’ಗಣರಾಜ್ಯದ ಕೆಲವು ನೆನಪುಗಳು’ – ನಾ ದಿವಾಕರ ಬರೆಯುತ್ತಾರೆ

ನಾ ದಿವಾಕರ

ಭಾರತವನ್ನು ಗಣರಾಜ್ಯವನ್ನಾಗಿ ರೂಪಿಸಲು 271 ತಜ್ಞರು, ವಿದ್ವಾಂಸರು, ರಾಜಕೀಯ ಮುತ್ಸದ್ಧಿಗಳು ಸಂವಿಧಾನ ರಚನಾ ಮಂಡಲಿಯ ರೂಪದಲ್ಲಿ ದೆಹಲಿಯ ಶಾಸಕಾಂಗ ಸಭೆಯಲ್ಲಿ ಸೇರಿದ್ದರು. ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆ ಹೊಂದಿದ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸಲು ಈ ತಂಡ ಮೂರು ವರ್ಷಗಳ ಕಾಲ ಶ್ರಮ ವಹಿಸಿತ್ತು. ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾದ 271 ತಜ್ಞರ ಈ ಸಮಿತಿಯ ಪ್ರಥಮ ಕರಡು ಸಿದ್ಧವಾಗಿದ್ದು ನವಂಬರ್ 1948ರಲ್ಲಿ. ನಂತರ ಒಂದು ವರ್ಷದ ಕಾಲದ ಹಲವಾರು ಚರ್ಚೆಗಳು, ಸಂವಾದಗಳು ನಡೆದು, ಎರಡು ಸಾವಿರಕ್ಕೂ ಹೆಚ್ಚು ತಿದ್ದುಪಡಿಗಳ ನಂತರ ಅಂತಿಮವಾಗಿ 90 ಸಾವಿರ ಪದಗಳ ಭಾರತದ ಸಂವಿಧಾನ ನವಂಬರ್ 26 1949 ರಂದು ಅಂತಿಮ ರೂಪ ಪಡೆದಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಘನ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಲಾದ ಸ್ವತಂತ್ರ ಭಾರತದ ಸಂವಿಧಾನದ ಆಶಯಗಳು ಕೇವಲ ಸಾಂಕೇತಿಕವಾಗಿರದೆ, ಸತ್ಯಾನ್ವೇಷಣೆಯ ಪ್ರತೀಕವಾಗಿತ್ತು. ಲಿಖಿತ ರೂಪದಲ್ಲಿ ಪ್ರಸ್ತುತ ಪಡಿಸಲಾದ ಈ ಗ್ರಂಥದಲ್ಲಿ ದೇಶದ ಐತಿಹಾಸಿಕ ಘಟನೆಗಳ ಭಾವಚಿತ್ರಗಳೂ ಇದ್ದವು. ಶಾಸನ ಸಭೆಯನ್ನು ಕ್ಯಾಬಿನೆಟ್ ಮಿಷನ್ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿತ್ತು. ಬ್ರಿಟಿಷ್ ಪ್ರಧಾನಿ ಕ್ಲಿಮೆಂಟ್ ಅಟ್ಲಿ, ಇನ್ನು ಬ್ರಿಟಿಷರು ಭಾರತವನ್ನು ಆಳುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಮಿಷನ್  ಭಾರತೀಯ ಪ್ರಾಂತ್ಯಗಳಲ್ಲಿ ಪ್ರಜಾತಾಂತ್ರಿಕ ಚುನಾವಣೆಗಳನ್ನು ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಿತ್ತು.

ಸಂವಿಧಾನ ರಚನೆಗಾಗಿ ರೂಪಿಸಲಾದ ಶಾಸನ ಸಭೆಯಲ್ಲಿ ಕಾಂಗ್ರೆಸ್ನ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೂ ವಿಭಿನ್ನ ಚಿಂತನೆಗಳನ್ನು, ಧೋರಣೆಗಳನ್ನು, ಸಿದ್ಧಾಂತಗಳನ್ನು ಅನುಸರಿಸುವ ಸದಸ್ಯರೂ ಭಾಗಿಗಳಾಗಿದ್ದರು. ವೈವಿಧ್ಯತೆಯನ್ನು ಸಾಧಿಸಲು ಕಾಂಗ್ರೆಸ್ಸೇತರ ನಾಯಕರಾದ ಬಿ.ಆರ್.ಅಂಬೇಡ್ಕರ್, ಕೆ.ಕೆ. ಮುನ್ಷಿ, ಶ್ಯಾಮ ಪ್ರಸಾದ್ಮುಖರ್ಜಿ ಮುಂತಾದವರನ್ನೂ ಸೇರಿಸಿಕೊಳ್ಳಲಾಗಿತ್ತು. ಇವರೊಂದಿಗೆ ಕಾಂಗ್ರೆಸ್ಸಿನ ನೆಹರೂ, ಪಟೇಲ್, ಆಜಾದ್ ಮುಂತಾದ ನೇತಾರರೂ ಇದ್ದರು. ಎರಡನೇ ಮಹಾಯುದ್ಧದ ನಂತರದಲ್ಲಿ ಸ್ವಾತಂತ್ರ್ಯ ಗಳಿಸಿದ ರಾಷ್ಟ್ರಗಳು, ಶ್ರೀಲಂಕಾ-ಜಪಾನ್ ಸೇರಿದಂತೆ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ವಿದೇಶಿ ತಜ್ಞರ ನೆರವು ಪಡೆದಿದ್ದರೂ, ಭಾರತದ ಸಂವಿಧಾನ ರಚನಾ ಮಂಡಲಿಯಲ್ಲಿ ಇದ್ದವರೆಲ್ಲರೂ ಭಾರತೀಯರೇ ಎಂಬುದು ಹೆಮ್ಮೆಯ ಸಂಗತಿ. ಸಂವಿಧಾನ ರಚನೆಯಲ್ಲಿ ಕಾನೂನು ತಜ್ಞರೂ ನ್ಯಾಯವಾದಿಗಳೂ ಆಗಿದ್ದ ಅಂಬೇಡ್ಕರ್, ನೆಹರೂ, ರಾಜೇಂದ್ರಪ್ರಸಾದ್, ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್, ಗೋಪಾಲಸ್ವಾಮಿ ಐಯ್ಯಂಗಾರ್ ಮುಂತಾದವರ ಸಲಹೆ ಅಮೂಲ್ಯವಾಗಿತ್ತು.  ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು, ಕೇಂದ್ರ ರಾಜ್ಯ ಸಂಬಂಧಗಳು ಹೀಗೆ ವಿಭಿನ್ನ ವಿಷಯಗಳ ಬಗ್ಗೆ ಸೂಕ್ಷ್ಮವಾದ ಅಧ್ಯಯನ ನಡೆಸಿ ಅಭಿಪ್ರಾಯ ಸಲ್ಲಿಸಲು ಉಪಸಮಿತಿಗಳನ್ನು ನೇಮಿಸಲಾಗಿತ್ತು.

ಈ ಸಮಿತಿಗಳ ವರದಿಯನ್ನಾಧರಿಸಿ ಐ.ಸಿ.ಎಸ್ ಅಧಿಕಾರಿಯಾಗಿದ್ದ ಬಿ.ಎನ್. ರಾವ್ ಪ್ರಥಮ ಕರಡು ಪ್ರತಿಯನ್ನು 1948ರ ಫೆಬ್ರವರಿಯಲ್ಲಿ ಸಿದ್ಧಪಡಿಸಿದ್ದರು. ಇದನ್ನು ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ ಪರಾಮರ್ಶಿಸಿ 1948ರ ನವಂಬರ್ ನಲ್ಲಿ ಜಾರಿ ಮಾಡಿತ್ತು. ತದನಂತರ ಒಂದು ವರ್ಷದ ಕಾಲ ಶಾಸನಸಭೆಯಲ್ಲಿ ಕರಡು ಪ್ರತಿಯನ್ನು ಕುರಿತ ಚರ್ಚೆಗಳು ನಡೆದಿದ್ದವು. ಪ್ರತಿಯೊಂದು ಕೌಲುಗಳನ್ನೂ, ಕೆಲವೊಮ್ಮೆ ಪ್ರತಿಯೊಂದು ವಾಕ್ಯಗಳನ್ನು ತಿದ್ದುಪಡಿಗೊಳಪಡಿಸಲಾಗಿತ್ತು. 2000ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಲಾಗಿ ಬಹುಪಾಲು ಸ್ವೀಕೃತವಾಗಿತ್ತು. ವಿವಿಧ ಸಂಘ ಸಂಸ್ಥೆಗಳು, ಸೊಸೈಟಿಗಳು, ವಾಣಿಜ್ಯ ಚೇಂಬರುಗಳು, ಸಾಮಾನ್ಯ ಜನತೆಯೂ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದು ಅವುಗಳನ್ನೂ ಗಂಭೀರವಾಗಿ ಪರಿಶೀಲಿಸಲಾಗಿತ್ತು. ಈ ಪ್ರಕ್ರಿಯೆಯ ನಂತರ ಕರಡು ಸಮಿತಿ ಪರಾಮರ್ಶಿತ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ಈ ಕರಡು ಪ್ರತಿಯನ್ನು ಶಾಸನ ಸಭೆಯು ಕೆಲವು ಬದಲಾವಣೆಗಳೊಂದಿಗೆ 1949ರ  ನವಂಬರ್ 26ರಂದು ಆಂಗೀಕರಿಸಿತ್ತು. ಜನವರಿ 24 1950ರಂದು ಶಾಸನಸಭೆ ತನ್ನ ಅಂತಿಮ ಸಭೆಯನ್ನು ಏರ್ಪಡಿಸಿದ ಸಂದರ್ಭದಲ್ಲಿ ಕಾರ್ಯದರ್ಶಿಗಳಾಗಿದ್ದ ಎಚ್.ವಿ.ಆರ್.ಐಯ್ಯಂಗಾರ್ ಅವರು ಭಾರತದ ರಾಷ್ಟ್ರಪತಿಯಾಗಿ ಡಾ. ರಾಜೇಂದ್ರ ಪ್ರಸಾದ್ ಆಯ್ಕೆಯಾಗಿರುವುದನ್ನು ಘೋಷಿಸಿದರು. ಸದಸ್ಯರ ಕರತಾಡನದ ನಡುವೆಯೇ ಜನಗಣಮನ ಗೀತೆಯನ್ನು ರಾಷ್ಟ್ರಗೀತೆ ಎಂದು ಘೋಷಿಸಲಾಯಿತು. ನಂತರ ಸದಸ್ಯರೆಲ್ಲರೂ ಕೈಬರಹದಲ್ಲಿದ್ದ ಸಂವಿಧಾನದ ಪ್ರತಿಯಲ್ಲಿ ತಮ್ಮ ಹಸ್ತಾಕ್ಷರ ಮಾಡಿದರು. ಹಸ್ತಾಕ್ಷರ ಮಾಡಿದರವರಲ್ಲಿ ನೆಹರೂ ಮೊದಲಿಗರಾಗಿದ್ದುದೊಂದು ವೈಶಿಷ್ಟ್ಯ. ಕಡೆಯ ಸದಸ್ಯರ ಸಹಿಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ರಾಜೇಂದ್ರ ಪ್ರಸಾದ್ ಸಹಿ ಮಾಡಿದ್ದರು.

ಆದರೆ ಕೊನೆಯದಾಗಿ ಸಹಿ ಮಾಡುವ ಬದಲು ಪ್ರಸಾದ್ ಕೊನೆಯ ಸಾಲಿಗೂ ನೆಹರೂ ಹಸ್ತಾಕ್ಷರಕ್ಕೂ ನಡುವೆ ಇದ್ದ ಜಾಗದಲ್ಲಿ ಸಹಿ ಮಾಡಿದ್ದೂ ಒಂದು ವೈಶಿಷ್ಟ್ಯವೆ !ಎರಡು ದಿನಗಳ ನಂತರ, ಜನವರಿ 26 1950ರಂದು ಭಾರತದ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಂಡಿತ್ತು. ರಾಷ್ಟ್ರಪತಿ ಭವನದ ದರ್ಬಾರ್ ಹಾಲಿನಲ್ಲಿ ನಡೆದ ಸಭೆಯಲ್ಲಿ ಗವರ್ನರ್ ರಾಜಗೋಪಾಲಾಚಾರಿ ಅವರು ಭಾರತವನ್ನು  ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯ  ಎಂದು ಘೋಷಿಸಿದರು. ಮುಖ್ಯ ನ್ಯಾಯಮೂರ್ತಿ ಕನಿಯಾ ಅವರು ರಾಜೇಂದ್ರ ಪ್ರಸಾದ್ಗೆ ಪ್ರಮಾಣ ವಚನ ಬೋಧಿಸುವ ಮೂಲಕ  ಡಾ. ರಾಜೇಂದ್ರ ಪ್ರಸಾದ್ ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಅಧಿಕಾರ ಗ್ರಹಣ ಮಾಡಿದರು. ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆ ಮಾಡಿದ 20 ವರ್ಷಗಳ ನಂತರ ಭಾರತ ತನ್ನ ಸಾರ್ವಭೌಮತೆಯನ್ನು ಸಾರುವ ಮೂಲಕ ಬ್ರಿಟಿಷ್ ಸಾಮ್ರಾಜ್ಯದೊಡಗಿನ ಸಂಬಂಧವನ್ನು ಕಡಿದುಹಾಕಿತ್ತು. 1950ರಲ್ಲಿ ಭಾರತ ಒಂದು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಸಂದರ್ಭ ಹಲವು ವಿಧಗಳಲ್ಲಿ 1947ರಲ್ಲಿ ಸ್ವಾತಂತ್ರ್ಯಗಳಿಸಿದ ಸಂದರ್ಭಕ್ಕಿಂತಲೂ ಚಾರಿತ್ರಿಕ ಎನಿಸಿತ್ತು.

ಪ್ರಪ್ರಥಮ ಬಾರಿಗೆ ಭಾರತೀಯರಿಗೆ  ತಮ್ಮನ್ನು ಆಳುವುದು ಮಹಾರಾಜರ ನಿರಂಕುಶ ಪ್ರಭುತ್ವವಲ್ಲ ತಮ್ಮದೇ ಆದ ಸರ್ವೋತ್ತಮ ಕಾನೂನು ಎಂಬ ಭಾವನೆ ಮೂಡಿತ್ತು. ಭಾರತೀಯ ಜನತೆ ಆಯ್ಕೆ ಮಾಡಿಕೊಂಡ ಪ್ರಭುತ್ವವನ್ನು ನಿಯಂತ್ರಿಸಲು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳು ಸಿದ್ಧವಾಗಿದ್ದವು. ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಗೆ ಸಂವಿಧಾನ ಉತ್ತಮ ಬುನಾದಿಯಾಗಿತ್ತು. ಸರ್ಕಾರಗಳನ್ನು ಆಯ್ಕೆ ಮಾಡುವ, ಪದಚ್ಯುತಗೊಳಿಸುವ ಅಧಿಕಾರವನ್ನು ಸಾರ್ವತ್ರಿಕ ಚುನಾವಣೆಗಳ ಮೂಲಕ ಸಾಮಾನ್ಯ ಜನತೆಗೆ ನೀಡಲಾಗಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಅಸ್ಪೃಶ್ಯತೆಯನ್ನು ಕೊನೆಗೊಳಿಸುವ ಮೂಲಕ ಸಂವಿಧಾನವು ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಕಳಚಿಹಾಕುವತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ಪಾಲಿಸುವ ಮೂಲಕ ಪ್ರಜಾತಂತ್ರವನ್ನು ಬಲಪಡಿಸುವತ್ತ ದಿಟ್ಟ ಹೆಜ್ಜೆ ಹಾಕಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದ ಜನತೆಗೆ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಪರಿಪಾಲಿಸಿತ್ತು. ಇಂತಹ ಮಹೋನ್ನತ ಘಳಿಗೆಯನ್ನು ನೆನೆಯುವ ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತೀಯ ಸಮಾಜ ಸಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಪರಾಮರ್ಶಿಸುವುದೇ ಇಂದಿನ ತುರ್ತು ಅಗತ್ಯತೆ.

‍ಲೇಖಕರು avadhi

January 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: