀನಿ, ಅಷ್ಟ್ಯಾಕ ಮೆಲ್ಲಗೆ ಬರತಿದ್ದೀಯಾ ಏನಾಗಿದೆ ನಿನಗೆ?” ಎಂದ.

“ಏನಿಲ್ಲಪ್ಪ…ನನಗೇನು ಆಗಿಲ್ಲ” ಎಂದು ಗಾಡಿ ಏರಿ ಕುಳಿತೆ. ಅಪ್ಪ ಗಾಡಿ ಸ್ಟರ‍್ಟ ಮಾಡಿ ‘ಭರ್’ ಅಂತ ಹೊರಟ. ದಾರಿಯಲ್ಲಿ ಅದ ಯೋಚನೆ. ಏನಿದು ಎಂತಹ ಸೊಳ್ಳೆ..? ಏನೆಲ್ಲ ವಿಷಯ ನನ್ಮುಂದ ಹೇಳಕ ಪ್ರಯತ್ನಿಸುತ್ತಿದೆ. ಎಷ್ಟು ಚಂದ ಅದಲ್ಲ ಸೊಳ್ಳೆ ಜೊತೆಗಿನ ದೋಸ್ತಿ. ನಾನು ಎಷ್ಟೋ ಸಾರಿ ಹಲವು ಕೀಟ ಪ್ರಾಣಿ ಪಕ್ಷಿಗಳ ಜೊತೆ ಮಾತಾಡಲಿಕ್ಕೆ ಪ್ರಯತ್ನ ಮಾಡೀನಿ..ಒಂದು ರೆಸ್ಪಾನ್ಸ್ ಮಾಡಲೆ ಇಲ್ಲ. ಇರುವೆ ಅಡ್ಡಾಡೋದನ್ನ ನೋಡೊದ್ರಲ್ಲೂ ಎಷ್ಟು ಮಜ ಇರುತ್ತೆ. ಇರುವೆ ಅತ್ತಿಂದಿತ್ತು ಅಲೆಯೋದು ಏನೇನೋ ತಮ್ಮೊಡನೆ ನಿಂತು ಮಾತಾಡದಂಗೆ ಆಗೋದು. ಹಿಂದೆ ಮುಂದೆ ಹೋಗೋದು. ತಿನಸನ್ನು ಹೊತ್ತುಕೊಂಡು ಸಾಗೋದು, ಮತ್ತೆ ವಾಪಸ್ಸು ಬರೋದು, ಭಾರವಿದ್ರೆ ಎರಡ ಮೂರು ಕೂಡಿ ಜಗ್ಗಿಕೊಂಡು ನಡೆಯೋದು ಎಷ್ಟು ಚಂದ ಅಲ್ಲ. ತಾಸುಗಟ್ಟಲೆ ನೋಡತಾ ಕುಳಿತರೂ ನೋಡತಾನೆ ಇರಬೇಕು ಅನಸ್ತಿತ್ತು. ನಾನು “ಹಾಯ್..ಹೇಗಿದ್ದೀರಿ ಅಂದ್ರೂ….” ಅವರು ಅಡ್ಡಾಡುವ ದಾರಿಗೆ ಕಡ್ಡಿ, ಎಲೆ ಅಥವಾ ಇನ್ನೇನೊ ಅಡ್ಡ ಹಾಕಿದರೆ, ಕೈ ಅಡ್ಡ ಇಟ್ಟರೆ. ಚಾಕ್‌ಪೀಸ್‌ನಿಂದ ಗೀಚಿದರೆ ದಾರಿ ಬದಲಿಸಿ ಹೋಗುವವೆ ವಿನಃ ಅವು ಯಾವವು ಮಾತಾಡತಾ ಇರಲೇ ಇಲ್ಲ. ತಾಸುಗಟ್ಟಲೆ ಅದನ್ನು ನೋಡತಾ ಕುಳಿತರೂ ಏನೂ ವಿಷಯ ತಿಳಸ್ತಿರಲಿಲ್ಲ. ಸ್ವಲ್ಪನಾದ್ರೂ ಕರುಣೆ ತೋರುತ್ತಿರಲಿಲ್ಲ. ‘ನಮಗ ನೂರೆಂಟು ಕೆಲಸ… ನಿನ್ನ ಜೊತೆ ಏನು ಮಾತು’ ಅನ್ನುವಾಂಗ ಇತ್ತು ಅವುಗಳ ವರ್ತನೆ.

ಗುಂಗಾಡಿನೂ ಅಷ್ಟೆ, ಎಷ್ಟು ಚಂದ ರಾಗ ಮಾಡತಾ ಹಾರೋವು; ಆದರೆ ಅವು ಮಾತಾಡ್ಸತಿರಲಿಲ್ಲ. ಆದರೆ ಹತ್ತಿರ ಕಿವಿ ಹತ್ರ ಏನೋ ಹೇಳೊಕೆ ಬರೊ ಹಾಂಗ ಬರೋವು. ಮೊದಲೆ ವಿಚಿತ್ರ ಮುಖ ಗುಂಗಾಡಿದು. ಭಯದಿಂದ ನಾನು ಓಡಸ್ತಿದ್ದೆ. ಕಚ್ಚಿದ್ರೆ ಅಂತ ನೀವು ಓಡ್ಸೆ ಓಡ್ಸಿರತಿರಿ. ಜೇಡವೂ ಅಷ್ಟೆ….ಹೇಗೆ ಬಲೆ ಹೆಣೆದು ದೂರದಲ್ಲಿ ಕುಳಿತು ಬಲೆಯಲ್ಲಿ ಬಂದ ಕೂಡಲೆ ಸಿಕ್ಕಿಬಿದ್ದ ಕೀಟದ ಮೇಲೆ ಅಟ್ಯಾಕ್ ಮಾಡುತ್ತಿತ್ತು. ನಾನು ಕುತೂಹಲದಿಂದ ಗಮನಸ್ತಿದ್ದೆ… ಹಾಯ್ ಅಂತಿದ್ದೆ..ಅದು ತಿನ್ನುತ್ತಿತ್ತೆ ಹೊರತು ನನ್ನ ಕಡೆ ನೋಡತಾನೂ ಇರಲಿಲ್ಲ. ಸ್ರ್ಪೈಡರ್‌ ಮ್ಯಾನ್ ಫಿಲ್ಮ ನೋಡಿ ಅದರಿಂದ ಕಚ್ಚಿಸಿಕೊಂಡು ಅಪ್ಪಗ “ನನಗೂ ಬೆರಳಲ್ಲಿ ಬಲೆ ಬರತಾ ಇಲ್ವಲ್ಲ” ಎಂದು ಹೇಳಿ ಅತ್ತಿದ್ದೆ… ಅಂತ ಡ್ರೆಸ್ಸು ಕೊಡಿಸು ಹಾಗಾದರೂ ಬರಬಹುದೆಂದು.. ಡ್ರೆಸ್ ಹಾಕಿಕೊಂಡು ಜೇಡ ಕಡಿಸಿಕೊಂಡು ಹುಚ್ಚುಹುಚ್ಚಾಗಿ ಏರಲು, ಹಾರಲು ಹೋಗಿ ಬಿದ್ದು ನೋವು ಮಾಡಿಕೊಂಡಿದ್ದೆ. ಕಚ್ಚಿಸಿಕೊಂಡ ಕಡೆ ದಪ್ಪಾ ಆಗಿ ತಿಂಡಿ ಹೆಚ್ಚಾಗಿ ಸುಮಾರು ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದೆ. ಇನ್ನೂ ಬೋರು ಹುಳ, ಬೋರಾಣಿ, ಜೀರಂಗಿ ಅಂತ ಏನೆಲ್ಲ ಕರಿತಾರಲ್ಲ..ಅದರ ಸೀಜನ್ನು ಬಂದ್ರೆ ನನಗೆ ಖುಷಿಯೊ ಖುಷಿ.

ಯಾರಾದರೂ ಹುಡುಗರ ಕೈಯಲ್ಲಿ ಕಂಡಿತೊ ಹಾಲು ಕೊಡಲು ಬರುತ್ತಿದ್ದ ಅಯ್ಯಮ್ಮಗ ಬಿಡತಿರಲಿಲ್ಲ. ನೀನು ಹೊಲಕ್ಕ ಹೋದಾಗ ತರಲೇಬೇಕು ಎಂದು ಸತಾಯಿಸುತ್ತಿದ್ದೆ. .ಒಂದು ವೇಳೆ ಸಿಗದಿದ್ದರೆ ಹಾಲು ಕೊಡಲು ಬರುತ್ತಿರಲಿಲ್ಲ ವಿನಃ ತಾರದೆ ಬರುತ್ತಿರಲಿಲ್ಲ. ಆಕೆ ತಂದು ಕೊಡುವವರೆಗೂ ಅದರದ್ದೆ ಕನಸು. ಬೆಳಿಗ್ಗೆ ಆರುಗಂಟೆಗೆ ಹಾಲು ಕೊಡಲಿಕ್ಕೆ ಬರುವಷ್ಟರಲ್ಲಿ ನಾನು ಎದ್ದು ಕುಳಿತಿರುತ್ತಿದ್ದೆ.. ಅವಳು ಕಡ್ಡಿಪೆಟ್ಟಿಗೆಯಲ್ಲಿ ಅದಕ್ಕೆ ಬೇಕಾದ ತಪ್ಪಲು ಹಾಕಿಕೊಂಡು ಬದು ಕೊಟ್ಟಾಗ ‘ಅಜ್ಜಿ… ಅಜ್ಜಿ…ಅಜ್ಜಿ ,, ಮುದ್ದು ಅಯ್ಯಮ್ಮಜ್ಜಿ’ ಎಂದು ಗಟ್ಟಿಯಾಗಿ ಹಿಡುಕೊಂಡು ಬಿಡುತಿದ್ದೆ. ಅದಕ್ಕೆ ರೀಲ್ ದಾರವನ್ನು ಅದರ ಕುತ್ತಿಗೆಗೆ ಕಟ್ಟಿ, ಬಿಸಲಲ್ಲಿ ಅದನ್ನು ನಿಲ್ಲಿಸಿಬಿಟ್ರೆ.. ಪಾಪ, ಕಾಲು ಸುಡುತ್ತಿದ್ದರಿಂದ ತಪಪಿಸಿಕೊಳ್ಳುವುದಕ್ಕೆ ಹಾರುತಿತ್ತು.

ಹಾರುವಾಗ ಅದು ನಮ್ಮ ದಾರಕ್ಕೆ ಸಿಕ್ಕಿ ಬೀಳಬಾರದೆಂದು ಅದರ ಜೊತೆ ನಾನು ಓಡಾಡುತ್ತಿದ್ದೆ..ಅದಕ್ಕೆ ಬೇಕಾದ ತಪ್ಪಲು ಹಾಕೋದು..ಅದರ ಬಾಯಿಯೊಳಗೆ ಆ ತಪ್ಪಲದ ಹಾಲು ಕುಡಿಸೋದು. ಅದು ಮೇಯೋದು, ಇಸ್ಸಿ ಮಾಡೋದು.. ಬೆಂಕಿಪೆಟ್ಟಿಗೆಯೊಳಗೆ ಇಟ್ಟಾಗ ಮರದಿನದಲ್ಲಿ ಕಲರ್ ಕಲರ್ ತತ್ತಿ ಹಾಕೋದು..ಎಷ್ಟು ಚಂದ ಅಂತಿರಿ.. ಅದು ಹಾರದಿದ್ದಾಗ ಬಂಡೆ ಮೇಲೆ ಉಲ್ಟಾ ಹಾಕಿ “ನಿಮ್ಮ ಅಪ್ಪ ಅಮ್ಮ ಬರತಾರ ಹಾರು ಹಾರು ಹಾರು’ ಎಂದಾಗ ಅದು ರೆಕ್ಕೆ ಬಿಚ್ಚಿ ಹಾರಿದೊಡನೆ ನಾವು ಹಾರಿದಷ್ಟೆ ಖುಷಿ ಆಗೋದು. ಅದರಲ್ಲಿ ದೊಡ್ಡದಾಗಿರುವಂತ ಟಮಾಟೆ ಬೋರುಳ ಸಿಕ್ರು ವಿಶೇಷ…ಬೋರು ಹುಳದ ಬಂಗಾರದಂತೆ ಮಿಂಚುವ ಬಣ್ಣವೆ ಚಂದ..ಅವು ಸತ್ತಾಗ ನಮ್ಮನ್ನೆಲ್ಲ ರಂಜಿಸಿದ ಅವುಗಳಿಗಾಗಿ ಅತ್ತು ಸಣ್ಣ ಕುಣಿ ಮಾಡಿ ದುಃಖದಿಂದ ಹುಳುತಿದ್ವಿ. ಮುಂದಿನ ವರ್ಷ ಹುಟ್ಟಿ ಬಾ ಎಂದು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: