ತೇಜೋ-ತುಂಗಭದ್ರಾ: ಕನ್ನಡದ ವಿಮರ್ಶೆ ಲೇಖಕನನ್ನು ಮುಲಾಜಿಗೆ ಬಿದ್ದು ಹೊಗಳುವ ಕ್ರಿಯೆ ಆಗುತ್ತಿದೆ..

ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ ‘ತೇಜೋ ತುಂಗಭದ್ರಾ’ 

ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ.

ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ.

ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ ಗ್ರಹಿಕೆಯನ್ನು ಕಟ್ಟಿಕೊಟ್ಟರು. ಅದು ಇಲ್ಲಿದೆ .

ಖ್ಯಾತ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರು ರೇಣುಕಾರಾಧ್ಯರ ಬರಹಕ್ಕೆ ಪ್ರತಿಕ್ರಿಯಿಸಿದ್ದು, ರೇಣುಕಾರಾಧ್ಯರೂ ಸಹಾ ತಮ್ಮ ಅನಿಸಿಕೆಯನ್ನು ಮಂಡಿಸಿದ್ದಾರೆ.

ಓದಿ-

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ.

ನಿಮ್ಮ ನೋಟ, ವಿಮರ್ಶೆಯನ್ನು [email protected] ಗೆ ಕಳಿಸಿಕೊಡಿ. 

ಲಲಿತಾ ಸಿದ್ಧಬಸವಯ್ಯ 

ರೇಣುಕಾರಾಧ್ಯರಿಗೆ

”ತೇಜೋ ತುಂಗಭದ್ರಾ” ದ ಓದು ಹೀಗನ್ನಿಸಿತು, ಸರಿ. ಅದನ್ನು ಪ್ರಶ್ನಿಸಲಾಗದು.

ಆದರೆ ಇತರರ ಓದನ್ನು ಅವರು ಹೇಗೆ ಅಳೆಯುತ್ತಾರೆ? ತನ್ನ ಒಂದು ಓದು ಇತರರಲ್ಲೂ ತನಗಾದ ಅನುಭವವನ್ನೆ ಆಗುಗೊಳಿಸುತ್ತದೆ ಎಂದು ನಿರೀಕ್ಷಿಸುವುದು ಸಾಧುವೇ? ಎಷ್ಟು ಜನ ಓದುಗರೋ ಅಷ್ಟೂ ಅಭಿಪ್ರಾಯಗಳು ಉಂಟಾಗುತ್ತವೆ. ಹಲವು ಸಾಮ್ಯತೆ ಹಲವು ಭಿನ್ನತೆ – ಇವು ಮನುಷ್ಯ ಲಕ್ಷಣ. ನಾವೆಲ್ಲರೂ ಮನುಷ್ಯರೇ.‌ ಒಂದೊಂದು ಪ್ರಾಣಿ ಜಾತಿಯ ದೈಹಿಕ ಲಕ್ಷಣಗಳನ್ನು ಪ್ರಕೃತಿ ಏಕತ್ರ ತಿದ್ದಿರುತ್ತದೆ. ಆದರೆ ಮಾನವ ಜಾತಿಯಲ್ಲಿ ಮಾತ್ರ ದೈಹಿಕದ ಹೊರತಾಗಿ ಮಾನಸಿಕ ಲಕ್ಷಣಗಳು ಪ್ರತಿ ನರಜೀವಿಗೂ ಭಿನ್ನತೆ ಹೊಂದಿರುತ್ತವೆ. ಈ ಮಾನಸಿಕ ಸಂರಚನೆಯು ಅತಿ ಸಂಕೀರ್ಣ ಮತ್ತು ಅದೇ ನಾವು ಸಾಹಿತಿಗಳೆನಿಸಿಕೊಂಡವರ ಬರಹದ ನಿಜ ಬಂಡವಾಳ. ನಂನಮ್ಮ ಬರಹಗಳಲ್ಲಿ ಈ ಮನುಷ್ಯ ಪ್ರಾಣಿಯ ಮನಸ್ಸನ್ನು ಬಗೆಯುವುದೆ ನಮ್ಮ ಒರೆಗಲ್ಲು. ಇದರ ನಿಷ್ಪತ್ತಿಯ ಹಿಂದೆ ಅಲೆಯುವವರು ನಾವು.

ಹೀಗಿರುವಾಗ ಸರ್, ನೀವು ಅದು ಹೇಗೆ ಬೇರೊಬ್ಬರ ಓದಿನ ಮೆಚ್ಚುಗೆಯನ್ನು ಅಲ್ಲಗಳೆಯುವಿರಿ? ಅದು ಕನ್ನಡ ವಿಮರ್ಶೆಯ ಅಧೋಗತಿ ಎಂದು ಬಿಟ್ಟಿದ್ದೀರಿ, ಇದು ನಿಮಗೆ ಉಚಿತವೆನಿಸುತ್ತದೆಯೇ ಸರ್? ಇದೂ ಒಂದು ತರಹದ ಅಸಹನೆಯಲ್ಲವೇ?

ನನ್ನೊಳಗೆ “ತೇತುಂ” ಓದು ಹುಟ್ಟಿಸಿದ ಅನುಭವ ನಿಮ್ಮ ಹಾಗಿಲ್ಲ, ಇತರರು ಕೊಟ್ಟಿರುವ ಅಭಿಪ್ರಾಯಗಳ ತರಹವೂ ಇಲ್ಲ. ಇದಕ್ಕೆ ನನ್ನ ಗ್ರಹಿಕೆಯ ರೀತಿಯೆ ಕಾರಣ ಎಂದು ನಾನು ಅಂದುಕೊಂಡಿರುವೆ. ನನ್ನ ಗ್ರಹಿಕೆ ನನ್ನ ಮನೋರಚನೆಯ ಮೇಲಿದೆ. ಸೋ ಆ ಅನುಭವ ಅದು ನನ್ನದು ಕೇವಲ ನನ್ನದು. ಅದರ ಹಾಗೆ ರೇಣುಕಾರಾಧ್ಯರ ಅನುಭವವಾಗಲಿ ಇತರರದಾಗಲಿ ಇರುವುದಿಲ್ಲ.

ಎಚ್ ಎಸ್ ರೇಣುಕಾರಾಧ್ಯ 

ಪ್ರೀತಿಯ
ಲಲಿತಾ ಸಿದ್ಧಬಸವಯ್ಯ ಮೇಡಂ.

ನಿಮ್ಮ ಮಾತು ನಿಜ. ಒಬ್ಬೊಬ್ಬ ಓದುಗನ ಓದು ಭಿನ್ನ. ಆ ಕಾರಣದಿಂದಲೇ ಕನ್ನಡ ಸಾಹಿತ್ಯ ಇಲ್ಲಿಯವರೆಗೂ ಬೆಳೆದು ಬಂದಿರೋದು, ಉಳಿದಿರುವುದು. ನಾನು ಅಲ್ಲಗಳೆದಿರೋದು ಎಲ್ಲರ ಓದಿನ ಅಭಿಪ್ರಾಯವನ್ನು ಅಲ್ಲ. ಇಡೀ ಕಾದಂಬರಿಯ ಮಿತಿಯ ಬಗ್ಗೆ ಅಷ್ಟೂ ಜನ ಓದುಗರಲ್ಲಿ (ಆ ಕಾದಂಬರಿಯ ಆರಂಭದ ನಾಲ್ಕೂ ಪುಟದ ಹದಿನೇಳು ಜನರ ಪ್ರತಿಕ್ರಿಯೆಯಲ್ಲಿ) ಒಬ್ಬರೂ ಕೂಡ ಹೇಳಿಲ್ಲದಿರುವುದನ್ನು. ಹೀಗೆ ಕೇವಲ ಮೆಚ್ಚುಗೆಯನ್ನೆ ಒಂದು ಕೃತಿಯ ಬಗ್ಗೆ ನೀಡುವುದೆಂದರೆ ಏನರ್ಥ? ನೀವೇ ಹೇಳುವ ಒಬ್ಬೊಬ್ಬರ ಓದು ಭಿನ್ನ ಎಂಬ ಮಾತಿನ ಅರ್ಥವೇನು.

ಅಲ್ಲಿ ಇರುವವರೆಲ್ಲರೂ ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೆ ಪ್ರಸಿದ್ಧರು. ಅವರೆಲ್ಲರೂ ಏಕಮುಖವಾಗಿ ಕಾದಂಬರಿಯನ್ನು ಹೊಗಳಿದ್ದಾರೆಯೇ ವಿನಃ ಕಾದಂಬರಿಯ, ಲೇಖಕನ ಮಿತಿಗಳನ್ನು ಎಲ್ಲಿಯೂ ಹೇಳಿಲ್ಲ. ಒಂದು ಕೃತಿಯ ಓದು ಎಂಬುದು ಕೇವಲ ಹೊಗಳಿಕೆ, ಮೆಚ್ಚುಗೆ ಅಷ್ಟೆಯೆ. ನೀವು ಒಬ್ಬ ಕವಿಯಾಗಿ ಈ ತರದ ಓದನ್ನು ಮೆಚ್ಚುತ್ತೀರಾ.

ಇವತ್ತು ಕನ್ನಡದ ವಿಮರ್ಶೆ ಎಂಬುದು ಲೇಖಕನನ್ನು ಮುಲಾಜಿಗೆ ಬಿದ್ದು ಹೊಗಳುವ, ಒಂದು ಸೌಜನ್ಯದ ಕ್ರಿಯೆ ಆಗುತ್ತಿದೆ. ಒಬ್ಬ ಓದುಗನಾದವನಿಗೆ ಕೃತಿ ಮುಖ್ಯವಾಗಬೇಕೆ ಹೊರತು ಕೃತಿಕಾರನಲ್ಲ.
ಆದರೆ ತೇಜೋ- ತುಂಗಭದ್ರಾ ಕೃತಿಯ ಬಗೆಗೆ ಕೇವಲ ಮೆಚ್ಚುಗೆ, ಹೊಗಳಿಕೆಯನ್ನಷ್ಟೆ ಕಾಣಿಸಿರುವುದನ್ನು ಕಂಡು ನಾನು ಕನ್ನಡ ವಿಮರ್ಶೆಯ ಅಧೋಗತಿ ಎಂದಿದ್ದೇನೆ. ಅದು ಖಂಡಿತಾ ಅಸಹನೆಯಲ್ಲ ಮೇಡಂ. ನನಗೂ ಆ ಕೃತಿಯ ಬಗೆಗೆ ಕೆಲ ಅಂಶಗಳು ಮೆಚ್ಚುಗೆಯಾದವು. ಅದನ್ನೂ ನಾನು ಹೇಳಿದ್ದೇನೆ.

ಕಡೆಯದಾಗಿ ನಾನು “ತೇತುಂ” ಬಗ್ಗೆ ಬರೆದ ಮಾತುಗಳು ನನ್ನ ಒಂದು ಓದಿನ ಮಾತುಗಳಷ್ಟೆ ಅಲ್ಲದೆ ಅದು ನನ್ನ ಅಭಿಪ್ರಾಯಗಳಷ್ಟೆ. ಆ ಕೃತಿಯ ಬಗೆಗಿನ ಕಡೆಯ ಅಭಿಪ್ರಾಯ ಅಲ್ಲ. ನಿಮಗೆ ಆ ಕೃತಿಯ ಓದು ಕೊಟ್ಟ ಓದು ಖಂಡಿತಾ ಭಿನ್ನವಾಗಿರಬಹುದು, ಅದನ್ನು ನೀವು ಬರೆಯಿರಿ. ಅದರ ಬಗ್ಗೆ ನನಗೆ ಗೌರವಿದೆ. ಆದರೆ ಆ ಕೃತಿಯನ್ನು ಕುರಿತು ಸುಮ್ಮನೆ ಹೊಗಳಿಕೆಯ ಮೆಚ್ಚುಗೆಯ ಮಾತಗಳನ್ನಷ್ಟೆ ಬರೆದರೆ ಆ ಓದಿನ, ಬರವಣಿಗೆಯ honesty ಪ್ರಶ್ನಿಸಲು ಅರ್ಹವಾದದ್ದು ಅಲ್ಲವೆ.

‍ಲೇಖಕರು avadhi

February 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ಲಲಿತಾ ಸಿದ್ಧಬಸವಯ್ಯ

  ಪ್ರಿಯ ರೇಣುಕಾರಾಧ್ಯರೆ ಧನ್ಯವಾದಗಳು. ಸಮಾಧಾನದಿಂದ ಪ್ರಶ್ನೆ ಉತ್ತರ‌ ನಡೆಸುವ ಪರಂಪರೆಯೆ ನಶಿಸಿ ಹೋಯಿತು ಎನ್ನುವಾಗ ನೀವು ಅದನ್ನು ಮರುಸ್ಥಾಪನೆ ಮಾಡಿದಿರಿ.

  ನಮ್ಮಿಬ್ಬರ ಬರಹಗಳಲ್ಲಿರುವ ಪ್ರಶ್ನೆಗಳಿಗೆ ನಿಮ್ಮ ಪತ್ರದ ಕೊನೆಯ ಪ್ಯಾರಾದಲ್ಲಿ ಉತ್ತರವಿದೆ.

  “ಕಡೆಯದಾಗಿ ನಾನು “ತೇತುಂ” ಬಗ್ಗೆ ಬರೆದ ಮಾತುಗಳು ನನ್ನ ಒಂದು ಓದಿನ ಮಾತುಗಳಷ್ಟೆ ಅಲ್ಲದೆ ಅದು ನನ್ನ ಅಭಿಪ್ರಾಯಗಳಷ್ಟೆ. ಆ ಕೃತಿಯ ಬಗೆಗಿನ ಕಡೆಯ ಅಭಿಪ್ರಾಯ ಅಲ್ಲ.”

  ಇದನ್ನೆ ನಾನು ಹೇಳಲು ಹೊರಟಿದ್ದು. ನಮ್ಮದು ಕಡೆಯ ಅಭಿಪ್ರಾಯವಲ್ಲ. ಓದಿದ ಎಲ್ಲರೂ ತಮಗನಿಸಿದ್ದನ್ನು ಬರೆಯಲಿ. ಕನ್ನಡದ ಓದುಗರು ಅದೆಷ್ಟು ಪ್ರಬುದ್ಧರೆಂದರೆ ನಾನು ನೀವು ಅವರು ವಾಚಾಮಗೋಚರ ಹೊಗಳಲಿ , ವಾಚಾಮಗೋಚರ ತೆಗಳಲಿ, ಅದರಿಂದ ಅವರೇನೂ ಬಾಧಿತರಾಗುವುದಿಲ್ಲ. ಇದಕ್ಕೆ‌ ನಮ್ಮದೇ ಕನ್ನಡ ವಿಮರ್ಶೆಯ ಸುಖ್ಯಾತ ಕುಖ್ಯಾತ ಪ್ರಸಂಗಗಳು ಎಷ್ಟೊಂದು ಕಣ್ಣ ಮುಂದಿವೆ. ಅವೆಲ್ಲವೂ ನಿಮಗೆ ಗೊತ್ತು. ಕೊನೆಗೂ ಓದುಗ ಕೃತಿಯೊಂದನ್ನು ಗೆಲ್ಲಿಸುವುದು ತನ್ನ ಓದಿನ ಅನುಭವದಿಂದಲೆ ಹೊರತು ವಿಮರ್ಶೆಯ ಮೇಲಿಂದಲ್ಲ. ಇದೇ ಮಾತನ್ನು ‌ಕನ್ನಡದ ಸಿನಿಮಾಗಳಿಗೂ ಅನ್ವಯ‌ ಮಾಡಿಕೊಳ್ಳಬಹುದು. ಸಾವಿರ ಚಿತ್ರ ವಿಮರ್ಶೆಗಳು ಹೊಗಳಲಿ/ಹೀಗಳೆಯಲಿ ಕನ್ನಡ ನೋಡುಗ ಕೊನೆಗೂ ಸಿನಿಮಾ ಗೆಲ್ಲಿಸುವುದು ಯಾ ಸೋಲಿಸುವುದು ತನ್ನ ಕಣ್ಣಿಂದ ನೋಡಿಯೇ!!

  ಇದರ ತಾತ್ಪರ್ಯ ಇಷ್ಟೇ. ಒಂದು‌ ಕೃತಿಯ ಓದಿನ ನಮ್ಮ ಅನುಭವ, ಅಭಿಪ್ರಾಯ , ವಿಮರ್ಶೆ ಯಾವುದೇ ಆಗಲಿ ಅದನ್ನು ನೀವು ಅಂದಂತೆ‌ ಪ್ರಾಮಾಣಿಕತೆಯಿಂದ ದಾಖಲಿಸೋಣ. ಆದರೆ ಇನ್ನೊಬ್ಬರ ಅಭಿಪ್ರಾಯ ಸರಿ ಅಲ್ಲ ಅನ್ನುವುದು ನೋ,, ಬೇಡ. ಅದನ್ನು ಕಾಲಕ್ಕೆ ಬಿಡೋಣ. ಕೊನೆಗೂ ಕಾಲದೇವನ ಹಲ್ಲುಗಳಡಿಯಲ್ಲಿ ಸಿಕ್ಕಿ ಗೆಲ್ಲುವುದು ಸತ್ವಯುತವಾದದ್ದೇ. ನೀವೂ ಇದನ್ನು ಒಪ್ಪುವಿರಿ ಅಲ್ಲವೇ?

  ಪ್ರತಿಕ್ರಿಯೆ
 2. ಎಚ್ ಆರ್ ರಮೇಶ

  ಲಲಿತ ಸಿದ್ಧಬಸವಯ್ಯ ಅವರ ಗ್ರಹಿಕೆಯ ಹಿಂದೆ ವಿಮರ್ಶೆಯ ವಿನಯವನ್ನು ಕಂಡು ಖಷಿ ಆಯಿತು.

  ಪ್ರತಿಕ್ರಿಯೆ
 3. hr ramesha

  ಲಲಿತ ಸಿದ್ಧಬಸವಯ್ಯ ಅವರ ಗ್ರಹಿಕೆಯ ಹಿಂದೆ ವಿಮರ್ಶೆಯ ವಿನಯವನ್ನು ಕಂಡು ಖುಷಿ ಆಯಿತು.

  ಪ್ರತಿಕ್ರಿಯೆ
 4. Sriranga M A

  ರೇಣುಕಾರಾಧ್ಯರಿಗೆ—
  ಹೊಸ ಕನ್ನಡ ಸಾಹಿತ್ಯದಲ್ಲಿ ಕಳೆದ 50-60 ವರ್ಷಗಳಿಂದ ‘ಸುಮ್ಮನೆ ಹೊಗಳಿಕೆ’ಯ ಮಾತುಗಳನ್ನೇ ಆಡುತ್ತಾ, ಬರೆಯುತ್ತಾ’, ನಾಲ್ಕಾರು ಕೃತಿಗಳನ್ನು ಮಾತ್ರ ಈ ಶತಮಾನದ ಅದ್ಭುತ ಸೃಷ್ಟಿಗಳು ಎಂದು ಸಾವಿರ ಸಲ ಹೇಳಿರುವ ಕೃತಿಗಳು ನಾಲ್ಕಾರು ಇವೆ. ಅವುಗಳ ಹೆಸರನ್ನು ನಾನು ಹೇಳಿದರೆ ಆ ಸಾಹಿತಿಗಳ ಭಕ್ತರು ನನ್ನ ಮೇಲೆರೆಗಿ ಬರುತ್ತಾರೆ. ಪ್ರಾಜ್ಞರಾದ ತಮಗೆ ‘ಆ ಕೃತಿಗಳು’ ಯಾವುವು ಎಂದು ತಿಳಿದಿದೆ ಎಂದು ಭಾವಿಸುವೆ. ಒಬ್ಬರ ಒಟ್ಟು150-200 ಪುಟಗಳ ಕಥಾ ಸಾಹಿತ್ಯಕ್ಕೆ ಅದರ ಮೂರು ಪಟ್ಟು ಹೊಗಳಿಕೆಯ ವಿಮರ್ಶೆ ಬಂದಿದೆ. ಜತೆಗೆ ವಾಚಿಕೆಗಳು ಬೇರೆ! ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆ? ಹೆದರಿಕೆಯೆ? ಆದರೆ ಇದುವರೆಗೆ ಭೈರಪ್ಪನವರು ಈಗ ವಸುಧೇಂದ್ರರು
  ವಿಮರ್ಶೆಯ ಕಠಿಣ ಪರೀಕ್ಷೆ, ಸವಾಲಿಗೆ ಒಳಗಾಗಿದ್ದಾರೆ. ನಿಮ್ಮ ಲೇಖನ ಓದಿದ ಅವಧಿಯ ಓದುಗರು ಹೇಳಿದಂತೆ ‘ವಿಮರ್ಶೆಯ ವಲಯ ತುಂಬಾನೆ ಕೆಟ್ಟಿದೆ ಸ್ವಾಮಿ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: