ನಿಸಾರ್ ವಿಜ್ಞಾನ ಪುಸ್ತಕಗಳ ಸೊಗಡು

‘ಸಾರಸ್ವತ ಸಿರಿ….. 81ರ ಹಾದಿಯಲ್ಲಿ ನಿಸಾರ್’  ಇದು 2016 ರಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದಲ್ಲಿ ಆರ್. ಡಿ. ಜಿ.  ಅವರ  ಸಂಪಾದಕೀಯದಲ್ಲಿ  ಹೊರತಂದಿರುವ   ಒಂದು ವಿಶೇಷ ಕೃತಿ. ಸುಮಾರು ಐನೂರು  ಪುಟಗಳಿರುವ ಈ ಪುಸ್ತಕವು  ‘ನಿಸಾರ್ ಸಾಹಿತ್ಯದ ಬಗ್ಗೆ’  ಮತ್ತು  ‘ವ್ಯಕ್ತಿಯಾಗಿ ನಿಸಾರ್’  ಎಂಬ ಎರಡು ಭಾಗಗಳನ್ನು ಹೊಂದಿದ್ದು ನಾಡಿನ ದಿಗ್ಗಜ ಬರಹಗಾರರ  70 ಲೇಖನಗಳು ಇದರಲ್ಲಿ ಅಡಕವಾಗಿವೆ.

ಇತ್ತೀಚೆಗಷ್ಟೇ ನಮ್ಮನ್ನೆಲ್ಲ ಅಗಲಿದ ನಾಡಿನ ಒಬ್ಬ  ಶ್ರೇಷ್ಠ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್  ಅವರ ಬಹುಮುಖಿ ವ್ಯಕ್ತಿತ್ವದ  ಬಗ್ಗೆ ತಿಳಿಯಲು ಹಾಗೂ  ಅವರ ಸಾಹಿತ್ಯ ಕೃತಿಗಳ ವಿಮರ್ಶೆಗಳನ್ನು ಓದಲು ಇದು ಒಂದು  ಅತ್ಯುತ್ತಮ ಪುಸ್ತಕವಾಗಿದೆ.

ಈ ಪುಸ್ತಕ ಪ್ರಕಟಣೆಯ ಸಮಯದಲ್ಲಿ ನಿಸಾರ್ ಸರ್ ಆಶಯದಂತೆ  ಅವರ  ವಿಜ್ಞಾನ ಪುಸ್ತಕಗಳ ಬಗ್ಗೆ ವಿಮರ್ಶೆ ಬರೆಯಲು  ನನಗೂ ಒಂದು ಅವಕಾಶ ಒದಗಿತು.  ಪುಸ್ತಕದಲ್ಲಿ ಪ್ರಕಟಗೊಂಡ ನನ್ನದೊಂದು ವಿಮರ್ಶಾತ್ಮಕ  ಲೇಖನ ಇದರೊಂದಿಗೆ.

ಮನಸ್ಸಿಗೆ ಮುದ ನೀಡುವ ಪ್ರೊ. ಕೆ. ಎಸ್. ನಿಸಾರ್ ಅಹಮದ್

ಅವರ ವಿಜ್ಞಾನ ಪುಸ್ತಕಗಳು

-ಡಾ. ಪ್ರಶಾಂತ ನಾಯ್ಕ, ಬೈಂದೂರು

ಜೀವವಿಜ್ಞಾನ  ವಿಭಾಗ | ಮಂಗಳೂರು ವಿಶ್ವವಿದ್ಯಾನಿಲಯ

ನಿತ್ಯೋತ್ಸವ ಕವಿಯೆಂದೇ ಜಗತ್ತಿನಾದ್ಯಂತ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ  ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಹಲವಾರು ಹೃದಯಸ್ಪರ್ಶಿ ಭಾವಗೀತೆಗಳ  ಕವನ ಸಂಕಲನಗಳು ಮಾತ್ರವಲ್ಲ,  ವೈಚಾರಿಕ ಪ್ರಬಂಧಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದಿತ ಕೃತಿಗಳನ್ನು ರಚಿಸಿರುವ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಒಬ್ಬ ಭೂವಿಜ್ಞಾನ ಪ್ರಾಧ್ಯಾಪಕರಾಗಿ ವಿಜ್ಞಾನ ಸಾಹಿತ್ಯದಲ್ಲೂ  ತಮ್ಮದೇ ಆದ  ಅಮೂಲ್ಯವಾದ ಕಾಣಿಕೆಯನ್ನು ನೀಡಿದವರು.

೧೯೭೭ ರಲ್ಲಿ ಐ.ಬಿ.ಹೆಚ್. ಪ್ರಕಾಶನದಲ್ಲಿ ಹೊರಬಂದಿರುವ  ಪ್ರೊ.  ನಿಸಾರ್ ಅಹಮದ್ ಅವರ ಎರಡು ಅತ್ಯಮೂಲ್ಯ ವೈಜ್ಞಾನಿಕ ಕೃತಿಗಳು, ‘ಹಕ್ಕಿಗಳು’ ಮತ್ತು  ‘ಶಿಲೆಗಳು ಖನಿಜಗಳು’.  ವಿಜ್ಞಾನವನ್ನು ಕನ್ನಡದಲ್ಲಿ,  ಅದರಲ್ಲಿಯೂ  ಮುಖ್ಯವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಲುಪಿಸುವುದು ಅಷ್ಟು  ಸರಳವಲ್ಲ.  ಆದರೆ ನಿಸಾರ್ ಅವರ ಈ ಎರಡು ಕೃತಿಗಳು  ಪಕ್ಷಿ ಮತ್ತು ಶಿಲೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಗಳನ್ನು ಸರಳತೆಯೊಂದಿಗೆ ರೋಮಾಂಚನಗೊಳಿಸುವ ರೀತಿಯಲ್ಲಿ ಅನಾವರಣಗೊಳಿಸುತ್ತವೆ.

ವೈವಿಧ್ಯಮಯ ಕೋಟ್ಯಾಂತರ ಜೀವಿಗಳಲ್ಲಿ ಎಲ್ಲರಿಗೂ ಇಷ್ಟದ  ಮತ್ತು ಕೌತುಕಮಯ ನಿಸರ್ಗದ  ಒಂದು ಸೃಷ್ಟಿ ಪಕ್ಷಿಗಳು.  ಈಗಷ್ಟೇ ಪುಟ್ಟಪುಟ್ಟ ಹೆಜ್ಜೆಗಳನಿಡುತ್ತಾ  ಹೊರಜಗತ್ತನ್ನು ಬೆರಗುಗಣ್ಣಿಂದ ನೋಡುವ ಪುಟಾಣಿಗಳಿಗೆ ಹಾಗೂ ಆಗಷ್ಟೇ ಶಾಲೆಗೆ ಸೇರಿ  ಜೀವನದ  ನವನವೀನ ಅನುಭವವನ್ನು  ತುಂಬಿಕೊಳ್ಳುತ್ತಿರುವ ಪ್ರಾಥಮಿಕ  ಶಾಲಾ ಮಕ್ಕಳಿಗೆ ಪಕ್ಷಿಗಳೆಂದರೆ ಕುತೂಹಲ ಇನ್ನೂ ಹೆಚ್ಚೇ.  ಬೆಳಗಿನ ಜಾವ ಹಕ್ಕಿಗಳ ಕಲರವದಿಂದ ಮೈಮನಸ್ಸು ಪುಳಕಗೊಂಡಾಗ,    ಗೂಡು ಸೇರುವ ಪಕ್ಷಿಗುಂಪುಗಳ ಬಾನಾಂಗಳದ ಮುಸ್ಸಂಜೆಯ ದೃಶ್ಯ,  ಮುಷ್ಟಿಯಗಲದ ಗುಂಡಿಯ  ನೀರಿನಲ್ಲಿ  ಮುಳುಮುಳುಗಿ  ಎದ್ದು ಮೈಕೊಡವಿಕೊಳ್ಳುವ,   ಹತ್ತಿರ ಬಂದಾಗ ಪುರ್ ಎಂದು ಹಾರಿ ಹೋಗಿ ಪುನ: ಬಂದು ಚೆಲ್ಲಿರುವ ಬೇಳೆಕಾಳುಗಳನ್ನು ತಿನ್ನುವ   ಗುಬ್ಬಚ್ಚಿಗಳನ್ನು, ಬೆಳ್ಳಂಬೆಳಿಗ್ಗೆ  ತಪ್ಪದೇ ಕೂಗುವ ಹುಂಜ, ಜಾತ್ರೆಯಲ್ಲಿ ಜ್ಯೋತಿಷ್ಯನ ಆಜ್ಞೆಗೆ ಪಂಜರದಿಂದ ಹೊರಬಂದು ಭವಿಷ್ಯ ‘ಹೇಳುವ’ ಗಿಣಿ (ಗಿಣಿಪ್ರಶ್ನೆ),  ಸತ್ತ ಪ್ರಾಣಿಯ ಮಾಂಸವನ್ನು ಕುಕ್ಕಿ ಕುಕ್ಕಿ  ತಿನ್ನುವ ಕಾಗೆ, ಹದ್ದುಗಳು,  ಮನಸೂರೆಗೊಳ್ಳುವ ನವಿಲಿನ ನೃತ್ಯ, ವಸಂತ ಮಾಸದಲ್ಲಿ ಕುಹು ಕುಹೂ… ಎಂದು ಇಂಪಾಗಿ ಕೂಗುವ ಕೋಗಿಲೆ, ಹೀಗೆ ವೈವಿಧ್ಯಮಯ ಪಕ್ಷಿಗಳನ್ನು, ಪಕ್ಷಿಗಳ ಚಟುವಟಿಕೆಗಳನ್ನು  ನಮ್ಮ  ಸುತ್ತಮುತ್ತ ನೋಡಿದಾಗ  ಅವುಗಳ ಬಗ್ಗೆ ವಿಶೇಷವಾದ ಆಸಕ್ತಿ ಮೂಡುತ್ತದೆ.  “ಪಕ್ಷಿಗಳು ಹೇಗೆ ಆಕಾಶದಲ್ಲಿ ಹಾರಾಡುತ್ತವೆ?”,   “ರಾತ್ರಿ ಎಲ್ಲಿ ಮಲಗುತ್ತವೆ?”,  “ಗೂಡು ಹೇಗೆ ಕಟ್ಟುತ್ತದೆ ?”  “ಮರಿಗಳಿಗೆ ಯಾರು ತಿಂಡಿ ತಂದು ಕೊಡುತ್ತಾರೆ?”,    “ಹುಂಜ ಮುಂಜಾನೆ ಏಕೆ ಕೂಗುತ್ತದೆ?”  ಹೀಗೆ   ಅನೇಕ  ಪ್ರಶ್ನೆಗಳು  ಮುಗ್ಧ ಮಕ್ಕಳ ಮನಸ್ಸಿನಲ್ಲಿ ಮೂಡದೇ ಇರದು.

ಮಕ್ಕಳ ಮನಸ್ಸಿನ ಮುಗ್ಧತೆ ಮತ್ತು ಆ ಮುಗ್ಧತೆಯೊಳಗಿನಿಂದ  ಮೂಡಿಬರುವ ಹತ್ತಾರು ಪ್ರಶ್ನೆಗಳನ್ನು  ಗಮನದಲಿಟ್ಟುಕೊಂಡು  ನಿಸಾರ್ ಅಹಮದ್ ಅವರು ಹಕ್ಕಿಗಳ  ಪ್ರಪಂಚವನ್ನು ಮಕ್ಕಳಿಗಾಗಿ ರೋಚಕ ಮತ್ತು ವರ್ಣಮಯವಾಗಿ   ಈ ಪುಸ್ತಕದ ಮೂಲಕ ತೆರೆದಿಡುತ್ತಾ  ಹೋಗುತ್ತಾರೆ. ಪುಸ್ತಕದ ಮುಖ್ಯ ಆಕರ್ಷಣೆ ಎಂದರೆ,  ಇಲ್ಲಿ ನಿಸಾರ್ ಅವರು  ಕೇವಲ ಒಬ್ಬ ಬರಹಗಾರರಾಗಿ ಮಾಹಿತಿಯನ್ನು ನೀಡುತ್ತಾ ಹೋಗದೆ   ಒಂದು ಮಗುವಿನ ತಂದೆ ಅಥವಾ ತಾತನ ಸ್ಥಾನದಲ್ಲಿ ನಿಂತು  ವಿಷಯಗಳನ್ನು ಮನದಟ್ಟು ಮಾಡುತ್ತಾರೆ; ಅಂದರೆ, ಓದುತ್ತಿರುವ ಮಕ್ಕಳಿಗೆ ತನ್ನ ಅಜ್ಜ ಅಥವಾ ಅಪ್ಪ ಕೈಹಿಡಿದು  ಪ್ರೀತಿಯಿಂದ ‘ಇದು ಹೀಗೆ ಮಗು’,  ‘ಪುಟ್ಟ ಬಾ ನೋಡಿಲ್ಲಿ!’ ಅನ್ನುವ ರೀತಿಯಲ್ಲಿ ಆತ್ಮೀಯವಾಗಿಸುತ್ತದೆ. ಕ್ಲಿಷ್ಟ ವೈಜ್ಞಾನಿಕ ವಿವರಣೆಗಳು  ಉದಾಹರಣೆ, ಹಕ್ಕಿಗಳು ಪುಸ್ತಕದಲ್ಲಿ ಕೊಕ್ಕಿನ ಬಗ್ಗೆ ವಿವರಿಸುವಾಗ, “ಕೊಕ್ಕು, ಅದು ಮತ್ತೇನಲ್ಲ, ಹಕ್ಕಿಯ ತುಟಿ, ತುಟಿಗಳು ಗಟ್ಟಿಯಾಗಿ ಬೆಳೆದು ಮುಂದೆ ಚಾಚಿವ ಅಷ್ಟೇ…”, ಹೀಗೆ ಸರಳ ಸುಂದರವಾದ ಭಾಷೆಯಲ್ಲಿ ಆಪ್ತವಾಗಿ ಮೈದಳೆಯುತ್ತವೆ. ಮಕ್ಕಳು ಮಾತ್ರವಲ್ಲ, ಪುಸ್ತಕವನ್ನು ಓದುವಾಗ ದೊಡ್ಡವರಿಗೂ ಕೂಡ  ಬಾಲ್ಯದಲ್ಲಿ ತಮ್ಮ ಅಜ್ಜ/ಅಜ್ಜಿಯೊಂದಿಗೆ ಕಳೆದ   ಸವಿನೆನಪುಗಳನ್ನು   ಕಟ್ಟಿಕೊಡುತ್ತದೆ.

ಪಕ್ಷಿ ಈ ಪದದ ಹಿನ್ನೆಲೆಯೊಂದಿಗೆ  ಪ್ರಾರಂಭವಾಗುವ  ‘ಹಕ್ಕಿಗಳು’, ಅವುಗಳ ಸಾಮಾನ್ಯ ಗುಣಲಕ್ಷಣಗಳು, ಪ್ರಪಂಚದ ಮೊದಲನೆಯ ಹಕ್ಕಿ, ವಿಕಾಸದ ಮೂಲ,  ಗರಿಗಳ ವಿಭಿನ್ನತೆ, ಅವುಗಳ ಉಪಯೋಗ,  ತೋಕೆ,  ಕೊಕ್ಕು, ಕಣ್ಣು, ಕಾಲು,  ವಾಯು ಚೀಲಗಳು; ರೆಕ್ಕೆ ಬಡಿತ,  ಹೀಗೆ ಪಕ್ಷಿಗಳ ಬಗ್ಗೆ ಅನೇಕ ವೈಜ್ಞಾನಿಕ ಮಾಹಿತಿಗಳೊಂದಿಗೆ  ಅಕ್ಷರಗಳಲ್ಲಿ ಹಿಡಿದಿಟ್ಟ ಅವುಗಳ ಜೀವನಶೈಲಿಯ ನಿರೂಪಣೆಯು ಕುತೂಹಲಭರಿತವಾಗಿ ಓದುಗರನ್ನು ಕೊಂಡೊಯ್ಯುತ್ತದೆ.  ಹಾಗೆಯೇ ಮುಂದುವರಿಯುತ್ತಾ    ಗೂಡುಗಳ ವಿನ್ಯಾಸ,  ಗೀಜಗ ಮತ್ತು ಗೊಂಡಹಕ್ಕಿ  ಗೂಡುಗಳ ಸ್ವಾರಸ್ಯಕರ ಸಂಗತಿಗಳು, ಮೊಟ್ಟೆ, ಮರಿಗಳ ಆರೈಕೆ, ಕವುಜುಗ ಹಕ್ಕಿಯ ನಟನೆ, ಧೀರ ಕಾಣಜ,  ಸಹಬಾಳ್ವೆ, ವಲಸೆ, ವಲಸೆಯನ್ನು ಪತ್ತೆ ಹಚ್ಚುವ ವಿಧಾನ, ಪಕ್ಷಿಗಳಿಂದ  ಮಾನವನಿಗೆ ಉಪಯೋಗಗಳು, ಚೀನಾ ಮತ್ತು ಇತರ ದೇಶಗಳಲ್ಲಿ ಮೀನು ಹಿಡಿಯಲು  ಪಕ್ಷಿಯೊಂದರ ಬಳಕೆ, ಹೀಗೆ ಅನೇಕ ಕುತೂಹಲಕರ ಅಂಶಗಳ ಬಗ್ಗೆ  ಓದುಗರ ಆಸಕ್ತಿಯನ್ನು  ಕೆದುಕುತ್ತದೆ.  ಮಾತ್ರವಲ್ಲದೆ, ಮನೆ ಅಥವಾ ಮನೆಯ ತೋಟವನ್ನೇ  ಹೇಗೆ ಒಂದು ಪಕ್ಷಿಧಾಮವನ್ನಾಗಿ ಮಾಡಬಹುದು  ಎಂಬುವುದನ್ನು  ವಿವರಿಸುತ್ತಾ  ಸೃಜನಶೀಲ ಚಟುವಟಿಕೆಯೊಂದಕ್ಕೆ ಪ್ರೆರೇಪಿಸಿ   ಮಕ್ಕಳನ್ನು   ಕ್ರಿಯಾಶೀಲರನ್ನಾಗಿಸುತ್ತದೆ.   “ಕಾಗೆಯೊಂದರ ಕಣ್ಣಿಗೆ ಆಹಾರ ಬಿದ್ದಿರುವುದನ್ನು ಕಂಡೊಡನೆ  ‘ಕಾ ಕಾ’ಎಂದು ಕೂಗಿ ಇತರ ಕಾಗೆಗಳನ್ನೂ ಕರೆದು ಎಲ್ಲರೊಡನೆ ಹಂಚಿ ತಿನ್ನುವ ಗುಣವನ್ನು  ಉಲ್ಲೇಖಿಸುತ್ತಾ   ಮನುಷ್ಯ ಕಾಗೆಯಿಂದ ಈ ಉದಾರ ಬುದ್ಧಿಯನ್ನು ಕಲಿಯಬೇಕಲ್ಲವೇ?” ಎಂಬಂತಹ  ಆದರ್ಶ ಗುಣಗಳನ್ನೂ  ಈ ಪುಸ್ತಕದ ಮೂಲಕ ಅಭಿವ್ಯಕ್ತಗೊಳಿಸುತ್ತಾರೆ;  ಮಕ್ಕಳ ಮನಸ್ಸಿಗೆ ನಾಟುವಂತೆ ಔಚಿತ್ಯಪೂರ್ಣವಾಗಿ   ಆದರ್ಶತೆಯ ಪರಿಕಲ್ಪನೆಯನ್ನು ಉದಾಹರಣೆಯೊಂದಿಗೆ ನೀಡುವುದು ಈ ಪುಸ್ತಕದ ಇನ್ನೊಂದು ಹೆಗ್ಗಳಿಕೆ.   ಕೊನೆಯಲ್ಲಿ  ಮನೆಯ ನಾಲ್ಕು ಗೋಡೆಗಳಿಂದ  (ಅಂದಿನ ದಿನಗಳಲ್ಲಿ ಪುಸ್ತಕಗಳಿಂದ; ಪ್ರಸ್ತುತ ದಿನಗಳಲ್ಲಿ, ದೂರದರ್ಶನ, ಮೊಬೈಲ್ ಫೋನ್, ಅಂತರ್ಜಾಲಗಳಿಂದ) ಹೊರಬಂದು ಪ್ರಶಾಂತತೆಯಿಂದ ನಿಸರ್ಗದ ರಮ್ಯತೆಯನ್ನು   ಆನಂದಿಸುತ್ತಾ  ಕಲಿಯಲು  ‘ಹಕ್ಕಿ ಹಾರುತಿದೆ ನೋಡಿದಿರಾ!’  ಎಂಬ ಕರೆಯೋಲೆಯೊಂದಿಗೆ ಓದುಗರನ್ನು  ಪ್ರಕೃತಿಯ ಮಡಿಲಿಗೆ ಆಹ್ವಾನಿಸುತ್ತದೆ. ಒಟ್ಟಾರೆಯಾಗಿ ಈ ಪುಸ್ತಕ ಓದಿ ಮುಗಿಸುವ ಹೊತ್ತಿಗೆ  ನಿಸಾರ್ ಅವರು ಓದುಗನನ್ನು ಅಪೂರ್ವವಾದ ಹಕ್ಕಿಗಳ ಲೋಕಕ್ಕೆ  ಒಂದು ವಿಹಾರ ಮಾಡಿಸಿಬಂದ ಅನುಭವವನ್ನು ಕಟ್ಟಿಕೊಡುತ್ತಾರೆ.   ೧೯೭೮ ರಲ್ಲಿ  ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ,  ಮಾತ್ರವಲ್ಲ ಅದೇ ವರ್ಷ  ಎನ್.ಸಿ.ಇ.ಆರ್.ಟಿ. (ನ್ಯಾಶನಲ್ ಕೌನ್ಸಿಲ್ ಅಫ್ ಎಜುಕೇಶನಲ್  ರಿಸರ್ಚ್ ಎಂಡ್ ಟ್ರೈನಿಂಗ್) ಯಿಂದ  ರಾಷ್ಟ್ರೀಯ ಬಹುಮಾನವನ್ನು ಪಡೆದಿರುವುದು ಈ ಪುಸ್ತಕದ ಹೆಗ್ಗಳಿಕೆಗೆ ಸಾಕ್ಷಿ.

ಭೂಗ್ರಹದ  ಸೃಷ್ಟಿ ಮತ್ತು ವಿಕಾಸದಲ್ಲಿ ಶಿಲೆಗಳ ಪಾತ್ರ ಮಹತ್ವವಾದದ್ದು; ನಮ್ಮ ಸುತ್ತಮುತ್ತಲು ಇರುವ ಬಗೆಬಗೆಯ ಶಿಲೆಗಳು, ಶಿಲೆಗಳಿಂದ ರೂಪುಗೊಂಡಿರುವ  ಬೆಟ್ಟಗುಡ್ಡಗಳು  ಕಣ್ಣೆದುರೇ ಇದ್ದರೂ ಸಾಮಾನ್ಯವಾಗಿ ಶಿಲೆಗಳ ಬಗ್ಗೆ  ತಿಳಿದುಕೊಳ್ಳಬೇಕೆಂಬ ಆಸಕ್ತಿ ಕಡಿಮೆ.  ನಿಸರ್ಗದ  ಒಂದು ಅತ್ಯಮೂಲ್ಯ ಭಾಗವಾಗಿರುವ ಶಿಲೆಗಳು ಮತ್ತು ಖನಿಜಗಳ ಬಗ್ಗೆ ಒಮ್ಮೆ ಕುತೂಹಲವನ್ನು  ಮೂಡಿಸಿದರೆ, ಅವುಗಳ ಬಗ್ಗೆ ಇನ್ನಷ್ಟು ಮೊಗೆದಷ್ಟೂ   ತಿಳಿದುಕೊಳ್ಳಬೇಕೆಂಬ ಜ್ಞಾನಾಸಕ್ತಿಯನ್ನು ಉತ್ತೇಜಿಸುತ್ತವೆ. ಓದುಗರಲ್ಲಿ ಆಸಕ್ತಿಯನ್ನು ಕೆರಳಿಸುವ  ನಿಸಾರ್ ಅಹಮದ್ ಅವರ ಇನ್ನೊಂದು ಅತ್ಯಮೂಲ್ಯವಾದ ಕೃತಿಯೇ  ‘ಶಿಲೆಗಳು ಖನಿಜಗಳು’.  ‘ಕಲ್ಲೆಂದು ಜರೆಯದಿರಿ’ ಎಂಬ ಆಕರ್ಷಕ ಉಪ-ಶೀರ್ಷೆಕೆಯೊಂದಿಗೆ ಆರಂಭವಾಗುವ ಓದುಗನ ಶಿಲಾಪಯಣವು  ಶಿಲೆ ಎಂದರೇನು, ಶಿಲಾರಸ ಹೇಗಾಯಿತು,  ಅಗ್ನಿಶಿಲೆ, ಪದರು ಶಿಲೆ, ರೂಪಾಂತರ ಶಿಲೆ,  ಹೈಪ್‌ಅಬಿಲಸ್ ಶಿಲೆ, ಜ್ವಾಲಾಮುಖಿ ಶಿಲೆ, ಪದರು ಶಿಲೆ, ಮರಳು ಶಿಲೆ, ಜೇಡುಶಿಲೆ, ಲ್ಯಾಟರೈಟ್, ರೂಪಾಂತರ ಶಿಲೆ, ಆಕಾಶ ಶಿಲೆಗಳು,  ಹೀಗೆ ಶಿಲೆಗಳ ವಿಭಿನ್ನತೆಯನ್ನು ಸ್ವಾರಸ್ಯಕರವಾಗಿ  ಅನಾವರಣಗೊಳಿಸುತ್ತಾರೆ. ಒಂದು ಶಿಲೆಯ ಬಗ್ಗೆ ಓದಿ ಮುಗಿಸುತ್ತಿದ್ದಂತೆ ಮುಂಬರುವ ಇನ್ನೊಂದು ಶಿಲೆಯು ಓದುಗರನ್ನು  ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಪುಟಗಳ ನಡುವೆ, ವಿಶ್ವದ ಅದ್ಭುತಗಳಲ್ಲಿ ಒಂದಾದ  ತಾಜ್‌ಮಹಲ್, ಕರ್ನಾಟಕದ ಹೆಮ್ಮೆಯ ಮುಕುಟ ವಿಧಾನಸೌಧ, ಏಕಶಿಲೆ ಬೃಹತ್ ವಿಗ್ರಹ ಗೊಮ್ಮೆಟೇಶ್ವರ  ಇವುಗಳಲ್ಲಿ ಬಳಸಿರುವ ಶಿಲೆಗಳ  ಬಗ್ಗೆ ಗಮನ ಸೆಳೆಯುತ್ತದೆ.  ಪುಸ್ತಕದ  ಮುಂದಿನ ಅಧ್ಯಾಯದಲ್ಲಿ ರಾಸಾಯನಿಕ ಧಾತು, ಅದಿರು, ಅಲೋಹ, ಭೌತ ಲಕ್ಷಣಗಳು, ಅಣುಗಳ ಜೋಡಣೆ, ರತ್ನಗಳು,  ಜೊತೆಗಾರ ಖನಿಜಗಳು, ಅವಳಿ ಖನಿಜಗಳು,  ಹೀಗೆ ಖಿನಿಜಗಳ ಕುರಿತು ಅನೇಕ ಮಾಹಿತಿಗಳನ್ನು ವರ್ಣನಾತ್ಮಕವಾಗಿ ಬಿಂಬಿತವಾಗುತ್ತದೆ.  ಭೂತಕಾಲದಲ್ಲಿ ಶಿಲೆಗಳು ವಹಿಸಿದ ಪಾತ್ರವನ್ನು ಸಂಕ್ಷಿಪ್ತವಾಗಿ ಸ್ಪಷ್ಟಪಡಿಸುತ್ತಾ  ಶಿಲೆಗಳ ಬಗ್ಗೆ   ಓದುಗರಲ್ಲಿ ಇನ್ನಷ್ಟೂ  ತಿಳಿದುಕೊಳ್ಳಬೇಕೆಂಬ ಬಯಕೆಯ ಕಿಚ್ಚನ್ನು ಹಚ್ಚಿ ‘ಬುವಿಯಿದು ಬರಿ ಮಣ್ಣಲ್ಲ’ ಎಂಬ ಅಧ್ಯಾಯದೊಂದಿಗೆ ಸಮಾಪ್ತಿಗೊಳ್ಳುತ್ತದೆ.

ಎರಡೂ  ಪುಸ್ತಕಗಳಲ್ಲಿ ಪುರಾಣದ ಕತೆ, ಪ್ರತಿಕಗಳನ್ನು ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ಚುಟುಕಾಗಿ ಬಳಸಿಕೊಂಡಿರುವುದರಿಂದ ವಿಜ್ಞಾನವನ್ನು  ಕಥಾ ರೂಪದಲ್ಲಿ ಕೇಳಿದ ಮುದ ನೀಡುತ್ತವೆ (ಉದಾಹರಣೆಗೆ ಶಿಲೆಗಳು ಪುಸ್ತಕದಲ್ಲಿ, “ಗ್ರೀಕ್ ಪುರಾಣದ ಪ್ರಕಾರ ಪ್ಲೂಟೊ ಎಂಬಾತ ಪಾತಾಳದ ದೇವತೆ…..”).  “ಬೆಟ್ಟಗುಡ್ಡಗಳನ್ನು ಕಂಡಾಗ ‘ಅಬ್ಬಬ್ಬ  ಇವೆಲ್ಲ ಹೇಗಾದವು?”;   “ಆಕಾಶ ಶಿಲೆಗಳು – ರಾತ್ರಿ ವೇಳೆ ಒಂದಷ್ಟು ಕಾಲ ಬಾನನ್ನು ದಿಟ್ಟಿಸಿ ನೋಡು, ಅಲ್ಲಿ ಇಲ್ಲಿ ಆಗ ಈಗ ಗೆರೆಗಳು ಹಾಯುವುದು ಕಾಣುತ್ತದೆ, ಅವು ಎನು? ಖಂಡಿತವಾಗಿಯೂ ಬೀಳುವ ನಕ್ಷತ್ರಗಳಲ್ಲ…..”  ಹೀಗೆ ಅವರ ನಿರೂಪಣಾ ಶೈಲಿಯು  ಪುಸ್ತಕಗಳನ್ನು ಓದುವಾಗ ಅಕ್ಷರಗಳ ಬದಲಾಗಿ ದೃಶ್ಯಗಳೇ ಕಣ್ಣಮುಂದೆ ಬರುವಂತೆ ನೈಜತೆಯನ್ನು ಮೂಡಿಸುತ್ತವೆ.  “ಬುವಿಯಿದು ಬರಿ ಮಣ್ಣಲ್ಲ”, “ಹಕ್ಕಿ ಹಾರುತಿದೆ ನೋಡಿದಿರಾ”  ಇಂತಹ ಕಾವ್ಯಮಯವಾದ ಉಪಶಿರೋನಾಮೆಗಳು ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರ ಕವಿಹೃದಯವು   ಅಲ್ಲಲ್ಲಿ ಅನಾವರಣಗೊಳ್ಳುವುದರಿಂದ  ಓದುಗರಿಗೆ  ವಿಷಯವನ್ನು ಇನ್ನಷ್ಟು ಆಪ್ತಗೊಳಿಸುತ್ತವೆ. ವೈಜ್ಞಾನಿಕ ಮಾಹಿತಿಗಳು ಎಷ್ಟು ಸರಳ ಸುಂದರವಾಗಿದೆಯೋ ಹಾಗೆಯೇ ಪುಟಪುಟದಲ್ಲಿ ಅಡಕವಾಗಿರುವ ಸೂಕ್ತ ವರ್ಣಚಿತ್ರಗಳು ಮತ್ತು ಅವುಗಳಿಗೆ ನೀಡಿರುವ ಅಡಿಬರಹಗಳು  ಸಮನ್ವಯದಿಂದ ಮೂಡಿಬಂದು ಪುಸ್ತಕಗಳ ಸೌಂದರ್ಯವನ್ನು  ಇಮ್ಮಡಿಗೊಳಿಸಿವೆ.

ಕವಿ ನಿಸಾರ್ ಸರ್ ಅವರು  ಈ ಎರಡು ಪುಸ್ತಕಗಳನ್ನು ಶೈಕ್ಷಣಿಕವಾಗಿ ಬರೆದಿದ್ದರೂ, ಇಲ್ಲಿ ಸಿಗುವ ಮಾಹಿತಿಗಳು ಜ್ಞಾನಾರ್ಜನೆಯ ದೃಷ್ಟಿಯಿಂದ ಮಕ್ಕಳಿಗೆ  ಮಾತ್ರವಲ್ಲ  ದೊಡ್ಡವರಿಗೂ ಉಪಯುಕ್ತ. ಯಾವುದೇ ಪುಸ್ತಕ ಇರಬಹುದು, ಎರಡು ರೀತಿಯದ್ದಿರುತ್ತದೆ; ಒಂದು ಅದಾಗಿಯೇ ಓದಿಸಿಕೊಂಡು ಹೋಗುವಂತದ್ದು, ಇನ್ನೊಂದು ಓದಬೇಕೆಂಬ ಅನಿವಾರ್ಯತೆಗಾಗಿ ಓದುವ ಪುಸ್ತಕಗಳು.  ನಿಸಾರ್ ಅವರ ‘ಹಕ್ಕಿಗಳು’ ಮತ್ತು ‘ಶಿಲೆಗಳು ಖನಿಜಗಳು’ ಮೊದಲನೇ ವರ್ಗಕ್ಕೆ ಸೇರುತ್ತವೆ. ಏಕೆಂದರೆ, ಈ ಪುಸ್ತಕಗಳಲ್ಲಿ ಅವರು ಬಳಸಿರುವ ಮೃದುಭಾಷೆ,  ಅಲ್ಲಲ್ಲಿ  ಇಣುಕುವ ತಿಳಿಹಾಸ್ಯದ ತುಣುಕುಗಳು,  ಆಗೊಮ್ಮೆ ಈಗೊಮ್ಮೆ ಸಂದರ್ಭಾನುಸಾರ ಬಳಸಿಕೊಂಡಿರುವ ಕತೆ ಪ್ರತಿಕಗಳು, ಕಾವ್ಯಾತ್ಮಕ ಶಿರೋನಾಮೆಗಳು, ಒಮ್ಮೆ ಪ್ರಾರಂಭಿಸಿದ ನಂತರ ಕೊನೆಯ ತನಕ ಓದಿಸಿಕೊಂಡು ಹೋಗುವ ಕೌತುಕತೆಯನ್ನು ಹಿಡಿದಿಟ್ಟುಕೊಂಡಿವೆ. ಮಕ್ಕಳಿಗಾಗಿ ಬರೆದಿರುವುದರಿಂದ ಪುಸ್ತಕದ  ಪುಟಗಳನ್ನು ಸೀಮಿತಗೊಳಿಸಿದ್ದರೂ ಪುಟಪುಟದಲ್ಲೂ ಸಂಕ್ಷಿಪ್ತವಾಗಿರುವ ವರ್ಣಾನಾತ್ಮಕ ವಿವರಣೆಗಳು  ಪಕ್ಷಿ ಮತ್ತು ಶಿಲೆ-ಖನಿಜಗಳ ಬಗ್ಗೆ ಸಮಗ್ರ ಮಾಹಿತಿಯ ಕಣಜವಾಗಿವೆ.

ನಿಸಾರ್ ಅವರು ಪ್ರಸ್ತಾವನೆಯಲ್ಲಿ ನಿವೇದಿಸಿರುವಂತೆ ಈ ಪುಸ್ತಕಗಳು ಎರಡು ಮುಖ್ಯ ಹಂತಗಳನ್ನು ಹೊಂದಿವೆ: ಮೊದಲನೆಯದಾಗಿ ಮಗುವಿನಲ್ಲಿ ಕುತೂಹಲವನ್ನು ಪ್ರೇರೆಪಿಸುವುದು, ಇನ್ನೊಂದು, ಅದಕ್ಕೆ   ಪೋಷಕವಾಗಿ ಬರವಣಿಗೆಯಲ್ಲಿ ವಿಷಯವನ್ನು ನಿರೂಪಿಸುವುದು. ಪುಸ್ತಕಗಳನ್ನು ಓದಿ ಮುಗಿಸಿದಾಗ ಈ ಎರಡೂ ಹಂತಗಳನ್ನು ಯಶಸ್ವಿಯಾಗಿ ದಾಟಿದ ಸಾರ್ಥಕತೆಯನ್ನು ಪಡೆಯುತ್ತವೆ ಎಂಬುವುದನ್ನು ಮನಗಾಣಬಹುದು. ವಿಜ್ಞಾನ ಎಂದರೆ ಕಬ್ಬಿಣದ ಕಡಲೆ ಎಂಬ ಮನೋಭಾವ ಇರುವವರಿಗೆ, ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬರೆದಿರುವ ಹಕ್ಕಿಗಳು ಹಾಗೂ ಶಿಲೆಗಳು ಖನಿಜಗಳು  ಪುಸ್ತಕಗಳನ್ನು ಓದಿದರೆ, ವಿಜ್ಞಾನ ಎಂದರೆ  ಬಾಳೆಹಣ್ಣಿನ  ಸಿಪ್ಪೆ ಸುಲಿದು ತಿನ್ನುವಷ್ಟು  ಸುಲಭ ಮತ್ತು  ರುಚಿಕರವಾಗಿದೆಯಲ್ಲವೇ  ಎಂಬ ಭಾವನೆ ಮೂಡಿಸುತ್ತವೆ.

ಈಗಿನ ಮಾಹಿತಿ ತಂತ್ರಜ್ಞಾನ ಕಾಲದಲ್ಲಿ ಯಾವುದೇ ವಿಷಯದ ಬಗ್ಗೆ ಬೆರಳ ತುದಿಯಲ್ಲಿ ಯಥೇಚ್ಛವಾದ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ಪಡೆಯಬಹುದು. ಆದರೆ  ೧೯೭೦ ರ ದಶಕದಲ್ಲಿಯೇ ಪಕ್ಷಿ, ಶಿಲೆ ಮತ್ತು ಖನಿಜಗಳ ಬಗ್ಗೆ  ಅಗಾಧವಾದ  ಮಾಹಿತಿಗಳನ್ನು ಕಲೆಹಾಕಿ ಜ್ಞಾನಾಸಕ್ತರಿಗೆ ರುಚಿಕರವಾಗಿ ಉಣಬಡಿಸಿರುವುದು ಈ ಪುಸ್ತಕಗಳ ಶ್ರೇಷ್ಠತೆ.    ಎಲ್ಲರಿಗೂ, ಮುಖ್ಯವಾಗಿ ಮಕ್ಕಳ ಮನಸ್ಸಿಗೆ ಮುದವನ್ನು ನೀಡುವ ನಿಸರ್ಗದ ಇಂತಹ ಅನೇಕ ಕೌತುಕಮಯ ಸಂಗತಿಗಳ  ಬಗ್ಗೆ ಇನ್ನಷ್ಟೂ ಬರವಣಿಗೆಗಳು, ಕೃತಿಗಳು ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರ ಲೇಖನಿಯಿಂದ ಹೊರಬರಲಿ ಎಂಬುವುದು ನಮ್ಮೆಲ್ಲರ  ಆಶಯ. ೧೯೭೭ ರಲ್ಲಿ  ಹೊರಬಂದಿರುವ ಮಾಹಿತಿ ಕಣಜವಾಗಿರುವ ಈ ಪುಸ್ತಕಗಳನ್ನು ತಾಜಾ ಮಾಹಿತಿಗಳೊಂದಿಗೆ  ಮರುಮುದ್ರಣಗೊಳಿಸಿ ಬಿಡುಗಡೆಗೊಳಿಸಿದರೆ, ಅದು ನಾಡಿನ ಹಿರಿಯ ಚೇತನ ಪದ್ಮಶ್ರೀ ಪುರಸ್ಕೃತ,  ನಾಡೋಜ  ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ಸಲ್ಲುವ  ಒಂದು ಬಹುದೊಡ್ಡ  ಗೌರವ.

‍ಲೇಖಕರು avadhi

May 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Prof. M. Krishnamoorthy, Mangaluru

    A very impressive and elaborate review on two books of Late Prof. K. S. Nissar Ahamed, in a beautiful flowery language of Kannada.

    ಪ್ರತಿಕ್ರಿಯೆ
  2. Kemparamu S. Mysore

    ಕೆ ಎಸ್ ನಿಸಾರ್ ಅಹಮದ್ ಅವರು ಒಬ್ಬ ದೊಡ್ಡ ಕವಿ ಇಂದು ತಿಳಿದಿದ್ದೆವು. ಅವರು ಭೂವಿಜ್ಞಾನ ಅಧ್ಯಾಪಕರು ಮತ್ತು ಅನೇಕ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಗೊತ್ತಿರಲಿಲ್ಲ. ಪುಸ್ತಕದ ವಿಮರ್ಶೆಯನ್ನು ಓದಿ ಅವರು ಬರೆದ ವಿಜ್ಞಾನ ಪುಸ್ತಕಗಳನ್ನು ಓದಬೇಕೆಂಬ ಮನಸ್ಸಾಗುತ್ತದೆ. ಈ ಪುಸ್ತಕಗಳು ಎಲ್ಲಿ ಸಿಗುತ್ತವೆ? ದಯವಿಟ್ಟು ತಿಳಿಸಿ.

    ಪ್ರತಿಕ್ರಿಯೆ
  3. ಜಯಕರ ಭಂಡಾರಿ

    ಕವಿ ನಿಸಾರ್ ಸರ್ ಅವರೊಳಗಿನ ವಿಜ್ಞಾನಿ ನಿಸಾರ್ ಅವರಿಗಿದು ಸೂಕ್ತ ವಿದಾಯ. ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಪ್ರಶಾಂತ್.

    ಪ್ರತಿಕ್ರಿಯೆ
  4. Thyagam... harekala

    ವೈಜ್ಞಾನಿಕ ವಾಗಿಯೂ ಇಷ್ಟೊಂದು ಆಸಕ್ತಿ ಹೊಂದಿದ್ದರು ಎನ್ನುವುದು ಇವಾಗ ಗೊತ್ತಾಯಿತು… ಬರಹ ಅದ್ಭುತವಾಗಿದೆ….. ಪ್ರಶಾಂತ್ ಅವರಿಗೆ ಅಭಿನಂದನೆಗಳು….

    ಪ್ರತಿಕ್ರಿಯೆ
    • Karuna s

      ಕವಿ ನಿಸಾರ್ ಅಹ್ಮದ್ ಬಗ್ಗೆ ಡಾ.ಪ್ರಶಾಂತ್ ರವರ ಬರಹ ತುಂಬಾ ಚೆನ್ನಾಗಿದೆ.ಅಭನಂದನೆಗಳು ಸರ್.

      ಪ್ರತಿಕ್ರಿಯೆ
  5. Devaraj Poojari, Bengaluru

    Hats off. Beautiful review. Sorry, we are missing a lot K.S. Nissar Ahamed, a great write of Kannada.

    ಪ್ರತಿಕ್ರಿಯೆ
  6. Devaraj

    ನಿಸಾರ್ ಅಹಮದ್ ಕನ್ನಡದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾಗಿದ್ದರು. ಅವರ ನಿತ್ಸೋತ್ಸವ ಹಾಡು ಹಾಗೂ ಅನೆಕ ಕವಿತೆಗಳು ಜನರ ಮನಸ್ಸನ್ನು ಗೆದ್ದಿದೆ . ಇಂತಹ ಮೇರು ಕವಿಯ ಬಗ್ಗೆ ವಿವರವಾಗಿ ಬರೆದಿರುವ ಪ್ರಶಾಂತ್ ನಿಮಗೆ ತುಂಬು ಹ್ರದಯದ ನಮನಗಳು.

    ಪ್ರತಿಕ್ರಿಯೆ
  7. Renuka nagaraj

    ಸಾತ್ವಿಕ ಮನಸಿನ ಕವಿ ನಿಸಾರ್ ಅವರು ಮಕ್ಕಳ ಭಾವನೆಗಳನ್ನು ಬಹಳ ಮಾರ್ಮಿಕವಾಗಿ ಬರವಣಿಗೆ ಮೂಲಕ ಚಿತ್ರಿಸಿದ್ದಾರೆ.ನಾನೊಬ್ಬಳು ಶಿಕ್ಷಕಿಯಾಗಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಬಹಳಷ್ಟು ಪ್ರಯೋಜನಕಾರಿಯಾಗಿದೆ.ಅವರ ಬಗ್ಗೆ ನೀವು ಬರೆದಿರುವ ಬರಹ ಬಹಳ ಅದ್ಭುತವಾಗಿದೆ.ಧನ್ಯವಾದಗಳು ಸಹೋದರ ಪ್ರಶಾಂತ ನಿಮ್ಮಲ್ಲೂ ಕವಿ ಮನಸು ಇದೆ .ಇನ್ನಷ್ಟು ಬರಹ ಮೂಡಿಬರಲಿ.

    ಪ್ರತಿಕ್ರಿಯೆ
  8. M J Hegde

    Congratulations Prashanth Very nice write up about the life and work of Prof. Nissar .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: