ಗಿರಿಜಾ ಶಾಸ್ತ್ರಿ ಅಂಕಣ: ಗಾಳಿಯಲ್ಲಿ ಅಭಂಗಗಳು ಹರಿದಾಡುತ್ತವೆ..

ಗಿರಿಜಾ ಶಾಸ್ತ್ರಿ

ಮಾಘ ಮಾಸ ಬಂದರೆ ಮಹಾರಾಷ್ಟ್ರದ ಗಾಳಿಯಲ್ಲಿ ಅಭಂಗಗಳು ಹರಿದಾಡುತ್ತವೆ. ಅವುಗಳ ಜೊತೆಗೆ ತೇಲಿ ಬರುವ ಲಯ ಬದ್ಧ ತಾಳದ ಚಿಣ್ ಚಿಣ್, ಪೇಟಿಯ (ಹರ‍್ಮೋನಿಯಮ್) ಸಾಥ್!!! ಅನೂಹ್ಯವಾದುದರೊಂದಿಗೆ ಕೊಕ್ಕೆ ಹಾಕಿಕೊಂಡುಬಿಡುತ್ತವೆ. ಚಳಿ ಚಳಿ ಹು ಹು ಎನ್ನುತ್ತಲೇ ಜನ ಅಲ್ಲಲ್ಲಿ ನಡೆಯುವ ಭಾಗವತ ಸಪ್ತಾಹಗಳಿಗೆ ಮುಗಿ ಬೀಳುತ್ತಾರೆ.

ವಾರಕರಿಗಳ ಹರಿಕಥೆ ಸಂಕೀರ್ತನ ನಡೆಯುತ್ತದೆ. ಅದಕ್ಕೆ ಅನುಗುಣವಾಗಿ ಅಲ್ಲಿ ಸಾಲಾಗಿ ನಿಂತ ಭಕ್ತರು ಕುಣಿಯುತ್ತಾರೆ. ಕುತ್ತಿಗೆಗೆ ನೇತುಬಿದ್ದ ಕಂಚಿನ ತಾಳಗಳೂ ಕುಣಿಯುತ್ತವೆ. ಹಾಡಿನ ಮಧ್ಯೆ ಮಧ್ಯೆ ಹರಿಕತೆ ಮುಂದುವರೆಯುತ್ತದೆ. ದೈವದ ಜೊತೆಗೆ ಎಂಥ ಅನುಸಂಧಾನ! ಅದು ಎಷ್ಟು ಕೋಮಲ ಮತ್ತು ಮಧುರ!

ವಾರಕರಿ ಪಂಥಕ್ಕೆ ಸೇರಿದ ಸಂತರ ಅಭಂಗಗಳು ಭಕ್ತಿಚಳವಳಿಯ ಅಂಗವಾದರೂ ಅವಕ್ಕೇ ಮಹಾರಾಷ್ಟ್ರದಲ್ಲಿ ತಮ್ಮದೇ ಆದ ಸಾಂಸ್ಕೃತಿಕ ಮಹತ್ವವಿದೆ. ಮೊಘಲರ ಆಳ್ವಿಕೆಯಲ್ಲಿ ಮಹಾರಾಷ್ಟ್ರ ದಣಿದ ಕಾಲವದು. ಒಂದು ಕಡೆ ಪಾರ್ಸಿ ಮತ್ತು ಉರ್ದುಗಳ ಪ್ರಾಬಲ್ಯದಲ್ಲಿ ಮತ್ತು ಸಂಸ್ಕೃತದ ಹಿರಿಮೆಯಲ್ಲಿ ಮರಾಠಿ ಮೂಲೆಗುಂಪಾದ ಹಂತವದು.

 

ಜ್ಞಾನೇಶ್ವರಿ ಭೂಗತವಾದಾಗ ಏಕನಾಥನ ಕನಸಿನಲ್ಲಿ ಬಂದು ತಾನು ಬರೆದ ಭಗವದ್ಗೀತೆಯನ್ನು ಪರಿಷ್ಕರಿಸಬೇಕೇಂದು ಸ್ವತಃ ಜ್ಞಾನೇಶ್ವರನೇ ಕೇಳಿಕೊಳ್ಳುತ್ತಾನಂತೆ. ಬಹಮನಿ ಸುಲ್ತಾನರ ಆಳ್ವಿಕೆಯಿಂದ ಮರಾಠಿ ಭಾಷೆಯ ಚಟುವಟಿಕೆಗಳು ಕ್ಷೀಣಗೊಂಡಾಗ, ಅದನ್ನು ಊರ್ಜಿತಗೊಳಿಸುವಲ್ಲಿ ಜ್ಞಾನೇಶ್ವರನ ಅನುಯಾಯಿಯಾದ ಏಕನಾಥನ (೧೫೩೩-೧೫೯೯) ಪಾತ್ರ ದೊಡ್ಡದು.  ಮರಾಠಿ ಸಾಹಿತ್ಯ ಚರಿತ್ರೆಯಲ್ಲಿ ಅವನದು ಪ್ರಮುಖವಾದ ಹೆಸರು.

ಏಕನಾಥ, ಭಾಗವತ, ಭಾವಾರ್ಥ ರಾಮಾಯಣ, ಭಾಗವತ ಪುರಾಣ ಮುಂತಾದ ಅನೇಕ ಕೃತಿಗಳನ್ನು ರಚಿಸಿದ. ಮರಾಠಿ ಸಾಹಿತ್ಯ ಪ್ರಾರಂಭವಾಗುವುದೇ ಭಕ್ತಿಸಾಹಿತ್ಯದಿಂದ (೧೩ ನೇ ಶತಮಾನ ಜ್ಞಾನೇಶ್ವರಿ). ವಾರಕರಿ ಪಂಥಕ್ಕೆ ರಾಜಕೀಯ ಮಹತ್ವಕೂಡ ಇದೆ. ಶಿವಾಜಿಯ ಸ್ವರಾಜ್ಯ ಕಲ್ಪನೆ ಚಿಗುರಲು ಮರಾಠ ನೆಲವನ್ನು ಹದಮಾಡಿಟ್ಟವರು ಈ ವಾರಕರಿಗಳು.

ಆದುದರಿಂದಲೇ ಮಹಾರಾಷ್ಟ್ರ ಅಭ್ಯಾಸ ಮಂಡಳದ ನಾಲ್ಕನೇ ತರಗತಿಯ ಚರಿತ್ರೆಯ ಪಠ್ಯಪುಸ್ತಕದಲ್ಲಿ ಶಿವಾಜಿಯ ಜೀವನವನ್ನು ಪರಿಚಯಿಸುವ ಮೊದಲು ಮಹಾರಾಷ್ಟ್ರದ ಸಂತರ ಚರಿತ್ರೆಯನ್ನು ಪರಿಚಯಿಸಲಾಗುತ್ತದೆ. ಶಿವಾಜಿಯ ಸಮಕಾಲೀನನಾದ ವಾರಕರಿ ಪಂಥದ ಪ್ರಮುಖ ಸಂತ ತುಕಾರಾಮನ ಪ್ರಭಾವ ಶಿವಾಜಿಯ ಮೇಲೆ ಅಗಾಧವಾಗಿ ಆಗಿರುವುದನ್ನು ಚರಿತ್ರಾಕಾರರು ಸ್ಮರಿಸುತ್ತಾರೆ.

ಅಭಂಗಗಳೆಂದರೆ ಮರಾಠಿಗರ ಜೀವನಾಡಿ. ಭೀಮ್‌ಸೇನ ಜೋಷಿ, ಕಿಶೋರಿ ಅಮೋನ್ಕರ್ ಮುಂತಾದಂತಹ ಮೇರು ಕಲಾವಿದರಿಂದ ಹಿಡಿದು ಸುರೇಶ್ ವಾಡ್ಕರ್ ಅಂತಹ ಸುಗಮ ಸಂಗೀತಗಾರರವರೆಗೆ ಎಲ್ಲರೂ ಅಭಂಗಗಳನ್ನು ಜನಪ್ರಿಯಗೊಳಿಸಿದ್ದಾರೆ. ಭಾಗವತ ಸಪ್ತಾಂಗಳಲ್ಲಿ ಕೀರ್ತನಕಾರರದೇ ಒಂದು ಬಗೆಯ ಅಭಂಗ ಪ್ರಸ್ತುತಿ. ಅಲ್ಲಿಯಂತೂ ಅಭಂಗಗಳದೇ ಉತ್ಸವ. ಇಂತಹ ಸಪ್ತಾಹಗಳಿಗೆ ಹೆಚ್ಚಾಗಿ ಹೋಗುವವರು ಅನಕ್ಷರಸ್ಥರು ಇಲ್ಲವೇ ಅಷ್ಟಾಗಿ ಕಲಿಯದವರು.

ಒಮ್ಮೆ ಕುತೂಹಲ ತಡೆಯದೇ ನಾನೂ ಹೋಗಿ ಕುಳಿತೆ. (ಇವವರೇನು ಮಹಾ ಹೇಳುತ್ತಾರೆ ಎನ್ನುವ (ಅಹಂ) ಭಾವದಲ್ಲಿ!!!) ಏಕನಾಥನ ಬದುಕಿನ ಪ್ರಯಾಣ ಸಾಗುತ್ತಿತ್ತು. ಪ್ರವಾಸ (ಪ್ರಯಾಣ) ಅಂದ್ರ‍ೆ ನೋಡಿ, ಮೂರು ಅಂಶ ಇರಬೇಕು. ಒಂದು ನಾವು ಎಲ್ಲಿಗೆ ಹೋಗ್ತೀವಿ ಅನ್ನೋದು ಸ್ಪಷ್ಟ ಇರಬೇಕು. ಇನ್ನೊಂದು ಎಲ್ಲಿಂದ ಬಂದಿವಿ ಅನ್ನೋದು ನೆನಪಿರಬೇಕು. ಮೂರನೆಯದು ನಾವು ಎಲ್ಲಿದ್ದೀವಿ ಎನ್ನೋ ಪ್ರಜ್ಞೆ ಇರಬೇಕು. ಹೀಗೆ ಕೀರ್ತನೆ ನಡೆದಿತ್ತು. ಮನೆಗೆ ಬಂದೆ. ಕೀರ್ತನಕಾರನ ಪ್ರಯಾಣದ ಪ್ರಸಂಗ ಮಾತ್ರ ಎಡಬಿಡದೇ ಹಿಂಬಾಲಿಸುತ್ತಿತ್ತು.

ಪ್ರಯಾಣದಲ್ಲಿ ಹಿಂದಕ್ಕೆ ಹೋಗೋದು ಮತ್ತು ಮುಂದಕ್ಕೆ ಹೋಗೋದು ಎಲ್ಲ ಒಂದೇ. ಹಿಂದಿನೂರಿಗೆ ಇದು ಮುಂದಿನೂರು, ಮುಂದಿನೂರಿಗೆ ಇದು ಹಿಂದಿನೂರು ಅಷ್ಟೇ. ನಾವು ಯಾವ ಊರಿನಲ್ಲಿದ್ದೇವೆ ಎನ್ನುವುದರ ಮೇಲೆ ಹಿಂದು ಮುಂದುಗಳು ನಿರ್ಧಾರವಾಗುತ್ತವೆ. ಸದ್ಯದ ಸ್ಥಿತಿಯನ್ನು, ವರ್ತಮಾನದ ಗತಿಯನ್ನು ಹಿಡಿದವರಿಗೆ ಪರನಿವೃತ್ತಿಯೂ ಅಷ್ಟೇ ಸುಲಭ. ಆಗ ಹಿಂದು ಮುಂದಿನ ಯಾವ ದಾರಿಯೂ ಅಗೋಚರವಾಗಿ ಉಳಿಯುವುದಿಲ್ಲ.

ನಮ್ಮ ನೆನಪಿಗೆ ಶಕ್ತಿಯಿದ್ದರೆ ಹಿಂದೆ ಹಿಂದಕ್ಕೆ ಹೋಗ್ತಾ ಬಿಟ್ಟಬಂದ ಜಾಗ ಸೇರುತ್ತೇವೆ. ಆಗ ಒಂದು ಸುರಕ್ಷಿತ ಭಾವ. ಅಕಸ್ಮಾತ್ ಅದೃಷ್ಟವಶಾತ್ ಮುಂದಿನ ದಾರಿ ಗುರುತು ಹತ್ತಿ ಮುಂದೆ ಮುಂದೆ ಹೋದರೆ ಗಮ್ಯವನ್ನು ತಲಪುತ್ತೇವೆ. ಆದರೆ ಸೇರುವ ಹಾಗೂ ತಲಪುವ ಜಾಗ ಎರಡೂ ಒಂದೇ ಅಲ್ಲವೇ? ಹಿಂದು ಮುಂದು ಎನ್ನುವುದು ಮನಸ್ಸಿನ ಚೇಷ್ಟೆ.

ಗಡಿಯಾರದ ಮುಳ್ಳಿನ ಮೇಲಿನ ಕಸರತ್ತು. ಗಡಿಯಾರದಂಕಿ ಪಾವನವಾದವರಿಗೆ ಮಾತ್ರ ಭೂತ ಭವಿಷ್ಯತ್ತಿನ ಮಾಯೆ!!! ಯಾವುದಕ್ಕೂ ಸದ್ಯ ನಾವು ಎಲ್ಲಿ ಇದ್ದೀವಿ ಎನ್ನುವುದೇ ಮುಖ್ಯ. ನಾವು ನಿಂತ ನೆಲೆ (ಲೊಕೇಷನ್) ಎನ್ನುತ್ತಾರಲ್ಲಾ ಅದು. ಲೊಕೇಷನ್ ಗೊತಿದ್ದರೆ ಮಾತ್ರ ಹಿಂದಕ್ಕೋ ಮುಂದಕ್ಕೋ ಹೋಗುವುದು ಸಾಧ್ಯ.

ಜಿ.ಪಿ.ಎಸ್. ಕೂಡ ಕೇಳೋದು ಮೊದಲು ನಮ್ಮ ಲೊಕೇಷನ್ನೇ. ಇದಕ್ಕೆ ಅನುಗುಣವಾಗಿ ನಮ್ಮ ಮುಂದಿನ ಪಯಣ. ಅದರಂತೆ ರೂಪುಗೊಳ್ಳುವ ನಮ್ಮ ಲೋಕದೃಷ್ಟಿ. ಲೊಕೇಷನ್ ಎಂದಕೂಡಲೇ ನಮ್ಮ ಅಂಚೆ ವಿಳಾಸ, ಲಿಂಗ ಜಾತಿ ಧರ್ಮ ಎಂದು ಕೊಂಡುಬಿಡುತ್ತೇವೆ. ಅದೇ ನಮ್ಮ ಅಸ್ಮಿತೆಯಾಗಿಬಿಡುತ್ತೆ. ಅದಕ್ಕೆ ಅನುಗುಣವಾಗಿಯೇ ನಮ್ಮ ಲೋಕದೃಷ್ಟಿ ಬೆಳೆಯುತ್ತೆ.

 

ಮಹಾರಾಷ್ಟ್ರದ ಯಾವ ಮೂಲೆಯಲ್ಲೇ ಇರಲಿ, ವಾರಕರಿಗಳಿಗೆ ಭೀಮಾನದಿಯ ತಟದಲ್ಲಿ ಇರುವ ಫಂಡರಿಯೇ ತವರು (ಮಾಝೆ ಮಾಹೆರ ಫಂಡರಿ- ಏಕನಾಥ) ವಿಠ್ಠಲ ರುಕುಮಾಯಿಯರೇ ತಾಯಿತಂದೆ (ಮಾಝಿ ಬಾಪ್ ಆಣಿ ಆಯಿ, ವಿಠ್ಠಲ ರಖುಮಾಯಿ) ಪುಂಡಲೀಕನೇ ವರ ಬಂಧು, ಅರ್ಧಚಂದ್ರಾಕಾರದಲ್ಲಿ ಫಂಡರಪುರವನ್ನು ಸುತ್ತುವರಿದ, ಪಾಪಭಂಗವನ್ನು ಮಾಡುವ ‘ಚಂದ್ರಭಾಗ’ಳೇ (ಭೀಮಾನದಿ) ಸೋದರಿ, (ಮಾಝಿ ಬಹಿಣಾ ಚಂದ್ರಭಾಗ). ಫಂಡರಿಯಲ್ಲೇ ವಾಸ ಚಂದ್ರಭಾಗದಲ್ಲೇ ಸ್ನಾನ (ಫಂಡರೀಚಾ ವಾಸ ಚಂದ್ರಭಾಗ ಸ್ನಾನ -ನಾಮದೇವ) ವಿಠ್ಠಲನೇ ತೀರ್ಥ, ವಿಠ್ಠಲನೇ ಕ್ಷೇತ್ರ!! ( ತೀರ್ಥವಿಠ್ಠಲ ಕ್ಷೇತ್ರ ವಿಠ್ಠಲ- ನಾನದೇವ). ‘ಫಂಡರಿ’ಯೇ ಎಲ್ಲಾ ವಾರಕರಿಗಳ ವರ್ತಮಾನದ ಸ್ಥಿತಿ ಮತ್ತು ಅದುವೇ ಗತಿ. ಆದುದರಿಂದಲೇ ಅವರಿಗೆ ಗತಿಶೀಲವಾದ ಮಾರ್ಗವೊಂದು ತೆರೆದುಕೊಳ್ಳಲು ಸಾಧ್ಯ.

ರಣ ರಣ ಬಿಸಿಲು ಮಾರಣ ಬೆಂಕಿ!! ಪ್ರಗಲ್ಭ ಪಂಡಿತ ಏಕನಾಥ ಕಾಶಿಯಿಂದ ತಂದ ಗಂಗಾಜಲವನ್ನು ರಾಮೇಶ್ವರದಲ್ಲಿ ಅಭಿಷೇಕ ಮಾಡಲು ಕೊಂಡೊಯ್ಯುತ್ತಿದ್ದ. ದಾರಿ ಮಧ್ಯದಲ್ಲಿ ಒಂದು ಕತ್ತೆ ಮರಣ ಸಂಕಟದಲ್ಲಿ ನೀರಿಗಾಗಿ ಬಾಯ್ಬಿಡುತ್ತಿತ್ತು ಏಕನಾಥನಿಗೆ ಬೇರೆ ಯೋಚನೆಯೇ ಸುಳಿಯಲಿಲ್ಲ. ಕತ್ತೆಯ ಬಾಯಿಗೆ ನೇರ ಗಂಗಾಜಲ ಸುರಿದ. ಬ್ರಾಹ್ಮಣರು ಮುಗಿಬಿದ್ದರು.

ಇನ್ನೊಮ್ಮೆ ಮನೆಯಲ್ಲಿ ಶ್ರಾದ್ಧ ನಡೆಯುತ್ತಿದೆ. ಮನೆಯೊಳಗಿನಿಂದ ಬರುತ್ತಿದ್ದ ಪಕ್ವಾನ್ನಗಳ ಘಮ ಘಮಿಸುವ ಪರಿಮಳ ಹೊರಗೆ ಹಾದು ಹೋಗುವ ಹರಿಜನರ ಮೂಗಿಗೆ ಹತ್ತಿ, ಆಹಾ ಇಂತಹ ಪಕ್ವಾನ್ನ ನಮಗೇನಾದರೂ ದೊರೆತಿದ್ದರೆ? ಎನಿಸಿದೆ. ಹರಿಜನರ ಆಸೆ ಒಳಗಿದ್ದ ಏಕನಾಥನಿಗೆ ತಿಳಿಯುತ್ತದೆ ಅವರನ್ನು ಒಳ ಕರೆದು ಶ್ರಾದ್ಧದ ಪುಷ್ಕಳ ಭೋಜನ ನೀಡುತ್ತಾನೆ. ಕುಪಿತಗೊಂಡ ಬ್ರಾಹ್ಮಣರು ಹೊರ ನಡೆಯುತ್ತಾರೆ. ಬ್ರಾಹಣರು ಹೋದರೇನು ತನ್ನ ನಿಜವಾದ ಪಿತೃಗಳನ್ನೇ ಕರೆಸಿಬಿಡುತ್ತಾನೆ ಏಕನಾಥ. ಬ್ರಾಹ್ಮಣರಿಗೆ ಬುದ್ದಿಬರುತ್ತದೆ -ಹೀಗೊಂದು ಕತೆ.

ಏಕನಾಥನಿಗೆ ತನ್ನ ನಿಜವಾದ ನೆಲೆಯ ಅರಿವಿದ್ದಿತು (ಲೊಕೇಷನ್) ಆದುದರಿಂದ ಅವನಿಗೆ ಕತ್ತೆ ಕಾಣಿಸಲಿಲ್ಲ ಬದಲಾಗಿ ಅವನು ಅರಸುತ್ತಿದ್ದ ದಾರಿಯ ಮಬ್ಬು ಹರಿಯಿತು. ಅವನಿಗೆ ಬಂದ ಬಾಗಿಲು ಮತ್ತು ಬಿಡುವ ಬಾಗಿಲು ಎರಡೂ ಒಂದೇ ಆಗಿದ್ದಿತು. ನಡುವಿನ ದಾರಿಯೇ ಮುಖ್ಯವಾಗಿದ್ದಿತು. ಮರಾಠಿಯನ್ನು ದಾಸ್ಯದಿಂದ ಬಿಡಿಸಿದ ಹಾಗೆಯೇ ಮನುಕುಲವನ್ನೂ ಮನಸ್ಸಿನ ದಾಸ್ಯದಿಂದ ಬಿಡಿಸಲು ಯತ್ನಿಸಿದ.

ಆದುದರಿಂದಲೇ ಕಟ್ಟಾ ಸಂಪ್ರದಾಯಸ್ಥರ ಮನೆಯಿಂದ ಬಂದವನು ಮಹರ್ ಜಾತಿಗೆ ಸೇರಿದವನೊಬ್ಬನ ಊಟದ ಆತಿಥ್ಯವನ್ನು ಸ್ವೀಕರಿಸಿದ. ಕಾಯಾ ವಾಚಾ ಮನಸಾ ದೇವರನ್ನು ಪ್ರೀತಿಸುವ ಒಬ್ಬ ಮಹರ್ ಜಾತಿಗೆ ಸೇರಿದವನೇ ಬ್ರಾಹ್ಮಣನಿಗಿಂತ ಶ್ರೇಷ್ಠ ಎಂಬುದನ್ನು ಸಾಬೀತು ಪಡಿಸಿದ. (ನಮ್ಮ ಬಸವಣ್ಣ ಮಾಡಿದ್ದೂ ಇದೇ) ಆಗ ಅವನ ದಾರಿ ಮತ್ತೂ ಸ್ಪಷ್ಟವಾಯಿತು.

೧೩ನೇ ಶತಮಾನದ ಜ್ಞಾನದೇವ, ನಾಮದೇವ ಹಾಗೂ ೧೭ನೇ ಶತಮಾನದ ತುಕಾರಾಮ, ರಾಮದಾಸರ ನಡುವೆ ಸೇತುವೆಯಾದ. ಅಭಂಗಗಳ  ‘ಏಕಾ ಜನಾರ್ದನ’ (ಗುರು ಜನಾರ್ಧನನ ಏಕನಾಥ)ಎನ್ನುವ ಅಂಕಿತಕ್ಕೆ ಕಾರಣನಾದ. ಅನೇಕ ಓವಿಗಳನ್ನು ರಚಿಸಿದ್ದಲ್ಲದೇ ಭಾರೂಢ್, ಜೋಗ್ವಾ, ಗೋಂಧಳ್ ಮುಂತಾದ ಪ್ರಕಾರಗಳಲ್ಲಿ ಭಕ್ತಿ ಗೀತೆಗಳನ್ನು ರಚಿಸುವುದರ ಮೂಲಕ ಸಾಮಾಜಿಕ ಎಚ್ಚರವನ್ನು ಮೂಡಿಸಿದುದಲ್ಲದೇ ಮರಾಠಿ ಸಾಹಿತ್ಯದ ಹೊಸ ಪ್ರಕಾರಕ್ಕೆ ಕಾರಣನಾಗಿ, ಮಹಾರಾಷ್ಟ್ರದ ಪುನರುಜ್ಜೀವನಕ್ಕೂ ನಾಂದಿ ಹಾಡಿದ.

ಹಿಂದೆ ಹಿಂದಕ್ಕೆ ಹೋಗಿ ಬಂದ ಬಾಗಿಲು ಬಡಿದರೂ ನೀಲಿ ಗೋಲವೇ ! ಮುಂದೆ ಮುಂದೆ ಹೋಗಿ ಮುನ್ನೀರಿನ ಬಾಗಿಲು ಬಡಿದರೂ ಎಲ್ಲ ನೀಲಿ ವಿಸ್ತಾರವೇ!
ಬಾಹ್ಯಾಕಾಶ ನೌಕೆಯೊಳಗೆ ಕುಳಿತು ಭಾರತದ ಭೂಪಟವನ್ನು ಅರಸುತ್ತಿದ್ದ ಕಲ್ಪನಾ ಚಾವ್ಲಾಳಿಗೆ ಕಂಡದ್ದು ಕೇವಲ ನೀಲ ಗೋಳ, ಎಲ್ಲವೂ ಅದರೊಳಗೆ ಐಕ್ಯವಾಗಿತ್ತು- ಕಾಲದೇಶ ಸ್ಥಳಗಳೂ. ಅಖಂಡ ನೀಲಿ ಕಾಣಬೇಕೆಂದರೆ ಅಷ್ಟು ಎತ್ತರಕ್ಕೆ ಏರಬೇಕು. ಏಕನಾಥ ಅಂತಹ ಬಾಹ್ಯಾಕಾಶ ನೌಕೆಯನೇರಿ ನೀಲಿ ಕಂಡವನು. ಎಲ್ಲ ಕಾಲಗಳೂ ಅವನೊಳಗೆ ಐಕ್ಯವಾಗಿತ್ತು ..

ಹಿಂದಣ ಅನಂತವನು ಮುಂದಣ ಅನಂತವನು ಒಂದು ದಿನ ಒಳಕೊಂಡಿತ್ತು
ನೋಡಾ
ಒಂದು ದಿನವನೊಳಕೊಂಡು ಮಾತನಾಡುವ ಮಹಂತನ ಕಂಡು
ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು
ಲಿಂಗದತತ್ವವನರಿಯದೆ ಅಂತೆ ಹೋದರು
ಕಾಣಾ
ಗುಹೇಶ್ವರ

‍ಲೇಖಕರು avadhi

December 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Manohar Nayak

    ಬೆಳ್ಳಂಬೆಳಿಗ್ಗೆ ಸಿಕ್ಕಿದ ತೀರ್ಥ ಪ್ರಸಾದದಿಂದ ಧನ್ಯವಾಯಿತು ನನ್ನ ಇಂದಿನ ದಿನ..

    ಮನೋಹರ

    ಪ್ರತಿಕ್ರಿಯೆ
  2. Gopal trasi

    ಆಹಾ….! ಅಭಂಗಗಳ ಅಮೋಘವೆನಿಸುವ ಭಕ್ತಿ ನಾದವನ್ನು ಶಕ್ತವಾಗಿ ಧ್ವನಿಸಿದ್ದೀರಿ, ಗಿರಿಜಾ ಅವರೇ, ಅಭಿನಂದನೆ ಮತ್ತು ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: