ಕೊಲೆಗಡುಕತನಕ್ಕೆ ನನ್ನ ವೋಟಿಲ್ಲ

ಎನ್.ಎಸ್. ಶಂಕರ್

ಮೆಘಾನಿನಗರದ ಚಮನ್‍ಪುರ, ಗುಜರಾತಿನ ಮೊದಲ ರಾಜಧಾನಿ ಅಹಮದಾಬಾದಿನ ಹೃದಯ ಭಾಗ. ಈ ಪ್ರದೇಶದಲ್ಲಿರುವ ಹಲವು ಹೌಸಿಂಗ್ ಸೊಸೈಟಿಗಳಲ್ಲಿ ಗುಲ್ಬರ್ಗ್ ಸೊಸೈಟಿ ಕೂಡ ಒಂದು. ಈ ಗುಲ್ಬರ್ಗ್ ಸೊಸೈಟಿ- ಬಹುತೇಕ ಮುಸ್ಲಿಂ ಬಾಹುಳ್ಯದ- 19 ಬ್ಲಾಕ್‍ಗಳು ಮತ್ತು ಎಂಟು ಕಟ್ಟಡಗಳ ಸಮುಚ್ಚಯ.

ಆ ಹೌಸಿಂಗ್ ಸೊಸೈಟಿಗಳ ಸುತ್ತಮುತ್ತ 2002ರ ಫೆಬ್ರವರಿ 28ರ ಬೆಳಗ್ಗೆಯಿಂದಲೇ ಜನ ಗುಂಪುಗೂಡತೊಡಗಿದರು. ಸುತ್ತ ಮುತ್ತ ಮುಸ್ಲಿಮರ ಮೇಲೆ, ಅವರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡುವುದು, ಬೆಂಕಿ ಹಚ್ಚಿ ಸುಡುವುದು ಇತ್ಯಾದಿ ದುಷ್ಕøತ್ಯಗಳಲ್ಲಿ ನಿರತರಾದರು. ಅದನ್ನು ಕಂಡ ಗುಲ್ಬರ್ಗ್ ಸೊಸೈಟಿ ನಿವಾಸಿ- 76ರ ಇಳಿವಯಸ್ಸಿನ ಮಾಜಿ ಎಂಪಿ (ಕಾಂಗ್ರೆಸ್) ಎಹಸಾನ್ ಜಾಫ್ರಿ ಬೆಳಗ್ಗೆ ಹತ್ತೂವರೆಗೆ ಹೋಗಿ ಪೊಲೀಸ್ ಕಮಿಷನರ್ ಪಿಸಿ ಪಾಂಡೆಯವರನ್ನು ಕಂಡು ಪರಿಸ್ಥಿತಿ ವಿವರಿಸಿ, ರಕ್ಷಣೆ ಕೋರಿದರು. ಪಾಂಡೆ ಸಹಾಯ ಮಾಡುವ ಭರವಸೆ ನೀಡಿದ್ದರಿಂದ ಜಾಫ್ರಿ ವಾಪಸಾದರು.

ಆದರೆ ಹೊತ್ತೇರಿದಂತೆ ಸೊಸೈಟಿ ಮುಂದಿನ ಗುಂಪು ಉಬ್ಬುತ್ತಲೇ ಹೋಯಿತು, ಯಾವ ಪೊಲೀಸರೂ ಬರಲೂ ಇಲ್ಲ. ಈ ನಡುವೆ ಹತ್ತಿರದ ಕೊಳೆಗೇರಿಗಳ ಮುಸ್ಲಿಂ ನಿವಾಸಿಗಳು ಕೂಡ ಹಲ್ಲೆಯ ಭೀತಿಯಿಂದ ಗುಲ್ಬರ್ಗ್ ಸೊಸೈಟಿಗೇ ಬಂದು ಸೇರಿಕೊಂಡರು.
ಮಧ್ಯಾಹ್ನ ಒಂದೂವರೆ ಹೊತ್ತಿಗೆ ಜಂಟಿ ಪೊಲೀಸ್ ಕಮಿಷನರ್ ಎಂಕೆ ಟಂಡನ್ ಅಲ್ಲಿಗೆ ಬಂದರು. ಸೊಸೈಟಿಯ ಗೇಟಿನ ಬಳಿ ಜಾಫ್ರಿಯವರನ್ನು ಕಂಡು ಒಂದಷ್ಟು ಪೊಲೀಸ್ ಪಡೆಗಳನ್ನು ಕಳಿಸುವ ಭರವಸೆ ನೀಡಿ ತಾವು ಅಲ್ಲೇ ನಿಲ್ಲದೆ ನರೋಡಾ ಪಾಟಿಯಾ ಕಡೆ ಹೊರಟುಬಿಟ್ಟರು.

ಜಾಫ್ರಿಯವರ ಮುಂದಿನ ನಡವಳಿಕೆ ಅಸಾಧಾರಣ ಧೈರ್ಯದ್ದು. ತಾವು ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿ, ತಮಗೆ ಯಾರೂ ಅಷ್ಟು ಸುಲಭವಾಗಿ ಅಪಾಯ ಮಾಡಲಾರರು ಎಂಬ ನಂಬಿಕೆಯಿಂದ ಜಾಫ್ರಿ ಮೂರು ಗಂಟೆ ಸುಮಾರಿಗೆ ಮತ್ತೆ ಸೊಸೈಟಿಯ ಗೇಟಿಗೆ ಬಂದರು. ಆ ವೇಳೆಗೆ ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಗುಂಪುಗೂಡಿದ್ದ ಜನರಿಗೆ ಚದುರುವಂತೆ ಮನವಿ ಮಾಡಿದರು. ಜೊತೆಗೆ ಯಾರೂ ಊಹೆ ಮಾಡಲಾಗದ ಮತ್ತೊಂದು ಧೀರೋದಾತ್ತ ಘೋಷಣೆ ಮಾಡಿದರು.

‘ಬೇಕೆಂದರೆ ನನ್ನನ್ನು ನಿಮ್ಮ ವಶಕ್ಕೆ ತೆಗೆದುಕೊಳ್ಳಿ, ಆದರೆ ಸೊಸೈಟಿಯ ಒಳಗಿರುವ ಅಷ್ಟೂ ಜನರನ್ನು ಬಿಟ್ಟುಬಿಡಿ’ ಎಂದು ಕೇಳಿಕೊಂಡರು ಆ ವಯೋವೃದ್ಧ. ಜಾಫ್ರಿ ಅಷ್ಟು ಹೇಳಿದ್ದೇ ತಡ, ಗುಂಪು ಅವರನ್ನು ಎಳೆದುಕೊಂಡಿತು.

ಮುಂದಕ್ಕೆ ಕಂಡಿದ್ದು- ಅಸಲಿ ‘ಗುಜರಾತ್ ಮಾದರಿ’

ಎಹಸಾನ್ ಜಾಫ್ರಿಯವರನ್ನು ಗೇಟಿನಿಂದ ಹೊರಗೆಳೆದುಕೊಂಡಾಗ ಮಧ್ಯಾಹ್ನ ಸುಮಾರು ಮೂರೂವರೆ ಗಂಟೆ. ಗಲಭೆಕೋರರು ಅವರ ಬಟ್ಟೆ ಬಿಚ್ಚಿ ಬರಿ ಮೈಯಲ್ಲಿ ಓಡಾಡಿಸಿದರು. ‘ಜೈ ಶ್ರೀರಾಮ್, ವಂದೇ ಮಾತರಂ ಹೇಳಿ’ ಎಂದು ಬಲವಂತ ಮಾಡಿದರು. ಅವರು ಒಪ್ಪದಿದ್ದಾಗ ಮೊದಲು ಅವರ ಕೈ ಬೆರಳುಗಳನ್ನು ಕತ್ತರಿಸಿದರು. ಆ ಸ್ಥಿತಿಯಲ್ಲೇ ಇಡೀ ಪ್ರದೇಶದ ತುಂಬ ಎಳೆದಾಡಿ ಓಡಾಡಿಸಿದರು. ಮತ್ತೆ ಅವರ ಕೈ ಕಾಲುಗಳನ್ನು ತುಂಡರಿಸಲಾಯಿತು. ಅಲ್ಲಿಗೂ ನಿಲ್ಲದೆ, ಆ ಅರೆಜೀವದ ದೇಹವನ್ನೇ ನೆಲದ ಮೇಲೆ ಎಳೆದಾಡಿಕೊಂಡು ಹೋದರು. ಕಡೆಯಲ್ಲಿ ಅವರನ್ನು ಬೆಂಕಿಗೆ ಎಸೆಯಲಾಯಿತು.

ಅವರ ಜೊತೆಯೇ ಅವರ ಮೂವರು ಸೋದರರು ಮತ್ತು ಇಬ್ಬರು ಅಣ್ಣನ ಮಕ್ಕಳನ್ನು ಕೊಲ್ಲಲಾಯಿತು. ಅದಕ್ಕೂ ಮೊದಲು ಯೂಸುಫ್ ಮತ್ತು ಅನ್ವರ್ ಎಂಬ ಇಬ್ಬರು ಯುವಕರನ್ನು ಹಿಡಿದು ಅವರನ್ನು ತುಂಡರಿಸಿ ಬೆಂಕಿ ಹಚ್ಚಿ ಸುಟ್ಟರು.

ಆ ಸಂದರ್ಭದಲ್ಲಿ, ಅದೊಂದೇ ಪ್ರದೇಶದಲ್ಲಿ 39 ಜನರ ಹತ್ಯೆ ನಡೆಯಿತೆಂಬುದು ಅಧಿಕೃತ ಅಂಕಿ ಅಂಶ. ಆದರೆ ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಸಾವಿಗೀಡಾದವರು, ಸೊಸೈಟಿಯವರೇ 45 ಮಂದಿ ಮತ್ತು ಅಲ್ಲಿ ಆಶ್ರಯ ಪಡೆಯಲು ಬಂದಿದ್ದ 10ರಿಂದ 12 ಮಂದಿ. ಅಂದರೆ ಅಂದು ಗಲಭೆಕೋರರಿಗೆ ಆಹುತಿಯಾದವರು ಒಟ್ಟು 55ರಿಂದ 65 ಮಂದಿ. ಪತ್ರಕರ್ತರು ಅಲ್ಲಿಗೆ ಹೋಗುವಷ್ಟರಲ್ಲಿ ಕಟ್ಟಡಗಳು, ಜನ ಎಲ್ಲರೂ ಎಲ್ಲವೂ ಅಗ್ನಿಗೆ ಆಹುತಿಯಾಗಿತ್ತು. ದೇಹಗಳೆಲ್ಲ ಬೂದಿಯಾಗಿ, ಗುರುತು ಸಿಗದ ಅಂಗಾಂಗಗಳಾಗಿ ಮಾರ್ಪಟ್ಟಿದ್ದವು…. ಸಂಜೆ ವೇಳೆಗೆ ಪೊಲೀಸರು ಅಲ್ಲಿ ಉಳಿದಿದ್ದ 150 ಜನರನ್ನು ರಕ್ಷಿಸಿದರು….

ಗೋಧ್ರಾ ಹತ್ಯಾಕಾಂಡ ನಡೆದ (ಫೆಬ್ರವರಿ 27) ನಂತರದ ಆ ಮೂರೇ ದಿನಗಳಲ್ಲಿ ಗುಜರಾತಿನ ತುಂಬ ಇಂಥ ನರಮೇಧ, ಅಗ್ನಿಸ್ಪರ್ಶ, ಸಾಮೂಹಿಕ ಅತ್ಯಾಚಾರದ ನೂರಾರು ಕಥೆಗಳು ಆಗಿಹೋದವು. ಅಧಿಕೃತವಾಗಿ ಸಾವಿರ (ಅನಧಿಕೃತವಾಗಿ ಎರಡು ಸಾವಿರ) ಮಂದಿ ಬಲಿಯಾದರು. ಲಕ್ಷಾಂತರ ಮಂದಿ ಮನೆಮಾರು ಕಳೆದುಕೊಂಡು ನಿರಾಶ್ರಿತರಾದರು. ಅಷ್ಟೂ ಜನರ ಬದುಕುವ ಮಾರ್ಗವೇ ನಶಿಸಿಹೋಯಿತು. ಮಕ್ಕಳ ಕಣ್ಣೆದುರೇ ತಾಯಂದಿರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಕಡೆಗೆ ಆ ತಾಯಂದಿರನ್ನೂ ಜೀವಂತ ಉಳಿಸಲಿಲ್ಲ.

ಇವು ಯಾವುವೂ, ಎರಡು ಕೋಮುಗಳು ಎದುರಾಬದುರು ಕತ್ತಿ ಹಿರಿದು ನಿಂತ ‘ಕೋಮುದಂಗೆ’ಯ ಘಟನೆಗಳಲ್ಲ. ಅಥವಾ ಸನ್ಮಾನ್ಯ ನರೇಂದ್ರ ಮೋದಿಯವರೂ ಸೇರಿದಂತೆ ಸಂಘ ಪರಿವಾರದ ನಾಯಕರು ಹೇಳಿಕೊಂಡಂತೆ ‘(ಗೋಧ್ರಾ) ಕ್ರಿಯೆಗೆ ಪ್ರತಿಕ್ರಿಯೆ’ ಮಾತ್ರವಲ್ಲ. ಇದಿಷ್ಟೂ ಸರ್ಕಾರಿ ಪ್ರಾಯೋಜಿತ ಮಾರಣಹೋಮ. ಯಾಕೆಂದರೆ ಗೋಧ್ರಾ ಘಟನೆಯಾದ ಮರುದಿನವೇ ಸ್ವತಃ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೂರದರ್ಶನದಲ್ಲಿ ಘೋಷಿಸಿದರು:

‘ಗುಜರಾತಿನ ಜನತೆ ಇಂಥ ಘಟನೆಯನ್ನು ಸಹಿಸುವುದಿಲ್ಲ. ತಪ್ಪಿತಸ್ಥರಿಗೆ, ಅವರ ಪಾಪಕ್ಕೆ ತಕ್ಕ ಶಿಕ್ಷೆ ಆಗೇ ಆಗುತ್ತದೆ. ಅಷ್ಟೇ ಅಲ್ಲ, ಯಾರೂ, ತಮ್ಮ ಕನಸಿನಲ್ಲೂ ಇಂಥ ಹೀನ ದುಷ್ಕೃತ್ಯಕ್ಕೆ ಎಳಸದ ಮಟ್ಟಿಗೆ ತಕ್ಕ ಪಾಠ ಕಲಿಸುತ್ತೇವೆ…’
ಅದೇ ದಿನ ಗುಜರಾತಿನ ವಿಧಾನಸಭಾ ಅಧಿವೇಶನದಲ್ಲಿ ಅವರು ನೀಡಿದ ಹೇಳಿಕೆಯೂ ಅದೇ ಧಾಟಿಯಲ್ಲಿತ್ತು:

‘…ಮುಗ್ಧರ ಮಾರಣಹೋಮ ಮಾಡಿದ ಈ ಕ್ರೂರ, ಅಮಾನವೀಯ ಘಟನೆಗೆ ಪ್ರತಿಯಾಗಿ ನಾವು ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಷ್ಟೇ ಅಲ್ಲ, ಇಂಥ ಘಟನೆ ಮುಂದೆಂದೂ ಸಂಭವಿಸದ ಮಟ್ಟಿಗೆ ಶಿಕ್ಷಿಸುತ್ತೇವೆ…’
ಇಲ್ಲಿ ಹೀಗೆ ‘ಪಾಠ ಕಲಿಸುವ’ ಇನ್ನೊಂದೇ ಘಟನೆ ಉಲ್ಲೇಖಿಸಿ ಮುಂದುವರೆಯುತ್ತೇನೆ.

ವಿವರಗಳಿಗೆ- ಗುಜರಾತ್: ದಿ ಮೇಕಿಂಗ್ ಆಫ್ ಎ ಟ್ರಾಜಿಡಿ. ಸಂ: ಸಿದ್ಧಾರ್ಥ ವರದರಾಜನ್

ಇದು ಮೆಹಸಾನಾ ಜಿಲ್ಲೆಯ ವಿಸನಗರ್‍ನಲ್ಲಿ ನಡೆದದ್ದು. ಅಲ್ಲಿನ ಕಾಜಿವಾಡ ಎಂಬ ಪ್ರದೇಶದಲ್ಲಿ ಅಶ್ರಫ್ ಭಾಯಿ ಎಂಬಾತನ ಮೇಲೆ ಕತ್ತಿಯಿಂದ ಹಲ್ಲೆ ಮಾಡಲಾಯಿತು. ಆತನ ತಂಗಿ ಜೈನಾಬೀಬಿ ಮತ್ತು ನೆರೆಹೊರೆಯವರಾದ ಹನೀಫ್ ಮತ್ತು ಯೂನುಸ್ ಭಾಯಿ ಮನಸೂರಿ ಎಂಬುವವರು ಗಾಯಗೊಂಡ ಅಶ್ರಫ್‍ನನ್ನು ತಳ್ಳು ಗಾಡಿಗೆ ಹಾಕಿಕೊಂಡು ವಿಸನಗರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಹಲ್ಲೆಕೋರರು ಬಿಡದೆ ಅಲ್ಲಿಗೂ ಬಂದು ದಾಳಿ ಮುಂದುವರೆಸಿದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿದ ಯೂನುಸ್ ಭಾಯಿ, ಈವತ್ತಿನವರೆಗೂ ಪತ್ತೆಯಾಗಿಲ್ಲ.

ಗಲಭೆಕೋರರು ಜೈನಾಬೀಬಿ, ಹನೀಫ್ ಮತ್ತು ಅಶ್ರಫ್- ಈ ಮೂವರನ್ನು ಆಸ್ಪತ್ರೆಯ ಮೂರನೇ ಮಹಡಿಯ ಮೇಲಕ್ಕೆ ಎಳೆದೊಯ್ದು ಅಲ್ಲಿಂದ ಕೆಳಕ್ಕೆ ತಳ್ಳಿದರು. ಕೆಳಗೆ ಬಿದ್ದ ಕೂಡಲೇ ಹನೀಫ್ ಮತ್ತು ಅಶ್ರಫ್ ಸತ್ತುಹೋದರೂ, ಜೈನಾಬೀಬಿಯ ಪ್ರಾಣ ತಕ್ಷಣ ಹೋಗಲಿಲ್ಲ. ಮೈಯೆಲ್ಲ ನಜ್ಜುಗುಜ್ಜಾಗಿದ್ದ ಆ ಹೆಣ್ಣುಮಗಳನ್ನು ಮತ್ತೆ ಮೂರನೇ ಮಹಡಿಗೆ ಎಳೆದೊಯ್ದರು. ಅಲ್ಲಿಂದ ಇನ್ನೂ ಒಮ್ಮೆ ಕೆಳಕ್ಕೆ ತಳ್ಳಲಾಯಿತು!… ಅಷ್ಟಾದ ಮೇಲೆ ಆ ದೇಹಗಳ ಮೇಲೆ ಮತ್ತೆ ಆಸಿಡ್ ಎರಚಿ, ಕತ್ತಿಯಿಂದ ತುಂಡು ತುಂಡು ಮಾಡಿ ಬಿಸಾಕಲಾಯಿತು…

ಇಂಥ ಕಥೆಗಳು ಅಸಂಖ್ಯಾತ. ವಿವರಗಳನ್ನು ಓದುತ್ತಾ ಹೋದರೆ ಜೀವ ಕುಸಿದು ಕಂಪಿಸುತ್ತದೆ. ಹೇಳಲಾಗದ ಸಂಕಟ ನಮ್ಮ ಒಳಗನ್ನೆಲ್ಲ ತೊಳಸತೊಡಗುತ್ತದೆ.

ನಿಜ, ಗೋಧ್ರಾದಲ್ಲಿ ನಡೆದಿದ್ದು ಅತ್ಯಂತ ಹೀನವಾದ ಹತ್ಯಾಕಾಂಡ. ಎಲ್ಲ ತಪ್ಪಿತಸ್ಥರಿಗೂ ಗರಿಷ್ಠ ಶಿಕ್ಷೆಯೂ ಆಗಲೇಬೇಕು. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಗುಜರಾತಿನಲ್ಲಿ ನಡೆದಿದ್ದು ಅದಲ್ಲ, ಗೋಧ್ರಾ ಘಟನೆಯನ್ನು ‘ಹತ್ಯಾಕಾಂಡ’ವೆಂದೂ, ನಂತರದ ಮಾರಣಹೋಮವನ್ನು ‘ಕೇವಲ ಗಲಭೆ’ ಎಂದೂ ಗುರುತಿಸುವ ಮೂಲಕವೇ ಬಿಜೆಪಿ/ ಸಂಘ ಪರಿವಾರ, ತಮ್ಮ ನಿಲುವೇನೆಂದು ತೋರ್ಪಡಿಸಿದವು. ಯಾರದೋ ತಪ್ಪಿಗೆ ಸಾರಾಸಗಟಾಗಿ ಇಡೀ ಸಮೂಹವನ್ನೇ ಸದೆಬಡಿದ ಹೃದಯ ವಿದ್ರಾವಕ ಕ್ರೌರ್ಯಕ್ಕೆ ಇಡೀ ಗುಜರಾತ್ ಸಾಕ್ಷಿಯಾಯಿತು.

ಸಂಘ ಪರಿವಾರದ ನೇತೃತ್ವದಲ್ಲಿ, ಸರ್ಕಾರದ ಪೂರ್ಣ ಕುಮ್ಮಕ್ಕಿನೊಂದಿಗೆ, ಅಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ನಡೆದ ಗುಜರಾತ್ ನರಮೇಧದ ವಿವರಗಳು ನಮ್ಮ ದೇಶದಲ್ಲಿ ಎಷ್ಟು ಜನಕ್ಕೆ ಗೊತ್ತಿದೆಯೋ ಇಲ್ಲವೋ ತಿಳಿಯದು. ಆಯಿತು, ಅದಾಗಿ ಈಗ ಹದಿನಾರು ವರ್ಷದ ಮೇಲಾಯಿತಲ್ಲ, ಈಗೇಕೆ ಮತ್ತೆ ಹಳೆ ಕಣಿಯೆಲ್ಲ ಎಂದು ಕೇಳಿದರೆ… ದೇಶದಲ್ಲಿ ಗುಜರಾತ್ ಹತ್ಯಾಕಾಂಡ 2002ರಲ್ಲಿ ನಡೆದು ಆಗಲೇ ಮುಗಿದು ಹೋದ ವಿದ್ಯಮಾನವಲ್ಲ, ಆ ಹತ್ಯಾಕಾಂಡವಿನ್ನೂ ನಿಂತೇ ಇಲ್ಲ!

ಬಾಬ್ರಿ ಮಸೀದಿ ಧ್ವಂಸದೊಂದಿಗೆ ಭಾರತದಲ್ಲಿ ಕೋಮುವಾದಿ ರಾಜಕಾರಣಕ್ಕೆ ನಿರ್ಭಿಡೆಯ ವಿಧ್ವಂಸಕ ಸ್ವರೂಪ ಪ್ರಾಪ್ತವಾದರೆ, ಗುಜರಾತ್ ನರಮೇಧದೊಂದಿಗೆ ದ್ವೇಷದ ರಾಜಕಾರಣಕ್ಕೆ ಕೊಲೆಗಡುಕತನದ ರೊಚ್ಚು ಮೈಗೂಡಿತು;

ಅದಕ್ಕೆ ‘ರಾಷ್ಟ್ರಭಕ್ತಿ’ ಎಂಬ ಹೊಳೆಯುವ ಹೆಸರೂ ಬಂತು!

ಮತ್ತು ಅದು ದೇಶದ ಧಮನಿ ಧಮನಿಗಳಲ್ಲಿ ಹರಿಯತೊಡಗಿದ ಹೊಸ ರಕ್ತವಾಯಿತು. ಆ ಬೆಳವಣಿಗೆ ಸರಿ ತಪ್ಪುಗಳ ನೈತಿಕ ಗೆರೆಗಳನ್ನೇ ಅಳಿಸಿಹಾಕಿದೆ, ದೇಶದ ಅಂತಸ್ಸಾಕ್ಷಿ ಕೊನೆಯುಸಿರೆಳೆಯುತ್ತಿದೆ.

ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಸಿಂಘಾಲ್‍ರ ಕಣ್ಣಿಗೆ ಗುಜರಾತ್ ನರಮೇಧ ‘ಹೆಮ್ಮೆಯ ಸಂಗತಿ’ಯಾಗಿ ಕಂಗೊಳಿಸಿತು. ‘ಕಳೆದ ಸಾವಿರ ವರ್ಷಗಳಲ್ಲಿ ಹಿಂದೂಗಳು ಅನುಭವಿಸುತ್ತ ಬಂದಿದ್ದಕ್ಕೆ ತಕ್ಕ ಪ್ರತ್ಯುತ್ತರವಿದು’ ಎಂಬುದು ಅವರ ಹೆಮ್ಮೆ. ಪ್ರವೀಣ್ ತೊಗಾಡಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಎಲ್ಲೆಲ್ಲಿ ಗೋಧ್ರಾ ಇದೆಯೋ, ಅಲ್ಲೆಲ್ಲ ಗುಜರಾತು ಇರುತ್ತೆ’ ಎಂಬ ಎಚ್ಚರಿಕೆ ಕೊಟ್ಟರು.

‘ಗುಜರಾತಿನಲ್ಲಿ ಮೊಟ್ಟಮೊದಲ ಬಾರಿ ಹಿಂದೂ ಜಾಗೃತಿ ಉಂಟಾಗಿದೆ, ಮುಸ್ಲಿಮರು ನಿರಾಶ್ರಿತರಾಗಿ ಮಾರ್ಪಟ್ಟಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಗುಜರಾತ್ ಇಡೀ ದೇಶಕ್ಕೆ ಮಾರ್ಗ ತೋರಿದೆ’ ಎಂಬುದು ತೊಗಾಡಿಯಾರ ಸಂಭ್ರಮ… ಮುಂದಕ್ಕೆ ಅದೇ ವರ್ಷ ಜೂನ್ ಕೊನೆಯಲ್ಲಿ ಹರಿದ್ವಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಇಡೀ ದೇಶದ ಮುಸ್ಲಿಮರನ್ನು ನಿರಾಶ್ರಿತರನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಲಾಯಿತು…

ಈ ಸಕಲ ಹೆಮ್ಮೆ, ಗರ್ವಗಳ ಹೃದಯ ಸಾಮ್ರಾಟ- ಸನ್ಮಾನ್ಯ ನರೇಂದ್ರ ಮೋದಿ. ‘ಸಾಬರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಬುದ್ಧಿ ಕಲಿಸಿದ ರಣಧೀರ.’ ಹೀಗೆ ದ್ವೇಷದ ರಾಜಕಾರಣವನ್ನು ಸಾಮೂಹಿಕ ನರಮೇಧದ ಹಂತಕ್ಕೆ ಕೊಂಡೊಯ್ದ ಕಾರಣಕ್ಕೇ ಅವರಿಗೆ ದಕ್ಕಿದ ಉಡುಗೊರೆ- ಈ ದೇಶದ ಪ್ರಧಾನಿ ಪಟ್ಟ.

ಅದಕ್ಕೇ-
ನೊಯಿಡಾ ಪಕ್ಕದ ದಾದ್ರಿಯಲ್ಲಿ, ಮನೆಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದನೆಂಬ ಗಾಳಿಸುದ್ದಿ ಹಿಡಿದು ಮಹಮದ್ ಅಖ್ಲಾಕ್‍ನನ್ನು ಹೊಡೆದು ಕೊಂದ ಬಿಜೆಪಿ ಬೆಂಬಲಿಗನೊಬ್ಬ ನಂತರ ಸಾವಿಗೀಡಾದಾಗ, ಬಿಜೆಪಿ ಮಂತ್ರಿ ಆತನಿಗೆ ರಾಷ್ಟ್ರಧ್ವಜ ಹೊದೆಸಿ ಗೌರವ ಸೂಚಿಸಿದ್ದನ್ನು ಕಂಡು ಯಾರಿಗೂ ದಿಗ್ಭ್ರಮೆಯಾಗಲಿಲ್ಲ;

ರಾಜಾಸ್ತಾನದಲ್ಲಿ ವಿನಾಕಾರಣ (ಅಥವಾ ಆತ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ) ಅಫ್ರಾಜುಲ್ ಎಂಬ ಬಂಗಾಳಿ ಕೂಲಿಕಾರನನ್ನು ಹೊಡೆದು ಕೊಂದು ಸುಟ್ಟು ಹಾಕಿದ ಶಂಭುಲಾಲ್ ರೇಗಾರ್ ನ ಕೃತ್ಯವನ್ನು ವಿಜೃಂಭಿಸಿ ರಾಮನವಮಿ ದಿನ ಮೆರವಣಿಗೆಯಲ್ಲಿ ಆತನ ಸ್ತಬ್ಧಚಿತ್ರ ಒಯ್ದು ಮೆರೆಸಿದಾಗ ಯಾರಿಗೂ ವಾಕರಿಕೆಯಾಗಲಿಲ್ಲ;

ರಾಜಾಸ್ತಾನದಲ್ಲಿ ಗೋರಕ್ಷಣೆ ಹೆಸರಲ್ಲಿ ಪೆಹ್ಲೂ ಖಾನ್ ಎಂಬ ಬಡ ಹೈನುಗಾರ ರೈತನನ್ನು ಹೊಡೆದು ಕೊಂದವರ ಕೃತ್ಯವನ್ನು ರಾಷ್ಟ್ರೀಯ ಮಹಿಳಾ ಗೋರಕ್ಷಕ ದಳದ ಅಧ್ಯಕ್ಷೆ ಸಾಧ್ವಿ ಕಮಲ್ ದೀದಿ ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದರ ಶೌರ್ಯಕ್ಕೆ ಹೋಲಿಸಿ ಹೊಗಳಿದಾಗ ಯಾರೂ ಮೂಗಿನ ಮೇಲೆ ಬೆರಳಿಡಲಿಲ್ಲ…

ಅಷ್ಟೇಕೆ, ತೀರಾ ಈಚೆಗೆ ಜಮ್ಮುವಿನ ಕಠುವಾದಲ್ಲಿ ಎಂಟು ವರ್ಷದ ಹಸು ಕಂದಮ್ಮನನ್ನು ಒಂದು ವಾರ ದೇವರಗುಡಿಯಲ್ಲಿ ಕೂಡಿಟ್ಟು, ಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಹೊಟ್ಟೆಗೆ ಕೊಡದೆ ನರಳಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಕಡೆಗೆ ಕೊಂದು ಹಾಕಿದವರಲ್ಲ, ಆ ಆರೋಪಿಗಳನ್ನೇ ಬಿಡುಗಡೆ ಮಾಡಬೇಕೆಂದು ಬಿಜೆಪಿ ಮಂತ್ರಿಗಳಾದಿಯಾಗಿ ಒಂದಷ್ಟು ಜನ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ತೆಗೆದಾಗ, ಯಾರೂ ಲಜ್ಜೆಯಿಂದ ತಲೆ ತಗ್ಗಿಸಲಿಲ್ಲ…

ಅಂತೂ ಪಟ್ಟಿ ಮುಗಿಯುವುದೇ ಇಲ್ಲ….

ಈಗ ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿ ನಿಂತು ನೋಡುವಾಗ ಈ ಮನ ಕಲಕುವ ಚಿತ್ರಗಳು ಕಣ್ಣ ಮುಂದೆ ಮೂಡಿ ಉಸಿರು ಕಟ್ಟಿದಂತಾಗುತ್ತದೆ. ದುಸ್ವಪ್ನವಾಗಿ ಕಾಡುವ ಅದೇ ಗುಜರಾತಿನ ಮಾದರಿಗಳು ಮತ್ತು ದೇಶದ ರಕ್ತನಾಳಗಳಲ್ಲಿ ರಭಸವಾಗಿ ಹಬ್ಬುತ್ತಿರುವ ವಿಷ….

ದೇಶ ವಿಭಜನೆಯ ಮುನ್ನಿನ ದಿನಗಳವು. ಆಗ ಕಲ್ಕತ್ತಾದಲ್ಲಿ ಭುಗಿಲೆದ್ದ ಕೋಮುವಿದ್ವೇಷವನ್ನು ಶಮನಗೊಳಿಸಲು ಗಾಂಧೀಜಿ ಅಲ್ಲಿ ನೆಲೆಸಿದ್ದ ಸಮಯದಲ್ಲಿ, ಬಾಪೂ ಆಹ್ವಾನದ ಮೇರೆಗೆ ಅವರೊಂದಿಗೆ ಕೆಲಸ ಮಾಡಲು ಹೋಗಿದ್ದ ರಾಮಮನೋಹರ ಲೋಹಿಯಾ, ತಾವು ಕಂಡ ಒಂದು ವಿಲಕ್ಷಣ ವಿದ್ಯಮಾನದ ಬಗ್ಗೆ ವರದಿ ಮಾಡುತ್ತಾರೆ. ಆಗ ಒಂದು ಇಡೀ ವರ್ಷ ಹಿಂದೂ ಮುಸ್ಲಿಮರ ನಡುವೆ ಎಂಥ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ದಿನದ ನಿರ್ದಿಷ್ಟ ಸಮಯದಲ್ಲಿ ಎರಡೂ ಕೋಮುಗಳ ನಡುವೆ ‘ಕದನವಿರಾಮ’ ಘೋಷಣೆಯಾಗುತ್ತಿತ್ತು.

ಆ ಸಮಯದಲ್ಲಿ ಎರಡೂ ಕೋಮುಗಳ ಮೊಹಲ್ಲಾಗಳ ನಡುವಣ ನಿರ್ದಿಷ್ಟ ತಟಸ್ಥ ಜಾಗದಲ್ಲಿ (no man’s land) ಎರಡೂ ಬದಿಯ ಮಂದಿ ಪರಸ್ಪರ ತಮಗೆ ಬೇಕಾದ ಮೊಟ್ಟೆಯೋ, ಬಟ್ಟೆಯೋ ಮತ್ತೊಂದೋ ವಸ್ತುವನ್ನು ದುಡ್ಡಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ದ್ವೇಷಾವೇಶದಲ್ಲಿ ಒಬ್ಬರಿಗೊಬ್ಬರು ಕತ್ತು ಕೊಯ್ದುಕೊಳ್ಳುತ್ತಿದ್ದಾಗಲೂ, ನಿತ್ಯಜೀವನಕ್ಕೆ ಅನಿವಾರ್ಯವಾಗಿ ಮಾಡಿಕೊಂಡ ಈ ವ್ಯಾಪಾರದ ಏರ್ಪಾಡನ್ನು ಕಂಡು ವಿಸ್ಮಿತರಾಗುವ ಲೋಹಿಯಾ ‘ದೇಶದ ಒಳಗೇ ಗಡಿರೇಖೆಗಳು, ತಟಸ್ಥ ತಾಣಗಳು ಕಂಡುಬರುವುದು ಮಾತ್ರ ಮೃಗೀಯವಾದದ್ದು’ ಎಂದು ನಿಡುಸುಯ್ಯುತ್ತಾರೆ.

ದೇಶವಿಭಜನೆ ಕಾಲದ ಆ ಆಳದ ವ್ರಣಗಾಯಗಳು ಹೇಗೋ ವಾಸಿಯಾಗುವಂತಿರುವಾಗ, ಇದೀಗ ಮತ್ತೆ ಭಾರತವನ್ನು ಮಾನಸಿಕವಾಗಿ ಇಬ್ಭಾಗವಾಗಿಸಲು ಪಣ ತೊಟ್ಟವರಂತೆ ‘ದೇಶದ ಒಳಗೇ ಗಡಿಗಳನ್ನು ಸೃಷ್ಟಿಸುತ್ತಿರುವವರು’ ನಮ್ಮನ್ನು ಕದಡುತ್ತಿರುವಾಗ-

ನನ್ನ ಪಾಲಿಗೆ ಎಲ್ಲ ಪಕ್ಷಗಳ ಭ್ರಷ್ಟಾಚಾರ, ಜೋಭದ್ರಗೇಡಿತನ, ಜನಬಾಹಿರ ರಾಜಕಾರಣ, ಇನ್ನೆಲ್ಲ ಕೇಡಿಗತನಗಳೂ ಸದ್ಯಕ್ಕೆ ಕ್ಷುಲ್ಲಕ; ಲೆಕ್ಕಕ್ಕೇ ಇಲ್ಲ. ಈಗ ಮನೆಗೆ ಬೆಂಕಿ ಬಿದ್ದಿದೆ. ಮೊದಲು ಅದನ್ನು ಆರಿಸೋಣ. ಕೊಲೆಗಡುಕ ರಾಜಕಾರಣ ಯಾವ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡದಂತೆ ನೋಡಿಕೊಳ್ಳೋಣ. ದ್ವೇಷವನ್ನೇ ತತ್ವಪ್ರಣಾಳಿಯಾಗಿಸಿಕೊಂಡ ಪಕ್ಷ ನಮಗೆ ಬೇಡವೇ ಬೇಡ.

ನನ್ನ ಭಾರತ ‘ಈಶ್ವರ ಅಲ್ಲಾ ತೇರೇ ನಾಮ್’ ಎಂದು ಹಾಡಿದ ನಾಡು.

ಅದೇ ನನ್ನ ಪರಂಪರೆ. ಅದೇ ನನ್ನ ಹೆಮ್ಮೆ.

‍ಲೇಖಕರು avadhi

April 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. RAGHAVENDRA RAO H S

    ಈ ಲೇಖನವನ್ನು ಕರ್ನಾಟಕದ ಎಲ್ಲಾ ಪತ್ರಿಕೆಗಳಲ್ಲೂ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಬೇಕು. ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ನಮಗಿರುವ ಅಸಮಾಧಾನ ಮತ್ತು ಕೋಪಗಳ ನಡುವೆಯೂ ನಮ್ಮ ಆಯ್ಕೆ ಯಾವುದಾಗಬೇಕು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅ ಪಕ್ಷದ ಹಲವು ಹೆಜ್ಜೆಗಳನ್ನು ಖಂಡಿಸುತ್ತಲೇ, ಅದರ ಸಂಗಡ ಸಹಕಾರದ ಸಂಬಂಧಗಳನ್ನು ಬೆಳೆಸಿಕೊಳ್ಳದೆ ಅದಕ್ಕೆ ಮತ ಹಾಕುವುದು ಅನಿವಾರ್ಯವಾಗಿದೆ.

    ಎಚ್.ಎಸ್.ಅರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: