ಗಿರಿಜಾ ಶಾಸ್ತ್ರಿ ಅಂಕಣ: ಮುಂಬಯಿಯಲ್ಲಿ ನಾನು ಬೆಳೆದೆನೋ.. ನನ್ನ ಮೇಲೆ ಮುಂಬಯಿ ಬೆಳೆಯಿತೋ!

ದಿಲೀಪ್ ಚಿತ್ರೆ ಮತ್ತು ಅವರ ಕವಿತೆ  “ಕಾಳಾ ಪ್ರಾಜಕ್ತಾ” (ಕಪ್ಪು ಪಾರಿಜಾತ)

ಗಿರಿಜಾ ಶಾಸ್ತ್ರಿ 

ಕಪ್ಪು ಪಾರಿಜಾತ

ಮದೋನ್ಮತ್ತ ಪಾರಿಜಾತ

ಸುಗಂಧ ಭರಿತ

ಕಣ್ಣು

ಕಿವಿ

ಕೈಗಳಿದ್ದರೆ

ಈ ಮೂಗಿನ ಹೊಳ್ಳೆಗಳಿಗೆ?

 

ಶ್ವಾಸದೊಳಗೆ ಹೊಕ್ಕೇರಿ

ಗೋಲ ಗೋಲ

ಖಗೋಲ ವಲಯ

ರಂಗೋಲಿಯ ಚಿತ್ತಾರ

ದೊಳಗೆ ವಿಲೀನ

ಆನಂದಅಂಧಕಾರ

 

ಕಡು ಕಪ್ಪು ಪಾರಿಜಾತ

ರಕ್ತ ರಂಜಿತ

ರಾಗದೊಳಗೆಲ್ಲಾ

ಇಂದ್ರಿಯಗಳೆಲ್ಲಾ

ಆವಿಯಾಗಿ ಹೋಗುತ

ಉಸಿರು ಗಾಳಿಯಲಿ ಹಗುರಾಗಿ ತೇಲುತ

 

ತೆರೆದ ಹೊಳ್ಳೆ ಹೆಬ್ಬಾಗಿಲಲಿ

ಕಡೆಗೆ ಉಳಿದದ್ದು ಇಷ್ಟೆ

ಕಗ್ಗತ್ತಲ ಪಾರಿಜಾತ

ನಾನು_ನೀನು

ಮತ್ತು

ಆರಕ್ತ ಅನಾದಿ ಅಪರಂಪಾರ

 -ದಿಲೀಪ್ ಚಿತ್ರೆ

“ಕಾಳಾ ಪ್ರಾಜಕ್ತ” -ಮರಾಠಿ,

 ಕನ್ನಡಕ್ಕೆ -ಗಿರಿಜಾಶಾಸ್ತ್ರಿ

 ಜಗತ್ತಿನ ಜೀವ ಸೃಷ್ಟಿಯ ಪೂರ್ವದಲ್ಲಿ ಅಂದರೆ ಅನಾದಿಯಲ್ಲಿ ಒಂದು ಅಖಂಡವಾದ ಏಕತತ್ವ  ಜೀವ ಸೃಜಿಸಲಿಕ್ಕಾಗಿಯೇ ತನ್ನನ್ನೇ ಒಡೆದುಕೊಂಡು ಎರಡಾಯಿತೆಂದೂ, ಅದುವೇ ಸೃಷ್ಟಿಶೀಲ ಗತಿಗೆ ಕಾರಣವಾದ ಸ್ತ್ರೀ ಮತ್ತು ಪುರುಷ ಎಂಬ ಗ್ರಹಿಕೆ ನಮ್ಮಲ್ಲಿದೆ. ಶಿವನ ಏಕಲಿಂಗ ಸ್ವರೂಪದ ಕಲ್ಪನೆ ಹಾಗೂ ಅರ್ಧನಾರೀಶ್ವರ ಕಲ್ಪನೆಯ ಹಿಂದೆ ಕೆಲಸಮಾಡಿರುವುದೂ ಇದೇ ತತ್ವವಿರಬಹುದು. ಹೀಗೆ ಹೋಳಾದ ಈ ಖಂಡಗಳಿಗೆ ಸದಾ ತಮ್ಮ ನಿಜದ ನೆಲೆಗೆ ತೆರಳಬೇಕೆನ್ನುವ ತವಕ ಹಾಗೂ ತಾವು ಕಳೆದುಕೊಂಡ ಸ್ವರ್ಗದ ಬಗ್ಗೆ ಹಳಹಳಿಕೆ. (paradise Lost), ಮತ್ತು ಅದನ್ನು ಮತ್ತೆ ಪಡೆಯಬೇಕೆನ್ನುವ ಬಯಕೆ. ಮಾನವ ಬದುಕು ಚಲಿಸುವುದೆಲ್ಲಾ ಇದರ ಸುತ್ತಲೇ. ಅಖಂಡವಾಗುವ ಎಡಬಿಡದ ಕನಸು. ಸಿ.ಎನ್ ರಾಮಚಂದ್ರ ಅವರುಪರಿಭ್ರಮಣೆ ಮತ್ತು ಶೋಧಇವೆರೆಡೂ ಮಾನವ ಸಂಸ್ಕೃತಿಯ ಅನಾದಿಕಾಲದ ಹುಡುಕಾಟ ಎನ್ನುತ್ತಾರೆಈ ಹುಡುಕಾಟವೆನ್ನುವುದೇ ಮಾನವ ತನ್ನ ಪರಿಪೂರ್ಣತೆಗಾಗಿ ನಡೆಸುವ ಹೋರಾಟ. ಮನುಷ್ಯನ ಬದುಕು ಇಂತಹ ಪೂರ್ಣತೆಯ ಹಂಬಲ ಹಾಗೂ ಅದು ಅಪರಿಪೂರ್ಣವಾಗಿಯೇ ಉಳಿಯುವ ವಾಸ್ತವ ಇವೆರೆಡರ ವಿರುದ್ಧ ಸೆಳತಕ್ಕೆ ಸಿಕ್ಕಿ ನುಗ್ಗಾಗಿದೆಮನುಷ್ಯನ ಅಖಂಡವಾಗುವ ಕನಸು ನನಸಾಗಬೇಕೆಂದರೆ ಒಡೆದ ಹೋಳುಗಳು ಕೂಡುವುದರಿಂದ ಮಾತ್ರ. ಆದುದರಿಂದಲೇ ಗಂಡಿಗೆ ಹೆಣ್ಣಿನ, ಹೆಣ್ಣಿಗೆ ಗಂಡಿನ ಯೋಗದ ಹಂಬಲ. ದಣಿವಾಯಿತೆಂದರೆಪರದ ಹಂಬಲ. ಈ ಹಂಬಲದ ಮೂಲಕವೇ ಪ್ರಕೃತಿ ತನ್ನ ಸೃಷ್ಟಿಶೀಲ ಉಪಾಯಗಳನ್ನು ನಿರಂತರ ಸೃಜಿಸುತ್ತಲೇ ಇರುತ್ತದೆ.

ಇದನ್ನೆಲ್ಲಾ ಇಲ್ಲಿ ಹೇಳುವ ಕಾರಣವಿಷ್ಟೆ, ಮರಾಠಿಯ ಪ್ರಸಿದ್ಧ ಕವಿ ದಲೀಪ್ ಚಿತ್ರೆ ಯವರು ಮೇಲೆ ಹೇಳಿದ ಅನಾದಿಯಾದ ಹುಡುಕಾಟವನ್ನು ತಮ್ಮಕಾಳಾ ಪ್ರಾಜಕ್ತ” (ಕಪ್ಪು ಪಾರಿಜಾತ) ಎಂಬ ಕವಿತೆಯಲ್ಲಿ ನಡೆಸುತ್ತಾರೆ. ಸಂಭೋಗ ಮತ್ತು ಸಮಾಧಿಗಳೆರಡರ ಅನುಭವವನ್ನು ಏಕ ಕಾಲಕ್ಕೆ ಹಿಡಿದಿಡುವುದರ ಮೂಲಕ ಪೂರ್ಣತೆಗಾಗಿ ಮನುಷ್ಯ ತೀವ್ರವಾಗಿ ಹಂಬಲಿಸುವ ಪರಿಯನ್ನು ಒಂದು ಐಂದ್ರಿಯ ಅನುಭವದಮೂಲಕ ಗಾಢವಾಗಿ ಕಟ್ಟಿಕೊಡುತ್ತಾರೆ.

ಇದುಕಪ್ಪು ಪಾರಿಜಾತಎಂದಾಗ ದೊಡ್ಡ ಪ್ರಶ್ನೆ ನಮ್ಮ ಮುಂದೆ ಏಳುತ್ತದೆ. ನಮಗೆ ಗೊತ್ತಿರುವ ಪಾರಿಜಾತವೆಂದರೆಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿಅರಳುವ ಪಾರಿಜಾತ. ಅದು ಅಚ್ಚ ಬಿಳಿ ಇದರಲ್ಲಿ ಸಂಶಯವೇ ಇಲ್ಲಆದರೆ ಇದು ಕಪ್ಪು ಪಾರಿಜಾತ. ಬಿಳಿ ಎಲ್ಲ ಬಣ್ಣಗಳನ್ನು ವಿಕಿರಣಗೊಳಿಸಿದರೆ, ಪ್ರತಿಫಲನ ಗೊಳಿಸಿದರೆ, ಕಪ್ಪು ಎಲ್ಲ ಬಣ್ಣಗಳನ್ನೂ ತನ್ನೊಡಲಲ್ಲಿ ಧರಿಸುತ್ತದೆ. ಕೇಂದ್ರೀಕರಿಸಿಕೊಳ್ಳುತ್ತದೆ. ಒಂದರದು ನಿರಾಕರಣೆಯಾದರೆ, ಇನ್ನೊಂದರದು ಸ್ವೀಕಾರ. ವಾಸನೆಗಳ ಅನುಭವವೆಂಬುದು ಧಾರಣ ಶಕ್ತಿಯ ಮೇಲೆ ಅವಲಂಬಿತವಾಗಿದೆಯೇ ಹೊರತು, ನಿರಾಕರಣೆಯಿಂದಲ್ಲ. ಪಾರಿಜಾತಕ್ಕೆ ಕಡು ವಾಸನೆಯೇ ಮೂಲಧಾತು. ಆ ವಾಸನೆ ಕವಿಯೊಳಗೆ ತಲ್ಲಣ ಆತಂಕ, ಆಕರ್ಷಣೆ, ಭಯ ಎಲ್ಲವನ್ನೂ ಉಂಟು ಮಾಡಿದೆ. ಪಾರಿಜಾತ ಇಲ್ಲಿ ಯೋನಿಯ ಪ್ರತೀಕವಾದರೆ ಅದಕ್ಕಾಗಿ ಹಂಬಲಿಸುವ ನಿರೂಪಕ ಪುರುಷ ಪ್ರತೀಕ. ಒಂದು ಕಡೆ ಅದರ ಆಕರ್ಷಣೆಯಿಂದ ಅವನಿಗೆ ತಪ್ಪಿಸಿಕೊಳ್ಳಲು ಅಸಾಧ್ಯವಾದರೆ, ಇನ್ನೊಂದುಕಡೆ ಅದು ತನ್ನನ್ನು ಒಂದು ಗೂಟಕ್ಕೆ ಕಟ್ಟಿಹಾಕಿ ಸ್ಥಾವರಗೊಳಿಸಿಬಿಡಬಹುದೆಂಬ ಭಯವನ್ನು ನಿವಾರಿಸಿಕೊಳ್ಳಲೂ ಸಾಧ್ಯವಿಲ್ಲವಾಗಿದೆ.

ಈ ಯೋಗವೆಂಬುದು ಕೂಡ ಕ್ಷಣಿಕವಾದುದು ಆದುದರಿಂದಲೇ ಅದನ್ನು ಮತ್ತೆ ಮತ್ತೆ ಹೊಂದಬೇಕೆಂಬ ಬಯಕೆ ಅವನಲ್ಲಿ ಸದಾ ಜಾಗೃತಾವಸ್ಥೆಯಲ್ಲಿದೆ. ಪಾರಿಜಾತದ ಕಡು ವಾಸನೆ ಇಡೀ ಪದ್ಯದ ತುಂಬ ಹರಡಿದೆ. ಅದು ಪಂಚೇಂದ್ರಿಯಗಳ ಮೂಲಕ ಹೊಕ್ಕು ಸಹಸ್ರಾರಕ್ಕೆ ತಲಪುವ ಪ್ರಕ್ರಿಯೆಯ ಗಾಢ ಅನುಭವವನ್ನು ಈ ಕವಿತೆ ವ್ಯಕ್ತ ಪಡಿಸುತ್ತದೆ. ‘ಇಂದ್ರಿಯಗಳೆಲ್ಲಾ ಆವಿಯಾಗಿ ಹೋಗಿ ಉಸಿರು ಗಾಳಿಯಲಿ ಹಗುರಾಗಿ ತೇಲುವಅಭಿವ್ಯಕ್ತಿಸಮಾಧಿ ಮತ್ತು ಸಂಭೋಗದ ಅನುಭವವನ್ನು ಏಕಕಾಲಕ್ಕೆ ಹಿಡಿಯಲು ಪ್ರಯತ್ನಿಸುತ್ತದೆ. ಮೂಲ ಮರಾಠಿ ಕವಿತೆಯಲ್ಲಿ ಅನೇಕ ಕಡೆಘನಘೋರವೆಂಬ ಶಬ್ದದ ಪುನರಾವರ್ತನೆ ಇದೆ. (ಘನಘೋರ ಪ್ರಾಜಕ್ತ, ಘನಘೋರ ರಕ್ತ, ಶೂನ್ಯ ಘನಘೋರ) ಘೋರಶಿವನ ಹೆಸರೂ ಹೌದುದಿಲೀಪ್ ಚಿತ್ರೆಯವರ ಕವಿತೆಗಳಲ್ಲಿ ಪ್ರಮುಖವಾಗಿ ಕಂಡು ಬರುವ ಅಂಶವೆAದರೆ ಅದು ಶೈವ ಸಿದ್ಧಾಂತ, ಎಂದು ಮರಾಠಿಯ ವಿಮರ್ಶಕ ಮ.ಸು. ಪಾಟೀಲ ಅವರು ಅಭಿಪ್ರಾಯಪಡುತ್ತಾರೆ. ಶಿವನೇ ತಾನು ಕಳೆದುಕೊಂಡ ತನ್ನ ಅರ್ಧ ಅಂಗಕ್ಕಾಗಿ ಪರಿತಪಿಸುತ್ತಾನಂತೆ. ಆದರೆ ಅಖಂಡವೆನ್ನುವುದು ಈಗಾಗಲೇ ಒಡೆದು ಹೋಳುಗಳಾಗಿಹೋಗಿದೆ. ಆದುರಿಂದಲೇ ಶಿವನ ಈ ಸೃಷ್ಟಿಗಳಿಗೆಲ್ಲಾ ತಮ್ಮ ವೈಯಕ್ತಿಕ ಪರಿಪೂರ್ಣತೆಯ ಹಂಬಲಮಾತ್ರವಲ್ಲ. ಅಖಂಡದೊಳಗೆ (ಶಿವ) ಒಂದಾಗುವ ಸಾಮುದಾಯಕ ಹಂಬಲ ಕೂಡ.

ಇನ್ನೊಂದು ಕಡೆಆನಂದ ಅಂಧಕಾರಎನ್ನುವ ಮಾತು ಬರುತ್ತದೆಕತ್ತಲೆ ಎನ್ನುವುದು ಯಾವಾಗಲೂಕಪ್ಪು ಪಾರಿಜಾತದಂತೆ ನಿಗೂಢವಾದುದುಅಲ್ಲಿ ಮಾತ್ರವೇ ನಮ್ಮ ನಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುದಕ್ಕೆ ಸಾಧ್ಯ. ಹೀಗೆ ಅಸ್ಮಿತೆಯನ್ನು ಕಳೆದುಕೊಂಡು ಪರಸ್ಪರ ಒಂದಾಗುವುದೇ ಐಂದ್ರಿಕ ಅನುಭವ ಹಾಗೂ ಅನುಭಾವದ ಮೂಲ ಉದ್ದೇಶ.

ಇಹದ ಭೌತಿಕ (ಲೈಂಗಿಕ) ಅನುಭವವಾಗಲೀ ಪರದ ಅಭೌತಿಕ ಅನುಭವವಾಗಲೀ ಎಲ್ಲವೂ ಇಂದ್ರಿಯಗಳ ಮೂಲಕವೇ ಅನುಭವಕ್ಕೆ ದಕ್ಕುವಂತಹುದು, ಮತ್ತು ಇಂದ್ರಿಯಾತೀತವಾಗುವಂತಹುದು. ಹೀಗೆ ಇಂದ್ರಿಯಗಳ ಮೂಲಕವೇ ಹಾದು, ಇಡಿಯಾಗಿ ಹಿಡಿಯಬೇಕೆನ್ನುವಷ್ಟರಲ್ಲೇ ಇಂದ್ರಿಯಗಳನ್ನೂ ಮೀರಿ ಮಿಂಚಿ ಮಾಯವಾಗುವ, ಒಂದು ಅನುಭವವನ್ನು ಕವಿತೆ ತನ್ನ ಚುಟುಕಾದ ಚುರುಕಾದ ಶಬ್ದವಿನ್ಯಾಸದ ಮೂಲಕ ಅನನ್ಯವಾಗಿ ಕಟ್ಟಿಕೊಡುತ್ತದೆ, ಇದುಕಪ್ಪು ಪಾರಿಜಾತದ ಆಕೃತಿಯ ಹಾಗೂ ಅನುಭವಗಳ ಪ್ರತೀಕವೂ ಆಗಿದೆ.

ದಿಲೀಪ್ ಚಿತ್ರೆ (೧೯೩೮-೨೦೦೯)

ಮರಾಠಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದು ಪ್ರಸಿದ್ಧರಾದ ದಿಲೀಪ್ ಚಿತ್ರೆಯವರು ಸ್ವತಂತ್ರ ಭಾರತ ಕಂಡ ಮಹತ್ವದ ಲೇಖಕರಲ್ಲಿ ಒಬ್ಬರು. ಚಿತ್ರ ಕಲಾವಿದರೂ, ಚಲನ ಚಿತ್ರಕರ್ತರೂ ಆಗಿ ಪ್ರಸಿದ್ಧರಾದವರು.

೧೯೩೮ ರಲ್ಲಿ ಬರೋಡಾದಲ್ಲಿ ಜನಿಸಿದರು. ೧೯೫೧ ರಲ್ಲಿ ಮುಂಬಯಿಗೆ ಬಂದ ದಿಲೀಪ್ ಚಿತ್ರೆಯವರು ತಮ್ಮಕವಿತಾಎನ್ನುವ ಮೊದಲ ಕವನ ಸಂಕಲನವನ್ನು ೧೯೬೦ ರಲ್ಲಿ ಪ್ರಕಟಿಸಿದರು. ಅವರ ತಂದೆ ಪುರುಷೋತ್ತಮ್ ಚಿತ್ರೆಅಭಿರುಚಿಎನ್ನುವ ಸಾಹಿತ್ಯಕ ಪತ್ರಿಕೆಯನ್ನು ನಡೆಸುತ್ತಿದ್ದರು. ಇದೇ ಅವರಿಗೆ ೧೯೭೫ ರಲ್ಲಿ ಶಬ್ದಎನ್ನುವ ಸಾಹಿತ್ಯಕ ಪತ್ರಿಕೆಯನ್ನು ಖ್ಯಾತ ಮರಾಠಿ ಸಾಹಿತಿ ಅರುಣ್ ಕೋಲಟ್ಕರ್ ಅವರೊಂದಿಗೆ ಪ್ರಾರಂಭಿಸಲು ಪ್ರೇರಣೆಯನ್ನು ಒದಗಿಸಿತು. ಅಮೆರಿಕಾದ ಅಯೋವಾ ವಿಶ್ವವಿದ್ಯಾಲಯದ ಸಂದರ್ಶಕ ಫೆಲೋ ಆಗಿ ಆಯ್ಕೆಯಾದರು. ಭೋಪಾಲದ ಭರತ್ ಭವನದ ಕಾವ್ಯ ಗ್ರ್ರಂಥಾಲಯದ ನಿರ್ದೇಶಕರಾಗಿದ್ದರು. ದೆಹಲಿ ಮತ್ತು ಭೋಪಾಲದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿದ್ದರು.

  ಪ್ರಸಿದ್ಧ ಅನುವಾದಕರಲ್ಲಿ ಒಬ್ಬರಾದ ಅವರು ನಮ್ಮ ಎ.ಕೆ. ರಾಮಾನುಜನರಂತೆ, ಮರಾಠಿ ಭಕ್ತಿ ಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದರು. ಅವರತುಕಾ ಸೇಸ್ಕೃತಿಯನ್ನು ಪೆಂಗ್ವಿನ್ ಅವರು ಪ್ರಕಟಿಸಿದ್ದಾರೆ. ಅವರ ಜ್ಞಾನೇಶ್ವರನ ಅನುಭಾವಾಮೃತದ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ನಾಮದೇವ್ ಢಸಾಳ್ ಮತ್ತು ನಾರಾಯಣ ಸುರ್ವೆ ಅವರ ಕವಿತೆಗಳನ್ನು ಇಂಗ್ಲಿಷಿಗೆ ತಂದಿದ್ದಾರೆ. ೧೯೪೫ ರಿಂದ ೧೯೬೫ ರವೆರೆಗಿನ ಮರಾಠಿ ಕವಿತೆಗಳನ್ನು ಸಂಪಾದಿಸಿ ಅನುವಾದಿಸಿ ಪ್ರಕಟಿಸಿದ್ದಾರೆ

ಚಲನ ಚಿತ್ರ ನಿರ್ದೇಶಕರಾಗಿ ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರಕಲಾವಿದರಾಗಿ ಹಲವಾರು ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ.

ಅವರ ಈ ಎಲ್ಲಾ ಸಾಧನೆಗಳಿಗಾಗಿ ಮಹಾರಾಷ್ಟ್ರ ರಾಜ್ಯದ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಭಾರತ ಸರ್ಕಾರದ ಪ್ರಶಸ್ತಿಯೂ ಅವರಿಗೆ ದೊರೆತಿದೆ (ಇಂದಿರಾ ಗಾಂಧಿ ಫೆಲೋಶಿಪ್), ಅಲ್ಲದೇ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೂ ಅವರು ಪಾತ್ರರಾಗಿದ್ದಾರೆ.

೨೦೦೯ ರಲ್ಲಿ ಕ್ಯಾನ್ಸರ್ ನಿಂದಾಗಿ ಅವರು ಪುಣೆಯಲ್ಲಿ ತೀರಿಕೊಂಡರು.

ಕೃತಿಲೋಕ

 ಕವಿತಾ , ಶಿಬಾ ರಾಣಿ ಚ ಶೋಧ, ಕವಿತಾಂತರ್ಯಾಚ ಕವಿತಾ, ಮೀಟೂ ಮೀಟೂ ಪೂರಟ್, ಶತಕಾಂಚ ಸಂಧಿಕಾಳ್, ಪ್ರಕೃತ ಕವಿತಾ, ಚತುರಂಗ, ತುಕೋಬಾಂಚೆ  ವೈಕುಂಠಾಗಮನ್, ಕವಿ ಕಾಯ್ ಕಾಮ್ ಕರ್ತಾ, ಇತ್ಯಾದಿ ಕವಿತಾ ಸಂಕಲನಗಳು ಪ್ರಕಟವಾಗಿದ್ದು ಅವುಗಳನ್ನುಐಕೂಣ್ ಕವಿತಾಎಂಬ ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಆರಿಸಿವರ್ಲ್ಡ್ ಲಿಟರೇಚರ್ ಟು ಡೇಸಂಕಲನ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಎಲ್ಲವನ್ನೂ ಸಂರಕ್ಷಿಸಿ ಪ್ರಕಟಿಸುವಲ್ಲಿ ಅವರ ಹೆಂಡತಿ ವಿಜೂ ಚಿತ್ರೆ ಅವರ ಪತ್ರ ಅನನ್ಯವಾದುದು. ಇಂದು ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಕೃತಿ ಲೋಕದ ಮೂಲಕ ಬಿಟ್ಟು ಹೋಗಿರುವ ಶಬ್ದಗಳೂ ಮತ್ತು ಪ್ರತಿಮೆಗಳು ನಮ್ಮೊಡನೆ ಇರುತ್ತವೆ.

ದಿಲೀಪ್ ಚಿತ್ರೆ ವಿಚಾರಗಳ ತುಣುಕುಗಳು

 ಮರಾಠಿ ಭಕ್ತಿ ಸಾಹಿತ್ಯದ ಮೇರು ಕವಿ ತುಕಾರಾಮನನ್ನು ಕುರಿತು ಬರೆಯುತ್ತಾಷೇಕ್ಸ್ಪಿಯರ್ ಇಲ್ಲದ ಇಂಗ್ಲಿಷ್ ಸಾಹಿತ್ಯವನ್ನು ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೆ ತುಕಾರಾಮ್ ಇಲ್ಲದ ಮರಾಠಿ ಸಾಹಿತ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ತುಕಾರಾಮನನ್ನು ಮೊದಲಿಗೇ ಓದಿದರೆ ಕಾವ್ಯವನ್ನು ಕುರಿತ ನಿಮ್ಮ ಕಲ್ಪನೆಯೇ ಬದಲಾಗುತ್ತದೆ. ನನ್ನ ಬದುಕಿನ ವಿವಿಧ ಹಂತಗಳಲ್ಲಿ ತುಕಾರಾಮ್ನನ್ನು ಮತ್ತೆ ಮತ್ತೆ ಪುನರ್ ಕಂಡು ಕೊಳ್ಳುತ್ತಾ ಬಂದಿದ್ದೇನೆ. ಎಲ್ಲವನ್ನೂ ಒಳಗೊಳ್ಳುವ ತುಕಾರಾಮ್ ನ ಕಾವ್ಯ ತನ್ನ ಬದುಕನ್ನೂ ಜೊತೆಗಿನವರ ಬದುಕನ್ನೂ ಏಕ ಕಾಲಕ್ಕೆ ದಾಖಲಿಸುತ್ತದೆಎಂದು ಹೇಳುತ್ತಾರೆ.

*         

ಗೋಧ್ರಾ, ಗುಜರಾತ್, ಗರ್ಬಾ,ಗಾಂಧೀಜಿಮತ್ತು ಜನಾಂಗಹತ್ಯೆ (ಜಿನೋಸೈಡ್)’ ಎಂಬ ಐದುಜಿಗಳ ಕುರಿತು ಬರೆಯುತ್ತಾ, ಗುಜರಾತಿನಲ್ಲಿ ನಡೆದ ಜನಾಂಗ ಹತ್ಯೆಯು, ಶ್ರೀಲಂಕಾದಿಂದ ಆಫ್ಘಾನಿಸ್ಥಾನದವರೆಗೆ, ನೇಪಾಳದಿಂದ ಭಾರತದ ಪಶ್ಚಿಮ ಕರಾವಳಿಯ ವರೆಗೆ, ನಮ್ಮ ಇಡೀ ನಾಗರೀಕತೆಯೇ ಇಂದು ಸಂಕಷ್ಟದಲ್ಲಿದೆ ಎಂಬ ನಿಷ್ಠುರವಾದ ಪಾಠವನ್ನು ನಮಗೆ ಕಲಿಸುತ್ತದೆ, ನಮಗೆ ಅಖಂಡ ವಿಶಿಷ್ಟ ನಾಗರಿಕ ಜನಾಂಗವಾಗಿ ಬದುಕಿ ಉಳಿಯಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ನೆರೆ ಹೊರೆಯವರನ್ನು ಕೊಲ್ಲುವುದನ್ನು ಬಿಟ್ಟು ಅವರ ಜೊತೆಯಲ್ಲಿನ ನಮ್ಮ ಭಾಂದವ್ಯವನ್ನು ಧೃಡೀಕರಿಸುವುದರ ಮೂಲಕ ಮಾತ್ರ ಸಾಧ್ಯಎನ್ನುತ್ತಾರೆ.

*          

ಬರೋಡಾದಲ್ಲಿ ತನ್ನ ಬಾಲ್ಯವನ್ನು ಕಳೆದ ಈ ಬಾಲಕ ಮುಂಬಯಿಗೆ ಕಾಲಿಟ್ಟು ದಿಗ್ಭ್ರಮೆ  ಪಟ್ಟದ್ದು ನಿಜ. ಅದು ಹೇಗೆ ತನನ್ನನ್ನು ಆವರಿಸಿತು ಎಂಬುದನ್ನು ನಾಲ್ಕು ಹಂತಗಳಲ್ಲಿ ಅವರು ವಿವರಿಸಿದ್ದಾರೆ. ನಮ್ಮ ದಲಿತ ಕವಿ ಸಿದ್ಧಲಿಂಗಯ್ಯನವರಂತೆ, ಪ್ರಥಮವಾಗಿ ಅವರ ಬರವಣಿಗೆ ಮತ್ತು ಅಧ್ಯಯನಗಳು ಪ್ರಾರಂಭವಾಗುವುದೇ ಅವರ ವಸತಿಯಿದ್ದಮಾಹಿಮ್ನ ಹಿಂದೂ ಸ್ಮಶಾನದಲ್ಲಿ. ತಮ್ಮ ೧೬ ರಿಂದ ೨೨ ರ ವಯಸ್ಸಿನವರೆಗೆ ಅಲ್ಲಿ ಕಳೆಯುತ್ತಾರೆ. ಅವರು ಕಲಿತಇಂಡಿಯನ್ ಎಜುಕೇಷನ್ ಸೊಸೈಟಿಶಾಲೆಯ ಮಧ್ಯಮ ವರ್ಗಕ್ಕೆ ಸೇರಿದ ಗೆಳೆಯರು ತಮ್ಮ ಲೈಂಗಿಕ  ವಿಕೃತಿಯನ್ನು ಅದರ ಅನಂತ ರೂಪಗಳಲ್ಲಿ ಅವರಿಗೆ ತೋರಿಸಿಕೊಡುತ್ತಾರೆ. ಆನಂತರ ಅವರು, ಏಶಿಯಾ ಖಂಡದಲ್ಲೇ ಅತಿ ದೊಡ್ಡದೆನಿಸಿದ ಮುಂಬಯಿನ ಕೊಳಚೆಗೇರಿಧಾರಾವಿಯ ಶಾಲೆಯಲ್ಲಿ ಓದುವಾಗ ಅಲ್ಲಿ ಅಂಬೇಡ್ಕರ್ ಅವರಿಂದ ಪ್ರಭಾವಿತಗೊಂಡ ದಲಿತ ಗೆಳೆಯರು ಅಧ್ಯಯನ ಮತ್ತು ರಾಜಕೀಯದಲ್ಲಿನ ಗಂಭೀರವಾದ ಆಸಕ್ತಿಯನ್ನು ಪ್ರಕಟಿಸುತ್ತಾರೆ. ಇದು ಅವರಿಗೆ ಮುಂದೆನಾಮದೇವ್ ಢಸಾಳ್, ನಾರಾಯಣ್ ಸುರ್ವೆಮುಂತಾದ ಮರಾಠಿ ಲೇಖಕಕರನ್ನು ಅಭ್ಯಾಸಮಾಡಿ ಅವರನ್ನು ಲೋಕಮುಖಕ್ಕೆ ಪರಿಚಯಿಸಲು ಪ್ರೇರಣೆಯನ್ನು ಒದಗಿಸುತ್ತದೆ. ಆನಂತರ ಅವರು ಮಿಲ್ಲುಗಳ ಕೇಂದ್ರವಾಗಿದ್ದ ಲಾಲ್ಬಾಗ್ ಹೇಗೆ ಕ್ರಮೇಣ ಛಿದ್ರಗೊಂಡಿತು ಎಂಬುದನ್ನು ವಿಷಾದದಿಂದ ದಾಖಲಿಸುತ್ತಾರೆ. ಕಾಲ್ನಡಿಗೆಯ ಮೂಲಕವೇ ಇಡೀ ಮುಂಬಯಿಯನ್ನು ತಿರುಗಾಡಿದ್ದರಿಂದ ಮುಂಬಯಿಯ ಇಂಚಿಂಚೂ ಅವರನ್ನು ಆವರಿಸುತ್ತದೆಆದ್ದರಿಂದಲೇ ಅವರುಮುಂಬಯಲ್ಲಿ ನಾನು ಬೆಳೆದೆನೋ ನನ್ನ ಮೇಲೆ ಮುಂಬಯಿ ಬೆಳೆಯಿತೋಎಂಬ ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ.

‍ಲೇಖಕರು avadhi

February 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಒಳ್ಳೆಯ ಅಂಕಣ. ನನಗೆ ತುಂಬಾ ಇಷ್ಟವಾಗುತ್ತಿದೆ.

    ಪ್ರತಿಕ್ರಿಯೆ
  2. Puttaraju.P

    ತುಂಬ ಚೆನ್ನಾಗಿದೆ. ಮರಾಠಿ ಸಾಹಿತ್ಯ ನಿಜವಾಗಿಯೂ ಬಹಳ ಉತ್ಕೃಷ್ಟ. ಅನುವಾದ ಕೃತಿ ಓದಿದ್ದೆ.
    ಧನ್ಯವಾದಗಳು ಒಳ್ಳೆಯ ಅಂಕಣ ಬರಹಕ್ಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: