ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್

ಗುಂಡುರಾವ್ ದೇಸಾಯಿ

ಸಮು, ಅನು, ರಾಜು, ರಜೆ ಬಂತೂ ಅಂದ್ರ ಸುಮ್ಮನೆ ಇರೋರು ಅಲ್ಲ. ಎಲ್ಲಿಯಾದ್ರೂ ಹೋಗಬೇಕು ಹೊಲಕ್ಕೊ ತೋಟಕ್ಕೊ ಗುಡ್ಡಕ್ಕೊ…ಹೊಸ ಬಗೆಯ ಸಸ್ಯಗಳು, ಪಕ್ಷಿಗಳು, ಪ್ರಕೃತಿಯ ಸಂಭ್ರಮವನ್ನು ಕಾಣಬೇಕೆಂಬುದು ಅವರೆಲ್ಲರ ಹಂಬಲ. ಮೊಬೈಲ್ ಟಿ.ವಿ ಯಲ್ಲಿ ಮುಳುಗಿಹೋಗಿರುವ ಇಂದಿನ ಮಕ್ಕಳ ಮಧ್ಯ ಅವರ ಪರಿಸರದ ಮೇಲಿನ ಬಗೆಗಿನ ಅದಮ್ಯ ಪ್ರೀತಿಗೆ ಪಾಲಕರಿಗೆ ಖುಷಿ. ಮೊದಲೆಲ್ಲ ಅವರ ಜೊತೆ ಹೋಗುತ್ತಿದ್ದ ಪಾಲಕರು..ಹತ್ತಾರು ತಿರುಗಾಟದ ನಂತರ ಅವರಿಗೆ ಫ್ರೀಯಾಗಿ ಓಡಾಡಲು ಬಿಟ್ಟಿದ್ದರು.

ಹೊಲ ತೋಟಗಳಿಗೆ ಹೋದರೂ ಅಲ್ಲಿ ಕಂಡ ಅಂಶಗಳನ್ನು ಶಾಲೆಯಲ್ಲಿ ಬಂದು ಗುರುಗಳಲ್ಲಿ ಹೇಳಿ ಪ್ರಶ್ನೆಗಳನ್ನು ಕೇಳುವರು. ಗುಡ್ಡ ಕಣಿವೆಗಳಿಗೆ ಹೋದರೆ ತಾವು ತಿಂದ ಹಣ್ಣುಗಳ ಬೀಜಗಳನ್ನು ಒಣಗಿಸಿ ತಯಾರಿಸಿದ ಸೀಡ್ ಬಾಲಗಳನ್ನು ಹಿಡಿದುಕೊಂಡು ಒಗೆಯುವ ಆಟವಾಡುತ್ತ ಹೋಗೋರು…ಖಾಲಿಪ್ರದೇಶಗಳಲ್ಲಿ ಅವನ್ನು ತೋಡಿ ಹೂಳೋರು. ತಾವು ಹಾಕಿದ ಸೀಡ್ ಬಾಲನಿಂದ ಮೊಳಕೆ ಒಡೆದದನ್ನು ನೋಡಿ ಖುಷಿ ಪಡೋರು.

ಈ ಸಾರಿಯೂ ಬೇಸಿಗೆಯಲ್ಲಿ ತಯಾರಿಸಿ ಸಂಗ್ರಹಿಸಿದ್ದ ಸೀಡ್ ಬಾಲಗಳನ್ನು ಮಸ್ಕಿ ಗುಡ್ಡಕ್ಕೆ ಹೋಗಿ ಅಲ್ಲಿ ಒಗೆದು ಬರಲು ಒಂದು ರವಿವಾರ ನಿರ್ಧರಿಸಿದರು. ಆ ಬಗ್ಗೆ ತಂದೆಗೆ ಹೇಳಿದಾಗ “ಬೇಡ ಮಕ್ಕಳೆ, ಪಕ್ಕದ ಹಳ್ಳಿಗಳಲ್ಲಿ ಚಿರತೆಯೊಂದು ಅಡ್ಡಾಡುತ್ತಿರುವ ಸುದ್ದಿ ಇದೆ.. ಸುಮ್ಮನೆ ಯಾಕೆ ತೊಂದರೆ ಅನುಭವಿಸುತ್ತೀರಿ…ಬೇಡ..ಇನ್ನೊಂದು ಸಾರಿ ಹೋಗುವಿರಂತೆ” ಎಂದರು..

“ಅಪ್ಪಾ ಪ್ಲೀಜ್ ಹಾಗೆನ್ನಬೇಡಿ..ನಮ್ಮ ಬಗ್ಗೆ ನಂಬಿಕೆ ಇಲ್ಲವೇ? ನಾವು ಎಷ್ಟೊ ಸಾರಿ ಸಾಹಸ ಮಾಡೀವಿ? ಒಮ್ಮೆ ಹಾವು ಬಂದಾಗ ನೀವೆಲ್ಲ ಬಡಿಯಲು ಮುಂದಾಗಿದ್ದೀರಿ..ನಾವು ಅದನ್ನು ಬಡಿಗೆ ಸಹಾಯದಿಂದ ಚೀಲದಲ್ಲಿ ಹಾಕಿಕೊಂಡು ಸೇಫ್ ಮಾಡಿಲ್ಲವೇ?” ಎಂದ ರಾಜು
“ಅದು ಗೊತ್ತಪಾ ಅದು ಹಾವು ಸಣ್ಣ ಜೀವಿ…ಚಿರತೆ ದೊಡ್ಡ ಪ್ರಾಣಿ ಈ ಗುಡ್ಡಕ್ಕೆ ಬಂದರೆ….?” ಎಂದರು.

“ಅಪ್ಪಾ ಧೈರ್ಯ ಹೇಳುತ್ತಿದ್ದ ನೀನೆ ನಮ್ಮನ್ನ ಅಧೈರ್ಯ ಗೊಳಿಸಿದರೆ ಹೇಗೆ? ಎಂದಳು ಅನು “ಮಕ್ಕಳೆ..ದೊಡ್ಡವರ ಮಾತು ಕೇಳಬೇಕು..ಬೇಡ ಎಂದರೆ ಬೇಡ” ಎಂದು ಅಪ್ಪ ಒಳಹೋದರು.

“ಅಕ್ಕ ನಾನು ಚಿರತೆಯನ್ನ ನೋಡಿಯೆ ಇಲ್ಲ….ನೋಡೋಕಾದ್ರೂ ಹೋಗೋಣ?” ಎಂದ ಚೋಟು ಸಮ್ಮು
“ಲೇ…..ಅದೇನೂ ಬೆಕ್ಕು ಅನಕೊಂಡಿಯಾ..? ಮನುಷ್ಯರನ್ನು ಕಂಡ್ರೆ ಮೊದಲೆ ಹಾರುತ್ತೆ…ನೋಡತಾನಂತೆ..ನೋಡತಾನೆ” ಎಂದ್ಲು ಅನು.
“ಅದೆಲ್ಲ ಬಿಡಿ ಚಿರತೆ ಬರೋಲ್ಲ ಏನು ಬರೋಲ್ಲಾ..ಅದು ದೂರದ ಹಳ್ಳಿಯಲ್ಲಿ ಬಂದಿದೆ ಎನ್ನುವ ಸುದ್ದಿ…ನಮ್ಮ ಗುಡ್ಡದಲ್ಲಿ ಏನಿದೆ ತಿನ್ನಲು? ಬರಿ ಬೋಳು. ಇಲ್ಲ ಹೋಗೋಣ..ಫಾರ್ ಚೇಂಜ್ ಥ್ರಿಲ್ ಆಗಿರುತ್ತೆ…”ಎಂದ ರಾಜು
“ಹೌದು ನಾನು ರೆಡಿ ” ಎಂದು ಸಮು
“ಹೌದು ನಾಳೆ ಹೋಗೋದು ಫಿಕ್ಸ್..ಮನೆಯಲ್ಲಿ ಬೇಡ ಅಂದಿದ್ದಾರೆ…ಬುತ್ತಿ ಸಿಗೋಲ್ಲ…ಎಲ್ಲಾರೂ ದುಡ್ಡಿದ್ದಷ್ಟು ಸ್ನಾö್ಯಕ್ಸು ತೊಗೊಂಡುಬಿಡಿ. ಆದರೆ ಅಲ್ಲಿ ಎಲ್ಲಿಯೂ ಒಗೆಯೊ ಹಾಗಿಲ್ಲ. ತಿಂದಿದ್ದು ನಿಮ್ಮ ನಿಮ್ಮಲ್ಲೆ ಇಟ್ಟುಕೊಬೇಕು” ಎಂದ ರಾಜು
‘ಡನ್’ ಎಂದ್ರು ಎಲ್ಲರೂ ಬೆಳಗು ಹರಿಯವುದರೊಳಗೆ ಮನೆಯಲ್ಲಿ ಸಿಕ್ಕ ವಸ್ತುಗಳೊಂದಿಗೆ ಮೂರು ಜನ ಎಸ್ಕೇಪ್ ಆಗಿದ್ದರು. ಬೆಳಿಗ್ಗೆ ಎದ್ದು ವಾಕಿಂಗ್ ಮುಗಿಸಿಕೊಂಡು ಬಂದ ಅಪ್ಪ ಅಮ್ಮ ಮಕ್ಕಳು ಮನೆಯಲ್ಲಿ ಇಲ್ಲದ್ದನ್ನು ನೋಡಿ ಇವರು ಗುಡ್ಡಕ್ಕೆ ಹೋಗಿದ್ದಾರೆ ಎಂದು ಚಿಂತಿಸಿರಲಿಲ್ಲ. ಆದರೆ ಬೆಳಗಿನ ಚಹಾದ ನಂತರ ಪತ್ರಿಕೆ ಓದುವಾಗ ‘ಮಸ್ಕಿ ಗುಡ್ಡದಲ್ಲಿ ಚಿರತೆ ಪತ್ತೆ’ ಎಂಬ ಸುದ್ದಿ ಓದಿದ್ದರಿಂದ ಆತಂಕಗೊಂಡರು. ಕೂಡಲೆ ಪೋಲಿಸ ಸ್ಟೇಶನ್ ಗೆ ಹೋಗಿ ವಿಷಯ ತಿಳಿಸಿದರು. ಅವರು ಅರಣ್ಯ ಇಲಾಖೆಗೆ ಕರೆಮಾಡಿ ಬೇಗ ಬರಲು ಮಾಹಿತಿ ನೀಡಿದರು. ಪಾಲಕರಿಗೂ ಸ್ಟೇಶನ್ ನಲ್ಲಿ ಕೂರಿಸಿ ಕದಲದಿರಲು ಅಪ್ಪಣೆ ಮಾಡಿದರು.

ಇತ್ತ ಮಕ್ಕಳು ಗುಡ್ಡದ ಮಧ್ಯದಲ್ಲಿ ಬಂದಾಗಿತ್ತು. ಕಳೆದ ವರ್ಷಗಳಲ್ಲಿ ತಾವು ಒಗೆದ ಸೀಡ್ ಬಾಲ್‌ಗಳು ಮೊಳಕೆ ಒಡೆದು ಗಿಡಗಳಾಗಿದ್ದನ್ನು ನೋಡಿ ಸಂಭ್ರಮಿಸಿದರು..ಬೆಳಗಿನ ಸೂರ್ಯೋದಯ ನೋಡಿ ಆನಂದಿಸಿದರು…ಗುಡ್ಡದಲ್ಲಿ ಸಿಗುವ ಕವಳೆ ಹಣ್ಣು ಕಾರೆ ಹಣ್ಣು ಸವಿದರು. ಪಕ್ಷಿಗಳ ಕಲರವ..ನಾನಾ ಬಗೆಯ ಹೂಗಳು, ಅವುಗಳ ಹಿತವಾದ ವಾಸನೆ…ಅವರನ್ನು ಬೇರೆ ಲೋಕಕ್ಕೆ ಒಯ್ದಿತ್ತು.. ಹೀಗೆ ಬೋಳಾದ ಸ್ಥಳದಲ್ಲಿ ಸೀಡ್ ಬಾಲ್ ಗಳನ್ನು ಒಗೆಯೋಣ ಎಂದು ಯೋಚಿಸಿ ಅತ್ತ ಹೆಜ್ಜೆ ಹಾಕಿದರು…ಹಾಗೆ ಒಗೆಯುತ್ತಾ ಸಂಭ್ರಮಿಸುತ್ತಿರುವಾಗ ಹಾರುತ್ತಿದ್ದ ಪಕ್ಷಿಗಳ ಧ್ವನಿ ಜೋರಾಯಿತು..ನವಿಲುಗಳ ಕೂಗು ವಿಭಿನ್ನವಾಗಿ ಕೇಳಿತು… ಏನೋ ಜರಗುತಾ ಇದೆ ಎಂದು ಯೋಚಿಸುವಷ್ಟರಲ್ಲಿ ದೂರದಲ್ಲಿ ನಾಗಾಲೋಟದಿಂದ ಚಿರತೆಯೊಂದು ಬರುತ್ತಿರುವುದು ಕಂಡಿತು. ಎಲ್ಲರ ಧೈರ್ಯ ಉಡುಗಿ ಹೋಯಿತು..

ಕೂಡಲೆ ಅನು ಎತ್ತರದ ಬಂಡೆ ಏರಿ ಕುಳಿತುಕೊಳ್ಳೋಣ ಎಂದು ಸೂಚಿಸಿದಳು. ರಾಜು ತಂದಿದ್ದ ಹಗ್ಗದಿಂದ ಏಕಶಿಲಾ ಬಂಡೆಗೆ ಕೊಂಡಿ ಹಾಕಿ ಭದ್ರಪಡಿಸಿ ಒಬ್ಬೊಬ್ಬರನ್ನು ಹತ್ತಿಸಲು ಅನುವಾದನು. ಎಲ್ಲರೂ ನಿಧಾನವಾಗಿ ಹತ್ತಲಾರಂಭಿಸಿದರು. ಚಿರತೆ ಬರುವದನ್ನು ನೋಡುತ್ತಾ ‘ವಾಹ್ ವಾಹ್’ ಅನ್ನುತ್ತಿದ್ದ ಸಮ್ಮುಗೆ ಅನು ಕೆನ್ನೆಗೆ ಬಿಗಿದು’ ಮೊದಲು ಹತ್ತು ಎಂದು ಏರಿಸಿ ಮೇಲೆ ದಬ್ಬಿದಳು… ಮನುಷ್ಯನ ವಾಸನೆ ಗ್ರಹಿಸಿದ ದೂರದಲ್ಲಿ ಬರುತ್ತಿದ್ದ ಚಿರತೆ ತನ್ನ ಬೇಟೆಯ ದಿಕ್ಕನ್ನು ಬದಲಾಯಿಸಿತು. ಎಲ್ಲರೂ ದೊಡ್ಡ ಬಂಡೆಯ ಮೇಲೆ ಏರುವುದನ್ನು ನೋಡಿದ ಚಿರತೆ ನವಿಲು ಹಿಂದೆ ಓಡುವುದನ್ನು ಬಿಟ್ಟು ಮಕ್ಕಳು ಇರುವತ್ತ ಹೊರಳಿತು. ರಾಜು ಮೇಲೆ ಬರುವಷ್ಟರಲ್ಲಿ ಅದು ಬಂಡೆಯ ಕೆಳಗೆ ಬಂದಾಗಿತ್ತು. ಅನು ಪೂರ್ವಾಲೋಚಿಸಿ ಹಗ್ಗವನ್ನು ಜಗ್ಗಿಗೊಂಡಳು…

“ಹೇ ಬಿಡೆ ಪಾಪ ಚಿರತೆಯೂ ಮೇಲೆ ಬರಲಿ” ಎಂದು ಸಮ್ಮು ತೊದಲು ನುಡಿದ…
“ಲೇ…ಭಂಢ ಅದೇನು ಬೆಕ್ಕು ನಾಯಿಯಂದು ತಿಳಿದಿ ಏನು? ಆಟದ ಸಾಮಾನೆಂದು ತಿಳಿದೆ ಏನು? ಚಿರತೆ ಅದು ಕೈಗೆ ಸಿಕ್ಕರೆ ಮುಗಿತು..ಫಿನಿಶ್” ಎಂದ್ಲು
“ಅಲ್ಲ ಎಷ್ಟು ಚಂದ ಅದಲ ಅದು ಸಾಕೋಣ”
“ಲೇ ಸುಮ್ಮನಿರೊ ನಿನಗೆ ಭಯ ಆಗಲ್ವೇನೊ?”
“ಡಿಸ್ಕವರಿ ಚಾನಲ್ ನಲ್ಲಿ ಚಿರತೆಯೊಂದಿಗೆ ಮನುಷ್ಯರು ಆಟ ಆಡತಾರಲ್ಲ ಮತ್ತೆ..!”
“ಅವು ಸಾಕಿದವು, ಇದು ಕಾಡು ಪ್ರಾಣಿ” ಎಂದ ರಾಜು
“ಸಾಕಿದ ಚಿರತೆಗಳು ಕಾಡು ಚಿರತೆಗಳು ಬೇರೆ ಇರತಾವಾ?”
“ಸುಮ್ಮನಿರೋ ಮಾತಾಡಿದ್ರ ಅದು ಮೇಲೆ ಏರಿ ನಮ್ಮನ್ನ ತಿಂದು ಬಿಡುತ್ತವೆ” ಎಂದಳು.
ಅನು ತಿಂದುಬಿಡುತ್ತೆ ಅಂದಕೂಡಲೆ ಅಂಜಿದ ಸಮು “ಮುಂದೆ ಏನು ಮಾಡೋಣ?” ಎಂದ.
ಕೆಳಗಿದ್ದ ಚಿರತೆ ಗರ್ಜಿಸುತ್ತಾ ಬಾಯಿ ತೆಗೆದು ಮೇಲೆ ಬರಲು ಯತ್ನಿಸುತ್ತಿತು. ಇಬ್ಬರಿಗೂ ತಳಮಳ.. “ಅಪ್ಪನ ಮಾತು ಕೇಳಬೇಕಾಗಿತ್ತು. ಬೇಡ ಅಂದ್ರು ಹೇಳದೆ ಬಂದ್ವಿ. ಅನುಭವಿಸಬೇಕು” ಎಂದಳು ಅನು.
“ಏನೂ ಹೆದರಬೇಡ. ನಮಗೇನು ಆಗಲ್ಲ..ಅಪ್ಪ ಇಷ್ಟೊತ್ತಿಗೆ ಸುದ್ದಿ ಗೊತ್ತಾಗಿ ಪೊಲೀಸರಿಗೆ ಹೇಳಿರತಾರೆ. ಅವರು ಬರೋವರೆಗೆ ನಾವು ಅದನ್ನು ಮೇಲೆ ಬಾರದಂತೆ ಪ್ಲಾನ್ ಮಾಡಬೇಕು” ಎಂದ ರಾಜು.
“ಅಕ್ಕಾ ನನಗ ಹಸಿವಾಗತಿದೆ. ಸ್ನಾಕ್ಸ್ ತಂದಿವಲಾ ತಿನ್ನಲಾ?” ಎಂದ ಸಮು
“ಹೊಟ್ಟೆಬಾಕ..ಹಸಿವಾಗಿದ್ದು ಅದಕ್ಕೆ ನಾವು ಸಿಕ್ರೆ ಅಷ್ಟೆ, ಸ್ವಲ್ಪ ಹೊತ್ತು ತೆಪ್ಪಗೆ ಕೂಡೊ”
“ನೀವು ಏನೆ ಮಾಡಿ ನಾನು ತಿನ್ನುತಿನಿ” ಅಂತ ಪಾಕೇಟ್ ಒಡೆದ..
ಚಿರತೆ ಅತ್ತ ಇತ್ತ ಅಡ್ಡಾಡುತ್ತಾ ಬಲು ಕಡಿದಾಗಿದ್ದ ಆ ಬಂಡಿಯ ಒಂದು ಭಾಗದಿಂದ ನಿಧಾನವಾಗಿ ಮೇಲೆರಲು ಆರಂಭಿಸಿತು..ಅನು ರಾಜು ಭಯಭೀತರಾದರು. ಕೂಗ ಹತ್ತಿದರು.

ಇತ್ತ ಅರಣ್ಯ ಇಲಾಖೆಯವರು ಬಂದ ಮೇಲೆ ಗುಡ್ಡಕ್ಕೆ ಎಂಟ್ರಿ ಕೊಟ್ಟರು.. ಗುಡ್ಡದ ಮೇಲೆ ಬಂದಾಗ ಮಕ್ಕಳ ಕೂಗು ಕೇಳತೊಡಗಿತು… “ಸರ್ ಇದು ನಮ್ಮ ಮಕ್ಕಳ ಕೂಗು ಅವರು ಅಪಾಯದಲ್ಲಿದ್ದಾರೆ…ಅದು ಅವರದೆ ಧ್ವನಿ ಪ್ಲೀಜ್ ಹೆಲ್ಪ ಮಾಡಿ” ಎಂದು ಅಪ್ಪ ಅಮ್ಮ ವಿನಂತಿಸಿದರು. “ನಾವು ಬಂದಿರೋದು ಅದಕ್ಕಾಗಿಯೆ ಡೊಂಟ್ ವರಿ….ನಡಿರಿ ಅತ್ತ ಹೋಗೋಣ” ಎಂದು ಮುನ್ನುಗ್ಗಿದರು.

ದೂರದಲ್ಲಿ ಅಪ್ಪ ಪೊಲೀಸರೊಂದಿಗೆ ಬರುತ್ತಿರುವುದು ಕಂಡಿತು.. ಹತ್ತಿರದಲ್ಲಿರುವುದರಿಂದ ಅವರಿಗೂ ಮಕ್ಕಳು ಅಪಾಯದಲ್ಲಿರುವುದು ಕಂಡು ಜಾಗೃತರಾದರು. ಅವರು ಬರುವವರೆಗೂ ಮೇಲೆ ಹತ್ತದಂತೆ ಚಿರತೆಯ ಮೈಂಡ್ ಡೈವರಶನ್ ಮಾಡಬೇಕು ಎಂದು ತಮ್ಮ ಕೈಯಲ್ಲಿದ್ದ ಸೀಡ್ ಬಾಲ ಒಗೆದರು. ಅವು ಏನು ಮಾಡಲಿಲ್ಲ. ಬಂಡಿ ಮೇಲೆ ಬಿದ್ದಿದ್ದ ಕಲ್ಲು ಒಗೆದರೂ ಅದು ಕಣ್ಣಿಗೆ ಬಿದ್ದು ಕ್ರೋಧಗೊಂಡಿತು. ಮೇಲೇರಲು ಆರಂಭಿಸಿತು.. “ಹೆಲ್ಪ್ ಹೆಲ್ಪ್ ಕಾಪಾಡಿ..” ಎಂದು ಇನ್ನಷ್ಟು ಕೂಗಲಾರಂಭಿಸಿದರು..

ಕೈಲ್ಲಿದ್ದ ಕಲ್ಲುಗಳು ಮುಗಿದವು…ಅನು ರಾಜು ಮತ್ತಷ್ಟು ಬೆವೆತರು.. ಅಸಹಾಯಕರಾಗಿ ಜೋರಾಗಿ ಕೂಗತೊಡಗಿದರು.. ಸಮು ಮಾತ್ರ ಮೇಯುತ್ತಿದ್ದ… “ನಾನು ಟ್ರೈ ಮಾಡಲಾ?” ಎಂದು ಇಪ್ಪತ್ತು ಫೀಟ್ ಹತ್ತಿರದಲ್ಲಿ ಬಾಯಿ ತೆಗದುಕೊಂಡು ಬರುತ್ತಿದ್ದ ಚಿರತೆಗೆ ಬಾಯಿಗೆ ಗುರಿಯಿಟ್ಟು ಕುರುಕುರೆ ಒಗೆಯ ತೊಡಗಿದ. ಕೆಲವು ಗಾಳಿಗೆ ಹೋದವು ಇನ್ನೂ ಕೆಲವು ಅದರ ಬಾಯಲ್ಲಿ ಬಿದ್ದವು.

“ಅವನ್ನೇಕೆ ಒಗಿತಿಯೊ? ನಾವು ಭಯದಿಂದ ತತ್ತರಸಕತಿವಿ..ನೀನು ಎಂತಹವನೊ ?” ಎಂದು ಬೈದ ರಾಜು

“ಕುರುಕುರೆನಲ್ಲಿರುವ ಖಾರ ಉಪ್ಪು ಕಣ್ಣಿಗೆ ಬಿದ್ರೆ ಕಣ್ಣು ಕಾಣಲ್ಲ.. ಓಡಿಹೋಗುತ್ತೆ” ಎಂದಾಗ “ಓ…..ಗುಡ್ ಸಮು ಎಂತಹ ಐಡಿಯಾ ಕೊಟ್ಟೆಯೊ? ಆಪತ್ಕಾಲದಲ್ಲಿ…!” ಎಂದು ಅನು ರಾಜುವಿಗೆ ಪ್ಲಾನು ತಿಳಿಸಿದಳು. “ಹೌದು ಒಳ್ಳೆಯ ಐಡಿಯಾ?” ಎಂದು ಅವರು ತಮ್ಮ ಚೀಲಗಳಿದ್ದ ಕುರುಕುರೆ ಪಾಕೇಟ್ ಒಡೆದು ಒಗೆಯ ತೊಡಗಿದರು. ಬಾಯಲ್ಲಿ ಬಿದ್ದೋಡನೆ ಅದಕ್ಕೇನಾಯಿತೊ ಗೊತ್ತಿಲ್ಲ ಅದರ ವಿಕಾರ ಅರಚುವಿಕೆ ಕಡಿಮೆಯಾಯಿತು…ಬಾಯಿ ಚಪ್ಪರಿಸತೊಡಗಿತು…ಇದ್ದಕ್ಕಿಂದ್ದಂತೆ ಸೌಮ್ಯವಾಗಿ ಬಾಯಿ ತೆರಯತೊಡಗಿತು. “ಸಮು ಅದಕ್ಕೂ ರುಚಿ ಹತ್ತದಂಗೆ ಕಾಣ್ತಿದೆ..ನಡಿರಿ ಒಗೆಯಿರಿ” ಎಂದ. ಅದು ಮುಂದೆ ಬರದೆ ಸಾಕಿದ ನಾಯಿಯಂತೆ ಬೀಳುತ್ತಿದ್ದ ಕುರುಕುರೆ ತಿಂದು ಚಪ್ಪರಿಸತೊಡಗಿತು ಇನ್ನೂ ಬೇಕು ಎನ್ನುವ ಆಸೆಯಲಿ. ಪಾಕೇಟ್ ಮುಗಿದು ನಿಲ್ಲಿಸಿದಾಗ ಮುಂದೆ ಬರಲು ಆರಂಭಿಸಿತು.

ಚಾಕಲೇಟು ಒಗೆದ್ರು ಅದನ್ನು ಚಪ್ಪರಿಸಿತು…ಅದರ ರುಚಿಗೆ ಮಾರು ಹೋಗಿ ಅದು ಮುಂದೆ ಬರದೆ ತಿನ್ನ ತೊಡಗಿತು… ತಿನ್ನುವ ವಸ್ತುಗಳೆಲ್ಲ ಖಾಲಿಯಾಗಲು ಬಂದವು. ಚೀಪ್ಸ್ ಹಾಗೂ ಕುರುಕುರೆ ಒಂದೆ ಪಾಕೇಟ್ ಉಳಿದಿತ್ತು. ಆಗಲೆ ಕೆಳಗಡೆ ಅರಣ್ಯ ಇಲಾಖೆ ಸಿಬ್ಬಂದಿ ಬೋನುಗಳೊಂದಿಗೆ ಕಾದಿದ್ದರು… ರಾಜು ತಲೆ ಓಡಿಸಿ ಬಾಯಿಗೆ ಬೀಳದಂತೆ ದೂರ ಒಗೆಯ ತೊಡಗಿದ. ಜಂಕ್‌ಫುಡ್‌ಗಳಲ್ಲಿಯ ಟೇಸ್ಟಿಂಗ್ ಪೌಡರ್ ನ ರುಚಿಗೆ ಶರಣಾಗಿದ್ದ ಚಿರತೆ ಬೀಳುವ ಆಹಾರವನ್ನು ಕಷ್ಟಪಟ್ಟು ಕತ್ತು ಹಿಗ್ಗಿಸಿ ಹಿಡಿಯ ತೊಡಗಿತು.

ಕೆಳಗಡೆ ಆಗಲೆ ಎಲ್ಲರೂ ಬಂದಾಗಿತ್ತು. ಕೆಳಗಡೆಯಿದ್ದ ಪೊಲೀಸರು, ಅಪ್ಪ ನೀಡುತ್ತಿದ್ದ ಮೌಖಿಕ ಸೂಚನೆ ನೀಡತೊಡಗಿದ್ದರು. ಅಂತಿಮ ಸಿಗ್ನಲ್ ಬಂದೊಡನೆ ಇಡೀ ಪಾಕೇಟ್ ಒಡೆದು ಕೂಡಿಸಿ ಪುಡಿಪುಡಿ ಮಾಡಿ ರಾಜು ಎಲ್ಲಾ ಉಗ್ಗಿದ. ಅದೆ ಸಮಯಕ್ಕೆ ಗಾಳಿಯು ಬಿಟ್ಟಿದ್ದರಿಂದ ಹಾರಿ ತಿನ್ನುವ ಪ್ರಯತ್ನದಲ್ಲಿದ್ದ ಚಿರತೆಯ ಕಾಲುಗಳು ಸಡಿಲಗೊಂಡವು..ಆಹಾರದತ್ತ ಮುಖಮಾಡಿದ್ದಕ್ಕಾಗಿ ಚೀಪ್ಸನ ಖಾರ ಕಣ್ಣಲ್ಲಿ ಬಿದ್ದಿತ್ತು. ಕಾಲುಗಳು ಜೋಲಿ ತಪ್ಪಿದವು..ಅದು ನೇರವಾಗಿ ಕೆಳಗಡೆ ಅರಣ್ಯ ಇಲಾಖೆಯವರು ಹಾಕಿದ್ದ ಪಂಜರದಲ್ಲಿ ಬಿದ್ದಿತು..!

ಕೂಡಲೆ ಅರಣ್ಯ ಇಲಾಖಾ ಸಿಬ್ಬಂದಿ ಅದಕ್ಕೆ ಅರವಳಿಕೆ ಇಂಜೆಕ್ಷನ್ ನೀಡಿ ಮಬ್ಬು ಬರುವಂತೆ ಮಾಡಿದರು. ಮೇಲಿದ್ದ ಮೂವರು ನಡೆದಿದ್ದು ಕನಸೆ ಎನ್ನುವ ಭ್ರಮೆಯಲ್ಲಿ ನಿಂತಿದ್ದರು..ಭಯದಲ್ಲಿ ಹತ್ತಿದ್ದರಷ್ಟೆ ಅರಣ್ಯ ಇಲಾಖೆಯವರು ಕೆಳಗೆ ಇಳಿಸಿದಾಗಲೆ ಅದರ ಎತ್ತರ…. ನೇರ ಕಂಡದ್ದು. ಮಕ್ಕಳ ಕಾರ್ಯವನ್ನು ಶ್ಲಾಘಿಸಿದರು.. ನೂರಾರು ಕುರಿಗಳನ್ನು ಹತ್ತಾರು ಮನುಷ್ಯರನ್ನು ಬಲಿತೆಗೆದುಕೊಂಡಿದ್ದ ಚಿರತೆಯನ್ನು ಸರಳವಾಗಿ ಹಿಡಿಯಲು ಸಹಾಯ ಮಾಡಿದ ಮಕ್ಕಳನ್ನು ಹೊಗಳಿದ್ದೆ ಹೊಗಳಿದ್ದು.

ಸಮು ಮಾತ್ರ ‘ನನ್ನ ಕುರುಕುರಿ, ಚೀಪ್ಸು ನನ್ನ ಚಾಕಲೇಟು’ ಎಲ್ಲಾ ಹಾಳಾದವು ಎಂದು ಅಳತೊಡಗಿದ. ನಿನ್ನ “ಕುರುಕುರೆಯಿಂದಲೆ ಸೇಫ್ ಆಗಿದ್ದು ಮನಿಗೆ ಹೋದಮೇಲೆ ಬಹಳ ಕೊಡಸ್ತಿನಿ ನಡಿ” ಎಂದಳು ಅನು. “ಹಾಂಗಾದ್ರ ಮತ್ತೆ ಹೋಗೋಣಾ ಹೀಗೆ ಚಿರತೆ ಹಿಡಿಯೋಕೆ?” ಅನ್ನಬೇಕೆ ಸಮು!

‍ಲೇಖಕರು Admin

February 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: