ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ..’

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

5

ಏನು ಮಾತಾಡಾ ಇದ್ದೀಯಾ?
ಅಪ್ಪ ಗಾಡಿ ಸ್ಟಾರ್ಟ್ ಮಾಡಿ ‘ಗಟ್ಟಿಯಾಗಿ ಹಿಡುಕೊ…ಹೊತ್ತಾಗಿದೆ’ ಎಂದ. ನಾನು ಅಪ್ಪನನ್ನು ಬಿಗಿಯಾಗಿ ಹಿಡಿದುಕೊಂಡೆ. ನಿತ್ಯ ದಾರಿಯಲ್ಲಿ ಬರುವ ಮನೆಗಳನ್ನ, ಅದರ ಮುಂದಿನ ಹೂ ಗಿಡಗಳನ್ನ ನೋಡುತ್ತಿದ್ದೆ. ಕೈ ಸಿಕ್ರ ಜಗ್ಗಿಕೊಂಡು ಬಿಡುತ್ತಿದ್ದೆ.. ಎತ್ತು, ಕರ, ಎಮ್ಮೆಗಳನ್ನು, ಆಡು ಕುರಿಗಳನ್ನ ಹೋಗತಾ ಹೋಗತಾ ಮುಟ್ಟುತ್ತಿದ್ದೆ. ಅಪ್ಪ ‘ಹೇ…ಹಾಗ ಮಾಡಬೇಡ ಗಾಡಿ ಮೇಲೆ ಹೋಗುವಾಗ…ಇಲ್ಲಂದ್ರ ಇಬ್ಬರು ಬಿದ್ದು ಬಿಡತೀವಿ. ಹಾಂಗಿದ್ರ ಸ್ಲೋ ಮಾಡು ಅಂತ ಹೇಳು’ ಅಂತಿದ್ದ. ಅಲ್ಲದ ಅಂಗಡಿ ಬೋರ್ಡಗಳನ್ನ ಓದುತ್ತಿದ್ದೆ… ಇಂಗ್ಲೀಷ್ ಮೇಷ್ಟ್ರು ‘ನಿಮಗ ಇಂಗ್ಲೀಷ್ ಬರಬೇಕಂದ್ರ…ಅ೦ಗಡಿಯಿ೦ದ ಏನೇನು ಸಾಮಾನು ತರತಿರಿ ಅದರ ಮೇಲಿರುವ ಇಂಗ್ಲೀಷ್ ಪದಗಳನ್ನು ಓದಬೇಕು, ಅಂಗಡಿ ಮೇಲಿನ ಬೋರ್ಡಗಳನ್ನ ಓದಬೇಕು, ಉದ್ದಕ್ಕ ಹೋಗಿ ಉದ್ದಕ ಬರಬಾರದು…ಪ್ರತಿಯೊಂದನ್ನು ಗಮನಿಸಬೇಕು..ಹಾಂಗಾದ್ರ ಇಂಗ್ಲೀಷ್ ಬೇಗ ಬರುತದ’ ಅಂತಿದ್ರು. ಆದರೆ ಇವತ್ತು ಅವನ್ನು ಹಾಗೆ ಮಾಡಬೇಕು ಅಂತ ಅನಿಸಲೇ ಇಲ್ಲ.

ಅಪ್ಪನನ್ನು ಗಟ್ಟಿಯಾಗಿ ಹಿಡುಕೊಂಡು ಕೂತು ಹೋಗುವಾಗ ಸೊಳ್ಳೆದೆ ಚಿಂತೆ. ಅದರ ಜೊತೆ ಮಾತಾಡಿದ್ದೆಲ್ಲ ಮತ್ತೆ ಮತ್ತೆ ನೆನಪಾಗುತಿತ್ತು. ಎಷ್ಟು ಚಂದ ಅದರೊಂದಿಗೆ ಮಾತು. ಮೊದಲೆಲ್ಲ ಸೊಳ್ಳೆ ಅಂದ್ರೆ ನನಗೆ ಎಲ್ಲಿಲ್ಲದ ಸಿಟ್ಟು. ಹುಲಿ, ಸಿಂಹ, ಚಿರತೆ, ಆನೆ, ಹಾವಿಗಿಂತಲೂ ಅಪಾಯವಾದದ್ದು ಎಂದು ನಮ್ಮ ಸೈನ್ಸು ಮೇಷ್ಟ್ರು ಹೇಳುತ್ತಿದ್ದರು. ‘ವರ್ಷಕ್ಕೆ ಏಳು ಲಕ್ಷ ಜನ ಈ ಸೊಳ್ಳೆ ಕಡಿತದಿಂದ ಬರುವ ರೋಗಗಳಿಂದ ಸಾಯುತ್ತಾರೆ ಎನ್ನುವ ಅಂದಾಜಿದೆ’ ಎಂದು ಹೇಳುತ್ತಿದ್ದರು. ಸೊಳ್ಳೆಗಳಲ್ಲಿಯೆ ೩೫೦೦ ಪ್ರಭೇಧಗಳಿವೆ ಅದರಲ್ಲಿ ೪೦೦ ಅನಾಫಿಲಿಸ್ ಕುಟುಂಬಕ್ಕೆ ಸೇರಿದವು. ಅದರಲ್ಲಿ ನಲವತ್ತು ಪ್ರಬೇಧಗಳು ಮಲೇರಿಯಾ ಹರಡುವಲ್ಲಿ ಪ್ರಮುಖ ಪಾತ್ರವಹಿಸುವಂತಹವು. ಮಲೇರಿಯಾ ಅಷ್ಟೆ ಅಲ್ಲದೆ ಹಳದಿ ಜ್ವರ, ಡೆಂಗಿ, ಮೆದುಳಿನ ಊರಿಯೂತ, ಫಿಲಾರಿಯಾಸಿಸ್, ಆನೆಕಾಲು ರೋಗ, ಚಿಕನ್ ಗುನ್ಯ ಮೊದಲಾದ ರೋಗಗಳ ಜನಕ. “ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೀರು ನಿಲ್ಲದಂತೆ ನೋಡಿಕೊಳ್ಳಿ” ಎಂದು ಹೇಳಿದ್ದ ಮಾತುಗಳು ನೆನಪಾಗಿ ಅದಕ್ಕಿಂತಲೂ ಹೆಚ್ಚಾಗಿ ಮಲೇರಿಯಾ, ಡೆಂಗ್ಯೂ ಬಂದು ಸ್ವತಃ ಅನುಭವಿಸಿದ್ದೆ. ಎರಡು ವರ್ಷಗಳ ಹಿಂದೆ ಪ್ಲೇಟ್ಲೇಟ್ ರೇಟ್ ಕಡಿಮೆಯಾಗಿ, ಸಿಕ್ಕಾಪಟ್ಟೆ ಜ್ವರ ಬಂದು…ಟೈಫಾಯಿಡು
ಆಗಿ…ನಿತ್ಯ ಬಾಟಲಿ ಏರಿಸಿಕೊಂಡು…ಒತ್ತಾಯ ಮಾಡಿ ಕೊಡುತ್ತಿದ್ದ ಪಪ್ಪಾಯಿ ರಸ ಕುಡದು ಕುಡದು ಸಾಕು ಸಾಕಾಗಿ ಹೋಗಿತ್ತು.
ಏನು ಬಂದ್ರೂ ಇದು ಬರಬಾರದಪ್ಪ ಅನಿಸಿತ್ತು.

ಅಪ್ಪ ಅಮ್ಮ ಅಕ್ಕನಿಗೆಲ್ಲ ಚಿಕನ್ ಗುನ್ಯಾ ಬಂದು ಸಿಕ್ಕಾಪಟ್ಟೆ ಜ್ವಾಯಿಂಟ್ ಪೇನ್ ಮಾಡಿ ಆ ಅವಧಿಯಲ್ಲಿ ಅವರಿಗೆ ಕೈ ಕಾಲು ಮಡಚೋಕೆ ಆಗದೆ ಎಲ್ಲಾ ಕೆಲಸ ಮಾಡಿ ನಾನೆ ಒದ್ದಾಡಿದ್ದೆ. ಅಮ್ಮನಿಗೆ ಈಗಲೂ ಬಟ್ಟೆಗಳನ್ನು ಹಿಂಡಲು ಕಷ್ಟ ಪಡುವಾಗ ಆ ಚಿಕನ್ ಗುನ್ಯಾನ ಕಾರಣ ಅಂತ ಬೈತಿರುತಾಳೆ. ನನಗೆ ‘ಹಿಂಡು ಬಾ…. ಹಿಂಡು ಬಾ’ ಎಂದು ಗೋಳಾಕಿಕೊಳ್ಳತಾ ಇರತಾಳೆ…ಇರಲಿ ಇರಲಿ, ಬರಲಿ, ಇವರು ಮಾಡುವ ಎಲ್ಲಾ ಕರ್ಮಕಾಂಡನ್ನ ಪ್ರಶ್ನೆ ಮಾಡಿ ಅದರ ಜನ್ಮ ಜಾಲಾಡಿ ಬಿಡೋಣ ಎಂದು ಅಂದುಕೊ೦ಡೆ… ಹಾಗೆ ಯೋಚಿಸುವಾಗಲೆ ಶಾಲೆ ಬಂದಾಗಿತ್ತು.

ಅಪ್ಪ ಗಾಡಿಯನ್ನು ನಿಲ್ಲಿಸಿ, ಬೆನ್ನು ಚೆಪ್ಪರಿಸಿ “ಚೆನ್ನಾಗಿ ಬರಿ ಪೇಪರ್” ಎಂದು ಶುಭಾಶಯ ಹೇಳಿ, ಹೋಗುವಾಗ ಪ್ಯಾಂಟು
ಜೇಬಿನಿಂದ ಹುಡುಕಾಡಿ ನನಗೆ ತಿನ್ನೋಕೆ ಪಾಪಿನ್ಸ್ ಕೊಟ್ಟು ಟಾಟಾ ಮಾಡಿ ಹೋದ್ರು.

“ಅಪ್ಪಾ ಟಾ..ಟಾ….ಬಾಯ್ ಬಾಯ್” ಎಂದು ಶಾಲೆಯ ಒಳಗೆ ಹೋದೆ. ಆಗಲೆ ಪ್ರೇಯರ್ ನಡೆದಿತ್ತು. ಮುಂದಿನ ಗೇಟಿನಿಂದ ಹೋದರೆ ತಡವಾಗಿ ಬಂದದಕ್ಕೆ ಬಡಿಸಿಕೊಳ್ಳಬೇಕಾಗುತ್ತದೆ ಅಂದು ಹಿಂದಿನ ಗೇಟಿನಿಂದ ಹೊರಟೆ. ಪರೀಕ್ಷಾ ಟೈಮು ಲೇಟಾಗಿ ಬಂದರೂ ಬಡಿತಿರಲಿಲ್ಲವಾದರೂ ಸೊಳ್ಳೆ ಜೊತೆ ಮಾತಾಡೊ ಆಸೆಯಿಂದ ತರಗತಿ ರೂಮಿನಲ್ಲಿ ಕುಳಿತೆ.

ನಿಧಾನವಾಗಿ ಬ್ಯಾಗ ತೆಗೆದೆ, ಬ್ಯಾಗನ ಸಂಧಿಯಲ್ಲಿ ನೋಡಿದೆ ಸೊಳ್ಳೆ ಇರಲಿಲ್ಲ, ಅಯ್ಯೊ! ಧಕ್ಕಡಿಗೆ ಅಪ್ಪಚ್ಚಿಯಾಗಿದೆಯೋ? ಗಾಳಿಗೆ ಹಾರಿಹೋಯಿತೇನೊ..? ಎಂದು ಆತಂಕಕ್ಕಿಡಾದೆ. ಬೇರೆ ಕಡೆ ಕುಳಿತಿದೆಯೊ ಏನೊ? ಅಥವಾ ಎಲ್ಲಿ ಹೋಯಿತೊ? ಎಂದು ಬ್ಯಾಗಿನಲ್ಲಿಯ ಎಲ್ಲವನ್ನು ಕಿತ್ತಿ ಕಿತ್ತಿ ನೋಡುವಾಗ ಡೆಸ್ಕನ ಮೇಲೆ ಕುಳಿತು ‘ಹಾಯ್’ ಅಂತಿತ್ತು.

“ನೀನು ಇಲ್ಲಿದ್ದಿಯಾ? ಎಷ್ಟು ಗಾಬರಿಯಾಗಿದ್ದೆ ನಾನು! ಮಾತಾಡಬೇಕಿಲ್ಲ!”
“ಇಲ್ಲ… ನಿಮ್ಮಪ್ಪ ಹೈಸ್ಪೀಡ್ನಲ್ಲಿ ಗಾಡಿ ಓಡಿಸಿದ. ಹೈ ಏರ್ ಪ್ರೇಶರ್! ಹಾಗಾಗಿ ನನಗೆ ಸ್ವಲ್ಪ ತೊಂದರೆ ಆಯಿತು”
“ಈಗ..ಹೇಗಿದ್ದೀಯಾ?”
“ನೌ ಓಕೆ, ನೀನು ಬ್ಯಾಗ್ ಇಟ್ಟುಕೂಡಲೆ ಇಲ್ಲಿ ಬಂದು ವಿಶ್ರಾಂತಿ ತೊಗೋತಿದ್ದೀನಿ”
“ನಾನು ಎಷ್ಟು ಅಂಜಿದ್ದೆ ಗೊತ್ತಾ?”
“ಗಾಡಿಯಲ್ಲಿ ಬರುವಾಗ ಮನಸ್ಸಲ್ಲಿ ಬೈಕೋತ ಬಂದಿ…ನಿಮ್ಮ ಸೈನ್ಸ್ ಟೀಚರ್ ಏನೇನೊ ಹೇಳಿದ್ದು, ನಮ್ಮ ಜನ್ಮನ್ನ
ಜಾಲಾಡಿರಿ ಬಿಡಪ್ಪ ನೀವು; ಎಷ್ಟು ತಿಳುಕೊಂಡಿರಿ ಏನು…? ಏನೆಲ್ಲ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ
ಇಟ್ಟುಕೊಂಡಿರಿ….ಅಬ್ಬಬ್ಬಾ!…ಇಟ್ಟುಕೊಳ್ಳಿ , ಇಟ್ಟುಕೊಳ್ಳಿ ನಮಗೇನು ಬೇಜಾರಿಲ್ಲ”
“ನಿನಗೆಲ್ಲಾ ಗೊತ್ತಾಯ್ತಾ?”
“ನನಗೆಲ್ಲಾ ಗೊತ್ತಾಗತ್ತದ ಅಂತ ಆಗಲೆ ಹೇಳಿನಲ್ಲ” ಎಂದಿತು.

ಅಷ್ಟರೊಳಗೆ ಪ್ರೇಯರ್ ಮುಗಿಸಿಕೊಂಡು, ಗೆಳೆಯರೆಲ್ಲ ಒಳಗಬಂದರು.
“ಬೇಗ ಬೇಗ…ಅವರೆಲ್ಲ ಬಂದ್ರು, ನೀನು ಇಲ್ಲೆ ಡೆಸ್ಕ ಸಂಧಿಯಲ್ಲಿ ಅಡಗಿಕೊ” ಅಂತ ಸನ್ನೆ ಮಾಡಿದೆ.
“ಸರಿಪಾ” ಅಂತ ಅಲ್ಲೆ ಮರೆಯಾಯಿತು.
“ಯಾಕ ಸಮು…ಪ್ರೇಯರ್‌ನಾಗ ಕಾಣಲಿಲ್ಲ…ಇಲ್ಲಿ ಪ್ರತ್ಯಕ್ಷ ಆಗಿ ಬಿಟ್ಟಿ” ಎಂದ ಅನಂತ.
“ಇಲ್ಲಪ್ಪ..ಹೊಟ್ಟೆ ನೋಯುತ್ತಿತ್ತು….ಅದಕ ಕ್ಲಾಸ್ ನಾಗ ಕೂತಿದ್ದೆ” ಎಂದು ಸುಳ್ಳು ಹೇಳಿದೆ.
“ನಾವು ಪ್ರೇಯರ್ ಮಾಡಬೇಕು….ಇವ ಒಳಕೂತು ಓದಾಕತ್ಯಾನ…ಸರ್ ಹೇಳೋಣ ತಡಿ” ಎಂದು ಸತೀಶ ಭೀಮಗ ಹೇಳಕತಿದ್ದು
ಕೇಳಿಸ್ತು.
“ನಿನ್ನ ಮುಂದ ಅವನೇನು ಲೆಕ್ಕ…ಹತ್ತು ನಿಮಿಷದಾಗ ಏನು ಕಿಸಿಯಾಕ ಬರತಾದ” ಎಂದು ಬೀಮ ಅವನಿಗೆ ಸಮಾಧಾನ
ಹೇಳತಿರೋದು ಕೇಳಿಸ್ತು.
ವಾರ್ನಿಂಗ್ ಬೆಲ್ ಹೊಡೆದು ಕೂಡಲೆ ರೂಮ್ ಸೂಪರವೈಜರ್ ಬಂದ್ರು. “ಯಾರು ಕಾಪಿಗೀಪಿ ಏನೇನು ತಂದಿರೊ ಕೊಟ್ಟು ಬಿಡಿ.
ಸಿಕ್ರೆ ಪೇಪರ್ ಕಸಗೊಂಡು ಕಳಿಸಿಬಿಡ್ತೀನಿ” ಎಂದು ಜೋರು ಮಾಡಿದರು.

“ಸರ್…ನಾವ್ಯಾರು ಕಾಪಿ ಚೀಟಿ ತಂದಿಲ್ಲರಿ……ಬುಕ್ಕು, ಫೇರ್ ಕಾಪಿ ತಂದಿದ್ವಿ ಸರ್..ಹೊರಗ ಇಟ್ಟು ಬಿಟ್ಟಿವರಿ ಸರ್” ಎಂದ
ಅನಂತು.

“ಹೋ..ಹೋ..ಇ೦ಗ್ಲೀಷ್ ಪೇಪರಿಗೆ ಕಾಪಿ ಚೀಟಿ ತಂದಿಲ್ಲ ಅಂದ್ರ ನಂಬೋಕಾಗುತ್ತೇನೊ…ಇರಲಿ ಒಬ್ಬರರಾ ಸಿಗ್ರಿ….ಮಾಡತಿನಿ”
ಎಂದು ಮೊದಲು ಆನಸರ್ ಶೀಟ್ ಕೊಟ್ಟು ಇನ್ನೊಂದು ಬೆಲ್ ಆದ ಮೇಲೆ ಪ್ರಶ್ನೆ ಪತ್ರಿಕೆ ಕೊಟ್ಟರು….ನನ್ನ ಕೈಯಾಗ ಪೇಪರ್ ಬಂದಾಗ ಕಣ್ಣು ಮುಚ್ಚಿ ದೇವರನ್ನ ನೆನಸಿಕೊಂಡು ಕಣ್ಣು ತೆರೆದು ಓದಲಿಕ್ಕೆ ಆರಂಭಿಸಿದೆ. ಬರುವವೆ ಇದ್ದು ಕೆಲವೊಂದು ಟಫ್ ಇದ್ವು. ಆಮೇಲೆ ನೋಡಿದ್ರಾಯಿತು ಎಂದು ಸರಳಿದ್ದವನ್ನೆಲ್ಲ ಬರಿಯಾಕ ಸ್ಟಾರ್ಟ ಮಾಡಿದೆ.

ಹಿಂದೆ ಇದ್ದ ನನ್ನ ಕಂಡರೆ ಆಗದಿರುವವರೆಲ್ಲ, ಗೊಳಾಡಿಸುತ್ತಿದ್ದ ಎಲ್ಲರೂ ಬರಿಯದೆ ಒದ್ದಾಡುತ್ತಿದ್ದರು. ‘ಚಟ್ ಚಟ್’ ಬಡಿದುಕೊಳ್ಳುತ್ತಾ ಇದ್ರು. ಅರ್ಧ ತಾಸಾದರೂ ನಾಲ್ಕು ಲೈನು ಗೀಚಿರಲಿಲ್ಲ. ನನ್ನ ಪ್ರತಿಸ್ಪರ್ಧಿ ಸತೀಶ ಬರಿಯಾಕ ಸ್ಟಾರ್ಟ ಮಾಡಿದನೆಂದ್ರೆ ಮುಗಸತನ ಒಳ್ಳಿ ನೋಡಲಾರದವ. ಆದರ ಅವನು ಆ ಕಡೆ ಈ ಕಡೆ ನೋಡುತ್ತಾ ಕುಳಿತಿದ್ದ.

“ಯಾಕಿವರು? ಹೀಗೆಲ್ಲ ಅಂದುಕೊ೦ಡೊಡನೆ ಓಹೋ ಇದು ನಮ್ಮ ಸೊಳ್ಳೆ ಸಾಹೇಬ್ರುದು ಕಿತಾಪತಿ” ಎಂದು ಮೌನವಾದೆ
“ಬಂದಾಗ ಕೇಳಿದ್ರಾಯಿತು” ಎಂದು.

ಮಕ್ಕಳೆಲ್ಲ ಹಾಗೆ ಮಾಡೊದನ್ನು ನೋಡಿ “ಏನ್ರೊ…? ಏನ್ ಮಾಡತಿದ್ದೀರಿ..ಸುಮ್ಮನೆ ಬರಿಯೋಕೆ ಆಗತಿಲ್ಲವಾ?” ಎಂದು
ಬೈದರು.

“ನಾವೇನು ಮಾಡತಿಲ್ಲ ಸರ್ ಸೊಳ್ಳೆ ಸಿಕ್ಕಾಪಟ್ಟೆ ಕಚ್ಚತಿವೆ..”
“ನಿಮಗೆಲ್ಲಾ ಎಷ್ಟು ಹೇಳುತೀನಿ…ರೂಮನ್ ಕ್ಲೀನ್ ಆಗಿ ಇಟ್ಟುಕೊಳ್ಳಿ, ಸ್ವಲ್ಪಾದ್ರೂ ಡಿಸಿಪ್ಲೇನೆ ಇಲ್ಲ ನಿಮ್ಮಲ್ಲಿ. ನೋಡಿ ಮೂಲೆಯಲ್ಲಿ ಜೀಡಿ ಹೇಗಿಟ್ಟಿದೆ…ಆ ಮೂಲೆಯಲ್ಲಿ ಕಸ ಹೇಗಿದೆ. ನಿಮ್ಮ ಡೆಸ್ಕಿನಲ್ಲಿ ಸೊಳ್ಳೆ, ಹುಳು ಹುಪ್ಪಡಿ ಹೇಗೆ ಮನೆ ಮಾಡಿವೆ. ಸೊಳ್ಳೆ ಎಂತಹ ಹಾರ್ಮಫುಲ್ ಅಂತ ಹೇಳಿಲ್ವೇನು ನಿಮಗ? ಅಲಕ್ಷ ಮಾಡಿದ್ರ ಜೀವಾನ ತಿಂದು ಬೀಡ್ತಾದ” ಎಂದು ಲೆಕ್ಚರ್ ಕೊಡಲು ಆರಂಭಿಸಿದರು.

‘ಸೊಳ್ಳೆ’ ಎಂದೊಡನೆ ಅದರ ನೆನಪು ಬರುವುದಕ್ಕೂ, ನನ್ನ ಆನಸರ್ ಪೇಪರ್ ಮೇಲೆ ಬಂದು ಸೊಳ್ಳೆ ಕುಳಿತು ಇವರೇನಾ “ನಿಮ್ಮ
ಸೈನ್ಸ್ ಸರ್” ಅಂತು

“ಎಸ್…ಎಸ್” ಅಂದೆ
“ಏನು… ಎಸ್ ಸಮು” ಎಂದ್ರು ಸೈನ್ಸ್ ಸರ್.
“ಇಲ್ಲ ಸಾರ್.. ಪ್ರಶ್ನೆಗೆ ಉತ್ತರ ನೆನಪಾಯಿತು. ಅದಕೆ ‘ಎಸ್..ಎಸ್..ಗಾಟ್ ಇಟ್’ ಎಂದೆ”
“ನೀನೊಬ್ಬನೆ ನೀಟ್ ಆಗಿ ಕುಳಿತು ಬರತಿರೋದು. ಗುಡ್ ಗುಡ್ ಕೀಪ್ ಇಟ್. ನೋಡ್ರೋ ಸಮುಗ ಸೊಳ್ಳೆ…ಕಡಿತಿಲ್ವಾ…? ಹೇಗೆ ಶ್ರದ್ಧೆಯಿಂದ ಬರಿತಿದ್ದಾನೆ… ನೋಡಿ ಕಲತುಕೊಳ್ಳಿ.. ಎಲ್ಲಾ ನಾಟಕ ಮಾಡತಿದ್ದೀರಿ. ಇಂಗ್ಲೀಷ್ ಪೇಪರ್ ಬೇರೆ ಇವತ್ತು… ಬರಿಲಾರದೆ ನೆವ ಹುಡುಕುತ್ತಿದ್ದೀರಿ. ಆ ನಿಮ್ಮ ಇಂಗ್ಲೀಷ್ ಮೇಷ್ಟ್ರು ಸೊಕ್ಕು ಮುರಿಯಾಕಾದ್ರೂ ಇವತ್ತು ಕದಲದ ಕುಳಿತು ಬಿಡ್ತೀನಿ. ನಿಮ್ಮ ಮೇಷ್ಟ್ರು ಬೇಕಂತ ಡೌಲು ತೋರಸಾಕ ಲಾಸ್ಟ ಪೇಪರ್ ಇಟ್ಟುಕೊಂಡಾರ”

ಸೊಳ್ಳೆ ಕಾಲಮೇಲೆ ಕಾಲು ಹಾಕಿಕೊಂಡು “ಹ್ಯಾಂಗೆ…ನಿಮ್ಮ ಗೆಳೆಯರಿಗೆಲ್ಲ ಶಾಸ್ತಿ ಚಲೊ ಆಯತಲ್ಲ….. ನಿನ್ನ ಕಂಡ್ರ ಉರಕಂತಿದ್ರು.. ನಿಮ್ಮ ಸೈನ್ಸ್ ಸರ್‌ಗೆ ಒಂದಿಷ್ಟು ಬುದ್ಧಿ ಕಲಸಬೇಕಾಗ್ಯಾದ” ಎಂದು ಮೀಸಿ ತಿರುವಿತು. “ಅನಕೊಂಡೆ ಇದು ನಿನ್ನದೆ ಕೆಲಸ ಇರಬೇಕು ಅಂತ” ಎಂದು “ಈಗ ಹೋಗು ನನಗೆ ಡಿಸ್ಟರ್ಬ ಮಾಡಬೇಡ, ಆಮೇಲೆ ಮಾತಾಡೋಣ” ಎಂದೆ.

“ಸಮು… ಏನು ಮಾತಾಡಾ ಇದ್ದೀಯಾ?” ಎಂದು ಹತ್ರ ಬಂದ್ರು.
ಸರ್ ಬರುವಷ್ಟರಲ್ಲಿ ಸೊಳ್ಳೆ ಹಾರಿತ್ತು.
“ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ”
“ಗುಡ್…. ನೀವು ನೀವ ಮಾತಾಡಬಾರದು ಪ್ರಶ್ನೆಯೊಂದಿಗೆ ಮಾತಾಡಿದ್ರ ಉತ್ತರ ಸಿಗೋದು..ಗೆಳೆಯರೊಂದಿಗೆ ಮಾತಾಡಿದ್ರ ಸಿಗುತ್ತದ” ಎಂದು ಹೊಗಳ ಹತ್ತಿದರು… ಸ್ವಲ್ಪ ಹೊತ್ತಾದ ಮೇಲೆ ಓದದೆ ಇದ್ದ ಪ್ರೋಸು ಪೋಯಮ್ ನ ಪ್ರಶ್ನೆಗಳು ಬಂದವು.
ಸೊಳ್ಳೆ ಬಂದು ಮತ್ತೆ ಪ್ರತ್ಯಕ್ಷವಾಯಿತು.
“ಕ್ಯಾನ್ ಐ ಹೆಲ್ಪ ಯು”ಅಂದಿತು.
“ಏನು ಮಾಡತಿ?”
“ನಿಮ್ಮ ಸೈನ್ಸ್ ಸರ್‌ನ ಕಚ್ಚಿ ಕಚ್ಚಿ ಇಲ್ಲಿಂದ ಓಡಿಸಲೆ?”
“ಓಡಿಸಿದ್ರೆ….”
“ಕಾಪಿ ಮಾಡಬಹುದು”
“ಹೇ..ಹೇ… ಬೇಡಪ್ಪಾ, ಹಾಗೆಲ್ಲ ಮಾಡಬೇಡ”
“ನನ್ನಿಂದ ನಿನಗೆ ನಿನ್ನೆ ಓದೋಕಾಗಿಲ್ಲ ಸ್ವಲ್ಪಾದ್ರೂ ಹೆಲ್ಪ ಮಾಡಲೇ”
“ಬೇಡ ನಾನು ಮ್ಯಾನೇಜ್ ಮಾಡ್ತೀನಿ…. ಎಷ್ಟು ಸಾಧ್ಯ ಆಗುತ್ತೋ ಅಷ್ಟು ಬರಿತೀನಿ”
“ಸರಿಪಾ… ನಿನ್ನಿಷ್ಟ… ಆದ್ರೂ ನನ್ನ ಬಗ್ಗೆ ಏನೆಲ್ಲಾ ನಿಮ್ಮ ತಲೆ ತುಂಬಿರೋ ಆ ಮೇಷ್ಟ್ರನ್ನ ಸ್ವಲ್ಪ ನೋಡಿಕೊಳ್ಳಬೇಕಂತ
ಮಾಡಿದ್ದೆ. ಇಂತಹ ಸೈನ್ಸ್ ಮಂದಿಯಲ್ಲ ಸೇರಿ ಈ ಪರಿಸರನ್ನ ಹಾಳು ಮಾಡಿದ್ದು”
“ನಿನ್ನ ಜೊತೆ ಮಾತಾಡತಾ, ಇದ್ರೆ, ನಿನ್ನ ಮುದ್ದು ಪೆದ್ದಾದ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆನಿಸುತ್ತದೆ; ಆದರೆ ಇದು ಎಕ್ಸಾಂ
ಟೈಮು ಹೋಗು” ಎಂದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: