ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’

ಗೀತಾ ಎನ್ ಸ್ವಾಮಿ

**

ಸೋಮ ಚುಕ್ಕಿಗಳನ್ನು ಒಡಲ

ಒಳಮನೆಗೆ ತುಂಬಿಕೊಂಡ

ಹೊಸ ಬಾವಿಯ ಅರ್ಗಿಗೆ ಹರಡಿಕೊಂಡ

ಸುಣ್ಣದ ಕಲ್ಲಿನ ಕಾಲುವೆಯ ತುಂಬಾ

ಹರಿಯುವ ಸಲಿಲದ ಆತ್ಮಕ್ಕೆ

ಕರ್ಬಿಪಸ್ಟಿ ಗಿಡದ ನನೆಬಸಿರೊಳಗೆ

ಜೀವವಾಗಿ ಅರಳುವಾಸೆ

ಅರಳಿದ ಅರಿಶಿಣದ ತುಂಬು

ಹೂಗಳ ದಿಬ್ಬಣ ಸಮೀರವನ್ನೇ

ಧರಿಸಿ ತೂಗುವಾಗ

ಒಲುಮೆಗೊಂಡು ಬಂದದ್ದು

ಸಂಬಾರ್ಗಾಗೆ

ಹಗುರ ಕೊಂಬೆಗಳು

ಈ ಹಕ್ಕಿಗೆ ನರಬಲ

ಗದ್ದೆ ಬಯಲಿನಗುಂಟ

ಅರ್ವಾಳೆ ಹಿಡಿದು

ನಡೆವ ಹೆಜ್ಜೆಗಳ

ನೆತ್ತಿಗೆ ಮೆತ್ತಿಕೊಂಡ

ಬಾಯಲ್ಲಿ ಅಲಲಾ ಹಿಡ್ಕಳ್ರುಲ

ಕೆಂಜ್ಬಾಲುದ್ಕಾಗೆ ಕುಂತೈತೆ; ಸುಡನ

ಈ ಸಂಬಾರ್ದಕ್ಕಿ ಬಾಡು

ಬಿಗ್ಯಾಗಿಡುದ್ರೆ ಒಂದೇ ಇಡಿ

ಆದ್ರು ಮುಂಬೈ ಪಟ್ನುದಗೆ ಬಲ್ರೇಟಂತೆ

ದೊಡ್ಕಾಯ್ಲ್ಗೆ ಮದ್ದು ಇದ್ರುದೇ ಬಾಡು

ಒಳಗಣ್ಣಿನ ಕಾವಿಗೆ ಹಕ್ಕಿ ಜೀವ ಬೆಂದು

ನವಿರು ಹಕ್ಕಿಯ ಲೀಲೆಗಳಿಲ್ಲದ

ಹೂಗಿಡ ಮಂಕಾಗಿ ಪರ್ಣಗಳು

ಸೋತು ಮಲಗಿವೆ

ತನ್ನಷ್ಟಕ್ಕೆ ಅರಳಿ ತೂಗುವ

ಹೂವು ಬೇರಿಗಿಳಿದು

ತೆನೆಗಟ್ಟುವ ಪೈರಿಗೆ

ಹಸಿರುಕ್ಕಿಸುವ ನೀರು ಮಣ್ಣೆಂಟೆಗಳ

ಒಣಗಂಟಲಿಗೆ ಹದಕಟ್ಟುವ ಕಸುವು

ಕೇಜಿಗೆಯ ಗಂಧಕ್ಕೆ ಸುತ್ತಿ

ಬೀಗುವ ಅಹಿ ಜಮ್ನೇರ್ಳೆ

ಗಿಡದ ತೊಗಟೆಯ ಕೊರಕಲಲ್ಲಿ

ಜೊಂಪು ಹತ್ತಿದ ತಾಯಿಹಕ್ಕಿಗೆ

ಸರ್ಪದ ಸಂಚಾರ ಕೇಳಿ

ಹಾಲ್ಗಾಳು ಗುಟುಕುವ

ಎಳೆಯರ ತೆಕ್ಕೆಗೆ

ತುಂಬಿ ಮೌನಕ್ಕೆ

ಶರಣಾಗುವ ಹೊತ್ತಿಗೆ

ಕುಕ್ಲುಗೆಮ್ಮಿಡಿದ ಮಕ್ಕಳ

ಗಂಟಲು ಬಿಡಿಸುವ ನೆಪ

ಹಿಡಿದು ಬರುವ ಮನುಷ್ಯರಿಗೆ

ಆಹುತಿಯಾಗುವ ಕನಸೇ ಬೀಳುವುದಿಲ್ಲ.

ಸಣ್ಣಗೆ ಗೂಡ್ರು, ಹೊಸಕೂಪದ

ಕಡೆಯಿಂದಲೇ ಹುಟ್ಟಿದ

ಪ್ರೇಮರಾಗದ ಗುಂಗು

ಕೇಜಿಗೆಯ ಬನದೊಳಗೆ

ಕೈಬೆಸೆದು ಹುಣ್ಣಾದದ್ದು

ಹಿಂಗಿದ ನೀರ್ಗೆಸರಲ್ಲಿ

ಕರಗೇ ಹೋದಾಗ

ಅಮಾವಾಸ್ಯೆ

ಕರ್ಬಿಪಸ್ಟಿ ಹೂಗಳ

ತೊಟ್ಟಿನಲ್ಲಿದ್ದ

ಸೀಪ್ರದ ತೇವದಲ್ಲಿ

ಸೀಮೆಗಳ ಕಳೇಬರ

ವಾರ ಉಂಜ್ನೆ

ಹೆಸರಲ್ಲಿ ಪೂಜೆಗೋಗುವ

ಹೂಗಿಡ ಹುಣ್ಣಿಮೆಯಲ್ಲಿ

ನೀರಿಂಗಿದ ಹಾವಸೆಯ

ಎಕ್ಳಿಕೆಗೆ ಜೊತೆಯಾದಾಗ

ಹೊಸಬಾವಿ ಸತ್ತುಹೋಯಿತು

ಭತ್ತದ ಗಬ್ಬ ಒಣಗಿ,

ಹಲಸು ಹಲಗೆಯಾಗಿ

ಹೂಗಳು ಹೊರನಡೆದು

ದೇವರನ್ನು ಬೈಯ್ಯುತ್ತಿವೆ

ಇಲ್ಲಿ ಈಗ ಎಲ್ಲಕ್ಕೂ

ಮಾತು ಸತ್ತು

ಗುಡ್ಡೆಗಳಿಗೆ ಎಡೆ ಬೀಳುವುದಷ್ಟೇ ವಾಡಿಕೆ

‍ಲೇಖಕರು Admin MM

19 March, 2024

2 Comments

  1. ನೂರುಲ್ಲಾ ತ್ಯಾಮಗೊಂಡ್ಲು

    ಕರ್ಬಿಪಸ್ಟಿ ಹೂ…. ತುಂಬ ಚೆನ್ನಾಗಿದೆ. ಹೊಸ ಪದಗಳ ಬಳಕೆ, ನೆಲದ ಭಾಷಿಕ ಶೈಲಿ ಚೆನ್ನಾಗಿದೆ. ಅಭಿನಂದನೆ .

  2. ಗೀತಾ ಎನ್ ಸ್ವಾಮಿ

    ಧನ್ಯವಾದಗಳು ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading