ಧೂಳೆಬ್ಬಿಸುವ ಹಗ್ಗಕೆ ತೊಟ್ಟಿಲು ತೂಗುವಾಗ ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ ಅದೇ ಕನ್ನಡಕದಲಿ ನಗು ಬೀರಿದ ನೆನಪು!
ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!
ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು
ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ-
ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ
ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ!
ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು
ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ
ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ!
ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು
ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು
ನೂರರ ನೋಟಿನಲಿ ನೂರೆನುವಾಗಲೂ
ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ!
ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ
ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ
ಮತ್ತೆ ಐನೂರರ ಗಾಳಿ ಬೀಸುವಾಗಲೂ
ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!]]>






ಕವಿತೆಯ ಭಾವ ಚೆನ್ನಾಗಿದೆ. ಇನ್ನಷ್ಟು ತೀಕ್ಷಣಗೊಳಿಸಲು ಅವಕಾಶವಿದೆ.
ನನ್ನ ಈ ಪುಟ್ಟ ಬರಹವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಅವಧಿ ತಂಡಕ್ಕೆ ನನ್ನ ನಮನಗಳು.
ಶ್ರೀಯುತ ರವಿ ಮೂರ್ನಾಡ್ ಅವರಿಗೂ ಆತ್ಮೀಯ ವಂದನೆಗಳು
ಗಾಂಧಿಯ ಆ ಮಾಸದ ನಗೆಯ ಹಿಂದೆ, ದುಡ್ಡಿನ ಪೊಳ್ಳುತನ, ದರ್ಭಾರು, ನಿರಂತರ ಚಲನತೆ ಮತ್ತು ಅದರ ಅಶಾಶ್ವತೆಯ ಸಂಪೂರ್ಣ ಸಾರವಿದ್ದಂತಿದೆ.
ಹಲವು ಆಯುಮಾನಗಳಲ್ಲಿ ತೆರೆದುಕೊಳ್ಳುವ ನಿಮ್ಮ ಕವನದಲ್ಲಿ ಹಣ ಮತ್ತು ಅದಕ್ಕೆ ಎಂದೂ ಬೆಲೆಕೊಡದ ಗಾಂಧಿ ವ್ಯಕ್ತಿತ್ವದ ಹೇಳದ ಹಿನ್ನಲೆಯಿದೆ.