ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾರ್ಮೆಂಟ್ ನೌಕರರೇ ನಿಮ್ಮೊಂದಿಗೆ..

sabitha bannadi

ಡಾ ಸಬಿತಾ ಬನ್ನಾಡಿ

ಎಂಟು ವರ್ಷಗಳ ಹಿಂದಿನ ಮಾತು.

ಕುಪ್ಪಳಿಯಲ್ಲಿ ಲೇಖಕಿಯರು ಮತ್ತು ಚಳುವಳಿಗಾರ್ತಿಯರನ್ನು ಕಲೆಹಾಕಿ ಬೆಂಗಳೂರಿನ ‘ನಮ್ಮ ಮಾನಸ’ ಪತ್ರಿಕೆಯವರು ಕಮ್ಮಟವೊಂದನ್ನು ಆಯೋಜಿಸಿದ್ದರು. ಅಲ್ಲಿ ಕಾಂ. ವರಲಕ್ಮ್ಷಿ ಗಾರ್ಮೆಂಟ್ ನಲ್ಲಿ ದುಡಿಯುವ ಮಹಿಳೆಯರ ಸಂಕಷ್ಟಗಳನ್ನು ಒಂದೊಂದಾಗಿ ತೆರೆದಿಡತೊಡಗಿದರು. ಅದೇ ಕಮ್ಮಟದಲ್ಲಿ ಇದ್ದ ಗಾರ್ಮೆಂಟ್ ನೌಕರಳೊಬ್ಬಳು (ಹೆಸರು ಮರೆತಿದ್ದಕ್ಕೆ ಕ್ಷಮಿಸಿ ಬಿಡಮ್ಮಾ) ತಮ್ಮ ಹೋರಾಟಗಳನ್ನು, ಅದರ ಪಡಿಪಾಟಲುಗಳನ್ನು ತನ್ನ ಹೃದಯವನ್ನೇ ನಮ್ಮ ಕೈಗೆ ಕೊಟ್ಟಂತೆ ನಿವೇದಿಸಿಕೊಂಡಳು.

garment strikeನಾನು ಅಚ್ಚರಿ ಮತ್ತು ನೋವಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಇದೆಲ್ಲಾ ಆದ ಮೇಲೆ ನಾನು ಮಹಿಳಾ ಕಾವ್ಯದ ಮೇಲೆ ಮಾತಾಡಬೇಕಿತ್ತು! ನಾನು ಮಾತಾಡಲೇ ಬೇಕಿತ್ತಾದ್ದರಿಂದ ಮಾತಾಡಿದೆ. ಆದರೆ ಆಶ್ಚರ್ಯವೆಂದರೆ ಅವರೆಲ್ಲರೂ ಆ ಮಾತುಗಳನ್ನು ಉತ್ಸಾಹದಿಂದ ಕೇಳಿಸಿಕೊಂಡರು. ಸಂಜೆ ಕವಿಮನೆ ಕಡೆ ವಾಕಿಂಗ್ ಹೊರಟಾಗ ಆ ಗಾರ್ಮೆಂಟ್ ನೌಕರ ಹುಡುಗಿ ನನ್ನೊಂದಿಗೆ ಹೆಜ್ಜೆಹಾಕಿದಳು. ನಾನು ಇನ್ನಷ್ಟು ಅವಳ ಕತೆ ಕೇಳಿಸಿಕೊಂಡೆ. ಆಗ ಇದ್ದಕ್ಕಿದ್ದಂತೆ ಆ ಹುಡುಗಿ, ಮೇಡಂ, ‘ನೀವು ಚೆನ್ನಾಗಿ ಮಾತಾಡ್ತೀರಿ. ನಿಮಗೆ ಗೊತ್ತಿರ್ಲಿಕ್ಕಿಲ್ಲ, ನಿಮ್ಮ ಮಾತಿನ ಪರಿಣಾಮ ಏನು ಅಂತ. ನಮ್ಮಂತವರು ನಮ್ಮ ಅನುಭವ ಹೇಳಬಹುದು. ಆದರೆ ನಿಮ್ಮಂತವರ ಥರ ಮನಸ್ಸು ಮುಟ್ಟುವ ಹಾಗೆ ಹೇಳೋದಕ್ಕೆ ಆಗುವುದಿಲ್ಲ. ನೀವು ನಮ್ಮ ಪರವಾಗಿ ಮಾತಾಡಿದರೆ ನಮಗೆಲ್ಲಾ ಉಪಕಾರ ಆಗುತ್ತೆ’ ಅಂದಳು. ನನಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ.

ಅಲ್ಲಿಂದ ಮನೆಗೆ ಬಂದ ಮೇಲೆ ಮೂರು ದಿನಗಳ ಕಾಲ ನನಗೆ ಈ ಮಾತುಗಳೇ ಹಗಲಿರುಳು ಕಾಡತೊಡಗಿತು. ನಾನು ಅವರಿಗಾಗಿ ಏನು ಮಾಡಲಿ? ನಾನು ಅವರೊಂದಿಗೆ ಚಳುವಳಿಯಲ್ಲಿ ಸೇರಲಾಗುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನನ್ನ ಬೆಂಬಲವನ್ನು ಅವರಿಗೆ ಹೇಗಾದರೂ ಕೊಡಬೇಕು, ಏನಾದರೂ ಮಾಡಬೇಕು ಅನ್ನಿಸಿತು. ಅದು ನನ್ನಿಂದ ಕವನವೊಂದನ್ನು ಬರೆಸಿತು. ಇದನ್ನು ವೈಯಕ್ತಿಕವಾಗಿ ಕೆಲವರಿಗೆ ತೋರಿಸಿದಾಗ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲ. ನಾನು ‘ನಮ್ಮ ಮಾನಸ’ಕ್ಕೆ ಕಳಿಸಿದೆ.

ಅಲ್ಲಿಂದ ಅದನ್ನು ಮಾಧವಿ ಭಂಡಾರಿ, ಸಬೀಹಾ ಭೂಮಿಗೌಡ ಹೀಗೆ ಬೇರೆ ಬೇರೆಯವರು ಎತ್ತಿಕೊಂಡರು. ಒಂದು ದಿನ ಅದು ಗಾರ್ಮೆಂಟ್ ನೌಕರರ ಪತ್ರಿಕೆ ‘ಸೂಜಿ ದಾರ’ದಲ್ಲಿ ಪ್ರಕಟವಾಯಿತು. ಅದರಲ್ಲಿ ಅವರು ತಮ್ಮದೇ ಅನುಭವಕ್ಕೆ ದ್ವನಿ ಕೊಟ್ಟಿದ್ದಕ್ಕೆ ಕೃತಜ್ಞತೆ ಬೇರೆ ತಿಳಿಸಿದ್ದರು.

ಹೀಗೆ ಕೊನೆಯ ಪಕ್ಷ ತಮ್ಮೆಡೆಗೆ ಜನ ಗಮನ ಹರಿಸಿದರೂ ಸಾಕು ಎಂಬಂತೆ ಸೊಪ್ಪಾದ ಜನ ಅವರು. ಅವರ ಪುಡಿಗಾಸು ಕೂಡ ಅವರಿಗೇ ಸಿಗದಂತೆ ಮಾಡುವ ನಮ್ಮ ರಾಕ್ಷಸತನಕ್ಕೆ ಒಂದು ಮಿತಿ ಬೇಡವೇ? ಒಮ್ಮೆಲೇ ಭುಗಿಲೆದ್ದು ಹೋರಾಡಿ ಒಂದು ಗೆಲುವು ಪಡೆದಿದ್ದೀರಿ. ನಿಮ್ಮ ಹೋರಾಟದ ಹಾದಿ ಇನ್ನೂ ದೂರ ಇದೆ ಎಂಬುದನ್ನು ಹೇಳುವ ಪ್ರಯತ್ನವಾಗಿ ಈ ಕವಿತೆ ಇದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಗೆಳೆಯರೇ.

ಗಾರ್ಮೆಂಟ್ ಹುಡುಗಿಯ ಅನುಭವಕ್ಕೆ ದನಿ ನೀಡಿ 10/06/2008 ರಲ್ಲಿ ನಾನು ಬರೆದ ಕವಿತೆ ಅವರಿಗೆ ಸಾಥ್ ನೀಡುವುದಕ್ಕಾಗಿ ಮತ್ತೊಮ್ಮೆ :

ಗಾರ್ಮೆಂಟ್ ಹುಡುಗಿ ಹೊಲಿದ ಚೆಂದದ ಪೋಷಾಕು

ಬಟ್ಟೆಯ ಕತ್ತರಿಸುವ ಕತ್ತರಿ
ಅವಳ ಕನಸುಗಳ ಕತ್ತರಿಸುತ್ತದೆ
ಜೋಡಿಸಿ ಹೊಲಿವ ಕೈಗಳು
ಮತ್ತೊಂದು ಕನಸ ಹೊಲಿಯುತ್ತದೆ

garmentಮೇಲ್ವಿಚಾರಕನ ಸೂಜಿಗಣ್ಣು
ಅವಳು ಕತ್ತೆತ್ತದಂತೆ ಚುಚ್ಚುತ್ತದೆ
ಅರೆಹೊಟ್ಟೆಯ ನಿಶ್ಯಕ್ತಕಾಲು
ಸೆಟೆದುಕೊಳದಂತೆ
ವೇಗವಾಗಿ ತುಳಿಯುತ್ತದೆ

ಒತ್ತರಿಸಿ ಬರುವ ಬಾಯಾರಿಕೆಯೂ
ಜಿಪ್ ಏರಿಸಿದೆ
ಜಲಬಾಧೆ ತೀರಿಸಿಕೊಳಲೂ
ಬೇಕು ಒಪ್ಪಿಗೆಯ ಪತ್ರ
ನೀರೆಲ್ಲ ನಿರಿಗೆಯಾಗಿ
ಪೋಷಾಕು ಸಿಂಗಾರಗೊಳುತ್ತದೆ.

ಎಳೆಹಸುಳೆಯ ತಾಯಂದಿರು
ಹಾಲುಣಿಸಲು ಹಂಬಲಿಸಿದರೆ
ನಾಳಿನ ಪಾಳಿಯ ಸೂರಿಲ್ಲ
ಸೋರಿ ಹೋಗುವ ಎದೆಹಾಲು
ಬೆಳ್ಳನೆ ಲೇಸ್ಗಳಾಗಿ
ಕತ್ತಸುತ್ತ ಚೆಲುವ ಬಲೆಯಾಗಿಸುತ್ತಾಳೆ.

ದಿನದ ಟಾರ್ಗೆಟ್ ಮುಗಿಸಿ
ನಿಟ್ಟುಸಿರಿಡಲು ಕಾತರಿಸುತ್ತಾಳೆ
ಮೇಲ್ವಿಚಾರಕನ ಹದ್ದಿನ ಕಣ್ಣಿಗೆ
ತೋಳದ ದಾಹ
ನಿಮಿರಿದ ಮೈಮುಳ್ಳುಗಳ
ದುಂಡಗಾಗಿಸಿ ಬಟನ್ ಗಳ ಪೋಣಿಸುತ್ತಾಳೆ

ಹೃದಯ ಮೊಂಬತ್ತಿಯಾಗಿ ಉರಿಯುತ್ತಿದೆ
ಕಪ್ಪು ಮಸಿಯ ಮೇಲೆ ರಕ್ತಗೆಂಪಿನ
ಚಿತ್ತಾರದ ಅಂಗಿ ರಫ್ತಿನ ಪೆಟ್ಟಿಗೆಯಲಿ
ಬೆಚ್ಚಗೆ ಗಡಿದಾಟಿದೆ

ಮನೆಗೆ ತೆರಳುವ ಹಾದಿಯಲಿ ಅತ್ತು
ಕಪ್ಪಾದ ಆಗಸದ ಬಟ್ಟೆ
ಹರಿದು ಚುಕ್ಕೆಯಂತೆ ಚೂರಾಗಿದೆ.
ನಾಳೆ ಅವುಗಳನೆಲ್ಲಾ ಹೊಲಿದು
ಒಗೆದು ನೀಲಿ ಹಾಕಿ ಒಣಹಾಕಲು
ಅವಳು ತಯಾರಿ ನಡೆಸುತ್ತಾಳೆ.

ಬಟ್ಟೆಯ ಕತ್ತರಿಸುವ ಕತ್ತರಿ
ಅವಳ ಕನಸುಗಳನ್ನು ಕತ್ತರಿಸುತ್ತವೆ
ಜೋಡಿಸಿ ಹೊಲಿವ ಕೈಗಳು
ಮತ್ತೊಂದು ಕನಸನ್ನು ಹೊಲಿಯುತ್ತವೆ.

‍ಲೇಖಕರು admin

20 April, 2016

3 Comments

  1. Ajith

    Very nice poem.
    And an appropriate support extended from Avadhi.

  2. Sumithra

    ಹೌದು ನನಗೂ ಇದೆಲ್ಲ ನೆನಪಾಯ್ತು.

  3. deepthi

    monne mushkara nadeyuvaaga nimma ee kavite nange tumba nenaapayitu, avadhiya mulaka matte ohuva avakasha sikkitu.. very nice poem..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading