ತಿಳಿಗೊಳದ ತಳ
ವಾಸುದೇವ ನಾಡಿಗ್
ಕೊಳೆಬಗ್ಗಡವನ್ನೆಲ್ಲ
ಒಳಕ್ಕೆಳೆದುಕೊಂಡ ತಳ
ತಿಳಿಗೆ ಜನುಮ ಕೊಟ್ಟಿತು
ತಿಳುವಳಿಕೆಗಳೆ ಹೀಗೆ
ಕಳೆಯನೆಲ್ಲಾ ಹೊಟ್ಟೆಯಲ್ಲಿಟ್ಟು ಕೊಂಡೇ
ಏಳುತ್ತದೆ
ಕೊಳೆಗಳುಳಿಸಿಹೋಗುವ
ಕಲೆಗಳಾಚೆ ನಿಂತ ವರ್ಣಚಿತ್ರ.

ನಳನಳಿಸುವ ಕನ್ನಡಿಯ ಬೆನ್ನು
ಸದಾ ಕಪ್ಪಗೆ ಬಣ್ಣ ಬಳಿದುಕೊಂಡೊ
ಖಾಕಿರಟ್ಟಕಟ್ಟಿಕೊಂಡೊ
ಆಚೆಭಾವ ಭಂಗಿಯನೆಲ್ಲ
ಖಚಿತ ರಾಚುತ್ತದೆ, ಕಂಡ ಕಲೆ
ನಾಚುತ್ತದೆ
ಅಳಲುಗಳನೆಲ್ಲ ತಳಕಿಟ್ಟು
ನೋವನೊಳಮನೆಗೆ ಅಟ್ಟಿ
ಸಗ್ಗಕೆ ಕಿಚ್ಚು ಹಚ್ಚುವ ಜೀವ
ಆಹಾ!
ಕಲಕದಿರಿ ತಳವ
ಸಿರಿಗನ್ನಡಿಯಾಗಿದ್ದ ಸರೋವರಕ್ಕೆ ಸರೋವರವೇ
ಮುಳುಗಿಸಿಕೊಂಡದ್ದು
ಅದೆಷ್ಟು ವಿಷದ ಬಾಣಗಳನ್ನು
ವಿಷಾದ ಉಸಿರುಗಳನ್ನು
ಮೇಲೆ ತಾವರೆಗಳ ಜಾತ್ರೆ!
ಒಂದೊಂದು ಸೋಲಿಗೂ
ಕಟ್ಟಿ ಕಲ್ಲ
ಮುಳುಗಿಸಿ ಒಳಗಿನಿಂದೆದ್ದದ್ದು
ನಗುವ ಮಹಲು
ಮುಳ್ಳುಗಳನೆಲ್ಲಾ
ಒಳಗೆಮುರುಟಿಸಿಕೊಂಡ
ಕಾಂಡ ನಕ್ಕಾಗಲೆ
ಹೂದಳಗಳರಳಿದ್ದು.






chennagide kavite
thanks smitha amrithraj avarige
ಇಷ್ಟವಾಯಿತು…
Arthagarbita kavite
ಕವಿತೆ ಇಷ್ಟವಾಯಿತು.
ದನ್ಯವಾದಗಳು
ಮಾರ್ಮಿಕವಾದ ಸಾಲುಗಳು…
ಚಿಂತನೀಯ ಕವಿತೆ
ಕೊಳೆ-ಕಳೆ-ಕೊಟ್ಟಿದೆ
——–ಫೈಜ್ನಟ್ರಾಜ್