ಅಮ್ಮ ಅರಳಿದ್ದು…

 ಗೀತಾ ನಾರಾಯಣ್

ಸಗ್ಣಿಬಗ್ಡ ಬಳಿಯಲು ಪೌರ್ಣಮಿ ಬರಬೇಕಿತ್ತು….ಆಗ ಅಗಲನೆಯ ಬಂದ್ರೆ ಪರ್ಕೆ ಕಟ್ಟುವ ಕೆಲಸ ನಡೆಯೋದು ಮನೆಯ ದೊಡ್ಡ ಹಜಾರದಲ್ಲಿ. ತಿಂಗ್ಳು ಬೆಳುಕ್ನಗೆ ಅರ್ಧವತ್ತಿಂತಕ ಕಣ ಬಳ್ಯರು ಅಪ್ಪ, ದೊಡ್ಡಪ್ಪ ಮತ್ತೆ ನಮ್ಮ ಎಲೆಬಳ್ಳಿ ಕಟ್ಟಕೆ ಬರ್ತಾ ಇದ್ದ ದ್ಯಾಮಣ್ಣ ಎಲ್ಲರೂ ಸೇರಿ. ಚೆನ್ನಾಗಿ ಕಣ ಬಿಸಿಲುಂಡ ಮೇಲೆ ರಾಗಿ ಮೆದೆ ರೋಂಡ್ಗಲ್ಲು ಕಣಕ್ಕೆ ನೆಂಟರಂತೆ ಬಂದು ಬಿಡೋವು. ಇಲ್ಲಿಂದ ಅಮ್ಮಂದಿರ ನಿಷ್ಠೆ ಆರಂಭವಾಗೋದು. ಅಡಿಗೆ ಮನೆ ಚಿಕ್ಮನೆ ಅರ್ಗು ಪೂರಾ ವಾಡೇವುಗಳು ಸಣ್ಣಂದವು, ದೊಡ್ಡಂದವು. ನಡ್ಮನೆಗೆ ಬಂದ್ರೆ ದೊಡ್ಡ ಕಣಜ. ಅಪ್ಪ ದೊಡ್ಡಪ್ಪ ಹೊಲದಲ್ಲಿ ಉಸಿರಾದರೆ ಅಮ್ಮ ದೊಡ್ಡಮ್ಮ ಮನೆಯ ಉಸಿರುಗಳು.

ಕಣ ಇಕ್ಕೆವ್ರೆ ಅಂದ್ರೆ ಕಣ್ಗಾಲ ಮುಗ್ಯತಕ ಬಲು ಬದ್ಕು. ಮೆದೆ ಬಡ್ದು, ರೋಂಡ್ಗಲ್ಗೆ ಎತ್ತೂಡಿ ಎಲ್ಲಾ ಹಸನಾಗಿ ಕಾಳುದ್ರಿ, ಉಲ್ಕೊಡ್ವಿ ಬಣ್ಬೆ ಆಕವಷ್ಟತ್ಗೆ ಒಂದತ್ತನ್ನೆಲ್ಡು ದಿನ ಆಗ್ತಾ ಇತ್ತು. ಮೇಟಿ ಸುತ್ತ ರಾಗಿ ರಾಶಿ ಬಿದ್ದು ಉವ್ವ, ಊದ್ಗಡ್ಡಿ ತಾಂಡು ರಾಶಿ ಪೂಜೆ ಮಾಡವತ್ಗೆ ಬೈಗಾಗದು. ಅಮ್ಮ ದೊಡ್ಡಮ್ಮ ದೊಡ್ಡಪ್ಪ ಅಪ್ಪ ನಾಕು ಜನರ ಕೈಯ್ಯಲ್ಲು ಮರ. ನಾವು ಬಿಟ್ಟ ಬಾಯಿ ಬಿಟ್ಕಂಡು ಇಡೀ ಕಣವನ್ನೇ ಸುತ್ತಿ ಹೊದ್ದವರಂತೆ ಬೆರಗಿನಿಂದ ನೋಡ್ತಾ ಕಣ ಬಿಟ್ಟು ಅಗುಲ್ತಾ ಇರ್ಲಿಲ್ಲ. ನಮ್ಮ ಹಳ್ಳಿಗಳಲ್ಲಿ ಅನೇಕರು ಕಣ ಕಡ್ಯಾಗುತ್ತೆ ಅಂತ ಸುತ್ತ ಬಂದು ಕೂತಿರೋರು. ರಾಶಿ ಪೂಜೆ ಮುಗಿದ ಮೇಲೆ ಬಂದ ಎಲ್ಲರಿಗೂ ತುಂಬಿ ವಳ್ಳಂಗೆ ಒಂದೊಂದ್ಸಲ ರಾಗಿ ಮಡ್ಲುದುಂಬರು. ಆಮೇಲೆ ರಾಗಿ ವಾಡೇವು, ಕಣಜಕ್ಕೆ ತುಂಬಿ ಕಣ ಕಡ್ಯಾಗದು. ಅದೊಂದು ಶ್ರಮಸುಗ್ಗಿ ಮುಗಿದು ಮುಂದ್ಲೊರ್ಷ ಹೊನ್ನಾರೂಡತಕ ಅಸಿಟ್ಗೆ ಬಂಗ ಇಲ್ಲ. ಕೊಟ್ಟು ತಂದ ರಾಗಿ ಬೆಳೆಯದ ಎಲ್ಲಾರ್ ಮನ್ಗು ರಾಗಿದಾನ ನಡೀತಾನೆ ಇರೋದು. ಪಲ್ಲದ ಚೀಲಗಳಿಗೆ ಅಳೆದು ತುಂಬುವಾಗ ಆರ್ ಸೇರು ಮುಗುದ್ಮೇಲೆ ಏಳು ಅಂತ ಎಣಿಸಿದ್ದು ಇವತ್ತಿಗೂ ನಾನು ಹುಟ್ಟಿ ಬೆಳೆದ ಮನೆಯಲ್ಲಿ ನೋಡಿಲ್ಲ…ಏಳ್ನೇ ಸೇರು ಅಳಿವಾಗ ಎಚ್ಬರ್ಲಿ ಅನ್ನೋರು.

ನಾನು ಹೈಸ್ಕೂಲ್ ಗೆ ಬಂದ ಮೇಲೆ ಅದು ಹೆಚ್ಚಿ ಬರಲಿ ಧಾನ್ಯ ದಾನಕ್ಕೆ ಅನ್ನೋ ಸಾಂಕೇತಿಕ ಅರ್ಥ ಗೊತ್ತಾಗಿದ್ದು. ಒಟ್ಟು ಕುಟುಂಬ ಭಿನ್ನ ಮನಸೊಗರಿನ ಜನ ಇದ್ದ ಕಾರಣ ಅಮ್ಮ ಸರ್ವತ್ನಗ ನಮ್ಮುನ್ನ ಎಬ್ರುಸ್ಕಂಡೋಗಿ ಏನು ಇಲ್ಲದೆ ದುಡಿದೇ ತಿನ್ನುವ ಎಷ್ಟೋ ಮನೆಗಳಿಗೆ ಮನೆಯ ಯಾರ ಕಣ್ಗು ಬೀಳ್ದಂಗೆ ಕೊಡೋರು. ಇಂಥಾ ಅಮ್ಮನನ್ನು ಗಳಿಸಿದ ನಮಗೆ ಒಳ್ಳೆಯ ದಾರಿಗಳಲ್ಲಿ ನೆರಳಿಡಿಯಲು ಸಾಧ್ಯವಾಗಿರಬಹುದು. ಮನೆಲಿ ಯಾರ್ಗಾದ್ರು ಗೊತ್ತಾಗಿ ಕಂಡಾರ್ ಬಾಯ್ಗಿಕ್ತಳೆ ಮೂರೊತ್ತು ಅಂತ ಜಗಳ ಆದ್ರೆ ಅಮ್ಮನ ಬಾಯಲ್ಲಿ ಮತ್ತವರಿಗೆ ಕೇಳುವಂತೆ ಮೆತ್ತಗೆ ಮಾತೊಂದು ಬರೋದು “ಅನ್ನ ಆಕಿದ್ ಮನೆ ಕೆಡಲ್ಲ ಗೊಬ್ರ ಹಾಕ್ದೊಲ ಕೆಡಲ್ಲ” ಅಂತ. ಅಮ್ಮ ನಿಧಾನಕ್ಕೆ ಅಕ್ಷಿಯಲ್ಲಿ ಅಭ್ದಿಯಾಗತೊಡಗಿದ್ದು. ಅಪ್ಪ ಏಳು ಎಕರೆಗೆ ಕಬ್ಬು ಹಾಕಿ ಆಲೆಮನೆ ಆರಂಭಿಸಿ ಬೆಲ್ಲ ಮಾಡ್ಸೋಕೆ ಶುರುಮಾಡಿದ ಮೇಲೆ ಅಚ್ದೊಲೆ ಆರ್ತಿರ್ಲಿಲ್ಲ ಅಷ್ಟು ಬೇಸಿ ಬೇಸಿ ಕರಗುತ್ತಲೇ ಹೋದ್ರು.. ಕೃಷಿ ಕುಟುಂಬಗಳಲ್ಲಿ ಅಮ್ಮಂದಿರೇ ಮನೆಕೃಷಿಯ ಜೀವ ಬೆರಗುಗಳು.

ಎಲ್ಲವನ್ನೂ ತೂಗಿಸಿಕೊಂಡು ಹದವಾಗಿ ಮನೆಮನಸುಗಳನ್ನು ಕಾಯುವ ಅಮ್ಮಂದಿರುಗಳು ಮನೆತನವನ್ನು ದಿವಾಳಿಯಾಗದಂತೆ ಕಾಯುವಲ್ಲಿ ಮೊದಲಿಗರು. ನಾವು ಚಿಕ್ಕವರಿದ್ದಾಗ ವಾರುಕೊಂದ್ಸಲ ಸಿದ್ದಣ್ಣ ಪುಟ್ಟಮ್ಮ ಅಂತ ಬಟ್ಟೆ ಒಕ್ಕೊಡಕೆ ಬರೋರು. ಅಮ್ಮ ದೊಡ್ಡ ಸಿಬ್ಲು ತುಂಬಾ ಅಡ್ಗೆ ಮಾಡ್ಕಂಡು ಬುತ್ತಿ ತಗಂಡು ಮನೆಮಂದಿಯೆಲ್ಲರ ಮೈಲ್ಗೆಬಟ್ಟೆ ಗಂಟುಗಳ ಸಮೇತ ದೊಡ್ಡಳ್ಳಕ್ಕೆ ಹೊರಟ್ರೆ ಒತ್ಮುಣ್ಕದು ಮನೆ ಸೇರಕೆ. ನಾವು ಅಮ್ಮ ಪುಟ್ಟಮ್ಮ ಸಿದ್ದಣ್ಣ ನ ಹಿಂದೆ ಹೊರಟ್ರೆ ಅಳ್ಳುದ್ಗಡ್ಡೆಗಿರೊ ಹೂವು ಹಣ್ಣು ಏನು ಬಿಡ್ದಂಗೆ ಸಿದುಕ್ತಿದ್ವಿ. ಮಳ್ಳಿನ್ಮೇಲೆ ಅಲ್ಡಿದ್ ಬಟ್ಟೆ ಒಣುಗ್ದಂಗೊಣುಗ್ದಂಗೆ ಮಾಡ್ಸಿ ಕೂಡಿಕ್ಕೆಮ್ತಿದ್ವಿ. ಕಣ್ಗು ಕತ್ಲಾಗದು ಮನೆ ಸೇರವತ್ಗೆ. ಪುರ್ಸೊತ್ತೆ ಇಲ್ಲ ರೆಟ್ಮುರ್ಯಂಗೆ ಬಟ್ಟೆವಗುದ್ರು ಒಲೆ ಅಮ್ಮನೆ ಅಚ್ಬೇಕು ಬಂದು. “ಅಡ್ವಿ ಅಡ್ದಮ್ಮ ಮನೆ ಮಲ್ತಾಯಿ” ಅಂತ ಗಾದೆ ಇದೆ. ಹಾಗೆ ಮನೆಜನ ವಲ್ದಗ್ಳಿಂದ ಬಂದ್ಕೂಡ್ಲೆ ಕೋಲ್ಮ್ಯಾಗ್ಳುದು ಸುಡಾಮುದ್ದೆ ಗಂಗ್ಳಸೇರ್ಬೇಕಿತ್ತು. ಆಡೊಂದಗ್ಲು ಅಮ್ಮ ಮನೇಲಿ ಜೀತ ಮಾಡುದ್ರು ಕಡೇ ಮಾತು ನೆಳ್ಳಗ್ಳು ಬದುಕ್ಮಾಡದೇನು ಬಂಗ್ವ ಅನ್ನೋ ನಿಂದನೆಯೊಂದು ರಪ್ ಅಂತ ಅಪ್ಳುಸದು.

ಚಿತ್ರಕೃಪೆ: ಗೂಗಲ್

ಮನೆಗಳು ಎಷ್ಟೋ ಜನ ಅಮ್ಮಂದಿರಿಗೆ ನಿಟ್ಟುಸಿರನ್ನೆಂದೂ ಬಿಡಲಾಗದ ಸಹನೆ ಕಲಿಸಿವೆ. ಲೋಕದ ಅಗಣಿತ ಅಮ್ಮಂದಿರು ಹೀಗೆಯೇ ಎಲ್ಲವನ್ನೂ ನುಂಗಿಕೊಂಡು ಮನೆಮಕ್ಕಳುಗಂಡ ಎಂದೇ ತೇಯ್ದು ಹೋಗಿದ್ದಾರೆ. ಅಮ್ಮನೆಂದರೆ ಹಸಿವುಕಾಣದಂತೆ ಅಪ್ಪಿ ಮುಗಿಲಾದವಳು, ಅಪ್ಪನ ಸಿಟ್ಟು ನಮ್ಮತನಕ ಸಾಗದಂತೆ ತಾನೇ ಸುಟ್ಟುಕೊಂಡವಳು. ಅಲ್ಲಿ ಇಲ್ಲಿ ಮುಖಮುರಿದವರ ಅಪಶಕುನಗಳು ನಮ್ಮ ಗಂಡಮಕ್ಕಳ ಕಿವಿತಲುಪದಂತೆ ಸೋಲುತ್ತಲೇ ನಮ್ಮ ಗೌರವ ಕಾದವಳು. ಹುಲಿಹಣ್ಣುತಿಂದು ಬಾಯಿಮಸಿಯಂತಾದಾಗ ಕಾರಣಕೇಳದೆ ನಕ್ಕುಸುಮ್ಮನಾದವಳು. ಮನೆಗೇನು ಕೂಳಿಲ್ವ, ಬರ್ಬಂದಳಂಗೆ ಹುಲಿಹಣ್ ನುಂಗಕೋಗಿದೀಯ ಅಂತ ಅಗ್ದುರಿತಗಂಡು ಬೀಸಕೆ ಬಂದ ಅಪ್ಪನಿಗೆ ಅಡ್ಡಬಂದವಳು.

ಅಪ್ಪ ಹೊಲದ ದಾರಿ ಹಿಡಿದ ಮೇಲೆ ಸಣ್ಣಗೆ ‌ಸಗ್ಣೆಗೆ ಸಾವ್ರುಳ ಇದ್ರು ಮದ್ದೇನುಕ್ ಮರ್ಣ ಅಂತ ನಾಣ್ಣುಡಿ ಹೇಳಿ ಸಿಟ್ಟು ನುಂಗಿದವಳು. ಸಿದ್ದೇಮಣ್ಣಿನ ಸರಕ್ಕೆ ಬೆಳ್ಗಬೂದಿ ತರಲು ಹೊರಟ ಮೇಲೆ ಬಿಡುವೆಂದರೆ ಹೇಗಿರುತ್ತದೆಂದು ಮರೆತವಳು. ಸೌಳ್ ನೆಲ, ರಂಗಾಲೆಗುಂಡಿ ಎಲ್ಲವು ನಮಗೆ ನೈಜವಾದ ಆಪ್ತತೆಯನ್ನು ಇವತ್ತಿಗೂ ಮೆಚ್ಚಿ ಒಳಗೊಳ್ಳುವಂತೆ ಬೆಳೆಸಿದವಳು. ಅಮ್ಮ ವಿರಾಮದಲ್ಲಿ ಕುಳಿತು ನಕ್ಕದ್ದು ನೋಡೇ ಇಲ್ಲ. ಎಲ್ಲಾ ಮುಗಿಸಿ ಮನೆಯವರೆಲ್ಲ ಮಲಗಿದ ಮೇಲೆ ಮತ್ತೆ ಕೆಂಡದಲ್ಲಿ ಕೂಡೆಸ್ರು ಬೆಚ್ಕಿಕ್ಕಿ ಎಲ್ಡು ಜೋಳುದವೊ, ಸಜ್ಜೆವೊ ರೊಟ್ಟಿ ಬಡ್ದು ಸಾಲುಕ್ ಮನ್ಗಿದ್ ಮಕ್ಳು ಬಾಯ್ಗೆ ತುತ್ತಾಗಿ ಬರವು ರೊಟ್ಟಿ ತುಣ್ಕು.

ದೊಡ್ಡ ಹಜಾರದ ಮನೆಯ ಮುಂದೆ ಇದ್ದ ಮಹಾ ಬೇವಿನ ಮರದಲ್ಲಿ ನೀರ್ ಸೇದ ಅಗ್ದಗೆ ಉಯ್ಯಾಲೆ ಹಾಕಿ ದಿನವೂ ಉಗಾದಿ ತೋರಿಸಿದವಳು. ನಾವು ಜಂಪ್ ಹೊಡೆದು ಜೋರಾಗಿ ತೂಗಿಸಿಕೊಂಡು ಕಟ್ಟೆದಂಡೆ ಕಾಣ್ತು, ತಾತುಂಗುಡ್ಡೆ ಕಂಡ್ವು, ತೂಬ್ರೆಮರ್ದಗ್ಳವು ಹಣ್ಣು ಗೊಳ್ಳೆ ಕರುದ್ವು ಕಲ್ಲೊಲ್ದಗ್ಳು ಕಡ್ಲೇಗಿಡ ಬಾಯ್ ನೀರ್ ತರ್ಸಿವು ಅಲಲಾ ಕಲ್ಗದ್ದೆಗೆ ತೆನೆಮೇಲೆ ಕುಂತಿರ ಗಿಣಿಮೂತಿ ಕಾಣ್ತು ಹೀಗೆ ತರಾವರಿ ಮಾತಾಡ್ತಾ ಹಗ್ಲೆಲ್ಲಾ ಊಗಾಲೆ ಆಡ್ತಿದ್ವಿ‌. ಇವತ್ತು ಅಮ್ಮ ನಮ್ಮೊಳಗೆ ವಿಸ್ಮಯದ ದಿಬ್ಬಣ. ಅಮ್ಮನೆಂಬ ಅಮ್ಮನಿಗೆ ಏನೊಂದೂ ಕೊಡಲಾಗದು. ಅಮ್ಮ ಅಮ್ಮನೇ ಸರಿದೂಗಿಸಲು ಏನು ಸಿಕ್ಕಿಲ್ಲ. ಜಗತ್ತಿನಲ್ಲಿ ಎಲ್ಲಾ ಅಮ್ಮಂದಿರು ಗೌಣವೆಂದೂ ಆಗದ ಅಪೂರ್ವ ಮಹತ್ತಿನ ಚಲನೆಗಳು. ಅಪ್ಪನೊಳಗಿನ ಅಮ್ಮನಿಗೆ, ಅಮ್ಮನೊಳಗಿನ ಅಮ್ಮನಿಗೆ ಅನಂತ ಒಲುಮೆ ಸಲ್ಲುವುದು ನಿಲ್ಲದಿರಲಿ.

‍ಲೇಖಕರು nalike

May 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Poorvi

    Lekhana tumba vishistavagide. Nijakku Ammandiru maney usirugalu, ” ಲೋಕದ ಅಗಣಿತ ಅಮ್ಮಂದಿರು ಹೀಗೆಯೇ ಎಲ್ಲವನ್ನೂ ನುಂಗಿಕೊಂಡು ಮನೆಮಕ್ಕಳುಗಂಡ ಎಂದೇ ತೇಯ್ದು ಹೋಗಿದ್ದಾರೆ” idanttu 100kke 100 satya.

    ಪ್ರತಿಕ್ರಿಯೆ
    • Vinod

      ನಮ್ಮಮ್ಮ ಸರಿಯಾಗಿ ನಿದ್ದೆ ಮಾಡಿದ್ದೆ ನೋಡಿಲ್ಲ..

      ಪ್ರತಿಕ್ರಿಯೆ
  2. ಗೀತಾ ನಾರಾಯಣ್

    ಧನ್ಯವಾದಗಳು ಪೂರ್ವಿ ಅವರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: