ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಲ್ಮಿಂಚು ಫಳಫಳಿಸಿ ಬಿದ್ದ ಬೆಳಕಲ್ಲಿ ಹನಿಯೂ ಇತ್ತೆ?

ಎಲ್ಲಿ ಹೋಗುವಿರಿ…

– ಅಶೋಕ್ ಶೆಟ್ಟರ್

ಶಾಲ್ಮಲಾ

ನಿಲ್ಲಿ ಮೋಡಗಳೇ

ತಂಪಿನ ರಂಗೋಲಿ ಬಿಡಿಸಿ

ಅವಸರಕೆ ಹುಟ್ಟಿದಂತೆ ಓಡುತ್ತೀರೆಲ್ಲಿಗೆ

 

ಕಣ್ಣು ನೆಟ್ಟಿವೆ ಒಣಗಿ ಬಿರಿದ ಭೂಮಿಯ ಮೇಲೆ

ಕಣ್ಣು ನೆಟ್ಟಿವೆ ಮೇಲೆ ಆಕಾಶದತ್ತ

ಉಳುಮೆಯಾಗಿದೆ ಹರಗಿ ಸಿದ್ಧವಾಗಿದೆ ಮಣ್ಣು

ಹನಿಯೊಡೆಯಬಹುದೆಂದು ಮುಗಿಲ ಕಡೆ ಕಣ್ಣು

 

ಗಾಳಿ ತಂಪೆರಚಿ ಗುಡುಗು ಗದ್ದರಿಸಿ

ಸಿಡಿಸಿಡಿಲ್ ಸಿಡಿದು ಸಿಡಿಲು

ಕೋಲ್ಮಿಂಚು ಫಳಫಳಿಸಿ ಬಿದ್ದ ಬೆಳಕಲ್ಲಿ ಹನಿಯೂ ಇತ್ತೆ?

ಇರಲಿಲ್ಲ ಮೋಡ

 

ಬೇಸರ ಬೇಡ,ಒಪ್ಪಿದೆ

ಸುಣ್ಣಾ ಕೊಡತೇನ ಸುರಿಯಲೇ ಮಳೆಯೇ

ಎಂದು ಈಗ ಮಕ್ಕಳು ಕುಣಿದು ಕುಪ್ಪಳಿಸುವದಿಲ್ಲ

ಜಾಕ್ ಅಂಡ್ ಜಿಲ್ ರನ್ನು ನೀರು ತರಲು ಬೆಟ್ಟಕ್ಕಟ್ಟಿ ಬಂದು

ಇಗೋ ಈಗ ಕಂಪ್ಯೂಟರ್ ಮುಂದೆ ಧ್ಯಾನದಲ್ಲಿವೆ

ಇಳಿಬಿದ್ದ ಕಿವಿಯೋಲೆ ಮೂಗುತಿಯ ಥಳಕಿನಲೆ

ಉಟ್ಟಿರುವ ಉಡುಗೆಯಲಿ ನೂರು ಕನ್ನಡಿ ಚೂರು

ಲಂಬಾಣಿ ಹೆಣ್ಣುಗಳು ಗುಂಪಾಗಿ ತಿರುಗುತ್ತ ಬಾಗುತ್ತ ಏಳುತ್ತ

ಚಪ್ಪಾಳೆ ತಟ್ಟುತ್ತ ಕರೆಯುತ್ತಿದ್ದರು ಆಗ

ಸೋನೇರೇ ಸುರೀ ಮಳೀ ರಾಜಾ

ಅವರ ಬದುಕೂ ಈಗ ಮಗ್ಗಲು ಬದಲಿಸಿದೆ

 

ಇಳಿದು ಬಾ ತಾಯಿ ಇಳಿದು ಬಾ ಎಂದು

ಕೊರಳೆತ್ತಿ ಕರೆವವನು ಅವನೊಬ್ಬನಿದ್ದ ಅಂಬಿಕಾತನಯ

ಅವನೀಗ ಇಲ್ಲ

ಜನ ಅಹಂಕಾರದಲ್ಲಿ ಮುಳುಗಿದ್ದಾರೆ

ಅದನ್ನೇ ಹಾಸಿ ಹೊರುತ್ತಿದ್ದಾರೆ

ನೀರು ಗಾಳಿ ಬೆಳಕು ಗಿಡ ಕಲ್ಲು ಗುಡ್ಡ ಕಾಡು

ಎಲ್ಲಾನೂ ಭೋಗಿಸಲು ಗುತ್ತಿಗೆ ಹಿಡಿದು ಬೋಳಿಸುತ್ತಿದ್ದಾರೆ

ರೊಕ್ಕದ ಸಪ್ಪಳದಲ್ಲಿ ಲೀನವಾಗಿದ್ದಾರೆ

 

ಯಾರ ಬೇಸರ ಯಾರ ಮೇಲೆ,ಮೋಡಗಳೇ

ನೆಲದ ಮಕ್ಕಳ ಮುಖ ನೋಡಿ

ಓಡದಿರಿ ಮೋಡಗಳೇ ದಟ್ಟೈಸಿ ನಿಲ್ಲಿ

ಈ ಸೀಮೆಯಲಿ ಸ್ವಲ್ಪ ಮಳೆ ಸುರಿಸಿ ಹೋಗಿ

 

]]>

‍ಲೇಖಕರು G

16 July, 2012

1 Comment

  1. ಹಿಪ್ಪರಗಿ ಸಿದ್ದರಾಮ್

    ಸರ್, ಕವಿತೆಯ ಆರಂಭದಲ್ಲಿಯೇ ಮೋಡಗಳನ್ನು ನಿಲ್ಲಿಸಲು ಪ್ರೀತಿಯಿಂದಲೇ ಗದರುತ್ತಾ, ಮಣ್ಣಿನ ಮಡಿಲ ಮಕ್ಕಳ ಆಸೆಕಂಗಳ ಚಿತ್ತವೆಂಬ ನೋಟ ಹರಿದಿದೆ, ಮೋಡದಿಂದ ಉದುರುವ ತುಂತುರಿನ ನೀರ ಹನಿಗಳಿಗಾಗಿ ಮುಂಗಾರಿನ ಅಬ್ಬರದ ಶುಭಾರಂಭಕ್ಕೆ ಸರ್ವಸಕಲ ಸಿದ್ದತೆಯೊಂದಿಗೆ ಕಾಯ್ದು ಕಾತರದಿಂದ ಕುಳಿತ್ತಿದ್ದಾರೆ… ಮೋಡ ಬಿತ್ತನೆಯೆಂಬ ಆಧುನಿಕರ ತಂತ್ರಜ್ಞಾನ ಪೂರಕ ಯೋಚನಾಲಹರಿಗಳೊಂದೆಡೆಯಾದರೆ, ಇಳಿದು ಬಾ ತಾಯಿ ಎಂದು ಕರೆಯಲು ಅಂದಿನ ಪ್ರಾಚೀನರಿಲ್ಲ ಎಂಬ ಬೇಸರಿಕೆಯ ಮಾತುಗಳೇಕೋ? ಮಾನವ ಸಹಜ ಗುಣಗಳು ಆಗಿನಿಂದಲೂ ಹೀಗೆ ಇವೇ ಈಗಲೂ ಅದೇ ರೀತಿ ಇವೆಯಾದ್ದರಿಂದ ಇಂದಿನ ಜಾಗೃತ ಮನಸುಗಳಿಂದಾಗಿ ದುಷ್ಕೃತ್ಯಗಳು ಹೊರ ಸಮಾಜಕ್ಕೆ ತಿಳಿಯುತ್ತಿವೆ. ಕೊನೆಗೂ ಗೆಲ್ಲುವುದು ವಿನಯ, ವಿನಂತಿ ಮತ್ತು ಸತ್ಯಾವತಾರದ ಸದ್ಗುಣಗಳು ಅಂತೆಯೇ ಕೊನೆಯಲ್ಲಿ ವಿನಯಪೂರ್ವಕ ವಿನಂತಿಗೆ ಆ ಮೇಘರಾಜ ಮಳೆಯೆಂಬ ಸಂಜೀವಿನಿಯನ್ನು ಇಳೆಗೆ ಇಳಿಸಿದಾಗಲೇ ಜಗದ ಜೀವ ಸಂಕುಲಗಳು ಬದುಕಿಯಾವು ಎಂಬಲ್ಲಿಗೆ ನಿಮ್ಮ ಕವನದ ಸಾರ್ಥಕತೆ ಸಾಂಧರ್ಭಿಕವಾಗಿದೆ. ಉತ್ತಮವಾದ ಕವನ, ಬಹು ದಿನಗಳ ನಂತರ ಮನಕ್ಕೆ ಮುದ ನೀಡಿತು. ಧನ್ಯವಾದಗಳು ಸರ್. ಮುಂಗಾರಿನ ಶುಭಾಶಯಗಳು. ಶುಭದಿನ. *ಹಿಪ್ಪರಗಿ ಸಿದ್ದರಾಮ್, ಧಾರವಾಡ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading