ಖುಷಿ ಖುಷಿಯಾಗಿ ‘ಸೋನ ಪಾಪಡಿ’‌

ತಮ್ಮಣ್ಣ ಬೀಗಾರ

ರಾಜಶೇಖರ ಕುಕ್ಕುಂದ ಸೋನ ಪಾಪಡಿ ಹಿಡಿದುಕೊಂಡು ನಗುತ್ತ ನಿಂತಿದ್ದಾರೆ. ಸೋನ ಪಾಪಡಿ ಅಂದಮೇಲೆ ಕೇಳಬೇಕೇ? ಮಕ್ಕಳು ಮುತ್ತಿಗೆ ಹಾಕಿ ಚಪ್ಪರಿಸದೇ ಇರಲಾರರು. ಹೌದು ಮಕ್ಕಳಿಗೆ ರಂಜನೆಯ ತಿಳಿ ಹಾಸ್ಯ ಇಷ್ಟವೇ. ಅವರು ಮಂಗನ ಹಾಗೆ ಬಾಲ ತೂಗಿ (ಬಾಲ ಇಲ್ಲದಿದ್ದರೂ) ಕುಣಿಯತ್ತಾರೆ, ಕಪ್ಪೆಯ ಹಾಗೆ ಜಿಗಿಯುತ್ತ ದೊಪ್ಪನೆ ಬೀಳುತ್ತಾರೆ, ನೀರಿಲ್ಲದೆಯೇ ನೀರಿನಲ್ಲಿ ಮುಳುಗೆದ್ದು ಮೀನಿನ ಬಾಲ ಜಗ್ಗಿ ಆಟ ಆಡುತ್ತಾರೆ.

ಇಂಥಹ ಕಲ್ಪನೆಗಳೆಲ್ಲ ಮಕ್ಕಳಿಗೆ ಸಾಧ್ಯ. ಅವರ ಮುಂದೆ ನಗು ಉಕ್ಕಿಸುವ, ಖುಷಿಯಾಗಿಸಿ ರಂಜಿಸುವ ಪದ್ಯಗಳ ಕಟ್ಟನ್ನು ಇಟ್ಟರೆ ಗುಳಂನೆ ನುಂಗಿ ಕಣ್ಮುಚ್ಚಿ ಕಿವಿಯ ವರೆಗೂ ಬಾಯಿ ಅಗಲಿಸಿ ನಕ್ಕಾರು. ನನಗೆ ಹೀಗೆಲ್ಲ ನೆನಪಾದದ್ದು ‘ಸೋನ ಪಾಪಡಿ’ ಕೈಗೆತ್ತಿಕೊಂಡಾಗ. ಏನು ನೀವೂ ಸೋನಪಾಪಡಿ ತಿನ್ನುತ್ತ ಮಗುವಾಗಿ ಬಿಟ್ಟಿರಾ ಎಂದು ನೀವೂ ನಗಬಹುದು. ಹೌದು, ರಾಜಶೇಖರ ಕುಕ್ಕುಂದ ಅವರು ಬರೆದ ‘ಸೋನ ಪಾಪಡಿ’ ಎನ್ನುವ ಪದ್ಯಗಳ ಸಂಕಲನ ಓದಿದಾಗ ಹೀಗೆಲ್ಲ ಅನಿಸಿದ್ದು.

   ಕುಕ್ಕುಂದ ಅವರು ತಮ್ಮ ಬಾಲ್ಯದ ದಿನಗಳಿಂಲೇ ಬರೆಯುತ್ತಿದ್ದಾರೆ. ವೃತ್ತಿಯಲ್ಲಿ ಇಂಜನೀಯರ ಆದರೂ ಅವರು ಬಾಲ್ಯದ ಕಿಟಕಿ ತೆರೆದು ಬಾಲ್ಯಕ್ಕೆ ಜಿಗಿದು ಅಲ್ಲೆಲ್ಲ ಓಡಾಡಿ ಆಟ ಆಡಿ ಮಕ್ಕಳಿಗೆ ಖುಷಿ ಆಗುವುದನ್ನೇ ಆಯ್ದುಕೊಂಡು ಬರುತ್ತಾರೆ. ಹಾಗೂ ಅದನ್ನು ಮಕ್ಕಳ ಮುಂದೆ ಇಟ್ಟು ಅವರ ಖುಷಿಯನ್ನು ತನ್ನ ಖುಷಿಯಾಗಿಸಿಕೊಂಡು ಖುಷಿಯ ಸವಿಯನ್ನು ಸವಿಯುತ್ತ ಇನ್ನೊಮ್ಮೆ ಬಾಲ್ಯದ ಕಿಟಕಿ ತೆರೆಯಲು ನೋಡುತ್ತಿರುತ್ತಾರೆ.
    ರಾಜಶೇಖರ ಅವರ ಪ್ರಸ್ತುತ ಸಂಕಲನದಲ್ಲಿ ಇಪ್ಪತ್ತೈದು ಪದ್ಯಗಳಿವೆ. ಎಲ್ಲವೂ ಮಕ್ಕಳನ್ನು ಖುಷಿಗಾಗಿ ಕರೆಯುತ್ತವೆ.

ಲ್ಲ ಪದ್ಯಗಳಿಗೂ ಪ್ರತಿಭಾವಂತ ಕಲಾವಿಧ ಸಂತೋಷ ಸಸಿಹಿತ್ಲು ಅವರ ಚಿತ್ರಗಳು ಹರಡಿಕೊಂಡಿವೆ. ಈ ಚಿತ್ರಗಳು ಅತ್ಯಂತ ಆಕರ್ಷಕವಾಗಿದ್ದು ಚಿತ್ರಗಳೇ ಇನ್ನೊಂದು ಕಾವ್ಯಪುಸ್ತಕವಾದಂತೆನಿಸುತ್ತದೆ. ವಿನಯ ಸಾಯ ರಚಿಸಿದ ಮುಖಪುಟವೂ ಆಕರ್ಷಕವಾಗಿದೆ.

ಸೈಕಲ್ ಏರದೇ ಇರುವ ಮಕ್ಕಳು ಈಗ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಸೈಕಲ್ಲೂ ನಾನಾ ರೂಪಗಳೊಂದಿಗೆ ಮಕ್ಕಳ ಪ್ರೀತಿಯ ಸವಾರಿಯಾಗಿ, ಪರಿಸರ ಸ್ನೇಹಿಯಾಗಿ ಎಲ್ಲರ ಪ್ರೀತಿಗೆ ತೆರೆದುಕೊಂಡಿದೆ.  

‘ಪೆಟ್ರೋಲ ಕುಡಿಯೋದಿಲ್ಲ / ಹೊಗೆ ಉಗುಳೋದಿಲ್ಲ’ ಎಂದು ಪ್ರಾರಂಭ ಆಗುವ ಪದ್ಯ ‘ಪೋಲೀಸ್ ಹಿಡಿಯೋದಿಲ್ಲ /ಗಾಳಿ ಕುಡಿದೇ ಬದುಕುತ್ತೆ’ ಎಂದೆಲ್ಲ ಹೇಳುತ್ತ ‘ಸರ್ ಸರ್ ಓಡುತ್ತೆ’. ಊರೆಲ್ಲ ಸುತ್ತುವ ಸೈಕಲ್ ಮಕ್ಕಳನ್ನು ಕೂಡ್ರಿಸಿಕೊಂಡು ಪುಸ್ತಕದೊಳಗೆ ಓಡುವುದು ಮೊದಲನೆಯ ಪದ್ಯ. ‘ವೂಲನ್ ಸ್ವೆಟರು’ ಚಳಿಗೆ ಹೆದರುವುದು ‘ಪ್ರಿಡ್ಜಿನ ಕವರು’ ಸೆಕೆಗೆ ಬೆವರುವುದು ಎಲ್ಲ ‘ಎಂಥ ವಿಚಿತ್ರ’ ಪದ್ಯದಲ್ಲಿ ಇದೆ.

ಗೂಡು ಕಟ್ಟಿ
ಸಾಲು ಸಾಲು
ಮೋಡ ತೇಲಿ ಬರಲಿ
ಎನ್ನುವ ಪ್ರಾರಂಭವೇ ಸೊಗಸಾಗಿ ಬಂದಿದೆ ‘ಮೋಡ ತೇಲಿ ಬರಲಿ’ ಪದ್ಯದಲ್ಲಿ. ಮಳೆಯ ಸಂದರ್ಭ ಹೇಳುವ ಇದರಲ್ಲಿ ಬಸವನ ಹುಳು, ಕಪ್ಪೆ, ಬಾವಿ ಕೆರೆಗಳೆಲ್ಲ ಬಂದು ಮಳೆಯ ಸಂಗಡ ಕುಣಿದ ಹಾಗೆ ನಮಗೆ ಕಾಣುತ್ತದೆ.

‘ತಟ ಪಟ ತಟ / ತಟ ಪಟ ತಟ’ ಮಳೆಯ ತಾಳ ಪ್ರಕೃತಿಯನ್ನೇ ನೆನೆಸಿ ಕುಣಿಸುವಾಗ ಮಕ್ಕಳಿಗಾಗುವ ಹಿಗ್ಗು ಈ ಕವನದಲ್ಲಿ ಕಾಣಿಸಿಕೊಂಡು ಮಳೆಯಿಂದಾಗಿ ಶಾಲೆಗೆ ಸೂಟಿ ಸಿಗಲಿ ಎನ್ನುತ್ತ ಮಕ್ಕಳ ಆನಂದವನ್ನು ಹೆಚ್ಚಿಸಿದೆ. ಹೇನಿಗೆ ಔತಣ ಕೊಡಲು ಹೋಗಿ ಮರ್ಯಾದೆಯ ಪ್ರಶ್ನೆಯಿಂದಾಗಿ ತಲೆ ಕೊಟ್ಟು ಸಿಕ್ಕಿ ಹಾಕಿಕೊಂಡಿದ್ದು ‘ಔತಣ’ ಪದ್ಯದಲ್ಲಿ ಹಾಸ್ಯಮಯವಾಗಿ ಚಿತ್ರಿಸಿದರೆ… ಸೋನ ಪಾಪಡಿ ಪದ್ಯದಲ್ಲಿ ‘ಸೋನ ಪಾಪಡಿ ತಂದವರ್ಯಾರು’ ಎನ್ನುವ ಪ್ರಶ್ನೆಗೆ ಸಿಗುವ ಉತ್ತರ ಖುಷಿಯನ್ನೂ ಕುತೂಹಲವನ್ನೂ ಹೆಚ್ಚಿಸುವಂತಿದೆ.

‘ಚಿಕ್ಯಾ ಚಿಕ್ಯಾ ಎಲ್ಲ್ಹೋದಾ?’ ಪದ್ಯ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ತುಂಬಾ ಸಹಜವಾಗಿ, ಆಕರ್ಷಕವಾಗಿ ಬಂದಿದೆ.
‘ನೆಲುವಿನ ಮ್ಯಾಲಿನ್ ಹಾಲ್ಕುಡ್ದು
ಕಪ್ಪು ಬಸಿಯೆಲ್ಲಾ ಒಡ್ದು
ಗ್ವಾಡಿಗೆಲ್ಲಾ ರಾಡಿ ಬಡ್ದು
ಚಿಕ್ಯಾ ಚಿಕ್ಯಾ ಎಲ್ಲ್ಹೋದಾ?
ಎನ್ನುವ ಶುರುವಿನಲ್ಲೇ ಭಾಷೆಯ ಸೊಗಡು, ಪದಗಳ ಕುಣಿತ, ಒಗಟಾಗಿ ಹೇಳುವಿಕೆಯಿಂದ ಪದ್ಯ ಗಮನ ಸೆಳೆಯುತ್ತದೆ. ಏನೆಲ್ಲ ಕೀಟಲೆ ಮಾಡಿರುವ ಅವನು ಮನೆಗೆ ತಿರುಗಿ ಬರಲಿ… ಅವ್ವ ಅಪ್ಪನ ಕೈಗೆ ಸಿಗಲಿ… ಎಂದು ಹೇಳುವ ಮೂಲಕ ಪದ್ಯ ತುಂಟ ಮಕ್ಕಳಿಗೆ ಒಂದಿಷ್ಟು ಎಚ್ಚರ ನೀಡಿದೆ.

ಸ್ಕೂಲೇ ಇರಬಾರ್ದು, ಒದರ್ತಾ ಇದ್ರೆ, ಅಜ್ಜಿ ಮೊಮ್ಮಗ, ನಾನಲ್ಲ ನಾನಲ್ಲ, ಚಿಂಟೂ ಮಾಮ, ಗುಬ್ಬೀ ಗುಬ್ಬೀ ಮುಂತಾದ ಎಲ್ಲ ಪದ್ಯಗಳು ಜೊತೆಯಲ್ಲಿರುವ ಶಿಶು ಪ್ರಾಸಗಳೆಲ್ಲ ಮಕ್ಕಳ ಆನಂದವನ್ನು ಹೆಚ್ಚಿಸುತ್ತವೆ.

ಆಕರ್ಷಕ ಚಿತ್ರಗಳು, ಸುಂದರ ಮುಖ ಪುಟ ಹಾಗೂ ಅಷ್ಟೇ ಸುಂದರ ಪದ್ಯಗಳಿಂದಾಗಿ ರಾಜಶೇಖರ ಅವರ ಸೋನ ಪಾಪಡಿ ಮಕ್ಕಳ ಮತ್ತು ಹಿರಿಯರೆಲ್ಲರ ಖುಷಿ ಹೆಚ್ಚಿಸಿಯೇ ಹೆಚ್ಚಿಸುತ್ತವೆ. ಇಂಥಹ ಪುಸ್ತಕ ನೀಡಿದ ರಾಜಶೇಖರ ಕುಕ್ಕುಂದ ಅವರಿಗೆ ಅಭಿನಂದಿಸುತ್ತ ಕನ್ನಡದ ಮಕ್ಕಳಿಗೆ ಪುಸ್ತಕ ತಲುಪಿ ಸಂತಸ ಉಂಟುಮಾಡಲಿ ಎಂದು ಹಾರೈಸುತ್ತೇನೆ.

‍ಲೇಖಕರು Admin

October 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: