
ಟಿ ಕೆ ಗಂಗಾಧರ ಪತ್ತಾರ್
ರಾಷ್ಟ್ರಕವಿ-ಕುವೆಂಪುರವರಿಗೆ ಕೋಗಿಲೆಗಿಂತಲೂ ಅತ್ಯಂತ ಆಪ್ತವಾದದ್ದು-ಕಾಜಾಣ.
ತನ್ನ ಪಂಚಮದ ಇಂಚರದಿಂದ, ವಸಂತದೂತ, ಚೂತವನಖ್ಯಾತಿಯ ಕೋಗಿಲೆಯದು-ಕುಹೂ ಕುಹೂ ಎಂಬ ಏಕತಾನತೆಯ ರಾಗ. ಆದರೆ ವಿವಿಧ-ವಿಭಿನ್ನ-
ವಿಶಿಷ್ಟ ರಾಗಲಹರಿಯ ಮಧುರ ಗಾನಾಮೃತ ಧಾರೆ ಹರಿಸುವ ಕಾಜಾಣವೇ ನನಗೆ ಬಲು ಇಷ್ಟವೆಂದು ಕುವೆಂಪು ಹಲವು ಸಲ ಹೇಳಿದ್ದಾರೆ.
‘ಕೊಳಲು’ ಪ್ರಥಮ ಕವನ ಸಂಕಲನದಿಂದ ಮೊದಲ್ಗೊಂಡು ಅವರ ಎಲ್ಲಾ ಕೃತಿಗಳನ್ನೂ ಮನಸೆಳೆವ ಮೋಹಕ ಕಾಜಾಣ ಜೋಡಿಯ ಚಿತ್ರ ರಸಿಕರ ಪ್ರಮುಖ ಆಕರ್ಷಣೆ.
ಮುಂದೆ ಅವರದೇ ಸ್ವಂತ “ಉದಯರವಿ ಪ್ರಕಾಶನ”ದ ಶಾಶ್ವತ ಲಾಂಛನವಾಗಿಯೂ ಜೋಡಿ ಕಾಜಾಣ ಸುಪ್ರಸಿದ್ಧ. ಪುಸ್ತಕಾಲಯಗಳ ಕೈಗೆಟುಕದ ದೂರದಲ್ಲಿದ್ದರೂ, ಅತೀ ಎತ್ತರದ ಮೇಲು ಸಾಲಿನಲ್ಲಿದ್ದರೂ ಕಾಜಾಣ ಹಕ್ಕಿಯ ಜೋಡಿ ಚಿತ್ರ ನೋಡಿಯೇ ಓ! ಅಲ್ಲಿದೆ ಕುವೆಂಪು ಪುಸ್ತಕ ಎಂದು ಎಲ್ಲರೂ ಗುರುತಿಸುತ್ತಿದ್ದುದು ಅವಿಸ್ಮರಣೀಯ.
“ನಾ ಕೊಂದ ಹುಡುಗಿ”-ಕಥೆಯ ಆನಂದ ಕೈಚಳಕದ ಕಾಜಾಣ ಜೋಡಿಯ ಚಿತ್ರ ಅಚಂದ್ರಾರ್ಕ.
‘ಅವಧಿ’ಯ ಈ ಬರಹದೊಂದಿಗೇ ಇನ್ನೂ ಒಂದು ನೆನಪು ಧುತ್ತೆಂದು ತೇಲಿಬಂತು. ಬಳ್ಳಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ವಿಭಾಗದ ವಿಷಯ ನಿರ್ವಾಹಕನಾಗಿದ್ದ ನಾನು ತಿಂಗಳಿನಲ್ಲಿ ಎರಡು ಮೂರು ಬಾರಿ ಕರ್ತವ್ಯದ ನಿಮಿತ್ತ ಬೆಂಗಳೂರು ಆನಂದರಾವ್ ವೃತ್ತದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಹೋಗುತ್ತಿದ್ದೆ. ಒಮ್ಮೊಮ್ಮೆ ಎರಡು ಮೂರು ದಿನ ತಂಗಬೇಕಾದ ಜರೂರಿ ಇರುತ್ತಿತ್ತು. ಆಗೆಲ್ಲಾ ಬೆಂಗಳೂರು ಬುಕ್ ಬ್ಯೂರೋ ನನ್ನ ಅಚ್ಚುಮೆಚ್ಚಿನ ತಾಣ. ಕುವೆಂಪುರವರ ಬಹುತೇಕ ಕೃತಿಗಳನ್ನು ಖರೀದಿಸಿದ್ದು ಅಲ್ಲಿಯೇ.
1986 ಅಥವಾ 1987ನೇ ಸೆಪ್ಟಂಬರ್ ಕೆಲಸ ಮುಗಿದ ಮೇಲೆ ಅಲ್ಲಿಗೆ ಹೋದೆ. ಕುವೆಂಪುರವರ “ಕಲಾಸುಂದರಿ”ಮತ್ತು “ಪಾಂಚಜನ್ಯ” ಎರಡು ಪುಸ್ತಕ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಸೇಲ್ಸ್ ಗರ್ಲ್ ಸಾರ್ ನಮ್ಮ ಇನ್ನೊಂದು ಬ್ರ್ಯಾಂಚ್ ನಲ್ಲಿ ಇವೆ. ನಾಳೆ ಬಂದರೆ ಖಂಡಿತಾ ಕೊಡುತ್ತೇನೆಂದಳು. ಹ್ಯಾಗೂ ಮರುದಿನದ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ರಿಸರ್ವೇಶನ್ ಇದ್ದುದರಿಂದ ಪುಸ್ತಕ ತೆಗೆದುಕೊಂಡೇ ಹೋದರಾಯ್ತೆಂದು ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ರೂಮಿಗೆ ಹಿಂದಿರುಗಿದೆ. (ಲಾಡ್ಜ್ ರೂಮ್ ಹಿಡಿಯುವಷ್ಟು ಸಾಮರ್ಥ್ಯವಿಲ್ಲದ ಕಾರಣ ಪ್ರಾಚಾರ್ಯರ ಔದಾರ್ಯದಿಂದ ಇಲ್ಲಿಯ ಲೈಬ್ರರಿ ರೂಮಿನಲ್ಲಿ ಉಚಿತವಾಗಿ ತಂಗುತ್ತಿದ್ದೆ.)
ರಾತ್ರಿ ಎಂಟುಗಂಟೆಗೆ ಇದ್ದಕ್ಕಿದ್ದಂತೇಕೋ ಮಡದಿ-ಮಕ್ಕಳ ನೆನಪು ವಿಪರೀತವಾಗಿ ಕಾಡತೊಡಗಿತು. ಅದೇಕೋ-ಏನೋ ಮರುದಿನ ರಿಸರ್ವೇಶನ್ ಇದ್ದರೂ ಇಂದೇ ಬಸ್ಸಿಗೆ ಹೊರಡಬೇಕೆಂದು ಮನಸ್ಸು ಚಡಪಡಿಸತೊಡಗಿತು. ಪುಸ್ತಕ ಇನ್ನೊಮ್ಮೆ ಬಂದಾಗ ತೆಗೆದುಕೊಂಡರಾಯ್ತೆಂದು ಬಳ್ಳಾರಿಗೆ ಬಸ್ಸಿಗೆ ಹೊರಟೇಬಿಟ್ಟೆ.
ಆಗ ಮೊಬೈಲ್ ಇನ್ನೂ ಬಂದಿರಲಿಲ್ಲ. ಫೋನ್ ಸೌಲಭ್ಯವೂ ಅಷ್ಟಕ್ಕಷ್ಟೇ. ಸಂಜೆ ಬೆಂಗಳೂರು ಆಕಾಶವಾಣಿಯ ಪ್ರದೇಶ ಸಮಾಚಾರ ಆಲಿಸಿ ದಿಗ್ಭ್ರಾಂತನಾದೆ. ಬೆಂಗಳೂರು ಬುಕ್ ಬ್ಯೂರೋ ಇದ್ದ ಗಂಗಾರಾಮ್ ಕಟ್ಟಡ ಕುಸಿದು ಬಿದ್ದು ಮಾಲಕರ ಮಗನೂ ಸೇರಿದಂತೆ 127 ಜನ ಸಜೀವ ಭೂಸಮಾಧಿಯಾಗಿದ್ದರು. ಅಕಾಸ್ಮಾತ್ ನಾನೇನಾದರೂ ಪುಸ್ತಕ ತೆಗೆದುಕೊಂಡೇ ಹೋದರಾಯ್ತೆಂದುಕೊಂಡಿದ್ದರೆ ನನ್ನ ಆಯುಷ್ಯದ ಲೆಕ್ಕ ಚುಕ್ತಾ ಆಗಿಬಿಡುತ್ತಿತ್ತಲ್ಲವೇ?.





ಕಾಮೆಂಟ್ ನಲ್ಲಿ “ಪೋಸ್ಟಿ”ಸಿದ ನನ್ನ ಬರಹವನ್ನು ಮುಖಪುಟದಲ್ಲಿ “ಪೇಸ್ಟಿ”ಸಿದ ಅವಧಿಗೆ ಗೌರವಾದರ ಕೃತಜ್ಞತೆ ಸಮರ್ಪಿಸುತ್ತಾ, ಅಂದು ನಾನೀ ಬರಹ ಉಲ್ಲೇಖಿಸುವಾಗ ಸ್ವಸ್ಥಳ ಬಿಟ್ಟು ಹೊರಗಿದ್ದ ಕಾರಣ ಗಂಗಾರಾಮ ಕಟ್ಟಡ ಕುಸಿತದ ದಿನಾಂಕ ನೆನಪಾಗಲಿಲ್ಲ. ಇದೀಗ ಮನೆಗೆ ಮರಳಿದ ಮೇಲೆ ಹಳೆಯ ಕಡತ ಗಮನಿಸಿ ವಿವರಿಸುತ್ತಿದ್ದೇನೆ. 1986 ಅಥವಾ 1987ಎಂದಿರುವುದು ತಪ್ಪು. ಈ ಘಟನೆ ಸಂಭವಿಸಿದ್ದು-1983. ಕಚೇರಿ ಕೆಲಸದ ನಿಮಿತ್ತ ನಾನು ಬೆಂಗಳೂರಿನಲ್ಲಿದ್ದದ್ದು 10-09-1983, ಬೆಂಗಳೂರು ಬುಕ್ ಬ್ಯೂರೋಕ್ಕೆ ಹೋದದ್ದು 11-09-1983, ಮರು ಪ್ರಯಾಣದ ರಿಜರ್ವೇಶನ್ 12-09-1983 ರಾತ್ರಿ ಬಸ್ಸಿಗಿದ್ದರೂ ಮಡದಿ-ಮಕ್ಕಳ ಸೆಳೆತದಿಂದ 11-09-1983ರಂದೇ ಬಳ್ಳಾರಿಗೆ ಮರುಪಯಣ. ಬೆಂಗಳೂರು ಬುಕ್ ಬ್ಯೂರೋ ಇದ್ದ ಗಂಗಾರಾಮ ಕಟ್ಟಡ ಕುಸಿದು ಬಿದ್ದದ್ದು 12-09-1983 ಅಪರಾಹ್ನ 3.25ಕ್ಕೆ. ಈ ಅನಾಹುತದಲ್ಲಿ ಸತ್ತವರ ಸಂಖ್ಯೆ 123. ಶೋಧ ಕಾರ್ಯಾಚರಣೆಯ 30ದಿನಗಳ ನಂತರವೂ ಬುಕ್ ಬ್ಯೂರೋ ಮಾಲಕ ಎನ್.ಗಂಗಾರಾಮರವರ ಪುತ್ರನ ಮೃತದೇಹ ಪತ್ತೆಯಾಗಿರಲಿಲ್ಲವೆಂದು ಪತ್ರಿಕಾ ವರದಿ. (ಹೀಗೆ ನಾನು ಸಾವಿನ ದವಡಯಿಂದ ಮೂರು ಬಾರಿ “ವಿಚಿತ್ರ! ಆದರೂ ಸತ್ಯ!!” ಎಂಬ ರೀತಿಯಲ್ಲಿ ಪಾರಾಗಿದ್ದೇನೆ. ಎಲ್ಲವೂ ಹೃದಯ ಝಲ್ಲೆನ್ನುವಂತಹ ಭೀಕರ ಘಟನೆಗಳು. “ಅವಧಿ”ಯು “ಆಗಲಿ” ಎಂದರೆ ಬರೆಯುತ್ತೇನೆ.)
“ಆಗಲಿ”