ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ವೈರಾಗ್ಯದ ವ್ಯಾಲಿಡಿಟಿ’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಹಾವಿನ ಮೈಯ ಹಾಗೆ ಬಿಸಿಲಿಗೆ ಝಳಪಿಸುತ್ತಿದ್ದ ಕಪ್ಪು ಟಾರ್ ರಸ್ತೆ ಮೇಲೆ ಬಿಳಿ ಆಡಿ ಕ್ಯೂ ಸೆವೆನ್ ಕಾರ್ ಅನ್ನು ನಡೆಸುತ್ತಾ ಬಂದವರು ವಿಶ್ವನಾಥ್ ಕುಲಕರ್ಣಿ. ಕೂದಲಿಗೆ ಡೈ ಹಾಕಿ ಮುಚ್ಚಿಟ್ಟಿದ್ದ ವಯಸ್ಸನ್ನು ಕಣ್ ಕೆಳಗಿನ ಸುಕ್ಕುಗಳು ಬಿಚ್ಚಿಡುತ್ತಿದ್ದುವು. ಕತ್ತು ಮುಚ್ಚುವ ಹಾಗೆ ತೊಟ್ಟಿದ್ದ ಒಳ ಶರ್ಟು, ಅದರ ಮೇಲೆ ಹಾಕಿದ್ದ ಬಿಳೀ ಕೋಟು ಇವರ ವರ್ಚಸ್ಸನ್ನು ಹೆಚ್ಚಿಸುತ್ತಿತ್ತು. ದೊಡ್ಡಮ್ಮ ತೀರಿಹೋದರು ಅಂತ ಗೊತ್ತಾದ ಕೂಡಲೇ ಯಾವುದೋ ಒಂದು ಸೆಳೆತ ಬೆಳಗ್ಗೆ ಬೆಳಗ್ಗೇನೇ ವಿಶ್ವನಾಥರನ್ನು ಬಡಿದೆಬ್ಬಿಸಿ ತಾವೇ ಕಾರು ಚಲಾಯಿಸಿಕೊಂಡು ಬರುವಂತೆ ಮಾಡಿತ್ತು.

ಗೂಗಲ್ ಮ್ಯಾಪ್ ಹೆದ್ದಾರಿಯಿಂದ ಕವಲೊಡೆದ ರಸ್ತೆಯ ಕಡೆಗೆ ಕೈ ತೋರಿತು. ಇಷ್ಟು ಹೊತ್ತು, ಕುಡಿದಿದ್ದ ನೀರೂ ಅಲ್ಲಾಡದಂತೆ ಚಲಿಸುತ್ತಿದ್ದ ಕಾರು ಈಗ ಜಟಕಗಾಡಿಯಂತೆ ಕುಲುಕಾಡುತ್ತಿತ್ತು. ಹಳ್ಳ ದಿಣ್ಣೆಯಲ್ಲಿಳಿದ ಕಾರಿನ ಮುಂಭಾಗ ಕಲ್ಲಿಗೆ ತಾಕಿ ಶಬ್ದ ಮಾಡಿದಾಗ ವಿಶ್ವನಾಥ್ ಅವರ ಕಾಲಿಗೇ ಪೆಟ್ಟಾದಂತಾಯಿತು. ‘ಛೇ! ರೇಂಜ್ ರೋವರ್ ತರ್ಬೇಕಿತ್ತು!’ ಭಾರೀ ಪಶ್ಚಾತ್ತಾಪ ಹೊತ್ತ ಧ್ವನಿಯಲ್ಲಿ ಹೇಳಿಕೊಂಡರು.

ಕೊನೇ ಬಾರಿ ಯಾವಾಗ ಬಂದದ್ದು? ಸುಮಾರು ಇಪ್ಪತ್ತೈದು ವರ್ಷಗಳು ಕಳೆದಿರಬಹುದು, ಹಾಗಾಗಿ ದಾರಿ ಮರೆತುಹೋಗಿದೆ. ಊರಿನ ತನಕ ಗೂಗಲ್ ಕರೆದುಕೊಂಡು ಬಂದಿತ್ತು ಆದರೆ ಮುಂದೆ ಹೋಗೋದಾ ಅಥವಾ ಎಡಕ್ಕೆ ತಿರುಗುವುದಾ ಅನ್ನೋ ಗೊಂದಲ ಕಾಡಿ ಕಾರನ್ನು ನ್ಯೂಟ್ರಲ್ ಗೇರ್ ಗೆ ಹಾಕಿದರು. ರೇರ್ ವ್ಯೂ ಮಿರರ್ ನಲ್ಲಿ ಕಾಣಿಸಿದ ಒಬ್ಬ ವ್ಯಕ್ತಿಯನ್ನು ನೋಡಿ ಕಿಟಕಿಯ ಗಾಜಿಳಿಸಿದರು. ‘ಹಲೋ.. ಸುಭದ್ರಮ್ಮ ಅವ್ರ ಮನೆಗ್ ಹೇಗ್ ಹೋಗೋದ್ ಹೇಳಿ?’. ಬಾಯಿಗೆ ಹಾಕಿದ್ದ ತಾಂಬೂಲದ ರಸವನ್ನು ಉಗಿದು ಆತ ‘ಯಾರು? ತಾರಸಿ ಮನೆ ಸುಭದ್ರಮ್ಮೆ ಅಲ್ವ್ರೇ?’. ದೊಡ್ಡಮ್ಮನ ಮನೆಗೆ ತಾರಸಿ ಹಾಕಿಸಿದ್ದಾರಾ? ಅದಕ್ಕೇ ಹಾಗೆ ಕರೀತಿರಬಹುದಾ? ತಿಳಿಯಲಿಲ್ಲ.

ಒಂದು ಹಳ್ಳಿಯಲ್ಲಿ ಎಷ್ಟು ಮಂದಿ ಸುಭದ್ರಮ್ಮರಿರಬಹುದು? ನೋಡೇಬಿಡೋಣ ಎಂದುಕೊಂಡು ಹೌದಪ್ಪ ಅವ್ರೇ. ‘ಪಾಪ ಆಯಮ್ಮ ನೆನ್ನೆ ರಾತ್ರಿ ಹೋಗ್ಬಿಟ್ಳಲ್ಲ. ನಾನು ಆಕಾಡೆಗೆ ಹೋಗ್ತಿದೀನಿ ನಡೀರಿ ತೋರ್ಸ್ತೀನಿ’ ಎಂದವನು ಡೋರ್ ತೆಗೆದು ಕಾಲುಚೀಲ ಹಾಕಿಕೊಂಡಂತೆ ಕೆಸರು ಮೆತ್ತಿದ ಕಾಲನ್ನು ಒಳಗಿಟ್ಟು ಹತ್ತಿ ಕುಳಿತೇ ಬಿಟ್ಟ. ವಿಶ್ವನಾಥನಿಗೆ ಒಂದು ಕಡೆ ಅವನು ಮನೆಗೆ ತೋರಿಸುತ್ತಿದ್ದಾನೆ ಅಂತ ಸಮಾಧಾವಿದ್ರೆ, ಇನ್ನೊಂದು ಕಡೆ, ಬೂದುಕನ್ನಡಿ ಹಾಕಿಹುಡುಕಿದರೂ ಸಣ್ಣ ಧೂಳೂ ಸಿಗಲಾರದ ಕಾರಿನ ಫುಟ್ ಮ್ಯಾಟ್ ಮೇಲೆ ಗೋಕುಲಾಷ್ಟಮಿಯ ಕೃಷ್ಣನ ಹಾಗೆ ಪಾದದ ಗುರುತುಗಳನ್ನು ಮಾಡಿಬಿಟ್ನಲ್ಲ ಅಂತ ಕೋಪವೂ ಬಂತು.

‘ಯಾರ್ ನೀವು? ಯಾವೂರು’. ಬಾಯಲ್ಲಿ ಉಳಿದ ಅಡಿಕೆಯನ್ನು ಜಗಿಯುತ್ತಾ ಕೇಳಿದ. ಅರೆ! ದಕ್ಷಿಣ ಭಾರತದ ದೊಡ್ಡ ಕಂಪನಿಯೊಂದರ ಒಡೆಯನನ್ನ ಗುರುತಿಸಲಿಲ್ವೇ ಇವ್ನು? ಕಳೆದ ಹತ್ತಾರು ವರ್ಷಗಳಿಂದ ಎಲ್ಲಿಗೆ ಹೋದರೂ ಮುಖ್ಯ ಆಕರ್ಷಣೆಯಾಗಿರೋ ಉದ್ಯಮಿಗೆ ಈತ ಹಾಗೆ ಕೇಳಿದ್ದು ಒಂದು ಕ್ಷಣ ಅವಮಾನವಾದಂತಾಯಿತು. ಕಾರು ನಡೆಸುತ್ತಲೇ ಓರೆಗಣ್ಣಿನಿಂದ ಅವನನ್ನ ಗಮನಿಸಿದ. ತನ್ನಷ್ಟೇ ವಯಸ್ಸಾಗಿರಬಹುದು, ಕೊಳೇ ಪಂಚೆ ಮೇಲೆ ಹಾಕಿದ್ದ ಹಳೇ ಶರ್ಟಿನ ಒಂದೆರೆಡು ಗುಂಡಿ ಕಿತ್ತುಬಂದಿತ್ತು. ಬಿಳಿ ಕೂದಲು ಕೆದರಿತ್ತು. ‘ಮಣ್ಣಾದ ಕಾಲನ್ನು ಒರೆಸದೇ ಆಡಿ ಕಾರ್ ಒಳಗೆ ಕೂರುವ ಇವನಿಗೆ ನಾನ್ಯಾರು ಅಂತ ಹೇಗೆ ಗೊತ್ತಾದೀತು!’ ಅಂದುಕೊಂಡಾಗ ಮನಸ್ಸು ಕಿರಿಕಿರಿ ಮಾಡುವುದನ್ನು ನಿಲ್ಲಿಸಿತು.

ಹೊಸದಾಗಿ ತಾರಸಿ ಹಾಕಿಸಿದ್ದ ಮನೆಯ ಮುಂದೆ ಕಾರು ನಿಲ್ಲಿಸಿ ಒಳಗೆ ಹೋದಾಗ ಜನಗಳ ಮಧ್ಯ ನಿಶ್ಚಿಂತೆಯಾಗಿ, ನಿಶ್ಚಲವಾಗಿ ಮಲಗಿದ್ದ ದೊಡ್ಡಮ್ಮ ಕಾಣಿಸಿದರು. ಎಂಭತ್ತು ದಾಟಿದ ದೇಹ ಗಟ್ಟಿಮುಟ್ಟಾಗೇ ಇದ್ದಂತೆ ಕಂಡಿತು. ನಿರ್ಭಾವದಿಂದ ಅವರನ್ನೇ ನೋಡುತ್ತಾ ನಿಂತ ವಿಶ್ವನಾಥವರನ್ನು ಎಚ್ಚರಗೊಳಿಸಿದ್ದು ಅಲ್ಲಿಗೆ ದೌಡಾಯಿಸಿದ್ದ ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ. ‘ಸರ್ ನಿಮ್ಗೆ ಸುಭದ್ರಮ್ಮ ಅವ್ರು ದೊಡ್ಡಮ್ಮ ಅಂತ ಗೊತ್ತಾಯ್ತು, ಅವರೊಂದಿಗೆ ನಿಮ್ಮ ಒಡನಾಟ ಹೇಗಿತ್ತು?’ ‘ಇಷ್ಟ್ ವರ್ಷ ನೀವಿಲ್ಲಿಗೆ ಯಾಕ್ ಬಂದಿರ್ಲಿಲ್ಲ ಸರ್?’ ‘ನೀವಿದ್ದೂ ಇವ್ರು ಒಂಟಿಯಾಗಿ ಪ್ರಾಣ ಬಿಟ್ರು ಅಂತ ನಿಮ್ಗೆ ಬೇಜಾರಾಗ್ತಿಲ್ವಾ? ‘ನಿಮ್ ಕುಟುಂಬದಿಂದ ಯಾರು ಬಂದಿಲ್ವಾ?’ ‘ನೀವ್ ಇಷ್ಟ್ ಎತ್ತರಕ್ಕೆ ಬೆಳೆಯೋಕೆ ಇವ್ರು ತುಂಬಾ ಸಹಾಯ ಮಾಡಿದ್ರಂತೆ, ಅದ್ರು ಬಗ್ಗೆ ಹೇಳಿ ಸರ’. ವಿಶ್ವನಾಥನ ಹಿನ್ನಲೆ ಬೆಗ್ಗೆ ಸಾರಿಯಾದ ಮಾಹಿತಿಯನ್ನು ಪಡೆದುಕೊಂಡು ಬಂದವರ ಮಾತಿಗೆ ‘ಹೌದು’ ‘ಇಲ್ಲ’ ಅನ್ನುವುದನ್ನು ಬಿಟ್ಟು ಹೆಚ್ಚಾಗಿ ಏನು ಉತ್ತರ ಕೊಡಲಿಲ್ಲ. ಬದಲಿಗೆ ಆ ಪ್ರಶ್ನೆಗಳು ಅವರು ಮರೆತೇಹೋಗಿದ್ದ ತಮ್ಮ ಹಿಂದಿನ ಜೀವನದ ಮೆಲುಕು ಹಾಕಿಸಿತು.

ವಿಶ್ವನಾಥ ಒಟ್ಟು ಹನ್ನೆರಡು ಮಕ್ಕಳಲ್ಲಿ ಎರಡನೆಯವನು. ಬಡತನದ ಜೊತೆ ಹತ್ತಾರು ಮಕ್ಕಳು ಸೇರಿಕೊಂಡುಬಿಟ್ಟರೆ ಮುಗೀತು. ಒಂದು ತುತ್ತು ಅನ್ನ ಸಿಕ್ಕರೆ ನನಗೆ, ನನಗೆ ಅಂತ ಕಿತ್ತು ತಿನ್ನುತ್ತಿದ್ದ ಮಕ್ಕಳ ಮಧ್ಯೆ ಬಾಂಧವ್ಯ ಪ್ರೀತಿಗಳೆಲ್ಲಿ ಬರಬೇಕು. ಆ ತಾಯಿಯಾದರೋ ತನ್ನ ಪ್ರೀತಿಯನ್ನು ಯಾರಿಗೆ ಅಂತ ಹಂಚುತ್ತಾಳೆ? ಅಮ್ಮನ ಅಕ್ಕ ಸುಭದ್ರಮ್ಮನವರ ಗಂಡ ಪ್ಲೇಗ್ ಬಂದು ತೀರಿಕೊಂಡಾಗ ವಿಶ್ವನಾಥ ದೊಡ್ಡಮ್ಮನ ಮನೇಲಿ ಅವನ ಸಹಾಯಕ್ಕೆಂದು ಉಳಿದುಕೊಂಡ. ಮಕ್ಕಳಿಲ್ಲದ ದೊಡ್ಡಮನಿಗೆ ಈತನೇ ಮಗನಾದ. ಶಾಲೆ ಮುಗಿಸಿ ಕಾಲೇಜಿಗೆ ಹೋದಾಗಲೂ ದೊಡ್ಡಮ್ಮನೇ ಅವನ ಫೀಸು ಹೊಂದಿಸಿದ್ದಳು.

ಉನ್ನತ ವ್ಯಾಸಂಗಕ್ಕಾಗಿ ಬಾಂಬೆಗೆ ಹೋದಾಗ ಅಲ್ಲಿನವರ ಪರಿಚಯವಾಗಿ ಬಿಸಿನೆಸ್ಸ್ ಶುರುಮಾಡಬೇಕು ಎಂದುಕೊಂಡವನಿಗೆ ತನ್ನ ಮನೆಯಿಂದ, ಅವನು ಊಹಿಸಿದಂತೆ ಬಿಡುಗಾಸೂ ಸಿಗಲಿಲ್ಲ. ಆಗ ದೊಡ್ಡಮ್ಮ ತಮ್ಮ ತವರುಮನೆಯಿಂದ ತಂದಿದ್ದ ಬಂಗಾರದ ಬಳೆಗಳನ್ನು ವಿಶ್ವನಾಥನ ಕನಸು ನನಸಾಗಲಿ ಎಂದು ಹಾರೈಸಿ ಕೊಟ್ಟಿದ್ದರು. ದೊಡ್ಡಮ್ಮನ ಬಂಗಾರದ ಕೈ ಬಳೆಯನ್ನು ಮಾರಿ ಹೂಡಿದ ಹಣ ಇವರ ಕೈಹಿಡಿದು ಬಂಗಾರದ ಮೊಟ್ಟೆ ಇಟ್ಟಿತ್ತು. ತಮ್ಮ ವ್ಯವಹಾರದ ಪಾಲುದಾರನ ತಂಗಿಯನ್ನೇ ಮದುವೆಯಾಗಿ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡ ವಿಶ್ವನಾಥ ಮತ್ತೆ ಹಿಂದಿರುಗಿನೋಡಲಿಲ್ಲ.

ಸಾವಿನ ಮನೆಗೆ ಟಿಪ್ ಟಾಪ್ ಆಗಿ ಬಂದಿದ್ದ ವಿಶ್ವನಾಥನನ್ನು ಹಳ್ಳಿಗರು ಅಡಿಯಿಂದ ಮುಡಿಯವರೆಗೂ ನೋಡುತ್ತಿದ್ದರೆ ವಿಶ್ವನಾಥ ಸುಭದ್ರಮ್ಮನವರ ಮುಖವನ್ನೇ ದಿಟ್ಟಿಸುತ್ತಿದ್ದ. ತಕ್ಷಣ ‘ವಿಶ್ವಾ..’ ಅಂತ ಪ್ರೀತಿಯಿಂದ ಕರೆಯುತ್ತಿದ್ದ ಅವರ ಧ್ವನಿ ಕಿವಿಯಲ್ಲಿ ಪ್ರತಿಧ್ವನಿಸಿದಂತಾಯಿತು. ಬರಿಗಾಲಲ್ಲಿ ನಡೆದು ಶಾಲೆಗೆ ಹೋಗುವಾಗ ಕಾಲಿಗೆ ಗಾಜು ಚುಚ್ಚಿ ಬೆರಳುಹೋಯಿತೆಂದು ಚಪ್ಪಲಿ ಹೊಲೆದುಕೊಟ್ಟಿದವರು ದೊಡ್ಡಮ್ಮ.

ತಂದೆ ತಾಯಿಗಳೇ ಮರೆತು ಹೋಗುತ್ತಿದ್ದ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಆಚರಿಸಿಸುತ್ತಿದ್ದವರೂ ಅವರೇ. ಅವರು ಮಾಡಿಕೊಡುತ್ತಿದ್ದ ಎಳ್ಳುಂಡೆಯ ರುಚಿಯನ್ನು ನಾಲಗೆಯ ಮೇಲಿನ ರುಚಿಮೊಗ್ಗುಗಳು ನೆನಪಿಸಿತು. ಕಳೆದುಹೋಗಿದ್ದ ಅವರ ನೆನೆಪುಗಳು ತೆರೆತೆರೆಯಾಗಿ ಬಂದು ಹಿರಿದಾಗುತ್ತಾ ಹೋದಂತೆ ಇಷ್ಟು ಹೊತ್ತು ಎಲ್ಲಿ ಅಡಗಿಕೊಂಡಿತ್ತೋ ಕಣ್ಣೀರು, ಎಲ್ಲರಿಗೂ ಕಾಣುವಂತೆ ಹೊರಬಂದಿತು. ಕ್ಯಾಮೆರಾ ಹಿಡಿದವನ್ನು ನನ್ನನ್ನೇ ಜೂಮ್ ಮಾಡುತ್ತಿದ್ದಾನೆನೆಸಿ ಹಿಂದೆ ತಿರುಗಿಕೊಂಡು ಕರ್ಚೀಫಿನಿಂದ ಕಣ್ಣೀರು ಒರೆಸಿಕೊಂಡರು.

‘ಸುಭದ್ರಮ್ಮ ಬದುಕಿದ್ದಾಗ ನಿಮ್ಮನ್ನ ನೆನಪು ಮಾಡಿಕೊಳ್ಳದ ದಿನವಿಲ್ಲ, ನೀವೇ ಅವರ ಅಂತ್ಯಕ್ರಿಯೆ ಮಾಡಿಬಿಡಿ’ ದೊಡ್ಡಮ್ಮನನ್ನು ತುಂಬಾ ಬಲ್ಲವರಂತೆ ಕಂಡ ಹಿರಿಯರೊಬ್ಬರು ಮನವಿ ಮಾಡಿಕೊಂಡಾಗ ವಿಶ್ವನಾಥನಿಗೆ ಇಲ್ಲ ಅನ್ನಲಾಗಲಿಲ್ಲ. ಮನೆಯಿಂದ ಹೊರಟಾಗ ಕೊನೇ ಮುಖನೋಡಿಕೊಂಡು ತಕ್ಷಣ ಹೊರಟುಬಿಡಬೇಕು ಅಂದುಕೊಂಡಿದ್ದವನಿಗೆ ಈಗ ಅಲ್ಲಿಂದ ಹೊರಡುವ ತವಕ ಮಾಯವಾಗಿತ್ತು. ವಿಶ್ವನಾಥ ನೆನಪುಮಾಡಿಕೊಂಡರು. ನನ್ನ ತಂದೆತಾಯಿಯ ಕ್ರಿಯಾ ಕರ್ಮಗಳನ್ನು ಮಾಡಿದವರ್ಯಾರು? ನೆನಪಾಗಲಿಲ್ಲ, ಅಮ್ಮ ಹೋದಾಗ ನಾನು ಭಾರತದಲ್ಲಿರಲಿಲ್ಲ, ಅಪ್ಪ ಹೋದಾಗಲಂತೂ, ಅವರು ಹೋದದ್ದೇ ಒಳ್ಳೇದಾಯಿತು, ಹೆಂಡತಿ ಮಕ್ಕಳನ್ನು ನೋಡಿಕೊಳ್ಳದ ಬೇಜವಾಬ್ದಾರಿ ಮನುಷ್ಯ ಬದುಕಿದ್ದು ಏನು ಪ್ರಯೋಜನ ಅನ್ನಿಸಿತ್ತು. ಯಾರೋ ಪಂಚೆ ಶಲ್ಯ ಕೊಟ್ಟು ಸ್ನಾನ ಮಾಡಲು ಹೇಳಿದಾಗ ಮನಸ್ಸು ಮತ್ತೆ ವರ್ತಮಾನಕ್ಕೆ ಮರಳಿತು.

ಜೋಡಿಸಿಟ್ಟ ಕಟ್ಟಿಗೆಗಳ ಮೇಲೆ ದೇಹವನ್ನು ಮಲಗಿಸಿದಾಗ ವಿಶ್ವನಾಥ ಜಡದಂತೆ ನಿಂತಿದ್ದರು. ಇಡೀ ಪ್ರಪಂಚದಲ್ಲಿ ಯಾವ ಅಪೇಕ್ಷೆಯೂ ಇಟ್ಟುಕೊಳ್ಳದೆ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದ ಒಂದೇ ಜೀವ ಇಂದು ಕಣ್ಣು ಮುಚ್ಚಿದೆ ಅಂತೆನಿಸಿ ಗಂಟಲು ಭಾರವಾಯಿತು. ನಾನೇಕೆ ಇವರನ್ನು ಇಷ್ಟು ವರ್ಷ ಮರೆತಿದ್ದೆ? ಇಂದು ಯಾಕೆ ಬಂದೆ? ಇಷ್ಟು ಪ್ರೀತಿಯಿಟ್ಟುಕೊಂಡಿದ್ದ ದೊಡ್ಡಮ್ಮನನ್ನು ಒಬ್ಬಳೇ ಊರಲ್ಲಿರಲು ಏಕೆ ಬಿಟ್ಟೆ? ಅನ್ನೋ ಯೋಚನೆಗಳ ಜೊತೆ ವಿಧಿವಿಧಾನಗಳು ಮುಗಿದಿದ್ದವು. ಪುರೋಹಿತರು ಕೊಳ್ಳಿಯನ್ನು ಕೈಗೆ ಕೊಟ್ಟಾಗ ಅದನ್ನು ಹಿಡಿದುಕೊಳ್ಳೋ ಶಕ್ತಿ ತನಗಿಲ್ಲ ಎನಿಸಿಬಿಟ್ಟಿತು. ಅವರೇ ವಿಶ್ವನಾಥನ ಕೈಹಿಡಿದುಕೊಂಡು ಚಿತೆಗೆ ಬೆಂಕಿಯಿಟ್ಟರು.

ಕಣ್ಣೀರು ಖಾಲಿಯಾಗಿ, ರೋಧನೆ ಮುಗಿದು ಎಲ್ಲರು ಹೊರಟಮೇಲೂ ವಿಶ್ವನಾಥ ಶೂನ್ಯದಲ್ಲಿ ದೃಷ್ಟಿಯಿಟ್ಟು ಅಲ್ಲೇ ಕುಳಿತಿದ್ದರು. ವಾಪಸ್ಸು ಹೊರಡುವುದು, ತನ್ನೂರು, ಮಕ್ಕಳು, ವ್ಯವಹಾರ ಎಲ್ಲವನ್ನೂ ಮರೆತಂತೆ. ಯಾರೋ ಭುಜದ ಮೇಲೆ ಕೈಯಿಟ್ಟು ಎಚ್ಚರಿಸಿದಾಗ ಬೆಚ್ಚಿ ತಿರುಗಿನೋಡಿದರು. ಬೆಂಕಿ ಆರಿದ ಹೊಗೆಯ ಮಧ್ಯ ನಿಂತವರ ಮುಖ ಪರಿಚಿತವಾಗಿತ್ತು, ಅದು ಕಾರಿನಲ್ಲಿ ಜೊತೆಗೆ ಬಂದ ಮಹಾನುಭಾವನೆಂದು ಬುದ್ದಿ ನೆನಪಿಸಿತು. ‘ಯಾಕ್ ಬಿಸ್ಲಲ್ಲಿ ನಿಂತಿದ್ದೀರ ಸ್ವಾಮಿ, ಹೊರಡಲ್ವಾ?’. ಹೌದಲ್ವಾ ನಾನು ಹೊರಡಬೇಕು, ಎಲ್ಲಿಗೆ.. ವಾಪಸ್ ಬೆಂಗಳೂರಿಗಾ? ಇಷ್ಟು ಬೇಗ? ದೊಡ್ಡಮ್ಮನನ್ನು ಮಾತನಾಡಿಸದೇ ಹೇಗೆ ಹೋಗೋದು? ಓ ದೊಡ್ಡಮ್ಮ ಈಗಿಲ್ಲ. ಮನಸ್ಸು ಸತ್ಯವನ್ನು ಅರಗಿಸಿಕೊಳ್ಳಲು ಗಿರಿಗಿಟ್ಲೆ ಹೊಡೀತಿತ್ತು.

ಬಿಸಿಲೇರುತ್ತಿದ್ದಂತೆ ತಲೆ ಸುತ್ತಿಬಂದು ಬೀಳುವ ಹಾಗಾಗಿ ಆತನ ಭುಜವನ್ನು ಆಶ್ರಯಿಸಿದರು. ‘ಬ್ಯಾಸ್ರ ಮಾಡ್ಕೊಳ್ಬೇಡಿ ಸಾಮಿ, ಏನ್ ಜೀವ್ನ ಇದು? ನೀರಿನ್ ಗುಳ್ಳೇ ತರ ಒಂದು ದಿನ ಕೊನೆಯಾಗೋ ಬದುಕಲ್ಲಿ ಎಷ್ಟೆಲ್ಲಾ ಒದ್ದಾಡ್ತೀವಿ ಅಂತ ಇವತ್ತು ಅನ್ನಿಸುತ್ತೆ. ಅಮೇಲ್ ಎಲ್ಲಾ ಮರೆತುಹೋಗಿ ನನ್ ಹಣ, ನನ್ ಹೆಂಡ್ತಿ ಮಕ್ಕಳು ಅಂತ ಒದ್ದಾಡ್ತೀವಿ’ ಒಂದೇ ಮಾತಿನಲ್ಲಿ ಆ ಮುದುಕ ಸ್ಮಶಾನ ವೈರಾಗ್ಯವನ್ನ ಅರ್ಥಮಾಡಿಸಿದ್ದ. ‘ತುಂಬಾ ಸುಸ್ತಾಗಿದ್ದೀರ ನಡೀರಿ, ಏನಾದ್ರು ಹೊಟ್ಟೆಗಾಕೊಳ್ಳಿ ಮೊದ್ಲು’ ಅವನು ವಿಶ್ವನಾಥನನ್ನು ಬಲವಂತ ಮಾಡಿದ. ತಾನಿನ್ನೂ ಏನು ತಿಂದಿಲ್ಲ, ಮಾತ್ರೆ ತಗೊಂಡಿಲ್ಲ ಅನ್ನೋದು ನೆನೆಪಾಗಿ ನಿಧಾನವಾಗಿ ಆತನ ಜೊತೆ ಹೆಜ್ಜೆ ಹಾಕಿದರು.

‘ನನ್ ಹೆಸ್ರು ಭೀಮಪ್ಪ ಅಂತ. ವ್ಯವಸಾಯ ಮಾಡ್ಕೊಂಡಿದ್ದೀನಿ. ನಾವು ಭತ್ತ, ಸೂರ್ಯಕಾಂತಿ ಬೆಳೀತೀವಿ. ಮೂರ್ ಮಕ್ಕಳವ್ರೆ, ದೊಡ್ ಮಗಳನ್ನ ಪಕ್ಕದ್ ಹಳ್ಳೀಗ್ ಕೊಟ್ಟಿದ್ದೀನಿ, ಚಿಕ್ ಮಗ ಮೈಸೂರಿನಲ್ಲಿ ಕೆಲ್ಸ ಹುಡ್ಕೊಂಡಿದ್ದಾನೆ ಎಂದವನು ವಿಶ್ವನಾಥನಿಗೆ ಹೆಂಡತಿ, ಇನ್ನೊಬ್ಬ ಮಗ, ಸೊಸೆಯನ್ನು ಪರಿಚಯ ಮಾಡಿಕೊಟ್ಟ. ಅದೊಂದು ಪುಟ್ಟದಾದ ಹೆಂಚಿನ ಮನೆ. ಸಾವಿನ ಮನೇಲಿ ಒಲೆ ಹಚ್ಚೋಹಾಗಿಲ್ಲ ಅಂತ ಗೊತ್ತಾಗಿ ವಿಧಿಯಿಲ್ಲದೆ ವಿಶ್ವನಾಥ ಭೀಮಪ್ಪನ ಮನೆಯ ಅತಿಥಿಯಾಗಿದ್ದ. ಇಡೀ ಕುಟುಂಬ ವಿಶ್ವನಾಥ ಎಷ್ಟು ದೊಡ್ಡ ಮನುಷ್ಯ ಅನ್ನೋದನ್ನು ಗುರುತಿಸಿರಲಿಲ್ಲ. ಬಹುಷಃ ಮೈಸೂರಿನಲ್ಲಿರೋ ಭೀಮಣ್ಣನ ಕೊನೇ ಮಗನಿಗೆ ನಾನ್ಯಾರು ಅನ್ನೋದು ಗುರುತಿರುತ್ತದೆ. ಮನಸ್ಸಿನೊಳಗಾಗುತ್ತಿದ್ದ ಅಭದ್ರತೆಗೊಂದು ಸಮಾಧಾನ ಹುಡುಕಿಕೊಂಡನು.

ಭೀಮಪ್ಪನ ಸೊಸೆ ಮೂಲೇಲಿದ್ದ ಮರದ ಟೇಬಲನ್ನ ಎಳೆದು ವಿಶ್ವನಾಥನ ಮುಂದಿಟ್ಟು ಹೋದವಳು ದೋಸೆ ಮಾಡಿ ತಟ್ಟೆಗೆ ಹಾಕಿಕೊಟ್ಟಳು. ಕುಂಟ ಕಾಲಿನ ಟೇಬಲ್ಲು ದೋಸೆಯನ್ನು ಮುರೀವಾಗ ಗಲಾಟೆಮಾಡುತ್ತಿತ್ತು. ಒಂದಾದ ಮೇಲೊಂದರಂತೆ ಬಿಸಿಬಿಸಿಯಾಗಿ ತಟ್ಟೆಗೆ ಬಿದ್ದ ನಾಲ್ಕು ದೋಸೆಗಳು ವಿಶ್ವನಾಥನ ಹೊಟ್ಟೆಯನ್ನು ತಣಿಸಿತು. ತಿಂದು ಮುಗಿಸಿದ ಮೇಲೂ ಉಪ್ಪು ಹುಳಿ ಖಾರ ಹದವಾಗಿ ಬೆರೆಸಿದ್ದ ಕೆಂಪು ಚಟ್ನಿಯ ರುಚಿ ನಾಲಿಗೆಗೆ ಮೆತ್ತುಕೊಂಡೇ ಇತ್ತು.

ಆಹಾ! ಏನು ರುಚಿ! ನಾನು ತಿನ್ನುವ ಚಟ್ನಿ ಹೀಗೆ ಇರುವುದಿಲ್ಲ ಏಕೆ? ಮಿಕ್ಸಿ ಅಲ್ಲದೆ ರುಬ್ಬು ಗುಂಡಿನಲ್ಲಿ ಮಾಡಿರಬಹುದೆಂದೇ? ಕೇಳಿಬಿಡಲೇ? ಮನಸ್ಸು ಬೇಡ ಎಂದು ಬಿಂಕ ಮಾಡಿತು. ಭೀಮಪ್ಪನ ಸೊಸೆ ಕಾಫಿ ತಂದುಕೊಟ್ಟಾಗ ‘ಸಕ್ಕರೆ ಹಾಕಿದ್ಯಮ್ಮ? ಹೇಳೋದು ಮರ್ತುಬಿಟ್ಟೆ’ ವಿಶ್ವನಾಥ ಕೇಳಿದಾಗ ಭೀಮಪ್ಪನ ಸೊಸೆ ತಬ್ಬಿಬ್ಬಾದಳು. ‘ಇಲ್ಲಿ ತಾ.. ಅವ್ರಿಗೆ ಸಕ್ಕರೆ ಹಾಕ್ದೆ ಕಾಫಿ ಮಾಡಿಕೊಡು’. ಭೀಮಣ್ಣ ಹೇಳಿ ಲೋಟವನ್ನು ಇಸಿದುಕೊಂಡ. ಈ ವಯಸ್ಸಿನಲ್ಲೂ ವ್ಯವಸಾಯ ಮಾಡುತ್ತಾ, ಸಕ್ಕರೆ ಹಾಕಿದ ಕಾಫಿಯನ್ನ ಹೀರುತ್ತಾ ಕುಕ್ಕರುಗಾಲಿನಲ್ಲಿ ಕುಳಿತಿದ್ದ ಭೀಮಪ್ಪನನ್ನು ಬೆರಗುಗಣ್ಣಿನಿಂದ ವಿಶ್ವನಾಥ ನೋಡಿದರು.

ಭೀಮಪ್ಪನ ಕುಟುಂಬಕ್ಕೆ ಇನ್ಯಾವಾಗಲಾದ್ರೂ ಬರ್ತೀನಿ ಅಂತ ಹೇಳಿ ಹೊರಬಿದ್ದ ವಿಶ್ವನಾಥನಿಗೆ ಹೊರಡುವ ಮುನ್ನ ದೊಡ್ಡಮ್ಮನ ಮನೆ ಒಂದು ಸಲ ನೋಡಿ ಹೋಗುವ ಹಂಬಲವಾಯಿತು. ರಾತ್ರಿಯಿಂದ ಒಂದೇ ಸಮನೆ ಜನ ಬಂದುಹೋದ ಮನೆಯಲ್ಲಿ ಈಗ ಖಾಲಿ ಹೆಜ್ಜೆಗಳಷ್ಟೇ ಇದ್ದುವು. ವಿಶ್ವನಾಥನಿಗೆ ಯಾಕೋ ಈ ಮನೆಗಿಂತಾ ತನ್ನ ಮನಸ್ಸೇ ಖಾಲಿಯಾಗಿದೆ ಅನ್ನಿಸಿತು. ಹಳ್ಳಿಯ ಒಂಟಿ ಹೆಂಗಸು ದೊಡ್ಡಮ್ಮನ ಕೊನೇಯಾತ್ರೆಗೆ ಎಷ್ಟೊಂದು ಜನ ಬಂದಿದ್ದರು! ನಾನಿಲ್ಲದಿದ್ದರೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ, ಅವಳ ದೇಹಕ್ಕೆ ಹೆಗಲು ಕೊಡೋಕೆ ಇದ್ದ ಭುಜಗಳೇನೂ ಕಡಿಮೆಯಿರಲಿಲ್ಲ. ತಕ್ಷಣ ಹೊಳೆದ ಪ್ರಶ್ನೆ ಅವನನ್ನು ಸ್ತಬ್ಧವಾಗಿಸಿತ್ತು. ನನ್ನ ಕೊನೇ ಯಾತ್ರೆಗೆ ಬರುವವರು ಯಾರು? ಕಂಪನಿಯ ಎಂಪ್ಲಾಯಿಗಳು ಬರುವರೇ? ಅನ್ಯದೇಶವಾಸಿ ಮಗನಾದರೋ ಬರಬಹುದೆಂದು ಸ್ಪಷ್ಟವಾಗಿ ತೋರಲಿಲ್ಲ.

ತಕ್ಷಣ ಭೀಮಪ್ಪನ ತುಂಬಿದ ಕುಟುಂಬ ಕಣ್ಣಮುಂದೆ ಪ್ರತ್ಯಕ್ಷವಾಯಿತು. ಭೀಮಪ್ಪ ಊರಿನಲ್ಲಿರೋ ಎಲ್ಲರ ಬಗ್ಗೆ ತಿಳಿದುಕೊಂಡಿದ್ದಾನೆ ಆದರೆ ನನಗೆ ನನ್ನ ಸ್ವಂತ ತಮ್ಮ ತಂಗಿಯರ ಮಕ್ಕಳ ಹೆಸರೂ ಗೊತ್ತಿಲ್ಲ. ಈ ಕೀರ್ತಿ ಸಾಧನೆ ಯಾರಿಗಾಗಿ? ಬರೀ ನನ್ನ ಉದ್ಧಾರ ಮಾಡಿಕೊಳ್ಳೋಕೆ ಹೋದ ದಾರೀಲಿ ಪಡೆದುಕೊಂಡದಕ್ಕಿಂತ ಕಳೆದುಕೊಂಡಿದ್ದೆಷ್ಟೋ?! ಮನಸ್ಸು ತರ್ಕ ಮಾಡಿತು.

‘ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಅಕ್ಕರದ ಬರಹದಲಿ ಮೊದಲಿಗನು ಯಾರು? ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ದಕ್ಕುವುದು ಜೆಸ ನಿನಗೆ ಮಂಕುತಿಮ್ಮ’. ಡಿವಿಜಿಯವರ ಈ ಕಗ್ಗದ ಅರ್ಥ ಮೊದಲಬಾರಿ ಅನುಭವಕ್ಕೆ ಬಂದಿತು. ಮೊಟ್ಟಮೊದಲು ಅನ್ನವನ್ನು ಕಂಡಿದವನನ್ನೇ ಈ ಜಗತ್ತು ನೆನಪಿಟ್ಟುಕೊಂಡಿಲ್ಲ! ಇನ್ನು ನಾನ್ಯಾರು? ಯಾರಿಗಾಗಿ ಈ ಪಯಣ? ಕೋಟಿ ಕೋಟಿ ದುಡಿದಿದ್ದರೂ ನಾಲಿಗೆಗೆ ಸಿಹಿ ಕಾಣುವ ಭಾಗ್ಯವಿಲ್ಲ, ಬದುಕಿನ ಸಂಜೆಯನ್ನು ತಲುಪಿದ ಜೀವಕ್ಕೆ ತಾನು ಒಂಟಿ ಅನಿಸಿದ್ದು ಸತ್ಯ.

ಯಾಂತ್ರಿಕವಾಗಿ ಕಾರಿನ ಕಡೆಗೆ ಕಾಲು ಎಳೆದುಕೊಂಡು ಹೊರಟ ವಿಶ್ವನಾಥರಿಗೆ ಬೆಳಗ್ಗೆ ಕಾರು ಗಲೀಜು ಮಾಡಿ ಸಿಟ್ಟಿಗೆಬ್ಬಿಸಿದ್ದ ಭೀಮಪ್ಪ ಈಗ ಹೊಸದಾಗಿ ಕಂಡ. ಜಗುಲಿಯ ಮೇಲೆ ಮಕ್ಕಳನ್ನು ಸುತ್ತುಗಟ್ಟಿಕೊಂಡು ಕೂತಿದ್ದವನನ್ನೇ ದಿಟ್ಟಿಸಿದ. ಯಾವ ಚಿಂತೆಯೂ ಇಲ್ಲದ ಭೀಮಪ್ಪನ ಮುಖಕ್ಕೂ ಪುಟ್ಟ ಮಗುವಿನ ಮುಖಕ್ಕೂ ಏನೂ ವ್ಯತ್ಯಾಸ ಕಾಣಲಿಲ್ಲ. ಭೀಮಜ್ಜ ಚೆಂದದ ಕತೆ ಹೇಳ್ತಾನೆ ಅಂತ ಅಕ್ಕಪಕ್ಕದ ಹುಡುಗರು ಬಂದು ಕೂತಿದ್ದರು. ‘ಒಂದೂರಲ್ಲಿ ಒಬ್ಬ ಮೀನುಗಾರನಿದ್ನಂತೆ. ಅವನ ಹತ್ರ ಪುಟ್ಟ ದೋಣಿ ಇತ್ತಂತೆ..’ ಆಂಗಿಕ ಅಭಿನಯದೊಂದಿಗೆ ಕತೆಯನ್ನು ವಿವರಿಸಲು ಶುರುಮಾಡಿದವನ ಕಣ್ಣಿನಲ್ಲಿ ಮಿಂಚು ಮೂಡಿತ್ತು. ಭೀಮಜ್ಜನ ಕತೆಗೆ ಮಕ್ಕಳು ಹೂಗುಟ್ಟಲು ಶುರುಮಾಡಿದರೆ, ಮಂತ್ರಮುಗ್ಧನಾದವನಂತೆ ವಿಶ್ವನಾಥ ವೀಕ್ಷಕರಲ್ಲಿ ಒಬ್ಬನಾದ.

‘… ನದಿ ದಾಟಲು ಬಂದ ಸಾಹುಕಾರನೊಬ್ಬನನ್ನು ಮೀನುಗಾರ ತನ್ನ ದೋಣಿಯಲ್ಲಿ ದಾಟಿಸಲು ಮುಂದಾದನಂತೆ. ನದಿಯಲ್ಲಿ ತುಂಬಾ ಮೀನುಗಳಿದುದ್ದನ್ನು ಗಮನಿಸಿದ ಸಾಹುಕಾರ’ ನೀನು ದಿನಕ್ಕೆ ಎಷ್ಟು ಮೀನು ಹಿಡಿತ್ಯಾ ಅಂತ ಕೇಳಿದ್ನಂತೆ. ನಾನು ಒಂದು ಬುಟ್ಟಿ ಹಿಡಿದು, ಅದನ್ನು ಮಾರುಕಟ್ಟೆಗೆ ಮಾರಿ ಬರುತ್ತೇನೆ ಅಂದ್ನಂತೆ. ಮಿಕ್ಕಿದ ಸಮಯದಲ್ಲಿ ಏನು ಮಾಡಿತ್ತೀಯ ಎಂದು ಕೇಳಿದಾಗ ನಾನು ನನ್ನ ಮಕ್ಕಳ ಜೊತೆ ಆಟವಾಡುತ್ತೇನೆ, ಹೆಂಡತಿಯ ಜೊತೆ ಕಾಲಕಳೆಯುತ್ತೇನೆ, ಬೇರೆ ಹುಡುಗರಿಗೆ ಮೀನು ಹಿಡಿಯುವುದನ್ನು ಹೇಳಿಕೊಡುತ್ತೇನೆ, ಹೊಟ್ಟೆ ತುಂಬಾ ಊಟ ಮಾಡಿ ಕಣ್ತುಂಬ ಮಲಗುತ್ತೇನೆ ಅಂದ.

ಸಾಹುಕಾರ ಅವನನ್ನು ದಡ್ಡ ಅಂತ ಬೈದು, ಇಷ್ಟೆಲ್ಲಾ ಮೀನುಗಳಿರೋ ಕೆರೆ ಹತ್ತಿರ ಗುಡಿಸಲು ಕಟ್ಟಿಕೊಂಡಿದ್ದೀಯಲ್ಲ, ನೀನು ಕಷ್ಟ ಪಟ್ಟು ಇಲ್ಲಿರೋ ಮೀನನ್ನೆಲ್ಲಾ ಹಿಡಿದು, ನೀನೇ ಒಂದು ಮೀನು ಮಾರುಕಟ್ಟೆ ಮಾಡು. ಅದರಿಂದ ಬಂದ ಲಾಭದಿಂದ ನಿನ್ನ ವ್ಯವಹಾರವನ್ನು ಈ ಹಳ್ಳಿಯಲ್ಲಿ ಮಾತ್ರವಲ್ಲ ಸುತ್ತ ಹತ್ತಾರು ಹಳ್ಳಿಗಳಿಗೆ ವಿಸ್ತರಿಸು ಅಂತ ಹೇಳಿದ. ಮೀನುಗಾರ ಅದನ್ನೆಲ್ಲಾ ಮಾಡೋದಕ್ಕೆ ಎಷ್ಟು ವರ್ಷವಾಗಬಹುದು ಅಂತ ಕೇಳಿದ್ದಕ್ಕೆ ಸಾಹುಕಾರ ಒಂದು ಹದಿನೈದು ಇಪ್ಪತ್ತು ವರ್ಷ. ಆಮೇಲೆ ನೀನು ನೆಮ್ಮದಿಯಿಂದಿರಬಹುದು ಅಂತ ಹೇಳಿದಾಗ ಮೀನುಗಾರ ಅಷ್ಟೆಲ್ಲಾ ಮಾಡೋ ಬದಲು, ಈಗಲೇ ನೆಮ್ಮದಿಯಾಗಿದ್ದೇನೆ ಅಂದನಂತೆ!

‘ಗೊತ್ತಾಯ್ತಾ ಮಕ್ಕಳಾ? ಜೀವನ ಅಂದ್ರೆ ಬರೀ ತಾನು ಉದ್ಧಾರ ಆಗೋದ್ರಲ್ಲಿರಲ್ಲ. ಮೀನುಗಾರ ಹೇಗೆ ಬೇರೆಯವರಿಗೂ ತನ್ನ ಕಸುಬು ಹೇಳಿಕೊಟ್ಟು ದೊಡ್ಡ ಮನುಷ್ಯನಾದ ಅಲ್ವಾ?’ ಅಜ್ಜನ ಕತೆ ಅರ್ಥವಾದ ದೊಡ್ಡ ಮಕ್ಕಳು ಚಪ್ಪಾಳೆ ತಟ್ಟಿದರೆ, ಚಿಕ್ಕಮಕ್ಕಳು ತಮ್ಮ ಅಕ್ಕ ಅಣ್ಣಂದಿರನ್ನು ಅನುಸರಿಸಿದರು. ವಿಶ್ವನಾಥನಿಗೆ ಮಾತ್ರ ಆ ಕತೆ ತನ್ನ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತೆ ಮಾಡಿತ್ತು. ಹಾಗಾದರೆ ನಾನು ದಡ್ಡನೇ? ಮೀನುಗಾರನ ಜೀವನಕ್ಕೂ ಭೀಮಪ್ಪನ ಜೀವನಕ್ಕೂ ತುಂಬಾ ಸಾಮ್ಯತೆ ಕಂಡಿತು.

‘ಸಾಕ್ ಹೋಗ್ರೋ ಮಕ್ಜಳಾ ಊಟದ್ ಸಮ್ಯ ಆಯ್ತು ಬನ್ನಿ’ ಭೀಮಪ್ಪನ ಹೆಂಡತಿ ಅವನು ಬರೋವರೆಗೂ ಕಾದೇ ಇದ್ದಳು. ‘ಬಲವಂತ ಮಾಡ್ದೇ ಇದ್ರೆ ಇವ್ರು ಮೈ ಮರ್ತು ಮಕ್ಕಳಿಗಿಂತಾ ಮಕ್ಕಳಾಗಿಬಿಡ್ತಾರೆ’ ಎಂದು ಹುಸಿಕೋಪ ತೋರಿಸಿದಳು. ಇಳೀವಯಸ್ಸಿನಲ್ಲೂ ಗಂಡನ ಬಗ್ಗೆ ಎಂತಹ ಕಾಳಜಿ, ಪ್ರೇಮ! ನಾನು ಯಾರಿಗೂ ಹೇಳದೇ ಮನೆಯಿಂದ ಹೊರಟಿದ್ದೆ. ನನ್ನ ಚಿಂತೆ ಯಾರಿಗಾದರೂ ಇದೆಯೇ? ಮಗ ಸೊಸೆ ಒಂದೇ ಮನೆಯಲ್ಲಿದ್ದರೂ ಅವರ ಜೊತೆ ಮಾತನಾಡಿ ಎಷ್ಟೋ ದಿನಗಳೇ ಕಳೆದಿದ್ದುವು, ನನ್ನ ಅನುಪಸ್ಥಿತಿ ಅವರ ಗಮನಕ್ಕೇ ಬಂದಿರೋದಿಲ್ಲ. ಇನ್ನು ಹೆಂಡತಿ ನನ್ನ ಪರ್ಸನಲ್ ಮ್ಯಾನೇಜರ್ ಹತ್ರ ನನ್ನ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವಳು. ಕಚೇರಿಯಲ್ಲಿರಬೇಕಾದ ಔಪಚಾರಿಕತೆಯನ್ನು ಬದುಕಿಗೂ ಅಳವಡಿಸಿಕೊಂಡಿರುವುದು ಈಗ ಗಮನಕ್ಕೆ ಬಂದಿತು.

ಬುದ್ಧಿಯು ತನ್ನ ಜೀವನದ ಪರ, ಹೃದಯವು ಭೀಮಪ್ಪನ ಜೀವನದ ಪರ ಅಡೆತಡೆಯಿಲ್ಲದೆ ನಡೆಸಿದ್ದ ಚರ್ಚಾಸ್ಪರ್ಧೆಗೆ ಲಗಾಮು ಹಾಕಲು ಫೋನ್ ಕಾಲೇ ಬರಬೇಕಾಯಿತು. ಮ್ಯಾನೇಜರ್ ನಂಬರ್ ಗುರುತಿಸಿ ವಿಶ್ವನಾಥ ಫೋನ್ ರಿಸೀವ್ ಮಾಡಿದಾಗ ‘ಸರ್ ಇನ್ನೂ ಹೊರಟಿಲ್ವಾ? ನಿಮ್ಮ ಅಪ್ಪಾಯಿಂಟ್ಮೆಂಟ್ ತಗೊಂಡೋರೆಲ್ಲಾ ಬೆಳಗ್ಗೆಯಿಂದ ಕಾಯ್ತಾ ಇದ್ದಾರೆ’. ವಿಶ್ವನಾಥ ಎಚ್ಚೆತ್ತುಕೊಂಡು ಕೂಡಲೇ ಕಾರು ತಿರುಗಿಸಿದರು. ಯಾವುದೋ ಮಾಯಾಲೋಕದಿಂದ ಹೊರಬಂದವರಂತೆ ‘ಅರೆ! ಎಂತೆಂಥವರೋ ನನಗಾಗಿ ಕಾದಿರುವಾಗ ನಾನೇಕೆ ಈ ಅಡಗೂಲಜ್ಜನ ಹಿಂದೆ ಬಿದ್ದೆ’! ಕರ್ತವ್ಯ ಪರಿಪಾಲಕನ ಕಾರು, ಬಂದ ದಾರಿಯ ಕಡೆಗೆ ವೇಗ ಹೆಚ್ಚಿಸಿಕೊಂಡಿತು.

‍ಲೇಖಕರು Admin

July 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. A.P. RADHAKRISHNA

    ತುಂಬಾ ಚೆನ್ನಾಗಿದೆ. ನಿಜ ಬದುಕು ಬೇರೆ, ಮಿಥ್ಯಾ ಪ್ರಪಂಚ ಬೇರೆ. ಕಿರು ತೆರೆಯ ನಟಿ ಕನ್ನಡ ಕಥಾ ಪ್ರಪಂಚದಲ್ಲಿ ಹೆಚ್ಚು ಮಿಂಚಲಿ – ಕನ್ನಡ ಸಾಹಿತ್ಯ ಪ್ರಪಂಚ ಇನ್ನಷ್ಟು ಸಮೃದ್ಧವಾಗಲು.

    ಪ್ರತಿಕ್ರಿಯೆ
  2. Iampriyapriyaa

    ಈ ಕಥೆ ನಿಜವಾಗಲೂ ತುಂಬ ಸೊಗಸಾಗಿದೆ ಅಕ್ಕ….
    ಮುಂದಿನ ಕಥೆಗಾಗಿ ಕಾಯುತ್ತಿರುವೆ….
    ಇಷ್ಟು ಒಳ್ಳೆ ಕಥೆಯನ್ನು ಬರೆದಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದ♥️

    ಪ್ರತಿಕ್ರಿಯೆ
    • Pooja Radhakrishna

      ನಮಸ್ತೆ ರಂಜನಾ ರಾಘವನ್ ಅವರೇ. ನಿಮ್ಮ ಪ್ರತಿಯೊಂದು ಕತೆಗಳು ಭಿನ್ನವಾಗಿದ್ದು ಅರ್ಥಗರ್ಭಿತವಾಗಿವೆ. ಹಾಗೂ ನಿಮ್ಮ ಬರಹ ಶೈಲಿ ಸಹ ತುಂಬಾ ಚೆನ್ನಾಗಿದೆ. ಒಂದೊಂದು ಪದವು ಆಡು ಭಾಷೆಯಲ್ಲಿ ಇರುವುದರಿಂದ ಕತೆಗಳು ಮನಸ್ಸಿಗೆ ಹತ್ತಿರವಾಗುತ್ತಿದೆ. ನಿಮ್ಮ ಈ ಕಾರ್ಯ ಹೀಗೆ ಸಾಗಲಿ. ನಮ್ಮ ಕನ್ನಡ ಕಂಪು ಎಲ್ಲೆಡೆಗೂ ಪಸರಿಸಲಿ.

      ಪ್ರತಿಕ್ರಿಯೆ
    • Veena Rajith

      Hello ,you are first heroin that am following in my life..I like u so much because of ur simplicity and the way you are.. Am very fond of novels and stories.. Your stories are so good and very near to today’s life style and situations… Eagerly waiting to read your new stories …thankq Ranjini ragavan

      ಪ್ರತಿಕ್ರಿಯೆ
  3. Pallavi M Hiremath

    Its really wonderful madam.
    Bheemajja na tarahada jeevana namma munde iddaru navu adannu anubhavisuvadilla. Ee oduttiruva jagattinalli navu race na kudure ante oduttiddeve. Namma family gu time kodade family goskara duditeve yarge beku idu anta ansiddantu nija.
    Adre matte dudile beku hogle beku ee oduttiruva jagattinalli navu odlebeku adru ee kathe eno ontara nam jeevana nenap madi kodtu akka. Its very nice and try story
    Super
    Ide tara baritiri all the best

    ಪ್ರತಿಕ್ರಿಯೆ
  4. Trupti hangargi

    ಕಥೆ ತುಂಬಾ ಚೆನ್ನಾಗಿತ್ತು, ನಿಜವಾಗ್ಲೂ ಜೀವನದ ಮಹತ್ವ ತಿಳಿಸಿದಿರಿ, ತುಂಬಾ ಧನ್ಯವಾದಗಳು. ನಿಜಾ ಅಲ್ವಾ ನಾವ್ ಅಂತೂ ಇತ್ತೀಚಿಗೆ ನಮ್ ನಮ್ಮ ಕುಟುಂಬದಸದಸ್ಯರ ಜೊತೆಗೆ ಕಾಲ ಕಳೆಯೊದೆ ಮರೆತುಬಿಟ್ಟಿದೆವೆ, ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತುಂಬಾ ನೆ ತೊಡಗಿರ್ತಾರೆ , ಮತ್ತೆ ಅದು ಒಂದೇಕೆಲ್ಸ ಅನ್ನೋತರ ಇರ್ತೀವಿ . ನಾವು ನಮ್ಮೊರ ಜೊತೆ ಕಾಲ ಕಾಲ್ದಾಗ್ಲೇ ಜೀವನದ ಬೆಲೆ ಗೊತ್ತಾಗುತ್ತೆ.

    ಪ್ರತಿಕ್ರಿಯೆ
    • Iampriyapriyaa

      ನಮಸ್ಕಾರ….
      ಎಂದಿನಂತೆ ಇಂದೂ ಕೂಡ ನೀವು ಬರೆದ ಕಥೆಯನ್ನು ಓದುವುದಕ್ಕೆ ಕಾಯ್ತ‌ ಇದೆ, ವೈರಾಗ್ಯದ ವ್ಯಾಲಿಡಿಟಿ ಎಂಬ ಹೆಸರೇ‌ ಒಂದು ಕೂತುಹಲಕರವಾಗಿತ್ತು,, ಪ್ರತಿ ಒಂದು ಕಥೆಯು‌ ವಿಭಿನ್ನತೆ ಇಂದ ಕೂಡಿರುತ್ತದೆ ಈ ಕಥೆಯನ್ನು ಬರೆದಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದ….♥️

      ಪ್ರತಿಕ್ರಿಯೆ
  5. Pooja Pooja

    Nim e Kannada kategalu nim spasta Kannada bashe nange tumba help madtide danyavadagalu

    ಪ್ರತಿಕ್ರಿಯೆ
  6. Iampriyapriyaa

    ನಮಸ್ಕಾರ….
    ಎಂದಿನಂತೆ ಇಂದೂ ಕೂಡ ನೀವು ಬರೆದ ಕಥೆಯನ್ನು ಓದುವುದಕ್ಕೆ ಕಾಯ್ತ‌ ಇದೆ, ವೈರಾಗ್ಯದ ವ್ಯಾಲಿಡಿಟಿ ಎಂಬ ಹೆಸರೇ‌ ಒಂದು ಕೂತುಹಲಕರವಾಗಿತ್ತು ಪ್ರತಿ ಒಂದು ಕಥೆಯು‌ ವಿಭಿನ್ನತೆ ಇಂದ ಕೂಡಿರುತ್ತದೆ,,
    ಈ ಕಥೆಯನ್ನು ಬರೆದಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದ….♥️

    ಪ್ರತಿಕ್ರಿಯೆ
  7. ನಾಗಶ್ರೀ

    ಶುರುವಿನಿಂದ ಇಲ್ಲಿಯವರೆಗೆ ಹತ್ತು ಕಥೆಗಳು ಅದರ ಮೂಲಕ ಜೀವನದ ವಿಭಿನ್ನ ಆಯಾಮಗಳನ್ನು ಇಂದಿನ ಸಮಾಜಕ್ಕನುಗುಣವಾಗಿ ನಿಮ್ಮದೇ ವಿನೂತನ ಶೈಲಿಯಲ್ಲಿ ಸರಳವಾಗಿ ಚಿತ್ರಿಸಿದ್ದೀರಿ ಹೀಗೆ ಮುಂದುವರೆದು ಜನ ಮನದಲ್ಲಿ ನಿಮ್ಮ ಕಥೆಗಳೊಂದಿಗೆ ಸದಾ ನಲೆಸಿರೆಂದು ಆಶಿಸುತ್ತೇನೆ.

    ಪ್ರತಿಕ್ರಿಯೆ
  8. Rajeshwari kamadhenu

    E kathe tumbane sogasagide . E kathe gante navu Namma bavishavanna rupisikoladralli Mattu Namma ondu belavanigeya kade gamanakodutta sambandagalige samayavanna kodudanne maretabidativi haage yava kai nammanna belasiruttu adanna mariyabaradendu tilasiddira …. E kathe inda tilidukondiruvadenandre doddammana savininda aguva honsala Mattu vishvantanavarige
    iruva javbadari enda tilididdu eneagali munde sagali e payana yambuvadu . Huttu anshchita savu kachita .

    ಪ್ರತಿಕ್ರಿಯೆ
  9. ಸಿರಿ ಸುಂದರಿ

    ಸ್ಮಶಾನ ವೈರಾಗ್ಯದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದಿರಿ. ಮೊನ್ನೆ ಕನ್ನಡತಿ ಸಂಚಿಕೆಯ ಕೊನೆಯಲ್ಲಿ ಸ್ಮಶಾನ ವೈರಾಗ್ಯದ ಬಗ್ಗೆ ಹೇಳಿದ್ರಿ….ಇವತ್ ಕತೆನೇ ಬರ್ದಿದೀರ ನನಗೂ ಸಹ ಅವಾಗ ಅವಾಗ ಸ್ಮಶಾನ ವೈರಾಗ್ಯ ಬಂದ್ಬಿಡುತ್ತೆ ಹಾಗಾಗಿ ಪ್ರತಿಲಿಪಿಯಲ್ಲಿ ಸಾವು ಅಂತ ಕವನ ಬರ್ದಿದ್ದೇನೆ… ಸಮಯವಿದ್ದರೆ ಓದಿ https://kannada.pratilipi.com/story/%E0%B2%B8%E0%B2%BE%E0%B2%B5%E0%B3%81-yezxah4pxjsk?utm_source=android&utm_campaign=content_share

    ಪ್ರತಿಕ್ರಿಯೆ
  10. Iampriyapriyaa

    ನಮಸ್ಕಾರ….
    ಎಂದಿನಂತೆ ಇಂದೂ ಕೂಡ ನೀವು ಬರೆದ ಕಥೆಯನ್ನು ಓದುವುದಕ್ಕೆ ಕಾಯ್ತ‌ ಇದೆ, ವೈರಾಗ್ಯದ ವ್ಯಾಲಿಡಿಟಿ ಎಂಬ ಹೆಸರೇ‌ ಒಂದು ಕೂತುಹಲಕರವಾಗಿತ್ತು ಪ್ರತಿ ಒಂದು ಕಥೆಯು‌ ವಿಭಿನ್ನತೆ ಇಂದ ಕೂಡಿರುತ್ತದೆ ಈ ಕಥೆಯನ್ನು ಬರೆದಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದ….♥️

    ಪ್ರತಿಕ್ರಿಯೆ
  11. ಪವಿತ್ರ. ಯಚ್ . ಜಿ.

    ಕತೆ ತುಂಬಾ ಚೆನ್ನಾಗಿದೆ ಮೇಡಮ್… ನನಗೆ ತುಂಬಾ ಇಷ್ಟವಾಯಿತು.! ನಿಮ್ಮ ಮುಂದಿನ ಕತೆಗಾಗಿ ಕಾಯುತ್ತಿರುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: