ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಮತ್ತು ಕವಿತೆ

ಕೆ. ಸಚ್ಚಿದಾನಂದನ್

ಕನ್ನಡಕ್ಕೆ: ರಾಜು ಎಂ ಎಸ್

ಒಂದಿನ, ಬಡಕಲು ಕವಿತೆಯೊಂದು
ಗಾಂಧಿ ಆಶ್ರಮಕ್ಕೆ ಹೋಗಿ
ಅವನ ದರ್ಶನಕ್ಕೆ ಕಾಯುತ್ತಿತ್ತು.
ಚರಕ ನೇಯುತ್ತಿದ್ದ ಗಾಂಧಿ.
ರಾಮನೆಡೆ ಹೊರಟ ನೂಲು ದಾರವು
ಕವಿತೆಯೆಡೆ ನೋಡಲೇಯಿಲ್ಲ.
‘ಭಜನೆಯೂ’ ಆಗಲು ಲಾಯಕ್ಕಿಲ್ಲದ,
ಬಾಗಿಲ ಬಳಿ ಕಾಯ್ತಿದ್ದ ಕವಿತೆಗೆ ನಾಚಿಕೆ.
ಕವಿತೆ ತನ್ನ ಗಂಟಲು ಸರಿಪಡಿಸಿಕೊಳ್ಳುವಾಗ,
ಒರೆಗಣ್ಣಲಿ ಗಾಂಧಿ
ಅದರೆಡೆ ನೋಡಿದ -ನರಕವನೀಕ್ಷಿಸಿರುವ ಕನ್ನಡಕದೊಳಿಂದ!
ಕೇಳಿದ
“ಹಮಾಲಿ-ಗಾಡಿಯನೆಂದಾದರೂ ಎಳೆದರಿವಿದೆಯೇ?
ಮುಂಜಾವದಿ ಅಡುಗೆಯೊಲೆ ಹೊಗೆ ತಾಳಿಕೊಂಡಿರುವೆಯಾ?
ಎಂದಾದರೂ ಹಸಿದು ಗೊತ್ತೇ?”

ಕವಿತೆ ಹೇಳಿತು : ” ನಾ ಹುಟ್ಟಿದ್ದು ಕಾಡಲ್ಲಿ, ಬೇಡನೊರ್ವನ ಬಾಯಲ್ಲಿ.
ಬೆಸ್ತನೊಬ್ಬ ಗುಡಿಸಲಿಗೆ ತಂದು ಬೆಳೆಸಿದ ಎನ್ನ.
ಆದ್ರೂ, ನಂಗೆ ಕೆಲಸ ಮಾಡಲು ಬಾರದು, ಹಾಡಲಷ್ಟೇ ಗೊತ್ತು.
ಮೊದಲು ಆಸ್ಥಾನಗಳಲ್ಲಿ ಹಾಡಿದೆ:
ಆಗ ನಾ ಸುಂದರ, ದಷ್ಟಪುಷ್ಟನಾಗಿದ್ದೆ.
ಆದರೀಗ, ಬೀದಿಗೆಬಿದ್ದು ಅರೆಹೊಟ್ಟೆ ಇದ್ದೇನೆ. “

ಹುಳ್ಳಗೆ ನಕ್ಕ ಗಾಂಧಿ : “ಇಷ್ಟು ವಾಸಿ,
ಆದ್ರೆ ಈ ಕಾಲದಲ್ಲಿ ನೀನು ಸಂಸ್ಕೃತದಲ್ಲಿ ಮಾತಾಡುವುದ ಬಿಡು.
ಹೊಲಗಳಿಗೆ ಹೋಗು. ರೈತ ಕಾರ್ಮಿಕನ ನೋವನರಿ.”
ಕವಿತೆ ತಾನೊಂದು ಬಿತ್ತುವ-ಕಾಳಾಗಿ
ಹೊಲಕ್ಕೆ ಹೋಗಿ
ಉಳುವ ಯೋಗಿಗೆ ಕಾಯ್ತಾ ನಿಂತಿತು:
ಫಲವತ್ತು ಮಣ್ಣು ಕೆಳಮೇಲಾಗಲು,
ಹೊಸ ಮಳೆಗೆ ತೇವವಾಗಲು!

‍ಲೇಖಕರು Avadhi

4 October, 2020

1 Comment

  1. ಪ್ರದೀಪ ಬಳ್ಳಾರಿ

    ಗಾಂಧಿ ಜಯಂತಿ ಯ ಈ ಸಮಯದಲ್ಲಿ ಅವರ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿ ಉತ್ತಮ ಕಾರ್ಯ ಕೈ ಗೊಂಡಿರುತ್ತೀರಿ…
    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading