ಬ್ಯಾಟರಿ ಬೆಳಕು ಬೆನ್ನು ಬಿಡುತ್ತಿಲ್ಲ
ಪ್ರವೀಣ
ಹೇಗೆ ಹಾಡಲಿ ಗೆಳತಿ, ಹೃದಯದಲಿ ನೆಟ್ಟ ಮುಳ್ಳನ್ನ
ಕರುಳ ಕಟ್ಟಿ ತೂಗಿದ ಉಯ್ಯಾಲೆಯನ್ನ
ಮುಸ್ಸಂಜೆ ಪಿಸುಮಾತನಾಡಲು ಕರೆದಾಗ
ಸೂರ್ಯ ಇಳಿಯುವ ಮುನ್ನ ಒಮ್ಮೆ ಕಾಣೋ ಎಂದಾಗ
ಬಣ್ಣಗಳು ಬಿಳಿಹಾಳೆಯ ಮೇಲೆ ನರ್ತಿಸಲು ಗೆಜ್ಜೆ ಕಟ್ಟಿದಾಗ
ಎಡೆಬಿಡದ ಬಿರುಬಿಸಿಲಿನ ಬೆವರು ನೆಕ್ಕುತ್ತ ಬದುಕುತ್ತಿದ್ದೆ.
ಬಿರಿದ ಗುಲಾಬಿ ಸೌಂದರ್ಯ ನೆನಪಿಸಲು ಕಣ್ಣ ಮುಂದೆ ಸುಳಿದಾಗ
ನೊರಜ ಕಂಡಂತೆ ಹೊಡೆದುಹಾಕಿದ್ದೆ,
ಭಗೀರಥನ ಗಿಂಡಿ ಕೈಯಲ್ಲೇ ಇರುವಾಗ
ಹಸಿವಿನ ತಹತಹಕೆ ಗಟಗಟನೇ ಕುಡಿದಿದ್ದೆ.

ಗಡಿಯಾರದ ಕಾಲಿಗೆ ಪೋಲಿಯೋ ಹೊಡೆದ ಸವಿಗನಸು,
ಕ್ಯಾಲೆಂಡರಿನ ಹಿಂಬದಿಯ ಜೋಕುಗಳು ಬಲು ಮೋಜು,
ಕುಡಿಕುಡಿದು ಕಾರಿಕೊಂಡ ಒದ್ದೆ ಕಂಗಳಲಿ ಒಮ್ಮೆಲೆ
ಬದಲಾಗುತ್ತಿದ್ದ ಒಂದಂಕಿ ಎರಡಾಗಿದೆ ನಾಲ್ಕರಲಿ.
ಶರಶಯ್ಯೆಯಲೂ ಅಂಬೆಯ ಕ್ಷಮೆ ಸಿಗದೇ?
ಬಾಲಿಯ ರಕ್ತ ಉಂಗುಷ್ಟದಿಂದಳಿಯದೇ?
ಎಷ್ಟು ಹೊಳೆಗಳ ನುಂಗಿದರೂ ಸಮುದ್ರದ ಹಸಿವು ಇಂಗದೇ?
ನಾನು ಪ್ರೀತಿಸಿದ ಹುಡುಗಿ ತಿರುಗಿ ಷೋಡಶಿ
ನನ್ನ ಹಾಗೆ ಅವಳಿಗೆ ಬೇಡವಾದ ಕಡೆಗೆಲ್ಲ
ಕೂದಲು ಬೆಳೆದಿಲ್ಲ.
ಮುಸ್ಸಂಜೆ ಹೊಸ ನಲ್ಲನರಸಿ ಉತ್ತರಮುಖಿ
ಸೂರ್ಯನಿಗೆ ಇನ್ಯಾವುದೋ ಊರಲ್ಲಿ ಸಂಕ್ರಾಂತಿ
ಬಣ್ಣಗಳ ಬಾಟಲಿಯಲಿ ಆಕಾಶ ನೆನೆಯುತ್ತಿದೆ.
ನಾನು ಕತ್ತಲೊಡನೆ ರಾಜಿ ಮಾಡಿಕೊಂಡಿದ್ದೇನೆ
ಮಿಂಚುಹುಳುಗಳ ಬೆಳಕಲ್ಲಿ ನಕ್ಷತ್ರ ಬಿಡಿಸುತ್ತಿದ್ದೇನೆ
ಹೃದಯಕ್ಕೆ ಬೆಂಕಿ ಹಚ್ಚಿ ಬೆಚ್ಚಗಾಗುತ್ತಿದ್ದೇನೆ.
ಯಾರೋ ಬ್ಯಾಟರಿ ಬಿಟ್ಟಂತಿದೆ,
ಹಲ್ಲಿ ಗಾಬರಿ ಬಿದ್ದು ಓಡಿ ಹೋಗುತ್ತಿದೆ,
ಬ್ಯಾಟರಿ ಬೆಳಕು ಬೆನ್ನು ಬಿಡುತ್ತಿಲ್ಲ.






ರೂಪಕಗಳನ್ನು ಚೆನ್ನಾಗಿ ಬಳಸಿದ್ದೀರಿ…!