ಗಿರಿಜಾ ಶಾಸ್ತ್ರಿ ಅಂಕಣ: ನನ್ನ ಹೆಸರೇ ಗೌಹರ್‍ಜಾನ್

ಇದೇನು ಸಂಭ್ರಮ ಸಡಗರ ಗೋಪಾಲ

ಕೊಡುವೆ ನೀ ಪಡೆವೆ ನಾ ನಂದಲಾಲ

ರಂಗಿನಾಟವಿದೇನು ಸರಸವಿದೇನು

ಕೈ ಹಿಡಿದೆಳೆದರೇನು ಶ್ಯಾಮ ನೀನು

ತೆಕ್ಕೆಗೆ ಸಿಗುವವಳಲ್ಲ ನಾನು

ನೋಡು, ನೀ ನೂರು ಕಪಟವಾಡಿದರೂನು

ಬಿಡು ಸಾಕು ಬಿನ್ನಾಣ ಹೋಗಬೇಕಲ್ಲ ಮನೆಗೆ ನಾನು

ಗೌಹರ್ ಪ್ರಿಯನಾಗಿ ನೋಡವುದೇಕೋ ಪರನಾರಿಯ ಕಡೆಗೆ ನೀನು

ಇದೆಂಥ ಸಡಗರ ನಂದ ಲಾಲ

ನಿನಗಿದು ಸರಿಯೇ ಗೋಪಾಲ

( ಗೌಹರ್ ಜಾನ್)

“ಕೈಸೀ ಧೂಮ್ ಮಚಾಯಿ, ಕನ್ಹಯ್ಯಾ ರೇ.. ಅರೇ ಕನ್ಹಯ್ಯಾರೇ” ಕಾಪಿ ರಾಗದಲ್ಲಿರುವ ಹೋಳೀ ಹುಣ್ಣಿಮೆಯ ಹಬ್ಬದ ಸಂಭ್ರಮದ ಈ ಹಾಡು, “ಹುಣ್ಣಿಮೆಯ ಬೆಳದಿಂಗಳ ರಾತ್ರಿಗಳಲ್ಲಿ ಪ್ರತಿಧ್ವನಿಸುತ್ತಿತ್ತು” ಎಂದು ಗೌಹರ್ ಜಾನ್‍ಳನ್ನು ಅರಸುತ್ತಾ ಹತ್ತೊಂಬತ್ತನೇ ಶತಮಾನವನ್ನು ನಮ್ಮ ಕಣ್ಣೆದುರು ತಂದು ನಿಲ್ಲಿಸುವ ಸಾಹಸವನ್ನು ಮಾಡಿದ ವಿಕ್ರಮ್ ಸಂಪತ್, ಅವಳ ಕವಿತಾ ಶಕ್ತಿಯನ್ನು, ಹಾಡಿನ ಸೊಗಸನ್ನೂ ಬಣ್ಣಿಸುವಾಗ ಹೇಳುವ ಮಾತಿದು.

ಇಪ್ಪತ್ತನೇ ಶತಮಾನದ ಮೊದಲಿಗೆ, ಹೀಗೆ ಕೃಷ್ಣ ಗೋಪಿಯರ ಶೃಂಗಾರ ವಿಪ್ರಲಂಭ ಚೇಷ್ಟೆಗಳು, ಭಕ್ತಿಯಿಂದ ಕೂಡಿದ ಅನೇಕ ಠುಮ್ರಿಗಳೇ ಅಲ್ಲದೆ ಹಿಂದೂಸ್ಥಾನಿ ಸಂಗೀತದ ಗಂಭೀರ ಪ್ರಭೇದಗಳಾದ ದ್ರುಪದ್, ದಾದ್ರ, ಖಯಾಲ್ ಮುಂತಾದವುಗಳ ರಚನೆಗಳು ಗ್ರಾಮೋಫೋನ್ ಧ್ವನಿ ಮುದ್ರಿಕೆಯ ಮೂಲಕ ದೇಶದಾದ್ಯಂತ ಹಬ್ಬಿ ಹರಡಿದವು. ರಸಿಕರು ಹುಚ್ಚರಂತೆ ಆ ಹಾಡುಗಳಿಗೆ ಮನಸೋತರು. ಭಾರತಕ್ಕೆ ಗ್ರಾಮೋಫೋನ್ ಬಂದ ಹೊಸದರಲ್ಲಿ ಮೊತ್ತ ಮೊದಲಬಾರಿಗೆ ತನ್ನ ಹಾಡುಗಳನ್ನು ಧ್ವನಿಮುದ್ರಿಕೆಗೆ ಕೊಟ್ಟವಳು ಬೇರೆ ಯಾರೂ ಅಲ್ಲ, ಅವಳೇ ಗೌಹರ್ ಜಾನ್. ಧ್ವನಿ ಮುದ್ರಿಕೆಯ ಕೊನೆಗೆ ಎತ್ತರದ ದನಿಯ ಕೀರಲು ಕಂಠದಲ್ಲಿ “ಮೈ ನೇಮ್ ಈಸ್ ಗೌಹರ್ ಜಾನ್” ಎಂಬ ಅಂಕಿತದ ಹೊಸ ಆಧುನಿಕ ಆವಿರ್ಭಾವ ಭಾರತೀಯರ ಮನೆ ಮನೆಯ ಮಾತಾಯಿತು.

ಹತ್ತೊಂಬತ್ತನೇ ಶತಮಾನದ ಅಂಚಿಗೆ ಹಿಂದೂಸ್ಥ್ತಾನೀ ಸಂಗೀತ ಕ್ಷೇತ್ರದಲ್ಲಿ ಧ್ರುವತಾರೆಯಂತೆ ಮಿಂಚಿದ ಸಂಗೀತ ಸಾಮ್ರಾಜ್ಞಿ ಗೌಹರ್ ಜಾನ್. ಅಂತಹವಳನ್ನು ಸಂಗೀತ ಕ್ಷೇತ ಮರೆತುಬಿಟ್ಟಿತ್ತು. ಕೇವಲ ಹಳೆಯ ಧ್ವನಿಮುದ್ರಿಕೆಗಳಲ್ಲಿ, ರಾಜಮಹಾರಾಜರುಗಳ ವ್ಯವಹಾರ ಪತ್ರಗಳಲ್ಲಿ. ಕೋಟು ಕಛೇರಿಯ ಕಡತಗಳಲ್ಲಿ ಅವಳು ಭೂಗತಳಾಗಿ ಹೋಗಿದ್ದಳು. ಅವಳನ್ನು ಕಂಡ ಸಮಕಾಲೀನರೂ ಉಳಿದಿರಲು ಸಾದ್ಯವಿರಲಿಲ್ಲ. ಒಮ್ಮೆ  ಗೌಹರ್ ಜಾನಳನ್ನು ಕಂಡಿದ್ದ ನೂರಹತ್ತು ವರುಷ ಮೀರಿದ ರಾಮ್‍ಪುರದ ಮಹಾಪರ ಬೇಗಂ ಎಂಬ ಮಹಿಳೆಯೊಬ್ಬಳು ಸಿಕ್ಕಾಗ ಲೇಖಕರ ಆನಂದಕ್ಕೆ ಪಾರವೇ ಇರಲಿಲ್ಲ. ಗೌಹರ್ ಜಾನಳ ಕಥೆಯನ್ನು ಆಕೆ ಸ್ವಲ್ಪ ಹಂಚಿಕೊಂಡಿದ್ದು ಬಿಟ್ಟರೆ ಬೇರೆ ಪುರಾವೆಗಳು ಅವಳ ಬಗ್ಗೆ ಸುಲಭವಾಗಿ ದೊರೆಯಲು ಸಾಧ್ಯವಿರಲಿಲ್ಲ.

ವಿಕ್ರಂ ಸಂಪತ್ ಅವರು ತಮ್ಮ ವಿಸ್ತೃತ ಸಂಶೋಧನೆಯ ಮೂಲಕ ಅವಳನ್ನು ಪುನರುತ್ಥಾನ ಗೊಳಿಸಿದ ಕಥೆಯೇ “ಮೈ ನೇಮ್ ಈಸ್ ಗೌಹರ್ ಜಾನ್” ಕೃತಿಯ ವಸ್ತು. ಗೌಹರ್ ಜಾನ್‍ಳ ಬದುಕಿನ ಏಳು ಬೀಳಿನ ಅವಳ ಆತ್ಮ ಚಿರಿತ್ರೆಯನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿ ಹತ್ತೊಂಬತ್ತನೇ ಶತಮಾನದ ಚಾರಿತ್ರಿಕ ಮತ್ತು ಸಾಮಾಜಿಕ ಸ್ಥಿತಿಗಳ ಅಧ್ಯಯನ ಮಾಡಲಾಗಿದೆ. ಗೌಹರ ಜಾನ್ ಸಂಪರ್ಕಕ್ಕೆ ಬಂದಳೆನ್ನಲಾದ ರಾಜ ಮಹಾರಾಜರುಗಳ ಚರಿತ್ರೆ, ಅವಳು ಹುಟ್ಟಿ ಬೆಳೆದ ಊರುಗಳ ಸ್ಥಳನಾಮಗಳ ಚರಿತ್ರೆ, ಹಿಂದೂಸ್ಥಾನೀ ಸಂಗೀತದ ವಿಭಿನ್ನ ರೂಪಗಳಾದ ದ್ರುಪದ್, ಖಯ್ಯಾಲ್, ಠುಮ್ರಿಗಳ ಚರಿತ್ರೆ, ಗೌಹರ್ ಜಾನ್ ಅಭ್ಯಾಸಮಾಡಿದ ವಿವಿಧ ಘರಾನಾಗಳ ಚರಿತ್ರೆ, ಅವಳು ಸಂಗೀತವನ್ನು ಹೊತ್ತುಕೊಂಡು ಓಡಾಡಿದಲ್ಲೆಲ್ಲಾ ಅವಳ ವರ್ತುಲಕ್ಕೆ ಬಂದ ಅನೇಕ ಸಂಗೀತ ವಿದ್ವಾಂಸರ ಇತಿಹಾಸ. ಈ ಎಲ್ಲವನ್ನೂ ಅವಳು ಓಡಾಡಿದಳೆನ್ನಲಾದ ಜಾಗಗಳೆಲ್ಲೆಲ್ಲಾ ತಿರುಗಿ, ಅನೇಕ ಗ್ರಂಥಾಲಯಗಳನ್ನು ಆಮೂಲಾಗ್ರ ಶೋಧಿಸಿ, ಆ ಕಾಲದ ಪತ್ರಿಕೆಗಳ ಸುದ್ದಿಗಳನ್ನು ಸಂಗ್ರಹಿಸಿ  ಒಂದು ಪೂರ್ಣ ರೂಪದ ಬೃಹದ್ ಸಂಶೋಧನೆಯ ಕೃತಿಯೊಂದನ್ನು ವಿಕ್ರಂ ಸಂಪತ್ ರಚಿಸಿದ್ದಾರೆ. ಹಿಂದೂಸ್ಥಾನಿ ಸಂಗೀತದ ಪರಿಚಯ ಅಷ್ಟಾಗಿ ಇಲ್ಲದ ಲೇಖಕರು ಅದರ ಆಳ ಅಗಲಕ್ಕೆ ಇಳಿದು ನಡೆಸಿದ ಕ್ಷೇತ್ರಕಾರ್ಯದ ಬಾಹುಳ್ಯವನ್ನೂ, ಅದರ ಪ್ರೌಢ ಅವತರಣಿಕೆಯನ್ನು ಈ ಕೃತಿಯಲ್ಲಿ ಯಾರೂ ಮನಗಾಣಬಹುದಾಗಿದೆ. ಸಂಶೋಧನಾ ಕೃತಿಯೆಂದಾಕ್ಷಣ ಕೇವಲ ವಿದ್ವಾಂಸರಿಗೆ ಮಾತ್ರ ಈ ಕೃತಿ ಸೀಮಿತವಾಗಿಲ್ಲ. ಮೇಲುನೋಟಕ್ಕೆ ಇದೊಂದು ಸಂಶೋಧನ ಕೃತಿಯಾದರೂ ಇದರ ಸ್ವರೂಪ ಕಾದಂಬರಿಯದು. ಆದ್ದರಿಂದ ಇದು ಏಕಕಾಲಕ್ಕೆ ಸಾಹಿತ್ಯದ ವಿದ್ಯಾರ್ಥಿಗಳಿಗೆ, ಸಂಗೀತಗಾರರಿಗೆ ಹಾಗೂ ಸಂಶೋಧಕರಿಗೆ  ಸಮಾನ ಮಹತ್ವದ ಕೃತಿಯಾಗಿದೆ.

ಗೌಹರ್ ಜಾನ್ ಹುಟ್ಟಿದ್ದು 1873ರ ಜೂನ್ ಮೂರರಂದು ಅಲಹಾಬಾದ್ ಬಳಿ ಇರುವ ಅಝಮ್‍ಘರ್ ಎಂಬಲ್ಲಿ. (ಅಝಮ್ ಘರ್‍ನ್ನು ಪರಿಚಯಿಸುವುದು ಕೂಡ ಅದರ ಸ್ಥಳನಾಮದ ವಿವರಗಳ ಹಿನ್ನೆಲೆಯಲ್ಲಿ).  ‘ಗೌಹರ್’ (ರತ್ನ) ಮತ್ತು ‘ಜಾನ್’ (ಪರಿಣಿತ ನರ್ತಕಿಯರಿಗೆ ಕೊಡಲಾಗುವ ಹೆಸರು) ಹಿಂದೂ ಮತ್ತು ಮುಸಲ್ಮಾನರ ಸಂಸ್ಕೃತಿ ಸೂಚಕವಾದರೂ ಅವಳು ಹುಟ್ಟಿದ್ದು ಅಮೇರಿಕನ್ ಮೂಲದ ರಾಬರ್ಟ್ ಎನ್ನುವವನಿಗೆ. ಅವಳ ಮೊದಲ ಹೆಸರು ಏಂಜಲೀನಾ. ಅವಳ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ರುಕ್ಮಿಣಿ ಎನ್ನುವವಳ ಮಗಳು ವಿಕ್ಟೋರಿಯಾ. ಅವಳ ಹುಟ್ಟಿನ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದ ಬ್ರಿಟಿಷ್ ಮತ್ತು ಇತರ ವಿದೇಶೀ ರೆಸಿಡೆಂಟರುಗಳು ಭಾರತೀಯ ಮಹಿಳೆಯರನ್ನು ಬೀವಿಗಳೆಂದು (ಉಪಪತ್ನಿಯರು) ವರಿಸುವ ಪದ್ಧತಿ ಜಾರಿಗೆ ಬಂದ ಭಾರತೀಯ ಸಾಮಾಜಿಕ ಪಲ್ಲಟದ ದಿನಗಳನ್ನು ಬಹಳ ವಿಸ್ತೃತವಾಗಿ ಇಲ್ಲಿ ಪರಿಚಯಿಸಿರುವುದು ಗಮನಾರ್ಹ ಸಂಗತಿ. ಹೀಗೆ ಬೀವಿಗಳಾಗಿ ಮದುವೆ ಬಂಧನಕ್ಕೆ ಒಳಗಾದ ಹೆಣ್ಣುಮಕ್ಕಳು ಗರತಿಯರ ಹಾಗೆಯೇ ಗಂಡನ ಸೇವೆ ಮತ್ತು ಮನೆ ನಿಭಾಯಿಸುತ್ತಿದ್ದ ರೀತಿಯ ಮೇಲೂ ಇಲ್ಲಿ ಬೆಳಕು ಚೆಲ್ಲುತ್ತಾರೆ. ಗೌಹರ್ ಜಾನಳ ತಾಯಿಗೆ ಸಂಗೀತ ಮತ್ತು ಸಾಹಿತ್ಯದಲ್ಲಿ ಹುಟ್ಟಿದ ಆಸಕ್ತಿಯಿಂದಾಗಿ ಅದನ್ನು ಪೋಷಿಸಲು ಪಕ್ಕದ ಮನೆಯವನ ಬಳಿಗೆ ಸಂಗೀತ ಪಾಠ ಹೇಳಿಸಿಕೊಳ್ಳಲು ಪ್ರಾರಂಭಿಸಿದಾಗ ಅವಳ ನಡತೆಯನ್ನು ಶಂಕಿಸುವ ಅವಳ ಗಂಡ ರಾಬರ್ಟ್ ಅವಳನ್ನು ತೊರೆಯುತ್ತಾನೆ. ಬೀವಿಗಳಾದರೂ ಒಬ್ಬ ಹೆಂಡತಿಯಂತೆ ಕರ್ತವ್ಯವನ್ನು ನಿರೀಕ್ಷಿಸುತ್ತಿದ್ದ ಅಂದಿನ ಸಾಮಾಜಿಕ ವ್ಯವಸ್ಥೆಯ ಕಡೆಗೂ ಇದು ಬೊಟ್ಟುಮಾಡುತ್ತದೆ.

ಗಂಡ ತೊರೆದನಂತರ ಆರು ವರ್ಷದ ಮಗು ಗೌಹರ್ ನನ್ನು ಕಟ್ಟಿಕೊಂಡು ಖುರ್ಷಿದ್ ಎನ್ನುವ ಪುರುಷನೊಡನೆ ವಿಕ್ಟೋರಿಯಾ ಬನಾರಸ್‍ಗೆ ಬರುತ್ತಾಳೆ. ಸಮಾಜಕ್ಕೆ ಹೆದರಿ, ತಮ್ಮನ್ನು ರಕ್ಷಿಸದ ಖುರ್ಷಿದ್‍ನ ಇಸ್ಲಾಂ ಧರ್ಮಕ್ಕೆ ತಾಯಿ ಮಗಳು ಇಬ್ಬರೂ ಮತಾಂತರಗೊಳ್ಳುತ್ತಾರೆ. ವಿಕ್ಟೋರಿಯಾ ಮಲ್ಕಾಳಾಗಿ, ಆಂಜಲೀನಾ ಗೌಹರ್ ಆಗಿ ಬದಲಾಗುತ್ತಾರೆ.  ಕಥೆಯ ಹಿನ್ನೆಲೆಯಲ್ಲಿ ಯಥಾಪ್ರಕಾರ ಬನಾರಸ್‍ನ ಸಾಹಿತ್ಯ, ಸಂಗೀತ, ನಾಟಕ, ಮುಂತಾದ ಸಾಂಸ್ಕೃತಿಕ ಪರಂಪರೆಯ ಹಾಗೂ ಸಾಮಾಜಿಕ ಜನಜೀವನ ಪದ್ಧತಿಯ ವಿವರವಾದ ಉಲ್ಲೇಖಗಳಿವೆ.

ಸಂಗೀತ, ಸಾಹಿತ್ಯಕ್ಕೆ ಹೆಸರಾದ ಸಾಂಸ್ಕೃತಿಕ ನಗರಿ ಬನಾರಸ್ ನಲ್ಲಿ ಮಲ್ಕಾಳಿಗೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ವಿಪುಲವಾದ ಅವಕಾಶಗಳು ಸಿಗುತ್ತವೆ. ಖುರ್ಷಿದ್ ಅವಳ ಆಸೆಗಳಿಗೆ ನೀರೆರೆದು ಪೋಷಿಸುತ್ತಾನೆ.  ಸಂಗೀತ, ನೃತ್ಯ ಮತ್ತು ಶಾಯರಿಗಳನ್ನು ಪ್ರಸ್ತುತ ಪಡಿಸುತ್ತಾ ಪ್ರಸಿದ್ದ ತವಾಯಫ್ ಆಗಿ ಮಲ್ಕಾ, ತನ್ನದೇ ಜಾಡಿನಲ್ಲಿ ಮಗಳನ್ನು ತಯಾರು ಮಾಡಲು ಆಗಸದಷ್ಟು ಮಹತ್ವಕಾಂಕ್ಷೆ ಇರುತ್ತದೆ. ಹಾಗೆ ಪ್ರಮಾಣಿಕವಾಗಿ ಪ್ರಯತ್ನಿಸುವ ತಾಯಿಯ ಆಸೆಯಂತೆ ಸಂಗೀತ ಕ್ಷೇತ್ರದಲ್ಲಿ ಗೌಹರ್ ಜಾನ್ ಬೆಳೆದು ಸಾಮ್ರಾಜ್ಞಿಯಾಗಿ ಬೆಳಗಿ ವೈಭವದಿಂದ ಮೆರೆದು ರಾಜ, ಮಹಾರಾಜ ಶ್ರೀಮಂತ ಜಮೀನ್ದಾರುಗಳೇ ಅಲ್ಲದೇ ಲಕ್ಷಾಂತರ ಸಂಗೀತ ರಸಿಕರನ್ನು ರಂಜಿಸಿದ ಕಥೆಯೇ “ಮೈ ನೇಮ್ ಈಸ್ ಗೌಹರ್ ಜಾನ್”

ಇಂತಹ ಗಣಿಕೆಯರನ್ನು ಪೋಷಿಸುತ್ತಿದ್ದ ಶ್ರೀಮಂತ ಅಗರವಾಲ್ ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಹಪ್ಪಳಗಳನ್ನು ಒಣಗಿಸುವ ಹಾಗೆ ಚೀಲಗಳಲ್ಲಿ ಹರಡಿ ಇಡುತ್ತಿದ್ದರೆಂಬ ಉಲ್ಲೇಖ ಗೌಹರ್ ಜಾನ್ ಮತ್ತು ಅವಳ ತಾಯಿ ಕಂಡ  ಸಮೃದ್ಧಿಯ ದಿನಗಳ ಕಡೆಗೆ ಬೊಟ್ಟುಮಾಡಿ ತೋರಿಸುತ್ತದೆ. ಇದೇ ಸಮಯದಲ್ಲಿ ನರ್ತಕಿಯರು, ಹಾಡುಗಾರ್ತಿಯರು ಮುಂತಾದ ಕಲಾವಿದರನ್ನು ಕೈಮಾಡಿ ಕರೆಯುತ್ತಿದ್ದ ಹೊಸ ಕೇಂದ್ರವೊಂದು ಅಂದಿನ ಬ್ರಿಟಿಷ್ ಇಂಡಿಯಾದ ರಾಜಧಾನಿಯಾಗಿದ್ದ ಕಲ್ಕತ್ತೆಯಲ್ಲಿ ಹುಟ್ಟಿಕೊಂಡಾಗ ತನ್ನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ತಾಯಿ, ಮಗಳಿಬ್ಬರೂ ಕಲ್ಕತ್ತೆಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸುತ್ತಾರೆ. ಇಲ್ಲಿ ಕಲ್ಕತ್ತಾ ನಗರದ ಪಾಶ್ಚಾತ್ಯ ವಿದ್ಯಾಭ್ಯಾಸಕ್ಕೆ ಒಳಗಾದ ಭದ್ರಲೋಕ ಮುಂತಾದ ಸಾಂಸ್ಕೃತಿಕ ಪರಂಪರೆಯ ಪರಿಚಯವನ್ನು ಲೇಖಕರು ಮಾಡಿಸುತ್ತಾರೆ.

ಜನಭರಿತ, ಕನಸುಗಳ ನಗರವಾದ ಕಲ್ಕತ್ತೆಗೆ ಪದಾರ್ಪಣ ಮಾಡಿದ್ದೇ ತಾಯಿ ಮಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಮಲ್ಕಾ ತನ್ನ ಪುಟ್ಟ ಮಗಳನ್ನೂ ಮುಜ್ರಾಗಳಿಗೆ ಕರೆದೊಯ್ಯುತ್ತಿರುತ್ತಾಳೆ. ಇವರ ಕಲಾಪ್ರಸ್ತುತಿಯ ಖ್ಯಾತಿಯನ್ನು ಕೇಳಿದ ಔಧ್‍ನ ನವಾಬ ವಾಜಿದ್ ಅಲಿ ಶಹಾನಿಂದ ಇವರಿಗೆ ಆಮಂತ್ರಣ ಬರುತ್ತದೆ. ಅಲ್ಲಿ ನವಾಬನ ಹಾಡನ್ನೇ ಭಾವುಕವಾಗಿ ಹಾಡಿ ತಾಯಿ ಮಗಳಿಬ್ಬರೂ ನವಾಬ ಆನಂದಾಶ್ರು ಹರಿಸುವಂತೆ ಮಾಡುತ್ತಾರೆ. ಅಂದಿನಿಂದ ಮಲ್ಕಾ ಅವನ ಆಸ್ಥಾನದ ಗಾಯಕಿಯಾಗಿ ಮಲ್ಕಾ ಜಾನ್ ಆಗುತ್ತಾಳೆ. ಇದೇ ಸಮಯದಲ್ಲಿ ನವಾಬನ ಆಸ್ಥಾನದ ಕಥಕ್ ಶೈಲಿ ನೃತ್ಯದಲ್ಲಿ ಪಾರಂಗತನಾಗಿದ್ದ, ಠುಮ್ರಿ ಪ್ರಭೇದದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ ಅಂತೆಯೇ ಲಖ್ನೋ ಘರಾನಾದ ಸ್ಥಾಪನೆಗೆ ಕಾರಣನೂ ಆದ ಬಿಂದಾದಿನ್ ಮಹಾರಾಜನು (೧೮೩೬-೧೯೧೭) ಗೌಹರಳ ಪ್ರತಿಭೆಯಿಂದ ಆಕರ್ಷಿತನಾಗಿ ಅವಳಿಗೆ ಗುರುವಾಗಲು ಮುಂದೆ ಬರುತ್ತಾನೆ. ವಿಜೃಂಭಣೆಯಿಂದ ಗಂಡಾಬಂಧನದ (ದೀಕ್ಷೆ) ಕಾರ್ಯಕ್ರಮದ ಮೂಲಕ ಗೌಹರ್ ಳ  ಶಿ‍ಷ್ಯವೃತ್ತಿ ಪ್ರಾರಂಭವಾಗುತ್ತದೆ.

ಇದರ ಜೊತೆ ಜೊತೆಗೆ ಗುರುಮುಖೇನ ಬಂಗಾಳಿ ಹಾಡುಗಳನ್ನೂ ಕಲಿಯುತ್ತಾಳೆ. ಅಲ್ಲದೇ ಅವಳಿಗೆ ಇಂಗ್ಲಿಷ್ ಕಲಿಸಲು ಅವಳ  ತಾಯಿ ಶಿಕ್ಷಕರನ್ನೂ ನೇಮಿಸುತ್ತಾಳೆ. ಹಿಂದಿ, ಬಂಗಾಳಿ, ಪರ್ಶಿಯನ್, ಅರಬ್ಬಿ, ಉರ್ದು ಭಾಷೆಗಳಲ್ಲಿ ಪರಿಣಿತಳಾಗಿ ಫ್ರೆಂಚ್ ಭಾಷೆಯಲ್ಲಿ ಮಾತನಾಡಲೂ ಕಲಿಯುತ್ತಾಳೆ. ಈ ಎಲ್ಲವೂ ಅವಳ ಬಹುಮುಖ ಪ್ರತಿಭೆಯ ಪರಿಚಯ ಮಾಡಿಸುತ್ತದೆ.

ದ್ರುಪದ್ ಮತ್ತು ಖಯ್ಯಾಲ್‍ಗಳಿಗಿಂತ ಠುಮ್ರಿಯ ಸ್ಥಾನ ಕೆಳಮಟ್ಟದ್ದಾಗಿದ್ದಿತು, ಎಂದು ಲೇಖಕರು ಉಲ್ಲೇಖಿಸುವುದನ್ನು ನೋಡಿದರೆ,  ಗಣಿಕೆಯರ ಸಾಮಾಜಿಕ ಸ್ಥಾನಮಾನಕ್ಕೂ ಅವರ ಬದುಕಿನ ಪ್ರಧಾನ ಕಲಾಮಾಧ್ಯಮವಾದ ಠುಮ್ರಿಗೂ ಸಂಬಂಧವಿದ್ದಿತು ಎನಿಸುತ್ತದೆ. ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಒಂದು ಹೊಸ ರೂಪ ಕೊಡುವಲ್ಲಿ ಯಶಸ್ವಿಯಾದ ಗಣಪತ್ ರಾವ್ ಎಂಬ ಪ್ರಸಿದ್ಧ ಸಂಗೀತಗಾರ ಗುರು, ಠುಮ್ರಿ ಪ್ರಭೇದಕ್ಕೆ ತಕ್ಕ ಸ್ಥಾಮಾನ ಗಳಿಸಿಕೊಡಲು ಪ್ರಯತ್ನಿಸಿದರು. ಇವರ ಹಾಗೂ ಅಂದಿನ ಪ್ರಸಿದ್ಧ ಹಾಡುಗಾರ ಮೌಜುದ್ದೀನ್ ಅವರ ಸಂಪರ್ಕಕ್ಕೆ ಗೌಹರ್ ಬಂದದ್ದೇ ಅವಳು ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳಲು ಪ್ರಭಾವಿಸಿತು. ಹಾಗೆಯೇ, ಅವಳು ಮುಂದೆ ಠುಮ್ರಿಗಳ ರಾಣಿಯಾಗಿ ಮೆರೆಯಲು ಸಾಧ್ಯವಾಯಿತು.

ಠುಮ್ರಿಗಳ ಬಗ್ಗೆ ಪರಿಚಯಿಸುವಾಗ ಅದರ ಮೂಲವನ್ನು ಹರಿವಂಶ ಪುರಾಣದಲ್ಲಿಯೇ ಗುರುತಿಸುವುದು (ಕ್ರಿ.ಶಕ. 200) ಅದರ ಪರಂಪರೆಯ ಬಗ್ಗೆ ವಿವರವಾದ ವಿಶ್ಲೇಷಣೆ ಲೇಖಕರ ಸೋಪಜ್ಞತೆಗೆ ಸಾಕ್ಷಿಯಾಗಿದೆ.

ಭಾರತದಾದ್ಯಂತ ಗೌಹರಳಿಗೆ ಅಮಂತ್ರಣಗಳು ಬಂದವು. ಬಿಡುವಿಲ್ಲದ ಅವಳು ಕಾರ್ಯಕ್ರಮಗಳನ್ನು ನೀಡುತ್ತಾ ಸತತವಾಗಿ ಪ್ರವಾಸದಲ್ಲಿ ತೊಡಗಿಕೊಳ್ಳುತ್ತಾಳೆ. ಕರ್ನಾಟಕ ಸಂಗೀತದ ಕೇಂದ್ರವಾದ ಮದರಾಸಿಗೂ ಅವಳ ಖ್ಯಾತಿ ಹಬ್ಬಿ ಅಲ್ಲಿಂದ ಗೌಹರ್‍ಳಿಗೆ ಆಮಂತ್ರಣ ಬರುತ್ತದೆ. ಮದರಾಸಿನಲ್ಲಿ ವೀಣಾ ಧನಮ್ಮಾಳ್, ಮತ್ತು ದೇವದಾಸಿ ಸೇಲಂ ಗೋದಾವರಿಯರ ಸಂಪರ್ಕಕ್ಕೆ ಬರುತ್ತಾಳೆ. ದನಮ್ಮಾಳ್‍ಳಿಂದ ತ್ಯಾಗರಾಜ ಕೀರ್ತನೆಯನ್ನು ಕಲಿಯುತ್ತಾಳೆ. ಇದರಿಂದ ಅವಳಿಗೆ ತನ್ನ ಘರಾನಾದ ಬಗ್ಗೆ ಯಾವುದೇ ಮಡಿವಂತಿಕೆಯಾಗಲೀ, ಪೂರ್ವ್ರಾಗ್ರಹವಾಗಲೀ ಇರಲಿಲ್ಲ ಎನ್ನುವುದು ತಿಳಿಯುತ್ತದೆ. ಕರ್ನಾಟಕ ಸಂಗೀತದ ಐತಿಹ್ಯವೆಂದೇ ಪ್ರಸಿದ್ಧರಾದ ಅರಿಯಾಕುಡಿ ರಾಮನುಜ ಅಯ್ಯಂಗಾರರಂತಹವರೂ ಅವಳಿಂದ ಕೃಷ್ಣ ಭಜನೆ ಕಲಿತುಕೊಳ್ಳಲು ಉತ್ಸುಕರಾಗುತ್ತಾರೆ. ಆಗ ಅವರಿಗೆ ಕೃಷ್ಣನ ಕುರಿತಾದ ಅನೇಕ ಹಾಡುಗಳನ್ನು ಕಲಿಸುತ್ತಾಳೆ. ಇಬ್ಬರೂ ಕೃತಾರ್ಥರಾಗುತ್ತಾರೆ. ಇದು ಇಬ್ಬರು ಶ್ರೇಷ್ಠ ಗಾಯಕರ ದೊಡ್ಡತನವನ್ನು ತೋರಿಸುತ್ತದೆ.  ತನ್ನ ಕಾಲದ ಉಳಿದ ಉಸ್ತಾದರಂತಲ್ಲದೇ, ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದ ಅವಳ ಈ ಗುಣವೇ ಅವಳನ್ನು ಎತ್ತರದ ಪೀಠದಲ್ಲಿ ಕುಳ್ಳಿರಿಸಿತು. ಅವಳ ಅಲೌಕಿಕ ಸೌಂದರ್ಯವೂ, ವರ್ಚಸ್ಸೂ ಅವಳ ಔನ್ನತ್ಯವನ್ನು ಹೆಚ್ಚಿಸಿದವು. ಇಲ್ಲದಿದ್ದರೆ ಸಾಮಾಜಿಕ ಅಸ್ಮಿತೆಯೇ ಪ್ರಧಾನವಾದ ಈ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಒಬ್ಬ ಗಣಿಕೆಗೆ ಇಂತಹ ಸ್ಥಾನವೊಂದು ದೊರೆಯುವುದು ದುಸ್ತರವಾಗುತ್ತಿತ್ತು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಈ ಎಲ್ಲಾ ಸಂಗತಿಗಳನ್ನೂ ಅವಳ ಕಾಲದಲ್ಲಿ ಪ್ರಕಟವಾಗುತ್ತಿದ್ದ ಪ್ರಮುಖ ಪತ್ರಿಕೆಗಳು ಮತ್ತು ಸಂಗೀತ ಪತ್ರಿಕೆಗಳನ್ನೆಲ್ಲಾ ಶೋಧಿಸಿ ಕಲೆಹಾಕಿ ಅದರಲ್ಲಿನ ಅವಳ ಬಗೆಗಿನ ಬಹಳ ಅಪರೂಪದ ಸುದ್ದಿ ವಿವರಗಳನ್ನು ಲೇಖಕರು ದಾಖಲು ಮಾಡಿರುವುದು ಅನನ್ಯವಾದ ಸಂಗತಿಯಾಗಿದೆ.

1902 ಗೌಹರಳ ಸಂಗೀತ ಯಾತ್ರೆಯಲ್ಲಿ ಬಹಳ ಮಹತ್ವದ ವರುಷ. ಭಾರತಕ್ಕೆ ಗ್ರಾಮೋಫೋನ್ ಬಂದ ಕಾಲ ಅದು. ಥಾಮಸ್ ಆಲ್ವಾ ಎಡಿಸಿನ್ ಗ್ರಾಮೋಫೋನ್ ಆವಿಷ್ಕಾರಕ್ಕೆ ಪ್ರಾರಂಭಿಸಿದುದರಿಂದ ಹಿಡಿದು ಅದರ ವೈಜ್ಞಾನಿಕ ಪರಿಕಲ್ಪನೆಗಳೆಲ್ಲಾ ಸಾಕ್ಷಾತ್ಕಾರವಾಗುವ ವರೆಗಿನ, ಅದು ಪಡೆದು ಕೊಂಡ ಸಂಶೋಧನೆಯ ವಿವಿಧ ಆಯಾಮಗಳನ್ನು ಕೃತಿಯಲ್ಲಿ ಕೊಡಲಾಗಿದೆ. ಇದಕ್ಕಾಗಿ ಲೇಖಕರು ಜರ್ಮನಿಗೆ ತೆರಳಿ ಇದರ ಅಭ್ಯಾಸ ಮಾಡಿರುವುದು ಅವರ ಸಂಶೋಧನೆಯ ಸ್ವರೂಪದ ಬಗೆಗೆ ಬೆರಗು ಹುಟ್ಟಿಸುತ್ತದೆ.

ಧೋ ಧೋ ಸುರಿಸುತಿದೆ ಮೇಘ,

ಸುಳಿಯುತಿದೆ ಮಿಂಚು ಅಲ್ಲಲ್ಲಿ

ಫಳಕ್ಕೆಂದು  ಬಾರಿ ಬಾರಿ

ನನ್ನೊಡನೆ ಹಾಡ ಗುನುಗುನಿಸು ಪ್ರಿಯನೇ

ನಿದ್ದೆ ಬಾರದು ನಿನಗೆ

ಅದಕೇ ಕಾಡುವೆ ನನಗೆ

ಹೇಳು ಪ್ರಿಯನೇ

ಇದೇನು

ಸುಸ್ವರ ಸಂಗೀತ ತಾಳವೋ

ಧೋಧೋ ಮಳೆಯ ಮೇಳವೋ  ( ಗ್ರಾಮೋಫೋನ್ ಮುದ್ರಿಕೆಗೆ ಹಾಡಿದ  ಸುರ್ ಮಲ್ಹಾರ್ ರಾಗದ ಒಂದು ಹಾಡು)

ಅವಳ ಹಾಡನ್ನು ಮುದ್ರಿಸಿ ಕೊಳ್ಳಲು ಬಂದ ಆ ವಿದೇಶೀ ಅಧಿಕಾರಿಗೆ ಈ ಹಾಡಿನ ರಾಗವಾಗಲೀ, ಅದರ ಅರ್ಥವಾಗಲೀ ಮುಖ್ಯವಾಗಿರಲಿಲ್ಲ. ಅವಳ ಕಂಚಿನ ಕಂಠದ ಏರಿಳಿತಗಳು ಮಾತ್ರ ಮುಖ್ಯವಾಗಿದ್ದವು.

1902 ನವೆಂಬರ 8 ಗೌಹರಳ ಸಂಗೀತದ ಬದುಕನ್ನೇ ಬದಲಾಯಿಸಿತು. ಭಾರತದಲ್ಲಿ ಮೊತ್ತಮೊದಲು ಅವಳ ದನಿ ಗ್ರಾಮೋಫೊನ್ ಮುದ್ರಿಕೆಯ ಒಳಗೆ ದಾಖಲಾಯಿತು. ಅಂದಿನ ಕಾಲಕ್ಕೇ ಮೊದಲ ರೆಕಾರ್ಡಿಂಗ್‍ಗೆ ಅವಳು ಬೇಡಿದ ಹಣ ರೂ 3000 ಗಳು. ರೆಕಾರ್ಡಿಂಗ್ ಕಂಪನಿಯು ಇದಕ್ಕೆ ಒಪ್ಪಿಕೊಂಡು ಭಾರತದಲ್ಲಿ ಗ್ರಾಮೋಫೊನ್ ರೆಕಾರ್ಡಿಂಗ್ ಪರಂಪರೆಯನ್ನು ಹರಿಯಬಿಟ್ಟಿತು. ಪ್ರಾರಂಭದಲ್ಲಿ ಮೂರು ನಿಮಿಷಗಳವರೆಗೆ ಮಾತ್ರ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲು ಸಾದ್ಯವಾಗುತ್ತಿತ್ತು. ಪ್ರಾರಂಭದಿಂದ ಹಿಡಿದು ಒಟ್ಟು ಅವಳ ಜೀವಿತ ಕಾಲದಲ್ಲಿ ರೆಕಾರ್ಡ್ ಆದ ಅವಳ ಹಾಡುಗಳ ಸಂಖ್ಯೆ ಸು. 166 (ಮುಂದೆ ಎಲ್.ಪಿ. ರೆಕಾರ್ಡ್ ಗಳನ್ನೂ ಸೇರಿ) ಇದರಲ್ಲಿ ದ್ರುಪದ್, ಖಯ್ಯಾಲ್, ದಾದ್ರ ಮತ್ತು ಠುಮ್ರಿ ಮುಂತಾದ ಹಿಂದೂಸ್ಥಾನಿ ಸಂಗೀತದ ಎಲ್ಲಾ ಪ್ರಭೇದಗಳಲ್ಲಿಯೂ ಹಾಡಿದುದಲ್ಲದೇ ಕರ್ನಾಟಕ ಸಂಗೀತ ಮತ್ತು ಇಂಗ್ಲಿಷ್ ಹಾಡುಗಳನ್ನೂ ಹಾಡಿ, ಹಾಡಿನ ವೈವಿಧ್ಯಕ್ಕೆ ಹೆಸರಾದಳು.

ವಿಕ್ಟೋರಿಯನ್ ನೈತಿಕ ಪರಿಕಲ್ಪನೆಗಳಿಗೆ ಬಲಿಯಾದ ಗಣಿಕೆಯರ ನಾಚ್ ಪದ್ಧತಿಗಳನ್ನು ರದ್ದುಗೊಳಿಸಿದ್ದರಿಂದಾಗಿ ಕೆಲವು ಗಣಿಕೆಯರು ಬೀದಿ ಸೂಳೆಯರಾಗಲು ಕಾರಣವಾದ ಬ್ರಿಟಿಷ್ ಸರ್ಕಾರದ ಪೂರ್ವಗ್ರಹವನ್ನೂ ಈ ಕೃತಿ ಬಯಲಾಗಿಸಿದೆ. ಗೌಹರ್ ಭಾರತದ ಎಲ್ಲಾ ರಾಜಮನೆತನದೊಂದಿಗೂ ಸಂಪರ್ಕವಿದ್ದ ಖ್ಯಾತ ಗಣಿಕೆಯಾದ್ದರಿಂದ ಅವಳಿಗೆ ಬ್ರಿಟಿಷ್ ಸರ್ಕಾರದ ಹೊಸ ನೀತಿಗಳು ನೇರವಾಗಿ ತಟ್ಟದೇ ಹೋಗಿರಬಹುದು.

ಗೌಹರ್ ಜಾನ್ ಬಹಳ ಧೈರ್ಯದ ಅಷ್ಟೇ ಧಾಷ್ಟ್ರ್ಯದ ಮಹಿಳೆಯಾಗಿದ್ದಳು. ವ್ಯವಾಹಾರದ ಲೆಕ್ಕಾಚಾರಗಳಲ್ಲಿ ಅಷ್ಟೇ ಕರಾರುವಕ್ಕಾಗಿ ನಡೆದುಕೊಳ್ಳುತ್ತಿದ್ದಳು. ಅವಳಿಗೆ ಯಾರ ಮುಲಾಜೂ ಇರಲಿಲ್ಲವೆನ್ನುವುದುಕ್ಕೆ ಗಾಂಧೀಜಿಯ ಜೊತೆಗಿನ ಒಂದು ಘಟನೆಯನ್ನು ಲೇಖಕರು ಉಲ್ಲೇಖಿಸುತ್ತಾರೆ. ಗೌಹರ ಜಾನಳ ಪ್ರಸಿದ್ಧಿ ಹಾಗೂ ಶ್ರೀಮಂತಿಕೆಯನ್ನು ಕೇಳಿದ ಗಾಂಧೀಜಿ ಸು. 1920ರ ವೇಳೆಗೆ ಸ್ವದೇಶೀ ಚಟುವಟಿಕೆಗಳಿಗಾಗಿ ಹಣ ನೀಡಬೇಕೆಂದು ಗೌಹರ್ ಳನ್ನು ಕೇಳುತ್ತಾರೆ. ತನ್ನ ಸಂಗೀತ ಕಾರ್ಯಕ್ರಮದ ಮೂಲಕ ಹಣ ಸಂಗ್ರಹಿಸಿಕೊಡುವುದಾಗಿ ಒಪ್ಪಿದ ಗೌಹರ್ ಗಾಂಧೀಜಿಯವರು ಕಚೇರಿಯಲ್ಲಿ ಉಪಸ್ಥಿತಿರಿರುವುದಾಗಿ ಮಾತು ಕೊಟ್ಟರೆ ಮಾತ್ರ ಸಾದ್ಯವಾಗುವೆಂದು ಷರತ್ತು ಹಾಕುತ್ತಾಳೆ. ಕಾರ್ಯಕ್ರಮದ ದಿನ ಟಿಕ್ಕೆಟ್ಟುಗಳಲ್ಲಾ ಖಾಲಿಯಾಗಿ ಜನ ಕಿಕ್ಕಿರಿದು ಸೇರುತ್ತಾರೆ. ಗಾಂಧೀಜಿಯವರಿಗೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಿಲ್ಲದೇ ಅವರ ಪ್ರತಿನಿಧಿಯಾಗಿ ಮೌಲಾನಾ ಶೌಕತ್ ಅಲಿ ಎಂಬುವವರನ್ನು ಕಳುಹಿಸುತ್ತಾರೆ. ಆಗಿನ ಕಾಲಕ್ಕೇ ಸಂಗ್ರಹವಾದ ಹಣ ರೂ. 24000. ಕಾರ್ಯಕ್ರ್ರಮಗಳೆಲ್ಲಾ ಮುಗಿದ ಮೇಲೆ ಬಂದ ಶೌಕತ್ ಅಲಿಯವರ ಕೈಗೆ ಸಂಗ್ರಹವಾದುದರಲ್ಲಿ ಕೇವಲ ಅರ್ಧದಷ್ಟು ಹಣ ಅಂದರೆ ರೂ 12000 ಮಾತ್ರ ಕೊಡುತ್ತಾಳೆ. ಅವರು ಹೀಗೇಕೆ ಎಂದು ಕೇಳಿದಾಗ “ನಿಮ್ಮ ಗಾಂಧೀಜಿಯವರು ಕೊಟ್ಟ ಮಾತಿನಲ್ಲಿ ಅರ್ಧಮಾತ್ರ ಉಳಿಸಿಕೊಂಡರು ಅದಕ್ಕಾಗಿ” ಎಂದು ಹೇಳುತ್ತಾಳೆ. ಇದರಿಂದಾಗಿ ಗೌಹರ್‍ಳ ಎದೆಗಾರಿಕೆ ಮತ್ತು ಅವಳು ಏರಿದ ಸಾಮಾಜಿಕ ಪ್ರತಿಷ್ಠೆಯ ಎತ್ರರದ ದರ್ಶನವಾಗುತ್ತದೆ.

ಮಹಾರಾಷ್ಟ್ರಕ್ಕೆ ಅವಳು ಬಂದಾಗ ಅಲ್ಲಿನ ಸಂಗೀತ ಹಾಗೂ ನಾಟಕ ಕ್ಷೇತ್ರದ ದಿಗ್ಗಜರುಗಳಾದ ಬಾಲ ಗಂಧರ್ವ, ಸವಾಯಿ ಗಂಧರ್ವ, ದೀನಾನಾಥ್ ಮಂಗೇಶ್ಕರ್ ಮುಂತಾದವರ ಸಂಪರ್ಕಕ್ಕೆ ಬರುತ್ತಾಳೆ. ಬಾಲಗಂಧರ್ವರು ಅವಳ ಹಾಡುಗಳ ಮಟ್ಟುಗಳನ್ನು ತಮ್ಮ ಮರಾಠಿ ನಾಟಕದಲ್ಲಿ ಬಳಸಿಕೊಂಡ ಕಾರಣಕ್ಕೆ ಅವರನ್ನು ಅವಳು ತರಾಟೆಗೆ ತೆಗೆದುಕೊಂಡ ಸಂಗತಿಯನ್ನು ಲೇಖಕರು ಉಲ್ಲೇಖಿಸುತ್ತಾರೆ.

ಅವಳ ಸಂಪರ್ಕಕ್ಕೆ ಬಂದರೆನ್ನಲಾದ ಪ್ರಸಿದ್ಧ ಸಂಗೀತಗಾರರು ಫಯ್ಯಾಜ್ ಖಾನ್, ಕರೀಂ ಖಾನ್, ವಿಷ್ಣು ನಾರಾಯಣ ಭಾತಖಂಡೆ, ರಾಮಪುರದ ಶಹಜಹಾನ್ ಎಂದೇ ಪ್ರಿಸಿದ್ಧರಾದ ನವಾಬ್ ಹಮೀದ್ ಅಲಿ ಖಾನ್ ಮುಂತಾದವರು. ಈ ಎಲ್ಲ ವಿವರಗಳು ಆ ಕಾಲದ ಸಾಂಸ್ಕೃತಿಕ ಚರಿತ್ರೆಯನ್ನು ಮರುನಿರ್ಮಾಣ ಮಾಡುವಲ್ಲಿ ಸಹಕರಿಸುತ್ತದೆ.

ಗಜಲ್ ರಾಣಿಯೆಂದೇ ಪ್ರಸಿದ್ಧಳಾದ ಬೇಗಂ ಅಖ್ತರ್ ಳ ಪ್ರತಿಭೆಯನ್ನು ಮೊದಲು ಗುರುತಿಸಿ ಅವಳ ಸಂಗೀತದ ಆಸಕ್ತಿಗೆ ನೀರೆರೆದು ಪೋಷಿಸಿದವಳೆ ಗೌಹರ್. ಹಾಗೆಂದು ಬೇಗಂ ಅಖ್ತರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಸಂಗತಿಯನ್ನು ಲೇಖಕರು ಗುರುತಿಸಿದ್ದಾರೆ.

ಸಂಗೀತ, ನಾಟ್ಯಗಳೇ ಮುಖ್ಯವಾದ ಈ ಕೃತಿಯಲ್ಲಿ ಸಾಂದರ್ಭಿಕವಾಗಿ ಬಂಗಾಳಿ ರಂಗಭೂಮಿ ಇತಿಹಾಸ ಮತ್ತು ಮರಾಠಿ ರಂಗಭೂಮಿಯ ಚಟುವಟಿಕೆಗಳೂ ದಾಖಲಾಗಿರುವುದು ವಿಶೇಷ.

ಹೈದರಾಬಾದ್ ನಿಜಾಮನಿಂದ ಆಮಂತ್ರಣ ಬಂದಾಗ ಅಲ್ಲಿಗೆ ಹೋಗಿ ಕಾರ್ಯಕ್ರಮ ನೀಡಿ ನವಾಬನನ್ನು ಸಂತೋಷಗೊಳಿಸಿದ ಸಂಗತಿ ಸಂಗತಿಯೂ ದಾಖಲಾಗಿರುವುದು ಭಾರತದ ಎಲ್ಲಾ ರಾಜಮನೆತನದ ಸಂಪರ್ಕ ಅವಳಿಗಿದ್ದಿತು ಎಂಬುದನ್ನು ಹೇಳುತ್ತದೆ.

ಭಾರತದ ಬ್ರಿಟಿಷ್ ಸರ್ಕಾರ ಕಲ್ಕತ್ತೆಯಿಂದ ದೆಹಲಿಗೆ ರಾಜಧಾನಿಯನ್ನು ಬದಲಾಯಿಸಿದಾಗ ಜರುಗಿದ ವಿಜೃಂಭಣೆಯ ಮಹೋತ್ಸವದಲ್ಲಿ, ಬ್ರಿಟಿಷ್ ದೊರೆ ಐದನೆಯ ಜಾರ್ಜ್ ಮತ್ತು ಅವನ ಕುಟುಂಬದ ದರ್ಬಾರಿನಲ್ಲಿ ಗೌಹರ್ ವಿಶೇಷ ಆಮಂತ್ರಿತಳಾಗಿ ತನ್ನ ಸಮಕಾಲೀನಳಾದ ಪ್ರಸಿದ್ಧ  ಹಾಡುಗಾರ್ತಿ ಜಾನಕಿ ಬಾಯಿಯೊಂದಿಗೆ ಹಾಡಿ ಕಾರ್ಯಕ್ರಮ ನಡೆಸಿಕೊಟ್ಟ ಹೆಮ್ಮೆಗೆ ಪಾತ್ರಳಾದ ಉಲ್ಲೇಖ ಅವಳು ಏರಿದ ಎತ್ತರವನ್ನು ತಿಳಿಸುತ್ತದೆ

ಗೌಹರ್ ಳಿಗೆ ಈ ಎಲ್ಲದರಿಂದ ಎಂತಹ ತಾರಾ ಮೌಲ್ಯ ಒದಗಿತೆಂದರೆ, ಆಸ್ಟ್ರಿಯಾದಿಂದ ಉತ್ಪಾದನೆಯಾಗುತ್ತಿದ್ದ ಬೆಂಕಿಟ್ಟಿಗೆಯ ಮೇಲೆ ಅವಳ ಮುಖ ಚಿತ್ರಗಳು ರಾರಾಜಿಸತೊಡುಗುತ್ತವೆ. ಅವಳ ಭಾವಚಿತ್ರದ ಪೋಸ್ಟರ್ ಕಾರ್ಡುಗಳು ಬಿಡುಗಡೆಯಾಗುವುದು ಅವಳ ಜನಪ್ರಿಯತೆಯನ್ನು ಸಾರುತ್ತವೆ.

ಕುದುರೆ ಸವಾರಿಯಂತಹ ವಿಶಿಷ್ಟ ಆಸಕ್ತಿಯೂ ಅವಳಿಗೆ ಇದ್ದಿತು, ಬಂಗಾಳದ ಜನನಿಬಿಡ ರಸ್ತೆಗಳಲ್ಲಿ ವೇಗವಾಗಿ ಕುದುರೆ ಸಾರೋಟಿನಲ್ಲಿ ಓಡಾಡುತ್ತಿದ್ದ ಅಪರೂಪದ ಮಹಿಳೆಯಾಗಿದ್ದಳು ಅವಳು ಒಮ್ಮೆ ಹೀಗೆ ಹೋಗುತ್ತಿದ್ದಾಗ ಬ್ರಿಟಿಷ್ ಅಧಿಕಾರಿಯೊಬ್ಬ, ಯಾರೋ ರಾಜ ಮನೆತನದವರಿರಬೇಕೆಂದು ತನ್ನ ಹ್ಯಾಟ್ ತೆಗೆದು ಮರ್ಯಾದೆ ಸೂಚಿಸಿದನಂತೆ. ಆನಂತರ ನಿಜ ಗೊತ್ತಾದಾಗ ಗೌಹರಳಿಗೆ ಸಾವಿರ ರೂ ದಂಡ ತೆರಬೇಕಾಗಿ ಬಂದಿತಂತೆ. ವಜ್ರ ವೈಢೂರ್ಯ, ಮಹಲುಗಳು, ಆಳು, ಕಾಳು ಎಂದು ಮಹಾರಾಣಿಯಂತೆಯೇ ಮೆರೆಯುತ್ತಿದ್ದ ಅವಳಿಗೆ ಅದು ದೊಡ್ಡ ಮೊತ್ತವೇನೂ ಆಗಿರಲಿಕ್ಕಿಲ್ಲ. ಈ ಉಲ್ಲೇಖ ಅವಳ ದರ್ಪ ಮತ್ತು ಶ್ರೀಮಂತಿಕೆಯನ್ನು ಬಯಲಾಗಿಸುತ್ತದೆ.

ಅವಳು ಎಷ್ಟು ಶ್ರೀಮಂತೆಯಾಗಿದ್ದಳೆಂದರೆ ವಜ್ರ, ವೈಢೂರ್ಯಗಳನ್ನು ತೊಟ್ಟು ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭಗಳಲ್ಲಿ ಬಂದೂಕು ಧಾರಿ ಸೈನಿಕರು ಅಕ್ಕ ಪಕ್ಕ ಅವಳಿಗೆ ಕಾವಲು ನಿಲ್ಲುತ್ತಿದ್ದರಂತೆ.

ಹೀಗೆ ಮರೆಯುತ್ತಿದ್ದ ಗೌಹರ್ ಳ ಬದುಕಿನಲ್ಲಿ ಕಾಲ ನಿಧಾನವಾಗಿ ಕಾಲೂರುತ್ತಿದ್ದ. ವಯಸ್ಸಾಗುತ್ತಾ ಬಂದಂತೆ ಅವಳ ಬೇಡಿಕೆ ಕಡಿಮೆಯಾಯಿತು. ಐಷಾರಾಮದ ವಿಲಾಸೀ ಬದುಕಿನ ಶೋಕಿಯಿಂದ, ಕೀರ್ತಿಯ ಮದದಿಂದ, ನಂಬಿದವರು ಮಾಡಿದ ಮೋಸದಿಂದ ಅವಳಿಗೆ ಇಳಿಗಾಲ ಪ್ರಾಪ್ತವಾಯಿತು. ತನ್ನ ಆಸ್ತಿ ಪಾಸ್ತಿಗಳನ್ನು ಮಾರಿಕೊಳ್ಳುವ ಹಂತವನ್ನು ತಲಪಿದಳು. ತನ್ನ ಕೊನೆಗಾಲಕ್ಕೆ ಮೈಸೂರಿನ ಕೃಷ್ಣರಾಜ ಒಡೆಯರ ಆಸ್ಥಾನದಿಂದ ಕರೆ ಬಂದಾಗ ಕೇವಲ ಐನೂರು ರೂಗಳಿಗೆ ಆಸ್ಥಾನ ಸಂಗೀತ ಕಲಾವಿದಳಾಗಿ ಸೇರಿಕೊಳ್ಳುತ್ತಾಳೆ. ಯಾರೂ ಇಲ್ಲದ ಖಿನ್ನತೆಗೆ ಒಳಗಾಗುತ್ತಾಳೆ. ಕಾಸು ಕಾಸಿಗೂ ಹೋರಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಎರಡು ವರ್ಷಗಳ ಕಾಲ ಮೈಸೂರಿನಲ್ಲಿದ್ದು  ಕೊನೆಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ತನ್ನ ಐವತ್ತನೇ ವರುಷದಲ್ಲಿ ಅಲ್ಲ್ಲಿಯೇ ಅಸುನೀಗುತ್ತಾಳೆ (1930).

ಇಪ್ಪತ್ತನೇ ಶತಮಾನ ಕಂಡ ಈ ಅದ್ಭುತ ಕಲಾವಿದಳ ಬಗ್ಗೆ ಸ್ಮಾರಕಗಳೇನಾದರೂ ಇರಬಹುದೆಂದು ಲೇಖಕರು ಮೈಸೂರಿನಲ್ಲಿ ಶೋಧಿಸುತ್ತಾ, ಮೈಸೂರಿನಲ್ಲಾಗಲೀ, ಕಲ್ಕತ್ತೆಯಲ್ಲಾಗಲೀ ಅಂತಹ ಯಾವ ಸ್ಮಾರಕವೂ  ಇಲ್ಲವೆಂದು ಖೇದ ಪಡುತ್ತಾರೆ.

ಈ ಪುಸ್ತಕ ಬರೆಯುವುದರ ಮೂಲಕ ಗೌಹರ್ ಜಾನ್‍ಳಿಗೆ ನಿಜವಾದ ಸ್ಮಾರವನ್ನು ಕಟ್ಟಿದ ಶ್ರೇಯಸ್ಸು ಲೇಖರಾದ ವಿಕ್ರಂ ಸಂಪತ್ ಅವರಿಗೆ ಸೇರುತ್ತದೆ. “ಮೈ ನೇಮ್ ಈಸ್ ಗೌಹರ್ ಜಾನ್ “ ಎಂಬ ದೊಡ್ಡ ದನಿಯೊಂದು ಸಂಗೀತ ಕ್ಷೇತ್ರದ ನಿಬಿಡತೆಯಲ್ಲಿ ಕಳೆದು ಹೋಗದ ಹಾಗೆ ಅದನ್ನು ನಿಜವಾಗಿ ಅಜರಾಮರಗೊಳಿಸಿದ್ದಾರೆ. ಕನ್ಹಯ್ಯನ ಭಕ್ತಿ ಶೃಂಗಾರದ ಹಾಡುಗಳನ್ನು ಹಾಡಿದ, ನೃತ್ಯ ಗೈದ ಸಾಮ್ರಾಜ್ಞಿಯನ್ನು ರಸಿಕರ ಮನದಲ್ಲಿ ಮತ್ತೆ ಪುನರ್ ಪ್ರತಿಷ್ಠ್ಠಾಪಿಸಿದ್ದಾರೆ. ಈ ಕೃತಿ ಸಾಂಸ್ಕøತಿಕÀ ಚರಿತ್ರೆಯ ಮರುಸೃಷ್ಟಿಗೊಂದು ಉತ್ತಮ ಉದಾಹರಣೆಯೂ ಆಗಿದೆ.

‍ಲೇಖಕರು avadhi

May 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Jayalaxmi Patil

    ಗೌಹರ್ ಜಾನ್ ಎಂಬ ಹೆಸರಿನ ಕುರಿತು ನನಗೆ ಯಾವಾಗಲೂ ಗೊಂದಲ. ಕಾರಣ ಅದೇ ಕಾಲದಲ್ಲಿ ನಮ್ಮ ಕರ್ನಾಟಕದಲ್ಲೂ ಸಂಗೀತಗಾರ್ತಿಯೂ ನಟಿಯೂ ಆಗಿದ್ದ ಒಬ್ಬ ಗೌಹರ್ ಇದ್ದಿದ್ದು. ಆಕೆ ಮುಂದೆ ಬಾಲಗಂಧರ್ವರನ್ನು ಎರಡನೇ ಹೆಂಡತಿಯಾಗಿ ಕೈ ಹಿಡಿಯುತ್ತಾಳೆ.
    ಗೌಹರ್ ಜಾನ್ ಬಗ್ಗೆ ಗೂಗಲ್ಲಿನಲ್ಲಿ ಓದಿದ್ದೆಷ್ಟೊ ಅಷ್ಟೆ ಪರಿಚಯವಿತ್ತು. ನಿಮ್ಮ ಈ ಬರಹದಿಂದಾಗಿ ‘ಮೈ ನೇಮ್ ಇಸ್ ಗೌಹರ್ ಜಾನ್’ ನ್ನು ಪೂರ್ತಿಯಾಗಿ ಓದುವ ಬಯಕೆ.ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಗಿರಿಜಾ.

    ಪ್ರತಿಕ್ರಿಯೆ
  2. Girija

    ಧನ್ಯವಾದಗಳು ಜಯಲಕ್ಷ್ಮೀ. ಇದನ್ನು ಅನುವಾದಿಸಬೇಕೆಂದು ಬಸು ಅವರು ಕೇಳುತ್ತಿದ್ದಾರೆ. ಇದು ತುಂಬ voluminous ಆದ ಕೃತಿ ಪರ್ಮಿಷನ್ ಸಿಕ್ಕರೆ ಪ್ರಯತ್ನಿಸುವೆ ಎಂದು ಹೇಳಿರುವೆ.

    ಪ್ರತಿಕ್ರಿಯೆ
  3. Dr K Premakumara

    ವಿಕ್ರಂ ಸಂಪತ್ ಅವರಿಗೆ ಮೊದಲಿಗೆ ಸಾಷ್ಟಾಂಗ ಪ್ರಣಾಮಗಳು.ಎಂಥ ಅದ್ಭುತ ಸಂಶೋಧನೆ. ಪುಸ್ತಕ ಓದಬೇಕೆಂಬ ಕುತೂಹಲ ಹೆಚ್ಚಾಯಿತು. ಅದಕ್ಕೆ ಕಾರಣೀಭೂತರಾದ ಗಿರಿಜಾ ಶಾಸ್ತ್ರೀ ಅವರಿಗೆ ಅಭಿನಂದನೆಗಳು.
    ಡಾ.ಪ್ರೇಮಕುಮಾರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: