ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ ಸಾ ಪಾ ಶತಮಾನೋತ್ಸವ ಧಾರವಾಡದಲ್ಲಿ ಆರಂಭ, ಮೈಸೂರಿನಲ್ಲಿ ಸಮಾರೋಪ

ವರದಿ ಮತ್ತು ಫೋಟೋ : ಶಿವು ಮೊರಿಗೇರಿ

80 ನೇ ಸಾಹಿತ್ಯ ಸಮ್ಮೇಳನದ ಕುರಿತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಇಂದು ಸುದ್ದಿಗೋಷ್ಠಿಯನ್ನು ನಡೆಸಿದರು.
’ಪರಿಷತ್ತನ್ನು ಮುಚ್ಚಲು ಹಾಲಂಬಿ ಯಾರು?’
ನೆನ್ನೆದಿನ ನಮ್ಮ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಚಂಪಾರವರು ’ಪರಿಷತ್ತನ್ನು ಮುಚ್ಚಲು ಹಾಲಂಬಿ ಯಾರು?’ ಎಂದು ಪ್ರಶ್ನೆಯನ್ನು ಎತ್ತಿದ್ದಾರೆ. ನಾನು ಪರಿಷತ್ತನ್ನು ಮುಚ್ಚುತ್ತೇನೆಂದು ಹೇಳಿಲ್ಲ. ಸರ್ಕಾರ, ಈ ಸಂಸ್ಥೆಗೆ ಸರಿಯಾದ ರೀತಿ ಅನುದಾನ ಕೊಡದೇ ಇದ್ರೆ ಬೀಗ ಹಾಕಿ, ಅಮರಣಾಂತ ಉಪವಾಸ ಕೂತ್ಕೋತೀನಿ ಎಂದು ಹೇಳಿದ್ದೇನೆ. ಅದನ್ನು ಚಂಪಾರವರು ತಿರುಚಿ ಮಾತನಾಡಿದ್ದನ್ನು ನಾನು ಖಂಡಿಸುತ್ತೇನೆ.ಬಹುಶಃ ಪೂರ್ವಾಗ್ರಹ ಪೀಡಿತರಾಗಿ ಅವರು ಮಾತನಾಡಿದ್ದಾರೆ ಎಂದುಕೊಳ್ಳುತ್ತೇನೆ.
’ಸಮ್ಮೇಳನಾಧ್ಯಕ್ಷರಲ್ಲಿ ಬೇಷರತ್ ಕ್ಷಮೆ’
ಈ ಬಾರಿಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣಕ್ಕಾದ ಅಡಚಣೆಗೆ ನಾನು ನೇರವಾಗಿ ಜವಾಬ್ದಾರನಲ್ಲದಿದ್ದರೂ ಕೂಡ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿ ನಾನು ಬೇಷರತ್ ಕ್ಷಮಾಪಣೆಯನ್ನು ಸಮ್ಮೇಳನಾಧ್ಯಕ್ಷರಲ್ಲಿ ಕೇಳುತ್ತೇನೆ. ಹಾಗೆಯೇ ಮುಂದಿನ ದಿನಗಳಲ್ಲಿ ಈ ಸಮ್ಮೇಳನಾಧ್ಯಕ್ಷರ ಭಾಷಣದ ಬಗ್ಗೆ ಸಾಕಷ್ಟು ಚಿಂತನೆಯನ್ನು ಮಾಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.
ಸಮ್ಮೇಳನದ ಯಾವುದೇ ಕಾರ್ಯಕ್ರಮಗಳು ವಿಳಂಬವಾಗಿ ಪ್ರಾರಂಭವಾಗುವುದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತೆಗೆದುಕೊಳ್ಳುವ ಹೆಚ್ಚಿನ ಸಮಯ ಕಾರಣವಾಗಿದ್ದು, ವಿಷಯ ವಸ್ತುಗಳನ್ನು ನೆರೆದವರಿಗೆ ಮನಮುಟ್ಟುವಂತೆ ತಿಳಿಸುವ ಜವಾಬ್ದಾರಿಯೂ ಅವರ ಮೇಲಿರುತ್ತದಾದ್ದರಿಂದ ಈ ರೀತಿ ಆಗುವುದು ಸಹಜ.

’101ನೇ ವರ್ಷವನ್ನು ಯಾರೂ ಸಂಭ್ರಮ ಮಾಡೊಲ್ಲ’
ಪರಿಷತ್ತಿನ ಶತಮಾನೋತ್ಸವಕ್ಕೆ ಅಧ್ಯಕ್ಷರು ಅವಸರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲಾ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಂಬಿ 1915 ರಂದು ಈ ಕನ್ನಡ ಸಾಹಿತ್ಯ ಪರಿಷತ್ ಜನ್ಮ ತಾಳಿದ್ದು, ಈ 2014-15 ನೇ ಸಾಲಿಗೆ ನೂರರ ಸಂಭ್ರಮದ ವರ್ಷವಾಗುತ್ತೆ. ಇದರಲ್ಲಿ ನಾನು ಅವಸರಿಸುವುದೇನಿದೆ ? ಮುಂದಿನ ವರ್ಷ ಅಂದರೆ 2015ಕ್ಕೆ 101 ವರ್ಷಗಳಾಗುತ್ತವೆ 101ನೇ ವರ್ಷವನ್ನು ಯಾರೂ ಸಂಭ್ರಮ ಮಾಡೊಲ್ಲ. 14-15 ನೇ ಸಾಲಿನಲ್ಲಿ ನಮಗೆ ಕಟ್ಟಡ ನಿರ್ಮಾಣಕ್ಕೆ ಅವಸರ ಮಾಡಿದ್ದೇನೆ. ಕನಿಷ್ಟ ನಾವು ಹೋಗುವಾಗ ಕಟ್ಟಡ ನಿರ್ಮಾಣ ಮಾಡಿ ಹೋಗಬೇಕು ತಾನೆ ? ಮುಖ್ಯಮಂತ್ರಿಗಳಿಗೆ ಯಾರೋ ಈ ಬಗ್ಗೆ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ.
’ನೂರರ ಸಂಭ್ರಮ ಧಾರವಾಡದಲ್ಲಿ’
ನೂರರ ಸಂಭ್ರಮವನ್ನು ಎಲ್ಲಿ ಆಯೋಜಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಇದಕ್ಕೆ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಧಾರವಾಡದಲ್ಲಿ ಉದ್ಘಾಟನೆಯನ್ನು ಮತ್ತು ಮೈಸೂರಿನಲ್ಲಿ ಸಮಾರೋಪವನ್ನು ಮಾಡಬೇಕು ಎಂದು ನಾನಂದುಕೊಂಡಿದ್ದೇನೆ. ಅದಕ್ಕೆ ಕಾರ್ಯಕಾರಿಣಿ ಸಭೆಯಿಂದ ಅನುಮೋದನೆ ಪಡೆಯುತ್ತೇವೆ.

’ಕಸ್ತೂರಿ ರಂಗನ್ ವರದಿ ಗೊಂದಲದ ಬಗ್ಗೆ…’
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಂಬಿಯವರು ತಮ್ಮ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲಿಕ್ಕಾಗಿಯೇ ಅವರು ಹಾಗೆ ಬಂದ ಹಾಗಿತ್ತು. ಇದು ಯಾರೂ ಕೂಡಾ ಮೆಚ್ಚುವಂಥಹ ಸಂಗತಿಯಲ್ಲ. ಒಂದು ವೇಳೆ ನಾ. ಡಿಸೋಜ ಅವರ ಮಾತುಗಳು ಅವರಿಗೆ ಅಪ್ರಿಯವಾಗಿದ್ದರೆ ಅವರ ಜೊತೆಯಲ್ಲಿ ವೈಯಕ್ತಿಕ ಸಮಾಲೋಚನೆ ಮಾಡಬಹುದಿತ್ತು. ಆ ರೀತಿ ಗುಂಪಾಗಿ ಬಂದು ಒತ್ತಾಯಿಸಬಾರದಿತ್ತು. ‘ನಾನು ಕಸ್ತೂರಿ ರಂಗನ್ ವರದಿ ಜಾರಿಗೆ ಬರಲಿ ಅಂತ ಹೇಳ್ತಾ ಇಲ್ಲ ಪರಿಸರವಾದಿಯಾಗಿ ಮಾತಾಡ್ತಾಯಿದೇನೆ’ ಎಂದು ನಾ. ಡಿಸೋಜಾ ಅವರು ಸಂವಾದದಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
’ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಯಾಕೆ..?’
ಮುಂದಿನ ಸಮ್ಮೇಳನವನ್ನು ಹಾವೇರಿಯಲ್ಲಿ ಆಚರಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಹಾವೇರಿ ಸಮ್ಮೇಳನ ವಿಶಿಷ್ಟ ಯಾಕೆ ಅಂದ್ರೆ 100 ವರ್ಷ ತುಂಬಲು ಬಂದಿರುವ ಸಂದರ್ಭದಲ್ಲಿ ಹಾವೇರಿಯವರು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಬೇಡಿಕೆಯನ್ನು ಇಡ್ತಾಯಿದ್ರು. ಹೊಸ ಜಿಲ್ಲೆ ಕೇವಲ 16 ವರ್ಷಗಳ ಹಿಂದೆ ಪ್ರಾರಂಭವಾದ ಜಿಲ್ಲೆ ಸಾಕಷ್ಟು ಜನ ಸಾಹಿತಿಗಳು ಹುಟ್ಟಿದಂಥಾ ಜಿಲ್ಲೆ.  ಅಲ್ಲಿನ ಜಿಲ್ಲಾಧ್ಯಕ್ಷರು ಮತ್ತು ಸಂಸದರು ಎಲ್ಲರೂ ಸೇರಿ ಮುಂದಿನ ಸಲ ನಮಗೆ ಅವಕಾಶ ಕೊಡಿ ಅಂತ ಕೇಳಿದ್ದರಿಂದ ಮತ್ತು ಹಾವೇರಿ ಉತ್ತರ ಕನ್ನಡದ ದ್ವಾರ ಜಿಲ್ಲೆಯಾದ ಕಾರಣಕ್ಕಾಗಿಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಲಿಕ್ಕೋಸ್ಕರ ಹಾವೇರಿ ಎಲ್ಲರ ಆಯ್ಕೆಯಾಗಿ ಸಮ್ಮತವಾಯ್ತು.
ಹಾಗೆ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ಈ ಬಾರಿಯ ಸಮ್ಮೇಳನದ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರ ಹೆಂಡತಿಯನ್ನು ಯಾರೂ ರಥದಿಂದ ಕೆಳಗಡೆ ಇಳಿಸಿಲ್ಲ. ನಾನು ಜನರ ಒತ್ತಾಯಕ್ಕಾಗಿ ರಥವನ್ನು ಹತ್ತಿದ ನಂತರ ತಕ್ಷಣ ಕೆಳಗಿಳಿದಿದ್ದೇನೆ. ನಾವು ರಥವನ್ನು ಎಳೆಯುವವರೆ ಹೊರತು ರಥವನ್ನು ಹತ್ತುವವರಲ್ಲ ಆ ಕಾರಣದಿಂದಾಗಿ ನಾನು ರಥವನ್ನು ಇಳಿದು ಒಂದುವರೆ ಕಿಲೋಮೀಟರಿನಷ್ಟು ದೂರ ರಥದ ಮುಂದೆ ನಡೆದಿದ್ದೇನೆ. ನಂತರ ನಾ.ಡಿಸೋಜ ಅವರ ಪತ್ನಿಯವರನ್ನು ಮನವೊಲಿಸಿ ಮತ್ತೆ ರಥದಲ್ಲಿ ಕೂಡಿಸಿದ್ದೇವೆ ಎಂದ ಅವರು ಹಾವೇರಿಯೊಳಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕೇವಲ ಸಮ್ಮೇಳನಾಧ್ಯಕ್ಷರನ್ನು ಮಾತ್ರ ಕೂಡಿಸುವುದು ಸೂಕ್ತ ಹಾಗಾಗಿ ಒಂದೇ ಒಂದು ಆಸನ ಇಡುವಂತೆ ಅಲ್ಲಿನ ಜಿಲ್ಲಾಧ್ಯಕ್ಷರಿಗೆ ತಿಳಿಸುತ್ತೇವೆ.
ಈ ಸಮ್ಮೇಳನದಲ್ಲಿ ಗೊಂದಲ ಹಾಗೂ ಅಸಮಧಾನಕ್ಕೆ ಕಾರಣವಾಗಿದ್ದ ಒ.ಒ.ಡಿ. ನೀಡುವ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಂಬಿ ಒ.ಒ.ಡಿ. ಪ್ರಮಾಣ ಪತ್ರವನ್ನು ಯಾವುದೇ ಸಮ್ಮೇಳನದ ಕೊನೆಯ ದಿನ ಮಾತ್ರ ನೀಡುವುದು, ಆದರೆ ಅದನ್ನು ಈ ಸಮ್ಮೇಳನದಲ್ಲಿ ಮೊದಲನೆ ದಿನೇ ಅಪೇಕ್ಷಿಸಿದ್ದರಿಂದ ಹೀಗಾಯ್ತು ಅಲ್ಲದೆ 25000 ಇಷ್ಯುಗಳಾಗಿದ್ದು ನೊಂದಣಿಯಾದದ್ದು ಮಾತ್ರ ಕೇವಲ 10,000 ಮಾತ್ರ ಎಂದು ತಿಳಿಸಿದರು.

‍ಲೇಖಕರು G

9 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading