ಡಾ. ಪ್ರೇಮಲತ ಬಿ
ಕಾವ್ಯದಲಿ ಕಣ್ಣೀರು
ಕವನದಲಿ ಅರ್ದ್ರತೆ
ಕಥೆಯಲ್ಲಿ ಕ್ರೌರ್ಯ, ಅಳಲು
ಕಂಡರೆ ನನ್ನ ವಿಮರ್ಶಕ ಮಿತ್ರರು
ಚಪ್ಪರಿಸುತ್ತಾರೇಕೋ ಗೊತ್ತಿಲ್ಲ
ಹದಿನಾರಕ್ಕೆ ಜಾಕಿಚಾನ್
ಹತ್ತೊಂಭತ್ತರಲಿ ಐಶ್ವರ್ಯ ರೈ
ಇಪ್ಪತ್ತೈದರಲಿ ಪ್ರಧಾನಿ
ಆಗಲು ಕಂಡ ಕನಸುಗಳ
ಕವನಗಳಲಿ ಕಂಡರೆ ನಗುತ್ತಾರೇಕೋ ತಿಳಿದಿಲ್ಲ
ಬವಣೆಗಳಿಲ್ಲದ ಕವನಗಳ
ಸವಕಲೆಂದು ಕರೆದು
ಅಸ್ತಿ, ಪ್ರೇತಗಳಿಲ್ಲದ ಕಥೆಗಳ
ತಿರುಳಿಲ್ಲವೆಂದು ಜರಿದು
ಕ್ರೈಂ ಇರದ ಕಾದಂಬರಿಗಳ
ಶಿಥಿಲವೆಂದು ಹಳಿದು
ಸಿಂಗಾರವಿಲ್ಲದ ಭಾಷೆ, ಸುಭಗ ಪದಗಳ
ಜಂಜಾಟವಿಲ್ಲದ

ಸಂತಸ ತುಂಬಿದ ಸರಳ
ಜೀವನದ ಉಕ್ತಿಗಳ
ಎಳೆ ಎಳೆಯಾಗಿ ಪೋಸ್ಟ್ ಮಾರ್ಟಂ
ಮಾಡುವ ಅಕಾಡೆಮಿಕ್ ವಿಮರ್ಶೆಗಳಲಿ
ಸಾಮಾನ್ಯನ ಸಾಹಿತ್ಯವೇ ದುಃಖದಿ
ಬಡವಾಗಿ ಕೊಲೆಯಾಗುತ್ತಿದೆ
ಇನ್ನು ಕ್ರೈಂ ಗಾಗಿ ಬೇರೆ ಹುಡುಕಬೇಕೆ?






0 Comments