ಗಣೇಶ್ ಶೆಣೈ ನೆನಪು- ಇಂಜೆಕ್ಷನ್ ಡಾಕ್ಟ್ರು…

ಗಣೇಶ್ ಶೆಣೈ

ಡಾಕ್ಟರ್ ಬಳಿ ಹೋಗದಿದ್ದವರು ಯಾರೂ ಇಲ್ಲ. ಅವಿನಾಭಾವ ಸಂಬಂಧ ಅಂತಾರಲ್ಲ ಹಾಗೆ! ಡಾಕ್ಟರ್ ಮತ್ತು ರೋಗಿ (ಪೇಶಂಟ್) ಗಳ ಮದ್ಯೆ ಇಂಜೆಕ್ಷನ್ ಬಹಳ ಮುಖ್ಯವಾದ, ಸ್ವಾರಸ್ಯಕರವಾದ ಪಾತ್ರ ವಹಿಸುತ್ತದೆ. ರೋಗಿ ಮತ್ತು ವೈದ್ಯರುಗಳಲ್ಲಿ ಎರಡೇ ವಿಧ. ಇಂಜೆಕ್ಷನ್ ಚುಚ್ಚಿಸಿಕೊಳ್ಳವ ಮರಣಾನಂದಿಗಳು, ಹಾಗೂ ‘ಸೂಜಿ’ ಕಂಡೊಡನೆ ಬಿಪಿ ರೈಸು ಮಾಡಿಕೊಂಡು ಹೆದರುವವರು. ಕೆಲವು ಡಾಕ್ಟರ್ ಗಳಿಗೂ ಸೂಜಿ ಕೊಡುವುದಕ್ಕೆ ಭಯ, ಚುಚ್ಚದೇ ಬರೀ ಗುಳಿಗೆ ಟಾನಿಕ್ ಗಳನ್ನು ಕೊಟ್ಟು ಹ್ಯಾಗೋ ಮ್ಯಾನೇಜು ಮಾಡುತ್ತಾರೆ… ಇವರನ್ನು ‘ಗುಳಿಗೆ ಡಾಕ್ಟರ್’ ಎಂದು ಕರೆಯುತ್ತಾರೆ.

ಇನ್ನು ಕೆಲವು ಡಾಕ್ಟರ್ ಗಳ ಕಾರ್ಯ ವೈಖರಿಯೇ ಬೇರೆ. ‘ಸರ್ವರೋಗಾನಿಕಿ ಸೂಜಿ’ ಬಂದವರಿಗೆಲ್ಲಾ ಚುಚ್ಚುವುದೇ! (ಇದಕ್ಕೆ ಫೀಸು ಜಾಸ್ತಿ ಅನ್ನಿ). ಇಂಜೆಕ್ಷನ್ ಡಾಕ್ಟರ್ ಎಂದೇ ಅವರ ಎರಿಯಾದಲ್ಲಿ world famous ಆಗಿರುತ್ತಾರೆ.. ರೋಗಿಗಳು ತಮ್ಮ ಎದೆಗಾರಿಕೆ ಗೆ ತಕ್ಕಂತೆ ಡಾಕ್ಟರ್ ಗಳನ್ನು ಚೂಸು ಮಾಡುತ್ತಾರೆ.. ಕೆಲವು ವಿಶೇಷ ರೋಗಿಗಳಿಗೆ ಗುಲ್ಕೋಸು ಬಾಟಲಿ ಚುಚ್ಚಿಸಿಕೊಳ್ಳುವ ಖಯಾಲಿ ಇದೆ. ಇವರ ಆಸೆ ಪೂರೈಸಲು ಡಾಕ್ಟರ್ಗಳು ಕ್ಲಿನಿಕ್ ನಲ್ಲೇ ಒಂದರೆರೆಡು ಎಕ್ಸ್ಟ್ರಾ ಬೆಂಚುಗಳನ್ನು ಹಾಕಿ, ನಿತ್ರಾಣವಾದ ರೋಗಿಗಳಿಗೆ ನರ್ಸಿಂಗ್ ಹೋಮ್ ಗೆ ಕಳಿಸದೇ ಅಲ್ಲೇ ಮಲಗಿಸಿ ಗುಲ್ಕೋಸು ಬಾಟಲಿ ಚುಚ್ಚಿ ಅರ್ಧಗಂಟೆಯ ನಂತರ ಫೀಸು ಪೀಕಿಸಿ ಕಳಿಸುತ್ತಾರೆ.. ಅಂತಹ ರೋಗಿಗಳು ಬಟ್ಟೆಹಾಕಿಕೊಂಡು ಮೈಕೊಡವಿ ಸಂಜೀವೀನಿ ಸೇವಿಸಿದ ಹಾಗೆ ಫುಲ್ ಚಾರ್ಜ್ ಆಗಿ ಬಸ್ ಹತ್ತಿಕೊಂಡು ಮನೆಗೆ ಹೋಗುತ್ತಾರೆ..

‘ಯಾಕೋ ನಮ್ಮಪ್ಪ ವೀಕಾಗವ್ರೇ, ಗುಲ್ಕೋಸು ನೀರಾಕಸದ್ರೇ ರೆಡಿ ಆಯ್ತಾರೆ’ ಅಂತ ಅನೇಕರು ಮಾತಾಡಿಕೊಳ್ಳುವುದನ್ನು ನೋಡಿದ್ದೇನೆ. ಇನ್ನು ಕೆಲವರಿ ದ್ದಾರೆ, ಅವರಿಗೆ ನೀರಿನಂತೆ ಕಾಣುವ ಗ್ಲುಕೋಸ್ ಕೊಟ್ಟರೆ ಸಮಾಧಾನ ವಿರುವುದಿಲ್ಲ. ಲೈಫು ಕಲರ್ಫುಲ್ ಆಗಿರಬೇಕು ಎಂದು ಇವರು ನಂಬಿರುವವರು. ಇವರ ಕಲರ್ ಡ್ರೀಮ್ ಅನ್ನು ಡಾಕ್ಟರ್ ಗಳು ಈಡೇರಿಸಲು ನೇತುಹಾಕಿರುವ ಬಾಟಲಿಗೆ ನ್ಯುರೋಬಿಯಾನ್ ಎಂಬ ಕೆಂಪು ಬಣ್ಣದ ಔಷಧಿಯನ್ನು ಚುಚ್ಚುತ್ತಾರೆ… ಆ ಕೆಂಪು ಬಣ್ಣದ ಔಷಧ ವಯ್ಯಾರದಿಂದ ಗ್ಲುಕೋಸ್ ನೊಂದಿಗೆ ಮಿಕ್ಸು ಆಗಿ ವಿಚಿತ್ರ ವಾದ ಬಣ್ಣ ಹೊಂದಿ ಬಳಕುತ್ತಾ ದೇಹ ಸೇರುವುದನ್ನು ನೋಡಿ ರೋಗಿ ಮಹದಾನಂದ ಹೊಂದುತ್ತಾನೆ…

‌ಕೆಲವು ರೋಗಿಗಳಿಗೆ ಡಾಕ್ಟರ್ ನೋವಾಗದಂತೆ ಸೂಜಿ ಚುಚ್ಚಿದರೆ ತುಂಬಾ ಇಷ್ಟ.. ಅವರನ್ನು ಆರಾಧಿಸುತ್ತಾರೆ. ಇನ್ನು ಕೆಲವು ರಫ್ ಅಂಡ್ ಟಫ್ ರೋಗಿಗಳಿಗೆ ಸೂಜಿ ಚುಚ್ಚಿದಾಗ ನೋವಾದರೇನೇ ತೃಪ್ತಿ! ‘ಆ ಡಾಕ್ಟರ್ ಸೂಜಿ ಚುಚ್ದಾಂದ್ರೇ ‘ಮೆಡಿಶನ್’ ಮೈನಲ್ಲೆಲ್ಲಾ ಹರಿದಾಡೋದು ಗೊತ್ತಾಯ್ತದೆ’ ಎಂದು ಎಲ್ಲರಿಗೂ ವೈದ್ಯರ ಮಹಿಮೆ ಸಾರುತ್ತಾರೆ.

‌ಈಗ ಈ ಇಂಜೆಕ್ಷನ್ ಡಾಕ್ಟರ್ ನ ಕತೆ ಕೇಳಿ…
‌ಬೆಂಗಳೂರಿನ ಸಮೀಪದಲ್ಲೇ ಇರುವ ಪ್ರಖ್ಯಾತಿ ಹೊಂದಿರುವ ಹಳ್ಳಿ (ತಾಲ್ಲೂಕು)ಯ ಡಾಕ್ಟರ್ ನ ಪ್ರಾಕ್ಟೀಸ್ ನ ಸ್ಟೈಲು ನಿಮಗೆ ಹೇಳಲೇಬೇಕು. ಅರವತೈದರ ಆಸುಪಸಿನಲ್ಲಿರುವ RMP ಡಾಕ್ಟರ್ ಆದ ಸನ್ಮಾನ್ಯರು, ಒಂದು ಉದ್ದದ ಬಿಳೀ ಚಡ್ಡಿಯನ್ನು ಮಾತ್ರ ಹಾಕಿಕೊಂಡು topless ಆಗಿ ಪ್ರಾಕ್ಟೀಸು ಮಾಡುತ್ತಿದ್ದರು. ಎತ್ರದ ನಿಲುವಿನ, ಅಗಲ ಮುಖದ ಉದ್ದ ಮೂಗಿನ ದಪ್ಪ ದನಿಯ ಈ ಮಹಾಶಯರು ಚಳಿ ಇದ್ದಾಗ ಕಸೆ ಅಂಗಿ ತೊಡುತ್ತಿದ್ದರು… ‘ಗಂಟಲ್ ಮ್ಯಾನ್’ ಎನ್ನುವಷ್ಟು ದೊಡ್ಡ ಗಂಟಲು ಇವರದು!! ಇವರ ‘ಹಸ್ತಗುಣ’ಕ್ಕೆ ಜನಪ್ರಿಯರಾಗಿದ್ದರು, ಸುತ್ತಮುತ್ತಲಿನ ಹಳ್ಳ ಯವರಿಗೆ ಇವರೇ ಡಾಕ್ಟರ್. ಇವರ ಶಾಪು ಬಹಳ ವಿಶಾಲವಾಗಿದ್ದು, ಐದಾರು ತಪಾಸಣ ಟೇಬಲ್ ಗಳಿದ್ದವು.

ಒಂದು ಸಣ್ಣಮದುವೆ ಮಾಡುವಷ್ಟು ಅಗಲವಾಗಿದ್ದ ಆ ಶಾಪಿನಲ್ಲಿ ಡಾಕ್ಟರ್ ಸಾಹೇಬರು ಪೌರಾಣಿಕ ನಾಟಕದ ಕಂಸ ನೋ ದುರ್ಯೋಧನ ನಂತೆ ನಡೆದಾಡುತ್ತಾ ಪೇಶಂಟ್ ಬಳಿಗೆ ಬಂದು ನಾಡಿ ಹಿಡಿದು ಪರೀಕ್ಷೆ ಮಾಡುತ್ತಿದ್ದರು… ಇವರು ಎಂಬಿಬಿಎಸ್ ಖಂಡಿತಾ ಓದಿರಲಿಲ್ಲ… ‘ನಮ್ ಕಾಲದಲ್ಲಿ ಅವೆಲ್ಲಾ ಇರಲಿಲ್ಲ ರೀ, ನಾವೆಲ್ಲ ಮಡ್ರಾಸ್ ಆರ್ಎಂಪಿ, ಎಂದು ಘಂಟಾಘೋಷವಾಗಿ ಹೇಳುತ್ತಿದ್ದರು, ಈಗಿನವರು ಐದ್ ವರ್ಷ ಓದಿ ಅದೇನ್ ದಬ್ಬಾಕ್ತಾರೆ, ಒಂದ್ ಸೂಜಿ ಚುಚ್ಚಕ್ಕೆ ಬರಲ್ಲ ಮುಂಡೇವಕ್ಕೆ’ ಎಂದು ಹೀಯಾಳಿಸುವರು… (ಆಗತಾನೆ ಎಮ್ ಬಿಬಿಎಸ್ ಡಾಕ್ಟರ್ ಅವರ ಊರಿನಲ್ಲಿ ಶಾಪ್ ತೆರೆದು ಇವರ ಪೇಶಂಟ್ ಗಳನ್ನು ಹೈಜಾಕ್ ಮಾಡಿದ್ದ ಕೋಪಕ್ಕೆ)… ಕಸಾಯಿಖಾನೆಗೆ ತಳ್ಳಿದ ಮುದಿ ಎಮ್ಮೆಯನ್ನು ತಂದು ಅದಕ್ಕೆಹೇಗೆ ಸೂಜಿ ಚುಚ್ಚ ಬೇಕೆಂದು ಸಹಾಯಕ ರಿಗೆ ಹೇಳಿ ಕೊಟ್ಟು, ‘ಟ್ರೇನು’ ಮಾಡಿದ್ದರು.

ಈ ಸಹಾಯಕರು ಕೈಯಲ್ಲಿ ಇಂಜೆಕ್ಷನ್ ನನ್ನು ಹಿಡಿದು ಎಕೆ 47 ಹೊತ್ತ ಬ್ಲಾಕ್ ಕ್ಯಾಟ್ಸ್ ರಂತೆ ಅತ್ತಿತ್ತ ಒಡಾಡುತ್ತಿದ್ದರು. ನಮ್ಮ ಡಾಕ್ಟರು, ರೋಗಿಗಳನ್ನು ಕರೆದು ನಾಡಿ ನೋಡಿ ವಿಚಾರಿಸಿ, ಬನ್ನಿ, ಹತ್ತಿ, ಮಲಗಿ ಎಂದು ಸೂಚನೆಕೊಟ್ಟು ತಪಾಸಣಾ ಟೇಬಲ್ ಮಲಗಿಸಿ ಆ್ಯಂಪಿಸಿಲಿನ್ 500 ಎಂದು ಕೂಗುತ್ತಿದ್ದರು. ಆ ಇಂಜೆಕ್ಷನ್ ಹಿಡಿದ ಸಹಾಯಕ ಒಡನೆಯೇ ಬಂದು ರೋಗಿಯ ಅಂಡಿಗೆ ಚುಚ್ಚಿ,ಮತ್ತೆ ತುಂಬಿಸಿಕೊಂಡು ರೆಡಿ ಯಾಗುತ್ತಿದ್ದ…

ಒಮ್ಮೊಮ್ಮೆ ರೋಗಿಗಳು ನೋವಿನಿಂದ ಚೀರಿದರೆ, ಸಹಾಯಕನಿಗೆ ‘ಬೋಳಿಮಗನೆ ಮೆತ್ತಿಗೆ’ ಎಂದು ಸಂಸ್ಕೃತದಲ್ಲಿ ಕರೆಕ್ಟು ಎರಿಳಿತದಲ್ಲಿ ಬಯ್ದು, ಹತ್ತಿಯನ್ನು ರೋಗಿಯನ್ನು ಅಂಡಿಗೆ ಸವರಿ ‘ಎನಾಗಲ್ಲ ವೋಗಪ್ಪ’ ಎಂದು ಸಾಂತ್ವನ ಹೇಳಿ ಕಳಿಸುವರು… ಅಕಸ್ಮಾತ್ ಯಾರಾದರೂ ರೋಗಿಗಳು ಒವರ್ ಆ್ಯಕ್ಟಿಂಗ್ ಮಾಡಿದರೆ, ಇವರ ಬಯ್ಗುಳದಿಂದಲೇ ಅವನ ಜ್ವರ ವನ್ನು ಇಳಿಸಿ ಬಿಡುತ್ತಿದ್ದರು.. ಅಂತಹ ಭಯಂಕರ ಸಂಸ್ಕೃತ ನಾಲೆಡ್ಜು ಈ ಡಾಕ್ಟರ್ ಗೆ ಯತೇಚ್ಛವಾಗಿತ್ತು. ಚುಚ್ಚಿಸಿಕೊಂಡ ರೋಗಿಗಳಿಗೆ, ಶಾಪಿನ ಮದ್ಯೆ ಇರಿಸಿದ ದೊಡ್ಡ ಬಿಸ್ಕೆಟ್ ಡಬ್ಬದಲ್ಲಿ ಕೈ ಹಾಕಿ ಹಿಡಿ ಮಾತ್ರೆಗಳನ್ನು ತೆಗೆದು 2 22 ದಿನಕ್ಕೆ ಮೂರ್ಸಾರಿ ಮೂರ್ದಿನ ತಗ… ಎಂದು ಎಲ್ಲರಿಗೂ ಅದೇ ಗುಳಿಗೆ ಗಳನ್ನು ಸ್ವಹಸ್ತ ದಿಂದ ನೀಡುತ್ತಿದ್ದರು.. ಅವರಿಗೆ ‘ಒಂದೇ ಮಾತ್ರಂ’ ಎಂದು ನಾವು ಗೇಲಿ ಮಾಡದ್ದುಂಟು..‌ ಫೀಸಿನಲ್ಲಿ ಹತ್ತು ಪೈಸೆ ಕಡಿಮೆ ಆದರೂ ಕೆಂಡಾಮಂಡಲ ವಾಗುತ್ತಿದ್ದರು… ದುಡ್ ಕೊಡಲಿಲ್ಲಾ ಅಂದ್ರೇ ಮದ್ದು ವರ್ಕ್ ಆಗಲ್ಲ ಎಂಬ ಧರ್ಮ ಸೂಕ್ಷ್ಮವನ್ನು ಹೇಳುತ್ತಿದ್ದರು…‌

ಒಂದು ದಿನ ಇವರ ಸಹಾಯಕರು ಶಾಪಿನ ಬಾಗಿಲು ಮುಚ್ಚಿ ರೋಗಿಯೊಬ್ಬನಿಗೆ ಥಳಿಸುತ್ತಿದ್ದರು… ಅವನು ಸೂಜಿ ಚುಚ್ಚಿ ಸಿ ಕೊಂಡು ಕಿಲಾಡಿತನದಿಂದ ಜಾರಿಕೊಂಡು ಹೋಗಲೆತ್ನಿಸಿ ಸಿಕ್ಕಿಹಾಕಿ ಕೊಂಡಿದ್ದ. ಪಾಪ ಈ ಕಿಲಾಡಿತನಕ್ಕೆ ಕಾರಣ, ಐದು ರುಪಾಯಿ ರುಪಾಯಿ ಕೂಡಾ ಇರದ ಅವನ ಬಡತನ… ಇಂತಹ ಬಡವರು ಇನ್ನೂ ಇದ್ದಾರೆ ಎಂಬುದೇ ಬೇಸರದ ಸಂಗತಿ… ಸೂಜಿ ಹಿಡಿದವರ ಹತ್ತಿರ ಸುಖದುಃಖ ಹೇಳಿಕೊಂಡ ಹಾಗೇ!!. ಈಗ ಆ ಡಾಕ್ಟರ್ ಇಲ್ಲ…ಊರು ಇಂಪ್ರೂವ್ ಆಗಿದೆ ಬಸ್ ನಿಲ್ದಾಣ, ಕೊರ್ಟು, ಕಛೇರಿ ಎಲ್ಲಾ ಬಂದಿದೆ ಡಾಕ್ಟರ್ ಗಳು ಜಾಸ್ತಿ ಯಾಗಿದ್ದಾರೆ…ನರ್ಸಿಂಗ್ ರೂಮ್ ಗಳು ಬಂದಿವೆ… ರೋಗಿಗಳು ಜಾಸ್ತಿ ಯಾಗಿದ್ದಾರೆ…

‌ಇಂತಹುದೇ ಇನ್ನೊಂದು ಕತೆ ಹೇಳುವೆ… ಇವರು ಕೋಲಾರದ ಹಳ್ಳಿಯ ಡಾಕ್ಟರ್, ಸಾಯಂಕಾಲ 4 ರದ 9 ರವರೆಗೆ ಮಾತ್ರ ಪ್ರಾಕ್ಟೀಸ್ ಮಾಡುತ್ತಿದ್ದರು.. ಏಕೆಂದರೆ ಇವರು ಕೋಲಾರದ ಡಾಕ್ಟರ್ ಒಬ್ಬರ ಬಳಿ ಕಾಂಪೌಂಡರ್ ಅಥವಾ ಟೋಕನ್ ಕೊಡುವವರೋ ಆಗಿದ್ದರು !!. ಪ್ರಾಕ್ಟೀಸ್ ಮಾಡಲು ಭಂಡ ದೈರ್ಯ ವಿತ್ತು… ಸಾಯಂಕಾಲ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಎಂಡಿ ಲುಕ್ ನಲ್ಲಿರುತ್ತಿದ್ದ… ಅವರ ಶಾಪಿನ ಮುಂದೆ ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂದು ಬೋರ್ಡ್ ಹಾಕಿತ್ತು..ಈತ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಿಟೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್… ಆಗಿದ್ದ… ಸುಮಾರು ಮೂವತ್ತು ಪೇಶಂಟ್ ಗಳನ್ನು ನೋಡುತ್ತಿದ್ಧ ಈತ ಕೂಡಾ ಸೂಜಿ ಡಾಕ್ಟರ್!!! ಟೇಬಲ್ ಮೇಲೆ ಮೂರು ರೀತಿಯ ಇಂಜೆಕ್ಷನ್ ಇಟ್ಟು ಕ್ರಮವಾಗಿ 3, 5, 8 ಎಂದು ಬೆಲೆ ನಮೂದಿಸಿದ್ದ… ರೋಗಿಗಳು ಅವರ ಶಕ್ತ್ಯಾನುಸಾರ ಸೂಜಿ ಚೂಸು ಮಾಡಬಹುದಿತ್ತು…

ನಾವು ಭೇಟಿ ನೀಡಿದಾಗ ಸುಮಾರು ಪೇಶಂಟ್ ಗಳು ಇದ್ದರು… ಆ ವೈದ್ಯ ಜ್ವರದಿಂದ ಬಳಲುತ್ತಿದ್ದ ಚಿಕ್ಕ ಹುಡುಗನ ಒಬ್ಬನನ್ನು (ಆರು ವರ್ಷ) ಪರೀಕ್ಷೆ ಮಾಡಿ, ಅವನ ಪೋಷಕರು 5 ರೂಗಳ ಸೂಜಿ ಚೂಸು ಮಾಡಿದ್ದರು.. ಸೂಜಿಯನ್ನು ನೋಡಿದೊಡನೆ ಆ ಹುಡುಗ ಅತ್ತು ಕೂಗಿ ರಂಪ ಮಾಡತೊಡಗಿದ… ವೈದ್ಯ ಆ ಹುಡುಗ ನನ್ನು ಬಯ್ದು, ಇಬ್ಬರನ್ನು ಬರಹೇಳಿ ಕೈಕಾಲು ಗಟ್ಟಿ ಹಿಡಿದು ಕುಂಡೆಯನ್ನು ಡಾಕ್ಟರ್ ಮುಂದೆ ಮಾಡಿದರು.. ಆ ಹುಡುಗ ಬೇಡ ಬೇಡ ಎಂದು ಕೂಗುತ್ತಲೇ ಇದ್ದ… ಯಾವಾಗ ಸೂಜಿ ಚುಚ್ಚಿ ತು ನೋಡಿ, ಆ ಹುಡುಗ.. ನೋವಿನಿಂದ… ‘ಬೋಳಿಮಗ ಚುಚ್ ಬಿಟ್ಟಾ ಯಪ್ಪಾ ಚುಚ್ ಬಿಟ್ಟಾ’ ಎಂದು ಜೋರಾಗಿ ಅರಚಿದ.. ನಮಗೆ ನಗು ತಡೆಯಲಾಗಲಿಲ್ಲ. ಆ ಡಾಕ್ಟರ್ ಸ್ವಲ್ಪವೂ ವಿಚಲಿತನಾಗದೇ ವಿಲೇಜ್ ಪೀಪಲ್ಸ್, ಸ್ಟುಪಿಡ್ ಪೀಪಲ್ಸ್ ಎಂದು ನಗುತ್ತಾ ನಮಗೆ ಕಾಫಿ ತರಲು ಯಾರನ್ನೋ ಅಟ್ಟಿದ…

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: