ಗಿರಿಜಾ ಶಾಸ್ತ್ರಿ ಅಂಕಣ: ಡೋಂಟ್ ಕಾಂಪ್ಲಿಕೇಟ್ ಇಟ್, ನೋಡೋಣ ತಾಳು..

ವೈದ್ಯೋ ನಾರಾಯಣೋ ಹರಿಃ

ಗಿರಿಜಾ ಶಾಸ್ತ್ರಿ 

“ಡೋಂಟ್ ಕಾಂಪ್ಲಿಕೇಟ್ ಇಟ್, ನೋಡೋಣ ತಾಳು. ನನ್ನ ಪ್ರಕಾರ ನಿನಗೆ ಬಯಾಪ್ಸಿಯ ಅಗತ್ಯ ಇಲ್ಲ ಎನಿಸುತ್ತೆ. ತಾಳು ನೋಡೋಣ” ಎಂದವರೇ ಡಾ. ಸಂತೋಷ್ ಕನ್ಬೂರರು ತಮ್ಮ ಖಾಸಾ ರೇಡಿಯಾಲಜಿಸ್ಟ್ ರ ಬಳಿಗೆ ಒಂದು ಚೀಟಿ ಬರೆದು, ಫೋನಿನಲ್ಲಿ “ಇವಳಿಗೆ ನಿಜವಾಗಿ ಬಯಾಪ್ಸಿಯ ಅಗತ್ಯ ಇದೆಯಾ ಸ್ವಲ್ಪ ನೋಡಿ ಹೇಳೋ” ಎಂದು ಬಹಳ ಸಲುಗೆಯಿಂದ ಹಿಂದಿಯಲ್ಲಿ ಮಾತನಾಡಿದರು.

ಈ ವೈದ್ಯರು ಯಾವಾಗಲೂ ಹೀಗೆ ಎಲ್ಲಾ ಮುಗಿದೇ ಹೋಯಿತು ಎಂದು ಹೆದರಿಕೊಂಡು ಓಡಿ ಹೋದರೆ, ಭಯ ತುಂಬಿದ ಬಲೂನನ್ನು ಟುಸ್ಸೆನಿಸಿಬಿಡುತ್ತಾರೆ. ಬಳಿಗೆ ಬಂದವರು ನಿರಾಳವಾಗಿ ಉಸಿರಾಡುವಂತೆ ಮಾಡುತ್ತಾರೆ. ಮನೆಯ ಬಳಿಯಿರುವ ವೈದ್ಯರು ಏನನ್ನಾದರೂ ಹೆದರಿಸುವಂತೆ ತಪಾಸಣೆಗೆ  ಆದೇಶ ಕೊಟ್ಟರೆ, ಯಾವುದಕ್ಕೂ ಡಾ ಕನ್ಬೂರ್ ಅವರನ್ನು ಒಮ್ಮೆ ಕೇಳಿನೋಡೋಣ ಎನ್ನುವುದೇ ಮನೆಯವರೆಲ್ಲರ ಬಾಯಿಂದ ಬರುವ ಮೊದಲ ಮಾತು. ಅವರು ನಮಗಿಂತ ಹತ್ತು ಹನ್ನೆರೆಡು ಮೈಲಿ ದೂರವಿದ್ದರೂ, ಸಲಹೆ ಕೇಳಲು ಅಲ್ಲಿಗೆ ಓಡುವುದೇ. ಅವರದ್ದು ಅಷ್ಟು ಕರಾರುವಾಕ್ಕಾದ ರೋಗ ನಿರ್ಣಯ. ಕನ್ನಡದವರೆಂಬ ಆತ್ಮೀಯತೆ ಬೇರೆ. ಅವರ ಅತ್ತೆ ಶಾರದಾ (ಹೆಂಡತಿಯ ತಾಯಿ) ಖ್ಯಾತ ಗೈನಕಾಲಜಿಸ್ಟ್ ನಿವೃತ್ತರಾದನಂತರ ಕನ್ನಡ ಎಂ.ಎ. ಮಾಡಲು ಮುಂಬಯಿ ವಿ.ವಿ.ಯ ಕನ್ನಡ ವಿಭಾಗಕ್ಕೆ ಬಂದಿದ್ದರು. ಹೀಗಾಗಿ ನನ್ನ ಗಂಡನಿಗೆ ಖಾಸಾ ವಿದ್ಯಾರ್ಥಿ. “ಸರ್ ಮುಂಬಯಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಮಾಫಿಯಾ ಇದೆ. ನಿಮಗೆ ಯಾವ ರೀತಿಯ ವೈದ್ಯಕೀಯ ಸಲಹೆ ಬೇಕಿದ್ದರೂ ನನ್ನನ್ನು ಕೇಳಿ, ಸುಮ್ಮನೇ ನೀವೇ ಎಲ್ಲೆಲ್ಲೋ ಹೋಗಿಬಿಡಬೇಡಿ” ಎಂದು ಸಲಹೆ ಇತ್ತಿದ್ದರು. ಅಂದಿನಿಂದ ಕನ್ಬೂರ್ ಮತ್ತು ಶಾರದಾ ಅವರೇ ನಮಗೆ “ವೈದ್ಯ ನಾರಾಯಣ ಹರಿ”.

ಈಗ್ಗೆ ಹನ್ನೆರೆಡು ವರುಷಗಳ ಕೆಳಗೆ ಕಂಕುಳ ಕೆಳಗೆ ಎಡಭಾಗದಲ್ಲಿ ಏನೋ ಸ್ವಲ್ಪ ಗಟ್ಟಿಯಾಗಿರುವಂತೆ ಭಾಸವಾಗಿತ್ತು. ತಕ್ಷಣ ನಮ್ಮ ಮನೆಯ ಬಳಿಯೇ ಇರುವ ಪ್ರಸೂತಿ ತಜ್ಞರನ್ನು ಕಂಡೆ. ಅವರು ನನ್ನನ್ನು ಪರೀಕ್ಷಿಸಿದವರೇ “ಯಾವುದಕ್ಕೂ ಒಮ್ಮೆ ಮ್ಯಾಮೋ ಮಾಡಿಸಿಕೊಂಡುಬಿಡು” ಎಂದು ಸಲಹೆ ಇತ್ತರು. ಸರಿ ಮಾತುಂಗದಲ್ಲಿರುವ ಪ್ರಸಿದ್ಧ ಹಿಂದೂಜಾ ಆಸ್ಪತ್ರೆಗೆ ಓಡಿದೆ. ಬಹಳ ಸುಸಜ್ಜಿತವಾದ ಸ್ವಚ್ಛವಾದ, ಬಹು ದೊಡ್ಡ ಖಾಸಗಿ ಆಸ್ಪತ್ರೆಯದು. ದುಡ್ಡನ್ನೂ ಹಾಗೇ ಕೀಳುವ ಆಸ್ಪತ್ರೆ.  ನನಗೆ ಮ್ಯಾಮೋ ಮತ್ತು ಸೋನೋ ಮ್ಯಾಮೊ ಎರಡಕ್ಕೂ ಬರೆದುಕೊಟ್ಟಿದ್ದರು. ಹೊರಗೆ ಕಾಯುತ್ತಾ ಕುರ್ಚಿಯ ಮೇಲೆ ಕುಳಿತಿದ್ದಾಗ, ಪಕ್ಕದಲ್ಲಿದ್ದವಳೊಬ್ಬಳು ನನ್ನನ್ನು ನೋಡಿ “ಮ್ಯಾಮೋ ಈಸ್ ವೆರಿ ಪೇನ್ ಫುಲ್”  ಎಂದಳು. ಒಂದು ಕ್ಷಣ ಜಂಘಾಬಲವೇ ಉಡುಗಿ ಹೋಯಿತು. ನನ್ನ ಸರದಿ ಬಂದಾಗ ಹೆದರಿ ಹೆದರಿ ಅಡಿಯಿಟ್ಟೆ. ಒಂದು ಏಪ್ರನ್ ಕೊಟ್ಟು ಅದನ್ನು ತೊಟ್ಟುಕೊಳ್ಳಲು ಅಲ್ಲಿನ ಟೆಕ್ನಿಷಿಯನ್ ಆದೇಶಿಸಿದಳು. ಮ್ಯಾಮೋಗೆ ಒಳಗಾಗುವಾಗ, “ತುಂಬಾ ನೋಯುತ್ತದಂತೆ, ಹೌದಾ?” ಎಂದು ಅವಳನ್ನು ಕೇಳಿದೆ. ಮಿಷಿನ್ ಒಳಗೆ ಸ್ಥನವನ್ನು ಫಿಕ್ಸ್ ಮಾಡುತ್ತಾ ಆಕೆ “ನೋ..ನೋ.. ಲಿಟ್ಲ್ ಡಿಸ್ಕಂಫರ್ಟ್ ಫ್ಯೂ ಸೆಕೆಂಡ್ಸ್..ಬಸ್ ಹೋಗಯಾ ಚಲೋ” ಎಂದು ನನಗೆ ಬಟ್ಟೆ ಹಾಕಿಕೊಳ್ಳಲು ಹೇಳಿದಳು. ಆನಂತರ ಸೋನೋಗ್ರಫಿ. ಅದನ್ನು ಮಾಡುವಾಗಲೇ ಆ ವೈದ್ಯೆ “ಏನೂ ಇಲ್ಲವಲ್ಲಾ?” ಎಂದು ಹೇಳಿ. ಇನ್ನು ನಡಿ ನಾಳೆ ಬಂದು ರಿಪೋರ್ಟ್ ಪಡೆದುಕೋ ಎಂದಾಗ, ಜೆಲ್ ಒರೆಸಿಕೊಂಡು ಬಟ್ಟೆ ತೊಟ್ಟು ಹೊರಬಂದೆ. ಅರ್ಧ ಧೈರ್ಯ ಬಂದಿತ್ತು. ರಿಪೋರ್ಟ್ ನಲ್ಲಿ ಕಂಕುಳ ಕೆಳಗೆ ಏನೋ ನೋಡ್ಸ್ ಇದೆ ಎಂದಿತ್ತು. ಮರುವರುಷ ಮತ್ತೆ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಬರೆದಿತ್ತು.

ಹೀಗೆ ಮೂರನೇ ವರುಷ ಮಾಡಿಸಿಕೊಳ್ಳಲು ಹೋದಾಗ ಬಲಗಡೆ ಒಂದು ಸಣ್ಣ ಗಂಟು ಇರುವುದಾಗಿಯೂ ಅದಕ್ಕಾಗಿ ಬಯಾಪ್ಸಿ ಮಾಡಬೇಕೆಂದು ರಿಪೋರ್ಟ್ ನಲ್ಲಿ ಬರೆಯಲಾಗಿತ್ತು. ಆಗ ನನಗೆ ನಮ್ಮ ಕನ್ನಡದ ವೈದ್ಯ ಕನ್ಬೂರರ ನೆನಪಾಗಿ ಅವರಿಗೆ “ಯಾರಾದರೂ ಸ್ಥನದ ಡಾಕ್ಟರ್ ಗೊತ್ತಾ?” ಎಂದು ಫೋನ್ ಮಾಡಿ ಕೇಳಿದೆ. ಅವರು ಯುರಾಲಜಿಸ್ಟ್. ನೂರಾರು ಕಿಡ್ನಿ ಕಸಿ ಮಾಡಿದ ಅನುಭವವುಳ್ಳ ಹೆಸರಾಂತ ಸರ್ಜನ್, ಆದರೂ “ಯಾಕೆ? ಯಾರಿಗೆ? ನಾನೇ ಪರೀಕ್ಷೆ ಮಾಡ್ತೀನಿ ಬನ್ನಿ” ಎಂದರು.  ಅಲ್ಲಿಗೆ ಹೋದಾಗ ನನ್ನನ್ನು ಮಲಗಿಸಿ, ತಮ್ಮ ಲೇಡಿ ಕಾಂಪೌಡರ್‌ನ್ನು ಬಳಿಯಲ್ಲಿ ನಿಲ್ಲಿಸಿಕೊಂಡು ನನಗೆ ಸ್ವಲ್ಪವೂ ಮುಜುಗರವಾಗದಂತೆ ಪರೀಕ್ಷೆ ಮಾಡಿದರು.  ಈ ಹಿಂದೆ ಒಬ್ಬ ವೈದ್ಯ ಅರ್ಧಂಬರ್ಧ ಬಟ್ಟೆ ತೆಗಿಸಿ ನಾನು ಕುಳಿತ ಭಂಗಿಯಲ್ಲಿಯೇ ಪರೀಕ್ಷೆಮಾಡಿದಾಗ ಬಹಳ ಹಿಂಸೆಯಾಗಿ ಓಡಿ ಹೋಗುವ ಮನಸ್ಸಾಗಿತ್ತು. ಅದರ ನೆನಪಾಗುತ್ತಾ ಈ ವೈದ್ಯರ ಸಜ್ಜನಿಕೆಯಿಂದ ನಾನು ಕರಗಿ ಹೋದೆ.  ನಾನು ಭಯ ಪಡುವಂತಹದೇನೂ ಆಗಿಲ್ಲವೆಂದೂ, ಏನೇ ಆದರೂ ಈಗ ಎಲ್ಲದಕ್ಕೂ ಪರಿಹಾರವಿದೆ, ಬಹಳ ಮುಂದುವರಿದಿದೆ, ಯಾವುದಕ್ಕೂ ಭಯಪಡಬೇಕಾಗಿಲ್ಲವೆಂದು” ಹೇಳಿ ತಮ್ಮ ಖಾಸಾ ರೇಡಿಯಾಲಜಿಸ್ಟ್ರ ಬಳಿಗೆ ನನ್ನನ್ನು ಕಳುಹಿಸಿದರು.

ಅದು ಒಂದು ಸಣ್ಣ ಕ್ಲಿನಿಕ್. ಗಿಜಿಗುಡುವ ಜನ. ಬಣ್ಣ ಕಂಡು ಯಾವ ಯುಗವೋ ಆಗಿದ್ದ ಗೋಡೆಗಳು. ಬಿದ್ದು ಹೋಗುವಂತಿದ್ದ ಕಟ್ಟಡ. ಅದನ್ನು ನೋಡಿಯೇ “ಇಲ್ಲಾ ? ಇವರು ಏನು ಮಾಡಬಹದು? ಆಧುನಿಕ ಸಲಕರಣೆಗಳು ಇರಬಹುದಾ?” ಎಂದೆ. ಯಾಕೆಂದರೆ ಹಿಂದೂಜಾ ಆಸ್ಪತ್ರೆಯಲ್ಲಿದ್ದ ದೊಡ್ಡ ದೊಡ್ಡ ಮಷಿನ್ನುಗಳೇ ಆ ಆಸ್ಪತ್ರೆಯ ಆಧುನಿಕತೆಯನ್ನು ಸಾರುತ್ತಿದ್ದವು. “ನೋಡೋಣ ಕನ್ಬೂರರು  ಕಳುಹಿಸಿದ್ದಾರೆಂದ ಮೇಲೆ ಒಳ್ಳೆಯ ವೈದ್ಯರೇ ಇರಬೇಕು ಮೇಲ್ನೋಟಕ್ಕೇ ಎಲ್ಲಾ ಅಳೆಯ ಬೇಡ“ ಎಂದು ಇವನು ನನಗೆ ಸಮಾಧಾನ ಮಾಡಿದ. ಸೋನೋಗ್ರಫಿ ಮಾಡುವ ಇಕ್ಕಟ್ಟಾದ ಕೋಣೆ. ಸೋನೋ ಮಾಡಿ, ಅಲ್ಲಿ ನನ್ನನ್ನು ಪರೀಕ್ಷಿಸಿದ ಮೇಲೆ “ನೋಡು, ನೋಡ್ಸ್ ಎಲ್ಲರಿಗೂ ಇರುತ್ತದೆ. ಅದು ಮಾಮೂಲು. ನಿನಗೆ ಸದ್ಯಕ್ಕೆ ನಿಜವಾಗಿ ಬಯಾಪ್ಸಿಯ ಅಗತ್ಯವಿಲ್ಲ. ನನಗೇನಿಲ್ಲ ಮಾಡು ಎಂದರೆ ಮಾಡುತ್ತೇನೆ. ನನಗೆ ದುಡ್ಡು ಬರುತ್ತದೆ, ನಿನಗೆ ನೋವಾಗುತ್ತದೆ ಅಷ್ಟೇ. ನೋಡು ನಿನಗೆ ಬಿಟ್ಟಿದ್ದು” ಎಂದರು. ಅವರ ಕ್ಲಿನಿಕ್ಕಿನಿಂದ ಮತ್ತೆ ನಾನು ಕನ್ಬೂರ್ ಡಾಕ್ಟರ ಬಳಿಗೆ ಬಂದಾಗ “ನಾನು ಹೇಳಲಿಲ್ಲವಾ? ಪ್ರತಿವರ್ಷ ತಪಾಸು ಮಾಡಿಸಿಕೊಳ್ಳಿ, ಮುಂದೆ ಅಗತ್ಯವಾದರೆ ನೋಡೋಣ. ಗಂಟು (ಸಿಸ್ಟ್) ಕೂಡ ತಾನಾಗಿಯೇ ಕರಗುವ ಸಾಧ್ಯತೆಗಳೂ ಇವೆ” ಎಂದರು. ರಕ್ತ ಹೀರುವ ಜಿಗಣೆಗಳಿರುವ ಈ ವ್ಯಾಪಾರಿ ನಗರದಲ್ಲಿ, ಹೆಣವನ್ನೂ ತೀವ್ರ ನಿಗಾ ಘಟಕದಲ್ಲಿಟ್ಟು ಹಣ ಸುಲಿಗೆ ಮಾಡುವ ಈ ಶಹರದಲ್ಲಿ. ಈ ತರಹದ ವೈದ್ಯರೂ ಇರುವರೇ?

ಸುಮಾರು ಹತ್ತು ವರುಷಗಳಿಂದ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಕನ್ಬೂರರ ಬಳಿಗೆ ಹೋಗುತ್ತಿದ್ದೇನೆ. ಸಿಸ್ಟ್ ತನಗೆ ತಾನೇ ಮಾಯವಾಗಿದೆ. ಅವರ ಅತ್ತೆಯ ಗುರು ಪತ್ನಿಯೆಂಬ ಕಾರಣಕ್ಕೆ ಒಮ್ಮೆಯೂ ಅವರು ನನ್ನಿಂದ ಹಣವನ್ನು ಪಡೆದುದಿಲ್ಲ.

ಹೋದ ವರುಷ ಮ್ಯಾಮೋಗ್ರಫಿಗೆಂದು ಸುಸಜ್ಜಿತ ಜ್ಯುಪಿಟರ್ ಆಸ್ಪತ್ರೆಗೆ ಹೋದಾಗ ಅಲ್ಲಿ ತಮಿಳು ಮಾತೃ ಭಾಷೆಯ ಒಬ್ಬ ಗೈನೋಕಾಲಜಿಸ್ಟ್. ನನ್ನ ರಿಪೋರ್ಟ್ ಗಳನ್ನು ನೋಡಿ “ನಿನಗೆ ಇಷ್ಟ್ಟು ವರುಷಗಳಿಂದ ನಾರ್ಮಲ್ ಇದೆ, ಆದರೂ ನೀನು ಯಾಕೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವೆ?. ಎರಡು ಮೂರು ವರುಷಗಳಿಗೊಮ್ಮೆ ಮಾಡಿಸಿಕೋ ಸಾಕು” ಎಂದಳು.

ಮ್ಯಾಮೋ ಎಂದರೆ ಈಗ ಭೀತಿ ಕಮ್ಮಿಯಾಗಿದೆ. ಅದೊಂದು ಮಮೂಲು ಪರಿಕ್ಷೆಯಾಗಿದೆ. ಆದರೆ ಅಲ್ಲಿ ಬರುವ ಎಷ್ಟೋ ನತದೃಷ್ಟ ಹೆಣ್ಣು ಮಕ್ಕಳನ್ನು ನೋಡಿದಾಗ ನನಗೆ ನನ್ನ ಹೋಮಿಯೋ ಪತಿ ವೈದ್ಯೆ ಗೆಳತಿ ಸುನೀತಾ ಹೇಳುವುದು ನೆನಪಾಗುತ್ತದೆ. ಯಾವುದೋ ಕ್ಯಾನ್ಸರ್ ರೋಗಿಯ ಆರ್ಥಿಕ ಸಹಾಯಾರ್ಥ ಅವಳ ಬಳಿಗೆ ಹೋಗಿದ್ದೆ ಆಗ ಅವಳು, “ಪ್ರಶಸ್ತಿಗಳು ಬಂದರೆ, ಲಾಟರಿ ಹೊಡೆದರೆ, ಮಕ್ಕಳು ರ‍್ಯಾಂಕ್ ಪಡೆದುಕೊಂಡರೆ, ಇದು ನನಗೇ ಯಾಕೆ ಬಂದಿತು?” (why me?) ಎಂದು ನಾವು ಕೇಳುವುದಿಲ್ಲ.  ಆದರೆ ಕ್ಯಾನ್ಸರ್ ನಂತಹ ರೋಗ ಬಂದರೆ ಮಾತ್ರ “ನನಗೇ ಯಾಕೆ ಬಂದಿತು” ಎಂದು ಕೇಳಿಕೊಳ್ಳುತ್ತೇವೆ. ಕ್ಯಾನ್ಸರ್ ರೋಗಿಗಳಿಗೆ ಹಣದ ಸಹಾಯ ಮಾಡುವುದಕ್ಕಿಂತ ಬದುಕಿನ ಬಗ್ಗೆ ಅವರಿಗೆ ಉತ್ಸಾಹ ತುಂಬುವುದೇ ಮುಖ್ಯ ಎಂದಿದ್ದಳು. ಅಂತಹ ಉತ್ಸಾಹ ತುಂಬುವ ಕೆಲಸವನ್ನು ಕನ್ಬೂರರಂತಹ ವೈದ್ಯರು ಮಾಡುತ್ತಿದ್ದಾರೆೆ ಎನ್ನುವುದೇ ನಮ್ಮ ಭಾಗ್ಯ.

ಪ್ರಸಿದ್ಧ ಬಂಗಾಳಿ ಸಾಹಿತಿ ನಬನೀತಾ ದೇವ್ ಸೇನ್ ಅವರು ಕ್ಯಾನ್ಸರ್ ನಿಂದ ನರಳುತ್ತಿದ್ದಾಗ “ಎಷ್ಟೋ ಮನೆಗಳಿಗೆ ಶಾಪದಂತೆ ವಕ್ರಿಸುವ ಈ ರೋಗವು ಇಂದು ನನ್ನ ಮನೆಗೂ ವಕ್ರಿಸಿದೆ. ಅದರಲ್ಲೇನು? ಅದಕ್ಕೆ ಶೋಕ ಏಕೆ” ಎನ್ನುವುದೂ ನೆನಪಾಗುತ್ತದೆ.

ನಮಗೆ ಸ್ಥೈರ್ಯ ತುಂಬಿದ ಡಾ. ಕನ್ಬೂರ್ ಅವರ ಅತ್ತೆ ಸ್ವತಃ ಪ್ರಸೂತಿ ವೈದ್ಯೆಯಾಗಿದ್ದು ಗರ್ಭಕೋಶದ ಕ್ಯಾನ್ಸರಿಗೆ ತುತ್ತಾಗಿ ಬಹಳ ವರುಷ ನರಳಿ ತೀರಿಕೊಂಡರು. ಭವಿಷ್ಯದಲ್ಲಿ ಯಾರಿಗೆ ಏನು ಕಾದಿದೆಯೋ? ನಬನೀತಾ ಅವರ ಮನೋರ್ಧೈರ್ಯವನ್ನು ಆತ್ಮಸಾತ್ ಮಾಡಿಕೊಂಡರೆ ಯಾವ ಭೀತಿಯೂ ಕಾಡಲಾರದು. ಸಾವಿನ ಭಯ ಸಾಯುತ್ತದೆ. ಈ ಹೊತ್ತಿನಲ್ಲಿ ಸಾವಿನೊಡನೆ ಹೋರಾಡಿ ‘ಸಾಸಿವೆ ತಂದ’ ಬಿ.ವಿ. ಭಾರತಿಯವರ ನೆನಪೂ ಆಗುತ್ತದೆ.

‍ಲೇಖಕರು avadhi

January 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Shyamala Madhav

    ವೈದ್ಯೋ ನಾರಾಯಣೋ ಹಾರಿ ಎಂಬ ಅನುಭವ ನನ್ನ ಬಾಳಿನಲ್ಲೂ ಅನೇಕ ಬಾರಿ ಆಗಿದೆ. ಖುಶಿಯಾಯ್ತು, ಗಿರಿಜಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: