ಮಹಾಂತೇಶ ಪಾಟೀಲ
**
೧.
ಅವಳ ಉಲ್ಲಾಸದ ವಾಸನೆ
ಕುಡಿದ ಮುದುಕನೊಬ್ಬ
ಇಳಿಹೊತ್ತಿನಲ್ಲಿ ಸಲೂನ್ ಶಾಪಿನಿಂದ
ಹೊರಬರುವಾಗ ಥೇಟ್
ವಿರಾಟ್ ಕೊಹ್ಲಿಯ ಖದರು
೨.
ಅಜ್ಜಾ ಮೂವತ್ತು ವರ್ಷದ
ಮಧುಮೇಹಕ್ಕೇನು ಮುದ್ದು ? ಕೇಳಿದೆ
ಖಾಲಿ ಹೊಟ್ಟೆಯಲ್ಲಿ
ಅವಳ ನಗು ಕುಡಿಯುತ್ತೇನೆ
ಅವಳ ಚಿತ್ರದ ಬೆನ್ನಟ್ಟಿ ನಡೆಯುವೆ
ಉಪವಾಸದ ಮೊದಲು, ಊಟದ ನಂತರ
ಮಲಗುವ ಮೊದಲು
ಮೆಲುಕಾಡುವೆ ಅವಳ ಮರ್ಮರ.
ರಕ್ತದೊತ್ತಡಕ್ಕೇನು ಮಾಡುವೆ ಅಜ್ಜ:
ದೀರ್ಘವಾಗಿ ಒಳಗೆಳೆಯುವೆ
ಅವಳ ಉಸಿರ ವಾಸನೆ.
ಹೊರಗೆ ಬಿಡುವೆ
ನಿಡುಗಾಲದ ನಿಟ್ಟುಸಿರನು.
ಕುಡಿಯುವೆ, ತಿನ್ನುವೆ, ನುಂಗುವೆ..
ಜೀವದ ಜೀರ್ಣೋದ್ಧಾರಿಣಿಯ
ಅವಳ ಲವಲವಿಕೆಯ ಚಿಗುರು, ಮೊಗ್ಗು, ಹೂ, ಹಣ್ಣು, ಬೀಜಗಳ ಕಷಾಯವನು
ಭಾವ ಬೆಳೆದ ಅಮೃತಬಳ್ಳಿಯನು.
೩.
ಈ ಹುಡುಗರು
ಯಾಕಾದರೂ ಕುಡಿಯುತ್ತಾರೋ?
ಚಿಟ್ಟೆಗಳ ರಕ್ತ, ಪಾರಿವಾಳಗಳ ಜೀವ;
ಅವರ ಮೀಸಲು ಮೌನ,
ನಗು, ಉಲ್ಲಾಸ, ಒಲವುಗಳು
ಎದೆಯಲ್ಲಿ ಹೆಪ್ಪುಗಟ್ಟಲು ಬಿಟ್ಟು.






ಚಂದದ ಕವಿತೆ