ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತೋಸ್ಮಿ ಹೊಸ ಕವಿತೆ ‘ಅನಾಹತ’

 ಗೀತೋಸ್ಮಿ

—-

ದೇವರ ಕೋಣೆಯ

ನಾಗೊಂದಿಗೆಯ ಮೇಲೆ

ಪುಟ್ಟ ಪೆಟ್ಟಿಗೆ; ಕಿರುಚಿಲಕ

ತೆರೆದು ನೋಡಿದರೆ..

ಒಳಗೆ ಮಂದಾಸನದಲ್ಲಿ

ಹಳೆಯ ರೇಷಿಮೆ ಖಣದಲಿ

ಸುತ್ತಿ, ಮೆತ್ತನೆ ಅಮ್ಮನ ಅಂಗೈಲಿ

ಆಗಾಗ ಪವಡಿಸಿದ ಗರ್ವ-

ದಲಿ ತುಸು ಭಾಗಿ; ಜತನದಲಿ

ಕಾಪಿಟ್ಟ

ಹಸೆ-ಹಾಡುಗಳ ಪಟ್ಟಿ!

ಶಾರದೆಯ ಹೆರಳಲ್ಲಿ ನವಿರಾಗಿ

ಸಿಕ್ಕಿಸಿದ ದಂಡೆ-

ಯೊಳಗಿನ ದುಂಡುಮಲ್ಲಿಗೆಯಂತೆ

ಮುದ್ದಾಗಿ ಕೋದ ಹಾಡುಗಳು!

ಮುಟ್ಟುವದೇ ತಡ;

ಶೃತಿಗೊಂಡ ಕಿನ್ನರಿಯ

ಮಾಯಾದಂಡಿಗೆ-

ನುಡಿಸುವಂತೆ-

ಅದೃಶ್ಯ ಸ್ವರಪಟ್ಟಿಕೆ..

ಒಂದೊಂದು ಹಾಡಿಗೂ

ಅದರದೇ ರಾಗ-ಧಾಟಿ,

ತಿಟ್ಟು-ಮಟ್ಟು ಪಲುಕು

“ಹೀಗೆ ಬರಲಿ” ಎನುತ ಎಳೆ-

ಸ್ವರದ ಕೈಹಿಡಿದು

ನಡೆಸಿ, ಕಲಿಸಿದ ಉದಯ-

ರಾಗದ ಕೊರಳು

ಮೆಲ್ಲುಲಿಯುವ ಮೆಲುಕು..

ನೀಲಿ, ಕೆಂಪು ಹಸಿರು ಶಾಯಿಯ,

ಅಲ್ಲಲ್ಲಿ ಸೀಸದ ಕಡ್ಡಿಯೂ ಪದ-

ವೂರಿ ಗೆರೆಗಳೋಳಿಯಲಿ

ಬಿತ್ತ ನುಡಿ ಕುಡಿ-

ಯೊಗೆದು ಕಣ್ಬಿಟ್ಟು, ತೆನೆಗಟ್ಟಿ

ತಲೆದೂಗುವ ಸಾಲುಗಳ

ಶಾಲೀನ ಸಹಜೀವನ, ಒಲುಮೆ

ಎಸೆಯುವ ಸಹನೆ, ಸಮದರ್ಶನ

ದ್ರೌಪದಿ-ಅರ್ಜುನ, ಶ್ರೀಕೃಷ್ಣ-ರುಕ್ಮಿಣಿ,

ರಾಮ-ಸೀತೆ, ಅಗಸ್ತ್ಯ-ಲೋಪಾಮುದ್ರೆಯರೊ-

ಅವತರಿಸುವರು-

ಸೋಬಾನೆ- ಸೇಸೆಯಲಿ

ಹಸೆಮಣೆ ಏರಿ ಕಾಯುತ್ತ

ಮುಹೂರ್ತಕ್ಕೆ ನಾಂದಿ

ಇರಿಸುವ ಅವಳ

ಒಂದು ಗುನುಗಿನ ಸಂಜ್ಞೆಗೆ!

ಮೈಗೆ ಬೆಣ್ಣೆ ಮೆತ್ತಿಕೊಂಡ ಕೃಷ್ಣ,

ಕೈಗೆತ್ತಿಕೊಂಡ ಶಿವಧನುವ ರಾಮ,

ಪರಿಣಯಕೆ ನಿಮೀಲಿತ-ನೇತ್ರೆ ರಾಜಕುವರಿ,

ಬಾಸಿಗದ ಮಣಿ-ಕುಚ್ಚುಗಳ ಫಳಫಳ

ದಿಬ್ಬಣಿಗರ ಭರಪೂರ ಕೋಲಾಹಲ..

ಸರಿಯುವಂತಃಪಟಕೆ ಎರಡೂ ಕಡೆ ಕಣ್ಣು-

ಮಿಲಾಯಿಸಿದ ಕ್ಷಣ-

ಮೊರೆವ ನಾಗಸ್ವರ!

ಸುರಿವ ಅರಳು ಅಕ್ಷತ ಮುತ್ತುಗಳ

ಕಾಯುವುದು-

ಜೀವಮಾನ;

ನಿರಿಗೆಗಟ್ಟಿದ ಹರಕೆಗಳ

ಅನಿಮಿಷ ಸಂಗೋಪನ..

ತೊಟ್ಟಿಲು ತೂಗುವ ಮೊದಲಿಂದ

ತೊಟ್ಟಿಲಲ್ಲಿದ್ದವರು- ಮತ್ತೆ

ತೊಟ್ಟಿಲು ಕಟ್ಟುವವರೆಗಿನ ನಿಯತ

ಬದುಕಿನ ಹಾಡು-ಪಾಡು..

    …….

ಮನೆಯೆಲ್ಲ ಮಾರ್ದನಿಸುವ ಪದಗಳು..

ಹೆಜ್ಜೆಯ ಜಾಡಿಗೆ ಸಿಲುಕದವು..

ಪಟ್ಟಿ ಚೌಕಟ್ಟನು ದಾಟಿ

ಮಾಡು-ಗೂಡುಗಳಾಚೆ

ಸ್ವರದ ಹಂಗನು ಮೀರಿ

ವಿಹಂಗಮ-

ತುಡಿತಕ್ಕೆ ತೆರಕೊಂಡ ಅನಾಹತ..

ಸ್ವರ-ಪ್ರಸ್ತಾರಕೆ ನಿಲುಕದ ವಿ-

ರಾಗ-ಸಮ್ಮೋಹಿತ!

      —

ಭಾರದ ರೆಪ್ಪೆಗಳೊಳಗೆ ಅವಿತ

ಹನಿಯೊಡೆದ ಕಣಸಾಗಿ,

ಮೈದುಂಬಿ ದನಿಯೊಡೆವ

ಶ್ರಾವಣದ ಘನಮೇಘದುರವಣೆಯ

ಆಲಾಪವಾಗಿ,

ನಾಭಿಯಿಂದೊಗೆವ ರಸ-

ವಿವಶ-ವಿಸ್ತರವಾಗಿ..

ನೆನೆದ ಎದೆಯೊಳಗೆ..

ಮುಸಲಧಾರೆ!

ಒಂದೇ ಒಂದು ಸಲ!..

 .. .. .. .. ..

ಅಮ್ಮ!..

ಮೂಡಿ ಬಾರೆ!!

    

‍ಲೇಖಕರು avadhi

7 October, 2023

3 Comments

  1. prathibha nandakumar

    ಕವನ ಚೆನ್ನಾಗಿದೆ

    • Geetha Dodmane

      ಧನ್ಯವಾದಗಳು

    • Geeth H.

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading