’ಕ್ರಾಂತಿ ಎಂದರೆ ಬಾಂಬು ಪಿಸ್ತೂಲುಗಳ ಸಂಸ್ಕೃತಿಯಲ್ಲ…’

ಇನ್ಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗೆ ಒಂದು ಹೊಸ ಆಯಾಮವನ್ನು ನೀಡಿದ ಭಗತ್ ಸಿಂಗ್

ನಾ ದಿವಾಕರ್

ಮಾರ್ಚ್ 23 ಭಾರತದ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ದಿನ. ಗಾಂಧೀಜಿಯ ಪ್ರಭಾವದಿಂದ ದೇಶ ಸ್ವಾತಂತ್ರ್ಯ ಗಳಿಸಲು ಅಹಿಂಸಾತ್ಮಕ ಮಾರ್ಗವೊಂದೇ ಪರಿಹಾರ ಎಂದು ನಂಬಿದ್ದ ಕಾಲದಲ್ಲಿ ದೇಶದ ಯುವ ಜನತೆಯಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿ, ಇನ್ಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗೆ ಒಂದು ಹೊಸ ಆಯಾಮವನ್ನು ನೀಡಿದ ಭಗತ್ ಸಿಂಗ್ ತನ್ನ ಸಹಚರರಾದ ರಾಜಗುರು, ಸುಖ್ದೇವ್ ಅವರೊಡನೆ ನೇಣುಗಂಬ ಏರಿದ ದಿನ ಮಾರ್ಚ್ 23 1931. ವಸಾಹತು ಆಳ್ವಿಕರ ದೃಷ್ಟಿಯಲ್ಲಿ ಭಯೋತ್ಪಾದಕನಾಗಿದ್ದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೃಷ್ಟಿಯಲ್ಲಿ ಉಗ್ರಗಾಮಿಯಾಗಿದ್ದ ಕ್ರಾಂತಿಕಾರಿ ಯುವಕ ಭಗತ್ ಸಿಂಗ್  ನನ್ನು ಪ್ರತಿನಿತ್ಯ ನೆನೆಯುವಂತಹ ಸನ್ನಿವೇಶ ಎದುರಾಗಿದೆ.  ವ್ಯವಸ್ಥೆ ಯಾವುದೇ ಇರಲಿ, ಪ್ರಭುತ್ವದ ಲಕ್ಷಣ ಎಂತಹುದೇ ಇರಲಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಮತ್ತು ಸ್ವೀಕೃತ ಮೌಲ್ಯಗಳ ವಿರುದ್ಧ ಹೋರಾಡುವ ಯಾವುದೇ ವ್ಯಕ್ತಿಯನ್ನು, ಸಂಘಟನೆಯನ್ನು ಪ್ರಭುತ್ವ ದೇಶದ್ರೋಹಿಯಂತೆಯೇ ಕಾಣುತ್ತದೆ. ಭಗತ್ ಸಿಂಗ್ ಸಹ ಇಂತಹ ಒಂದು ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದ ಕ್ರಾಂತಿಕಾರಿ ಯುವಕ. ಶಾಸನ ಸಭೆಯಲ್ಲಿ ಬಾಂಬ್ ಎಸೆದ ಅಪರಾಧಕ್ಕೆ ಗಲ್ಲು ಶಿಕ್ಷೆ ಅನುಭವಿಸಿದ ಭಗತ್ ಸಿಂಗ್ ನ ಧ್ಯೇಯಾದರ್ಶಗಳನ್ನು ಗ್ರಹಿಸಲು ಈ ಕೆಲವು ಹೇಳಿಕೆಗಳು ಸಾಕು.  ಕಿವುಡರಿಗೆ ಕೇಳುವಂತೆ ಮಾಡಲು ಅಬ್ಬರದ ದನಿ ಅಗತ್ಯ  ಫ್ರಾನ್ಸ್ ನ ಅನಾಕರ್ಸ್ಟ್ ಹುತಾತ್ಮ ವೇಲಿಯಂಟ್ ಇಂತಹುದೇ ಸಂದರ್ಭದಲ್ಲಿ ಉಚ್ಚರಿಸಿದ್ದ ಈ ಅಮೂಲ್ಯ ಪದಗಳನ್ನು ಉಚ್ಚರಿಸುವುದರೊಂದಿಗೇ ನಾವು ನಮ್ಮ ಈ ಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತೇವೆ.

ಕಳೆದ ಹತ್ತು ವರ್ಷಗಳ ಸುಧಾರಣಾ ಕ್ರಮಗಳ ಕರಾಳ ಅಪಮಾನಕರ ಇತಿಹಾಸದ ಪುನರಾವರ್ತನೆ ಮಾಡದೆ , ಭಾರತದ ಸಂಸತ್ತು ಎಂದು ಹೇಳಲಾಗುವ ಈ ಶಾಸನ ಸಭೆಯ ಮೂಲಕ ಭರತ ಖಂಡದ ಮೇಲೆ ನಡೆಸಿದ ಅವಮಾನಕರ ಆಕ್ರಮಣಗಳನ್ನು ಪುನರುಚ್ಚರಿಸದೆ , ಈ ಬಾರಿ ಪುನಃ ನಾವು ನೋಡುತ್ತಿರುವಂತೆ, ಭಾರತದ ಪ್ರಜೆಗಳು ಸೈಮನ್ ಕಮಿಷನ್ ಮೂಲಕ ಕೆಲವು ಸುಧಾರಣೆಗಳನ್ನು ಅಪೇಕ್ಷಿಸುತ್ತಾ ಪ್ರಭುತ್ವ ಎಸೆಯುವ ತುಣುಕುಗಳನ್ನು ಆಯ್ದುಕೊಳ್ಳಲು ಕಾತುರದಿಂದಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಸಾರ್ವಜನಿಕ ಸುರಕ್ಷಾ ವಿಧೇಯಕ ಮತ್ತು ಕಾರ್ಮಿಕ ವಿವಾದ ವಿಧೇಯಕಗಳಂತಹ ಜನವಿರೋಧಿ, ದಮನಕಾರಿ ಮಸೂದೆಗಳನ್ನು ಜನತೆಯ ಮೇಲೆ ಹೇರುತ್ತಿದೆ.  ಮುಂದಿನ ಸಭೆಯಲ್ಲಿ ಪತ್ರಿಕಾ ರಾಜದ್ರೋಹ ಮಸೂದೆಯನ್ನು ಜಾರಿಗೊಳಿಸಲು ಯೋಜಿಸುತ್ತಿದೆ. ಮುಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ನಾಯಕರನ್ನು ಅಕಾರಣವಾಗಿ ಬಂಧಿಸುತ್ತಿರುವುದನ್ನು ನೋಡಿದರೆ ಗಾಳಿ ಎತ್ತ ಬೀಸುತ್ತಿದೆ ಎಂದು ಅರಿವಾಗುತ್ತದೆ. ಇಂತಹ ತೀವ್ರ ಪ್ರಚೋದನಕಾರಿ ಸನ್ನಿವೇಶದಲ್ಲಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್, ತನ್ನ ಪೂರ್ಣ ಹೊಣೆಗಾರಿಕೆಯನ್ನು ಮನಗಂಡು, ತೀವ್ರ ಗಂಭೀರತೆಯಿಂದ, ತನ್ನ ಸೈನ್ಯಕ್ಕೆ ಈ ಒಂದು ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲು ಆದೇಶಿಸಿದ್ದು ತನ್ಮೂಲಕ ಈ ಅವಮಾನಕರ ಪ್ರಹಸನಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದೆ.

ಅಧಿಕಾರಶಾಹಿಯಲ್ಲಿರುವ ಶೋಷಕರು ಏನು ಬೇಕಾದರೂ ಮಾಡಲಿ ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ಅವರ ನೈಜ ರೂಪವನ್ನು ಅನಾವರಣಗೊಳಿಸುವ ಉದ್ದೇಶ ನಮ್ಮದು. ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಹಿಂದಿರುಗಿ ಮುಂಬರುವ ಕ್ರಾಂತಿಗೆ ಜನತೆಯನ್ನು ಸಿದ್ಧಪಡಿಸಲಿ. ಭಾರತದ ಸಮಸ್ತ ಜನತೆಯ ಪರವಾಗಿ ಸಾರ್ವಜನಿಕ ಸುರಕ್ಷೆ ಮತ್ತು ಕಾರ್ಮಿಕ ವಿವಾದ ವಿಧೇಯಕಗಳ ವಿರುದ್ಧ ಮತ್ತು ಲಾಲಾ ಲಜಪತರಾಯ್ ಅವರ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ, ಇತಿಹಾಸದಲ್ಲಿ ಪದೇ ಪದೇ ನಿರೂಪಿತವಾಗಿರುವ, ವ್ಯಕ್ತಿಗಳನ್ನು ಕೊಲ್ಲಬಹುದು ಆದರೆ ಚಿಂತನೆಗಳನ್ನು ಕೊಲ್ಲಲಾಗುವುದಿಲ್ಲ, ಎಂಬ ಸತ್ಯವನ್ನು ಮನದಟ್ಟುಮಾಡಲು ಯತ್ನಿಸಿದ್ದೇವೆ.  ಮಹಾನ್ ಸಾಮ್ರಾಜ್ಯಗಳು ಕುಸಿದು ನಿಶ್ಯೇಷವಾಗಿವೆ ಆಧರೆ ಚಿಂತನೆಗಳು ಜೀವಂತವಾಗಿವೆ. ಬೋರ್ಬನ್ಸ್ ಮತ್ತು ತ್ಸಾರ್ ದೊರೆಗಳು ಇನ್ನಿಲ್ಲವಾಗಿದ್ದಾರೆ ಆದರೆ ಕ್ರಾಂತಿ ವಿಜಯೋತ್ಸವದಿಂದ ಮುನ್ನಡೆದಿದೆ. ಮಾನವ ಜೀವ ಅತ್ಯಂತ ಪವಿತ್ರವೆಂದು ಭಾವಿಸುವ ನಾವು,  ಭವಿಷ್ಯದ ಪ್ರಪಂಚದಲ್ಲಿ ಮಾನವ ಜೀವಿ ಶಾಂತಿ ಮತ್ತು ಸ್ವಾತಂತ್ರ್ಯದ ಜೀವನ ನಡೆಸುವ ಅಮೋಘ ಕನಸನ್ನು ಸಾಕಾರಗೊಳಿಸಲು ಶ್ರಮಿಸುವ ನಾವು, ರಕ್ತಪಾತ ನಡೆಸಿದ್ದಕ್ಕಾಗಿ ನಮಗೆ ವ್ಯಥೆಯಾಗಿದೆ. ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಆದರೆ ಮಾನವ ಜಗತ್ತಿನಲ್ಲಿ ಮನುಷ್ಯ ಮನುಷ್ಯನನ್ನು ಶೋಷಣೆಗೊಳಪಡಿಸುವುದನ್ನು ಅಸಾಧ್ಯವಾಗುವಂತೆ ಮಾಡುವ ಧ್ಯೇಯ ಹೊಂದಿರುವ ಮಹಾನ್ ಕ್ರಾಂತಿಯ ಪಥದಲ್ಲಿ ಕೆಲವೇ ವ್ಯಕ್ತಿಗಳ ತ್ಯಾಗ ಬಲಿದಾನಗಳು ಅನಿವಾರ್ಯವಾಗಿರುತ್ತದೆ.ಕ್ರಾಂತಿ ಚಿರಾಯುವಾಗಲಿ !

ಇದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹತ್ತರವಾದ ಘಟ್ಟ. ಈ ದಿನದಿಂದಲೇ ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆ ಮುಕ್ತ-ಸ್ವತಂತ್ರ ಭಾರತ ಬಯಸುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾನ್ಯ ಘೋಷಣೆಯಾಗಿ ಪರಿಣಮಿಸಿತ್ತು. ನಿರೀಕ್ಷಿಸಿದಂತೆ ಈ ಘೋಷಣೆಯನ್ನು ಅಳವಡಿಸದ ಸಂಘಟನೆಗಳೆಂದರೆ ಹಿಂದೂ ಮಹಾಸಭಾ, ಆರೆಸ್ಸೆಸ್ನಂತಹ ಕೋಮುವಾದಿ, ಮೂಲಭೂತವಾದಿ ಸಂಘಟನೆಗಳು ಮತ್ತು ಮೂಲಭೂತವಾದಿ ಮುಸ್ಲಿಂ ಸಂಘಟನೆಗಳು. ಭಗತ್ ಸಿಂಗ್ ಮತ್ತವನ ಸಂಗಡಿಗರು ಬ್ರಿಟೀಷ್ ವಸಾಹತು ನ್ಯಾಯಾಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳದಿರಲು ನಿರ್ಧರಿಸಿದ್ದರು. ಬದಲಾಗಿ ತಮ್ಮ ತಪ್ಪೊಪ್ಪಿಕೊಂಡು ತಮ್ಮ ತತ್ವ ಮತ್ತು ಸಂದೇಶವನ್ನು ಇಡೀ ದೇಶಕ್ಕೆ ಸಾರಲು ನಿರ್ಧರಿಸಿದ್ದರು.  ರಾಷ್ಟ್ರೀಯವಾದಿ ನ್ಯಾಯವಾದಿಯೊಬ್ಬರ ಸಲಹೆಯನ್ನು ಪರಿಗಣಿಸುವುದಾಗಿ ನಿರ್ಧರಿಸಿದ್ದರೂ ಈ ಕ್ರಾಂತಿಕಾರಿಗಳು ತಮ್ಮ ಪರವಾಗಿ ನ್ಯಾಯಾಲಯದಲ್ಲಿ ಯಾರೂ ವಕಾಲತ್ತು ವಹಿಸಲು ಒಪ್ಪಿರಲಿಲ್ಲ. ಅಂದರೆ ತಾವೇ ಸ್ವತಃ ತಮ್ಮ ಪರವಾಗಿ ವಾದಿಸಲು ನಿರ್ಧರಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಈ ಕ್ರಾಂತಿಕಾರಿಗಳು ಈ ರೀತಿ ವಾದಿಸಿದ್ದರು : ನಾವು ನಮ್ಮ ದೇಶದ ಇತಿಹಾಸ ಮತ್ತು ಸನ್ನಿವೇಶಗಳನ್ನು ಹಾಗು ಆಶೋತ್ತರಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೆಂದೇ ಸ್ವತಃ ಭಾವಿಸಿದ್ದೇವೆ. ನಾವು ಠಕ್ಕುತನವನ್ನು ತಿರಸ್ಕರಿಸುತ್ತೇವೆ. ನಮ್ಮ ಪ್ರತಿರೋಧ ಇರುವುದು, ತನ್ನ ಆರಂಭದ ದಿನಗಳಿಂದಲೂ ತನ್ನ ಅಯೋಗ್ಯತನವನ್ನು ಪ್ರದರ್ಶಿಸುತ್ತಿರುವ ಮತ್ತು ವ್ಯಾಪಕ ಅವ್ಯವಹಾರಗಳನ್ನು ಮಾಡುತ್ತಿರುವ ಒಂದು ವ್ಯವಸ್ಥಿತ ಸಂಸ್ಥೆಯ ವಿರುದ್ಧ.

ನಾವು ಹೆಚ್ಚು ಹೆಚ್ಚು ಯೋಚಿಸಿದಷ್ಟೂ ನಮಗೆ ಸ್ಪಷ್ಟವಾಗುವ ಸಂಗತಿ ಎಂದರೆ ಈ ಸಂಸ್ಥೆ ಇರುವುದು ಭಾರತದ ಅಸಹಾಯಕತೆಯನ್ನು ಮತ್ತು ಅವಮಾನಗಳನ್ನು ಜಗತ್ತಿಗೆ ಪ್ರಚರುಪಡಿಸಲು ಮಾತ್ರ.  ಹಾಗಾಗಿ ಈ ಸಂಸ್ಥೆ ಒಂದು ಬೇಜವಾಬ್ದಾರಿಯುತ, ಸರ್ವಾಧಿಕಾರಿ ಧೋರಣೆಯ ಪ್ರಬಲ ಅಧಿಪತ್ಯದ ಸಂಕೇತವಾಗಿಯೇ ಕಾಣುತ್ತದೆ. ನಮ್ಮ ರಾಷ್ಟ್ರೀಯ ನಾಯಕರು ಜನಪ್ರತಿನಿಧಿಗಳು ನಿರಂತರವಾಗಿ ತಮ್ಮ ರಾಷ್ಟ್ರೀಯ ಬೇಡಿಕೆಗಳನ್ನು ಮಂಡಿಸುತ್ತಲೇ ಇದ್ದರೂ ಅವೆಲ್ಲವೂ ಕಸದ ಬುಟ್ಟಿ ಸೇರುತ್ತಿದೆ,,,,,, ಹಾಗಾಗಿ ನಾವು ಉದ್ದೇಶಪೂರ್ವಕವಾಗಿಯೇ ನಮ್ಮ ತಪ್ಪಿಗೆ ಸ್ವತಃ ದಂಡ ಭರಿಸಲು ಸಿದ್ಧರಾಗಿದ್ದೇವೆ. ತನ್ಮೂಲಕವಾದರೂ ವ್ಯಕ್ತಿಗಳನ್ನು ಕೊಲ್ಲುವುದರ ಮೂಲಕ ಚಿಂತನೆಗಳನ್ನು ಕೊಲ್ಲಲಾಗುವುದಿಲ್ಲ ಎಂಬ ಸತ್ಯವನ್ನು ಸಾಮ್ರಾಜ್ಯಶಾಹಿ ಶೋಷಕರಿಗೆ ಮನದಟ್ಟು ಮಾಡಲಿಚ್ಚಿಸುತ್ತೇವೆ. ಅಷ್ಟೇನೂ ಮಹತ್ವವಿಲ್ಲದ ಎರಡು ಘಟಕಗಳನ್ನು ನಾಶಪಡಿಸಿದ ಮಾತ್ರಕ್ಕೆ ಒಂದು ಬೃಹತ್ ರಾಷ್ಟ್ರವನ್ನು ನಾಶಪಡಿಸಲಾಗುವುದಿಲ್ಲ

ಕ್ರಾಂತಿಯನ್ನು ನೀವುಗಳು ಹೇಗೆ ಅರ್ಥೈಸುತ್ತೀರಿ ಎಂದು ಕೇಳಿದಾಗ ಅವರ ಉತ್ತರ ಹೀಗಿತ್ತು : ಸೂಕ್ತ ಸಮಯದಲ್ಲಿ ರಕ್ಷಿಸದೆ ಹೋದಲ್ಲಿ ನಾಗರಿಕತೆಯ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಹಾಗಾಗಿ ತೀವ್ರತೆರನಾದ ಬದಲಾವಣೆಗಳು ಅತ್ಯಗತ್ಯ.  ಈ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವವರು ಸಮಾಜವನ್ನು ಸಮಾಜವಾದದ ಮಾರ್ಗದಲ್ಲಿ ಪುನರ್ ಸಂಘಟಿಸುವ ನಿಟ್ಟಿನಲ್ಲಿ ಸಕ್ರಿಯವಾಗಬೇಕಿದೆ. ಈ ಕಾರ್ಯವನ್ನು ಕೈಗೊಳ್ಳದೆ, ಮನುಷ್ಯರು ಮನುಷ್ಯರನ್ನು ಶೋಷಿಸುವುದು, ರಾಷ್ಟ್ರಗಳನ್ನು ರಾಷ್ಟ್ರಗಳು ಶೋಷಣೆಗೊಳಪಡಿಸುವುದನ್ನು ತಡೆಗಟ್ಟದೆ ಹೋದರೆ ಮಾನವ ಸಮಾಜ ಇಂದು ಎದುರಿಸುತ್ತಿರುವ ಭೀತಿ ಮತ್ತು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಲಾಗುವುದಿಲ್ಲ. ಯುದ್ಧಗಳನ್ನು ಕೊನೆಗೊಳಿಸಿ ಸಾರ್ವತ್ರಿಕ ಶಾಂತಿಯನ್ನು ಸ್ಥಾಪಿಸುವ ಮಾತುಗಳೆಲ್ಲವೂ ಕೇವಲ ಠಕ್ಕುತನದ ಮಾತುಗಳಾಗುತ್ತವೆ.ಕ್ರಾಂತಿ ಎಂದರೆ ಈ ರೀತಿಯ ಯಾವುದೇ ಅವ್ಯವಸ್ಥೆಯ ಭೀತಿಯನ್ನು ಎದುರಿಸದ ಒಂದು ಸಾಮಾಜಿಕ ವ್ಯವಸ್ಥೆಯ ಸ್ಥಾಪನೆ ಎಂದೇ ನಾವು ಭಾವಿಸುತ್ತೇವೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರಮಜೀವಿಗಳ ಸಾರ್ವಭೌಮತೆಯನ್ನು ಮಾನ್ಯ ಮಾಡುವುದೇ ಅಲ್ಲದೆ ಜಾಗತಿಕ ಮಟ್ಟದ ಒಕ್ಕೂಟ ವ್ಯವಸ್ಥೆಯೊಂದು ಮಾನವ ಸಮಾಜವನ್ನು ಬಂಡವಾಳಶಾಹಿಯ ಬಂಧನದಿಂದ ಹಾಗೂ ಸಾಮ್ರಾಜ್ಯಶಾಹಿಯ ಯುದ್ಧ ಪರಂಪರೆಯ ಕಷ್ಟಗಳಿಂದ ಮುಕ್ತಗೊಳಿಸಬೇಕಾಗಿದೆ.ಇದು ನಮ್ಮ ಪ್ರಮುಖ ಧ್ಯೇಯವಾಗಿದ್ದು ಈ ಸಿದ್ಧಾಂತವೇ ನಮಗೆ ಪ್ರೇರಣೆಯಾಗಿದೆ. ನಾವು ನಮ್ಮ ನ್ಯಾಯಯುತವಾದ ಎಚ್ಚರಿಕೆಯ ಮಾತುಗಳನ್ನು ಸಾಕಷ್ಟು ಮನದಟ್ಟಾಗುವ ರೀತಿಯಲ್ಲೇ ಹೇಳಿದ್ದೇವೆ.

ಸಮಾಜ ಮತ್ತು ಪರಿವರ್ತನೆಯ ಸಂಬಂಧವಾಗಿ ಭಗತ್ ಸಿಂಗ್ ಮಾರ್ಕ್ಸ್ ವಾದಕ್ಕೆ ಹತ್ತಿರವಾಗಿದ್ದುದು ಸುಸ್ಪಷ್ಟ. ಮಾಡರ್ನ್ ರಿವ್ಯೂ ಪತ್ರಿಕೆಯ ಸಂಪಾದಕ ರಮಾನಂದ್ ಚಟರ್ಜಿ ಇನ್ಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಲೇವಡಿ ಮಾಡಿದ ಸಂದರ್ಭದಲ್ಲಿ ಭಗತ್ ಸಿಂಗ್ ಮತ್ತು ದತ್ತಾ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ ರಮಾನಂದ್ ಅವರ ವಾದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದರು. ಈ ಪ್ರತಿಕ್ರಿಯೆ ಡಿಸೆಂಬರ್ 24 1929ರ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು : ರಕ್ತಪಾತದ ಗಲಭೆಗಳೇ ಕ್ರಾಂತಿ ಎಂದು ಭಾವಿಸಬೇಕಿಲ್ಲ. ಕ್ರಾಂತಿ ಎಂದರ ಬಾಂಬು ಪಿಸ್ತೂಲುಗಳ ಸಂಸ್ಕೃತಿಯಲ್ಲ. ಕೆಲವು ಆಂದೋಲನಗಳಲ್ಲಿ ಇವುಗಳು ಪ್ರಮುಖ ಮಾತ್ರ ವಹಿಸುತ್ತವೆ ನಿಜ ಆದರೆ ಅದೇ ಕಾರಣಕ್ಕಾಗಿ ಅವು ಪ್ರಧಾನವಾಗಿ ಪರಿಣಮಿಸುವುದಿಲ್ಲ. ದಂಗೆಯೇ ಕ್ರಾಂತಿ ಎನಿಸುವುದಿಲ್ಲ. ಆದರೆ ದಂಗೆಗಳು ಕ್ರಾಂತಿಯ ಮಾರ್ಗವಾಗಬಹುದಷ್ಟೆ.  ಈ ಘೋಷಣೆಯಲ್ಲಿ ಉಪಯೋಗಿಸುವ ಕ್ರಾಂತಿ ಎನ್ನುವ ಪದದ ಅರ್ಥ ಪರಿವರ್ತನೆಗಾಗಿ ಹಪಹಪಿಸುವ ಸ್ಪೂರ್ತಿಯ ಸಂಕೇತವಷ್ಟೆ.  ಸಾಧಾರಣವಾಗಿ ಜನಸಾಮಾನ್ಯರು ಸ್ಥಾಪಿತ ವ್ಯವಸ್ಥೆಯನ್ನೇ ಒಪ್ಪಿಕೊಂಡು ಬಾಳುವುದರಿಂದ ಪರಿವರ್ತನೆಯನ್ನು ಬಯಸಲು ಹೆದರುತ್ತಾರೆ. ಈ ಸಿನಿಕ ನಿರುತ್ಸಾಹದ ಮನೋಭಾವವನ್ನು ಹೋಗಲಾಡಿಸಿ ಕ್ರಾಂತಿಯ ಸ್ಫೂರ್ತಿಯನ್ನು ಮೂಡಿಸುವುದೇ ನಮ್ಮ ಉದ್ದೇಶ.  ಇಲ್ಲವಾದಲ್ಲಿ  ಸಮಾಜವು ಅವನತಿಯ ಹಾದಿಯನ್ನೇ ಹಿಡಿದು ಸಾಗುತ್ತಾ ಪ್ರತಿಗಾಮಿ ಶಕ್ತಿಗಳು ಇಡೀ ಮಾನವ ಸಮಾಜವನ್ನು ಅವ್ಯವಸ್ಥೆಯತ್ತ ಕೊಂಡೊಯ್ಯುತ್ತವೆ.

ತತ್ಪರಿಣಾಮವಾಗಿ ಜಡತ್ವ ಸೃಷ್ಟಿಯಾಗಿ ಮಾನವ ಸಮಾಜದ ಅಭ್ಯುದಯವೇ ಅಸ್ತವ್ಯಸ್ಥವಾಗುತ್ತದೆ. ಕ್ರಾಂತಿಯ ಸ್ಫೂರ್ತಿಯ ವ್ಯಾಪ್ತಿ ಸದಾಕಾಲವೂ ಮನುಕುಲದ ಆತ್ಮವನ್ನು ಒಳಗೊಂಡಿರಬೇಕು. ಹಾಗಾದಲ್ಲಿ ಮಾತ್ರ ಪ್ರತಿಗಾಮಿ ಶಕ್ತಿಗಳು ಪ್ರಾಬಲ್ಯ ಗಳಿಸುವುದನ್ನು ತಡೆಗಟ್ಟಿ ಅವುಗಳ ಮುನ್ನಡೆಯನ್ನು ಸ್ಥಗಿತಗೊಳಿಸಬಹುದು. ಹಳೆಯ ವ್ಯವಸ್ಥೆ ಬದಲಾಗಬೇಕು, ನೂತನ ವ್ಯವಸ್ಥೆಗೆ ಶಾಶ್ವತವಾಗಿ ದಾರಿ ಮಾಡಿಕೊಡುತ್ತಿರಬೇಕು. ಆಗ ಮಾತ್ರ ಒಂದು ಒಳ್ಳೆಯ ವ್ಯವಸ್ಥೆ ಜಗತ್ತನ್ನು ಭ್ರಷ್ಟಗೊಳಿಸುವುದಿಲ್ಲ. ನಾವು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಕೂಗುವಾಗ ಕ್ರಾಂತಿಯನ್ನು ಈ ಅರ್ಥದಲ್ಲೇ ಭಾವಿಸುತ್ತೇವೆ ಭಗತ್ ಸಿಂಗ್ ಅವರ ಧ್ಯೇಯ, ಆದರ್ಶ ಮತ್ತು ರಾಜಕೀಯ ಮೌಲ್ಯಗಳು ಸಾರ್ವಕಾಲಿಕ ಸತ್ಯ. ಅವರ ಕ್ರಾಂತಿಕಾರಿ ಧೋರಣೆಯೂ ಸಾರ್ವಕಾಲಿಕ.

‍ಲೇಖಕರು avadhi

March 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: