ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಧವತಿಯ ಪಾಪಕಾರ್ಯದಲ್ಲಿ ನಾನೂ ಭಾಗಿ..

ಗಂಧವತಿ

ಸಂದೀಪ್ ಈಶಾನ್ಯ

ಸುಮ್ಮನೇ ಪದ್ಮಾಸನದಲ್ಲಿ ಕೂತು ಧ್ಯಾನಸ್ಥನಂತೆ ನಟಿಸುವಾಗಲೂ
ಕಳೆದ ಇರುಳುಗಳಲ್ಲಿ ದೇಹದಿಂದ ನೀನು ಗುಟ್ಟಾಗಿ ಹೊಮ್ಮಿಸಿದ ಗಂಧದ ಘಮಲು
ನೀಲಿದೇಹಿಯ ಉಬ್ಬುಕೊರಳಿನ ಉರಗದಂತೆ
ಮರಳಿ ನನ್ನನ್ನು ಬಿಗಿದುಕೊಳ್ಳುತ್ತದೆ

ಸಹಸ್ರ ವರ್ಷಗಳಿಗೊಮ್ಮೆ ಮಿನುಗಿ
ಒಂದಿಡಿಯಷ್ಟು ಬೆಳಕನ್ನು ಮಾತ್ರ ಬಯಲಿಗೆಸೆವ
ಅಸ್ಪೃಶ್ಯ ನಕ್ಷತ್ರದ
ಬೆಳಕಿಗೆ ಹೆದರಿ ಅಗಳಿ ಜಡಿದುಕೊಂಡವರ
ಮನೆಯ ಮೂಲೆಯಲ್ಲಿ ಅತ್ತಿತ್ತ ಓಲಾಡುತ್ತಿರುವ
ಒಂಟಿ ದೀಪದ ಒಡಲಿಗೆ ಎಣ್ಣೆ ಸುರಿದವಳು
ಈಗ
ನೆರಳೂ ಸೋಕಿಸದಂತೆ
ಊರ ಹೊರಗೆ ಒಬ್ಬಳೇ ಗೇಣು ಕೆತ್ತುತ್ತ ಒಡಲ ತುಂಬಿಕೊಳ್ಳಲು ಅವಸರಿಸುತಾಳೆ

ಅಕಾಲಿಕ ವಸಂತದಂತೆ ಮುನಿಸು ಸರಿಸಿದ
ಅವನ ಎರಡೂ ಕಣ್ಣುಗಳಲ್ಲಿನ
ಸಿಟ್ಟು ಸಣ್ಣ ಒಲವಿನ ಎದುರು
ಕೈ ಮಿಲಾಯಿಸಲಾರದೆ ನೆಲಕ್ಕಪ್ಪಳಿಸಿ ದೊಪ್ಪೆಂದು‌ ಬಿದ್ದು ಮೈ ಗಂಟಿದ ಧೂಳು ಕೊಡವಿಕೊಳ್ಳುತ್ತಲೆ ಚದುರುತ್ತದೆ

ಚಿತ್ರ: ರುಕ್ಮಿಣಿ ವಿಜಯಕುಮಾರ್

ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಮೌನ

ಊರ ತೋಟದ ಹೂವು ಕಂಪು ಕಳೆದುಕೊಂಡು
ತನ್ನಸ್ತಿತ್ವದ ಗಾಯದ ಒಸರಿಗೆ
ನೋಯುತ್ತಿರುವ ಹೊತ್ತಿಗೇ
ತುಂಬಿಕೊಂಡ ಘಮಲನ್ನ
ಕದ್ದು ಕಣ್ಣರಳಿಸಿ
ಒಂದಿಷ್ಟೇ ಹಂಚಿಕೊಳ್ಳುತ್ತಾಳೆ

ಮಗ್ಗುಲಿಗೆ ಹೊರಳಿ
ಕೊರಳು ಪಸೆ ಒಣಗುವ ಮೊದಲೇ
ಅಷ್ಟೊಂದು ರೂಪದ ಗಂಧವತಿಯ
ಪಾಪಕಾರ್ಯದಲ್ಲಿ ಅರಿವಿಲ್ಲದೆ ಅನುಮತಿ ಇಲ್ಲದೇ ನಾನೂ ಸಮಾನವಾಗಿ ಭಾಗಿಯಾಗಿಹೋಗುತ್ತೇನೆ

‍ಲೇಖಕರು avadhi

25 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading