ಗಿರಿಜಾ ಶಾಸ್ತ್ರಿ ಅಂಕಣ: ಕಿಟಕಿಯಾಚೆಯಿಂದ

ಕಾರ್ನೀಲಿಯಾ ಸೊರಾಬ್ಜಿ (1866-1954)

(ಭಾರತದ ಮೊದಲ ಮಹಿಳಾ ಬ್ಯಾರಿಸ್ಟರ್)

। ಕಳೆದ ವಾರದಿಂದ ।

ಕಾರ್ನೀಲಿಯಾಳ ವೈಯಕ್ತಿಕ ಹೋರಾಟವೆಂಬುದೂ ಇದರ ಜೊತೆ ಜೊತೆಗೆ ನಡೆದೇ ಇದ್ದಿತು. ಭಾರತದಲ್ಲಿ ಮತ್ತೊಮ್ಮೆ ಕಾನೂನಿನ ಪರೀಕ್ಷೆಗೆ ಕುಳಿತು ಉತ್ತೀರ್ಣಳಾದರೂ ಆಕೆಗೆ ‘ಬಾರ್’ ಅಸೋಸಿಯೇಷನ್ನಿನಲ್ಲಿ ತನ್ನ ಹೆಸರನ್ನು ನೋಂದಾಯಿಸಲು ಪರವಾನಗಿ ದೊರೆಯದೇ ಹೋಗುತ್ತದೆ. ಇದಕ್ಕೆ ಕಾರಣ, ಇಂಗ್ಲೆಂಡಿನ ಮಹಿಳೆಯರಿಗೆ ಇಂತಹ ಪಾತ್ರವೊಂದು ದೊರಕುವ ಮೊದಲೇ ಭಾರತೀಯ ಮಹಿಳೆಗೆ ದಯಪಾಲಿಸುವುದು, ಬ್ರಿಟಿಷ್ ಸರಕಾರದ ಅಹಮಿಕೆಗೆ ಸವಾಲಾಗಿದ್ದಿತು.

ಕೊನೆಗೆ 1919ರಲ್ಲಿ ಭಾರತೀಯ ಮಹಿಳೆಯರಿಗೆ ‘ಬಾರ್’ ಅಸೋಸಿಯೇಷನ್ನಿನಲ್ಲಿ ಪ್ರವೇಶವನ್ನು ತೆರೆಯಲಾಗುತ್ತದೆ. ಹೀಗಾಗಿ ಕಾರ್ನೀಲಿಯಾ 1892 ರಲ್ಲಿಯೇ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣಳಾದರೂ, ಅವಳಿಗೆ ಮೊಕದ್ದಮೆಗಳನ್ನು ಅಧಿಕೃತವಾಗಿ ನಡೆಸುವ ಹಕ್ಕು ದೊರೆಯುವುದು 1919ರ ಆನಂತರವೇ. ಅದೇ ವರುಷ ಅಲಹಾಬಾದಿನ ಹೈಕೋರ್ಟಿನಲ್ಲಿ ತನ್ನ ಹೆಸರನ್ನು ನೋಂದಾಯಿಸುವುದರ ಮೂಲಕ ಕಾರ್ನೀಲಿಯಾ ಭಾರತದ ಮೊತ್ತ ಮೊದಲನೆಯ ಬ್ಯಾರಿಸ್ಟರ್ ಆಗಿ ನೇಮಕಗೊಳ್ಳುತ್ತಾಳೆ. ಇದಕ್ಕಾಗಿ ಸುಮಾರು ಮೂರು ದಶಕಗಳ ಕಾಲ ಹೋರಾಡಿದ ಅವಳ ಹೋರಾಟಕ್ಕೆ ತಡವಾಗಿಯೇ ಆದರೂ, ಕಡೆಗೆ ಸಿಕ್ಕ ಈ ಪ್ರತಿಫಲವು ಭಾರತೀಯ ಮಹಿಳಾ ಇತಿಹಾಸದ ಒಂದು ಮಹತ್ವದ ಘಟನೆಯಾಗಿದೆ. ಹೀಗಿದ್ದೂ ಅವಳಿಗೆ ಪದವಿ ಪತ್ರ ದೊರಕುವುದು ಮಾತ್ರ 1922ರಲ್ಲಿ ನಡೆದ ಘಟಿಕೋತ್ಸವದಲ್ಲಿಯೇ.

ಕಾರ್ನೀಲಿಯಾಳ ಮಹಿಳಾ ಪರವಾದ ಸಾಧನೆಗಳನ್ನು ಗಮದಲ್ಲಿಟ್ಟುಕೊಂಡು. ಅವಳ ಅಲೋಚನೆಗಳಲ್ಲಿದ್ದ ಅನೇಕ ಕುಂದು ಕೊರತೆಗಳನ್ನು ಗಮನಿಸುವುದೂ ಮುಖ್ಯವಾಗುತ್ತದೆ. ಕಾರ್ನೀಲಿಯಾ ಸಾಮಾನ್ಯ ಜನತೆಯಿಂದ ಹೊರತು ಪಡಿಸಿ, ಪಾಶ್ಚಾತ್ತೀಕರಣಕ್ಕೆ ಒಳಗಾದ ಶ್ರೀಮಂತ ಪಾರ್ಸಿ ವರ್ಗದೊಂದಿಗೆ ಹಾಗೂ ದೇಶೀ ಕ್ರಿಶ್ಚಿಯನ್ನರೊಂದಿಗೆ ತನ್ನನ್ನು ಗುರುತಿಸಿಕೊಂಡಿದ್ದರಿಂದ, ಅವಳ ಮನೋದರ್ಮವನ್ನು ರೂಪಿಸಿದುದು, ನಿಯಂತ್ರಿಸಿದುದು ವಸಾಹತುಶಾಹೀ ದೃಷ್ಟಿಕೋನವೇ ಆಗಿದ್ದಿತು.

ಭಾರತೀಯ ಶ್ರೀಮಂತ ವರ್ಗದವರಿಗೆ, ಪಾಶ್ಚಾತ್ಯ ವಿದ್ಯಾಭ್ಯಾಸಕ್ಕೆ ಸುಲಭವಾಗಿ ತೆರೆದುಕೊಳ್ಳಲು ಸಾಧ್ಯವಾದಂತೆ ಆಂಗ್ಲ ವಾತಾವರಣಕ್ಕೂ ಅಷ್ಟೇ ಸುಲಭವಾಗಿ ಒಗ್ಗಿಕೊಳ್ಳುವುದು ಸಾಧ್ಯವಾಯಿತು. ಆಳುವ ವರ್ಗಕ್ಕೆ ಸೇರಿದ ಅವರು ಇನ್ನೊಂದು ಆಳುವ ವರ್ಗದ (ವಸಾಹತುಶಾಹಿ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳವುದೂ ಕೂಡ ಸುಲಭವಾಯಿತು. ಆಧುನಿಕತೆಯ ಭವ್ಯತೆಯ ಎದುರು ನಿಬ್ಬೆರಗಾದ ಅವರಿಗೆ ಭಾರತೀಯವಾದುದರಲ್ಲೆಲ್ಲಾ ಬರೀ ಕುಂದು ಕೊರತೆಗಳೇ ಕಾಣಿಸಿದವು.

ಕಾರ್ನೀಲಿಯಾ ಇಂತಹ ಒಂದು ವರ್ಗಕ್ಕೆ ಸೇರಿದವಳಾದುದರಿಂದ, ಅವಳಿಗೂ ಸಹ ಇಂಗ್ಲೆಂಡು ಒಂದು ಸ್ವರ್ಗೀಯ ಭೂಮಿಯಾಗಿ ಕಾಣಿಸಿತು. ಆಕ್ಸ್ ಫರ್ಡ್ ಅವಳ ಪರಮೋಚ್ಚ ಗಮ್ಯವಾಯಿತು. ಇಂಗ್ಲೆಂಡಿನ ನದಿ, ಬೆಟ್ಟ, ಹಸಿರು ಅಲ್ಲದೆ, ಸ್ನೇಹಶೀಲರಾದ ಮತ್ತು ಸ್ವಲ್ಪ ಹೆಚ್ಚಾಗಿಯೇ ಸಜ್ಜನರಾಗಿ ಕಂಡ ಅಲ್ಲಿನ ಜನಸಮೂಹ ಎಲ್ಲವೂ ಅದ್ಭುತವಾಗಿ ಕಾಣಿಸಿದವು. ರೊಮ್ಯಾಂಟಿಕ್ ಧೋರಣೆಯಿಂದಲೇ ಇವುಗಳೆಲ್ಲವನ್ನೂ ಕಾಣುವ ಕಾರ್ನೀಲಿಯಾ ಭಾರತದಲ್ಲಿದ್ದರೂ ಥೇಮ್ಸ್ ನದಿಯ ಸುತ್ತಲೇ ಗಿರಕಿ ಹೊಡೆಯುತ್ತಾಳೆ.

“ಇಳಿಜಾರಾದ ದಡಗಳಿಂದ, ಸುಂದರ ಮನೆಗಳು ಹಾಗೂ ಹೂದೋಟಗಳಿಂದ ಕೂಡಿದ ಥೇಮ್ಸ್ ನಂತಹ ನದಿಯೊಂದು ಪ್ರಪಂಚದಲ್ಲಿರಲು ಸಾಧ್ಯವೇ?” ಎಂದು ಆಶ್ಚರ್ಯಪಡುತ್ತಾಳೆ. (ಇಂಡಿಯಾ ಕಾಲಿಂಗ್) ಅವಳಿಗೆ ಇದ್ದ ಗೆಳತಿಯರೆಲ್ಲಾ ಇಂಗ್ಲಿಷರೇ. ತಪ್ಪಿ ಕೂಡ ಅವಳು ಒಬ್ಬ ಭಾರತೀಯ ಗೆಳತಿಯನ್ನೂ ಕೂಡ ಹೆಸರಿಸುವುದಿಲ್ಲ.”ಜನಾನಾಗಳಲ್ಲಿಯ ಈ ನನ್ನ ಅನುಭವಗಳನ್ನು ಹಂಚಿಕೊಳ್ಳಲು ಒಬ್ಬ ಇಂಗ್ಲಿಷ್ ಗೆಳತಿ ಇಲ್ಲಿದ್ದಿದ್ದರೆ?” ಎಂದು ಹಲಬುತ್ತಾಳೆ.

ಭಾರತದಲ್ಲಿನ ಅವಳ ಸಾಹಸವನ್ನಾಗಲೀ, ಯೋಜನೆಗಳನ್ನಾಗಲೀ ಅವಳು ಹಂಚಿಕೊಳ್ಳುವುದು, ಹಬ್ ಹೌಸ್ ದಂಪತಿಯೊಂದಿಗೆ. ಭಾರತದಲ್ಲಿನ ಅವಳ ರೋಮಾಂಚನದ ಗಳಿಗೆಗಳು ಇಂಗ್ಲೆಂಡಿಗೆ ರವಾನೆಯಾದ ನಂತರವೇ ಅವಳಿಗೆ ತೃಪ್ತಿ.. ಭಾರತೀಯರಂತೆ ತಾನೂ ವಾನಪ್ರಸ್ಥಕ್ಕೆ ಕಾಡಿಗೆ ಹೋಗಬೇಕೆಂದು ಅವಳ ಮನದಲ್ಲಿ ಹೊಳೆದಾಗ, ಅವಳ ಕಣ್ಣಮುಂದೆ ಬರುವುದು ಯಾವುದೋ ದಂಡಕಾರಣ್ಯವಲ್ಲ. ಬದಲಿಗೆ ‘ಲಂಡನ್ನಿನ ಒಂದು ಕಾಡು’ ಹಾಗೆಂದು ಅವಳು ಅದನ್ನು ಒತ್ತಿ ಹೇಳುತ್ತಾಳೆ.

ಅವಳ ಬ್ರಿಟಿಷ್ ಮೋಹ ಎಷ್ಟು ಗಾಢವಾಗಿತ್ತೆಂದರೆ, ವಸಾಹತುಶಾಹಿ ಆಡಳಿತದ ವಿರುದ್ಧ ಪ್ರಚಾರ ಮಾಡಲು ಅನೇಕ ಭಾರತೀಯರು ಕೆನೆಡಾದಲ್ಲಿ ಒಟ್ಟು ಸೇರಿದ ಸಂದರ್ಭದಲ್ಲಿ, ಬ್ರಿಟಿಷರ ಪರವಾಗಿ ಮಾತನಾಡಲು ಕಾರ್ನೀಲಿಯಾ ಸಿದ್ಧಳಾಗುತ್ತಾಳೆ. ಭಾರತೀಯ ಬ್ರಿಟಿಷರ ಬಗೆಗೆ ಆರೋಪಿಸುತ್ತಿರುವ ಸುಳ್ಳು ಟೀಕೆಗಳ ವಿರುದ್ಧ ಬ್ರಿಟಿಷರೇಕೆ ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಅಮೆರಿಕೆಯಲ್ಲಿ ಅವಳನ್ನು ಪ್ರಶ್ನಿಸಿದಾಗ ಅವಳು ಹೆಮ್ಮೆಯಿಂದ, “Do you know, British, it is not their habit to defend themselves”ಎಂದು ಉತ್ತರಕೊಡುತ್ತಾಳೆ.

ಬ್ರಿಟಿಷ್ ಬಾರ್ ಅಸೋಸಿಯೇಷನ್ನಿನಲ್ಲಿ ಮೊತ್ತಮೊದಲು ದಾಖಲುಗೊಂಡ, ಬ್ಯಾರಿಸ್ಟರ್ ಆದ, ಆಕ್ಸ್ ಫರ್ಡ್ ನಲ್ಲಿ ಕಲಿತ, ಐ. ವಿ. ವಿಲಿಯಮ್ಸ್ ಬಗೆಗೆ ಹೇಳುತ್ತಾ “How glad one was that she belonged to that beloved University” ಎನ್ನುತ್ತಾಳೆ.  ಕಾರ್ನೀಲಿಯಾಳ ‘ಇಂಡಿಯಾ ಕಾಲಿಂಗ್’ ಕೃತಿಯುದ್ದಕ್ಕೂ ಅವಳ ಒಳನೋಟಗಳನ್ನು ನಿಯಂತ್ರಿಸಿರುವುದು ಇಂತಹ ಬ್ರಿಟಿಷ್ ಆರಾಧನೆಯೇ ಆಗಿದೆ. ತನ್ನ ತಾಯಿಗೆ ಹುಟ್ಟಿದ ಏಳು ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ಕಾರ್ನೀಲಿಯಾಳು ಹೆಮ್ಮೆಯಿಂದ, “ಯಾವ ದೇಶದಲ್ಲಿ ಹೆಣ್ಣು ಮಗುವೊಂದು ಶಾಪವಾಗಿದೆಯೋ ಅಂತಹ ದೇಶದಲ್ಲಿ ಏಳು ಹೆಣ್ಣುಗಳನ್ನು ಹೆತ್ತ ನನ್ನ ತಾಯಿ ಅದನ್ನು ವರವೆಂದೇ ಪರಿಗಣಿಸಿದ್ದಾಳೆ” ಎಂದು ಹೇಳಿಕೊಳ್ಳುತ್ತಾಳೆ. ಇದು ಸತ್ಯವಾದರೂ ಅವಳ ಧ್ವನಿಯಲ್ಲಿ ಕ್ರಿಶ್ಚಿಯನ್ ಮೇಲರಿಮೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಬರ್ನಾಡ್ ಷಾ, ಮೆಕಾಲೆ, ಫ್ಲಾರೆನ್ಸ್ ನೈಟಿಂಗೇಲ್, ಮ್ಯಾಕ್ಸ್ ಮುಲ್ಲರ್, ಲಾರ್ಡ್ ಟೆನಿಸನ್, ವಿಲಿಯಮ್ ಎಡ್ವರ್ಡ್ ಗ್ಲ್ಯಾಡ್ ಸ್ಟೋನ್, ಮುಂತಾದವರೊಂದಿಗೆ ಅವಳ ಸಾಮಾಜಿಕ ಒಡನಾಟಗಳೂ ಅವಳ ಈ ಮೇಲರಿಮೆಯನ್ನು ಹೆಚ್ಚಿಸಿದ್ದವು. ಇದನ್ನು ಸಾಮಾಜಿಕ ಪ್ರತಿಷ್ಠೆಯ, ಆತ್ಮವಿಶ್ವಾಸದ ಒಡನಾಟವೆಂದು ಅವಳೇ ಕರೆದುಕೊಳ್ಳುತ್ತಾಳೆ. ಭಾರತದ ಘೋಷಾದಲ್ಲಿರುವ ಮಹಿಳೆಯರ ಸೇವೆ ಮಾಡಲು ಅವಕಾಶವೊಂದನ್ನು ಒದಗಿಸಿದ ಬ್ರಿಟಿಷ್ ಸರ್ಕಾರಕ್ಕೆ ತಾನೆಂದೂ ಋಣಿಯಾಗಿರುವೆನೆಂದು ಹೇಳಿಕೊಳ್ಳುತ್ತಾಳೆ.

ಹೀಗೆ ವಸಾಹತು ಕಣ್ಣಿನಿಂದಲೇ ನೋಡ ಹೊರಟ ಕಾರ್ನೀಲಿಯಗೆ ಕಾಣುವುದು ಎಲ್ಲಾ ಬ್ರಿಟಿಷರಿಗೆ ಕಂಡ ಹಾಗೆ ಒಂದು ನಶಿಸಿಹೋದ (Spoilt) ಸಂಸ್ಕೃತಿಯೇ. ಇಂತಹ ಸಂಸ್ಕೃತಿಯನ್ನು ಸುಧಾರಿಸಬೇಕೆಂಬ ಉದ್ದೇಶದಿಂದ ಭಾರತೀಯ ಜನತೆಯೊಡನೆ ಸೇರಿ, ತನ್ನನ್ನು ತಾನು ಗುರುತಿಸಿಕೊಳ್ಳುವ ಕಾರ್ನೀಲಿಯಾಳ ಪ್ರಯತ್ನದ ಹಿಂದೆ ಮಿಷನರಿ ಉತ್ಸಾಹದ ಅತಿರೇಕವೇ ಅಡಗಿದೆ ಎಂದರೆ ತಪ್ಪಾಗಲಾರದು. ಆಕೆ ತನ್ನ ಸೇವಾ ಕ್ಷೇತ್ರವನ್ನು ಮೀಸಲಾಗಿರಿಸಿಕೊಳ್ಳುವುದೂ ಕೂಡ ಪಂಡಿತಾ ರಮಾಬಾಯಿಯ ಹಾಗೆ ನಿರ್ಗತಿಕರನ್ನಲ್ಲ. ಬದಲಾಗಿ ತನ್ನಂತೆ ಕೆಲವೇ ಶ್ರೀಮಂತ ಮಧ್ಯಮ ವರ್ಗದ ಮಹಿಳೆಯರನ್ನು.  ಆದುದರಿಂದಲೇ ಭಾರತೀಯ ಸಂಸ್ಕೃತಿಯ ಬಗೆಗೆ ಅವಳ ಉತ್ಪ್ರೇಕ್ಷಿತ ಆಕ್ಷೇಪಗಳೇನಿದ್ದರೂ ಅದು ಕೆಲವೇ ಜನರನ್ನು ಕುರಿತಾದ್ದು ಮಾತ್ರ. ಕಾರ್ನೀಲಿಯಾಳಿಗೆ ಭಾರತೀಯ ಜನರ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ, ಜೀವನ ಪದ್ಧತಿ, ಸಂಸ್ಕಾರಗಳ ಹಿಂದಿರುವ ಗಾಢವಾದ ಸಾಂಸ್ಕೃತಿಕ ಧಾರ್ಮಿಕ ಪರಂಪರೆ ಅರ್ಥವಾಗುವುದಿಲ್ಲ.

ಕಾರ್ನೀಲಿಯಾಳಿಗೆ ರಾಷ್ಟ್ರೀಯ ಚಳವಳಿ ಬಗೆಗೆ ಇದ್ದ ಅಭಿಪ್ರಾಯವಂತೂ ವಸಾಹತು ದೃಷ್ಟಿಕೋನವನ್ನೇ ಸಮರ್ಥಿಸುತ್ತದೆ. ಅದು ಅವಳ ಕಣ್ಣಿನಲ್ಲಿ ಸಣ್ಣ ಪುಟ್ಟ ಗುಂಪುಗಳ, ದಂಗೆಕೋರರ ಒಕ್ಕೂಟವಾಗಿದೆ. ಇಂತಹ ದಂಗೆಗಳಿಂದ ಬ್ರಿಟಿಷ್ ಸಾಮ್ರಾಜ್ಯವು ಅಲುಗಾಡಲಾರದೆಂದು ಅವಳು ಅಭಿಪ್ರಾಯಪಡುತ್ತಾಳೆ. ಗಾಂಧೀಜಿಯವರ ತತ್ವಗಳು ಮೋಸದ, ವಂಚನೆಯ ಆಧಾರದ ಮೇಲೆ ನಿಂತಿವೆ ಎನ್ನುತ್ತ, ಗಾಂದಿಯೊಬ್ಬ ಮಹಾತ್ಮನಾಗಿರುವುದರ ಕುರಿತಾಗಿಯೂ ಅವಳು ಕುಹಕವಾಡುತ್ತಾಳೆ. ಗಾಂಧೀಜಿಯವರ ಖಾದಿ ಚಳವಳಿಯಿಂದಾಗಿ ಮಹಿಳೆಯರು ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಬೀದಿಯಲ್ಲಿ ಮಲಗಿ ಪ್ರತಿಭಟಿಸುವುದನ್ನು ಅವಳು ಒಪ್ಪುವುದಿಲ್ಲ. ಅದು ಕುಟುಂಬಗಳ ಶಾಂತಿಯನ್ನು ಕೆಡಿಸುತ್ತದೆ ಎಂಬ ಕಾರಣಕ್ಕಾಗಿ ಅವಳು ಮಹಿಳೆಯರು ಸಾರ್ವಜನಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವುದನ್ನು ಸಹಿಸುವುದಿಲ್ಲ.

ಜನಾನಾದ ಮಹಿಳೆಯರಿಗಾಗಿ ಕೆಲವು ಅಪಾಯಕಾರೀ ಸಾಹಸಗಳಲ್ಲಿ ತೊಡಗಿಕೊಂಡ ಅವಳನ್ನು ಜನ ಪ್ರೀತಿಯಿಂದ “ಬಡಾಲಾಟ್ ಸಾಹೇಬ್ ವೈಸರಾಯ್” ನ ಹಾಗೆ ಕಂಡಿದ್ದರಂತೆ. ಅದಕ್ಕೆ ಚಾಂದನಿ ಲೋಕುಗೆಯವರು,’ ಕಾರ್ನೀಲಿಯಾಳ ಸಮಕಾಲೀನರಾಗಿದ್ದ ಸರಲಾ ದೇವಿ ಹಾಗೂ ಮೇಡಂ ಕಾಮ ಅವರುಗಳೂ ರಾಷ್ಟ್ರೀಯ ಹೋರಾಟಗಳಲ್ಲಿ ಕಾನೀಲಿಯಾಳಿಗಿಂತ ಅಪಾಯಕಾರಿಯಾದ ಸಾಹಸಗಳಲ್ಲಿ ತೊಡಗಿದ್ದರು. ಕಾರ್ನೀಲಿಯಾ ಒಬ್ಬಳೇ ಅಂತಹ ಸಾಹಸಗಳಲ್ಲಿ ತೊಡಗಿಕೊಂಡವಳಾಗಿರಲಿಲ್ಲ’ ಎನ್ನುತ್ತಾರೆ. ಅವರ ಪ್ರಕಾರ ‘ವಸಾಹತುಶಾಹಿ ಪುರುಷರ ನಡುವೆ ಅವಳ ಸ್ಥಾನವು ಒಂದು ಅಪವಾದವಾಗಿತ್ತೇ ಹೊರತು, ಅವಳು ತನ್ನಂತಹ ಸಾಹಸೀ ಮಹಿಳೆಯರ ಪ್ರತಿನಿಧಿಯಾಗಿರಲಿಲ್ಲ’. ಅವಳು ತನ್ನ ಪುಸ್ತಕದಲ್ಲಿ ತನ್ನ ಸಮಕಾಲೀನರಾದ ಯಾವ ಮಹಿಳೆಯರನ್ನೂ ಉಲ್ಲೇಖಿಸುವುದಿಲ್ಲ. ಇದಕ್ಕೆ ಆ ಮಹಿಳೆಯರ ಬಗ್ಗೆ ಅವಳಿಗಿದ್ದ ಉಪೇಕ್ಷಾಮನೋಭಾವವೇ ಕಾರಣವಾಗಿದೆ ಎನ್ನುತ್ತಾರೆ.

ಇಡೀ ದೇಶದ ಶಕ್ತಿಯೇ ರಾಷ್ಟ್ರೀಯತೆಯ ಗುರಿಯಲ್ಲಿ ಸೋರಿ ಹೋಗುತ್ತಿದ್ದ ಕಾಲದಲ್ಲಿ, ಕಾರ್ನೀಲಿಯಾಳು ಒಬ್ಬ ಭಾರತೀಯಳಾಗಿ ಹೊಂದಿದ್ದ ಇಂತಹ ಆಲೋಚನೆಗಳು ಅವಳ ಸಮಕಾಲೀನರಲ್ಲಿ ಅಸಮಾಧಾನವನ್ನು ಉಂಟುಮಾಡಿದುದರಲ್ಲಿ ಆಶ್ಚರ್ಯವೇನಿಲ್ಲ.

ಅವಳ ವ್ಯಕ್ತಿತ್ವದ ಈ ಎಲ್ಲ ಕುಂದುಕೊರತೆಗಳನ್ನು ಗಮನದಲ್ಲಿಟ್ಟುಕೊಂಡೂ, ಅವುಗಳ ನಡುವೆಯೇ, ಲಿಂಗಾಧಾರಿತ ಸಮಾಜವೊಂದರಿಂದ ಮಹಿಳೆಯರನ್ನು ಬಿಡುಗಡೆಗೊಳಿಸಬೇಕೆಂದು ಹೋರಾಡಿದ ಅವಳ ಪ್ರಯತ್ನಗಳು ಮಾತ್ರ ಮಹಿಳಾ ಚರಿತ್ರೆಯಲ್ಲಿ ಎಂದೆಂದಿಗೂ ಉಳಿದುಕೊಳ್ಳುತ್ತವೆ. ಮಹಿಳೆಯರ ವೈಯಕ್ತಿಕ ಅನನ್ಯತೆಯನ್ನು ಪಿತೃಪ್ರಧಾನ ವ್ಯವಸ್ಥೆಯೊಂದರಲ್ಲಿ ಸ್ಥಾಪಿಸುವುದಕ್ಕೆ ಹಾಕಿಕೊಟ್ಟ ಅವಳ ಹೋರಾಟದ ಮಾದರಿಗಳು ಅಪೂರ್ವವಾಗಿವೆ. ಅಷ್ಟೇ ಅಲ್ಲದೆ ಅನುಕರಣೀಯವೂ ಆಗಿವೆ..

 

‍ಲೇಖಕರು avadhi

May 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: