ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’

ಹದಿನಾಲ್ಕನೇ ಲೂಯಿಯೂ ರಾಮಚಂದ್ರೇಗೌಡರೂ

-ಎನ್ ಎ ಎಂ ಇಸ್ಮಾಯಿಲ್

ಬರೆವ ಬದುಕಿನ ತಲ್ಲಣ

23feb_poster

ಫೆಬ್ರವರಿ 18ರಂದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್‌ನಲ್ಲಿ ನಡೆದ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರು ನೀಡಿದ ಆದೇಶ ಹೀಗಿತ್ತು. `ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’. (ಇಲ್ಲಿ ಸರ್ಕಾರ ಮಾತನಾಡುತ್ತಿದೆ. ನಾನು ಹೇಳುತ್ತಿದ್ದೇನೆ ಅವರನ್ನು ಹೊರಗೆ ಹಾಕಿ). ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು `ನನ್ನ ಸರ್ಕಾರ’ ಎಂದು ಮಾತನಾಡುವುದನ್ನು ನಾವು ಕೇಳಿದ್ದೇವೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಓದುವ ಆಡಳಿತಾರೂಢ ರಾಜಕೀಯ ಪಕ್ಷಗಳು ಸಿದ್ಧಪಡಿಸಿದ ಭಾಷಣದಲ್ಲಿ `ನನ್ನ ಸರ್ಕಾರ’ ಎಂಬ ಪ್ರಯೋಗವಿರುತ್ತದೆ. ಆದರೆ ಮಂತ್ರಿಗಳು, ಶಾಸಕರು, ಸಂಸದರು ಈ ಬಗೆಯ ಪ್ರಯೋಗ ಮಾಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ.

ರಾಜ್ಯಪಾಲ, ರಾಷ್ಟ್ರಪತಿಗಳಂಥವರು `ನನ್ನ ಸರ್ಕಾರ’ ಎಂಬ ಪ್ರಯೋಗವನ್ನು ಬಳಸುತ್ತಾರೆಯೇ ಹೊರತು ಇವರ್ಯಾರೂ `ನಾನೇ ಸರ್ಕಾರ’ ಎಂದು ಹೇಳಿದ್ದಂತೂ ಇಲ್ಲವೇ ಇಲ್ಲ. ಹೀಗೆ `ನಾನೇ ಸರ್ಕಾರ’ ಎಂದು ಹೇಳಿದವನಿದ್ದರೆ ಅವನು 17ನೇ ಶತಮಾನದ ಫ್ರೆಂಚ್‌ ದೊರೆ ಹದಿನಾಲ್ಕನೇ ಲೂಯಿ. ಅವನು ಸಂಸತ್‌ ಸ್ವಯಂಪ್ರೇರಣೆಯಿಂದ ಸಭೆ ಸೇರುವುದರಿಂದ ವಿಚಲಿತನಾಗಿ `l’etat C’est moi'(ನಾನೇ ಪ್ರಭುತ್ವ ಅಥವಾ ನಾನೇ ಸರ್ಕಾರ) ಎಂದು ಕಿರುಚಿದ್ದನಂತೆ.

face

`ಸರ್ಕಾರ ಮಾತನಾಡುತ್ತಿದೆ’ ಎಂದು ಹೇಳಿದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡರು ಖಂಡಿತವಾಗಿಯೂ ಹದಿನಾಲ್ಕನೇ ಲೂಯಿಯಂಥ ಚಕ್ರವರ್ತಿಯಂತೂ ಅಲ್ಲ. ಅವರು ಜನರಿಂದ ಅದೂ ಪದವೀಧರರಿಂದ ಆಯ್ಕೆಯಾಗಿರುವ ಶಾಸಕ. ಸರಳವಾಗಿ ಹೇಳುವುದಾದರೆ ಜನಪ್ರತಿನಿಧಿ ಮತ್ತು ಮುಖ್ಯಮಂತ್ರಿಗಳಿಂದ ನೇಮಕಗೊಂಡ ಸಚಿವ. ಹಾಗಾಗಿ ಅವರೇ ಸರ್ಕಾರವಾಗಿರುವ ಯಾವ ಸಾಧ್ಯತೆಯೂ ಇಲ್ಲ. ಆಧುನಿಕ ಕಲಾ ಗ್ಯಾಲರಿ ಕೇಂದ್ರ ಸರ್ಕಾರದ ಆಡಳಿತದ ಪರಿಧಿಯಲ್ಲಿರುವಂಥದ್ದು. ಇದರ ಉದ್ಘಾಟನೆಯಲ್ಲಿ ಸಚಿವ ರಾಮಚಂದ್ರೇಗೌಡರು ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿದ್ದರು. ಈ ಅಂಶವನ್ನು ಒಪ್ಪಿಕೊಂಡರೂ ರಾಮಚಂದ್ರೇಗೌಡರು ಸರ್ಕಾರವಾಗಲು ಸಾಧ್ಯವಿಲ್ಲ. ಭಾರತದ ಪ್ರತಿನಿಧಿಯಾಗಿ ಹೊರ ದೇಶಗಳಲ್ಲಿರುವ ರಾಯಭಾರಿಗಳು ಭಾರತ ಸರ್ಕಾರದ ಪ್ರತಿನಿಧಿಗಳೇ ಹೊರತು ಅವರೇ ಭಾರತ ಸರ್ಕಾರವಲ್ಲ ಎಂಬ ತರ್ಕವನ್ನು ಇಲ್ಲಿಗೂ ಅನ್ವಯಿಸಬಹುದು.

***

ಒಟ್ಟಿನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಯೂ `ನಾನೇ ಸರ್ಕಾರ’ ಎಂದು ಹೇಳುವ ಯಾವ ಅವಕಾಶವೂ ಇಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಅಂದರೆ ಮಂತ್ರಿಯೊಬ್ಬರು `ನಾನೇ ಸರ್ಕಾರ’ ಎಂದಿದ್ದರೆ ಅದು ಅಪ್ರಜಾಸತ್ತಾತ್ಮಕ ಹೇಳಿಕೆ ಎಂಬುದು ಸಂಶಯಾತೀತವಾಗಿ ಸ್ಪಷ್ಟ. ಆದರೆ ರಾಮಚಂದ್ರೇಗೌಡರ ಪ್ರಕರಣದಲ್ಲಿ ಸಂಭವಿಸಿದ್ದು ಬೇರೆಯೇ.

`ಸರ್ಕಾರ ಮಾತನಾಡುತ್ತಿದೆ. ಅವರನ್ನು ಹೊರಗೆ ಹಾಕಿ’ ಎಂಬ ಹೇಳಿಕೆಯ ಕೊನೆಯ ಭಾಗ ಮತ್ತು ಅದರ ಪರಿಣಾಮ ಮಾತ್ರ ಎಲ್ಲರಿಗೂ ಮುಖ್ಯವಾಗಿಬಿಟ್ಟಿದೆ. ರಾಮಚಂದ್ರೇಗೌಡರು ನೀಡಿದ ಆದೇಶ ಪೊಲೀಸರಿಗಲ್ಲದೇ ಇದ್ದರೂ ಪೊಲೀಸರು ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಲಾವಿದನನ್ನು ಸಮ್ಮೇಳನ ಸಭಾಂಗಣದಿಂದ ಹೊರಗೆ ಹಾಕಿದರು. ಹೀಗೆ ಹೊರಗೆ ಹಾಕಿದ್ದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಕುರಿತಂತೆ ಕಾಳಜಿಯುಳ್ಳವರು ಒಟ್ಟು ಸೇರಿ ಪ್ರತಿಭಟಿಸಿದರು. ಆದರೆ ಮಂತ್ರಿಯೊಬ್ಬ `ನಾನೇ ಸರ್ಕಾರ’ ಎಂಬ ದಾರ್ಷ್ಟ್ಯ ತೋರಿದ್ದು ಎಲ್ಲಿಯೂ ಯಾರನ್ನೂ ಕಾಡಲಿಲ್ಲ.

ಹೀಗೆ ಮಂತ್ರಿಗಳು ಮತ್ತು ಅಧಿಕಾರಿಗಳು ಅವರೇ ಸರ್ಕಾರವಾಗುವುದು ಇದೇ ಮೊದಲೇನೂ ಅಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಇಂಥದ್ದೇ ಒಂದು ಘಟನೆ ಸಂಭವಿಸಿತ್ತು. ನಿಯಮೋಲ್ಲಂಘನೆಯ ಮೂಲಕ ನೇಮಕಗೊಂಡಿದ್ದ ನೌಕರರನ್ನು ಕುಲಪತಿ ಕೆಲಸದಿಂದ ತೆಗೆದು ಹಾಕಿದ್ದರು. ಕಾನೂನು ಬದ್ಧವಾಗಿ ಅವರ ಮರು ನೇಮಕ ಸಾಧ್ಯವಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ರಜೆಯಲ್ಲಿದ್ದ ಕುಲಪತಿಯನ್ನು ಕರೆಯಿಸಿಕೊಂಡು `ಎಲ್ಲರನ್ನೂ ಮರು ನೇಮಕ ಮಾಡಿ’ ಎಂದು ಆದೇಶಿಸಿದರು.

ಕುಲಪತಿ ಅದು ನಿಯಮೋಲ್ಲಂಘನೆಯಾಗುತ್ತದೆ ಎಂದಾಗ ಮರುನೇಮಕಕ್ಕಾಗಿ ಆಗ್ರಹಿಸುತ್ತಿದ್ದವರನ್ನು ಉದ್ದೇಶಿಸಿ `ನಾನು ಹೇಳುತ್ತಿದ್ದೇನೆ. ನಿಮ್ಮ ಮರು ನೇಮಕ ಸಾಧ್ಯವಾಗದಿದ್ದರೆ ಉಳಿದವರೂ ವಿಶ್ವವಿದ್ಯಾಲಯಕ್ಕೆ ಬರದಂತೆ ಬೀಗ ಹಾಕಿ’ ಎಂದು ಆದೇಶಿಸಿದ್ದರು. ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ಸಾರಿಗೆ ಕಚೇರಿಯೊಂದಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ನಾಗರಿಕರೊಬ್ಬರು ಅಧಿಕಾರಿಗಳ ಪರವಾಗಿ ಮಾತನಾಡಿದಾಗ ಅವರನ್ನು ಜಿ.ರಮೇಶ್‌ ಎಂಬ ಲೋಕಾಯುಕ್ತ ಎಸ್‌.ಪಿ. ಮನಬಂದಂತೆ ಥಳಿಸಿದ್ದರು.

ಇತ್ತೀಚೆಗೆ ಮಗನ ಕೊಲೆಯಿಂದ ದುಃಖ ಅನುಭವಿಸುತ್ತಿದ್ದ ಎಎಸ್‌ಐ ಒಬ್ಬರಿಗೆ ಡಿಸಿಪಿ ರವಿ ಥಳಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈಗ ಮಾನವ ಹಕ್ಕು ಆಯೋಗವೂ ಡಿಸಿಪಿ ರವಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಸೋನಿಯಾ ನಾರಂಗ್‌ ಎಂಬ ಪೊಲೀಸ್‌ ಅಧಿಕಾರಿ ತಮ್ಮ ಕೈಕೆಳಗಿನ ಅಧಿಕಾರಿಯೊಬ್ಬರಿಗೆ ಥಳಿಸಿದ್ದನ್ನೂ ನಾವೆಲ್ಲರೂ ಪತ್ರಿಕೆಗಳಲ್ಲಿ ಓದಿ ಮರೆತಿದ್ದೇವೆ.

ಈ ಎಲ್ಲಾ ಪ್ರಕರಣಗಳೂ ರಾಜಕಾರಣಿಗಳು ಮತ್ತು ಅಧಿಕಾರಿಗಳ `ತುಘಲಕ್‌ ಮನಸ್ಥಿತಿ’ಯ ಸ್ಯಾಂಪಲ್‌ಗಳು ಮಾತ್ರ.

***

20050520039302011

ರಾಮಚಂದ್ರೇಗೌಡರ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಿರುವುದು ಬೇರೆಯೇ ಬಗೆಯಲ್ಲಿ. ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕಲಾವಿದರೊಬ್ಬರು ಸಭೆಯಲ್ಲೇ ವಿರೋಧಿಸಿದರು. ರಾಮಚಂದ್ರೇಗೌಡರಿಗೆ ಆಧುನಿಕ ಕಲೆಯ ಬಗ್ಗೆ ತಮ್ಮ ಸ್ವಂತ ಅಭಿಪ್ರಾಯವನ್ನು ಅದು ಯಾರಿಗೆ ಇಷ್ಟವಾಗದಿದ್ದರೂ ಹೇಳುವ ಹಕ್ಕಿದೆ. ಭಾಷಣಕ್ಕೆ ಅಡ್ಡಿಪಡಿಸಿದವರು ಸಚಿವರ ಈ ಮೂಲಭೂತ ಹಕ್ಕನ್ನು ಉಲ್ಲಂಘಿಸಿದರೆಂದೇ ಭಾವಿಸೋಣ. ಆದರೆ ಇದಕ್ಕೆ ಸಚಿವರು ನೀಡಿದ ಪ್ರತಿಕ್ರಿಯೆ ಕೆಲವು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ. `ಇಲ್ಲಿ ಸರ್ಕಾರ ಮಾತನಾಡುತ್ತಿದೆ’ ಎಂದು ಸಚಿವರು ಹೇಳಿದರು. ಅಂದರೆ ಸಚಿವರು ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಚಿವ ಸಂಪುಟದ ಅರ್ಥಾತ್‌ ಸರ್ಕಾರದ ಅಭಿಪ್ರಾಯವೇ? ಅಂದರೆ ಇದನ್ನು ಆಧುನಿಕ ಕಲೆ ಮತ್ತು ಕಲಾವಿದರ ಬಗೆಗಿನ ಸರ್ಕಾರದ ನೀತಿ ಎಂದು ಪರಿಗಣಿಸಬಹುದೇ? ತಮ್ಮ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು `ಹೊರಗೆ ದಬ್ಬುವುದೂ’ ಈ ನೀತಿಯ ಭಾಗವೇ?

***

ಎಚ್‌.ಡಿ.ಕುಮಾರಸ್ವಾಮಿಯವರಿಂದ ಆರಂಭಿಸಿ ರಾಮಚಂದ್ರೇಗೌಡರ ತನಕದ ರಾಜಕಾರಣಿಗಳು ಮತ್ತು ಎಸ್‌ಪಿ ರಮೇಶ್‌ರಿಂದ ಆರಂಭಿಸಿ ಸೋನಿಯಾ ನಾರಂಗ್‌ ಅವರ ತನಕದ ಪೊಲೀಸ್‌ ಅಧಿಕಾರಿಗಳು ಒಂದು ಅಂಶವನ್ನಂತೂ ಸ್ಪಷ್ಟಪಡಿಸುತ್ತಿದ್ದಾರೆ. ಇವರಾರಿಗೂ ಪ್ರಜಾಸತ್ತೆಯ ಮುಖ್ಯ ಉಪಕರಣವಾಗಿರುವ ಭಿನ್ನಾಭಿಪ್ರಾಯಕ್ಕೆ ಬೆಲೆ ಕೊಡುವ ಮನಸ್ಸಿಲ್ಲ. ನಿಯಮದ ಬಲದ ಮೇಲೆ ನಂಬಿಕೆ ಇಲ್ಲ. ದಬ್ಬುವುದು, ಥಳಿಸುವುದರ ಮೂಲಕ ಆಳುವುದು ಇವರ ಆಡಳಿತ ವೈಖರಿ. ಇಲ್ಲಿಯ ತನಕ ಕರ್ನಾಟಕ ಬಿಹಾರವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಈಗಿನ ಸ್ಥಿತಿ ನೋಡಿದರೆ ಕರ್ನಾಟಕ 17ನೇ ಶತಮಾನದ ಫ್ರಾನ್ಸ್‌ನಂತಾಗುತ್ತಿದೆ ಎನಿಸುತ್ತದೆ. ಹದಿನಾಲ್ಕನೇ ಲೂಯಿಯ `ನಾನೇ ಸರ್ಕಾರ’ ಎಂಬ ಉದ್ಧಟತನದ ಪರಿಣಾಮ 1789ರಲ್ಲಿ ಫ್ರಾನ್ಸ್‌ ಹೊತ್ತಿ ಉರಿಯುವುದರಲ್ಲಿ ಕೊನೆಗೊಂಡಿತೆಂಬುದು ನಮಗೆ ನೆನಪಿರಬೇಕು.

‍ಲೇಖಕರು avadhi

26 February, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. Prof. shiva Billava

    The forth pillar of a democracy rightly pointed out this sad incidence.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading