ಕರೆಂಟು ಕಳೆದುಕೊಂಡ ಮನೆ ಮತ್ತು ಅತ್ತು ಹಗುರಾಗುವ ಮನಸುಗಳು.

ವಿಜಯ್ ಹೂಗಾರ್
ಒಂದು ಅದ್ಭುತ ಕೌಟುಂಬಿಕ ಕಥೆ, ಊರು ಕೇರಿ ಜಾತ್ರೆಯ ರಾತ್ರಿ, ಆಗಷ್ಟೇ ಹೊರದೇಶದಿಂದ ಬಂದು ತೆರೆದಿಟ್ಟ ಅಣ್ಣನ ಸೂಟಕೇಸು, ಧುತ್ತನೆ ಮನೆ ಮಂದಿಗೆ ಎದುರಾಗುವ ಕಂಟಕಗಳು ಹೇಗೆ ಇಡೀ ಮನೆಯ ಸದಸ್ಯರಿಗೆ ಒಗ್ಗಟ್ಟಾಗಿರುವಂತೆ ಉದ್ದೀಪಿಸುತ್ತದೆಯೋ? ಹಾಗೆಯೇ ಲೋಡ್ ಶೆಡ್ಡಿಂಗಿನ ನೆಪಕ್ಕಾದರೂ ಅರ್ಧ ಗಂಟೆ ಕರೆಂಟು ಕಳೆದುಕೊಂಡ ಮನೆಯೂ ಎಲ್ಲರ ಹೆಡೆ ಮುರಿ ಕಟ್ಟಿ ಇಡೀ ಕುಟುಂಬದ ಒಳಬಾಳಿಗೆ ಜೀವ ಕೊಡಲು ಹಪಹಪಿಸುತ್ತದೆ.
ಈ ಕರೆಂಟು ಮಾಯಾವಾಗುವದರಲ್ಲಿ ಒಂದು ಅತ್ಯಂತ ಭಾವುಕ ಮತ್ತು ಕೌಟುಂಬಿಕ ಪ್ರಕ್ರಿಯೆಯೇ ಅಡಗಿದೆ. ಮನೆಯಲ್ಲಿಯೇ ಗೋಡೆಗಳ ಕಟ್ಟಿಕೊಂಡು ತಬ್ಬಲಿಗಳಂತೆ ಅಲೆಯುವ ಅತೃಪ್ತ ಜೀವಿಗಳಿಗೆ ಮಮತೆಯ ಸ್ಪರ್ಶ ಸಿಗುವುದು ಈ ಅಮೃತ ಘಳಿಗೆಯಲ್ಲೇ. ಮನೆಯವರ ಆತ್ಮದ ಸೆಳಕುಗಳು ಸಂಭವಿಸಿ ಪಟ್ಟಂತೆ ಮಾಯವಾಗುವುದು ಕಂಡರೆ ನೀವು ಅದೃಷ್ಟವಂತರು.
ಕಳೆದುಕೊಂಡವರು ಪಡೆದುಕೊಂಡವರು ಒಬ್ಬರಿಗೊಬ್ಬರು ಪಕ್ಕದಲ್ಲೇ ಇದ್ದರು ಕಣ್ಣಿಗೆ ಕಾಣುವದಿಲ್ಲ ಈ ಕತ್ತಲಲ್ಲಿ. ಈ ಕತ್ತಲೆಯಲ್ಲಿ ಅದೆಷ್ಟು ಕಷ್ಟಗಳು ನೀಗಿದಾವೋ. ಅದೆಷ್ಟು ಕನಸುಗಳು ಬೆಳಗಿದಾವೋ. ತಳಮಳಗಳು, ಬೇನೆಗಳು ಎಲ್ಲ ಕಳಚಿಟ್ಟು ಹಗುರಾಗುವ ದಿವ್ಯ ಸಮಯ ಅದು. ಈ ಕತ್ತಲಲ್ಲಿ ಕಣ್ಣೀರು ಕಾಣಿಸುವದೇ ಇಲ್ಲ.

ಆಧುನಿಕತೆಯ ಸರಭರದಲ್ಲಿ ಕರಗಿಹೋದವೇ ಶುದ್ಧ ಕೌಟುಂಬಿಕ ಸಲ್ಲಾಪಗಳು? ಮನೆಯಲ್ಲೀಗ ಎಷ್ಟು ಮಂದಿ, ಯಾರು ಯಾವಾಗ ಬರುತ್ತಾರೆ, ಮೊಬೈಲು ಹಿಡಿದು ಮತ್ತೆಲ್ಲಿ ಮರೆಯಾಗುತ್ತಾರೆ? ಒಟ್ಟಿಗೆ ಕೂತು ಉಂಡಿದ್ದು ಎಂದು? ಒಟ್ಟಿಗೆ ಕೂತು ನಕ್ಕಿದ್ದು ಎಂದು? ಒಟ್ಟಿಗೆ ಕೂತು ಕಥೆ ಕೇಳಿದ್ದು ಎಂದು? ಇದೆಲ್ಲ ನೋಡಲು ಅವರಿರಬೇಕಿತ್ತು ಎಂದು ಅಜ್ಜಿ ಮುದ್ದು ಮೊಮ್ಮಗನನ್ನು ಗಲ್ಲ ಸವರಿದ್ದು ಯಾವ ಜನ್ಮದಲ್ಲಿ? ನಮ್ಮ ರಮೇಶನಿಗೆ ಯಾವಾಗಲೂ ಭೇದಿಯೇ ಎಂದಾಗ ಫಳ್ಳಂತೆ ನಕ್ಕ ಸ್ನಾಯುಗಳು ಇದೀಗ ಶತಮಾನದಿಂದ ಕಾಯುತ್ತಿವೆ ಅಂಥದ್ದೇ ವಿಸ್ಮಯ ಇನ್ನೊಮ್ಮೆ ಸಂಭವಿಸಲು.
ನರುಗೆಂಪು ದೀಪದ ಬೆಳಕಲ್ಲಿ ಮನೆ ಮಂದಿಯೆಲ್ಲ ಉಂಡು ಪಕ್ಕ ಸರಿದಾಗ ಅಜ್ಜಿಗೆ ಹೊಕ್ಕುವ ಪ್ರೇರಣೆಯಾದ್ರು ಯಾವುದು? ಆ ಪ್ರೇರಣೆಗೆ ಮೂಲ ಧಾತು ಯಾವುದು? ಕೈಯಲ್ಲಿ ಮೊಬೈಲು ಹಿಡಿದು ಇಂಟರ್ನೆಟ್ಟು ವೈಫೈ ಅಂತ ಪುರ್ ಅಂತ ಹಾರಿಹೋಗುವ ನಮಗೆ ಒಂದೆಡೆ ಗುಡ್ಡೆಹಾಕಿ ನೇಯ್ದ ಕಥೆಯಾದ್ರು ಯಾವುದು? ದಿನನಿತ್ಯ ಸಿನಿಮಾ ಕಥೆ ನೋಡುವ ನಾವು ನಮ್ಮವರ ಕೆಥೆಯೇ ಕೇಳಿಸಿಕೊಂಡಿಲ್ಲವೇ?
ಅಪ್ಪನ ಕಷ್ಟದ ದಿನಗಳು ಮತ್ತು ಅತ್ತೆಯ ಕೊನೆಯ ದಿನಗಳು ಸಿಕ್ಕಿದ್ದು ಈ ಕರೆಂಟು ಕಳೆದುಕೊಂಡ ಮನೆಯಲ್ಲೇ.
ಆಗೆಲ್ಲಿ ದಾವಾಖಾನೆಗಳು? ಚಕ್ಕಡಿಯೊಂದರಲ್ಲಿ ದೂರದ ಊರಿನ ಸರಕಾರೀ ಆಸ್ಪತ್ರೆಗೆ ಕ್ಷೀಣಿಸುತ್ತಲೇ ಬಂದು ಚಡಪಡಿಸುತ್ತಲೇ ಪ್ರಾಣಬಿಟ್ಟ ಅತ್ತೆ, ಕಣ್ಣೆದುರು ಸ್ಪಷ್ಟವಾಗಿ ಕಂಡದ್ದು ಈ ಕತ್ತಲೆಯ ಮಾಯೆಯೊಳಗೇ. ಸುದ್ದಿ ಕೇಳಿ ಮನೆಯ ಹೊಸ್ತಿಲಲ್ಲೇ ಕುಸಿದುಬಿದ್ದ ಅಪ್ಪನನ್ನು ಕಲ್ಪಿಸಿಕೊಂಡೆ ಅನ್ನೋದು ಶುದ್ಧ ಸುಳ್ಳಷ್ಟೇ.
“ನಿಮ್ಮಪ್ಪ ದಿವಸಕ್ಕ ಹದಿನಾಲ್ಕು ಕಿಲೋಮೀಟರು ಬರಿಗಾಲಿನಲ್ಲಿ ಬೆಟ್ಟ ಏರಿ ಹೈಸ್ಕೂಲು ಮುಗಿಸಿದ್ದು” ಅಂತ ಗೊತ್ತಾದದ್ದು ಈ ಕತ್ತಲೆಯ ಸಹವಾಸದಲ್ಲೇ.ಅತ್ತೆಯ ಮಗ ಓಡಿ ಹೋದಾಗ ಮನೆಯವರೆಲ್ಲರೂ ಒಂದು ನಿರ್ದಿಷ್ಟ ಕ್ರಿಯೆಗೆ ಧೇನಿಸಿದ್ದು ಅದೆಷ್ಟು ಕಂದರಗಳು ಉರುಳಿ ಹೋಗಿದ್ದು ಯಾರ ಹೊಳಹಿಗೆ ಬಾರದೆ ಉಳಿದಿದ್ದು ಒಂದು ವಿಸ್ಮಯವೇ.

ಭೂಕಂಪದಲ್ಲಿ ‘ಅರೇ ಅರೇ ವಿಕಾಸನಿಗೆ ಮನೆಯಲ್ಲೇ ಬಿಟ್ಟಿ ಬಂದಿರೇನು?’ ಅಂತ ಓಡಿ ಹೊತ್ತು ತಂದ ಅಪ್ಪ. ಚಿಕ್ಕವನಿದ್ದಾಗ ಎಮ್ಮೆ ಹೊಡೆಯಲು ಹೋಗಿ ಮುರಿದುಕೊಂಡ ಕೈಗೆ ಆರೈಕೆ ಮಾಡಿದ ಅಜ್ಜಿ. ಮನೆಗೊಂದು ಹೆಣ್ಣು ಕೂಸಿರಲಿ ಅಂತ ಹರಕೆ ಹೊತ್ತ ಅಮ್ಮ. ಕೇಳಿದಾಗೊಮ್ಮೆ ಹೇಳಿದ ಕಥೆಯೇ ಹೇಳಿ ಬೊಚ್ಚು ಬಾಯಿ ತೆರೆದು ಸ್ವಚ್ಛಂದವಾಗಿ ನಕ್ಕ ಅಜ್ಜ. ಎಲ್ಲವೂ ನೆನಪಿನ ಖಜಾನೆಗೆ ಮುಸುಕಿನಂತೆ ಮಂಜು ಮಂಜಾಗಿ ಹೊಸದಾಗಿ ಸೇರಿದ್ದು ಒಂದು ಪವಾಡವೇ ಸರಿ.
ಒಮ್ಮೆ ಬೇಸಿಗೆಯ ಒಂದು ಸಾಯಂಕಾಲ ನನ್ನ ಹಿರಿಯ ಮಿತ್ರರ ಮನೆಗೆ ಹೋಗುವ ಪ್ರಸಂಗ ಬಂದಿತ್ತು. ವಿಜಯನಗರದ ಹೃದಯಭಾಗದಲ್ಲಿ ಖರೀದಿಸಿದ ಸುಮಾರು ಹತ್ತು ವರುಷ ಹಳೆಯ ಅಪಾರ್ಟ್ಮೆಂಟು ನನಗೆ ತೋರಿಸುವದಿತ್ತು ಅವನಿಗೆ. ತುಂಬಾ ಶಾಂತವಾದ ವಾತಾವರಣ. ಜಾಸ್ತಿ ವಾಹನಾಸುರರ ಆರ್ಭಟವಿಲ್ಲ. ಹೆಜ್ಜೆ ಹೆಜ್ಜೆಗೆ ಉದ್ಯಾನವನಗಳು. ಅನತಿ ದೂರದಲ್ಲೇ ಇರುವ ಮೆಟ್ರೋ ಸಂಚಾರ. ಹೀಗೆ ಸಕಲ ಅನುಕೂಲತೆಗಳಿಂದ ಕೂಡಿದ ವ್ಯವಸ್ಥಿತ ತಂಗುದಾಣವಾಗಿದ್ದರಿಂದ ಅಪಾರ್ಟ್ಮೆಂಟು ಸ್ವಲ್ಪ ಹಳೆಯದೇ ಆದ್ರೂ ಖರೀದಿಸಿದ್ದು ತರ್ಕಬದ್ಧವಾಗಿತ್ತು. ನನ್ನ ಜೊತೆ ಅಷ್ಟೇನೂ ಆತ್ಮೀಯತೆ ಉಳಿದಿಲ್ಲದೇ ಹೋದರು ಮನೆ ತೋರಿಸುವ ಚಟದಿಂದ ಹೊರಬರದ ಕಾರಣಕ್ಕೆ ನನಗೆ ಆಹ್ವಾನಿಸಿದ.
ಹೆಂಡತಿ, ಮಕ್ಕಳು ಮತ್ತು ವಯಸ್ಸಾದ ತಾಯಿ ಇರುವ ಆ ಅಪಾರ್ಟ್ಮೆಂಟಿಗೆ ಹೋಗುವ ಹೊತ್ತಿಗೆ ಹೊತ್ತು ಮುಳುಗುತ್ತಿತ್ತು. ಮೊದಲ ಮಹಡಿಯಲ್ಲಿರುವ ಮನೆಯ ಒಳ ಹೋದೆ.ಗೆಳೆಯ ಮುಗುಳ್ನಗೆಯಿಂದ ಆಗಮಿಸಿದ. ಹೆಂಡತಿ ಮತ್ತು ತಾಯಿ ಯಾವುದೊ ಧಾರಾವಾಹಿ ನೋಡುತ್ತಿದ್ದರು. ಸೋಫಾದ ಮೇಲೆ ಕುಳಿತುಕೊಂಡು ಕ್ಷೇಮ ಕುಶಲೋಪರಿಯಾಯಿತು. ಹೆಂಡತಿಯನ್ನು ಪರಿಚಯಿಸಿದ. ತನ್ನ ಮಕ್ಕಳನ್ನ ಬೆಡ್ರೂಮಿನಿಂದ ಎಳೆ ತಂದು ‘ಇವರನ್ನು ಗುರುತಿಸು ನೋಡೋಣ’ ಅಂತ ಇಂಗ್ಲೀಷಿನಲ್ಲಿ ಬಿಟ್ಟ. ಒಂದೇ ಊರಿನವರಾಗಿದ್ದರಿಂದ ಗುರುತು ಸಿಗಬಹುದೇನೋ ಅಂತ ಅನಿಸಿ ಕೇಳಿರಬೇಕು. ಅವು ಒಂದೇ ಸಲಕ್ಕೆ ಗೊತ್ತಿಲ್ಲ ಅಂತ ಹೇಳಿ ಮತ್ತೆ ರೂಮು ಸೇರಿದವು. ಮನೆ ತುಂಬಾ ಶಾಂತವಾಗಿತ್ತು. ಪ್ರಫುಲ್ಲವಾಗಿತ್ತು. ಮನೆಯಲ್ಲಿಟ್ಟಿರುವ ಒಂದೊಂದು ವಸ್ತುಗಳು ತುಂಬಾ ಕಾಳಜಿವಹಿಸಿ ಜೋಡಿಸಿದಂತಿತ್ತು. ಮನೆಯೊಡತಿ ಒಂದು ಕಪ್ಪು ಟೀ ಕೈಗಿಟ್ಟಳು.
ಊರು ಮಾತು ಕಥೆ ಶುರುವಾದ ತುಸು ಹೊತ್ತಿನಲ್ಲೇ ಆ ಮನೆ ಕರೆಂಟು ಕಳೆದುಕೊಂಡಿತು!!!
ಅರೆಕ್ಷಣವೇ ಚಟಾರನೆ ಕಿರುಚಿ ‘ಓಹ್ ಶಿಟ್’ ಎಂದು ಬೆಡ್ರೂಮಿನಿಂದ ಸದ್ದು ಬಂದಿತು. ಮಗಳು ಮೈ ಮೇಲೆ ಬಂದವರಂತೆ ಫೋನು ಹಿಡಿದು ಆಕಡೆಯಿಂದಿಕಡೆ ಓಡಾಡುತ್ತಿದ್ದಳು.ತಾಯಿ ‘ಅಯ್ ಹಾಟ್ಯಂದು ತಗೊಂಬಂದು’ ಅಂತ ಉರಿದಳು. ಮಗ ಐಪ್ಯಾಡಿನ ಉಳಿದ ಬ್ಯಾಟರಿಯ ಜೊತೆ ಒಳಗೆ ಯಾವುದೊ ಕಾರು ರೇಸಿನ ಗೇಮು ಆಡಲು ಶುರು ಮಾಡಿದ. ಹೆಂಡತಿ ಮತ್ತೆ ಹೊರ ಬರಲಿಲ್ಲ. ಗೆಳೆಯ ಬೆಸ್ಕಾಮ್ ಗೆ ಫೋನ್ ಮಾಡಿ ಉಗಿಯುತ್ತಿದ್ದ. ಕ್ಷಣ ಮಾತ್ರದಲ್ಲೇ ಎಲ್ಲವೂ ಅಲ್ಲೋಲಕಲ್ಲೋಲ. ತುಸುಹೊತ್ತೇ ಮಾಯವಾದ ಕರೆಂಟು ಇಡೀ ಕುಟುಂಬ ಚಡಪಡಿಕೆಯ ಹಂಚಿನ ಮೇಲೆ ಪಟಪಟನೆ ಉರಿದು ಬಿತ್ತಂತಾಗಿತ್ತು. ಅದ್ಯಾವುದೋ ಒಂದು ಶಕ್ತಿ ಎಲ್ಲರ ಸೈರಣೆಯನ್ನೇ ಕಸಿದು ಎಲ್ಲ ಅಂಗಾಂಗಗಳನ್ನು ನಿಷ್ಕ್ರಿಯಗೊಳಿಸಿ ಎಲ್ಲರನ್ನ ಮೂಲೆಗೆ ಒಗೆದು ಹಲ್ಲು ಕಿಸಿಯುತ್ತಿತ್ತು.

ಜಾಸ್ತಿ ಹೊತ್ತು ಕೂರುವದಕ್ಕಾಗಲಿಲ್ಲ. ಎದ್ದು ಹೊರ ಬಂದೆ.
ಗೆಳೆಯನ ಮನೆ ತೋರಿಸಿ ಬಿಗಿಯುವ ಕಾರ್ಯಕ್ರಮ ಒಂದು ವಿಚಿತ್ರ ಊನದಲ್ಲೇ ಮುಕ್ತಾಯಗೊಂಡಿತು.
ಮನೆಯ ಕರೆಂಟು ಹೋಗುವುದರ ಬಗ್ಗೆ ತುಂಬಾ ನವಿರಾದ ಅನುಭವ ಹೊಂದಿರುವ ನನಗೆ ಇದನ್ನು ನೋಡಿ ತುಂಬಾ ಕೆಡುಕೆನಿಸಿತು.
ಊರಲ್ಲಿರುವಾಗ “ನಿಮ್ಮನೆಯಲ್ಲಿ ಕರೆಂಟ್ ಇದೆಯಾ?” ಅಂತ ಕೇಳುತ್ತ ಊರಿನ ಇಡೀ ಗಲ್ಲಿ ಗಲ್ಲಿಗೆ ತಿರುಗುತ್ತಿದ್ದು ನೆನಪಾಯಿತು. ಊರಲ್ಲಿ ಲೋಡ್ ಶೆಡ್ಡಿಂಗು ಬರೋಬ್ಬರಿ ಆರು ಗಂಟೆಯದು.ಇಡೀ ಊರಿಗೂರೇ ಕಂಬಳಿ ಹೊದ್ದುಕೊಂಡು ಸುರಂಗದಲ್ಲಿ ಅಡಗಿ ಕುಳಿತಂತಾಗುತ್ತಿತ್ತು. ಕಲ್ಯಾಣದಿಂದ ಬರುವ ಕೊನೆಯ ಬಸ್ಸಿನ ಹೆಡ್ಲೈಟಿನ ಬೆಳಕು ಉಬ್ಬು ತೆಗ್ಗಿನಲ್ಲಿ ಮೇಲೆ ಕೆಳಗಾಗಿ ಊರಿಗೆ ಬೀಳುತ್ತಿದ್ದರೆ ಯಾವುದೋ ಪತ್ತೇದಾರಿ ಕಾದಂಬರಿಯಲ್ಲಿ ತೆಹಕೀಕಾತ್ ಗೆ ಬರುವ ಪೊಲೀಸರು ಬಿಡುವ ಬ್ಯಾಟರಿಯಂತೆ ಭಾಸವಾಗುವುದು. ಅದನ್ನು ವಿಶೇಷವಾಗಿ ನೋಡಲು ಊರಿನ ಬೆಟ್ಟದಲ್ಲಿರುವ ದೇವಸ್ಥಾದ ಮೇಲೆ ನಿಂತು ನೋಡಿದರೆ ಹೊಸ ಅನುಭವವೇ ದಕ್ಕುವುದು. ಊರಲ್ಲಿ ಕರೆಂಟಿಗೆ ಕಾಯುವುದು ಅಕ್ಷರಶಃ ದೇವರಿಗೆ ಕಾದಂತೆ ಕಾಯುವ ಪರಿಸ್ಥಿತಿ ಇತ್ತು. ಆದರೆ ಇಲ್ಲಿ ಹಾಗಲ್ಲ. ಕರೆಂಟು ಹೋದ ಮರುಕ್ಷಣವೇ ಜನರೇಟರ್ ಬಂದು ಭಗ್ಗೆಂದು ಇಡೀ ಅಪಾರ್ಟ್ಮೆಂಟೇ ಬೆಳಗುತ್ತದೆ.
ಆದರೆ ಈಗ ಪಕ್ಕದವರ ಮನೆಗೆ ಹೋಗಿ “ನಿಮ್ಮಲ್ಲಿ ಕರೆಂಟ್ ಇದೆಯಾ?” ಅಂತ ಕೇಳಿ ಅದೆಷ್ಟೋ ವರ್ಷಗಳಾಗಿಯೇ ಹೋಗಿವೆ. ಈ ಅಪಾರ್ಟ್ಮೆಂಟ್ ಸಂಸ್ಕೃತಿ ಬಂದಾಗಿಂದ ಮನುಷ್ಯನ ಸಹಜ ಸಂಪರ್ಕ ದಾರಿಗಳೆಲ್ಲ ಮುಚ್ಚಿಕೊಳ್ಳತ್ತ ಸಾಗುತ್ತಿರುವುದು ನಮ್ಮ ದುರದೃಷ್ಟಕರ. ಪಕ್ಕದ ಮನೆಯವರಿಂದ ಒಂದು ಲೋಟ ಸಕ್ಕರೇನೋ ಅಥವಾ ಚೂರೇ ಚೂರು ಹಾಲೋ ಅಥವಾ ಒಗ್ಗರಣೆಗೆ ಒಂದೆರೆಡು ಟೊಮ್ಯಾಟೋ ಇವು ಯಾವುದಕ್ಕೂ ಆಸ್ಪದವಿಲ್ಲ.
ಒಂದು ವೇಳೆ ಸಾಧ್ಯವಾದರೆ, ಪಕ್ಕದ ಮನೆಯವರಿಗೆ ಕೇಳಿ ನೋಡಿ ಒಗ್ಗರಣೆಗೆ ಒಂದು ಟೊಮ್ಯಾಟೋ.
ಕೇಳಿ ನೋಡಿ ಆ ಟೊಮ್ಯಾಟೋ ಒಂದರ ನಿವ್ವಳ ಬೆಲೆ?





Thanks Avadhi 🙂