ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಗಾಂಧೀಜಿಗಿಂತ ಹಿಟ್ಲರ್ ಜನಪ್ರಿಯ ಮಾತುಗಾರನಾಗಿದ್ದ’, ಜಿಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು

ಮಾತು ಹೇಗಿರಬೇಕು? ಖಾಸಗಿಯಾಗಿ ವ್ಯವಹರಿಸುವಾಗ ಇದನ್ನೆಲ್ಲ ನಾವು ಯೋಚಿಸುವುದೇ ಇಲ್ಲ. ನಿತ್ಯದ ವ್ಯವಹಾರಕ್ಕೆ ಮಾತು ತಾನಾಗಿಯೇ ಒದಗಿಬರುತ್ತದೆ. ನಮ್ಮ ತಾಯಿನುಡಿ ಎನ್ನುವುದು ನಮ್ಮ ಮನದ ಭಾವವನ್ನು ಹೊರಹಾಕಲು ವಾಹಕವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಈ ಮಾತಿನ ಸ್ವರೂಪ ಏನು, ಯಾವ ಮಾತನ್ನು ಹೇಗೆ ಆಡಬೇಕು ಇತ್ಯಾದಿ ಯಾವ ಚಿಂತನೆಗೂ ಅವಕಾಶ ಇಲ್ಲದಂತೆ ಮಾತು ತಾನೇ ಹುಟ್ಟಿಕೊಳ್ಳುತ್ತದೆ. ಅತಿಥಿಗಳೋ, ಮಿತ್ರರೋ ಮನೆಗೆ ಬಂದಾಗ ನಮ್ಮ ಮಾತಿನ ಸ್ವರೂಪ ತಾನೇ ಬದಲಾಗುತ್ತದೆ. ಅದಕ್ಕೂ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಲು ಹೊರಟರೆ, ಟಿವಿಗೋ, ಪತ್ರಿಕೆ ಅಥವಾ ರೇಡಿಯೋಕ್ಕೋ ಸಂದರ್ಶನ ನೀಡುವುದೆಂದರೆ ನಾವು ಗಲಿಬಿಲಿಗೆ ಒಳಗಾಗುತ್ತೇವೆ. ಮಾತು ಹೇಗಿರಬೇಕು, ಯಾವುದನ್ನು ಎಷ್ಟು ಹೇಳಬೇಕು, ಹೇಗೆ ಹೇಳಬೇಕು, ಎಂಥ ಪ್ರಶ್ನೆಗಳು ಎದುರಾಗುತ್ತವೆ ಇತ್ಯಾದಿ ನೂರಾರು ಸಂಗತಿಗಳು ನಮ್ಮನ್ನು ಕಾಡುತ್ತವೆ. ಸಾರ್ವಜನಿಕ ವೇದಿಕೆಯೆಂದರೇ ನಮ್ಮ ನಡವಳಿಕೆ, ಅದರ ಸ್ವರೂಪ ಎಲ್ಲವೂ ಬದಲಾಗುತ್ತವೆ. ಮಾತು ಕೃತಕವಾಗುತ್ತದೆ; ಮಾತು ಕೈಕೊಡುತ್ತದೆ. ಮಾತು ಮನದ ಎಲ್ಲ ಭಾವಗಳನ್ನು ಹೊರಹಾಕುವಲ್ಲಿ ಸೋಲುತ್ತವೆ.

ಮೊನ್ನೆ ರಾಹುಲ್ ಗಾಂಧಿಗೆ ಆದದ್ದೂ ಇದೆ. ‘ಟೈಮ್ಸ್ ನೌ’ ಟಿವಿ ಚಾನೆಲ್ಲಿನ ಅರ್ನಬ್ ಗೋಸ್ವಾಮಿ ಸರಾಗವಾಗಿ ಪ್ರಶ್ನೆ ಕೇಳುತ್ತಿದ್ದರೆ ರಾಹುಲ್ ಅಷ್ಟೇ ಸರಾಗವಾಗಿ ಉತ್ತರ ಕೊಡುತ್ತಿರಲಿಲ್ಲ. ಮಾತಿಗಾಗಿ ತಡಕಾಡುತ್ತಿದ್ದರು. ಅವರ ಮನದ ಭಾವಗಳೆಲ್ಲ ಹೊರಬರಲು ಹೆಣಗಾಡುತ್ತಿದ್ದವು. ಈ ಸಂದರ್ಶನ ಈಗ ಎಲ್ಲೆಲ್ಲೂ ಚರ್ಚೆಯ ಸಂಗತಿಯಾಗಿದೆ. ರಾಹುಲ್ ಹೀಗೆ ಮಾತನಾಡಬೇಕಾಗಿತ್ತು; ಅವರ ಮುಖದ ಭಾವಗಳು ಹೀಗಿರಬೇಕಾಗಿತ್ತು; ಅವರ ಹಾವ, ಭಾವ, ಅಭಿನಯ ಬದಲಾಗಬೇಕಾಗಿತ್ತು; ಮಾತು ದಿಟ್ಟವೂ, ಸ್ಪಷ್ಟವೂ ಆಗಿರಬೇಕಾಗಿತ್ತು, ಮೋದಿಗೆ ಸರಿಯಾದ ರೀತಿಯಲ್ಲಿ ಹೊಡೆಯುವ ಅವಕಾಶವನ್ನು ಕಳೆದುಕೊಂಡರು- ಹೀಗೆ ಹಲವರು ತಮಗೆ ಬೇಕಾದ ರೀತಿಯಲ್ಲಿ ಈ ಸಂದರ್ಶನದ ಬಗ್ಗೆ ಮಾತನಾಡಿಕೊಂಡರು. ಇನ್ನೂ ಕೆಲವರು ರಾಹುಲ್ ಉಪಯೋಗವಿಲ್ಲದ ನಾಯಕ, ಎಳಸು, ಅನುಭವ ಸಾಲದು ಇತ್ಯಾದಿ ತೀರ್ಪುಗಳನ್ನೂ ಕೊಟ್ಟರು. ಹಲವಾರು ಸಂದರ್ಶನಗಳನ್ನು, ಮಾತುಕತೆಗಳನ್ನು ಕೇಳಿದ ನೋಡಿದ ಜನ ತಮ್ಮ ನಿರೀಕ್ಷೆಗಳನ್ನು ಹೀಗೆ ತೋಡಿಕೊಳ್ಳುವುದು ಅಸಹಜವೇನೂ ಅಲ್ಲ. ರಾಹುಲ್ ಹೇಗೆ ಮಾತನಾಡಬೇಕಾಗಿತ್ತು? ಗೋಸ್ವಾಮಿ ಹೇಗೆ ಪ್ರಶ್ನೆಗಳನ್ನು ಕೇಳಬೇಕಾಗಿತ್ತು? ಗಾಂಧೀಜಿ ಜನಪ್ರಿಯ ಮಾತುಗಾರರಾಗಿರಲಿಲ್ಲ. ಸಾರ್ವಜನಿಕ ವೇದಿಕೆಯೆಂದರೆ ಅವರಿಗೆ ನಡುಕ ಶುರುವಾಗುತ್ತಿತ್ತು. ಅವರು ಲಂಡನ್ನಿನಲ್ಲಿ ಕಾನೂನು ಕಲಿಯುತ್ತಿದ್ದ ಸಂದರ್ಭದಲ್ಲಿ ‘ಸಸ್ಯಾಹಾರಿಗಳ ಸಂಘ’ದಲ್ಲಿ ಮಾತನಾಡಬೇಕಾಗಿತ್ತು. ಇದಕ್ಕೆ ಗಾಂಧೀಜಿ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. ಮಾತು ಕೈಕೊಡಬಹುದೆಂದು ತಾವು ಹೇಳಬಹುದಾದ ಸಂಗತಿಗಳನ್ನು ಟಿಪ್ಪಣಿ ರೂಪದಲ್ಲಿ ತಯಾರಿಸಿ ಇಟ್ಟುಕೊಂಡಿದ್ದರು. ಆದರೆ ಮಾತನಾಡಲೆಂದು ಎದ್ದುನಿಂತಾಗ ಎಲ್ಲವೂ ಕೈಕೊಟ್ಟವು. ಧೈರ್ಯ ಅಡಗಿ ಹೋಯಿತು. ಮಾತು ಬಂದಾಯಿತು. ಗಾಂಧೀಜಿ ಒಂದೇ ಒಂದು ವಾಕ್ಯವನ್ನೂ ಪೂರ್ಣಮಾಡಲಾಗಲಿಲ್ಲ. ಕುಳಿತುಕೊಂಡುಬಿಟ್ಟರು. ಜೊತೆಗಿದ್ದ ಸ್ನೇಹಿತರು ಅವರ ಟಿಪ್ಪಣಿಯನ್ನು ಓದಿದರು.

ಮುಂದೆಯೂ ಹಾಗೆಯೇ. ಗಾಂಧೀಜಿ ಎಂದೂ ಜನಪ್ರಿಯ ಮಾತುಗಾರರಾಗಿರಲಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಅವರನ್ನು ಮೀರಿಸುವ ಮಾತುಗಾರರೂ ಇದ್ದರು. ಗಾಂಧೀಜಿಗೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವುದೆಂದರೆ ನಡುಕವೇ ಬರುತ್ತಿತ್ತು. ಆದರೆ ಅವರು ಅದನ್ನು ಮೀರಿದ್ದು ಹೇಗೆಂದರೆ, ತಮ್ಮ ಉದ್ದೇಶ, ಜನರಿಗೆ ತಾವು ತಿಳಿಸಬೇಕಾದ ಸಂಗತಿ ಇವುಗಳ ಮೇಲೆಯೇ ಪೂರ್ಣ ಗಮನವನ್ನು ಕೇಂದ್ರೀಕರಿಸಿ ಮಾತನಾಡುತ್ತಿದ್ದರು. ಅವರಲ್ಲಿ ವಿನಯ ಮನೆಮಾಡಿತ್ತು. ಇದೇ ವಿನಯದಿಂದಲೇ ಅವರು ತಮ್ಮ ಮಾತುಗಳನ್ನು ಆಡುತ್ತಿದ್ದರು. ಅವರ ಮಾತು ಸರಳವಾಗಿರುತ್ತಿತ್ತು; ಸಹಜವಾಗಿರುತ್ತಿತ್ತು; ಸತ್ಯದಿಂದ ಕೂಡಿರುತ್ತಿತ್ತು. ಯಾವ ಅಲಂಕಾರಗಳಿಲ್ಲದೆ, ಸುತ್ತು ಬಳಸುಗಳಿಲ್ಲದೆ ಹೇಳಬೇಕಾದದ್ದನ್ನು ಗಾಂಧೀಜಿ ನೇರವಾಗಿ ಹೇಳಿ ಮುಗಿಸುತ್ತಿದ್ದರು. ಅವರೆಂದೂ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿರಲಿಲ್ಲ. ಸಾವಿರಾರು, ಲಕ್ಷಾಂತರ ಜನಗಳನ್ನು ಕಂಡಾಗಲೂ ಗಾಂಧೀಜಿಯವರ ಮಾತು ಹುಚ್ಚೆದ್ದು ಕುಣಿಯುತ್ತಿರಲಿಲ್ಲ. ಗಾಂಧೀಜಿಯವರ ಜೊತೆಯಲ್ಲಿ ಮಾತನಾಡಲು ಅವರ ಆಶ್ರಮಕ್ಕೆ ಎಲ್ಲ ರೀತಿಯ ಜನರೂ ಬರುತ್ತಿದ್ದರು. ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ಬರಹಗಾರರು, ಚಿಂತಕರು, ಕೊಳಚೆ ನಿವಾಸಿಗಳು, ಹಳ್ಳಿಗರು, ವೃತ್ತಿಪರರು, ನಿರುದ್ಯೋಗಿಗಳು, ವಕೀಲರು, ಯುವಕರು, ಮಹಿಳೆಯರು, ಕುಶಲಕರ್ಮಿಗಳು, ಓದುಬರಹ ಇಲ್ಲದವರು, ಬುದ್ಧಿಜೀವಿಗಳು ಇತ್ಯಾದಿ. ಗಾಂಧೀಜಿ ಅತ್ಯುತ್ತಮ ಕೇಳುಗರಾಗಿದ್ದರು. ಸಾವಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡು ತಮ್ಮ ಮಾತುಗಳನ್ನು ಆಡುತ್ತಿದ್ದರು. ಅವರಾಡಿದ ಮಾತುಗಳಿಗೆ ತೂಕವಿರುತ್ತಿತ್ತು.

ಜಗತ್ತನ್ನೇ ನಡುಗಿಸಿದ ಹಿಟ್ಲರ್ ಒಳ್ಳೆಯ ಮಾತುಗಾರನಾಗಿದ್ದ. ಅವನು ಸಾರ್ವಜನಿಕ ವೇದಿಕೆ ಏರಿದನೆಂದರೆ ಸಾವಿರಾರು ಜನ ಮೈಯೆಲ್ಲ ಕಿವಿಯಾಗಿ ಅವನ ಮಾತುಗಳನ್ನು ಕೇಳುತ್ತಿದ್ದರು. ಅವನು ಮಾತನಾಡುತ್ತಿದ್ದರೆ ಅವನ ಮುಖದ ಮಾಂಸಖಂಡಗಳು ಏರಿಳಿಯುತ್ತಿದ್ದವು; ಇಡೀದೇಹ ಬಿಗಿದುಕೊಳ್ಳುತ್ತಿತ್ತು. ಎದೆ ಉಬ್ಬಿ ಇಳಿಯುತ್ತಿತ್ತು. ಕೈಗಳ ಚಲನೆಯಂತೂ ಹಿಟ್ಲರ್ ನ ಮಾತುಗಳನ್ನು ಹಿಡಿದುಕೊಡುವಂತೆ ಇರುತ್ತಿತ್ತು. ಧ್ವನಿಯ ಏರಿಳಿತ, ಇಡೀ ದೇಹದ ಚಲನೆ, ಅವನ ಘರ್ಜನೆ ಸುನಾಮಿಯ ಅಲೆಗಳಂತೆ ಬಂದು ಎಲ್ಲವನ್ನೂ ಕೊಚ್ಚಿಹಾಕುತ್ತಿದ್ದವು. ಹಿಟ್ಲರ್ ಜರ್ಮನಿಯನ್ನು ಶಿಖರದೆತ್ತರಕ್ಕೆ ಏರಿಸುವ ಮಾತನಾಡುತ್ತಿದ್ದ; ಸಮಾಜವಾದಿಯಂತೆ ಮಾತನಾಡುತ್ತಿದ್ದ. ಹಳ್ಳಿಗರನ್ನು, ಕಾರ್ಮಿಕರನ್ನು ಉದ್ಧರಿಸುವ ಮಾತುಗಳನ್ನು ಆಡುತ್ತಿದ್ದ. ತಾನು ಸುಳ್ಳು ಭರವಸೆ ಕೊಡಲಾರೆ ಎನ್ನುತ್ತಿದ್ದ; ಮೋಸ ಮಾಡುವುದಿಲ್ಲ ಎನ್ನುತ್ತಿದ್ದ. ಜರ್ಮನ್ನರ ಉದ್ಧಾರಕ್ಕಾಗಿ ಮಾರರ್ಕ್ಸಿಸ್ಟ್ ಪಕ್ಷವನ್ನು ಹೊಸಕಿ ಹಾಕಿದ್ದಾಗಿ ಸಾರುತ್ತಿದ್ದ. ಅಷ್ಟೇಕೆ, ಎಲ್ಲ ಪಕ್ಷಗಳನ್ನೂ ತಾನು ಹೊಸಕಿ ಹಾಕಿದ್ದಕ್ಕೆ ಕಾರಣ ಜರ್ಮನಿ, ಜರ್ಮನಿಯ ಜನ, ಜರ್ಮನಿಯ ಬಡವರು, ಹಳ್ಳಿಗರು, ಕಾರ್ಮಿಕರು ಎಂದು ಘರ್ಜಿಸುತ್ತಿದ್ದ. ಹಿಟ್ಲರ್ ಒಂದು ಕ್ಷಣ ಮಾತು ನಿಲ್ಲಿಸಿದರೆ ಸಾವಿರಾರು ಜನರ ಚಪ್ಪಾಳೆ ಭೋರ್ಗರೆಯುತ್ತಿತ್ತು. ಜನ ಹುಚ್ಚೆದ್ದು ಕುಣಿಯುತ್ತಿದ್ದರು.ಇಂಥ ಮಾತಿಗಾಗಿ ಹಿಟ್ಲರ್ ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ತನ್ನ ಮಾತು, ಅದನ್ನು ಆಡುವ ರೀತಿ, ದೇಹದ ಚಲನೆ ಎಲ್ಲವನ್ನೂ ಈ ನರಹಂತಕ ಗಂಟೆಗಳ ಕಾಲ ಅಭ್ಯಾಸಮಾಡಿಕೊಳ್ಳುತ್ತಿದ್ದ. ಈ ಅಭ್ಯಾಸವಿಲ್ಲದೆ ಅವನು ವೇದಿಕೆಯನ್ನು ಏರುತ್ತಲೇ ಇರಲಿಲ್ಲ.

ಇವತ್ತು ಮೋದಿ ಮಾತನಾಡುವುದನ್ನು ನೋಡಿದರೆ, ಅದರ ಹಿಂದೆ ಇಂಥ ತಾಲೀಮು ಇರುವುದನ್ನು ಯಾರೂ ಗುರುತಿಸಬಹುದು. ಗಾಂಧೀಜಿ ಎಷ್ಟೋ ಸಂದರ್ಭಗಳಲ್ಲಿ ಆಡುತ್ತಿದ್ದ ಮಾತುಗಳು ಜನರಿಗೆ ತಿಳಿಯುತ್ತಿರಲಿಲ್ಲ. ಆದರೆ ಗಾಂಧೀಜಿಯವರ ಭಾವ ಜನರ ಹೃದಯಕ್ಕೆ ಇಳಿಯುತ್ತಿತ್ತು. ಅನೇಕ ಸಂದರ್ಭದಲ್ಲಿ ಗಾಂಧೀಜಿ ತಮ್ಮ ಮನದ ಭಾವವನ್ನು ಮಾತಿನ ಬದಲು ಕ್ರಿಯೆಯಲ್ಲಿ ತೋರಿಸುತ್ತಿದ್ದರು. ಮಾತಿಗಿಂತ ಕೃತಿ ಮುಖ್ಯ ಎಂಬ ತತ್ವದ ಗಾಂಧೀಜಿಗೆ ಮಾತು ಹೆಚ್ಚು ಬೇಕಾಗಿರಲಿಲ್ಲ. ಆದರೂ ತಮ್ಮ ಆಶ್ರಮಕ್ಕೆ ಬರುತ್ತಿದ್ದ ನೂರಾರು ಜನರೊಂದಿಗೆ ತಾವು ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿಕೊಂಡೇ ಮಾತನಾಡುತ್ತಿದ್ದರು. ಚೆನ್ನಾಗಿ ಕೇಳಿಸಿಕೊಂಡು, ವಿಷಯವನ್ನು ಅರಿತು, ತಮ್ಮ ಸಲಹೆ ನೀಡುತ್ತಿದ್ದರು. ಸರಳ ಮಾತು, ಪಾಲಿಸಬಹುದಾದ ಸಲಹೆ. ತಮಗೆ ತಿಳಿಯದ ಯಾವ ಸಂಗತಿಯನ್ನೂ ಗಾಂಧೀಜಿ ಆಡುತ್ತಿರಲಿಲ್ಲ. ಅನುಮಾನ ಬಂದರೆ ಅದನ್ನು ಮೊದಲು ತಾವು ಮಾಡಿ, ಅದರ ಪರಿಣಾಮವನ್ನು ಅರಿತು ನಂತರ ಇತರರಿಗೆ ಹೇಳುತ್ತಿದ್ದರು. ಅವರಿಗೆ ತಮ್ಮ ಮಾತಿನಲ್ಲಿ, ಕ್ರಿಯೆಯಲ್ಲಿ ವಿಶ್ವಾಸವಿತ್ತು. ಜನತೆಯಲ್ಲಿ ನಂಬಿಕೆ ಇತ್ತು; ಸತ್ಯದಲ್ಲಿ ಅಪಾರ ನಂಬಿಕೆಯಿತ್ತು. ಕಾಯಕದಲ್ಲಿ ಶ್ರದ್ಧೆಯಿತ್ತು. ಈ ನಂಬಿಕೆಯೇ ಅವರ ಮಾತನ್ನು ಮುನ್ನಡೆಸುತ್ತಿತ್ತು. ಹಿಟ್ಲರ್ ಗೆ ಯಾವುದರಲ್ಲಿ ನಂಬಿಕೆಯಿತ್ತು ಎಂಬುದನ್ನು ವಿವರಿಸಬೇಕಾಗಿಲ್ಲ. ಮನುಕುಲದ ಇತಿಹಾಸವೇ ಅದನ್ನು ಹೇಳುತ್ತದೆ. ಮಾತೆಂಬುದು ಕೃತಿಯ ವಿಸ್ತರಣೆಯೇ ಆಗಿರುತ್ತದೆ. ಮಾತು ಮತ್ತು ಕೃತಿಯ ನಡುವೆ ಅಂತರ ಕಡಿಮೆಯಾದಾಗ ವ್ಯಕ್ತಿತ್ವಕ್ಕೆ ಘನತೆ ಬರುತ್ತದೆ. ‘ಮಾತು’ ಆಡುವುದೂ ಹೌದು; ಕೊಡುವುದೂ ಹೌದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೂ ವ್ಯಕ್ತಿತ್ವಕ್ಕೆ ಸಂಬಂಧಿಸಿರುತ್ತದೆ. ಕೇವಲ ಮಾತುಗಾರಿಕೆಯಿಂದಲೇ ವ್ಯಕ್ತಿಯನ್ನು ಅಳೆಯಲಾಗದು; ಅಳೆಯ ಬಾರದು ಕೂಡಾ.

( ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ಬರಹ )

‍ಲೇಖಕರು avadhi

10 February, 2014

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. h a patil

    – ಅನೇಕರಿಗೆ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವುದು ಬಲು ಕಷ್ಟ ಮಾತು ಮರೆತು ಹೋಗುತ್ತದೆ, ನಾಲಗೆ ತೊದಲುತ್ತದೆ ಇದೊಂದು ಪ್ರಹಸನ ಮುಗಿದರೆ ಸಾಕು ಎನಿಸಿ ಬಿಡುತ್ತದೆ.ಈ ವಿಷಯವನ್ನು ಇಟ್ಟುಕೊಂಡು ಗಾಂಧಿ ಮತ್ತು ಹಿಟ್ಲರ್ ಕುರಿತು ಮಾಡಿದ ವಿಶ್ಲೇಷಣೆ ಚೆನ್ನಾಗಿದೆ. ಕೇವಲ ಅವರ ಮಾತುಗಾರಿಕೆಯಿಂದಲೆ ಒಬ್ಬರ ವ್ಯಕ್ತಿತ್ವವನ್ನು ಅಳೆಯಲಾಗದು ಅಕ್ಷರಶಃ ನಿಜ.

  2. Kiran

    You are asking us not to judge Rahul Gandhi by his talk. At the same time you judge Modi by same parameter. For a senior writer, this is unfair. Please keep your prejudices out of the written word. Please allow the readers to make their decisions.

  3. mandalgiriprasanna

    Freinds, adu basavaraju avara vayakitika helike, adu savrvajanika agabekenidilla

  4. ರಮೇಶ್‌ ಹಿರೇಜಂಬೂರು

    ಬಸವರಾಜ್ ಸರ್‌, ಗಾಂಧಿ ಹಾಗೂ ಹಿಟ್ಲರ್‌ ಕುರಿತ ಮಾತುಗಾರಿಕೆ ಜೊತೆಗೆ ಕೃತಿಯ ವಿವರಗಳನ್ನೂ ನೀಡುತ್ತಲೇ ಈ ದೇಶದ ಪ್ರಸ್ತುತ ಸನ್ನಿವೇಶಗಳನ್ನೂ ಬಹಳ ಸೂಕ್ಷ್ಮವಾಗಿ ವಿವರಿಸಿದ್ದೀರಿ. ಇಂದು ಕೃತಿಯಲ್ಲಿ ಮಾಡುವವರು ತೀರಾ ವಿರಳ. ‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು’ ಎನ್ನುವಂತೆ ವೇದಿಕೆಯಲ್ಲಿ ಆರ್ಭಟಿಸಿ ಮಾತನಾಡುವವರು ಎಷ್ಟೊಂದು ಕೆಲಸ ಮಾಡಿದ್ದಾರೆ ಎನ್ನುವುದು ಈ ದೇಶಕ್ಕೇ ಗೊತ್ತಿದೆ… ಇಡೀ ಈ ಲೇಖನ ಅಂಥವರನ್ನು ಕೆಣಕುತ್ತದೆ. ಉತ್ತಮ ಬರಹ ಓದುವ ಅವಕಾಶ ನೀಡಿದ್ದಕ್ಕೆ ಅವಧಿಗೆ ಥ್ಯಾಂಕ್ಸ್..
    -ರಮೇಶ್ ಹಿರೇಜಂಬೂರು

  5. ಸೋಮಲಿಂಗ ಜಿ

    ಹೌದು..ನೀವು ಹೇಳಿದ್ದು ನೂರಕ್ಕೆ ನೂರಾಹತ್ತು ಪ್ರತಿಶತ ಸತ್ಯ. ರಾಹುಲ್ ಗಾಂಧಿ ಮಹಾತ್ಮಾ ಗಾಂಧೀಜಿಯಂತೆಯೇ. ಅವರಿಗೆ ಗಾಂಧೀಜಿಯವರಂತೆ ಜನತೆಯಲ್ಲಿ ನಂಬಿಕೆ ಇದೆ; ಸತ್ಯದಲ್ಲಿ ಅಪಾರ ನಂಬಿಕೆಯಿದೆ. ಕಾಯಕದಲ್ಲಿ ಶ್ರದ್ಧೆಯಿದೆ. ಸಂದರ್ಶನದ ಸಮಯದಲ್ಲಿ ಮಹಾತ್ಮಾ ಗಾಂಧೀಜಿಯವರಂತೆ ರಾಹುಲ ಗಾಂಧಿಜಿಯವರಲ್ಲಿ ಕೂಡ ವಿನಯ ಮನೆಮಾಡಿತ್ತು. ಇದೇ ವಿನಯದಿಂದಲೇ ಅವರು ತಮ್ಮ ಮಾತುಗಳನ್ನು ಆಡುತ್ತಿದ್ದರು. ಅವರ ಮಾತು ಸರಳವಾಗಿರುತ್ತಿತ್ತು; ಸಹಜವಾಗಿತ್ತು; ಸತ್ಯದಿಂದ ಕೂಡಿತ್ತು. ಯಾವ ಅಲಂಕಾರಗಳಿಲ್ಲದೆ, ಸುತ್ತು ಬಳಸುಗಳಿಲ್ಲದೆ ಹೇಳಬೇಕಾದದ್ದನ್ನು ಗಾಂಧೀಜಿಯವರಂತೆ ನೇರವಾಗಿ ಹೇಳಿ ಮುಗಿಸುತ್ತಿದ್ದರು. ಮೋದಿ ಭ್ರಮೆಗೆ ಸಿಲುಕಿದ ಜನ ಅವರ ಈ ಉನ್ನತ ಗುಣಗಳನ್ನು ಅವಗಣಿಸಿ ಅಪಾರ್ಥ ಮಾಡಿಕೊಂಡರು.
    ಹೋಲಿಕೆಗಳೊಡನೆ ಕಣ್ಣ ಮುಂದೆ ಬರುವಂತೆ ರಾಹುಲ ಗಾಂಧೀಜಿಯವರ ವ್ಯಕ್ತಿತ್ವ ಹರಡಿಕೊಟ್ಟ ಹಿರಿಯ ಸಮಾಜಮುಖಿ ಪತ್ರಕರ್ತರಾದ ಬವರಾಜ್ ಅವರಿಗೆ ಸಾವಿರ ವಂದನೆಗಳು. ಮೋದಿ ಭ್ರಮೆಯಲ್ಲಿ ಜನ ಸಿಲುಕಿರುವ ಈ ಸಂಕಷ್ಟ ಕಾಲದಲ್ಲಿ, ಓದುಗರ ಕಣ್ತೆರೆಸುವಂತಹ ಇಂಥಹ ಲೇಖನಗಳು ತಮ್ಮಿಂದ ಹೆಚ್ಚೆಚ್ಚು ಬರುವಂತಾಗಲಿ ಎಂಬ ಕಳಕಳಿಯ ಪ್ರಾರ್ಥನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading