-ದೇವಿಕಾ ನಾಗೇಶ್
ಕಾರುಣ್ಯದ ದಾರಿಯಲ್ಲಿ ಹೊರಟವನಿಗೆ ಜಾಡಮಾಲಿ ದೇವರಾಗಿ ಕಂಡ. ಕವಿ ಎ.ಎಸ್. ಮಕಾನ ದಾರರ ಪ್ಯಾರಿ ಕವನ ದ ಸಾಲಿದು. ನನ್ನ ಹಾಗೆ ನನ್ನ ದೇವರು ಎನ್ನುವ ವಾಸ್ತವ ದ ನೆಲೆ ಗಟ್ಟಿನಲ್ಲಿ ಹುಡುಕುತ್ತ ಹೋದರೆ ಮನುಷ್ಯ ಕೂಡ ಈ ಪ್ರಕೃತಿಯ ವಿಸ್ತರಣೆಯಾಗಿ ಕಾಣಿಸುತ್ತಾನೆ ಭೂಮಿಯ ವಿಸ್ಮಯ ಗಳು ತನ್ನ ಇರುವಿಕೆಗೆ ಸವಾಲಾದಾಗ ತನ್ನ ಸುತ್ತಲಿನ ಕಲ್ಲು ಮಣ್ಣು ನದಿ ಕಡಲು ಹೂ ಇತ್ಯಾದಿ ಗಳನ್ನು ದೇವರಾಗಿ ಕಂಡವರು ಜಗತ್ತಿನ ಎಲ್ಲ ಮೂಲ ನಿವಾಸಿಗಳು ಕರಾವಳಿಯೂ ಇದಕ್ಕೆ ಹೊರತಾಗಿರಲಿಲ್ಲ. ಕೃಷಿ ಪ್ರಧಾನ ಮಾತೃ ಮೂಲ ಕುಟುಂಬ ಗಳು ಮೂಲದಲ್ಲಿ ಪ್ರಕೃತಿಯ ಆರಾಧಕರು.. ನಾಗನನ್ನು ಸಮೃದ್ಧಿ ಹಾಗೂ ಫಲವಂತಿಕೆ ನೆಲೆಯಲ್ಲಿ ಆರಾಧಿಸುವ ಇವರಲ್ಲಿ ಪ್ರಕೃತಿ ಪುರುಷ ಸಮ್ಮಿಲನಿಂದ ಜರಗುವ ವಿಸ್ಮಯಗಳು ಒಂದಷ್ಟು ಕಾಡಿವೆ.
ಕರಾವಳಿ ಯ ದೈವ ಗಳ ಮೂಲ ಶೋಧಿಸಿದಾಗ ಈ ದೈವಗಳು ನಮ್ಮ ನಿಮ್ಮ ಹಾಗೇ ರಕ್ತ ಮಾಂಸ ಸಹಿತ ಹುಟ್ಟಿದವರು. ಅವರು ಒಡನಾಡುತ್ತಿದ್ದ ಪ್ರಭುತ್ವ ದೊಳಗೆ ನಡೆಯುತ್ತಿದ್ದ ದೌರ್ಜನ್ಯ ಅಸ್ಪರ್ಶತೆ ಅಸಮಾನತೆಗೆ ಅವರೊಳಗೆ ಮೂಡಿದ ಪ್ರತಿರೋಧ ಸ್ಫೋಟವಾದಾಗ ಅವರು ಒಂದು ಹಂತದಲ್ಲಿ ಮಾಯವಾಗಿ ಕೆಲ ಸಮಯದ ನಂತರ ಕರಾವಳಿಯ ದೈವಗಳಾದವರು. ಇವರು ಮಾನವೀಯತೆಯನ್ನು ಮುಖ್ಯ ಮೌಲ್ಯವಾಗಿಸಿ ಪ್ರೀತಿ, ಸಮಾನತೆ, ಸೌಹಾರ್ದತೆಗಳನ್ನು ಜೀವದವ್ಯವಾಗಿರಿಸಿಕೊಂಡವರು.ಕರಾವಳಿಯ ಜನ ಸಮುದಾಯಗಳ ನಂಬಿಕೆ, ಚಲನಶೀಲತೆಗೆ ಶಕ್ತಿ ಕೇಂದ್ರ ವಾಗಿ ಸಾಂತ್ವನ ನೀಡಿ ಸಲಹಿದರು.
‘ನೆಲದೊಳಗೆ ಬೇರು ಬಿಡದೆ ನಕ್ಷತ್ರಗಳಿಗೆ ಟೊಂಗೆ ಚಾಚುವುದಾದರೂ ಹೇಗೆ ‘ಗಿರೀಶ್ ಕಾರ್ನಾಡ ರ ತಲೆದಂಡ ನಾಟಕದಲ್ಲಿ ಬರುವ ಮಾತಿದು. ಕರಾವಳಿಯ ದೈವಗಳು ನೆಲ ದೊಳಗೆ ಬೇರು ಬಿಟ್ಟು ಇಲ್ಲಿನ ಲೋಪದೋಷಗಳನ್ನು ಮನಗಂಡು ದೈವತ್ವ ಕ್ಕೆ ಏರಿದವರು. ಜಾತಿ, ಮತ, ಧರ್ಮ,ವರ್ಗಗಳ ಪೈಪೋಟಿ ನಾಗರಿಕತೆ ಬೆಳೆದಂತೆ ಹುಟ್ಟಿಕೊಂಡ ನೆಗ್ಗಿಲ ಮುಳ್ಳುಗಳು. ಮನುಷ್ಯ ಸಂಘ ಜೀವಿ ನಿಜವೇ!ಆದರೆ ಮೇಲು ಕೀಳು ಎನ್ನುವ ತರತಮ ಬೇಧ ಯಜಮಾನ್ಯ ಸಂಸ್ಥೆಯ ಕೊಡುಗೆಗಳಲ್ಲವೇ? ಇದು ಅನಾದಿ ಕಾಲದಿಂದಲೂ ಜನಸಮುದಾಯವನ್ನು ಬಾಧಿಸಿರುವಂತಹ ನೋವು ಸಂಕಟ ಎನ್ನುವುದನ್ನು ಕರಾವಳಿಯ ದೈವಗಳ ಕಥೆಗಳು ನಿರೂಪಿಸುತ್ತವೆ. ಅಸಮಾನತೆಯ ವಿರುದ್ಧ ಹೋರಾಡಿ ಅಕಾಲ ಮರಣವನ್ನು ಅಪ್ಪಿದವರು ಉಳ್ಳವರ ಆತ್ಮ ಸಾಕ್ಷಿಯನ್ನು ಚುಚ್ಚಿ ದೈವಗಳಾಗಿ ಆರಾಧಿಸಲ್ಪಟ್ಟವರು ಇಂದಿಗೂ ಆರಾಧಿಸಲ್ಪಡುತ್ತಿರುವವರು. ಸಮುದಾಯಮುಖಿ ಚಿಂತನೆ ಯೊಂದಿಗೆ ಜನ ಸಮುದಾಯದ ಸೌಹಾರ್ದಯುತ ಸಾಮರಸ್ಯದ ಬದುಕಿಗೆ ಈ ದೈವಗಳು ನೀಡಿದ ದೇಣಿಗೆ ಅಮೂಲ್ಯವಾದದ್ದು.
ಕೊರಗಜ್ಜ,ಕೋಟಿ ಚೆನ್ನಯ, ಕಲ್ಕುಡ ಕಲ್ಲುರ್ಟಿ, ಕೋಡ್ದಬ್ಬು ತನಿಮಾನಿಗ ಹೀಗೆ ತಳ ಸಮುದಾಯಗಳ ಹಿತಾಸಕ್ತಿಯನ್ನು ಕಾಯುವ ಜೀವ ರಕ್ಷಕ ಪಡೆಗಳಾಗಿ 1400ದೈವಗಳು ಕರಾವಳಿಯಲ್ಲಿ ಇವೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ರಾಜನ್ ದೈವಗಳಾದ ಜುಮಾದಿ,(ಧೂಮಾವತಿ )ಕೊಡ ಮಣಿತ್ತಾಯ, ಶಿರಾಡಿ ದೈವ, ಬಬ್ಬರ್ಯ, ಮಲರಾಯ ಇತ್ಯಾದಿ. ಶ್ರೇಣೀಕೃತ ಪಾಳೇಗಾರಿಕೆ ವ್ಯವಸ್ಥೆಯನ್ನು ಪೋಷಿಸುವ ದೈವಗಳು ಘಟ್ಟದಿಂದ ಇಳಿದು ಬಂದವು ಎನ್ನುವ ನಂಬಿಕೆ ಜನಸಾಮಾನ್ಯರಲ್ಲಿದೆ.
“ಮನೆ ಮಂಚಮ್ಮ ಎಂಬ ಗ್ರಾಮ ದೇವತೆಯ ಒಳಗಿನಿಂದ ನನ್ನ ದೇವರು ಒಡಮೂಡುತ್ತದೆ. ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವತೆ ಆಗುತ್ತದೆ “ ವರ್ತಮಾನದ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಿರುವ ದೇವನೂರು ಮಹಾದೇವರ ಮಾತಿದು.
ಸಿರಿಯ ಕಥನವು ತುಳುನಾಡಿನ ಮಾತೃ ಮೂಲ ಕುಟುಂಬಗಳ ಮಹಿಳೆಯರನ್ನು ಪ್ರತಿನಿಧಿಸುವ ಬಹುದೊಡ್ಡ ಐಕಾನ್. ಬದುಕಿನ ಕುಲುಮೆಯಲ್ಲಿ ನೊಂದು ಬೆಂದು ಕಲಿತ ಇವಳ ಸ್ತ್ರೀ ವಾದ ಹೆಣ್ಣು ಮಕ್ಕಳಿಗೂ ಅವರದೇ ಆದ ಘನತೆ ಗಾಂಭೀರ್ಯವಿದೆ ಎನ್ನುವುದನ್ನು ಜಗತ್ತಿಗೆ ಸಾರುತ್ತದೆ . ಅನ್ಯಾಯದ ವಿರುದ್ಧ ಸಿಡಿದೆದ್ದ ಅವಳನ್ನು ಹತ್ತಿಕ್ಕಲು ಮದುವೆಯಾದ ಗಂಡ,ಪತ್ತೇರಿ ಕೂಟ ಜೊತೆಗೂಡಿ ಹೂಡಿದ ಸಂಚನ್ನು ನಿಬಾಯಿಸುತ್ತ ಎದ್ದು ನಡೆದವಳು ಸಿರಿ. ಆಕೆ ತನಗೆ ತಾನೇ ಹಾಕಿಕೊಂಡ ನೀತಿ ನಿಯಮಗಳ ಚೌಕಟ್ಟಿನೊಳಗೆ ಬದುಕಿ ಜನಸಾಮಾನ್ಯರ ಕೈಯಲ್ಲಿ ಸೈ ಎನಿಸಿಕೊಂಡ ಹೆಣ್ಣುಮಗಳು,ಮತ್ತವಳ ಸಂತಾನ ತುಳು ನಾಡಿನಲ್ಲಿ ಸತ್ಯದಪ್ಪೆ ಸಿರಿಯಾಗಿ ಉತ್ಸವ ಜಾತ್ರೆ ಗಳಲ್ಲಿ ಅಲಡೆಗಳಲ್ಲಿ ಇಂದಿಗೂ ಆರಾಧಿಸಲ್ಪಡುವುದು ನಾವು ನೋಡುತ್ತೇವೆ. ಕರಾವಳಿಯ ಮಾತೃ ಮೂಲ ಕುಟುಂಬ ಗಳಲ್ಲಿ ವಿಚ್ಛೇದನ, ಮರು ಮದುವೆಯ ಆಯ್ಕೆಯನ್ನು ಜಾರಿಗೆ ತಂದ ಮೊದಲ ಮಹಿಳೆ ಸಿರಿ. ಹಿರಿಯರ ಆಸ್ತಿಯಲ್ಲಿ ಹೆಣ್ಣು ಮಗಳಿಗಿರುವ ಹಕ್ಕನ್ನು ಪ್ರತಿಪಾದಿಸಿದ ಮಹಿಳೆ ಸಿರಿ. ಹೀಗೆ ಮಹಿಳಾ ಜಗತ್ತಿನ ಹಲವು ಮೊದಲುಗಳಿಗೆ ಮುನ್ನುಡಿ ಹಾಡಿದ ಸಿರಿ ಇಂದು ದೈವತ್ವಕ್ಕೇರಿದ್ದಾಳೆ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ ಹೆಣ್ಣು ಸ್ವಾಭಿಮಾನದ ಬದುಕು ನಡೆಸಲು ಶಕ್ತಳು ಎನ್ನುವುದಕ್ಕೆ ಮಾದರಿಯಾಗಿಯೂ ನಮಗೆ ಮುಖ್ಯವಾಗುತ್ತಾಳೆ.
ಕೇರಳ ಕರಾವಳಿಯ ಮಂಜೇಶ್ವರದ ಅರಸು ಮಂಜೇಷ್ಣಾರ್ ಅಣ್ಣತಮ್ಮ ದೈವಗಳು ಕೋಮು ಸೌಹಾರ್ದತೆಗೆ ಇವು ಅತ್ಯುತ್ತಮ ಉದಾರಣೆ.ಅರಸು ಮಂಜೇಷ್ಣಾರ್ ಮತ್ತು ಜುಮಾದಿ ದೈವ ಗಳು ಕೋಲ ನೇಮಗಳನ್ನು ಪಡೆಯುವಾಗ ಮುಸ್ಲಿಂ ಸಮುದಾಯ ಗಳನ್ನು ಜೊತೆಗೆ ಇರಿಸಿಕೊಂಡು ಭಕ್ತರಿಂದ ಸೇವೆ ಪಡೆಯುತ್ತವೆ ಎನ್ನುವುದು ಇಲ್ಲಿನ ವಿಶೇಷ.” ಇಂದಿಗೂ ಇಲ್ಲಿನ ಆಚರಣೆ ಆರಾಧನೆಗಳಲ್ಲಿ ಸಮುದಾಯದ 14 ಜಾತಿ ಎರಡು ಧರ್ಮಗಳನ್ನು ಒಳಗೊಂಡ ಭಕ್ತರು ಭಾಗವಹಿಸುತ್ತಾರೆ.
ತುಳುನಾಡಿನ ದೈವಗಳನ್ನು ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡೊಂದು “ಸಾಂಕುನ ಶಕ್ತಿ“ (ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿ ಹಾಕಿಕೊಂಡು ಸಾಕುವ ಶಕ್ತಿ) ಎಂದು ಕರೆಯಲಾಗುತ್ತದೆ. ಈ ನಂಬಿಕೆ ಯೇ ಜನಸಾಮಾನ್ಯರ ಜೀವನಾಧಾರ. ಇಲ್ಲಿ ಬಪ್ಪಬ್ಯಾರಿ ಮುಲ್ಕಿ ಯ ಬಪ್ಪನಾಡು ದೇವಸ್ಥಾನ ದ ಸ್ಥಾಪಕ ಮೂಲ ಪುರುಷ ರಲ್ಲಿ ಒಬ್ಬನಾಗುತ್ತಾನೆ.
ಕೊರಗ ಸಮುದಾಯದ ಪಾಡ್ಡನದಲ್ಲಿ “ಪಾಪವನ್ನು ದ್ವೇಷಿಸು ಪಾಪಿಯನ್ನಲ್ಲ ಎಂಬ ಹೇಳಿಕೆ ಇದೆ ತುಳು ನಾಡಿನ ದೈವಗಳು ಶೋಷಕರು ವಂಚಕರು ಕೊಲೆಗಾರರನ್ನು ಮನುಷ್ಯರನ್ನಾಗಿಸಿ ತನ್ನ ಮಡಿಲಿನಲ್ಲಿ ಸೇರಿಸಿಕೊಳ್ಳುತ್ತದೆ. ತಾಯಿಯಾಗಿ ಮಡಿಲಿಗೆ ಹಾಕಿಕೊಳ್ಳುವೆ ಸೋದರನಾಗಿ ಬುದ್ಧಿ ಹೇಳುವೆ ಎನ್ನುವ ಈ ದೈವಗಳು ಪ್ರಕೃತಿ ವಿಜ್ಞಾನದ ಮೂಲಕವೇ ಭೂಮಿಯ ಸೃಷ್ಟಿಯನ್ನು ವಿವರಿಸುತ್ತದೆ. ಜಾತಿ, ಮತ ಧರ್ಮ, ಲಿಂಗ, ದೇಶ ಗಳ ಗಡಿಯನ್ನು ಮೀರಿ ಇಲ್ಲಿಯ ದೈವಗಳು ವಿಸ್ತರಿಸಿಕೊಳ್ಳುವ ರೀತಿ ವಿನೂತನವಾದದ್ದು. ಜೀವನ ನಿರ್ವಹಣೆ ಗೆ ವಲಸೆ ಬಂದ ಅರಬಿ,ಚೀನಿ ವ್ಯಾಪಾರಿಗಳು ಇಲ್ಲಿನ ಜನರ ಜೊತೆ ಸಂಬಂಧ ಹೊಂದಿ ದೈವಗಳಾಗಿವೆ . ಮಲರಾಯ ದೈವ ದ ನೇಮದಲ್ಲಿ ಅರಬಿಭೂತ ಮತ್ತು ಬ್ರಾಹ್ಮಣ ಕನ್ಯೆ ಭೂತ ಇಂದಿಗೂ ಆರಾಧಿಸಲ್ಪಡುವ ಹಿನ್ನೆಲೆಯಲ್ಲಿ ಇಂತಹದೊಂದು ವಿಶಿಷ್ಟ ಕಥೆ ಇದೆ. ಸಾಮರಸ್ಯದ ಸಂಕೇತವಾಗಿ ಸಮುದಾಯದ ಒಳಗೆ ಹುಟ್ಟಿ ಅನಿರೀಕ್ಷಿತ ಸನ್ನಿವೇಶಗಳಲ್ಲಿ ಮಾಯವಾಗಿ ದೈವಗಳಾದ ಇವರು ಇಂದಿಗೂ ಕುಟುಂಬದ ಹಾಗೂ ಸಮುದಾಯದ ಹಿತ ಕಾಯುತ್ತಾರೆ ಎಂದು ತುಳುನಾಡಿನಲ್ಲಿ ಜನ ನಂಬುತ್ತಾರೆ.
ಹಿಂದೂಮಹಿಳೆಮತ್ತು ಮುಸ್ಲಿಂ ಪುರುಷ ದಂಪತಿಗಳಿಗೆ ವಿವಾಹದಿಂದ ಹುಟ್ಟಿದ ಮಗು ಬಬ್ಬರ್ಯ ದೈವವಾಗಿದೆ . ಬಬ್ಬರ್ಯ ತುಳುನಾಡಿನಲ್ಲಿ ಉದ್ದಗಲ ಆರಾಧಿಸಲ್ಪಡುವ ದೈವ. ಜೀವನ ನಿರ್ವಹಣೆಗೆ ಕಡಲಿನಲ್ಲಿ ಕೆಲಸ ಮಾಡುವ ಸಮುದಾಯದ ಶ್ರಮಜೀವಿಗಳ ರಕ್ಷಣೆ ಈತ ಮಾಡುತ್ತಾನೆ ಎಂದು ನಂಬಿಕೆ ಇಲ್ಲಿನ ಜನರದ್ದು ಸ ತ್ಯಪ್ಪೆ,ಸತ್ಯದೇವತೆ….ಹೀಗೆ ಹಲವು ಹೆಸರುಗಳಲ್ಲಿ ಕರೆಯಲ್ಪಡುವ ಹೆಣ್ಣು ದೈವಕಲ್ಲುರ್ಟಿ. ಕಲ್ಕುಡ ಈಕೆಯ ಅಣ್ಣ ಅವನಿಗೆ ಆದ ಅನ್ಯಾಯಕ್ಕೆ ಪ್ರತಿಭಟನೆ ಮಾಡಿದವಳು ಕಲ್ಲುರ್ಟಿ . ಮರದ ಹಡಗು ನಿರ್ಮಾಣ ಮಾಡುತ್ತಿದ್ದ ಈ ಮಹಿಳೆ ಶ್ರಮಿಕರ ಅನ್ನ ಧಾತೆ. ಹಡಗನ್ನು ಕಡಲಿಗೆ ಇಳಿಸುವಲ್ಲಿ ಈಕೆ ಮತ್ತು ಬೊಬ್ಬರ್ಯ ತಜ್ಞರಿದ್ದರು ಎನ್ನುವ ಕಥೆಯೂ ಇದೆ.ಬಿಲ್ಲವರ ಕುಲಕಸುಬು ಸೇಂದಿ ಇಳಿಸುವಿಕೆಯ ಸಮೃದ್ಧಿಯಲ್ಲೂ ಬೊಬ್ಬರ್ಯನ ಪಾತ್ರವಿದೆ.ಹೀಗೆ ಕರಾವಳಿ ದೈವಗಳು ಜನಜೀವನದ ನಾಡಿ ಮಿಡಿತ ಅರಿತು ಅವರ ಬದುಕು ಸಹ್ಯವಾಗುವಲ್ಲಿ ಶ್ರಮಿಸಿದ ವೀರರು.
ತುಳು ನಾಡಿನ ಕರಾವಳಿಯ ದೈವಗಳು . ಪ್ರಭುತ್ವಕ್ಕೆ ಅಂಜಿ ನಾಗರಿಕರು ಮೌನವಾಗಿದ್ದಾಗ ಮಾತನಾಡುತ್ತವೆ ಎನ್ನುವ ನಂಬಿಕೆ ಜನಸಾಮಾನ್ಯರಲ್ಲಿ ಇದೆ. ಬಹುಜನ ಸಂಸ್ಕೃತಿಯ ಈ ನಾಡಿನಲ್ಲಿ ಶಿವ ಪಾರ್ವತಿ ಕೊರಗ ಕೊರಪಳು ವೇಷದಲ್ಲಿ ಜನಸಾಮಾನ್ಯರ ಸುಖ ಕಷ್ಟ ವಿಚಾರಿಸಲು ಲೋಕ ಸಂಚಾರ ಹೊರಡುತ್ತಾರೆ. ಇವರಿಗೆ ಕದ್ರಿ ಯಲ್ಲಿ ದೇವಸ್ಥಾನ ದ ದ್ವಾರಪಾಲಕ ಕುಟ್ಟಿದೈವ(ಪಂಜುರ್ಲಿ), ಮಲ್ಲಿಕಟ್ಟೆಯಲ್ಲಿ ಬುಟ್ಟಿ ವ್ಯಾಪಾರ ನಿರತ ಬ್ಯಾರಿ (ಬೊಲ್ಲಿ ಕಟ್ಟು ಸಾಯಿಬ)ಹೀಗೆ ಹತ್ತು ಜನ ಜೊತೆಯಾಗುತ್ತಾರೆ. ಇವರೆಲ್ಲ ಸೇರಿ ಮಲೆ ಕುಡಿಯರ ಮನೆಗೆ ಹೋಗಿ ಪುರ್ಸ ಪೂಜೆ ಮಾಡುತ್ತಾರೆ. ಪೂಜೆಗೆ ಮಾಡುವ ಪ್ರಸಾದ (ಅವಲಕ್ಕಿ, ತೆಂಗಿನ ಕಾಯಿ ತುರಿ, ಬೆಲ್ಲ) ಮಲೆ ಕುಡಿಯರ ಮನೆಯಲ್ಲಿ ಸೇರಿದ ಎಲ್ಲರೂ ಇದರ ಸುತ್ತ ಕುಣಿದು ಈ ಪ್ರಸಾದ ವನ್ನು ಹಂಚಿ ಕೊಂಡು ತಿನ್ನುತ್ತಾರೆ.
ಜುಮಾದಿ ಭೂಮಿ ರೂಪದ ದೈವ. ಇದರ ಸೊಂಟದ ಮೇಲುಭಾಗ ಹೆಣ್ಣು,ಸೊಂಟ ದ ಕೆಳಭಾಗ ಗಂಡು ರೂಪದಲ್ಲಿ ಇರುತ್ತದೆ.ಈ ದೈವ ಸಮುದಾಯದಲ್ಲಿ ಸಮಾನತೆಯನ್ನು ಸಾರುವ ಕಾಪಾಡುವ ರಾಜನ್ ದೈವ. ಮನ್ಸ ಸಮುದಾಯದಿಂದ ಜುಮಾದಿಯ ಆರಾಧನೆ ಪ್ರಾರಂಭವಾಗಿದೆ ಎನ್ನುತ್ತಾರೆ. ಕಾಸರಗೋಡು, ಸುಳ್ಯ ತಾಲೂಕುಗಳಲ್ಲಿ ಜುಮಾದಿ ಕೋಲಕ್ಕೆ ಮೊದಲು ಮಾಪುಳ್ತಿ ಎಂಬ ಮುಸ್ಲಿಂ ಮಹಿಳೆ ದೈವದ ಕೋಲ ಆರಾಧನೆ ನಡೆಯುತ್ತದೆ. ಗ್ರಾಮ ದಲ್ಲಿ ಒಮ್ಮೆ ಜುಮಾದಿ ಕೋಲ ನಡೆಯುವಾಗ ಆಕೆ ತೋರಿಸಿದ ಅಗೌರವಕ್ಕೆ ಜುಮಾದಿ ಅವಳನ್ನು ಮಾಯಾ ಮಾಡುತ್ತಾನೆ. ನಂತರ ಅವಳನ್ನು ತನ್ನ ಜೊತೆ ಇರಿಸಿ ಕೊಂಡು ವಾರ್ಷಿಕ ಕೋಲದ ದಿನ ಅವಳಿಗೆ ಕೋಲ ನಡೆದ ನಂತರ ತಾನು ಕೋಲ ಸ್ವೀಕರಿಸುತ್ತಾನೆ ಎನ್ನುವ ಕಥೆ ಇದೆ. ಇದು ಕರಾವಳಿ ಯಲ್ಲಿ ಅನಾದಿ ಕಾಲ ದಿಂದ ಇದ್ದ ಸಾಂಸ್ಕೃತಿಕ ಸೌಹಾರ್ದತೆಯ ಒಂದು ಸ್ವರೂಪ. ಕಾಪು ಮಾರಿಗುಡಿಗೂ ಮುಸ್ಲಿಮರಿಗೂ ಅವಿನಾಭಾವ ಸಂಬಂಧವಿದೆ . 17ನೇ ಶತಮಾನದಲ್ಲಿ ಬಸಪ್ಪ ನಾಯಕ ಕಾಪು ವಿನಲ್ಲಿ ಕಟ್ಟಿಸಿದ ಕೋಟೆಯಲ್ಲಿದ್ದ ಮುಸ್ಲಿಂ ಉಗ್ರಾಣಿ ಮಾರಿ ದೇವತೆ ಯ ಆಶರೀರ ವಾಣಿ ಕೇಳಿ ಊರಿನ ನಾಲ್ಕು ಜಾತಿಯ ಸಮಸ್ತರನ್ನು ಒಟ್ಟು ಗೂಡಿಸಿ ಕಟ್ಟಿದ ಮಾರಿ ಗುಡಿ ಕಾಪು ಮಾರಿಗುಡಿ.ಇದು ಕೋಮು ಸೌಹಾರ್ದದ ಸಂಕೇತವಾಗಿ ಇಂದು ನಮ್ಮ ನಡುವೆ ಇದೆ.
ತುಳುನಾಡಿನ ಮೂಲ ನಿವಾಸಿ ಕೊರಗ ದಂಪತಿಗಳಾದ ಓಡು ಮತ್ತು ಅಚ್ಚು ಮೈರೆದಿ ಇವರ ಮಗ ತನಿಯ, ಹೆತ್ತವರ ಅಕಾಲ ಮರಣದಿಂದ ಬಿಲ್ಲವ ಮಹಿಳೆ ಮೈರಕ್ಕೆ ಬೈದೆತಿಯ ಸಾಕು ಮಗನಾಗುತ್ತಾನೆ. ಮೈರೆಕ್ಕೆ ತನಿಯನ ಕೈಯಲ್ಲಿ ಕದ್ರಿ ಈಶ್ವರ ದೇವಸ್ಥಾನಕ್ಕೆ ಎಳೆನೀರು ಕಳುಹಿಸುತ್ತಾಳೆ. ಮೇಲುಜಾತಿಯ ದೇವಸ್ಥಾನದ ಅರ್ಚಕರು ತನಿಯ ಅಸ್ಪರ್ಶ ನೆಂಬ ಕಾರಣಕ್ಕೆ ಆತ ಮುಟ್ಟಿದ ಎಳೆ ನೀರನ್ನು ನಿರಾಕರಿಸುತ್ತಾರೆ. ಆಗ “ನಾನು ಹೆಣೆದ ಬುಟ್ಟಿ, ಮೊರ ಇವರಿಗೆ ಆಗುತ್ತದೆ ಅದೇ ನಾನು ಮುಟ್ಟಿದ ಎಳೆ ನೀರು ಆಗುವುದಿಲ್ಲವೇ…? ಎಂದು ಈತ ಪ್ರಶ್ನಿಸಿದ ಕಾರಣಕ್ಕಾಗಿ ಪ್ರಭುತ್ವದ ವಿರೋಧ ಕಟ್ಟಿಕೊಂಡು ಮಾಯವಾಗುತ್ತಾನೆ.ಮಾಯ ಅಂದರೆ ಇಲ್ಲಿ ಮೋಸದಿಂದ ಕೊಲ್ಲಲ್ಪಟ್ಟದ್ದು ಎಂದು ಅರ್ಥ ಮಾಡಿಕೊಳ್ಳಬೇಕು. ಇದೇ ತನಿಯ ಅಸ್ಪರ್ಶತೆಯನ್ನು ವಿರೋಧಿಸಿ ಮಾಯವಾಗಿ ಇಂದು ಬಹು ಜನರಿಂದ ಸ್ವಾಮಿ ಕೊರಗಜ್ಜ ಎಂದು ಆರಾಧಿಸಲ್ಪಡುವ ದೈವ. ಜಾತಿ,ಮತ, ಧರ್ಮ ವರ್ಗ, ಲಿಂಗ ಗಳ ನಡುವಿನ ಅಸಮಾನತೆ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿದ ಕರಾವಳಿಯ ಬಹುತೇಕ ದೈವಗಳ ಹಿನ್ನೆಲೆ ಇದು.ಹೀಗೆ ತೀರಿ ಕೊಂಡವರು ಕಾಲ ಕ್ರಮೇಣ ದೈವವಾಗಿ ಸಮುದಾಯದ ಜನ ಸಾಮಾನ್ಯ ರ ಸೋಲು ಗೆಲುವುಗಳಲ್ಲಿ ಕಾಯುವ ಶಕ್ತಿ ಆಗಿ ಕಾರ್ನಿಕ ಮೆರೆದು ಬಹುಮಾನ್ಯತೆ ಪಡೆಯುತ್ತಾರೆ . ಪ್ರಕೃತಿ ಯ ಜೀವ ಜಗತ್ತಿನ ಅನಿಶ್ಚಿತತೆಗೆ ಪ್ರತಿಕೂಲ ಪರಿಸ್ಥಿತಿಯ ಸವಾಲಿಗೆ ಶ್ರೀ ರಕ್ಷೆ ಯಾಗಿ ಒದಗಿ ಬಂದದ್ದು ಈ ದೈವ ಗಳು. ಬಹುಶಃ ಈ ನಂಬಿಕೆಯೇ ಎನ್ನುವುದು ಜನ ರನ್ನು ಕಾಯುವ ಶಕ್ತಿ ಎನ್ನುವುದು ಮಾನವ ಇತಿಹಾಸವನ್ನು ಅಧ್ಯಯನ ಮಾಡಿದಾಗ ವೇದ್ಯವಾಗುತ್ತದೆ.
ಬೆಳ್ತಂಗಡಿ,ಸುಳ್ಯತಾಲೂಕಿನ ಮೂಲ ನಿವಾಸಿಗಳಾದ ಮಲಕುಡಿಯರ ಆರಾಧ್ಯ ದೈವ ಪೊಸಳಿಗೆಮ್ಮ. ಈ ದೈವವು ಸುಬ್ರಹ್ಮಣ್ಯ ದೇಗುಲದ ಒಳಗೆ ಇರುವುದೇ ಇದಕ್ಕೆ ಸಾಕ್ಷಿ. ಪೊಸರು (ಕುಕ್ಕೆ) ಮತ್ತು ಲಿಂಗ ಎಂಬ ಮಲೆಕುಡಿಯ ಮೂಲ ಪುರುಷ ರು ವಾಸ ವಾಗಿದ್ದ ಮನೆ ಪೊಸಳಿಕೆ.ಇದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ಕಿಮೀ ದೂರದಲ್ಲಿದೆ. ದೈವ ಗಳು ನಮ್ಮ ನೆಲದಲ್ಲಿ ಬಾಳಿ ಬದುಕಿ ಸಮಾಜವನ್ನು ಕಟ್ಟಿದ ಹಿರಿಯರು ಎನ್ನುವ ವಾಸ್ತವ ಅರಿತಾಗ ಇವತ್ತಿನ ಆಚರಣೆ, ಆರಾಧನೆ, ಪರಂಪರೆಗಳ ಅಗತ್ಯ ಅರ್ಥವಾಗುತ್ತವೆ . ಸುಬ್ರಮಣ್ಯ ದೇವರ ಉತ್ಸವ ಮತ್ತು ಪೊಸಲಿಗೆಮ್ಮ ದೈವದ ನೇಮ ಒಂದೇ ಸುಮಾರಿಗೆ ನಡೆಯುವುದು. ಪುರ್ಸ ಬೆಟ್ಟದಲ್ಲಿ ನಡೆಯುವ ಈ ನೇಮ ಕ್ಕೆ ಕುಕ್ಕೆ ಸುಬ್ರಮಣ್ಯ ದ ಉತ್ಸವ ಜಾತ್ರೆಯಷ್ಟೇ ಮಹತ್ವ ಸ್ಥಳೀಯರು ನೀಡುತ್ತಾರೆ. ಸಮಾಜ ದಲ್ಲಿ ಜಾತ್ಯಾತೀತವಾಗಿ ಸಂಬಂಧಗಳನ್ನು ಬೆಸೆಯುವ ಜೀವನಧಾರ ಮೌಲ್ಯಗಳಾಗಿ ಜಾತ್ರೆ,ಕೋಲ, ನೇಮ ಉತ್ಸವಗಳು ಮಹತ್ವ ಪಡೆಯುತ್ತವೆ
ಒಂದು ಕಾಲದಲ್ಲಿ ತಳಸಮುದಾಯದವರ ನೋವುಗಳಿಗೆ ಧ್ವನಿಯಾಗಿ ಸಾಮಾಜಿಕ ವ್ಯವಸ್ಥೆ ಯಲ್ಲಿರುವ ಜಾತಿ, ಮತ,ವರ್ಗ ಅಸಮಾನತೆಯನ್ನು ಪ್ರಶ್ನಿಸಿ ಪ್ರಭುತ್ವಕ್ಕೆ ಕಂಟಕ ಪ್ರಾಯರಾದವರು ಕೋಡ್ದಬ್ಬು ,ತನಿಮಾನಿಗ,ಕೋಟಿ,ಚೆನ್ನಯ ಜಾರಂದಾಯ… ಇತ್ಯಾದಿ ಹಲವರು. ಈ ಕಾರಣ ಕ್ಕಾಗಿ ಅಕಾಲ ಮರಣವನ್ನಪ್ಪಿದ ಇವರನ್ನು ಜನ ಎದೆಯಲ್ಲಿ ಇಟ್ಟುಕೊಂಡು ಪ್ರೀತಿಸಿದರು. ಸಾಮಾಜಿಕ ಕ್ರಾಂತಿಯ ಹರಿಕಾರರಾದ ಇವರನ್ನು ಕಾಲ ನಂತರದಲ್ಲಿ ಸಮುದಾಯದ ಸಾಮರಸ್ಯವನ್ನು ಉಳಿಸಿ ಬೆಳೆಸುವ ದೈವಗಳೆಂದು ಕರಾವಳಿಯ ಜನ ಆರಾಧಿಸಿದರು…. ಈ ಪರಂಪರೆ ಇವತ್ತಿಗೂ ಮುಂದುವರಿಯುತ್ತಿರುವುದು ಕಾಣುತ್ತೇವೆ ಮಾನವ ಜಾತಿ ತಾನೊಂದೇ ವಲಂ ಎಂದು ಸಾರಿದ ಮಹನೀಯರು ಬಾಳಿ ಬದುಕಿದ ನಾಡಿದು .
ಬುದ್ಧಿಸಂ,ಸೂಫಿಸಂತರು ವಚನ ಚಳುವಳಿಗಳ ಶರಣರು ಹೀಗೆ ಸಾಕಷ್ಟು ಅನುಭಾವ ಪರಂಪರೆಗಳು ಯಾರು ಮೊದಲು ಯಾರು ಕೊನೆ ಎನ್ನುವ ಭೇದವಿಲ್ಲದಂತೆ ಕೋಮು ಸೌಹಾರ್ದದ ತೇರನ್ನು ಎಳೆಯುತ್ತ ಜನಸಾಮಾನ್ಯರ ಬದುಕಿನ ಕಟು ವಾಸ್ತವಗಳಿಗೆ ಮುಖಾಮುಖಿ ಯಾಗಿಸುತ್ತ ನಡೆದು ಬಂದಿರುವುದು ನಾವು ಕಂಡಿದ್ದೇವೆ. ಸಾಮರಸ್ಯದ ನೆಲೆಯಲ್ಲಿ ಕರಾವಳಿಯ ದೈವಗಳು ಸಮುದಾಯದ ಸಾಕ್ಷಿ ಪ್ರಜ್ಞೆಯಾಗಿ ಜನಸಾಮಾನ್ಯರ ನಂ ಬಿಕೆಯ ಬೇರುಗಳಾಗಿ ಸಾಂತ್ವನವಾಗಿ ಬದುಕು ಕಟ್ಟುವ ಶಕ್ತಿ ಕೇಂದ್ರಗಳಾಗಿವೆ ಎನ್ನುವುದೂ ಸತ್ಯ. ಆದರೆ ರಾಜಕಾರಣದ ಹಿತಾಸಕ್ತಿಗಳು, ಧರ್ಮದ ಮುಖವಾಡಗಳು,ಮೂಲಭೂತವಾದಗಳು ಕಾಲಕಾಲಕ್ಕೆ ಜನಸಾಮಾನ್ಯರ ನಂಬಿಕೆಯ ಬೇರುಗಳನ್ನು ಅಲುಗಾಡಿಸುವ ಕೆಲಸವನ್ನು ವಿಘಟನೆಯ ಶಕ್ತಿಗಳಾಗಿ ಅಟ್ಟಹಾಸ ಗೈಯುತ್ತಿರುವುದನ್ನು ಕಂಡಾಗ ಒಂದು ರೀತಿಯ ಭಯ ಸಂದೇಹ ಅಸಹಾಯಕತೆ ನಮ್ಮನ್ನು ಕಾಡುತ್ತವೆ. ಈ ನೆಲದಲ್ಲಿ ಕೋಮು ಸಂಘರ್ಷ ರಾಜಕೀಯ ಬಣ್ಣ ಬಳಿದುಕೊಂಡು ವಿಜೃಂಭಿಸುತ್ತಿರುವುದನ್ನುಕಾಣುತ್ತೇವೆ. ಸಮೂಹ ಸನ್ನಿಗೆ ಒಳಗಾದಂತೆ…ಕರಾವಳಿ ಯ ಜೀವಧಾತುವಾದ ಆಚರಣೆ ಆರಾಧನೆಯ ಪರಂಪರೆಗಳು ಈ ಕಾರಣದಿಂದಾಗಿ ತಮ್ಮ ಮೂಲ ಸತ್ವ ಕಳೆದುಕೊಂಡು ಪೇಲವವಾಗಿರುವುದು, ಅಷ್ಟಮಂಗಳ, ಬ್ರಹ್ಮ ಕಲಶ,ಜೀರ್ಣೊದ್ದಾರ… ಇತ್ಯಾದಿ ಆಚರಣೆ ಯ ಅಬ್ಬರ ಕರಾವಳಿಯ ಬಹುತೇಕ ಎಲ್ಲಾ ದೈವಗಳಿಗೂ ಹಬ್ಬಿರುವುದು ವರ್ತಮಾನದ ವಾಸ್ತವ.. ಈ ಸುಳಿಯಲ್ಲಿ ಸಿಕ್ಕಿರುವ ಮಕ್ಕಳನ್ನು ಮಹಿಳೆಯರನ್ನು ಜನಸಾಮಾನ್ಯರನ್ನು ರಕ್ಷಿಸಲು ಕರಾವಳಿಯ ದೈವಗಳಿಗೆ ಕಾಯಕಲ್ಪ ಆಗಬೇಕಾಗಿರುವುದು ಇಂದಿನ ಅಗತ್ಯ .ಆ ಕಾಲ ಬೇಗ ಒದಗಿ ಬರಲಿ ಎಂಬ ನಿರೀಕ್ಷೆ ಆಶಯ ನಮ್ಮದುಬದುಕು ಕಟ್ಟುವ ಕೆಲಸ ಅದು ಎಷ್ಟೇ ಪುಟ್ಟದಾಗಿದ್ದರೂ ಅದಕ್ಕೆ ಶಕ್ತಿ ತುಂಬುವ ಪ್ರಾಮಾಣಿಕ ಸಂಘಟಿತ ಪ್ರಯತ್ನಗಳು ಆಗಬೇಕಾಗಿರುವುದು ಇಂದಿನ ತುರ್ತು. ಇದನ್ನು ಆಗು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎನ್ನುವುದನ್ನು ಪ್ರಾಂಜಲ ಮನಸ್ಸಿನಿಂದ ಅರಿತು ನಡೆಯೋಣ ಅಲ್ಲವೇ ಸ್ನೇಹಿತರೇ ?






0 Comments