ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ನೀನಿಲ್ಲದ ನಾಡಿನಲ್ಲಿ…

ಆರ್ ಎನ್ ದರ್ಗಾದವರ

ಗಾಂಧಿ ನೀನಿಲ್ಲದ ನಾಡಿನಲ್ಲಿ
ಹಗಲಿನಲಿ ಬೆಳಗಬೇಕೆಂದಿದ್ದ ಸೂರ್ಯನ ಸುಳುವಿಲ್ಲ
ತಂಪನೇರಿ ಬರುವ ಚಂದ್ರ ಪಥವನ್ನೇ ತಪ್ಪಿದಂತಿರುವ
ಚಳಿ-ಗಾಳಿ ಮಳೆಗೆ ನಲುಗದ
ಎದೆಯೆತ್ತರ ಒರಟು ಗೋಡೆಗಳೂ ಸಹ
ವಿಚಿತ್ರ ಸದ್ದಿನೊಂದಿಗೆ ನಲುಗಿವೆ
ಹಸಿರು ನೆಲದ ತಂಪಿನಲಿ
ಕೊಡಲಿ ಪೆಟ್ಟು ತಿಂದವರ ಆರ್ತನಾದ ಕಿಡಿ
ಜಯ ಘೋಷಕೆ ಬೆಂಡಾಗಿ ಕಾದಿದೆ
ನೀ ಬರುವ ದಾರಿಯುದ್ದಕ್ಕೂ ಮೇಣದ ಬೆಳಕು-
ಚಲ್ಲಿ ಮೌನವಾದ ಆತ್ಮಗಳು
ಯಾರಿಗೋ ಸಂತಾಪ ಸೂಚಿಸುತ್ತಿರುವಂತೆ
ಕಾಣುತ್ತಿದೆ

ಆ ದಿನ,ಜನ್ಮ ದಿನವಾಗಿರುವದಕ್ಕೇನೋ
ನೀ ಬಹಳ ನೆನಪಾಗಿ ಬಿಡುತ್ತೀ,
ಉಳಿದ ದಿನಗಳಲ್ಲಿ ಗಲ್ಲಿ ಮೂಲೆಯಲ್ಲಿದ್ದ ನಿನಗೆ
ಧೂಳಿನ ಅಭಿಷೇಕ
ನೀ ಬಿಟ್ಟು ಹೋದ ಮಂಗಗಳ ಕೈಯಲೊಂದು
ಕೋಲಿರಬೇಕಿತ್ತು ಬಹುಶಃ ನೆನಪಾಗುತ್ತಿದ್ದೇನೋ

ಆಗೋ,ಬಂದೇಬಿಟ್ಟರು ನೋಡು..!
ಶಾಂತಿ ಸಂದೇಶ ಸಾರುವ ಭಯಂಕರ ಸದ್ದಿನ ಸರದಾರರು
ಕೈಯಲೊಂದು ರಕ್ತವನ್ನೇ ತೊಟ್ಟಿಕೊಂಡ ಬಿಳಿಬಾವುಟ

ನಿನಂತೂ ಗುಂಡು ತಿಂದು ಈ ನೆಲದ ಉಸಿರಾದೆ
ಪಾಪಗೈದವನಿಗೆ ಜೈಕಾರ ಮೊಳಗುತ್ತಲೇ ಇವೆ
ನೀನದೆಂತಹ ದುರ್ದೈವ ನೋಡು ಮುತ್ತ್ಯಾ
ಸತ್ತಂತಿದ್ದರೂ ನೆಮ್ಮದಿಯಿಲ್ಲ ನಿನಗೆ

ದೇಶ ಸಂಚಾರಗೈಯುವ ನೂರಾರು ನದಿಗಳು
ಬೋರ್ಗರೆಯುತ್ತಿರುವದೆಷ್ಟು ಸತ್ಯವೋ
ಅದರಲ್ಲಿ ತಿಳಿನೀಲಿ ಆಗಸ ಕಾಣುತ್ತಿಲ್ಲವೆನ್ನುವದು ಅಷ್ಟೇ ಸತ್ಯ

‍ಲೇಖಕರು Admin

21 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading