ವಿಶಾಲ್ ಮ್ಯಾಸರ್
**
ಈ ನಿಕಶಕ್ಕೊಳಪಟ್ಟ ನಿದ್ರೆ
ಅದೆಲ್ಲೋ ಯಾವಾಗಲೋ
ಬಂದು ಬಾಣ ಬಿಡುವ ಮುನ್ನ
ಯಪ್ಪಾ ಅದು ಶತಮಾನದ ಸುಸ್ತು
ಹೊತ್ತು ಗೊತ್ತೆಂಬುದಿಲ್ಲ
Titanus ಕಾಯಿಲೆಯು
ಬಿಲ್ಲಂತೆ ದೇಹವನ್ನು ಬಾಗಿಸುವಂತೆ
ಹಿಗ್ಗಿಸುವಂತೆ
ಮಯ್ಯಮೂಳೆಯಲ್ಲ ಚಳಕುಟ್ಟಿ
ಇದು ಬರೀ ಬೆಳಗಲ್ಲೋ ತಮ್ಮ
ಬರಿಯ ನಿದ್ರೆಯು ಅಲ್ಲವಣ್ಣ
ಹಗಲು ರಾತ್ರಿ ಕಣ್ಣಿಗೆಣ್ಣೆ ಬಿಟ್ಟು ಕನಸಿದವರಿಗೆ ಅದೊಂದು
ಅನುಭೂತಿ
ಅರೆ ತೆರದಿದ್ದ ಕಣ್ಮಲರ್
ಅದೆಷ್ಟು ಪುರಾತನರು ಕೆರ ಹೊತ್ತುತಂದು ಕಣ್ಣಿಗೆ
ತೊಡಸಿದರೋ
ಇದು ಹರಳಯ್ಯನ ಮೊಮ್ಮಕ್ಕಳ ಅಡಿಗಡಿಗು ಬೆವತು
ಚರ್ಮ ಕಿತ್ತು ಮಾಡಿದ ಚಮ್ಮಾವುಗೆ
ಈ ಕತ್ತಲೆಯ ರಾಜ್ಯಕ್ಕೆ
ನಮ್ಮ ಮಂಟೆಸ್ವಾಮಿ
ಹೆಗಲ ಮೇಲೆ ಬೆಳಕು ಹೊತ್ತು ತಂದಂತೆ ನಿದ್ರೆ ಬಂತಂತೆ
ಮಾಚಿದೇವನೇ ಕಾಯವ ಹೊಗೆದೊಗೆದು ನೀಟಾಗಿ ಇಸ್ತ್ರಿ
ಮಾಡಿ ತೊಡಲು ರೆಡಿ ಮಾಡಿದ
ಅಂಬಾಪಾಲಿ ನೀನೆಲ್ಲೋ ಮನಗಿದ್ದಾಗ ಎಚ್ಚರ ಬಂದು
ಎಡವಿತ್ತಂತೆ ಹೌದೆ
ನಿನಗತ್ತಿದ ಅರ್ಧ ನಿದ್ರೆಯನ್ನದರು ಕಳಿಸು ವೇಸಾಲಿಗಷ್ಟು
ಆರಾಮ ಕೊಡು
ಸಾಕು ಸಾಕಾಗಿದೆ
Rapha ದಲ್ಲಿ ಅದೆಶ್ಟು ಮಂದಿ ಚಿರನಿದ್ರೆಗೆ ನಡೆದರೋ
ಕೊಲ್ಲುವವರ ಬಂದುಕಿಗೀಟು ನಿದ್ರೆ ಕೊಡು ಪ್ರಭುವೆ ಅವರ
ಕನಸಲ್ಲಿ ಕೊಂದ ಮಕ್ಕಳು ಕಿಲಕಿಲ ನಕ್ಕ ಅತ್ತ ಉಚ್ಚೆ ಹೊಯ್ದ
ದೃಶ್ಯ ಬರಲಿ
ತಮ್ಮ ಮುಂದಿನ ಮಕ್ಕಳು ಹೇಲಲು ಕೊಂಚ ರಕ್ತವಿರದ ಜಾಗ
ಕರುಣಿಸು
ಅಲ್ಲಿ ರಾತ್ರಿಯಲ್ಲಿ ಎಲ್ಲರಿಗು ತಣ್ಣಗಿನ ಆರಾಮ ಹತ್ತಿದಾಗ
ನರಳಾಟ ಕಾಡಲಯ್ಯ
ಗಾಜಾ ಪಟ್ಟಿಯಲ್ಲಿರುವರಿಗೆ
ಬೇಡಿದ್ದಲ್ಲ ಬೋಗಸೆ ತುಂಬಿ ಕರುಣಿಸು ದೇವ
ಕೊಂದರವನು ಸತ್ತವರನ್ನು ಒಂದೇ
ಮಣ್ಣಲಿ ಇಳಿಸುವಾತನೆ
ನಿನಗೊಂದು ಪ್ರಾರ್ಥನೆ
ಅಯ್ಯೋ ಟ್ಯಾಂಕರಿಗೆ
ಹಸಿವಾಗಿತ್ತು ಇನ್ನೇನು ಊಟವು ಮುಗಿದಿದೆ
ನಿದ್ರೆ ಬರಲಿ ಹೋಗಜ್ಜ ಅವುಗಳ ಕಿವಿಗೆ ಒಂದೀಟು ತಂಬೂರಿ
ಮೀಟು ಶರೀಫಜ್ಜ
ಅಯ್ಯಾ ಅಂಬಿಗ ನಿನ್ನ ನಂಬಿದೆನಯ್ಯ
ದಡ ಸೇರಿಸು ದೇವ
ನನಗಷ್ಟು ಅಂಬೆಯ ರಸ ಕರುಣಿಸಿ ಸಾಕ್ಷಾತ್ಕಾರದ ಅನುಭಾವ
ನೀಡೋ..!
ಪರರ ನೋವು
ಪರದೇಶದ ಹಸುವು
ಚನ್ನ ಮಲ್ಲಿಕಾರ್ಜುನ
ನಿನಗೆಲ್ಲವು ಕಾಡಲಿ ಅಷ್ಟೇ
ಇದು ಯಾರ ಕನಸು
ಬಯಲನೆ ಅಲಯವೆಂದ
ಕದಳಿಯ ಗುಹೆ ಹೊಕ್ಕ
ಪ್ರಭುದೇವರ ಕನಸು
ಗುಹೇಶ್ವರ ಎನ್ನ ಕಾಯವ ದಂಡಿಗೆಯ ಮಾಡಯ್ಯ
ಅವ್ವಾ ಪುಣ್ಣ್ಯಂಗನೆಯರೇ
ನೀವು ದೇವನೊಂದಿಗೆ ಮಲಗುವಾಗ ನನ್ನಬಳಿಗೂ ಚೂರು
ಹೋಗಲು ಹೇಳಿರೆ
ನಿಮ್ಮ ಮಗನಿಗಷ್ಟು ನಿದ್ರೆ ಕರುಣಿಸಿರಿ
**
ದಾರ್ಶನಿಕ ಕವಿ ಎಚ್ ಶಿವಪ್ರಕಾಶರು ತಮ್ಮ ಒಂದು ಪದ್ಯದಲ್ಲಿ ಆಮ್ರಪಾಲಿಗೆ ಅಂಬಾಪಲಿ ಹಾಗೂ ವೈಶಾಲಿಗೆ ವೇಸಾಲಿ ಎಂಬ ಪದ ಪ್ರಯೋಗ ಮಾಡಿದ್ದಾರೆ ಅದರ ಪ್ರಭಾವವನ್ನು ನಾನಿಲ್ಲಿ ನೆನೆಯುತ್ತೇನೆ.






0 Comments