ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಋತುಗಳ ರಾಜನ ಹುಟುಕಾಟದಲ್ಲಿ!

ಸದಾಶಿವ್ ಸೊರಟೂರು

ಎದುರಿಗಿದ್ದವರು ಕಾಣದಷ್ಟು ಕವಿದ ಮಂಜು, ‘ಚಿಲ್’ ಅನ್ನುವಷ್ಟು ತೊಯ್ದು ಹೋದ ಮನಸ್ಸು. ಮೆಲ್ಲನೆ ಅರಳಿದ ಮಾವಿನ ಹೂವು, ಬಹುದಿನಗಳಿಂದ ಪತ್ತೆಯೇ ಇಲ್ಲದ ಕಾಜಾಣ ಅಲ್ಲಿಲ್ಲೆಯೋ ಮಂಜಿನ ಮಾಟಕ್ಕೆ ಬೆರೆಸಿದ ಮಾದಕ ದನಿ! ಅಷ್ಟಿಷ್ಟು ಬಿಸಲು ಬಂದರೂ ಮಂಜು ಬೇಕು ಅನಿಸುತ್ತದೆ, ಮಂಜು ಬರುತ್ತಲೇ ಒಂದಿಷ್ಟು ಬಿಸಿಲು ಬೇಕು ಅನಿಸುತ್ತದೆ. ಮಾಗಿಯಲ್ಲಿ ತನ್ನ ಮೈ ಕೊಡವಿಕೊಂಡಿದ್ದ ಗಿಡಮರಗಳು ಹೊಸ ಹಸಿರ ಚಿಕ್ಕ ಚಿಕ್ಕ ತುಣಕುಗಳನ್ನು ಆಚೆ ಹಾಕಿವೆ. ಒಳಗೂ ಆನಂದ, ಹೊರಗೂ ಆನಂದ. ಎಂತಹ ಕಲ್ಲು ಮನಸ್ಸಿನವನ ಹೃದಯದಲ್ಲೂ ಒಂದು ಕವಿತೆ ಹುಟ್ಟಿ ಬಿಡುತ್ತದೆ.

ನಿಸರ್ಗ ರಾಣಿ ಈ ಪರಿ ಸಿಂಗಾರಗೊಂಡಳು ಅಂದ್ರೆ ಅವಳಿಗೆ ಹರೆಯ ಬಂದಿದೆ ಎಂದೇ, ವಸಂತ ಬಂದಿದೆ ಎಂದೇ ಅರ್ಥ.

ಅಂಗನವಾಡಿಯಲ್ಲಿ ಕೈಕಟ್ಟಿಕೊಂಡು ಹಾಡುತ್ತಿದ್ದ ಚೈತ್ರ, ವೈಶಾಖಗಳನ್ನು ನಾವು ಮರೆತಿರಬಹುದು. ಈಗಿನ ಕಾಲದ ಮಕ್ಕಳು ಅವುಗಳನ್ನು ಕಲಿಯದೇ ಇರಬಹುದು. ಆದರೆ ವಸಂತ ಎಂದಿಗೂ ತಾನು ಬರುವುದನ್ನು ಮರೆಯದು, ಚೆಲುವನ್ನು ತೋರಿಸದೇ ಇರಲಾರದು. ‘ಯಾರು ಈ ವಸಂತ?’ ಎಂದು ಕೇಳುವ ಅಂಗ್ರೇಜಿ ಕ್ಯಾಲೆಂಡರ್ ನೇತು ಹಾಕಿಕೊಂಡವನಿದ್ದರೂ ವಸಂತ ಬರದೇ ನಿಲ್ಲಲಾರದು. ಮತ್ತೆ ವಸಂತ ಬಂದಿದೆ. ಅದೇ ಚಲುವಿನೊಂದಿಗೆ, ಅದೇ ವಯ್ಯಾರದೊಂದಿಗೆ. ನೋಡುವ ಕಣ್ಣುಗಳು, ಸವಿಯುವ ಮನಸ್ಸು ನಿಮ್ಮದಾಗಬೇಕು ಅಷ್ಟೇ!

ಋತುಗಳ ರಾಜ.

ಯಾವುದೇ ದೇಶ, ಯಾವುದೇ ದಿನ ಮಾಪನಗಳನ್ನು ಬಳಸುತ್ತಿದ್ದರೂ ಪ್ರಕೃತಿಯಲ್ಲಾಗುವ ಬದಲಾವಣೆಗಳು ಒಂದೇ. ನಾವು ವರ್ಷವೊಂದನ್ನು ಆರು ಋತುಗಳನ್ನಾಗಿ ಮಾಡಿ, ಪ್ರತಿಯೊಂದು ಋತುವು ಎರಡು ಮಾಸಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ. ಋತುಗಳ ಆರಂಭ ವಸಂತನಿಂದಲೇ!

ಬಹುಶಃ ಋತಗಳ ರಾಜನೇಂದೇ ಅವನಿಗೆ ಮೊದಲ ಸ್ಥಾನ.

ನಂತರ ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ. ಪ್ರತಿಯೊಂದು ಋತುಗಳು ಎರಡು ಮಾಸಗಳನ್ನು ಒಳಗೊಂಡಿದೆ. ಚೈತ್ರ, ವೈಶಾಖ ಅಂತ ಅಂಗನವಾಡಿಯಲ್ಲಿ ಪದೇ ಹಾಡಿದ ಕಲಿಕೆ ಗೀತೆಯಲ್ಲಿನ ತಿಂಗಳೇ ಆಗಿವೆ.

ಚೈತ್ರ ನಮ್ಮ ದಿನಮಾಪನದ ಮೊದಲ ತಿಂಗಳು. ಅಂದಿನಿಂದಲೇ ನಮ್ಮ ಮಾಸಿಕಗಳ ಎಣಿಕೆ ಆರಂಭ. ನಮ್ಮ ಆಧುನಿಕ ಸರ್ವವಿಧಿತ ಕ್ಯಾಲೆಂಡರ್‍ನಲ್ಲಿ ಬರುವ ಮಾರ್ಚ್-ಏಪ್ರಿಲ್ ತಿಂಗಳಿನಿಂದ ಆರಂಭವಾಗಿ ಮೇ-ಜೂನ್‍ವರೆಗೂ ಚೈತ್ರ, ವೈಶಾಖಗಳು ವಸಂತನನ್ನು ಅಪ್ಪಿಕೊಂಡಿರುತ್ತವೆ. ವಸಂತ ಇಂಗ್ಲೀಷ್‍ನಲ್ಲಿ ಸ್ಪ್ರಿಂಗ್ (spring) ಅನಿಸಿಕೊಂಡಿದ್ದಾನೆ. ಪಿ.ಬಿ ಶೆಲ್ಲಿ wind it winter comes can spring be far behind ಅನ್ನುತ್ತಾನೆ.

ಮಾಗಿಯ ಚಳಿ ಮುಗಿದ ಮೇಲೆ ವಸಂತ ಬರದೇ ಇರುವನೇ? ಯಾವಾಗಲೂ ಚಳಿ, ದಾರಿ ತಪ್ಪಿ ಅಸ್ತ ವ್ಯಸ್ತವಾಗಿ ಬೀಸುವ ಗಾಳಿಯಿಂದ ಬಿರಿದುಕೊಳ್ಳುವ ಕೈ ಕಾಲುಗಳು, ಸಣ್ಣ ಪುಟ್ಟ ದೇಹ ಭಾದೆಗಳು, ಮನಸ್ಸಿಗೂ ಚಳಿ ಹಿಡಿಸಿದಂತಹ ವಾತಾವರಣ, ಬೋಳು ಬೋಳಾದ ಮರಗಳು, ಹತಾಶೆ ಮನೋಭಾವ, ಬೇಜಾರು ಇವೆಲ್ಲ ಶಿಶಿರ ಋತುವಿನ ಸ್ವತ್ತು.

ಶಿಶಿರನಿಂದ ಸೋತು ಹೋದವನಿಗೆ ಸಡನ್ ಆಗಿ ವಸಂತ ಎದುರಾಗುತ್ತಾನೆ. ಎಂತಹ ಆಹ್ಲಾದ. ಚಳಿ ಅಷ್ಟಿಲ್ಲ. ಬಿಸಿಲು ಬಹಳಿಲ್ಲ. ಮರಗಳ ಹೊಸ ತೊಡುಗೆ. ಕೈ ಕಾಲು ಪ್ರೆಶ್ ಪ್ರೆಶ್, ಮನಸ್ಸು ದಿಲ್‍ಕುಶ್. ಒಂದರ ನಂತರ ಒಂದು ಹಬ್ಬ ಹರಿದಿನ, ಜಾತ್ರೆಗಳು. ಓದು ಬರೆವ ಒತ್ತಡವಿಲ್ಲದ ಅರಾಮಯೆನುಸುವ ಬೇಸಿಗೆ ರಜೆಗಳು. ಕಿರಿ ಕಿರಿ ಮಾಡದ ಆರೋಗ್ಯ. ವಾಹ್! ಅನಿಸುವ ದಿನಗಳು. ಅದಕ್ಕೆಂದೇ ವಸಂತ ಎಲ್ಲರಿಗೂ ಇಷ್ಟ. ಅದಕ್ಕೆ ಇರಬೇಕು ಆತ ಋತುಗಳ ರಾಜ. ಅದೊಂದು ಭೂಮಿಯ ಸೊಗಸಿನ ಮರುಹುಟ್ಟು. ಹೊಸ ಆರಂಭದ ಮೊದಲ ಕ್ಷಣಗಳು.

ವಲಸೆ ಹೋದ ಪ್ರಾಣಿ ಪಕ್ಷಿಗಳು ಗೂಡು ಸೇರುತ್ತವೆ. ಹೂ ಹಣ್ಣುಗಳು ಸಾಕು ಅನ್ನುವಷ್ಟು ಬೆಳೆದು ನಿಲ್ಲುತ್ತವೆ. ವರ್ಡ್ ವರ್ಥ್ ಮಾತಿನಲ್ಲಿ ಹೇಳಬೇಕೆಂದರೆ ಈ ಸಮಯ nature’s holy plan. ಮನುಷ್ಯನ ಕಾರ್ಯ ಕುಶಲತೆಗೆ ಸಾಕಷ್ಟು ಅವಕಾಶ ಮಾಡಿಕೊಡುವ ಅವಧಿ ಇದು. ಮನೆ ಕಟ್ಟಿಸುವವನಿಗೆ ಮಳೆಯ ಯೋಚನೆ ಇಲ್ಲ. ದೂರಕ್ಕೆ ಟ್ರಿಪ್ ಹೋಗಬೇಕೆಂದವರಿಗೆ ಪ್ರವಾಹದ ಭೀತಿ ಇಲ್ಲ. ಟ್ರೆಕಿಂಗ್‍ನಂತಹ ಸಾಹಸಿಗಳಿಗೆ ಸಾಕಷ್ಟು ಚಳಿ, ಬಿಸಿಲಿನ ತಾಪತ್ರಯವಿಲ್ಲ.

ಮನೆ ಮಠ ಮರೆಯುವ ರಸಿಕರಿಗೆ, ಕಲಾವಿದರಿಗೆ, ಕವಿಗಳಿಗೆ ಒಂದಲ್ಲ ಸಾವಿರ ಚಿತ್ರಗಳನ್ನು, ಸನ್ನಿವೇಶಗಳನ್ನು, ಭಾವಗಳನ್ನು ಪುಂಖಾನುಪುಂಖವಾಗಿ ಚಿಮ್ಮಿಸುತ್ತಲೇ ಕೂತಿರುತ್ತದೆ. ಒಂದು ವರ್ಷವನ್ನು ಕಳೆಯಲು ಬೇಕಾದ ಜೀವನ ಚಿಲುಮೆಯನ್ನು, ಉತ್ಸಾಹವನ್ನು ಕೇವಲ ಎರಡೇ ತಿಂಗಳಲ್ಲೇ ರಿಜಾರ್ಜ್ ಮಾಡಿಕೊಟ್ಟು ಬಿಡುತ್ತದೆ. ಇಂಗ್ಲೀಷ್ ಕವಿ ರೈನರ್ ಮಾರಿಯ ರಿಲ್ಕ್‍ನ ಭಾವುಕ ಮಾತುಗಳನ್ನು ಕೇಳಿ It is spring again, The earth is like a child that knows poem by heart.

ವಸಂತದ ಮೊದಲ ದಿನ

ಚೈತ್ರದ ಮಾಸದ ಮೊದಲ ದಿನವೇ ಯುಗಾದಿ.

ಅದು ಒಂದು ಯುಗಾದಿ ಆದಿಯ ಸಮಯ. ಭಾರತೀಯ ಕ್ಯಾಲೆಂಡರ್ ಪ್ರಕಾರ ವರ್ಷ ಆರಂಭವಾಗುವುದು ಚೈತ್ರಳಿಂದಲೇ. ಆರಂಭದ ಆಚರಣೆ ಎಷ್ಟೊಂದು ಸೊಬಗಿನದು. ಭಾರತೀಯರ ಪಾಲಿಗೆ ಅದೊಂದು ಮಹತ್ವದ ದಿನ. ಅದನ್ನು ಒಂದು ಹಬ್ಬವನ್ನಾಗಿ ಆಚರಿಸುತ್ತಾರೆ. ವರ್ಷಂಪೂರ್ತಿ ಸುಖ ದುಃಖಗಳೆರಡು ಕೂಡ ಸಮನಾಗಿ ಸ್ವೀಕರಿಸುವ ಸೈರಣೆ ಬರಲೆಂದು ಬೇವು ಬೆಲ್ಲವನ್ನು ಹಂಚಿ ತಿಂದು ಸಂಭ್ರಮಿಸುತ್ತಾರೆ.

ಕೇವಲ ಖುಷಿಯಷ್ಟೇ ಅಲ್ಲ ಜೀವನದಲ್ಲಿ ಕಷ್ಟವೂ ಇರಬೇಕು ಅವಾಗಲೇ ಸುಖಕೊಂದು ಎಂಬುದನ್ನು ಕಂಡುಕೊಂಡು ತಂದಿರುವ ಆಚರಣೆಯಿದು. ಸಾಂಕೇತಿಕವಾಗಿ ಮೊದಲ ದಿನವೇ ಅವೆರಡನ್ನು ತಿಂದು ಅದಕ್ಕೊಂದು ಅರ್ಥಕೊಡುತ್ತಾರೆ. ವಸಂತದಲ್ಲೇ ಅದಕ್ಕೊಂದು ಶುಭಗಳಿಗೆ. ಪ್ರಕೃತಿಯ ಕೂಡ ಅದಕ್ಕೆ ಸ್ಪಂಧಿಸುವಂತೆ ವರ್ತಿಸುವುದು ನಿಜಕ್ಕೂ ಭಾರತೀಯ ಕಾಲಮಾನದ ಜ್ಞಾನಕ್ಕೆ ಸಂದ ಗೌರವ ಮತ್ತು ಮಹತ್ವ!

ವಸಂತ ಮತ್ತು ಪ್ರೀತಿ

ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಅಂತ ಹಾಡನ್ನು ನೀವೊಮ್ಮೆ ಗುನುಗಿಕೊಂಡಿರಿ ಅಂದ್ರೆ ನೀವು ವಸಂತ ಕಾಲದಲ್ಲಿ ಇದ್ದೀರಿ ಅಂತಲೇ ಅರ್ಥ. ವಸಂತ ಪ್ರೀತಿಗಳನ್ನು ಅರಳಿಸುತ್ತದೆ. ಪ್ರಕೃತಿಯೇ ಪ್ರೇಮಮಯವಾಗಿರುವಾಗ ಮನುಷ್ಯ ಮಾತ್ರದವ ಸೋಲಲಾರೆನೇ? ವಸಂತವೇ ಮಧುಮಾಸ ಅಂತ ಬೇರೆ ಹೇಳಬೇಕಿಲ್ಲ. ನೋಡಿ ಕುವೆಂಪು ವಸಂತವನ್ನು ಅದೆಷ್ಟು ಸೊಬಗಿನಲ್ಲಿ ವರ್ಣಿಸುತ್ತಾರೆ ಅಂತ

ಮಧುಮಾಸ ಬಂದಿಹುದು
ಮಧುಕರಿಗಳೇ ಬನ್ನಿ
ಮಧುರಸದ ಗೀತೆಗಳಿಂದ ನಾವು ನಲಿವಾ…

ನಮ್ಮನ್ನು ನಾವು ಮರೆತು ಹೋಗುವ ಮಾತುಗಳಿವು. ನಮ್ಮ ಪುರಾಣಗಳನ್ನೊಮ್ಮೆ ಹೊಕ್ಕಿ ನೋಡಿದಾಗ ಈ ವಸಂತಕ್ಕೂ ಪ್ರೀತಿಗೂ ಇರುವ ಸಂಬಂಧದ ಅರಿವಾದೀತು. ಈ ವಸಂತ ಬೇರೆ ಯಾರೂ ಅಲ್ಲ. ಆತ ಮನ್ಮಥನ ಸಹಚರನಂತೆ. ಮನ್ಮಥನು ವಸಂತನಿಗೆ ಪ್ರಿಯನಾದವನಂತೆ. ಈ ಕಾಲದಲ್ಲಿ ಆತ ಸಾಕಷ್ಟು ತನ್ನ ಪ್ರಭಾವ ಬೀರುವುದರಿಂದ ಪ್ರೀತಿಗಳು ಹೆಚ್ಚು. ಸುಖ ಸಂತೋಷ ಹೆಚ್ಚು. ಸುಖ, ಸಂತೋಷದಿಂದ ಕೂಡಿರುವ ರಾಜ್ಯವನ್ನು ವಸಂತ ರಾಜ್ಯವೆಂದು ಕರೆಯುವ ವಾಡಿಕೆಯೂ ಕೂಡ ಇದೆ.

ಇದೇ ಋತುವಿನಲ್ಲಿ ಬರುವ ಕಾಮನಹಬ್ಬ, ಹೋಳಿ ಸ್ವಚ್ಚ ಪ್ರೇಮದ ಸಂಕೇತ. ದುಷ್ಟ ಆಸೆಗಳನ್ನು ಸುಟ್ಟು ಹಾಕುವುದರ ಮೂಲಕ ನಿಜ ಪ್ರೇಮವನ್ನು ಅನಾವರಣಗೊಳಿಸುವ ಸಂಕೇತ. ಆಗ ಕೌಮುದಿ ಮಹೋತ್ಸವವನ್ನು, ಮನ್ಮಥನನ್ನು ಪೂಜಿಸುವ ಸಂಪ್ರದಾಯವಿತ್ತಂತೆ. ಕನಕದಾಸರ ಮೋಹನ ತರಂಗಿಣಿಯಲ್ಲಿ ಈ ತರಹದ ವಸಂತೋತ್ಸವದ ವರ್ಣನೆಯಿದೆ. ರವೀಂದ್ರನಾಥ್ ಠಾಗೋರ್ ಕೂಡ ಹೊಸ ತೆರನಾದ ವಸಂತೋತ್ಸಕ್ಕೆ ತಮ್ಮ ಶಾಂತಿನಿಕೇತನದಲಿ ನಾಂದಿ ಹಾಡಿದ್ದು ಇದೆ.

ಕಾಳಿದಾಸನೇನು ಕಡಿಮೆ ಅಂದುಕೊಂಡಿರೇನು!? ವಸಂತ ಇರುವುದೇ ಪ್ರೀತಿಸಲು, ಬೋಗಿಸಲು ಅನ್ನುವಂತೆ ತನ್ನ ಋತು ಸಂಹಾರದಲ್ಲಿ ಸಾಕು ಅನ್ನುವಷ್ಟು ವರ್ಣಿಸಿದ್ದಾನೆ.

ದ್ರುಮಾಃ ಸಪುಷ್ಪಃ ಸಲಿಲಂ ಸಪದ್ಮಂ
ಸ್ತ್ರಿಯಃ ಸಕಾಮಃ ಪವನಃ ಸುಗನ್ದಿಃ
ಸುಖಾಃ ಪ್ರದೋಷಾ ದಿವಸಾಶ್ಚ ರಮ್ಯಾಃ
ಸರ್ವಂ ಪ್ರಿಯೇ ಚಾರುತರಂ ವಸನ್ತೇ

ಅರ್ಥ ಇಂತಿದೆ ನೋಡಿ. ಮರಗಳೆಲ್ಲ ಹೂಗಳಿಂದ ತುಂಬಿವೆ, ಜಲಾಶಯಗಳೆಲ್ಲ ಪದ್ಮಗಳಿಂದ ತುಂಬಿವೆ. ಸ್ತ್ರಿಯರು ಸಕಾಮಿಗಳಾಗಿದ್ದರೆ. ಗಾಳಿಯು ಸುಗಂಧ ಪೂರಿತವಾಗಿದೆ. ಮುಂಜಾನೆ ಸುಖಕರವಾಗಿದೆ. ದಿವಸಗಳು ರಮ್ಯವಾಗಿವೆ. ಪ್ರಿಯೆ ವಸಂತ ಋತುವಿನಲ್ಲಿ ಎಲ್ಲವೂ ಮನೋಹರ ಅನ್ನುತ್ತಾ ಪ್ರೀತಿಸಲು ಇನ್ನೇನು ಬೇಕಿದೆ ಅನ್ನುವಂತೆ ಪರೋಕ್ಷವಾಗಿ ಕೇಳಿಯೇ ಬಿಟ್ಟಿದ್ದಾನೆ. ನಿಜಕ್ಕೂ ಇದು ಪ್ರೀತಿ ಅರಳುವ ಸಮಯ, ಒಲವು ಬೆಳೆಯುವ ಕಾಲ.

ಕನ್ನಡದ ಕಬ್ಬಿಗರ ಕಣ್ಣಲ್ಲಿ ವಸಂತ

ವಸಂತಕ್ಕೆ ಮರುಳಾಗದವರ್ಯಾರು? ಸದಾ ಕಲ್ಪನೆ, ಭಾವನೆ, ಸೊಬಗಿನಲ್ಲಿ ಮುಳುಗಿ ಹೋಗಿ ಹೊಸ ಸೃಷ್ಟಿಗೆ ತೊಡಗುವ ಕವಿಪುಂಗವನಿಗೆ ಈ ಋತು ಹೇಳಿ ಮಾಡಿಸಿದ್ದು. ನನಗೆ ಅನಿಸಿದ ಮಟ್ಟಿಗೆ ಕನ್ನಡದಲ್ಲಿ ಅಲ್ಲ ಇಡೀ ಪ್ರಪಂಚದಲ್ಲೇ ವಸಂತದಿಂದ ವಂಚಿತನಾಗಿ ನಾನು ಸಾಹಿತ್ಯ ಬರೆದ ಅನ್ನುವ ಕವಿಯೊಬ್ಬ ಸಿಗಲಾರನೇನೊ?

ಕನ್ನಡದಲ್ಲಂತೂ ಆದಿ ಕವಿ ಪಂಪನಿಂದ ಹಿಡಿದು ಇಂದಿನ ಪೇಸ್ಬುಕ್, ವಾಟ್ಸಪ್‍ನಲ್ಲಿ ಹರಿದಾಡುವ ಪುಟ್ಟು ಕವಿತೆಗಳಲ್ಲೂ ವಸಂತದದ ತುಂಟಿತನವೇ ಕಾಣುತ್ತೇವೆ. ಅದರ ಭಾವವಿರುತ್ತದೆ. ಮೊದಲೇ ಹೇಳಿದಂತೆ ಕಲ್ಲು ಮನಸ್ಸಿನ ವ್ಯಕ್ತಿಯೂ ಕೂಡ ಕವನ ಬರೆಯುವಂತೆ ಸೊಬಗನ್ನು ಮಡಿಲಲ್ಲಿ ಹರಡಿಕೊಂಡು ಕೂತಿರುವಾಗ, ತಾನು ಮನಸ್ಸಿರುವ ಜೀವಿ ಅಂದುಕೊಂಡವ ತನ್ನ ಭಾವಗಳನ್ನು ಹರಿಬಿಡಲಾರನೇ ಹೇಳಿ?

ಪಂಪನಿಂದಲೇ ಅಡಿಯಿಟ್ಟು ಬಿಡೋಣ. ಪಂಪಭಾರತದಲ್ಲಿ ಆತ ಹೇಳುವ ಬನವಾಸಿಯ ವರ್ಣನೆಯು, ವಸಂತ ಕಾಲದ ಬನವಾಸಿಯ ವರ್ಣನೆಯೇ ಆಗಿದೆ. ಅದರ ಸೌಂದರ್ಯಕ್ಕೆ, ಚಂದಕ್ಕೆ ಮಾರು ಹೋದ ಆತ ಮುಂದಿನ ಜನ್ಮದಲ್ಲಿ ಬನವಾಸಿಯಲ್ಲಿಯೇ ಕನಿಷ್ಠ ಮರಿದುಂಬಿಯಾಗಿದರೂ ಹುಟ್ಟಬೇಕೆಂದು ಆಸೆ ಪಡುತ್ತಾನೆ (ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್)

ಆದಿಪುರಾಣದಲ್ಲಿ ಮಾವುನ್ನು ವರ್ಣಿಸುವಂತದ್ದು ನಿಜಕ್ಕೂ ಅದ್ಬುತ. ಮಾವು ಹೂವು ಬಿಟ್ಟು ಹಣ್ಣಾಗುವುದು ಈ ವಸಂತದಲ್ಲೇ. ಮಾವಿನ ವರ್ಣನೆಯೊಂದಿಗೆ ವಸಂತದ ಗಂಧವನ್ನೂ ಮೂಸಲು ಅವಕಾಶ ಮಾಡಿಕೊಡುತ್ತಾನೆ. ಮಾವುನ್ನು ಕುರಿತು ಆತನ ಮಾತುಗಳನ್ನು ಕೇಳಿ

ತಳಿರೋಳ್ ನೀನೇ ಬೆಡಂಗನಯ್
ನನೆಗಳೋಳ್ ನೀಂ ನೀರನೈ
ಪುಷ್ಪ ಸಕುಂಳದೊಳ್ ನೀನೇ ವಿಲಾಸಿಯೈ…..

ಎಂದು ಹೇಳುತ್ತಾ ಇತರ ಮರಗಳು ವಸಂತದಲ್ಲಿ ಹೀಗೆ ಇರಲು ಸಾಧ್ಯವೇ ಇಲ್ಲ ಅನ್ನುತ್ತಾನೆ. ಕವಿ ನಾಗಚಂದ್ರ ತನ್ನ ಮಲ್ಲಿನಾಥ ಪುರಾಣದಲ್ಲಿ ಪಂಪನ ಬೆನ್ನಿಗೆ ಬಿದ್ದವನಂತೆ ವಸಂತದ ಚೆಲುವನ್ನು, ಮಾವನ್ನು, ಕೋಗಿಲೆಯನ್ನು ಬಳಸಿ ಬರೆದು ಕುಪ್ಪಳಿಸಿದ್ದಾನೆ. ( ಆ ನಿರ್ದ ಬನದೊಳ್ ಉಳಿದುವನ್ ಏನಂ ನೋಳ್ಪೆ? ‘ಬರ್ಪುದು’ ಎಂಬಂದದಿಂ, ಪಿಕ-ಮಧುರ-ಧ್ವಾನದಿಂದ ಆರಕ್ತ ಕೋರಕಂ ಸಹಕಾರಂ)

ರೂಪಕಗಳ ಚಕ್ರವರ್ತಿಗೆ ವಸಂತ ಸಿಕ್ಕರೇ ಸುಮ್ಮನೆ ಕೂರುವ ಅಸಾಮಿಯೇ ಕುಮಾರವ್ಯಾಸ!? ಸವಿಯೂಂಡು ಬರೆಯುವಲ್ಲಿ ಕುಮಾರವ್ಯಾಸಗಿಂತ ಬೇರೆಯವರಿಲ್ಲ. ಓದಿ ಅವನ ವಸಂತ ಅಸ್ವಾದವ

ಪಸರಿಸಿತು ಮಧುಮಾಸ
ತಾವರೆ ಎಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದ ಉಬ್ಬುರದ
ತೆರೆಯನು ಕೂಡ ದುಂಬಿಗಳು

ತದನಂತರ ಅಕ್ಕ ವಚನಗಳಲ್ಲಿ, ಬಸವಣ್ಣನ ಮಾತುಗಳಲ್ಲಿ, ಸರ್ವಜ್ಞನ ತತ್ವನುಡಿಗಳಲ್ಲಿ, ದಾಸರ ಹಾಡುಗಳಲ್ಲಿ, ಜನಪದ ಸೋಬಾನೆಯಲ್ಲಿ, ಕೋಲಾಟದಲ್ಲಿ, ಗಾದೆ ಒಗಟುಗಳಲ್ಲಿ, ಹರಿಹರನ ರಗಳೆಗಳಲ್ಲಿ ವಸಂತಕ್ಕೆ ಮೊದಲ ಸ್ಥಾನ. ಕಾಲ ಬದಲಾದರೂ ವಸಂತ ಪಡೆದ ಮೊದಲ ಸ್ಥಾನಕ್ಕೆ ಕಿಂಚಿತ್ತು ಭಂಗ ಬಂದಿಲ್ಲ.

ಹೊಸಗನ್ನಡದ ಬಾಗಿಲು ತೆರೆದ ‘ಇಂಗ್ಲೀಷ್ ಗೀತೆಗಳು’ ರೂವಾರಿ ಬಿಂ ಎಂ ಶ್ರೀ ಕೂಡ ವಸಂತದ ಮೋಹದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಚಿಕ್ಕವರಿದ್ದಾಗ ನಾವೆಲ್ಲ ಹೇಳಿಕೊಂಡೇ ಬೆಳೆದ ಪದ್ಯವೊಂದು ಪ್ರತಿ ವಸಂತದಲ್ಲಿ ನೆನಪಾಗುತ್ತದೆ.

ವಸಂತ ಬಂದ
ಋತುಗಳ ರಾಜ ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳ ಉಲಿಗಳೇ ಚಂದ

ಹೀಗೆ ಹಾಡಿಕೊಳ್ಳುತ್ತಿದ್ದರೆ ನಮ್ಮನ್ನು ನಾವೇ ಮರೆತುಬಿಡುತ್ತೇವೆ. ಅವರ ಶಿಷ್ಯ ಕುವೆಂಪು ಕೂಡ ವಸಂತದಿಂದ ಮುಕ್ತರಾಗಲಿಲ್ಲ. ಮೊದಲೇ ಅವರದೊಂದು ಕವಿತೆ ಪ್ರಸ್ತಾಪಿಸಿದೆ. ರಾಮಾಯಾಣ ದರ್ಶನಂ ಮಹಾಕಾವ್ಯದಲ್ಲೂ ವಸಂತದ ವರ್ಣನೆ ಬಂದಿದೆ ಅಂದರೆ ನೀವು ನಂಬಲೇ ಬೇಕು, ಮಹಾಕಾವ್ಯಗಳು ವಸಂತವನ್ನು ಬಿಟ್ಟು ರಚಿತವಾಗಿರುವುದನ್ನು ನಾನು ಇದುವರೆಗೂ ನೋಡಿಯೇ ಇಲ್ಲ.

ಟುವ್ವಿ ಮಾಗಿಗೆ ಟುವ್ವಿ
ಸುವ್ವಿ ಸುಗ್ಗಿಗೆ ಸುವ್ವಿ
ಮಾಗಿ ಹೋಗಿ ಮೈದೋರಿದುದು
ಹಕ್ಕಿ-ಹೂಗಳ ಸುಗ್ಗಿ ಹಿಗ್ಗಿ
ವಸಂತಕ್ಕೆ ಇದಕ್ಕಿಂತ ಸನ್ಮಾನ ಬೇಕೇ ಹೇಳಿ!

ಪ್ರತಿಮೆಗಳ ಮೂಲಕ ಹೇಳುವುದು ನವ್ಯ ಸಾಹಿತ್ಯದ ವಿಶೇಷ. ಅದರ ನೇತಾರಿಕೆ ವಹಿಸಿಕೊಂಡ ಅಡಿಗರು ಕೂಡ ವಸಂತವನ್ನು ನೆಪಮಾಡಿಕೊಂಡು ಹಲವು ವಿಷಯಗಳನ್ನು ಒಮ್ಮಲೇ ಹರಿಬಿಟ್ಟಿದ್ದಾರೆ. ಸಂಕೇತಗಳ ಮೂಲಕ ಕಟ್ಟಿದ ಅವರ ಕವನ ನೋಡಿ. ವಸಂತ ಕಾಲದಲ್ಲಿ ವಿಶ್ವದ ಚೆಲುವೆಲ್ಲಾ ಸೇರಿ, ಒಗ್ಗೂಡಿ ಕಣ್ಣು ಕೋರೈಸಿ ಮತ್ತೇ ಮರೆಯಾಗುವ ಅವರ ಕಾವ್ಯದ ಪರಿ ನೋಡಿ.

ವಿಷ್ಣುಅದೃಶ್ಯ ಲೋಕದ, ಅನೂಹ್ಯ ರೂಪದ
ಅನಂತ ಕಾಲದ ಯಾತ್ರಿಕರೇ
ಮಣ್ಣಿನ ಮನದಲಿ, ಹೊನ್ನನೆ ಬೆಳೆಯುವ
ಅಪೂರ್ವ ತೇಜದ ಮಾಂತ್ರಿಕರೇ
ಅತಿಥಿಗಳಹ ನೀವೆಲ್ಲರು ಇಲ್ಲಿಗೆ
ನೆಲಸಲು ಬಂದವರಲ್ಲ
ಬಂದ ಗಳಿಗೆಗೆ ಆಮೋದಕೆ ಬರುವಿರಿ
ಬಂದ ಅರಗಳಿಗೆಯೊಳಗೇ ಮೈಗರೆವಿರಿ

ಅರ್ಥ ಮಾಡಿಕೊಂಡಷ್ಟು ಪದರು ಪದರಾಗಿ ಮತ್ತೊಷ್ಟು ಅರ್ಥಗಳು, ಸವಿ ಭಾವಗಳು ಮೂಡುತ್ತವೆ.

ಪುತಿನ ರಂತು ಒಂದೇ ಸಾಲಿನಲ್ಲಿ ಸರ್ವ ವಸಂತದ ಮಾಟವನ್ನು ಬಾಚಿಟ್ಟುಕೊಂಡಿದ್ದಾರೆ. ಸೌಂದರ್ಯ ಹುಡುಕುವವರಿಗೆ ವಸಂತ ಒಂದು ಗಣಿ ಇದ್ದ ಹಾಗೆ ಅನ್ನುತ್ತಾ ‘ಕಣ್ಣುಗಳು ತಂಗುವ ಸೊಗಸಿನ ರೇವು’ ಎನ್ನುತ್ತಾ ಮುಗಿಸಿಬಿಡುತ್ತಾರೆ. ಹರಿವ ಮನವನು ಹಿಡಿದು ಒಂದೆಡೆ ನಿಲ್ಲಿಸಿ ತೊಳೆದಿದೆ ಹೂವಿದು ಅನ್ನುತ್ತಾರೆ ರಾಷ್ಟ್ರಕವಿ ಶಿವರುದ್ರಪ್ಪನವರು.
ಮೊದಲೇ ಹೇಳಿದಂತೆ ವಸಂತಕ್ಕೆ ಸೋಲದ ಕವಿ ಇಲ್ಲ. ಅದರ ಬಗೆಗೆ ಬರೆಯುತ್ತ ಹೋದರೆ ಮೂರಾಲ್ಕು ಪಿಎಚ್‍ಡಿ ಪ್ರಬಂಧಗಳನ್ನು ಮಂಡಿಸಬಹುದೇನು!? ಆದರೆ ಒಂದಿಷ್ಟನ್ನು ಸಂಗ್ರಹಿಸಿ ನೀಡುವ ಪ್ರಯತ್ನ ಮಾತ್ರ ಇಲ್ಲಿ ಸಾಧ್ಯವಾಯಿತು.

ಬದಲಾದ ಕಾಲದಲ್ಲಿ ವಸಂತ

ಈಗ ಪ್ರಕೃತಿಯಲ್ಲಿ ಯಾವಾಗ? ಏನು? ನಮ್ಮ ಜನಕ್ಕೆ ಅಷ್ಟಾಗಿ ತಿಳಿಯುತ್ತಿಲ್ಲ. ಇದು ಅವರ ಅಜ್ಞಾನ ಅಂದುಕೊಂಡಿರೇನು? ಅಲ್ಲ! ತಿಳಿದುಕೊಳ್ಳುವ ಹಂಬಲವಿಲ್ಲ. ಕಾಂಪೌಂಡಿನ ಒಳಗಿನ ಒಂದು ತುಳಸಿ ಗಿಡಕ್ಕೆ ಮಾತ್ರ ಅವನು ಪ್ರಕೃತಿ ಪ್ರೀತಿ ಮತ್ತು ಅದರ ಸೌಂದರ್ಯ ಅಸ್ವಾದನೆ ಸೀಮಿತವಾಗಿದೆ ಅನಿಸುತ್ತಿದೆ.

ಕ್ಯಾಲೆಂಡರ್ ಮೇಲಿನ ದಿನಾಂಕಗಳನ್ನು ಬೆನ್ನತ್ತಿದ ಬದುಕು ಅವನದು. ಮಳೆ ಬಂದಾಗ ಅವನಿಗೆ ಮಳೆಗಾಲ, ಚಳಿ ಆಯ್ತು ಅಂದ್ರೆ ಅದು ಚಳಿಗಾಲ. ಅಷ್ಟೇ ಅವನ ಲೆಕ್ಕಕ್ಕೆ, ತಿರಸ್ಕಾರಕ್ಕೆ. ಪ್ರಕೃತಿಯಲ್ಲಿ ಏನೋ ತಾಳ ತಪ್ಪಿದೆ ಅನ್ನೋ ಅರಿವು ಅವನ ಗಮನಕ್ಕೆ ಬರದೇ ಇರುತ್ತದೆಯೇ ಬಂದಿದೆ.

ಆದರೆ ಅವನಿಗದು ಬೇಕಿಲ್ಲ. ದುಡ್ಡು ಮತ್ತು ಹೆಸರಿನ ಕಡೆ ಅವನ ಗಮನ. ಚಳಿ ಬರುವ ಸಮಯದಲ್ಲಿ ಚಳಿ ಇಲ್ಲ. ಇನ್ಯಾವಾಗಲೋ ಚಳಿ. ಮಳೆ ಬಂದಾಗಲೇ ಬಂತು. ಬಿಸಿಲಂತೂ ಸರ್ವಕಾಲದ ಸ್ನೇಹಿತ.ಇದಕ್ಕೆಲ್ಲಾ ಕಾರಣ ಅವನೇ! ಆದರೆ ಅವುಗಳ ಮಧ್ಯೆಯೂ ಪ್ರಕೃತಿ ತನ್ನ ಸೊಬಗನ್ನು ಉಳಿಸಿಕೊಂಡೇ ಬರುತ್ತಿದೆ. ಆದರೆ ನೋಡುವ ಕಣ್ಣುಗಳು ಬೇಕು ಅಷ್ಟೇ. ಆಧುನಿಕತೆ ಪ್ರಕೃತಿಯ ಚಂದಕ್ಕೆ ಮನುಷ್ಯನ ಕಣ್ಣುಗಳನ್ನು ಮಬ್ಬಾಗಿಸಿವೆ. ಅವನಿಗೆ ವಸಂತದ ಚಂದವೇ ಕಾಣದು. ಅವನ ಧಾವಂತಕ್ಕೆ ಒತ್ತಡದ ಬದುಕಿಗೆ ಎಲ್ಲಾ ಕಾಲಗಳೂ ಒಂದೇ ಅನಿಸಿವೆ. ಅವನು ಅದರ ಗಡಿಯನ್ನು ಬಿಟ್ಟು ಬರಲೊಲ್ಲ. ಬದಲಾಗಿ ದಿನೇ ದಿನೇ ಅದರ ಒಳಗೆ ಮುಳುಗಿ ಹೋಗುವ ಹಂಬಲ.

ಹಾರುವ ಹಕ್ಕಿ, ಮಧು ಹೀರುವ ಚಿಟ್ಟೆ, ಅರಳಿದ ಮಲ್ಲಿಗೆ, ಗಿಡದಲ್ಲಿ ಹಣ್ಣಾದ ಮಾವು, ಮುಂಜಾನೆಯ ಮುತ್ತಿನ ಹನಿ, ಹಕ್ಕಿಗಳ ಕಲರವ, ತಣ್ಣನೆಯ ಗಾಳಿ ಅದರೊಂದಿಗೆ ನಮ್ಮ ನೆನಪುಗಳನ್ನು, ಬದುಕನ್ನು ಸೇರಿಸಿಕೊಂಡು ನಮ್ಮನ್ನು ನಾವು ಮರೆಯುವ ಪ್ರಯತ್ನವನ್ನು ಈ ಕಾಲದವರು ಮಾಡಲಾರರು. ಅದಕ್ಕೆಂದೇ ವಸಂತ ಋತು ಕೇವಲ ಹಾಳೆಗಳಲ್ಲಿ, ಪದಗಳಲ್ಲಿ ಅದರ ಮುಚ್ಚಿಹೋಗಿವೆ. ಕಾಂಪೌಂಡ್‍ನ ಆಚೆ ನಮ್ಮ ದೃಷ್ಟಿ ವಿಸ್ತರಿಸುವವರೆಗೂ ಅದು ಕಾಣದು, ಜೊತೆಗೆ ಮನಸ್ಸುನ್ನು ಕೂಡ!

‍ಲೇಖಕರು avadhi

30 March, 2017

4 Comments

  1. Anonymous

    ವಸಂತ ತಂದಿದೆ ಸಂತಸ…ಖುಷಿಆಯ್ತು ಸರ್.
    ..ಆದಿಕವಿಯಿಂದ ಫೇಸ್ಬುಕ್ ವರೆಗೆ…ಸೂೂಪರ್ ಸರ್…

  2. Anonymous

    sandarbhochita lekhana

  3. Sarojini Padasalagi

    ಶಿಶಿರದಲ್ಲಿ ಬರಡು ಕೊರಡಾಗಿ ನಿಂದ ಭರ ಗಿಡ ಚಿಗುರಿ ಮೈದುಂಬಿ ,ಮನದುಂಬಿ ನಿಂದರೆ ವಸಂತ ಬಂದ ಸಂಭ್ರಮವ ತಂದ ಅಂತ.ಭಾವ ಉಕ್ಕೇರಿ ಹೃದಯ ಹಾಡಲಾರಂಭಿಸಿದರೆ ಮಧುಮಾಸ ಬಂತು ಅಂತ ತಿಳಿ.ತುಂಬಾ ಚಂದದ ಲೇಖನ.
    ” ಮಲ್ಲಿಗೆಯ ಮುಗುಳು ಹೊಯ್ದಾಡಿ
    ರೆಂಬೆ ಕೊಂಬೆಯ ಚಿಗುರು ತುಯ್ದಾಡಿ
    ವಸಂತೋತ್ಸವದ ಸಂಭ್ರಮವ ಸಾರುತಿದೆ
    ಎಲ್ಲೆಲ್ಲೂ ಬನದರಳು ಚಲ್ಲಾಡಿ

    ಹೂತ ಮಾಮರದ ಒಡಲಿಂದ ಕೋಗಿಲೆಯ ಕೂಜನ
    ಪಂಚಮದಿಂಚರದ ಸುಂದರ ಸುಮಧುರ ಗಾಯನ
    ಪ್ರಕೃತಿಯ ಕಣಕಣದಿ ಕಾಣು ವೈಭವದ ಚೈತ್ರಾಗಮನ
    ಆಗಲ್ಲಿ ಮೈ ಮರೆತ ಮನಮಯೂರ ನರ್ತನ

    ಹಸಿರು ಮಕಮಲ್ಲಿನ ಮೆತ್ತನೆಯ ಹಾಸಿನಲ್ಲಿ
    ಸುಳಿಗಾಳಿ ಬಿಡಿಸುತಿದೆ ರಂಗು ರಂಗಿನ ಚಿತ್ತಾರವಲ್ಲಿ
    ಅಲ್ಲೊಂದು ಕೆಂಪು ಇಲ್ಲೊಂದು ಹಳದಿ ನೀಲ ಗುಲಾಬಿ ನೋಡಲ್ಲಿ
    ಬಾನ ಬಿಟ್ಟು ಇಂದ್ರ ಧನುಷ ಬಂದಿಳಿದಿದೆ ಧರೆಗೆ ಇಂದಿಲ್ಲಿ

    ಚಂದ್ರಮನ ಚಂದ್ರಿಕೆಗೆ ತಾರಕೆಯ ಮಿಸುನಿ ಬೆಳಕಿಗೆ
    ಮಬ್ಬು ಹಿಡಿಸುತಿದೆ ಸುಳಿವ ಕೋಲ್ಮಿಂಚು ಆಗಾಗ
    ಅಂಬರದಿ ಮೆರೆವ ಆರ್ಭಟಕೆ ರಮಣೀಯ ಭೀಭತ್ಸತೆಗೆ
    ಕಂಪಿಸಿದ ಬಾಲೆ ಅರಸಿಹಳು ನಲ್ಲನ ತೋಳಾಸರೆಗೆ

    ಬಳಲಿ ಬೆಂಡಾದ ಭೂರಮೆಗೆ ಮಧುರ ಸಿಂಚನ
    ಹೆಜ್ಜೆಹೆಜ್ಜೆಗೆ ಇಣುಕುತಿದೆ ಹೊಸಹೊಸತು ಈ ಚೇತನ
    ಎಲ್ಲೆಲ್ಲೂ ನವೋಲ್ಲಾಸ ಶುರುವಾಗಿದೆ ಹೊಸ ಆವರ್ತನ
    ಇದಲ್ಲವೇ ಜೀವನದ ಸಂಭ್ರಮದ ವಸಂತಾಗಮನ

    ಸರೋಜಿನಿ ಪಡಸಲಗಿ

  4. Sarojini Padasalagi

    ಕೆಳಗೆ ಬರೆದ ಕವನ “ವಸಂತಾಗಮನ ”
    ಸರೋಜಿನಿ ಪಡಸಲಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading