ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಎನ್ ಸ್ವಾಮಿ ಹೊಸ ಕವಿತೆ- ಆತ್ಮ ಚೆಲುವು

ಗೀತಾ ಎನ್ ಸ್ವಾಮಿ

ಸಣ್ಣಗೆ ಸುಯ್ಲಿಡುತ್ತಿರುವ ಸಮೀರ
ಅರಮನೆಯ ಮೋಜನ್ನು ಸವರಿಕೊಂಡು ಹೋಗುವಾಗ
ಸಿದ್ದಾರ್ಥನಿನ್ನು ಮಲಗಿದ್ದ
ಇಲ್ಲಿ ಎಲ್ಲವೂ ಸುಖವೇ

ಅದ್ಯಾವ ದಿಕ್ಕಿನಲ್ಲಿ ಹುಟ್ಟಿತ್ತೋ?
ಅರಮನೆಯ ಕಡೆಗೆ ಬಂದ ಗಾಳಿ ! ಬೆಳಕಿನ ಶಾಂತ ಪಿಸುಮಾತುಗಳನ್ನು ಸಿದ್ದಾರ್ಥನಿಗೆ ಹೊದಿಸಿತ್ತು

ಮೋಹದೊಳಗಿನ ಅಮಲು
ತಬ್ಬುವ ಮೊದಲೇ ಎಚ್ಚರಾದವನು ವಿರಾಗಿಯಾಗಿ
ರಾಹುಲನಿಗೆ ಮುತ್ತಿಡುವಾಗ
ಯಶೋಧರೆಯ ಪಾದಕೆರಗಿದ್ದ

ಮುಗಿಲಿಗಡರಿದ ವಾದ್ಯಗಳು
ಅರಮನೆಯಲ್ಲಿ ಬಿರುಕಾದದ್ದು
ಕಣ್ಣಲ್ಲಿ ಬಿಂಬವಾದ ಗಳಿಗೆಯಲ್ಲಿ
ನಸುಕು ನಡೆಯದೇ ನಿಂತಿತ್ತು
ಆಗಲೇ ನ್ಯಾಯದ ಬೆಳಗುಟ್ಟಿದ್ದು

ಇದೇ ಬೆಳಗಿನ ಹಾದಿಯಲ್ಲಿ
ಸುಖಗಳೆಲ್ಲ ಉರಿದು
ಬೋಧಿಯೊಳಗೆ ಲೀನವಾದ
ಚರಾಚರಗಳೆಲ್ಲ ಭೇದವಿಲ್ಲದ
ಕಾರುಣ್ಯದಲಿ ಅರಳಿದವು

ನ್ಯಾಯವೆಂಬ ನೀತಿಯು
ಕೈ ಹಿಡಿದಾಗ ಮಗ್ಗುಲಲ್ಲಿ
ನಂಜು ಹತ್ಯೆಯಾಗಿ ಕುಂತದ್ದು
ತಥಾಗತನೊಲವಲ್ಲಿ ಹಗೆಯಿಲ್ಲದ ಮೌನವಾಯಿತು

ಎಲ್ಲಕ್ಕೂ ಬೆಳಕನ್ನೇ ಸವರಿ
ಹೊರಟೇ ಹೋದ
ಈಗ ಇಲ್ಲಿ ಅವನಿಲ್ಲದೆ ಕ್ಷಾಮವಿಡಿದಿದೆ……
ಧರ್ಮ ಬಣ್ಣದಲ್ಲಿ ಬದುಕು ಮುಳುಗಿ ಮರಣಿಸಿದ ಹೊತ್ತಿಗೆ
ಮತ್ತವನೇ ಬರಲಿ ಪೊರೆಯಲು.

  

‍ಲೇಖಕರು avadhi

29 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading