ಜಗದ ಕನಸು
ವಸುಂಧರಾ .ಕೆ.ಎಂ. ಬೆಂಗಳೂರು
ಗಾಂಧಿಯಂತಹ ಒಬ್ಬ ಮಹಾತ್ಮ
ಪುರಾಣವಾಗದೆ ಇತಿಹಾಸ ಹೇಗಾದದ್ದು
ಎಂಬುದು ಪರಮಾಶ್ಚರ್ಯ ನನಗೆ..!!?
ಬರೀ ಸತ್ಯ ಹೇಳಿಕೊಂಡೇ ಇಡೀ ಜನುಮ
ಬದುಕುವುದು ಸಾಧ್ಯವಾ ಹೇಗೆ
ಎಂಬುದೂ ಮತ್ತೊಂದಚ್ಚರಿ ..!!
ಕೊಲ್ಲದೇ, ಕಟಕಿಯಾಡದೆ, ತುಳಿಯದೆ,
ಹೀಯಾಳಿಸದೆ, ಕೆಸರೆರಚದೆ ಸದಾ
ಮೌನವಾಗಿರಬಹುದೇ? ಏನಾಶ್ಚರ್ಯ..!!
ಅರೆ ಹೊಟ್ಟೆ ಉಣ್ಣುವುದು..! ಅರೆ ಬೆತ್ತಲು
ತಿರುಗುವುದು..! ಬಲಿತ ಮೇಲೂ ತನುಮನ-
ಮಕ್ಕಳಾಗುಳಿಯುವುದು..?!
ಆತ ಇದ್ದದ್ದೇ ಸುಳ್ಳು ಬಿಡು, ನಿತ್ಯ
ಸತ್ಯದ ಯುಗದಲ್ಲಿ… ಊಹಿಸಲು ಮತ್ತೂ
ಅಸಾಧ್ಯ ಈ ಹೊತ್ತಿನ ನಿಜದಲ್ಲಿ..!!
ಸುಮ್ಮನೆ ಗುಡಿಕಟ್ಟಿ ಪೂಜಿಸುವುದೇ
ಸಮಾ… ನಮ್ಮದೇ ಆತ್ಮದಾಣತಿಯ
ಪಾಲಿಸುವ ತಾಕತ್ತು ನಮಗೆಲ್ಲಿದೆ..?!
ಅದಕ್ಕೇ ನನಗನ್ನಿಸುವುದು, ಈ
ಗಾಂಧಿ ಎಂಬುದು ಎಂದೋ
ಆಗಿಹೋದ ಜಗದ ಒಂದೊಳ್ಳೆ ಕನಸು..!






ಧನ್ಯವಾದಗಳು ಪ್ರೀತಿಯ ‘ಅವಧಿ’