ಗಂಗಾ ಚಕ್ರಸಾಲಿ
ಅಂದೇನೋ ಸಂಭ್ರಮ ಅವಳಿಗೆ
ಮೃದು ಕೆನ್ನೆಗಳಿಗೆ ರಂಗುಬರಿಸಿ
ಹುಬ್ಬುಗಳಿಗೆ ಕಪ್ಪು ತೀಡಿ
ತುಟಿಗಳಿಗೆ ಕೆಂಬಣ್ಣ ಹಚ್ಚಿ
ಮೋಟು ಕೂದಲಿಗೆ ಮತ್ತಷ್ಟು ಕೂದಲ ಸೇರಿಸಿ
ಉದ್ದ ಜಡೆ ಹೆಣೆದು,ಮಲ್ಲಿಗೆ ಮುಡಿದು..
ತುಟಿ ಅಂಚಲಿ ನಗೆಯ ಸೂಸಿ ಕೇಳಿದಳು..ಹೇಗಿದ್ದೇನೆ?
ನಿಲುಗನ್ನಡಿಗೂ ಖುಷಿಯೇ…
ಇಂದು ಸುಂದರ ರಾಜಕುಮಾರ ಬರುವನು..
ಅವನ ಮನೆಗೆ ಕರೆದೊಯ್ಯುವನು..
ನನ್ನ ಮರೆತು ನೀ..ಅವನ ಕಂಗಳನ್ನೇ ನಾನೆಂದುಕೊಳ್ಳುವೆ
ಅವನೊಂದಿಗೆ ನಿನ್ನಂದದ ಪ್ರಶ್ನೆ ಹಾಕುವೇ..
ನಾಚಿ ನೀರಾದಳವಳು…
ಆ ರಾಜಕುಮಾರ ಬಂದುಹೋಗಿದ್ದಾಯಿತು
ಇವಳು ನಾಚಿಕೆಯ ನಗೆ ಬೀರಿದ್ದಾಯಿತು
ಆದರೆ ಕರೆದೊಯ್ಯುವ ಮಾತುಗಳಾಗಲಿಲ್ಲ..
ತಿಂಗಳುಗಳುರುಳಿದವು,ಮತ್ತದೇ ಸಂಭ್ರಮ ಅವಳಿಗೆ
ಮತ್ತದೇ ಮಾತುಕತೆ ಕನ್ನಡಿಯೊಂದಿಗೆ
ಅವರು ಬಂದರು..ಹೋದರು
ಯಾವರಾಜಕುಮಾರನಿಗೂ ರಾಣಿಯಾಗಲಿಲ್ಲ..

ವರ್ಷಗಳುರುಳಿದ ಹಾಗೆ ವಯಸ್ಸು ಉರುಳಿದವು
ಇಬ್ಬರ ಮಾತುಕತೆ ಕಡಿಮೆಯಾಯಿತು
ಕನ್ನಡಿ ಅವಳ ಆಗಮನ ಬಯಸಿದರೂ
ಇವಳಿಗೇಕೋ ಅದರೊಂದಿಗೆ ಸ್ನೇಹ ಬೇಕಿಲ್ಲ..
ಒಂದಿನ ಕೆದರಿದ ಕೂದಲು ಸರಿಮಾಡಲು
ಬಾಚಣಿಗೆ ಹಿಡಿದು ಕೂತಳವಳು
ರಂಗಿರದ ಒರಟು ಕೆನ್ನೆಯ ಸವರಿದವು ಕೈಗಳು
ಕಂಗಳಿಂದ ಹನಿಗಳುರುಳಿ ಕೊರಳತ್ತ ಜಾರಿದವು
ಮೂಕವಾಗಿತ್ತು ಆ ದರ್ಪಣವು..
ಥಟ್ಟನೆ ಹೇಳಿತು,ʼನೀ ಚಂದ ಕಾಣುತ್ತಿಲ್ಲʼ
ಸಂಗಾತಿ ಇಲ್ಲದಿದ್ದರೇನು…
ನಿನ್ನ ಸೌಂದರ್ಯವೇ..ನಿನ್ನ ಆತ್ಮವಿಶ್ವಾಸ
ಬಾ..ಇನ್ನಷ್ಟು ರಂಗು ತುಂಬು..ಮನಕ್ಕೆ ಮತ್ತು ಮುಖಕ್ಕೆ
ನಿನ್ನ ನಗುವೊಂದಿಗೆ ನಾನು ಹೊಳೆವೆನು..ಕನ್ನಡಿ ಉಸುರಿತು.
ಕನ್ನಡಿಯೊಂದಿಗೆ ಅವಳೋ
ಅವಳೊಂದಿಗೆ ಕನ್ನಡಿಯೋ
ಆದರೆ.. ಕವಿತೆ ಹೇಳಿತು ಮಧುರ ಸ್ವರದಿ
ಇಬ್ಬರ ನಡುವೆ ನಾನಿದ್ದೇನೆ…..






0 Comments