ಸತ್ಯಮಂಗಲ ಮಹಾದೇವ್
ಕಟ್ಟೆಯ ಮೇಲೆ
ಹಟ್ಟಿದನ ಕೊಟ್ಟಿಗೆ ಸೇರುವಲ್ಲಿ
ಒತ್ತೊತ್ತಿಗೆ ಹೆಣೆದ ಮಂಕರಿಯ ಮುಂದೆ
ಮಣಬಾರದ ಚಿಂತೆಗಳ ಹೆಗಲೇರಿಸಿ ಕೂತ
ಅಜ್ಜನ ಹಣೆ ಮೇಲೆ ವಸಂತದ ಹೆಣಗಳ ರಾಶಿ
ಹನಿ ಹನಿಯಾಗಿ ನೆಲಕೆ ದುಮುಕುತ್ತವೆ
ಬಾಳ ಝರಿಯಾಗಿ ಬಳಲದೇ ಬಳುಕುವ ಹುಮ್ಮಸ್ಸಲ್ಲಿ
ಬಾಲನಾಗಿ ನಿಂತು ನೋಡುತ್ತೇನೆ
ನನ್ನ ಗಾಂಧಿ ಸತ್ತಿಲ್ಲ
ಸಿನಿಮಾ ಟಾಕೀಸುಗಳ ಮುಂದಿನ ಬೆಂಚುಗಳಲ್ಲಿ
ಮೋಟು ಬೀಡಿ ಸೇದಿ ನಾಳೆಗೆ ಇರಿಸುವವನಲ್ಲಿ
ಟಿಕೇಟು ಕೊಟ್ಟು ಚಿಲ್ಲರೆ ಬರೆದುಕೊಡುವವನ ಎದೆಯೊಳಗೆ
ತೂಕ ಹಾಕಿ ತೂಕ ಬಚ್ಚಿಡುವ ತೂಕವಿಲ್ಲದವರ
ತೂಕದ ಬೊಟ್ಟುಗಳಲ್ಲಿ
ಅಳೆದು ಮಡುಚಿ ಕತ್ತರಿಸಿ ಒಲಿಯುವ ಸಿಂಪಿಗನ
ಕತ್ತರಿಯ ನೇರ ನಡವಳಿಕೆಯಲ್ಲಿ
ಗಾಂಧಿ ಸದಾ ನೇಣುಗಂಬಕ್ಕೆ ಏರುತ್ತಲೇ ಇದ್ದಾನೆ.
ಕೋರ್ಟುಗಳ ನ್ಯಾಯಾಧೀಶರ ಹಿಂದೆ
ಫೋಟೋದಲ್ಲಿ
ಪೋಲಿಸ್ ಠಾಣೆಯ ಲಾಠಿ
ಬಂದೂಕುಗಳ ಜೊತೆಯಲ್ಲಿ
ಆಸ್ಪತ್ರೆಯ ಗೋಡೆಗಳ ಮೇಲೆ
ನಿಂತರೂ ನಿಲ್ಲದ ಹಾಗೆ
ಕೂತರೂ ಕಾಣದ ಹಾಗೆ
ನಿಂತೇ ಇರುವ ಮೋಹಕ ನಗು
ಕೂರಲಾಗದ ವ್ಯಥೆಯ ಚರಕಸಂಹಿತೆ
ಗಾಂಧಿ ಕುಳಿತುಕೊಳ್ಳಲಾಗದ ಚಡಪಡಿಕೆ ಮಾತ್ರ….
ರಾಷ್ಟ್ರಗೀತೆಯ ಹಾಡಿಗಾಗಿ
ದೇಶದ ಅಭಿಮಾನಕಾಗಿ
ನೆನೆವ ನಿನ್ನ ಮಾತಿಗಾಗಿ
ಒಂದು ದಿನ ಮಾತ್ರ ನೆನಪಿಸಿಕೊಳ್ಳುವ
ನನ್ನಂತವನಿಗೂ
ತಿಂಗಳ ಕೊನೆಯಲ್ಲಿ ನಗುತರಿಸುವ
ಸಂಬಳದ ನೋಟುಗಳಲ್ಲಿ
ಮಾಸಲೇ ಇಲ್ಲ ಗಾಂಧಿ ನಿನ್ನ ನಗು…
ವಿನಿಮಯ ಮಾಡಲಾಗದ ನಿನ್ನ
ವಿಲೇವಾರಿ ಮಾಡುವ ಈ ಸಂತೆಯೊಳಗೆ
ನಾನೂ ಇದ್ದೇನೆ
ವೃತ್ತಗಳಲ್ಲಿ ಪ್ರತಿಭಟನೆಗಳ ನೋಡಿ ನೋಡಿ
ನೀನು ಸುಮ್ಮನೆ ಕೂತಿದ್ದೀಯೆ
ಸುಮ್ಮನಿರುವುದು ಸಾಧ್ಯವೇ ?
ಪದ್ಯ ಬರೆಯುವಾಗ ನಾನು ಮತ್ತೆ ನಿನ್ನ
ನೆನಪಿಸಿಕೊಳ್ಳಬಹುದು ಅಷ್ಟೆ
ಗಾಂಧಿಯಾಗುವ ಘಳಿಗೆ ಯಾವಾಗ ಬರುತ್ತದೆಯೋ
ಕಾಯುವ ಕಾಲದ ಕಣ ನಾನು
ಮುನ್ನಡೆಸಿದ ಮಹಾ ಚೇತನ ನೀನು…






ಚೆನ್ನಾಗಿದೆ