ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- Hungry Man

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಅಲ್ಲ, ಅದು ಭೂಮಿ ಮೇಲೆ ಆಗಷ್ಟೇ ಕಾಲ ಶುರುವಾದ ಕಾಲ. ದೇವರು ತನ್ನ ಸೃಷ್ಟಿಯ ಕೆಲಸವನ್ನು ಮಾಡಿ ಮುಗಿಸಿ ಸುಸ್ತಾಗಿ ಕೈ ಒರೆಸಿಕೊಂಡು ಕುಳಿತ. ಎಷ್ಟೆಲ್ಲಾ ವೈವಿಧ್ಯಮಯವಾದ ಜೀವರಾಶಿಗಳು! ಅಂದು ಸೂರ್ಯ ಮೊದಲ ಬಾರಿಗೆ ಭೂಮಿ ಮೇಲೆ ಬೆಳಕು ಚೆಲ್ಲುತ್ತಿದ್ದಂತೇ ನಾಲ್ಕು ಕಾಲಿನ ಪ್ರಾಣಿಗಳು, ಎರಡು ಕಾಲಿನ ಮನುಷ್ಯ, ಕಾಲೇ ಇಲ್ಲದ ಸರಿಸೃಪಗಳು, ಕಾಲುಗಳಿದ್ದರೂ ರೆಕ್ಕೆ ಬಡಿದು ಹಾರಾಡುವ ಹಕ್ಕಿಗಳು, ಕ್ರಿಮಿ, ಕೀಟ ಎಲ್ಲವೂ ಜೀವ ಪಡೆದುಕೊಂಡವು.

ನಿದ್ರೆಯಿಂದ ಎದ್ದಂತೇ ಎಲ್ಲಾರೂ ಕಣ್ಣು ಬಿಟ್ಟುನೋಡಿದಾಗ ಆಶ್ಚರ್ಯ! ಅರೆರೇ.. ಏನಿದು ಅದ್ಭುತ.. ಯಾರು ನಾವೆಲ್ಲಾ? ಭೂಮಿಗೇಕೆ ಬಂದೆವು ಅಂತ ಮಾತನಾಡಿಕೊಂಡವು. ಪ್ರಪಂಚದಲ್ಲಿ ಒಬ್ಬನೇ ಕೂತು ಬೇಸರವಾಗಿದ್ದ ದೇವರಿಗೆ ಅವರ ಆಟಗಳನ್ನು ನೋಡೋದೇ ಸಂಭ್ರಮವೆನಿಸಿಬಿಟ್ಟಿತ್ತು.

ಸುತ್ತಲೂ ಹಸಿರು ಹೊದಿಸಿದ ಬೆಟ್ಟ ಗುಡ್ಡ, ಸುವಾಸನೆ ಭರಿತ ಹೂಗಿಡಗಳು, ನೀಲಿ ಆಗಸದಲ್ಲಿ ಕಣ್ಣಿಗೆ ಹಬ್ಬದಂತೆ ಕಾಣೋ ಕಾಮನಬಿಲ್ಲು ಎಲ್ಲವನ್ನೂ ನೋಡಿ ಪ್ರಾಣಿಗಳು, ನಾವೆಲ್ಲರೂ ಸಂತೋಷವಾಗಿರಲೆಂದು ದೇವರು ನಮ್ಮನ್ನು ಭೂಲೋಕಕ್ಕೆ ತಂದಿದ್ದಾನೆ. ಇನ್ನು ಮುಂದೆ ನಮಗೆ ಇವೆಲ್ಲವನ್ನೂ ಸವಿಯುತ್ತಾ ಕೂರುವುದೇ ಕೆಲಸ ಎಂದು ಹೇಳಿದವು. ಅಂದಿನಿಂದ ಎಲ್ಲಾ ಜೀವರಾಶಿಗಳು ಒಟ್ಟಾಗಿ ಕುಣಿದಾಡುತ್ತಾ, ಕೇಕೆ ಹಾಕಿ ನಲಿಯುತ್ತಾ ಕಾಲ ಕಳೆಯುತ್ತಿದ್ದವು. ಎಲ್ಲರ ಒಳಿತಿಗಾಗಿ ದೇವರು ಕೊಟ್ಟ ಸಕಲಸೌಕರ್ಯಗಳನ್ನು ಮನುಷ್ಯ, ಪ್ರಾಣಿ, ಪಕ್ಷಿ ಎಂಬ ಬೇಧಭಾವವಿಲ್ಲದೇ ಸಮನಾಗಿ ಹಂಚಿಕೊಂಡು ಸಂತಸದಿಂದಿದ್ದರು. ಪ್ರೀತಿ ವಾತ್ಸಲ್ಯಗಳೇ ತುಂಬಿಹೋಗಿದ್ದ ಇಡೀ ಭೂಮಿ ಸ್ವರ್ಗವಾಗಿ ಮಾರ್ಪಾಟಾಗಿತ್ತು.

ದಿನಗಳು ಉರುಳಿದವು, ತಿಂಗಳುಗಳು ಉರುಳಿದವು, ಒಂದೆರಡು ವರ್ಷಗಳೂ ಉರುಳಿದವು. ಸೂರ್ಯ ಚಂದಿರರು ಭೂಮಿಗೆ ದಿನ ನಿತ್ಯವೂ ಶಿಸ್ತಾಗಿ ಬಂದು ಸರದಿಯಲ್ಲಿ ತಮ್ಮ ಬೆಳಕುಗಳನ್ನು ಹಾಸಿ, ಮಡಚಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ  ಮನುಷ್ಯನಿಗೆ, ‘ಈ ಭೂಮಿ ಮೇಲೆ ನಮಗೆ ಹೀಗೆ ಕುಣಿದು ಕುಪ್ಪಳಿಸಿಕೊಂಡಿರುವುದಷ್ಟೇ ಕೆಲಸವೇ?’ ಅನ್ನೋ ಯೋಚನೆ ಶುರುವಾಯಿತು.

ಬರೀ ಹಾಡು, ಹರಟೆ, ಕುಣಿತ ಅವನಿಗೆ ಬೇಸರ ತಂದಿತ್ತು. ಬೇರೆಲ್ಲಾ ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಭೆ ಸೇರಿಸಿ, ತನ್ನ ವಿಚಾರವನ್ನು ಮಂಡಿಸಿದ. ‘ನಾವು ಈ ಭೂಮಿಗೆ ಬಂದಿರೋ ಕಾರಣವೇನು? ಹೀಗೆ ಸಮಯ ಕಳೆಯುತ್ತಾ ಇರೋದಕ್ಕೆ ಬೇಸರವಾಗುತ್ತೆ. ದೇವರಿಗೆ ಹೇಳಿ ಏನಾದರೂ ಕೆಲಸ ಕೊಡುವಂತೆ ಕೇಳಿಕೊಳ್ಳೋಣ’. ಉಳಿದವರು ನಮಗೆ ಈ ಕೊರತೆ ಇದೆಯೋ ಇಲ್ಲವೋ ಅಂತ ಯೋಚಿಸುವ ಮೊದಲೇ ಮನುಷ್ಯ ಎಲ್ಲರನ್ನೂ ಒಪ್ಪಿಸಿಬಿಟ್ಟಿದ್ದ.

ಬೇರೆಲ್ಲಾ ಜೀವಿಗಳು ಓಡುವುದು, ಈಜುವುದು, ಹಾರುವುದರಲ್ಲಿ ಸಮಯ ಕಳೆದು ತಮ್ಮ ದೇಹಗಳನ್ನು ಬಲಿಷ್ಟವಾಗಿಸಿಕೊಳ್ಳುತ್ತಿದ್ದರೆ, ಮನುಷ್ಯ ಒಂದೇ ಕಡೆ ಕೂತು ಯೋಚಿಸುತ್ತಾ ದೇಹದ ಅತಿ ಮೃದು ಭಾಗವಾದ ಮೆದುಳನ್ನೇ ಕತ್ತಿಯಂತೆ ಚೂಪು ಮಾಡಿಕೊಳ್ಳತೊಡಗಿದ. ಬುದ್ಧಿಯನ್ನು ಸಾಣೆ ಹಿಡಿದ ಮನುಷ್ಯನ ಮೆದುಳಿಗೆ ಹೆಚ್ಚೆಚ್ಚು ಉಪಾಯ ಹೊಳೆಯುತ್ತಾ ಹೋಯಿತು.

ಸಮಯ ಕಳೆಯಲು ದಾರಿ ಹುಡುಕುತ್ತಿದ್ದ ಮನುಷ್ಯ, ಇತರರಿಗೆ ಹೇಳಿದ. ‘ನಾವು ನಮ್ಮ ಸೃಷ್ಟಿಕರ್ತನನ್ನು ಹಾಗೆ ಬಾಯಿ ಮಾತಿನಲ್ಲಿ ಕರೆದರೆ ಸಾಕೇ? ಅವನಿಗೆ ಆತಿಥ್ಯ ಮಾಡಬೇಕು’. ಆ ಮಾತು ಯಾವುಕ್ಕೂ ಅರ್ಥವಾಗದೇ ಪಿಳಿಪಿಳಿ ಎಂದು ಕಣ್ಣು ಮಿಟುಕಿಸಿದವು. ಇನ್ನಷ್ಟು ಮತ್ತಷ್ಟು ಅಂತ ಮೆದುಳಿಗೆ ಮೇವು ಕೊಟ್ಟ ಮನುಷ್ಯನಿಗೆ ದೇವರನ್ನು ಭೂಮಿಗೆ ಕರೆಸಲು ಆಮಂತ್ರಣ ಪತ್ರ ತಯಾರು ಮಾಡಬೇಕೆನಿಸಿತು. ಪತ್ರ ತಯಾರಿಸುವುದು ಹೇಗೆ? ಬುದ್ಧಿ ಅದಕ್ಕೂ ಉತ್ತರ ಹುಡುಕಿತು.

ಮೊದಲ ಬಾರಿಗೆ ತನ್ನ ಯೋಜನೆಗಾಗಿ ಒಂದು ತಾಳೆ ಗರಿಯನ್ನು ಕಿತ್ತು, ಆ ಮರಕ್ಕೆ ನೋವು ಮಾಡಿದ. ಅದು ಅಳೋದಕ್ಕೆ ಶುರುಮಾಡಿತು. ‘ಅಯ್ಯೋ ತಾಳೇ ಮರದ ಕಣ್ಣಲ್ಲಿ ನೀರುಬರುತ್ತಿದೆ! ಎಲ್ಲರೂ ಬನ್ನಿ’ ತಾಳೆ ಮರದ ಮೇಲೆ ಗೂಡು ಕಟ್ಟಿದ್ದ ಪಕ್ಷಿ ಗಾಬರಿಯಿಂದ ಕೂಗಿತು. ಅಂದು ಭೂಮಿಯ ಮೇಲೆ ಮೊದಲ ಕಣ್ಣೀರ ಹನಿ ಬಿದ್ದಿತ್ತು.ತಾಳೆಗರಿಗೆ ನೋವು ಮಾಡಿದ ಕಾರಣ ಗಿಡ ಮರಗಳ್ಯಾವೂ ಮನುಷ್ಯನ ಯೋಜನೆಗೆ ಕೈಗೂಡಿಸಲಿಲ್ಲ. ಆದರೆ ಮನುಷ್ಯ ತನ್ನ ಪ್ರಯತ್ನವನ್ನು ಕೈ ಬಿಡಲಿಲ್ಲ.

ದೇವರಿಗೆ ಬರೆದ ಪತ್ರ ತಲುಪಿತು. ಆ ಆಮಂತ್ರಣ ಪತ್ರದಲ್ಲಿ, ‘ದೇವರೇ ನೀನು ನಮ್ಮನ್ನು ಈ ಸುಂದರವಾದ ಭೂಮಿಯಲ್ಲಿ ಸೃಷ್ಟಿಸಿದ್ದೀಯ, ನಿನಗೆ ನಮನಗಳು. ಆದರೆ ಈ ಭೂಮಿಯಲ್ಲಿ ನಾವು ಮಾಡುವುದಾದರೂ ಏನು ಎಂದು ತಿಳಿಯುತ್ತಿಲ್ಲ. ಹಾಗಾಗಿ ನಮಗೆಲ್ಲಾ ಒಂದು ಕೆಲಸ ಕೊಡು ಅದರಿಂದ ನಮಗೆ ಹೊತ್ತು ಹೋಗುತ್ತೆ, ನಮ್ಮ ಜೀವನಕ್ಕೊಂದು ಗುರಿ ಇರುತ್ತೆ’ ದೇವರಿಗೆ ಅದನ್ನು ಓದಿ ಆಶ್ಚರ್ಯವಾಗಿತು. ಅರೇ! ಇದೇನಿದು? ನಾನು ಯಾವ ಕಷ್ಟ, ನೋವು, ಜಗಳವಿಲ್ಲದ ಪ್ರಪಂಚವನ್ನು ಸೃಷ್ಟಿಮಾಡಿದರೂ ಇವರಿಗೆ ನೆಮ್ಮದಿ ಸಿಗುತ್ತಿಲ್ಲವಲ್ಲ ಎಂದು. ಎಲ್ಲರ ಕೋರಿಕೆಯಂತೆ ದೇವರು ಭೂಮಿಗೆ ಬಂದ.

ದೇವರನ್ನು ಮೊದಲ ಸಲ ಕಾಣುವುದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿತ್ತು. ಆ ಸ್ವಾಗತಕ್ಕಾಗಿ ಮನುಷ್ಯ ಅಂದು ಗಿಡಮರಗಳ ಜೊತೆ ಇನ್ನಷ್ಟು ಜಗಳಮಾಡಿಕೊಂಡ. ಅಲಂಕಾರಕ್ಕೆ ಬೇಕೆಂದು ಹೂಗಳನ್ನು ಕಿತ್ತುದರಿಂದ ಗಿಡ ಮರಗಳು ಮುನಿಸಿಕೊಂಡು ಇನ್ನೆಂದಿಗೂ ಮನುಷ್ಯನೊಂದಿಗೆ ಮಾತನಾಡುವುದಿಲ್ಲ ಎಂದು ಶಪಥ ಮಾಡಿಬಿಟ್ಟವು!

ಪ್ರಕಾಶಮಾನವಾದ ದೇವರು ಅಗಮಿಸಿದಾಗ ಎಲ್ಲರೂ ವಂದಿಸಿದರು. ಸೃಷ್ಟಿಕರ್ತನ ಮನರಂಜಿಸಲು ಕೋಗಿಲೆಯ ಜೊತೆ ಕಾಗೆಯೂ ಇಂಪಾಗಿ ಹಾಡಿತು, ನವಿಲು ಕೆಂಬೂತಗಳು ಸೇರಿ ನರ್ತನ ಮಾಡಿದವು, ಎಲ್ಲಾ ಜೀವರಾಶಿಗಳು ದೇವರ ಮುಂದೆ ಕಲಾಪ್ರದರ್ಶನ ಮಾಡುವುದರಲ್ಲಿ ತಮ್ಮ ಹುಟ್ಟಿನ ಸಾರ್ಥಕತೆ ಕಂಡುಕೊಂಡರೆ ಮನುಷ್ಯ ತನ್ನ ವಾಗ್ಚಾತುರ್ಯದಿಂದ ದೇವರನ್ನು ಹೊಗಳಿ, ಅವನ ಗುಣಗಳನ್ನು ಸ್ತುತಿಸಿ ಒಲಿಸಿಕೊಳ್ಳಲು ಮುಂದಾದ. ದೇವರು ಮುಗುಳ್ನಗುತ್ತಾ ಚಪ್ಪಾಳೆ ತಟ್ಟಿದ.

ನಂತರ ಮನುಷ್ಯ ಪೂರ್ವನಿಶ್ಚಯಿಸಿದ ಹಾಗೆ ಕೇಳಿದ. ದೇವರೇ, ನಮಗೆ ಈ ಭೂಮಿಯಲ್ಲಿ ಹಾಡಿ ಕುಣಿದು ಸಾಕಾಗಿದೆ ಏನಾದರು ಕೆಲಸ ಕೊಡಿ ಅಂತ. ಅದಕ್ಕುತ್ತರವಾಗಿ ದೇವರು ‘ಏನೇ ಕೆಲಸ ಮಾಡಿದರೂ ಅದು ಒಂದಲ್ಲಾ ಒಂದು ದಿನ ಮುಗಿಯಲೇಬೇಕು. ಆಗ ಪುನಃ ನನ್ನ ಹತ್ತಿರ ಕೆಲಸ ಕೇಳುತ್ತೀರ. ಅದೆಲ್ಲದರ ಬದಲು ಈ ಭೂಮಿಮೇಲೆ ನೀವು ಶಾಂತಿ ಪ್ರೇಮಗಳನ್ನು ಹಂಚುತ್ತಾ ಸಾಗಿರಿ’ ಎಂದು ನುಡಿದಾಗ ಅದು ಮನುಷ್ಯನ ಕಣ್ಣಿಗೆ ಸರಿಬೀಳಲಿಲ್ಲ. ‘ಏನಾದರೂ ಶಾಶ್ವತವಾದ ಕೆಲಸ ಕೊಟ್ಟುಬಿಡಿ, ಸೂರ್ಯ ಚಂದಿರರ ಹಾಗೆ’. ದಿಟ್ಟವಾಗಿ ನುಡಿದುಬಿಟ್ಟ. ಇತರೆ ಜೀವಿಗಳು, ತಮ್ಮೆಲ್ಲರಿಗಿಂತ ಬುದ್ದಿವಂತನಾದ ಮನುಷ್ಯ ಸರಿಯಾದುದ್ದನ್ನೆ ಕೇಳುತ್ತಾನೆ ಎಂದು ನಂಬಿ ಅವನ ಬೇಡಿಕೆಗೆ ತಲೆದೂಗಿದವು.

ದೇವರು ಕೊಂಚ ಸಮಯ ಯೋಚಿಸಿ ಹೇಳಿದ. ನಿಮಗೆಲ್ಲಾ ನಾನು ಭೂಮಿ ಮೇಲೆ ಬದುಕೋದಕ್ಕೆ ಒಂದು ಧ್ಯೇಯ ಕೊಡುತ್ತೇನೆ. ಅದರ ಹೆಸರು ‘ಹಸಿವು’. ಅದನ್ನು ಪಡೆಯೋದಕ್ಕೆ ನೀವೆಲ್ಲರೂ ನಾನು ಕೊಡುವ ಪಾನೀಯದಲ್ಲಿ ಒಂದೊಂದು ಗುಟುಕನ್ನು ಕುಡಿಯಿರಿ. ಅದದಿಂದ ನಿಮಗೆ ಹಸಿವು ಹುಟ್ಟಿ ಆಹಾರಕ್ಕಾಗಿ ಹುಡುಕಾಟ ಶುರುಮಾಡುತ್ತೀರಿ. ಆಗ ನಿಮಗೆ ಭೂಮಿಯಲ್ಲೇನು ಕೆಲಸವಿಲ್ಲ ಅನ್ನೋ ಬೇಸರವಿರುವುದಿಲ್ಲ. ಎಲ್ಲರೂ ಒಂದೊಂದೇ ಗುಟುಕು ಕುಡೀಬೇಕು ಅಂತ ಹೇಳಿ ದೇವರು ಕಣ್ಮರೆಯಾದನು.

ಮನುಷ್ಯ ಯೋಚಿಸಿದ. ಎಲ್ಲರಿಗೂ ಒಂದೇ ಸಮನಾಗಿ ಈ ಹಸಿವು ಯಾಕೆ ಸಿಗಬೇಕು? ಈ ಆಸೆಯನ್ನು ದೇವರ ಹತ್ತಿರ ಕೇಳಿಕೊಂಡವನೇ ಮೊದಲು ನಾನು. ಅಂದಮೇಲೆ ನನಗೆ ಇದರ ಮೇಲೆ ಎಲ್ಲರಿಗಿಂತಾ ಹೆಚ್ಚಿನ ಹಕ್ಕಿದೆ ಅನ್ನಿಸಿತು. ಮನುಷ್ಯ ತಾನೇ ಪಾನೀಯವನ್ನು ಹಂಚುತ್ತೇನೆ ಎಂದು ಮುಂದಾದ. ಕ್ರಿಮಿ, ಕೀಟ, ಪ್ರಾಣಿ ಎಲ್ಲ ಜೀವಿಗಳಿಗೂ ಕೊಟ್ಟು ಕೊನೆಗೆ ಅವನು ಗಟಗಟನೆ ಕುಡಿದುಬಿಟ್ಟ. ದೇವರು ಎಚ್ಚರಿಸಿದ್ದರೂ ಒಂದಕ್ಕಿಂತ ಹೆಚ್ಚು ಗುಟುಕು ಪಾನೀಯವನ್ನು ಕುಡಿದಿದ್ದರಿಂದ ಅವನ ಹಸಿವು ಹೊಟ್ಟೆಗಷ್ಟೇ ಅಲ್ಲದೆ ನೆತ್ತಿಗೇರಿಹೋಯಿತು.

ಒಂದು ಗುಟುಕು ಕುಡಿದ ಬೇರೆ ಜೀವಿಗೆಲ್ಲಾ ಆಹಾರದ ಹಸಿವು ಮಾತ್ರ ಹುಟ್ಟಿದರೆ, ದೇವರ ಮಾತನ್ನು ಮೀರಿದ ಮನುಷ್ಯನಿಗೆ ಅಧಿಕಾರದ ಹಸಿವು, ಹಣದ ಹಸಿವು, ಯೌವನದ ಹಸಿವು ಎಲ್ಲವೂ ಹುಟ್ಟಿ ಅವನು ಬಯಸಿದಂತೇ ಮಾಡುವುದಕ್ಕೆ ತುಂಬಾ ಮೈತುಂಬಾ ಕೆಲಸಗಳು ಆವರಿಸಿಕೊಂಡವು. ಪ್ರಾಣಿ ಪಕ್ಷಿಗಳ ಜೊತೆ ನಕ್ಕು ನಲಿದು ಸಂತೋಷಡುತ್ತಿದ್ದ ಮನುಷ್ಯ ಅವರಿಂದ ದೂರವಾಗಿ ತನ್ನದೇ ಲೋಕದಲ್ಲಿ ಕಳೆದುಹೋದ.

ಕೊನೆಯೇ ಇಲ್ಲದ ದಾರಿಯಲ್ಲಿ ಗೊತ್ತು ಗುರಿಯಿಲ್ಲದೆ ಓಡುತ್ತಿದ್ದ ಮನುಷ್ಯನನ್ನು ನೋಡಿ ಇತರ ಜೀವಿಗಳಿಗೆ ಮರುಕವುಂಟಾಯಿತು. ನಮ್ಮೊಂದಿಗೆ ನಮ್ಮಂತೆಯೇ ಇದ್ದ ಸ್ನೇಹಿತ ಈಗ ಯಾಕೋ ಬರೀ ದುಃಖ, ಕೋಪ, ದುರಾಸೆ, ಆತಂಕಗಳಲ್ಲಿ ಬಳಲಿಹೋಗುತ್ತಿದ್ದಾನಲ್ಲಾ ಎನಿಸಿತು. ತಮ್ಮ ಸ್ನೇಹಿತನನ್ನು ಈ ಕಷ್ಟ ಕಾರ್ಪಣ್ಯಗಳಿಂದ ದೂರ ಮಾಡೋದಕ್ಕೆ ಏನಾದರೂ ಪರಿಹಾರ ಹುಡುಕಬೇಕು ಎಂದು ಪ್ರಾಣಿಗಳು ಒಂದು ದಿನ ಮತ್ತೆ ದೇವರ ಮೊರೆ ಹೋದವು.

ದೇವರು ಮನುಷ್ಯನ ಸ್ಥಿತಿಯನ್ನು ಕೇಳಿ ನಕ್ಕು, ನಾನು ಬೇಡವೆಂದರೂ ಹೆಚ್ಚಾಗಿ ಕುಡಿದ ಪಾನೀಯ ತಂದ ಹಸಿವಿನಿಂದ ಹೀಗೆ ಆಡುತ್ತಿದ್ದಾನೆ. ಇಷ್ಟಾದರೂ ಮನುಷ್ಯ ನನ್ನ ಹತ್ತಿರ ಎಂದಿಗೂ ಹಸಿವನ್ನು ಹಿಂಪಡೆಕೊಂಡುಬಿಡು ಅಂತ ಕೇಳಿಕೊಂಡಿಲ್ಲ, ಬದಲಾಗಿ ಇನ್ನೂ ತನ್ನ ಹಸಿವನ್ನು ನೀಗಿಸಲು ಅದನ್ನು ಕೊಡು ಇದನ್ನು ಕೊಡು ಅಂತ ತನ್ನ ಪಟ್ಟಿಯನ್ನು ದೊಡ್ಡದೇ ಮಾಡಿಕೊಳ್ಳುತ್ತಿದ್ದಾನೆ. ಅವನಾಗೇ ಬಯಸಿದ ಭಾಗ್ಯವನ್ನು ಅವನೇ ತೊರೆದಾಗ ಮಾತ್ರ ಅವನಿಗೆ ಈ ಹಸಿವಿನಿಂದ ಮುಕ್ತಿ ಎಂದು ಹೇಳಿ ದೇವರು ಕಲ್ಲಂತೆ ಕುಳಿತುಬಿಟ್ಟ!

‍ಲೇಖಕರು Admin

August 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Iampriyapriyaa

    ತುಂಬ ಚೆಂದದ ಕಥೆ…. ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು♥

    ಪ್ರತಿಕ್ರಿಯೆ
  2. Manisha

    ಎಂತಹ ಅದ್ಭುತವಾದ ಯೋಚನಾ ಲಹರಿ .ನಿಮ್ಮ ಕಲ್ಪನೆಗೊಂದು salute ಕಣ್ರೀ .

    ಪ್ರತಿಕ್ರಿಯೆ
  3. Uday

    Hungry man..
    ಸೃಷ್ಟಿಯ ಉಗಮ ಹೇಗಾಯಿತು ಅನ್ನೋದು ತುಂಬಾ ಚನ್ನಾಗಿ ವರ್ಣನೆ ಮಾಡಿದ್ದಾರೆ

    ಪ್ರತಿಕ್ರಿಯೆ
  4. Narayana G

    ಅದ್ಭುತವಾದ, ಸುಂದರವಾದ ಕಲ್ಪನೆ . ಕಾಲ್ಪನಿಕವಾದರೂ ವಾಸ್ತವಿಕತೆಯನ್ನು ನೆನಪಿಸುತ್ತದೆ. ಮನುಷ್ಯನ ಎಡೆಬಿಡದ ಆಸೆ, ದುರಾಸೆ ಅವನನ್ನು ಪ್ರಕೃತಿಯಿಂದ ದೂರ ಸರಿಸಿದೆ. ಅದರ ಪರಿಣಾಮ ಈಗ ಅವನು ಅನುಭವಿಸುತ್ತಿದ್ದಾನೆ

    ಪ್ರತಿಕ್ರಿಯೆ
  5. Radha Patil

    ಕತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಇಂದಿನ ಕಾಲಕ್ಕೆ ಉದಾಹರಣೆ ಎಂಬಂತೆ ಸೊಗಸಾಗಿದೆ.ನನಗೆ ಓದುವುದರಲ್ಲಿ ಅಷ್ಟೇನೂ ಆಸಕ್ತಿ ಇಲ್ಲ ಆದರೇ ನಿಮ್ಮ ಪ್ರತಿ ಕತೆಯನ್ನು ಓದಲು ತುಂಬಾ ಕಾತುರದಿಂದ ಕಾಯುತ್ತಿರುತ್ತೇನೆ.. ನಿಮ್ಮ ಕತೆಗಳು ಹೀಗೆ ಮುಂದೆ ಸಾಗಲಿ ಎಂದು ಬಯಸುತ್ತೇನೆ..❤️

    ಪ್ರತಿಕ್ರಿಯೆ
  6. ಹರ್ಷಿತ. ಎಂ

    ನಮಸ್ತೆ ರಂಜನಿ ರಾಘವನ್ ಅವರೇ ನಾನು ಈ ಮೊದಲು ನೀವು ನಟಿಸುತ್ತಿದ್ದ ಕನ್ನಡತಿ ಧಾರಾವಾಹಿಯನ್ನು ನೋಡುತ್ತಿದೆ. ಇದು ನಾನು ಓದುತ್ತಿರುವ ನಿಮ್ಮ ಎರಡನೇಯ ಕಥೆ , ಇದರಿಂದ ನನಗೆ ನಿಮ್ಮ ಎಲ್ಲ ಕಥೆಗಳನ್ನು ಓದುವ ಮನಸ್ಸಾಗಿದೆ. ನಿಮ್ಮ ಕಥೆಗಳು ತುಂಬಾ ಸುಂದರ, ಸರಳ ಮತ್ತು ಸೊಗಸಾಗಿವೆ. ಈ ನಿಮ್ಮ ಕಥೆಗಳಿಗೆ ಮತ್ತು ನಿಮ್ಮ ಕನ್ನಡತಿ ಧಾರವಾಹಿಗೆ ನಾನು ಸದಾ ಅಭಿಮಾನಿ .

    ಪ್ರತಿಕ್ರಿಯೆ
  7. ಲಿಖಿತ ಟಿ ಎ

    ನಮಸ್ತೇ ರಂಜಿನಿ ಅಕ್ಕ… ನನ್ನ ಹೆಸರು ಲಿಖಿತ ಅಂತ ನೀವು ಅವಧಿ magazine ಅಲ್ಲಿ ಕಥೆ ಬರೀತಾ ಇರೋ ವಿಷಯ ನಿನ್ನೆ ತಾನೆ ಗೊತ್ತಾಯಿತು… ಹಾಗೆ ಒಂದೆರಡು ಕಥೆಗಳನ್ನು ಓದಿದೆ, ಕಥೆಗಳಂತು ತುಂಬ ಚೆನ್ನಾಗಿ ಮೂಡಿ ಬಂದಿದೆ… ಇವತ್ತಿನ ಕಥೆ ತುಂಬ ಚೆನ್ನಾಗಿ ಇದೆ… ಮನುಷ್ಯನ ಹಸಿವು ಯಾವತ್ತು ಮುಗಿಯದ ಕಥೆ, ಒಂದ್ ಕಳ್ಕೊಂಡ್ರೆ ಅದರ ಎರಡು ಪಟ್ಟು ಬೇಕು ಅಂತ ಬಯಸೋ ಹಸಿವು, ನೀವು ಹೇಳಿದ್ದು ನಿಜವಾಗಿಯು ಸತ್ಯ… ನಿಜಕ್ಕೂ ಕಥೆ ತುಂಬ ಇಷ್ಟ ಆಯ್ತು… ನಾನು ಕೂಡ ಸಣ್ಣ ಸಣ್ಣ ಕಥೆಗಳನ್ನು ಬರೀತಾ ಇದ್ದೆ.. ಇವಾಗ ಮತ್ತೆ ನಿಮ್ಮ್ ಥರ ಕಥೆ ಬರಿಯೋ ಆಸೆ ಆಗಿದೆ ಅಕ್ಕ… ಇದೇ ರೀತಿ ಕಥೆ ಬರೀತ ಇರಿ ಅಕ್ಕ….

    ಪ್ರತಿಕ್ರಿಯೆ
  8. Manasa Shambulingappa

    ನಿಮ್ಮ ಯೋಚನಾ ಲಹರಿ ಬಹಳ ಸೊಗಸಾಗಿದೆ. ಹೀಗೂ ಇದ್ದಿರಬಹುದೋ ಎಂಬಂತೆ ಭಾಸವಾಗುತ್ತಿದೆ. ಕಥೆ ಬಹಳ ಸೊಗಸಾಗಿ ಮೂಡಿಬಂದಿದೆ. ನಿಮ್ಮ ಕಥಾ ಲೇಖನವನ್ನು ಹೀಗೆಯೇ ಮುಂದುವರೆಸಿ. ಹಾಗೂ ಇದನ್ನು ಹೇಳಲೇ ಬೇಕು ನಾನು ನಿಮ್ಮ ಕನ್ನಡತಿ ಧಾರಾವಾಹಿಯ ದೊಡ್ಡ ಅಭಿಮಾನಿ. ನಿಮ್ಮೆಲ್ಲಾ ಯೋಜನೆಗಳಿಗೆ ಶುಭ ಉಂಟಾಗಲಿ ಎಂದು ಹಾರೈಸುತ್ತೇನೆ ❣️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: