ಅನಂತ ಕುಣಿಗಲ್
ನೋಡದ ನೋಟ ಕೇಳದ ಪಾಠ
ವೇಗದ ಓಟ ನಿಮಗೆ ತುಂಟಾಟ, ನಮಗೆ ಸಂಕಟ
ಇದು ನಮ್ಮ ಕ್ರಾಂತಿಗೀತೆ
ಮನ ನೊಂದವರಿಗಾಗಿ ಮನನೊಂದು ಹೆಣೆದ ಗೀತೆ
ನ್ಯಾಯಕ್ಕೆ ತಕ್ಕಡಿಯಾಗುವ ಗೀತೆ
ಉತ್ತೋರು ನಾವು ಬಿತ್ತೋರು ನಾವು
ಬೆಲೆಯಿಲ್ಲದ ಬಾಣಲೆಯಲ್ಲಿ ಅರೆಬೆತ್ತಲಾಗಿ ಬೆಂದೂರು
ಹಸಿದವರ ನೆತ್ತರ ಕುಡಿದೋರು
ಕಾಸಿಗೆ ಕಾನೂನು ಕೊಂಡು ಸುಖನಿದ್ರೆ ಮಾಡೋರು
ಸ್ವತಂತ್ರರು ನೀವು, ಅತಂತ್ರರು ನಾವು

ಕಷ್ಟಪಟ್ಟು ಓದಿದೋರು
ಕಷ್ಟದಲ್ಲಿ ಉಳಿದು ಪ್ರಥಮ ದರ್ಜೆಗೆ ಸುಸ್ತಾದೋರು ನಾವು
ಹಾಡಿಕೊಂಡು ಕುಣಿದೋರು
ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿ ರ್ಯಾಂಕ್ ಪಡೆದೋರು ನೀವು
ನಮಗೆ ಕಾಲವಿಲ್ಲ.. ನಿಮ್ಮ ಹುಚ್ಚಾಟಕ್ಕೆ ಕೊನೆಯಿಲ್ಲ!!
ದುಡ್ಡಿಗಾಗಿ ಅಲೆದೋರು
ಅಲೆದಲೆದು ಕೂಡಿಸಿ ಕನಸ ಕಟ್ಟಿಕೊಂಡೋರು ನಾವು
ಘರ್ಜನೆಯ ಬೀರಿದೋರು
ರೈತೋದ್ಧಾರದ ಹೆಸರಲ್ಲಿ ನಮ್ಮ ಕನಸನ್ನೇ ತುಳಿದೋರು
ಗೆಲುವು ನಿಮ್ಮ ಹೆಸರಲ್ಲಿ.. ಸಂಪತ್ತು ನಿಮ್ ಹೆಸರಲ್ಲಿ..
ಅನ್ಯಾಯ ಮಾತ್ರ ನಮ್ ಹೆಸರಲ್ಲಿ..
ಕಾವೇರಿ ಬಿಟ್ಟೋರು
ನಗುವಿನಲಿ ನೋವ ಮುಚ್ಚಿಟ್ಟು ಕೊನೆಯಲ್ಲಿ ಉಳಿದೋರು
ಬರಿಗೈಲಿ ಬಂದೋರು
ಅಧಿಕಾರ ಕಸಿದು ಕೈತುಂಬಾ ಉಂಡು ತೇಗಿದೋರು
ನಿಮ್ಮ ನೆಣ ಕರಗಲಿಲ್ಲ.. ನಮ್ಮ ಗೋಳು ಕೇಳೋರಿಲ್ಲ..

ಬೆವರ ಸುರಿಸಿದೋರು
ನಿಮ್ಮ ಕುಟುಂಬವನ್ನು ಎಡೆಬಿಡದೆ ಕಾಯೋರು
ಮೋಸದಾಟ ಕಲಿತೋರು
ಕಾಯುವ ನೆಪದಲ್ಲಿ ಅತ್ಯಾಚಾರವೆಸಗಿ ಕಾಡುವವರು
ತಪ್ಪೆಲ್ಲಾ ನಮ್ಮದು.. ನಿಮ್ಮನ್ನು ಆರಿಸಿದುದು!!
ಬಚ್ಚಿಟ್ಟ ನಿಮ್ಮ ಸುಲಿಗೆ ವಂಚನೆಗಳಿಗೆ ತಿರುಮಂತ್ರ ಸಿದ್ಧವಾಗುತೈತಿ
ವಿಪರ್ಯಾಸದ ನನ್ನ ಕೂಗು ಮುಗಿಲು ಮುಟ್ಟಿದ ಓಲೆ ಬಂದೈತಿ
ಭೋರ್ಗರೆವ ನಿಮ್ಮ ಸೊಕ್ಕು ಮುರಿಯುವ ಶಸ್ತ್ರ ತಯಾರಾಗುತೈತಿ
ನಿಮ್ಮಾಣೆ ನನ್ನಾಣೆ ಜಗದ್ಗುರು ಭೈರವೇಶ್ವರನಾಣೆ ಬರುತೈತಿ ಬರುತೈತಿ ನಿಮ್ ಹುಚ್ಚಾಟಕ್ಕೆ ತೆರೆ ಎಳೆಯುವ ಕಾಲ ಬರತೈತಿ..
ಇದು ನಮ್ಮ ಕ್ರಾಂತಿಗೀತೆ
ಮನ ನೊಂದವರಿಗಾಗಿ ಮನನೊಂದು ಹೆಣೆದ ಗೀತೆ
ನ್ಯಾಯಕ್ಕೆ ತಕ್ಕಡಿಯಾಗುವ ಗೀತೆ!!






0 Comments