ಕೋವಿಡ್ ಕಾಲದ ಕಥೆಗಳು – ಜೀವ ವಿಮೆ

ಶರತ್ ಪಿ ಕೆ

ಬೆಳಗ್ಗೆ ಸರಿಯಾಗಿ 5:40ಕ್ಕೆ ಇನ್ನೇನು ಮೊಬೈಲ್ ಫೋನಿನ ಅಲಾರಾಂ ಸದ್ದು ಮಾಡುವುದರೊಳಗಾಗಿ ಬೆಚ್ಚಿಬಿದ್ದಂತಾಗಿ ಕಿಶೋರ್ ಎಚ್ಚರಗೊಂಡು ಅಲಾರಾಂ ಅನ್ನು ಆಫ್ ಮಾಡಿದ. ಮುಖ ತೊಳೆದು ದೇವರಿಗೆ ಎರಡೂ ಕೈ ಮುಗಿದು, ಟ್ರ್ಯಾಕ್ ಸೂಟ್, ಶೂ ಗಳನ್ನು ಧರಿಸಿ, ರಾಕೆಟ್ ಹಿಡಿದು ಮನೆಯಿಂದ ಹೊರಬಂದು, ಎದುರು ಮನೆಯ ಮನ್ಮಥರಾಯನನ್ನು ಕಾಯುತ್ತಿದ್ದರೆ, 5-10ನಿಮಿಷದೊಳಗಾಗಿ ಮನೆಯ ಬಾಗಿಲನ್ನು ದಡಬಡಗೊಳಿಸಿ, ಮುಚ್ಚಿ ತಾಯಾರಾದ ಮನ್ಮಥರಾಯ ತಮ್ಮ ಮೋಟಾರ್ ಸೈಕಲ್ಲಿನೊಂದಿಗೆ ಗೇಟಿನಿಂದ ಹೊರ ಬಂದನು. ಇಬ್ಬರು ಬೈಕ್ ಸವಾರಿ ಮಾಡಿ, ಮಡಿಕೇರಿಯ ಚುಮುಚುಮು ಚಳಿಯಲ್ಲಿ ಮಾರ್ಷಲ್ ಉದ್ಯಾನವನದ ಪಕ್ಕದಲ್ಲಿರುವ ಅವಳಿ ಟೆನ್ನಿಸ್ ಅಂಗಳಕ್ಕೆ ಆಟದ ಹಸಿವಿನಿಂದ ಧಾವಿಸಿದರು.

ಟೆನ್ನಿಸ್ ಕ್ರೀಡಾಂಗಣ ತಲುಪಿದ 5 ನಿಮಿಷದೊಳಗೆ ಕಲಿಕೆಯ ಹಂತದಲ್ಲಿರುವ ಮಧ್ಯ ವಯಸ್ಕ ಹಾಗೂ ಕಲಿತಿರುವ ನವ ಯುವಕ ಆಟಗಾರರು ಆಟಕ್ಕೆ ಸಜ್ಜಾಗುತ್ತಿದ್ದರು. ಸ್ವಲ್ಪ ಸಮಯ ದೈಹಿಕ ಕಸರತ್ತು, ಟೆನ್ನಿಸ್ ಬಾಲಿನಿಂದ ವಾರ್ಮ್ ಅಪ್ ಮಾಡುವುದು, ಪ್ರತಿ ದಿನ ಟೆನ್ನಿಸ್ ಅಂಗಳವನ್ನು ನಿದ್ದೆಯಿಂದ ಎಚ್ಚರಗೊಳಿಸುವುದು ಪ್ರತಿಯೊಬ್ಬರ ಪ್ರಥಮ ಕರ್ತವ್ಯವಾಗಿರುತ್ತಿತ್ತು.

ಮನ್ಮಥರಾಯನ ಎದುರು ಮನೆಯಲ್ಲಿದ್ದ ಕಿಶೋರ್ ಗ್ರಾಮ ಪಂಚಾಯಿತಿ ಕಛೇರಿಯ ನೌಕರ. ಮನ್ಮಥರಾಯನ ಎದುರು ಮನೆಯಲ್ಲಿದ್ದದ್ದೇ ಕಿಶೋರನಿಗೆ ಶಾಪವಾಗಿ ಪರಿಣಮಿಸಿತ್ತು. ನೆರೆಹೊರೆಯವರೊಂದಿಗೆ ಸಂಬಂಧವನ್ನು ಚನ್ನಾಗಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದಷ್ಟೇ ಕಿಶೋರ್ ಮನ್ಮಥರಾಯನೊಂದಿಗೆ ಅನಿವಾರ್ಯವಾಗಿ ಇಷ್ಟವಿಲ್ಲದಿದ್ದರೂ ಮನ್ಮಥರಾಯನನ್ನು ಸಹಿಸಿಕೊಂಡಿದ್ದ. ಸರ್ಕಾರಿ ಹುದ್ದೆಯಾದರೂ, ತನಗಿಂತ ಸಣ್ಣ ಗುಮಾಸ್ತನ ಹುದ್ದೆ ಎಂಬಂತೆ ಕಿಶೋರನ ಮೇಲೆ ಅಧಿಕಾರ ಚಲಾಯಿಸುವುದು, ಬೇಕಾಬಿಟ್ಟಿ ಮಾತುಗಳನ್ನು ಆಡುವುದು, ಆರ್ಥಿಕ ಸ್ಥಿತಿಯ ಬಗ್ಗೆ ಅವಹೇಳವ ಮಾಡುವುದನ್ನು ಮನ್ಮಥರಾಯ ಆಗಾಗ ಮಾಡುತ್ತಿದ್ದ.

ತನ್ನ ನೆರೆಹೊರೆಯರ ಯಾರೊಟ್ಟಿಗೂ ಮನ್ಮಥರಾಯ ಉತ್ತಮ ಸ್ನೇಹ ಹೊಂದಿರಲಿಲ್ಲ. ಯಾರನ್ನೇ ಆಗಲಿ ಅವರ ಹುದ್ದೆ, ಆಸ್ತಿ, ಅಂತಸ್ತನ್ನು ನೋಡಿಯೇ ಮನ್ಮಥರಾಯನ ಸ್ನೇಹದ ಹಸ್ತ ಪ್ರತ್ಯಕ್ಷವಾಗುತ್ತಿದ್ದದ್ದು. ಅವನಿಗಿಂತ ಹೆಚ್ಚು ಅಂತಸ್ತು ಹೊಂದಿರುವವರನ್ನೂ ಸಹ ಮನ್ಮಥರಾಯ ಸಹಿಸಿಕೊಳ್ಳುತ್ತಿರಲಿಲ್ಲ. ಇಲ್ಲ ಸಲ್ಲದ ಆರೋಪಗಳನ್ನೋ, ಸುಳ್ಳು ಗಾಸಿಪ್ಗಳನ್ನೋ ಅವರ ಹಿಂದೆ ಮಾತನಾಡಿ ವಿಕೃತವಾದ ಆನಂದವನ್ನು ಅನುಭವಿಸುತ್ತಿದ್ದ.

ಅದಕ್ಕೆ ಉದಾಹರಣೆಯಂತೆ, ಒಂದು ಘಟನೆಯನ್ನು ಕಿಶೋರನಿಗೆ ಹೇಳಿದ್ದ. ಆಟ ಆಡಲು ಶುರುಮಾಡುವ ಮೊದಲು ಪ್ರತಿದಿನ ಬೆಳಗ್ಗೆ ಮನ್ಮಥರಾಯ ಜಿಲ್ಲಾ ಸ್ಟೇಡಿಯಂಗೆ ವಾಕ್ ಮಾಡಲು ಹೋಗುತ್ತಿದ್ದ. ಹಾಗೇ ವಾಕ್ ಮಾಡಲು ಹೋಗುವಾಗ ಪ್ರತಿದಿನ ಬೈಕಿನಲ್ಲಿ ಹೋಗುತ್ತಿದ್ದ ಖಾಕಿ ಸಮವಸ್ತ್ರದ ವ್ಯಕ್ತಿ ಮನ್ಮಥರಾಯನನ್ನು ನೋಡಿ, ದೂರದಿಂದಲೇ ತನ್ನ ಬಲಗೈ ಎತ್ತಿ ನಮಸ್ಕಾರ ಎಂಬಂತೆ ಆತ್ಮೀಯವಾಗಿ ವಿಷ್ ಮಾಡುತ್ತಿದ್ದ. ತನ್ನದೇ ಏರಿಯಾದ ಪಕ್ಕದ ರಸ್ತೆಯಲ್ಲಿ ವಾಸವಿರುವ ವ್ಯಕ್ತಿಯ ಮುಖ ಪರಿಚಯವಿದ್ದುದರಿಂದ ಮನ್ಮಥರಾಯನೂ ನಗುಮೊಗದಿಂದ ವಿಷ್ ಮಾಡುತ್ತಿದ್ದ. ಹೀಗೆ ಪ್ರತಿದಿನ ಎದುರು ಸಿಕ್ಕಾಗ ಮನ್ಮಥರಾಯನೂ ಖಾಕಿ ಸಮವಸ್ತ್ರದ ವ್ಯಕ್ತಿಗೆ ವಿಷ್ ಮಾಡುತ್ತಿದ್ದ. ಹೀಗೆ ಕೆಲ ವರ್ಷಗಳು ಕಳೆದ ನಂತರ ಆ ಖಾಕಿ ಸಮವಸ್ತ್ರದ ವ್ಯಕ್ತಿಯು ಬಸ್ ಕಂಡಕ್ಟರ್ ಎಂಬ ವಿಷಯ ತಿಳಿದು, ಮನ್ಮಥರಾಯ ತೀವ್ರವಾದ ಮುಜುಗರಕ್ಕೆ ಒಳಗಾದ.

ಅಲ್ಲಾ ಕಿಶೋರು, ಆ ವ್ಯಕ್ತಿ ಕಂಡಕ್ಟರ್ ಅಂತೇ, ನಾನೆಲ್ಲೋ ಪೊಲೀಸ್ ಇರಬೇಕು ಅಂದ್ಕೊಂಡು ಸಿಕ್ಕಾಗೆಲ್ಲಾ ನಾನೇ ಮೊದಲು ನಮಸ್ಕಾರ ಹೊಡೀತಿದ್ನಲ್ರೀ.. ಛೇ…

ಎಂದು ತನಗಿಂತ ಕೆಳ ಹುದ್ದೆಯ ವ್ಯಕ್ತಿಗೆ ನಾನೇ ಮೊದಲು ನಮಸ್ಕಾರ ಮಾಡಿದ್ದು ಅಸಹನೀಯ ಎಂದೆನಿಸಿ ಅವಮಾನವಾದಂತೆ ಹೇಳಿಕೊಂಡಿದ್ದನು. ಆನಂತರದ ದಿನಗಳಲ್ಲಿ ಖಾಕಿ ಸಮವಸ್ತ್ರದ ಯಾವುದೇ ವ್ಯಕ್ತಿ ಸಿಕ್ಕರೂ, ನೀವು ಏನು?! ಎಂದು ಪ್ರಶ್ನಿಸುತ್ತಾ, ತನ್ನ ಹುದ್ದೆಯನ್ನು ಸದಾ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದ.

ತನಗೆ ಪರಿಚಯವಿರುವ, ಸ್ನೇಹವಿರುವ ಆಯ್ದ ಹಣವಂತರನ್ನು ಮಾತ್ರ, ಅವರು ದೊಡ್ಡ ಮನುಷ್ಯರು ಎಂದು ಹೇಳುತ್ತಿದ್ದ. ವ್ಯಕ್ತಿತ್ವದಲ್ಲಿ ದೊಡ್ಡತನವಿದ್ದವರನ್ನು ದೊಡ್ಡವರು ಎಂಬುದರ ಬದಲಾಗಿ, ಹಣವಂತರು ಮಾತ್ರ ದೊಡ್ಡ ಮನುಷ್ಯರು ಎಂಬುದು ಅವನ ನಂಬಿಕೆಯಾಗಿತ್ತು, ಹಣವಂತರನ್ನಷ್ಟೇ ಕ್ಲಾಸ್ ವ್ಯಕ್ತಿಗಳು ಎಂಬುದು ಅವನ ಸಿದ್ದಾಂತವಾಗಿತ್ತು. ತನ್ನ ಬಳಿಯೂ ಈಗ ಹಣವಿದೆ ಹಾಗಾಗಿ ನನ್ನ ಕ್ಲಾಸ್ ಬದಲಾಗಿದೆ ಎಂಬ ಭಾವವನ್ನು ಅವನ ಆಂಗಿಕ ಹಾವಭಾವದಲ್ಲಿ ತೋರ್ಪಡಿಸುತ್ತಿದ್ದ.

ಅವನಿಗೆ ತಾನು ಜಿಲ್ಲಾಮಟ್ಟದ ಅಧಿಕಾರಿ, ಹಣವಂತ, ಆಸ್ತಿವಂತ, ಅಧಿಕಾರವಂತ ತನಗೆ ಯಾರೂ ಹಿಂತಿರುಗಿ ಮಾತನಾಡುವುದಿಲ್ಲ ಎಂಬುದರ ಬಗ್ಗೆ ಅಗಾಧ ಆತ್ಮವಿಶ್ವಾಸವಿತ್ತು. ಹಾಗಾಗಿಯೇ ಅವನು ತನ್ನೆದುರಿಗಿರುವವರನ್ನು ಅವರ ಆರ್ಥಿಕ ಸ್ಥಿತಿಗತಿ, ಅಧಿಕಾರ, ಹುದ್ದೆ ನೋಡಿ ವರ್ತಿಸುತ್ತಿದ್ದ. ಕೆಲವು ಬಾರಿ ಎದುರಿಗೆ, ಬಹುತೇಕ ಬಾರಿ ಬೆನ್ನ ಹಿಂದೆ ಹಿಯ್ಯಾಳಿಸುತ್ತಿದ್ದ.

*****

ಇನ್ನು ಟೆನ್ನಿಸ್ ಅಂಗಳಕ್ಕೆ ಲಗತ್ತಾಗಿರುವ ಮಾರ್ಷಲ್ ಉದ್ಯಾನವನದಲ್ಲಿ ಮುಂಜಾನೆಯ ಬೆಳಕು ಆಗಷ್ಟೇ ತಿಳಿಹಾಲಿನ ಸ್ನಾನ ಮಾಡಿದಂತೆ ತಾಜಾತನದಿಂದ ಕಂಗೊಳಿಸುತ್ತಿತ್ತು. ಉದ್ಯಾನವನದಲ್ಲಿ ಗಿಡ, ಮರಗಳು ಯಾರ ಹಂಗಿಲ್ಲದೆ ತಮ್ಮಷ್ಟಕ್ಕೆ ತಾವೆ ಧ್ಯಾನದಲ್ಲಿ ತಲ್ಲಿನವಾದಂತೆ ಅಲುಗಾಡುತ್ತಿರುತ್ತಿದ್ದವು. ವಾಕಿಂಗ್ ಟ್ರ್ಯಾಕ್‍ಗಳು ಹಾಳು ಮನುಷ್ಯರ ಭಾರವನ್ನು ಅನಿವಾರ್ಯವಾಗಿ ಹೊರಬೇಕಾಗಿರುವುದರಿಂದ ಮಕಾಡೆ ಮಲಗಿರುತ್ತಿತ್ತು. 

ಕೋವಿಡ್ ಸೋಂಕು ದೇಶಕ್ಕೆ ಬಂದು ವರ್ಷವಾಗಿದ್ದರಿಂದ್ದ ಜನ ಯಾವುದೇ ನಿಮಯಗಳನ್ನು ಪಾಲಿಸದೇ ಕೊರೋನ ಇಲ್ಲವೇ ಇಲ್ಲವೆಂಬಂತೆ ತಿರುಗಾಡಲಾರಂಭಿಸಿದ್ದರು, ಪಾರ್ಕ್, ಸ್ಟೇಡಿಯಂಗಳು ತುಂಬಿ ತುಳುಕಾಡುತ್ತಿದ್ದವು. ಉದ್ಯಾನವನದ ಒಂದು ಮೂಲೆಯಲ್ಲಿ ವಿಶ್ವಮಾನವರಿಗಾಗಿಯೇ ನಿರ್ಮಿಸಿರುವ ಆಟಿಕೆಯಾದ ಜೋಕಾಲಿಗಳು, ಜಾರುಬಂಡಿಗಳು, ಬಗೆ ಬಗೆಯ ಚಕ್ರಗಳು ಆ ಹೊತ್ತಿನಲ್ಲಿ ಮುದ್ದು ಮಕ್ಕಳಿಗಾಗಿ ಕಾದು ಕುಳಿತಂತೆ ಆತಂಕದಲ್ಲಿದ್ದವು.

ಇನ್ನೊಂದು ಮೂಲೆಯಲ್ಲಿ ಕಳೆದ ತಿಂಗಳು ಇದ್ದ 3 ಅಡಿಯ ಹಾವಿನ ಹುತ್ತವನ್ನು ನೆಲಸಮ ಮಾಡಿ ಅದರ ಜಾಗಕ್ಕೆ ಕ್ರಾಂಕ್ರಿಟನ್ನು ಬಡಿದು ಸುತ್ತಲೂ ಸ್ಟೀಲಿನ ಕಂಬಿಗಳನ್ನು ಅಳವಡಿಸಿ, ಹುತ್ತದ ಸಮಾಧಿ ಎಂದು ಬರೆದ ಹಲಗೆಯನ್ನು ನೇತು ಹಾಕಲಾಗಿದೆ. ಹಲಗೆಯ ಕೆಳಭಾಗದಲ್ಲಿ ಇಂತಹ ಮಹತ್ಕಾರ್ಯ ಮಾಡಲು ಧನ ಸಹಾಯ ಮಾಡಿದ ಮಹಾನ್ ದಾನಿಗಳ ಹೆಸರನ್ನೂ ಸಹ ಬರೆಯಿಸಲಾಗಿದೆ. ಅದೇ ಹುತ್ತದ ಸಮಾಧಿಗೆ ಹಿರಿಯರು ಭಯ ಭಕ್ತಿಯಿಂದ ನಮಸ್ಕರಿಸಿದರೆ, ಮನೆ ಪಾಠಕ್ಕೆ ಚಕ್ಕರ್ ಹೊಡೆದ ನವ ಯುವಕ ಯುವತಿಯರು ಅದನ್ನು ತಿರುಗಿ ನೋಡುವ ಸಮಯವನ್ನು ವ್ಯರ್ಥ ಮಾಡದೇ ಹರಟುತ್ತಿದ್ದಾರೆ. ಮಹಿಳೆಯರು, ಪುರುಷರು ಕಾಯಿಲೆಯನ್ನು ಹತೋಟಿಯಲ್ಲಿಡಲು ಮಾಡುವ ಕಸರತ್ತು ಅಷ್ಟಿಷ್ಟಲ್ಲ.  

ಉದ್ಯಾನದ ಹೊರಗೆ ಬಣ್ಣದ, ವಿವಿಧ ಬಗೆಯ ನಾಯಿಗಳ ತ್ಯಾಜ್ಯ ವಿಲೇವಾರಿ ಮಾಡಿಸಲು ಸ್ವತಃ ಮಾಲೀಕರೇ ಕರೆದುಕೊಂಡು ಅಡ್ಡಾಡುತ್ತಾರೆ. ತ್ಯಾಜ್ಯ ವಿಲೇವಾರಿ ಮಾಡಿಸಲು ನಾಯಿಗಳು ಎಳೆದಾಡುವ ಕಡೆಯಲ್ಲೂ ಅದರ ಹಿಂದೆ ಸಾಗಿ ಹರಸಾಹಸ ಪಡುತ್ತಿರುತ್ತಾರೆ. ಆ ನಾಯಿಗಳದ್ದು ಎಂತಹ ಪುಣ್ಯ, ಸ್ವತಃ ಮಾಲೀಕನೇ ಅವುಗಳನ್ನು, ಅವುಗಳು ಮೂಸಿಕೊಂಡು ಹೋಗುವ ಜಾಗಕ್ಕೆ ಕರೆದುಕೊಂಡು ಹೋಗಿ ತ್ಯಾಜ್ಯ ವಿಲೇವಾರಿ ಮಾಡಿಸುತ್ತಾರೆ, ನಾಯಿಗಳು ಮಾಲೀಕನನ್ನು ಕಾಯುತ್ತವೋ? ಅಥವಾ ಮಾಲೀಕನೇ ನಾಯಿಗಳನ್ನು ಕಾಯುತ್ತವೋ? ಒಂದು ಕ್ಷಣ ಅನುಮಾನ ಯಾರಿಗೂ ಸಹ ಬಂದೇ ಬರುತ್ತದೆ.

ಇಷ್ಟು ಉದ್ಯಾನವನ, ಕ್ರೀಡಾಂಗಣದ ಸುತ್ತ ಮುತ್ತಲಿನ ದೃಷ್ಯಗಳಾದರೇ, ಕಾಯಕದಿಂದಲೇ ದಿನದ ಆರಂಭ ಮಾಡುವ ಪೇಪರ್ ಹುಡುಗರು, ಹೂವಿನ ಮಹಿಳೆಯರು, ಹಾಲು ತರಕಾರಿಯವರು ಇದ್ಯಾವುದರ ಬಗ್ಗೆ ನೋಡದೇ ತಮ್ಮ ಕೆಲಸವನ್ನು ಮಾಡಿಕೊಂಡು ಮಿಂಚಿ ಮರೆಯಾಗುತ್ತಾರೆ.

ಮನ್ಮಥರಾಯ ಕೇವಲ ಹೆಸರಿದಂಷ್ಟೇ ಮನ್ಮಥರಾಯನಾಗಿರಲಿಲ್ಲ, ಸಾಕ್ಷಾತ್ ಮನ್ಮಥನೇ ಆಗಿದ್ದನು. ತನ್ನ ಪೌರುಷದ ಬಗ್ಗೆ ವಿಶೇಷ ಹೆಮ್ಮೆಯಿದ್ದಂತೆ ಸಿಕ್ಕ ಸಿಕ್ಕ ಕಡೆ ಹೂಬಾಣಗಳನ್ನು ಬಿಡಲು ಯಾವಾಗಲೂ ಹವಣಿಸುತ್ತಿದ್ದನು. ತನ್ನ ಹುದ್ದೆಯ ಪ್ರಭಾವ ಬಳಸಿಯೋ, ತನ್ನ ಅಧಿಕಾರ, ಹಣ, ಹಾಗೂ ಕಛೇರಿಯಲ್ಲಿ ಸಂದರ್ಭಗಳನ್ನು ಸೃಷ್ಟಿಸಿ ಹೆಂಗೆಳೆಯರನ್ನು ತನ್ನ ತೆಕ್ಕೆಗೆ ಕೆಡವಲು ಸದಾ ಹವಣಿಸುತ್ತಿದ್ದನು, ಯಶಸ್ವಿಯಾಗುತ್ತಿದ್ದದ್ದು ಬೆರಳೆಣಿಕೆಯಷ್ಟೇ ಬಾರಿ ಮಾತ್ರ. ಬ್ಯಾಡ್ಮಿಂಟನ್ ಆಟ ಮುಗಿದ ಬಳಿಕ ಪಕ್ಕದಲ್ಲೇ ಇದ್ದ ಮಾರ್ಷಲ್ ಉದ್ಯಾನವನದಲ್ಲಿ ಕೂತು ವಾಕ್ ಮಾಡುವ ಹೆಂಗಸರನ್ನು ವಕ್ರದೃಷ್ಟಿಯಲ್ಲಿ ನೋಡುತ್ತಾ, ಮನ್ಮಥನಂತ ನನಗೆ ಯಾರಾದರೂ ತನ್ನ ಗಾಳಕ್ಕೆ ಬೀಳಬಹುದೇ? ಎಂಬಂತೆ ಕುರ್ಚಿಯಲ್ಲಿ ಕೂತು, ತಾನು ಆಫೀಸರ್ ಎಂಬ ಆಂಗಿಕ ಭಾಷೆ, ಮುಖಭಾವ ಪ್ರದರ್ಶಿಸುತ್ತಿದ್ದ. ಆದರೆ ಮನೆಯಲ್ಲಿ ಮಾತ್ರ ಮಗಳು ಕಾಲೇಜಿಗೆ, ಟ್ಯೂಷನ್ನಿಗೆ ಹೋಗುವಾಗ ಹುಷಾರು ಮಗಳೆ ಕೆಟ್ಟ ಗಂಡಸಿರುತ್ತಾರೆ, ಎಂದು ಜೋಪಾನ ಮಾಡುತ್ತಿದ್ದನು.

******

ಹೀಗೆ ಇನ್ನೊಂದು ದಿನ ಆಟ ಮಧ್ಯೆ ಮನ್ಮಥರಾಯ ಒಂದು ಜೀವ ವಿಮಾ ಪಾಲಿಸಿಯನ್ನು ನಮ್ಮ ಕಡೆಯವರಿಗೆ ಕೊಡಬೇಕಾಗಿ ಕಿಶೋರನಿಗೆ ಮುಲಾಜೇ ಇಲ್ಲದೆ ಕೇಳಿದನು. ಆ ಕ್ಷಣ ಕಿಶೋರನಿಗೆ ಆಕಾಶವೇ ಕಳಚಿದಂತಹ ಅನುಭವವಾಯಿತು. ಕಾರಣ ಅವನು ಸರ್ಕಾರಿ ನೌಕರಿಗೆ ಸೇರಿದಾಗಿನಿಂದ ಅವನ ಕಛೇರಿಯ ನೌಕರರ ಗೆಳೆಯನಿಗೆ, ಪಕ್ಕದ ಮನೆಯವರ ನೆಂಟರಿಗೆ, ಅಮ್ಮನ ಗೆಳತಿಯರು ಹೀಗೆ ಒಟ್ಟು 06 ಪಾಲಿಸಿಗಳನ್ನು ಒತ್ತಾಯಪೂರ್ವಕವಾಗಿ ಅವನಿಂದ ಪಡದ್ದದ್ದೇ ಕಾರಣವಾಗಿತ್ತು. ಆ ಎಲ್ಲಾ ಪಾಲಿಸಿ ಪಡೆದ ಮಹಾನುಭಾವರೂ ಈಗ ಎದುರಿಗೆ ಸಿಕ್ಕಿದರೂ ಕಿಶೋರನನ್ನು ಗುರುತಿಸುವುದೇ ಇಲ್ಲಾ. ಅವನ ಅವಶ್ಯಕತೆಗಿಂತ ಹೆಚ್ಚಿನ ಪಾಲಿಸಿಗಳನ್ನು ಈಗಾಗಲೇ ಅವರುಗಳು ಕಿಶೋರನಿಂದ ಕಿತ್ತಿದ್ದರು. ಇಂತಹ ಭೀಕರ ವಿಮಾ ಪ್ರತಿನಿಧಿಗಳನ್ನು ಕಂಡಿದ್ದ ಕಿಶೋರನಿಗೆ ಮನ್ಮಥರಾಯ ಪಾಲಿಸಿ ಕೇಳಿದಾಗ ಆಘಾತವೇ ಆಗಿ ಹೋಯಿತು.

ಮನ್ಮಥರಾಯ ಕೇಳುವುದನ್ನು ಕೇಳಿ ಸುಮ್ಮನಾದ. ಆದರೆ ಕಿಶೋರನಿಗೆ ಅದೇ ಆಘಾತದಿಂದ ಚೇತರಿಸಿಕೊಳ್ಳಲಾಗದೇ, ಗಮನಹರಿಸಲಾಗದೇ ಅಂದಿನ ಆಟದಲ್ಲಿ ಸೋಲಬೇಕಾಯಿತು. ಅದೇ ದಿನ ಶನಿವಾರ ರಾತ್ರಿ ಕರೆಮಾಡಿ, ಹುಮ್ಮಸಿನಲ್ಲಿದ್ದ ಮನ್ಮಥರಾಯ ನಾಳೆ ಬೆಳಗ್ಗೆ ವಿಮಾ ಪ್ರತಿನಿಧಿಯನ್ನು ಮನೆಗೆ ಕರೆತರುವುದಾಗಿ ತಿಳಿಸಿದನು.

ಎಂದಿನಂತೆ ಭಾನುವಾರ ಆಟ ಮುಗಿಸಿ ಮನೆಗೆ ಮರಳಿದ ಕಿಶೋರ ಅಮ್ಮ, ಅಪ್ಪನೊಂದಿಗೆ ಪಾಲಿಸಿಯ ಬಗ್ಗೆ ಚರ್ಚಿಸಿದನು. ಅವನ ಅಪ್ಪನಂತೂ ಕೆಂಡಾಮಂಡಲನಾದ, ಮುಲಾಜೇ ಇಲ್ಲದೇ ನಾನೇ ಅವರಿಗೆ ಪಾಲಿಸಿ ಕೊಡುವುದಿಲ್ಲ, ಎಂದು ಹೇಳುವುದಾಗಿ ತಿಳಿಸಿದ, ಕಿಶೋರನ ಅಮ್ಮ ಗಂಡನ ಮಾತಿಗೆ ಒಪ್ಪಿದಳು. ಅದಕ್ಕೆ ಕಾರಣ ಕಿಶೋರನ ಅಮ್ಮನ ಕರುಣೆಯಿಂದಾಗಿ, ಈಗಾಗಲೇ 6 ಪಾಲಿಸಿಗಳ ಬಾಂಡ್ ಗಳು ಮನೆಯ ಕಪಾಟಿನಲ್ಲಿದ್ದವು.

ತಿಂಡಿ ಮುಗಿಸಿಕೊಂಡು ಗೆಂಡೆ ಹೊಟ್ಟೆಯನ್ನು ಸವರುತ್ತಾ, ಕಿಶೋರನ ಮನೆಗೆ ಬಂದ ಮನ್ಮಥರಾಯ, ಗೇಟಿನಲ್ಲೇ ನಿಂತು ವಿಮಾ ಪ್ರತಿನಿಧಿಯು ಇಂದು ಬರುವುದಿಲ್ಲ, ಬರೋ ದಿನಾ ನಾನು ಹೇಳ್ತೀನಿ ಎಂದು, ಬೇಗ ಸ್ನಾನ ಮುಗಿಸಿ, ನಮ್ಮೂರಲ್ಲಿ ಜಾತ್ರೆ ಇದೆ ಹೋಗಿ ಬರೋಣವೆಂದು ಮತ್ತೊಂದು ಆದೇಶ ಮಾಡಿ  ಹೊರಟುಹೋದ.

ಪಾಲಿಸಿ ಕೊಡುವುದಿಲ್ಲ ಎನ್ನಲು ಮನ್ಮಥರಾಯ ಬಿಡಬೇಕೆ? ಅಸಲಿಗೆ ಅವನು ಪಾಲಿಸಿ ಕೇಳಿರಲಿಲ್ಲ, ಆದೇಶಿಸಿದ್ದ. ಅಲ್ಲಿಗೆ ಇದೇ ಕಟ್ಟ ಕಡೆಯ ಪಾಲಿಸಿ ಎಂದು ನಿರ್ಣಯಿಸಿ, ಇನ್ನು ಮುಂದೆ ಎಷ್ಟೇ ಆತ್ಮೀಯರು, ಎಷ್ಟೇ ಕಷ್ಟದಲ್ಲಿದ್ದವರೂ ಕೇಳಿದರೂ ಖಡಾಖಂಡಿತವಾಗಿ ‘ಇಲ್ಲಾ’, ಎಂದು ಹೇಳಬೇಕು ಎಂದುಕೊಂಡು. ಕಿಶೋರ ಪಾಲಿಸಿ ಕೊಡಲು ಒಪ್ಪಿದ್ದ.

******

ಕಿಶೋರ ಹಾಗೂ ಮನ್ಮಥರಾಯ ತಮ್ಮ ತಮ್ಮ ಬೈಕುಗಳಲ್ಲಿ ಜಾತ್ರೆಗೆ ಹೋಗುವಾಗ ಬೆಟ್ಟದ ಕಾಂಕ್ರಿಟ್ ರಸ್ತೆಗಳು ತೀರಾ ಇಳಿಜಾರಾಗಿದ್ದವು ಬೆಟ್ಟವನ್ನು ಕಡಿದು ರಸ್ತೆಯನ್ನು ಮಾಡಲಾಗಿತ್ತು. ಜಾಗರೂಕತೆಯಿಂದ ಕಿಶೋರ ತನ್ನ ಬೈಕನ್ನು ಬೆಟ್ಟವನ್ನು ಹತ್ತಿಸಿದ. ಆದರೆ ಮನ್ಮಥರಾಯನ ಹೆಮ್ಮೆಯ ಪ್ರತೀಕ ತನ್ನ ದಢ್ಕನ್ ಬೈಕ್ ಬೆಟ್ಟ ಹತ್ತಲಾಗದೇ ಅರ್ಧದಲ್ಲಿಯೇ ದಡಕ್ಕನೇ ಅಸ್ವಸ್ಥವಾಯಿತು. ಹಾಗಾಗಿ ಅರ್ಧ ಬೆಟ್ಟವನ್ನು ನಡಿಗೆಯಿಂದಲೇ ಹತ್ತಿದ ಮನ್ಮಥರಾಯ.

 ಈ ಹಿಂದೆ ಬಹಳ ಸಲ ತಮ್ಮ ದಡ್ಕನ್ ಬೈಕ್ ಬಹಳ ಉತ್ತಮ ಬೈಕ್. ಹತ್ತರಲ್ಲಿ ಎಂಟು ದಡ್ಕನ್ ಬೈಕುಗಳೆ ಇರುತ್ತವೆ. ಅದರ ಇಂಜಿನ್ ಅದ್ಬುತ, ಹಾಗಾಗಿ ಕಡಲ ತೀರದಲ್ಲಿ ಮೋಟಾರ್ ಬೋಟ್‍ಗಳನ್ನು ಓಡಿಸಲು ಇದೇ ಇಂಜಿನ್ನನ್ನು ಬಳಸುತ್ತಾರೆ. ಹಾಗಾಗಿ ದಡ್ಕನ್ ಬೈಕುಗಳ ಕಳ್ಳತನ ಜಾಸ್ತಿ, ಎಂದು ಬಡಾಯಿ ಕೊಚ್ಚಿಕೊಂಡಿದ್ದ ಮನ್ಮಥರಾಯ. ಆದರೇ ಹೀಗೆ ದಡ್ಕನ್ ನಿಜವಾದ ವಿಶ್ವರೂಪ ದರ್ಶನವನ್ನು ಸಾರ್ವಜನಿಕವಾಗಿ ಕೊಡುತ್ತದೆ ಎಂದು ಅವನಿಗೂ ಗೊತ್ತಿರಲ್ಲಿಲ್ಲ.

ಕರೋನಾ ಕಾಲದಲ್ಲೂ ಜನ ಜಾತ್ರೆಯಲ್ಲಿ ಗಿಜಿಗಿಜಿ ಸುತ್ತುತ್ತಿದ್ದರು. ಹೇಗೋ ಬೆಟ್ಟದ ಜಾತ್ರೆಗೆ ಹೋಗಿ ದೇವರ ದರ್ಶನ ಮಾಡಿ. ಕೆಳಗೆ ಇಳಿಯುವಾಗ ರಸ್ತೆಯ ಇಕ್ಕೆಲಗಳಲ್ಲಿ ಇದು ಜಾತ್ರೆಯೇ ಎಂಬುದನ್ನು ಸಾಬೀತು ಮಾಡಲು ನಿಂತಿರುವಂತೆ ಪುರಿ-ಅಂಗಡಿಗಳು, ಮಕ್ಕಳ ಆಟಿಕೆ, ಬಲೂನ್, ಬೋಂಡಾ ಷಾಪ್‍ಗಳು ಇದ್ದವು. ಸುತ್ತಲಿನ ಹಳ್ಳಿ ಜನಗಳು ಹೆಚ್ಚು ಹೆಚ್ಚಾಗಿ ಜಾತ್ರಗೆ ಬಂದಿದ್ದರು. ಜಾತ್ರೆಯಲ್ಲಿ ಕಿಶೋರ, ಮನ್ಮಥರು ಸಹ ಕೆಲವು ತಿನಿಸುಗಳನ್ನು ಕೊಂಡರು. ಜಾತ್ರೆ ಮುಗಿಸಿ ಕೆಳಗಿಳಿಯುತ್ತಿದ್ದಂತೆ, ಮನ್ಮಥರಾಯನ ಹೆಮ್ಮೆಯ ದಡ್ಕನ್ ಬೈಕ್ ಸಾವರಿಸಿಕೊಂಡು ದಡದಡನೇ ಓಡತೊಡಗಿತು.

ಕಿಶೋರ್ ತನ್ನ ಬೈಕಿನಲ್ಲಿ ಅದನ್ನು ಬೆನ್ನಟ್ಟಿದ. ಮನ್ಮಥರಾಯನು ಯಾವುದನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಟ್ಟುಕೊಡುವುದಿಲ್ಲ. ನಿವೃತ್ತಿಯ ವಯಸ್ಸಿನಲ್ಲಿಯೂ ಇಂತಹ ಹುಮ್ಮಸನ್ನು ಕಂಡು ಸ್ವತಃ ದಡ್ಕನ್ ಬೇಕೇ ಬೆರಗಾಗಿಹೋಯಿತು. ಬೈಕ್ ರೈಡಿಂಗ್ ನಲ್ಲೂ ತಾನೇ ಮೊದಲು ಎಂಬಂತೆ ರಣವೇಗದಲ್ಲಿ ಓಡಲಾರಂಭಿಸಿತು. ಸಂಜೆ ವೇಳೆಗೆ ಮನೆಗೆ ತಲುಪಿದರು.

ಜಾತ್ರೆಗೆ ಅದರಲ್ಲೂ ಮನ್ಮಥರಾಯನೊಂದಿಗೆ ಇಷ್ಟವಿಲ್ಲದಿದ್ದರೂ ಹೋಗಲು ನಿರಾಕರಿಸದ ಕಿಶೋರನಿಗೆ, ತನ್ನ ಸುಂದರ ಭಾನುವಾರವನ್ನು ಮನ್ಮಥರಾಯನ ಅಣತಿಯಂತೆ ಕಳೆದಿದ್ದು, ಒಂದು ವಿಚಿತ್ರ ಗುಲಾಮಗಿರಿಯ ಅನುಭವ ನೀಡಿತ್ತು.

*****

ಜಾತ್ರೆಗೆ ಹೋಗಿ ಬಂದ ನಾಲ್ಕು ದಿನಗಳ ನಂತರ ಕರೋನದ ಲಕ್ಷಣಗಳು ಕಾಣಿಸಿದ್ದರಿಂದ ಕಿಶೋರ ಹಾಗೂ ಮನೆಯವರು ಮಡಿಕೇರಿಯ ದೊಡ್ಡಾಸ್ಪತ್ರೆಯಲ್ಲಿ ಟೆಸ್ಟ್ ಗೆ ಒಳಗಾಗಿ ವರದಿಗಾಗಿ ನಿರೀಕ್ಷೆಯಲ್ಲಿದ್ದರು. ಎಲ್ಲರೂ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದರು. ರಿಪೋರ್ಟ್ ಬರುವವರೆಗೂ ಹೊರಗೆ ಹೋಗಬಾರದೆಂದು ನಿರ್ಣಯಿಸಿದ್ದರು. ಹಾಗೂ ಮನ್ಮಥರಾಯನ್ನು ವರದಿ ಬರುವವರೆಗೂ ತಾವಾಗಲಿ, ವಿಮಾ ಪ್ರತಿನಿಧಿಯಾಗಲಿ ಮನೆಗೆ ಬರುವುದು ಬೇಡ ಎಂದು ಸ್ಪಷ್ಟವಾಗಿ ಕಿಶೋರ ತಿಳಿಸಿದ್ದನು. ಆದರೂ ಸಹ, ಕಿಶೋರ ಪಾಲಿಸಿ ನೀಡುವುದರಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಿ ವಿಮಾಪ್ರತಿನಿಧಿಯೊಂದಿಗೆ ಮನ್ಮಥರಾಯ ಕಿಶೋರನ ಮನೆಗೆ ಮಾರನೇ ದಿನವೇ ಕಮಾಂಡರ್ ನಂತೆ ನುಗ್ಗಿ ಬಂದ.

ಇದೆಲ್ಲಾ ಏನ್ ದೊಡ್ಡ ರೋಗ ಅಲ್ಲ ಕಿಶೋರ, ಸಂಜೆ ಇವರು ಬರ್ತಾರೆ, ಪಾಲಿಸಿಯ ಪ್ರಕ್ರಿಯೆಯನ್ನ ಮುಗ್ಸ್ ಬಿಡು. ಎಂದು ಆದೇಶಿಸಿದ.

ಕಿಶೋರನು ಮರುಮಾತನಾಡದೇ ತಲೆ ಅಲ್ಲಾಡಿಸಿದ.

ವಿಮಾ ಪ್ರತಿನಿಧಿಯು ಈ ಹಿಂದೆ ಬಹಳ ಜೋರಾಗಿಯೇ ಇದ್ದರಂತೆ. ಬಾಡಿಗೆ ವಾಹನಗಳನ್ನು ಇಟ್ಟುಕೊಂಡು ಟ್ರಾವೆಲ್ಸ್ ನಡೆಸುತ್ತಿದ್ದರಂತೆ. ಕರೋನಾದ ಹೊಡೆತ, ಲಾಕ್ಡೌನ್ ಪರಿಣಾಮ, ಸಾಲದಲ್ಲಿ ಸಿಲುಕಿ ಈಗ ನಷ್ಟದಲ್ಲಿದ್ದಾರೆ. ಅವರ ಮಕ್ಕಳ ವಿದ್ಯಾಬ್ಯಾಸ ಇನ್ನೂ ಪೂರ್ಣಗೊಂಡಿಲ್ಲ ಎಂಬ ವಿಷಯ ಬಳಿಕ ತಿಳಿಯಿತು. ವಿಮಾ ಪ್ರತಿನಿಧಿಯು ಅದೇ ದಿನ ಸಂಜೆ ಸಂಜೆ 7.00ಕ್ಕೆ ಮನೆಗೆ ಬಂದು ಅರ್ಜಿಗಳಲ್ಲಿ ಹತ್ತಾರು ಕಡೆ ಸಹಿ ಪಡೆದುಕೊಂಡು, ಗುರುತಿನ ಚೀಟಿಯ ಪೋಟೊ ಕಾಪಿ ಪಡೆದು, ಪ್ರಾರಂಭಿಕ 02 ಕಂತುಗಳನ್ನು ನಾನೇ ಕಟ್ಟುತ್ತೇನೆ, 02ಕಂತುಗಳ ನಂತರ ನಿಮ್ಮ ಸಂಬಳದಿಂದ ಕಟಾವು ಮಾಡಲಾಗುತ್ತದೆ. ಈ ಬಗ್ಗೆ ತಮ್ಮ ಕಚೇರಿಗೆ ಪತ್ರ ಕಂಪೆನಿಯಿಂದ ಬರುವುದಾಗಿ ತಿಳಿಸಿದರು. ವಿಮಾ ಪ್ರತಿನಿಧಿಗಳು ಗ್ರಾಹಕನ್ನು ಬಲಿ ಹೊಡೆದಾಗ ಪ್ರಾರಂಭಿಕ 02 ಕಂತು, ಅಥವಾ 03 ಕಂತುಗಳನ್ನು ಕಟ್ಟಿಕೊಡುವುದು ಒಂದು ಸ್ಪರ್ಧೆಯಾಗಿದೆ.

ಅಂದು ಕಿಶೋರನಿಗೆ ಎಂದಿನಂತೆ ವಿಮಾ ಪ್ರತಿನಿಧಿಗಳನ್ನು ನೋಡಿದಾಗ ಬರುತ್ತಿದ್ದ ಕೋಪ ಬರಲಿಲ್ಲ. ಕಾರಣ ಅವರು ಎಲ್ಲಾ ವಿಮಾ ಪ್ರತಿನಿಧಿಗಳಂತೆ ಇರಲ್ಲಿಲ್ಲ. ಅವರ ಪರಿಸ್ಥಿತಿ, ಅಥವಾ ಅವರ ಒಳ್ಳೆಯತನ ಯಾವುದಕ್ಕೊ ಗೊತ್ತಿಲ್ಲ.

 ಕಿಶೋರನ ಅಮ್ಮ ಅವರಿಗೆ ಜಾತ್ರೆಯ ಪ್ರಸಾದವನ್ನು ಕೊಟ್ಟರು. ವಿಮೆಯ ಬಗ್ಗೆ ವಿಷಯ ತಿಳಿಸಿ ನಂತರ ಅವರು ಹೊರಟುಹೋದರು.

******

ಹತ್ತು ದಿನಗಳ ನಂತರ ಮನ್ಮಥರಾಯ ಕಿಶೋರನಿಗೆ ಕರೆ ಮಾಡಿ..

ಕಿಶೋರು, ಆ ವಿಮಾ ಪ್ರತಿನಿಧಿಯ ಪಾಲಿಸಿಗೆ ಹಣ ಕಟಾವು ಮಾಡಿಸುವುದು ಬೇಡಾ, ಅವರು ಕೋವಿಡ್ ಸೋಂಕಿನಿಂದ ಹೋಗ್ಬಿಟ್ರಂತೆ. ಅವರ ಪ್ರತಿನಿಧಿತ್ವವನ್ನು ಅವರ ಕುಟುಂಬದ ಯಾವುದೇ ಸದಸ್ಯರಿಗೆ ವರ್ಗಾಯಿಸಲು ಮಾಡಂಗಿಲ್ವಂತೆ.

ಹಾಂಗಾಗಿ ವಿಮೆ ಪಾವತಿಸಬೇಡ ಎಂದು ತಿಳಿಸುತ್ತಾ, ನಿಮ್ಮ ಮನೆಯಿಂದಲೇ ಪಾಪ ಅವರಿಗೆ ಸೋಂಕು ಬಂತೇನೊ? ಎಂದು ಹೇಳಿ ಕಿಶೋರನ ಮೇಲೆಯೇ ಮುಲಾಜಿಲ್ಲದೇ ಅಪವಾದವೆಸಗಿ ಕರೆಯನ್ನು ಕಟ್ ಮಾಡಿದ.

ಅಷ್ಟೊತ್ತಿಗಾಗಲೇ ಕಿಶೋರನಿಗೂ ಕೋವಿಡ್ ಸೋಂಕು ತಗುಲಿ ಪ್ರತ್ಯೇಕ ವಾಸದಲ್ಲಿದ್ದ.

ಆ ವ್ಯಕ್ತಿ ಈ ಹಿಂದೆ ಆರ್ಥಿಕವಾಗಿ ಸಬಲನಾಗಿದ್ದ ಕಾರಣಕ್ಕೆ ಮನ್ಮಥರಾಯ ಅವನೊಂದಿಗೆ ಸ್ನೇಹವಿಟ್ಟುಕೊಂಡಿದ್ದಲ್ಲದೇ ಆತ್ಮೀಯವಾಗಿ ವರ್ತಿಸುತ್ತಿದ್ದನಷ್ಟೇ. ಆದರೆ ಅವರು ಸಾಲದಲ್ಲಿ ಸಿಲುಕಿ ಜೀವ ವಿಮೆ ಪಾಲಿಸಿ ಏಜೆಂಟ್ ಆದ ಬಳಿಕ ಖಿನ್ನತೆಗೆ ಒಳಗಾಗಿದ್ದರೆಂದು ತಿಳಿದು ಬಂತು.

ಕಿಶೋರನ ಮನೆಗೆ ಬಂದು ಹೋದ ಬಳಿಕೆ ವಿಮೆ ಪ್ರತಿನಿಧಿ ಕೋವಿಡ್ ಸೋಂಕಿಗೆ ಒಳಗಾಗಿದ್ದರೆಂದು ಹಾಗೂ ಮರಣಹೊಂದಿದರೆಂದು ಸುದ್ದಿಯನ್ನು ಮನ್ಮಥರಾಯನೇ ಹಬ್ಬಿಸಿ ತನ್ನ ಗಾಸಿಪ್ ಚಪಲವನ್ನು ತಿರೀಸಿಕೊಂಡಿದ್ದ.

ಅಂದು ಪಾಲಿಸಿ ಕೇಳಿದಾಗ ಕಿಶೋರ ಬೇಸರಗೊಂಡಿದ್ದ. ಆದರೆ ಇಂದು ಅವನ ಪಾಲಿಸಿ ಪಡೆದವರೇ ಈಗ ಬದುಕಿಲ್ಲ, ಆ ವ್ಯಕ್ತಿಗೆ ಪಾಲಿಸಿ ನೀಡಲು ಕಿಶೋರ ಬಯಸಿದ್ದ, ಆದರೆ ಈಗ ಪಾವತಿಸುವಂತಿಲ್ಲ. ಪಾವತಿಸಿದರೂ ಅವರಿಗಾಗಲಿ, ಅವರ ಕುಟುಂಬಕ್ಕಾಗಲೀ ಯಾವುದೇ ಲಾಭವಿರುವುದಿಲ್ಲ. ಇಂತಹ ಆಕಸ್ಮಿಕ ಘಟನೆಯಿಂದ ಕಿಶೋರ ಆಘಾತಕ್ಕೊಳಗಾದ. ಜೀವನದ ಆಟದಲ್ಲಿ ಬಹಳ ಆಕಸ್ಮಿಕಗಳು ಇರುತ್ತವೆ ಎಂದು ತಿಳಿದಿದ್ದರೂ ಸಹ, ಇಂತಹ ತೀವ್ರವಾದ ಆಕಸ್ಮಿಕವನ್ನು ಅವನು ಮೊದಲನೇ ಬಾರಿಗೆ ನೋಡಿದ್ದ. ಆ ಜೀವ ವಿಮಾ ಪ್ರತಿನಿಧಿಯ ಜೀವಕ್ಕೆ ಜೀವ ವಿಮೆ ಇತ್ತೇ? ಎಂಬ ಪ್ರಶ್ನೆ ಕಿಶೋರನಿಗೆ ಕಾಡತೊಡಗಿತು.

ಆದರೆ ಇಷ್ಟಕ್ಕೆಲ್ಲಾ ಕಾರಣನಾದ ಮನ್ಮಥರಾಯನಿಗೆ ಈ ಬೇಸರದ ಸೋಂಕು ಯಾವುದೇ ರೀತಿಯ ಹಾನಿಮಾಡದೇ ಎಂದಿನಂತೆ ಅವನು ಮಾರ್ಷಲ್ ಪಾರ್ಕಿನ ಬೆಂಚಿನ ಮೇಲೆ ಗತ್ತಿನಲ್ಲಿ ಕೂತು ಬೊಜ್ಜು ಕರಗಿಸಲು ಬಂದಿದ್ದ ಹೆಂಗಸರನ್ನು ನೋಡುತ್ತಾ, ಮೂಗಿನ ಹೊಳ್ಳೆಯನ್ನು ಮುಚ್ಚುವಂತೆ ಮಾಸ್ಕ್ ಅನ್ನು ಸರಿಪಡಿಸಿಕೊಂಡ.

‍ಲೇಖಕರು Avadhi

May 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: