ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಂಡಸಾಗಿ ಕವಿತೆ ಬರೆಯುವುದು ಸುಲಭ!

ಒಂದಿಷ್ಟು ಬದುಕಿನ ಕತೆಗಳ ಜೊತೆಗೆ

ಟಿ.ಪಿ. ಉಮೇಶ್

ಹಾಸಿಗೆಯಿಂದ ಎದ್ದೊಡನೆ ಮನೆದೇವರ ನೆನೆದು;

ಹೆಂಡತಿಯ ಪಾದಗಳ ಮುಟ್ಟಿ ನಮಸ್ಕರಿಸೋ ಭಯ-ಭಕ್ತಿಯ ಅಗತ್ಯವಿಲ್ಲ!

ಆ ತಕ್ಷಣವೇ ನೆರಿಗೆ ಬಿದ್ದ ಹೊದಿಕೆ ಸಮಗೊಳಿಸಿ;

ಜಾರಿದ ಪಂಚೆ ಹಿಡಿದು ಅಡಿಗೆ ಮನೆಗೆ ಹೋಗುವ ಧಾವಂತವಿಲ್ಲ!

ಮನೆಯ ಎಲ್ಲ ಮೂಲೆ ಮುಂಕಟ್ಟು ಧೂಳ ಕೊಡವಿ;

ಕಸ ಗುಡಿಸಿ ಸಾರಿಸಿ ಒಪ್ಪ ಓರಣಗೊಳಿಸುವ ಅವಸರವಿಲ್ಲ!

ಮನೆಯ ವರಾಂಡಕ್ಕೆಲ್ಲ ನೀರು ಚಿಮುಕಿಸಿ;

ಮಟ್ಟಸವಾಗಿ ರಂಗೋಲಿ ಬಿಡುವ ಚಾಕರಿಯಿಲ್ಲ!

ಮನೆಯಾಕೆ ವಾಕಿಂಗ್ ಹೋಗಿಬರುವ ವೇಳೆಗೆ ಸ್ನಾನದ ಶಾಸ್ತ್ರ ಮಾಡಿ;

ಶುದ್ಧ ಮಡಿಯಲ್ಲಿ ಹಬೆಯಾಡೋ ಕಾಫಿ ಕೊಡುವ ಗೋಜಿಲ್ಲ!

ಸುಲಭ…

ಗಂಡಸಾಗಿ ಕವಿತೆ ಬರೆಯುವುದು!!

ಮಕ್ಕಳು, ಅತ್ತೆ ಮಾವರ ಕೂಗು, ತಂಟೆ ತಟವಟ ಕರೆಕರೆಗಳಿಲ್ಲ;

ಹೂವು, ಹಾಲು, ಪೇಪರ್, ಸೊಪ್ಪು, ತರಕಾರಿಯವರ ಕಿರಿಕಿರಿಗಳಿಲ್ಲ;

ಹಿತ್ತಲಿನ ಹಸುಕರುಗಳ ಗಂಜಳ ಬಳಿದಾಕಿ ಮೇವು ಹೊತ್ತಾಕುವ ಕಸುಬಂತೂ ಇಲ್ಲ;

ಹೂ, ಗಿಡ-ಮರಗಳಿಗೆ ನೀರಾಕಿ ನೇರ್ಪುಗೊಳಿಸಿ ಬೆಳೆಸುವ ಅನಿವಾರ್ಯತೆಗಳಿಲ್ಲ;

ನಾದಿನಿ ಮೈದುನರ ಸಲಹಿ ಸಾಕುವ ಹೊಣೆಗಾರಿಕೆಗಳಿಲ್ಲ;

ಬಂಧು ಬಳಗದವರ ಹುಟ್ಟು ನಾಮಕರಣ ಆರತಿ ಮದುವೆ ಬಾಣಂತನ ಗೃಹಪ್ರವೇಶ ಜಾತ್ರೆ ತಾಪತ್ರೆ ಸುಖ-ದುಃಖಗಳ ಭಾಗಿದಾರರಾಗಬೇಕಿಲ್ಲ;

ದೂರು ದುಮ್ಮಾನ ಸಾವು ಸಮಾಧಿಗಳಿಗೆ ದಿನ ವಾರವಿಡೀ ತಲೆಹಿಡಿದು ಕೂರಬೇಕಿಲ್ಲ;

ಎಲ್ಲಕ್ಕಿಂತ ಹೆಚ್ಚಾಗಿ…

ತಿಂಗಳಿಗೆ ಆ ಮೂರುದಿನಗಳ ನೋವು ಮುಲುಕಾಟಗಳ ಗುದ್ದಾಟ ಹೊಯ್ದಾಟಗಳಿಲ್ಲ;

ಸುಲಭ…

ಗಂಡಸಾಗಿ ಕವಿತೆ ಬರೆಯುವುದು!!

ನಾ ಗಂಡಸು;

ಸದ್ಯ ಕವಿತೆ ಬರೆಯುತ್ತಿದ್ದೇನೆ!

ಒಂದಿಷ್ಟು ಬದುಕಿನ ಕತೆಗಳ ಜೊತೆಗೆ;

ಬರೆವ ಹೆಮ್ಮೆಯನ್ನೆಲ್ಲ ಮನೆಯಾಕೆಗೆ ಹೊರಿಸುತ್ತಿದ್ದೇನೆ!

ಅವರು ಬರೆವ ಪ್ರತಿಭೆ, ಸಾಮರ್ಥ್ಯ, ಕೌಶಲಗಳಿದ್ದರೂ…

ನಾ ಬರೆಯುತ್ತಿದ್ದೇನೆ;

ಅಲ್ಲಲ್ಲ….

ಅವರೇ ಬರೆಸುತ್ತಿದ್ದಾರೆ!

ನಾ ಗಂಡಸಾಗಿರುವುದಕ್ಕೆ!!

ಅವರು…

ಹೆಂಗರುಳಿನ ಹೆಂಗಸಾಗಿರುವುದಕ್ಕೆ!!!

ಗಂಡಸರ ಕವಿತೆಗಳೆಲ್ಲವು;

ಹೆಂಗಸರ ಅನವರತ ಶ್ರಮದ ಬೆವರ ಘಮಗಳು!

ಗಂಡಸರ ಕವಿತೆಗಳೆಲ್ಲವು;

ಹೆಂಗಸರ ಕನಸು ಕನವರಿಕೆ ಬಯಕೆ ನಿಟ್ಟುಸಿರುಗಳ ಪ್ರತಿಫಲನಗಳು!

ಗಂಡಸರ ಕವಿತೆಗಳೆಲ್ಲವು;

ಹೆಂಗಸರ ಸಮಯ ಸಾಮರ್ಥ್ಯ ಆರೋಗ್ಯ ಆಯಸ್ಸಿನ ಗುರುತುಗಳು!

ಗಂಡಸರ ಕವಿತೆಗಳೆಲ್ಲವು;

ಹೆಂಗಸರ ಸಹನೆ ಸಮಾಧಾನ ಸ್ವಾಭಿಮಾನ ಘನ ಕೀರ್ತಿಯ ಶ್ರೇಷ್ಠತೆಗಳು!!!

ಗಂಡಸಾಗಿ….

ಕವಿತೆ ಬರೆಯುವುದು ಭಾರಿ ಸುಲಭ!!

‍ಲೇಖಕರು avadhi

2 November, 2019

15 Comments

  1. Sudha Hegde

    ನಮ್ಮೆದೆಯ ಮಾತನ್ನು ನೀವೇ ಹೇಳಿದಿರಿ

    • umesh T P

      ಶುಭ ಧನ್ಯವಾದಗಳು ತಮ್ಮ ಸಹೃದಯ ಅಭಿಪ್ರಾಯಗಳಿಗೆ

  2. Bhuvana Hiremath

    ಇಷ್ಟವಾಯ್ತು ಕವಿತೆ

    • umesh T P

      ಮೆಚ್ಚುಗೆಯ ಸಸಹೃದಯ ಅಭಿಪ್ರಾಯಗಳಿಗೆ ಧನ್ಯವಾದಗಳು ಮೇಡಂ

  3. Kaligananath Gudadur

    ನಾ ಗಂಡಸು;

    ಸದ್ಯ ಕವಿತೆ ಬರೆಯುತ್ತಿದ್ದೇನೆ!

    ಎಂಬ ಸಾಲಿನಿಂದ ಕೊನೆಯವರೆಗಿನ ಎಲ್ಲ ಸಾಲುಗಳು ಇರದಿದ್ದರೂ ಒಂದು ಅತ್ಯುತ್ತಮ ಕವನ. ಕೊನೆಯ ಸಾಲುಗಳು ಅನಗತ್ಯ

    • umesh T P

      ಸರ್ ಸವಿನಯ ಧನ್ಯವಾದಗಳು

  4. Siraj Ahmed

    Bahala chennagi barediddeeri. Anhinandanegalu

    • umesh T P

      ಸರ್ ಸಹೃದಯ ಧನ್ಯವಾದಗಳು

  5. sandhya honguntikar

    ಚೆನ್ನಾಗಿ ಅರ್ಥಮಾಡಿಕೊಂಡಿರುವಿರಿ. ಇಷ್ಟಕ್ಕೂ ಗಂಡಸರು ಹೆಚ್ಚಾಗಿ ಬರೆಯುವುದು ಹೆಂಗಸರ ಕುರಿತಾಗಿಯೆ. ಅಲ್ವಾ?

    • umesh T P

      ನಿಮ್ಮ ಸಸಹೃದಯ ಅಭಿಪ್ರಾಯಗಳಿಗೆ ಧನ್ಯವಾದಗಳು

  6. Vasundhara k m

    ನಿಮ್ಮ ಪ್ರಾಮಾಣಿಕತೆಗೆ ಒಂದು ಪ್ರಶಸ್ತಿ ಕೊಡಬೇಕು. ಇಶ್ಟು ಮುಕ್ತವಾಗಿ ಮನದೆರೆಯುವವರು ಎಷ್ಟು ಜನರಿದ್ದಾರೆ..?!

    • umesh T P

      ಮೇಡಂ ನಿಮ್ಮ ಹಾರೈಕೆಗಳಿರಲಿ…. ಧನ್ಯವಾದಗಳು

  7. maagimalle

    Nimma kavitege kaarana hennina tyaaga ennuva nimmantha gandasaru aparoopa. Adakkaagi ondu namana. Kavite chennaagide…

  8. ಮಠದ ವಿಜಯಕುಮಾರ್

    ಹೆಣ್ಣಾಗಿ ಕವಿತೆಗಳನ್ನು ಬರೆಯುವ ಒತ್ತಡ ಗಂಡಿಗೆ ಬರುವುದೇ ಇಲ್ಲವೇನೋ ಅಂದುಕೊಳ್ಳುವವರಿಗೆ ‘ಕವಿ-ಹೃದಯ’ ತೆರೆದು ತೋರಿಸಿದ್ದಕ್ಕೆ ಅಭಿನಂದನೆಗಳು ಉಮೇಶ್.

  9. T S SHRAVANA KUMARI

    ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading